ಬುಧವಾರ, ಏಪ್ರಿಲ್ 28, 2021

ಮೋಹ

 ಸೀರೆ, ಸೀರೆ ಸೀರೆ ಎಲ್ಲೆಲ್ಲೂ ಹಾರೈತೆ, ಸೂರೆ ಸೂರೆ ಸೂರೆ  ಮನಸೂರೆ ಮಾಡೈತೆ ಎಂಬ ಹಾಡನ್ನು ಗುನುಗುತ್ತಾ ಸೀರೆ ಉಟ್ಟು ಸ್ವಾತಂತ್ರ್ಯ ದಿನದ ಸಂಭ್ರಮವನ್ನಾಚರಿಸಲು  ಶಾಲೆಗೆ ಹೊರಡಲು ಸಿದ್ಧಳಾದಳು ಗೀತ.  ಹೆಂಗೆಳೆಯರ ಮನಕದ್ದಿರುವ ಹಾಗೂ ಮನಗೆದ್ದಿರುವ ಸೀರೆಗೆ ಎಲ್ಲೇ ಹೋಗಲಿ ಅಗ್ರಸ್ಥಾನ. ಕಚೇರಿಗಳಲ್ಲಾದರೆ ಬೇರೆ ರೀತಿಯ ಉಡುಪು ನಡೆಯುತ್ತದೆ; ಆದರೆ ಶಾಲೆ ಕಾಲೇಜು ಎಂದರೆ, ಸೀರೆಯನ್ನು ಉಡಲೇಬೇಕು ಮಹಿಳಾಮಣಿಗಳು. ಮಕ್ಕಳಿಗಿಂತ ವಿಭಿನ್ನವಾಗಿ ಕಾಣಲು, ಮಕ್ಕಳೆದುರಿಗೆ ಸ್ವಲ್ಪ ದೊಡ್ಡವರಂತೆ ತೋರಿಸಿಕೊಳ್ಳಲು, ಗೌರವ ಭಾವನೆಯನ್ನು ಮೂಡಿಸಲು, ಸೀರೆ  ಸಹಾಯ ಮಾಡಿದಷ್ಟು ಇನ್ಯಾವ ಉಡುಪೂ ಮಾಡಲಾರದು. ಇನ್ನು ವಿಶೇಷ ಸಂದರ್ಭಗಳು ಬಂದರಂತೂ ಕೇಳುವುದೇ ಬೇಡ; ರಾಷ್ಟ್ರೀಯ ಹಬ್ಬಗಳು, ವಿವಿಧ ದಿನಾಚರಣೆಗಳು, ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ, ಸೆಂಡ್‌ ಆಫ್‌ ಹೀಗೆ ಶಾಲಾ ಕಾರ್ಯಕ್ರಮಗಳ ಪಟ್ಟಿ ಬಲು ದೊಡ್ಡದಿರುತ್ತದೆ. ಅದಕ್ಕೆ ತಕ್ಕಂತೆ ಸೀರೆಗಳನ್ನು ಉಡುವ ವಿಶೇಷ ಕೌಶಲವೂ ಶಿಕ್ಷಕಿಯರಿಗಿರುತ್ತದೆ. 

ಇಂದು ಸ್ವಾತಂತ್ರ್ಯ ದಿನದ ಸಂಭ್ರಮ; ತ್ರಿವರ್ಣಧ್ವಜವನ್ನು ನೆನಪಿಸುವ ಕೇಸರಿ ಬಿಳಿ ಹಸಿರಿನ ಬಣ್ಣಗಳ ಛಾಯೆಯಿರುವ ಸೀರೆಯನ್ನುಟ್ಟು ನೆರಿಗೆಗಳನ್ನು ಚಿಮ್ಮುತ್ತಾ ಶಾಲೆಗೆ ಬಂದು ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುವಾಗಲೇ ಗೀತಾಳಿಗೆ ನೆನಪಾದದ್ದು  ಓಹ್‌ ಇಂದು ಸ್ಟಾಫ್‌ ನ ಹೆಂಗೆಳೆಯರೆಲ್ಲರೂ ಸಮಾರಂಭದ ನಂತರ, ಮೈಸೂರು ಸಿಲ್ಕ್‌ ಸೀರೆಯನ್ನು ಕೊಳ್ಳಲು ಹೋಗಬೇಕು ಎಂದು.ಸ್ಯಾಲರಿ ಸರ್ಟಿಫಿಕೇಟ್‌ ತೋರಿಸಿದರಾಯಿತು, ಅಪ್ಲಿಕೇಷನ್‌ ತುಂಬಿ, ಫೋಟೋ ಅಂಟಿಸಿ, ಆಧಾರ್‌ ಕಾರ್ಡ್‌ ಕೊಟ್ಟು, 10 ಬ್ಲಾಂಕ್‌ ಚೆಕ್‌ ಗಳನ್ನು ನೀಡಿದರಾಯಿತು; ನಾವು ಆಯ್ಕೆ ಮಾಡುವ ಸೀರೆಗೆ ಮೊದಲ ಕಂತು ನೀಡಿದ ನಂತರ ಉಳಿದ ಹಣವನ್ನು ಸಮಾನವಾಗಿ ಚೆಕ್‌ ಮೂಲಕ ಕೊಡಬೇಕು. ಒಂದೇ ಬಾರಿಗೆ 25, 30 ಸಾವಿರದ ಖರ್ಚಿಲ್ಲ; ಬಡ್ಡಿಯೂ ಇಲ್ಲ; ಆದ್ದರಿಂದಲೇ ನಾವು 5 ಜನ ಮಹಿಳೆಯರು ಮೈಸೂರು ಸಿಲ್ಕ್‌ ಸೀರೆ ಕೊಳ್ಳಬೇಕೆಂಬ ಮನಸ್ಸು ಮಾಡಿದ್ದು. 

ಸೀರೆ ಅಂಗಡಿಗೆ ಹೋಗಿದ್ದೂ ಆಯಿತು; ಸೀರೆ ಕೊಂಡಿದ್ದೂ ಆಯಿತು; ಮನೆಯಲ್ಲಿ ಸೀರೆ ತೋರಿಸಿದ್ದೂ ಆಯಿತು; ಸಂಕ್ರಾಂತಿಗೆ, ಯುಗಾದಿಗೆ ಸೀರೆ ತಗೊಂಡಾಗಿದೆ, ಈಗ ಮತ್ತೆ ಸೀರೆ? ಅಂತ ಮನೆಯಲ್ಲಿ ಬೈಸಿಕೊಂಡದ್ದೂ ಆಯಿತು. ಇರಲಿ ಬಿಡಿ; ಪ್ರತಿದಿನ ಶಾಲೆಗೆ ಸೀರೆ ಉಡಲೇಬೇಕಲ್ಲವೇ? ಅಂತ ಸಮಜಾಯಿಷಿ ಮಾಡಿದ್ದೂ ಆಯಿತು. ಸೀರೆಯನ್ನು ಬೀರುವಿನಲ್ಲಿ ಎತ್ತಿಡಲು ಹೋದಾಗ ಹಲವಾರು ಬಣ್ಣಗಳ, ಬೇರೆ ಬೇರೆ ಗುಣಮಟ್ಟದ ಅನೇಕ ಸೀರೆಗಳು ಕಣ್ಣಿಗೆ ಬಿದ್ದವು.

ಶಿಕ್ಷಕರಿಗೆ ಶೋಭೆಯನ್ನು ನೀಡುವುದೇ ಕಾಟನ್‌ ಸೀರೆ ಎಂದು ಹಲವು ಕಾಟನ್‌ ಸೀರೆಗಳು; ವಿಶೇಷ ಸಂದರ್ಭಗಳಲ್ಲಿ ಉಡಲು ಡಿಸೈನರ್‌ ಸೀರೆಗಳು; ಹಬ್ಬ ಹರಿದಿನಗಳಿಗಾಗಿ ಕಂಚಿ ಸೀರೆಗಳು; ಹಗುರವಾಗಿರುತ್ತದೆ ಮತ್ತು ಆರಾಮದಾಯಕ ಎಂದು ಮೈಸೂರು ಸಿಲ್ಕ್‌ ಸೀರೆಗಳು; ಟ್ರೈನಿಂಗ್‌, ವರ್ಕ್ ಶಾಪ್‌ ಗಳಲ್ಲಿ ಭಾಗವಹಿಸಲು ರಾ ಸಿಲ್ಕ್‌ ಮತ್ತು ಕ್ರೇಪ್‌ ಸಿಲ್ಕ್‌ ಸೀರೆಗಳು, ಸರಳವಾದ ಸಮಾರಂಭಗಳಿಗಾಗಿ ಪ್ರಿಂಟೆಡ್ ಸಿಲ್ಕ್‌ ಸೀರೆಗಳು, ಮದುವೆಗಳಿಗೆ ಹೋಗುವುದಕ್ಕಾಗಿ ದೊಡ್ಡ ಅಂಚಿನ ಭಾರೀ ಸೀರೆಗಳು,  ಅಪ್ಪ ಕೊಡಿಸಿದ ಮೊದಲ ವಾಟರ್‌ ಪ್ರೂಫ್‌ ಸೀರೆ, ಗಂಡ ಕೊಡಿಸಿದ ಮೊದಲ ಮೈಸೂರು ಸಿಲ್ಕ್‌ ಸೀರೆ, ತಾನೇ ಇಷ್ಟಪಟ್ಟು ತೆಗೆದುಕೊಂಡ ಕಾಟನ್‌ ಸಿಲ್ಕ್‌ ಸೀರೆ, ಹೊಸದಾಗಿದೆ ಟ್ರೆಂಡಿ ಎಂದು ಕೊಂಡು ಕೊಂಡ ಲಿನೆನ್‌ ಸೀರೆ, ಟ್ರೈನಿಂಗ್‌ ನೆನಪಿಗಾಗಿ ತೆಗೆದುಕೊಂಡ ಸಾಫ್ಟ್‌ ಸಿಲ್ಕ್‌ ಸೀರೆ, ಎಲ್ಲವೂ ಕಂಚಿಮಯ ಎಂದುಕೊಂಡು ಖರೀದಿಸಿದ ಬೆನಾರಸ್‌ ಸೀರೆ; ಬೇರೆ ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿ ಪ್ರಸಿದ್ಧವಾಗಿದೆ ಎಂದು ತೆಗೆದುಕೊಂಡ ಪಟೋಲ ಸೀರೆ, ಪೂಚಂಪಲ್ಲಿ ಸೀರೆ, ಕಾಶ್ಮೀರಿ ಸಿಲ್ಕ್‌ ಸೀರೆ, ಬಾಂದನಿ ಡಿಸೈನ್‌ ಸೀರೆ.. ಅತ್ತೆ ಕೊಡಿಸಿದ ಜಾರ್ಜೆಟ್‌ ಸೀರೆ,  ಕಸೂತಿ ಸೀರೆ, ನನಗೆ ವಯಸ್ಸಾಯಿತು, ನೀನು ಉಡು ಎಂದು ಅಮ್ಮ ಕೊಟ್ಟಿರುವ ಭಾರವಾಗಿರುವ ಹಳೆಯ ಕಾಲದ ಅಚ್ಚ ರೇಷ್ಮೆ ಸೀರೆ, ಸಂಬಂಧಿಕರು ನೀಡಿದ ಸಿಂಥೆಟಿಕ್‌ ಸೀರೆಗಳು......

ಅಬ್ಬಬ್ಬಾ ಒಂದೇ ಎರಡೇ ??? ಬೀರುವಿನ ಅರೆಗಳ ತುಂಬಾ ಸೀರೆಗಳು.... ಏನೇ ಆಗಲೀ ಸೀರೆಗಳನ್ನು ಬೀರುವಿನಲ್ಲೇ ಇಟ್ಟು ಪೂಜಿಸುವುದಿಲ್ಲ; ಪ್ರತಿದಿನ ಒಂದೊಂದು ಸೀರೆ ಉಟ್ಟೇ ಉಡುತ್ತೇನೆ ಎಷ್ಟು ಸೀರೆಗಳಿದ್ದರೂ ಸಾಕಾಗುವುದಿಲ್ಲ; ಅದಕ್ಕೇ ಸೀರೆ ಕೊಳ್ಳಲು ಒಂದು ಸಂದರ್ಭವೇ ಬೇಕೆಂದಿಲ್ಲ; ಹಬ್ಬಗಳು, ಹುಟ್ಟಿದ ದಿನ, ಮದುವೆ ಮುಂಜಿಗಳೆಲ್ಲ ನೆಪಮಾತ್ರ; ಕೊಳ್ಳಬೇಕೆನಿಸಿದಾಗ ಸೀರೆಗಳನ್ನು ಕೊಳ್ಳುತ್ತಿದ್ದಳು ಗೀತ!!! ಯಾಕೆ ಸೀರೆಗಳೆಂದರೆ ಅಷ್ಟು ಮೋಹ? ಅಷ್ಟು ದುಡ್ಡು ಕೊಟ್ಟು ಸೀರೆಗಳನ್ನು ಕೊಳ್ಳುವುದಾದರೂ ಏಕೆ? ಸೀರೆಗಳಿಗೆ ಹಾಕುವ ದುಡ್ಡು ಡೆಡ್‌ ಇನ್ವೆಸ್ಟ್‌ಮೆಂಟ್ ಅಂತ ಗೊತ್ತಿದ್ದರೂ ಅದಕ್ಕೆ ದುಡ್ಡು ಸುರಿಯುವುದು ಏಕೆ? ಅನಗತ್ಯವಾಗಿ ಈ ಕೊಳ್ಳುಬಾಕತನ ಏಕೆ?  ಹೋಗಲಿ ಕಡಿಮೆ ದುಡ್ಡು ಕೊಟ್ಟು ಸಾಮಾನ್ಯ ಸೀರೆಗಳನ್ನು ಕೊಳ್ಳಬಹುದಲ್ಲ?? ಎಂಬಂತಹ ಎಷ್ಟೋ ಪ್ರಶ್ನೆಗಳು ಗೀತಾಳನ್ನು ಕಾಡಿದ್ದಿದೆ. ಈ ಪ್ರಶ್ನೆಗಳಿಗೆಲ್ಲ ಒಂದೇ  ಉತ್ತರ..... ಒಂದು ಒಳ್ಳೆಯ ಸೀರೆಯನ್ನು ಉಟ್ಟಾಗ ಸಿಗುವ ಆನಂದ....ಸ್ನೇಹಿತರು, ಗೆಳತಿಯರು, ಸಂಬಂಧಿಕರು ಎಷ್ಟು ಚೆನ್ನಾಗಿದೆ ಈ ಸೀರೆ! ನಿಮಗೆ ಚೆನ್ನಾಗಿ ಒಪ್ಪುತ್ತೆ ಎಂದು ಹೇಳಿದಾಗ ಸಿಗುವ ಸಂತೋಷ ಎಷ್ಟು ದುಡ್ಡು ಕೊಟ್ಟರೂ ಸಿಗುವುದಿಲ್ಲ ಎಂಬುದೇ  ಆಗಿತ್ತು. ಅಲ್ಲದೇ ನಮ್ಮಂತಹವರು ಸೀರೆ ಉಡುವುದರಿಂದ ತಾನೇ ನೇಕಾರರಿಗೆ ವ್ಯಾಪಾರ, ಸರ್ಕಾರಕ್ಕೆ ವ್ಯವಹಾರ ಎಂಬ  ಸಮರ್ಥನೆಯೂ ಆಕೆಗಿತ್ತು.

 ಹೀಗೆ ದಿನಕ್ಕೊಂದು ಸೀರೆ ಉಡುತ್ತಾ ಶಾಲಾಕಾರ್ಯಗಳಲ್ಲಿ ಮುಳುಗಿಹೋಗಿ, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಬರಸಿಡಿಲಿನಂತೆ ಬಂದೆರಗಿತ್ತು ಕೊರೊನಾ ವೈರಸ್‌ನ ಅಟ್ಟಹಾಸ!! ಪ್ರಪಂಚವನ್ನೇ ನಡುಗಿಸಿದ್ದ ಕೋವಿಡ್‌ 19 ಎಂಬ ಮಹಾಮಾರಿ ಭಾರತಕ್ಕೆ ದಾಂಗುಡಿಯಿಟ್ಟು ಒಂದೊಂದೇ ಜೀವಗಳನ್ನು ಬಲಿ ಪಡೆಯತೊಡಗಿತು; ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಯಿತು; ಲಾಕ್‌ ಡೌನ್‌ ಮೊರೆಹೋಗಲೇಬೇಕಾಯಿತು; ಶಾಲೆಗೆ ಹೋಗುವುದಿರಲಿ, ಮನೆಯಿಂದ ಹೊರಗೆ ಹೋಗುವುದೇ ದುಸ್ತರವಾಯಿತು. ಮದುವೆ-ವಿವಾಹಗಳಿರಲಿ, ಸರಳ ಸಮಾರಂಭಗಳಿಗೆ ಹಾಜರಿ ಹಾಕುವುದಕ್ಕೂ ಕತ್ತರಿ ಬಿತ್ತು. ಟ್ರೈನಿಂಗ್‌, ವರ್ಕ್‌ ಶಾಪ್‌ ಗಳಿರಲಿ ಸಧ್ಯ,  ಗುಂಪಿನಲ್ಲಿ ಐದಾರು ಜನ ಸೇರುವುದೂ ಕಷ್ಟವಾಯಿತು;  ಸೀರೆಗಳನ್ನು ಉಡುವುದಿರಲಿ......ಬೀರುವಿನ ಬಾಗಿಲನ್ನು ತೆರೆಯುವುದೇ ಅಪರೂಪವಾಯಿತು. ಮನೆಯಲ್ಲಿಯೇ ಕಟ್ಟಿಹಾಕಿದಂತಾಯಿತು.....ಯಾವ ಕೆಲಸವನ್ನು ಮಾಡಲು ಹೋದರೂ ಹಿಡಿದು ಬಿಟ್ಟಂತಾಯಿತು......

ಅಂತೂ ಇಂತೂ ಶಾಲೆ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾದರೂ.... ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಬೇಕು; ಶಾಲೆಯಿಂದ ಬಂದ ತಕ್ಷಣ ಧರಿಸಿದ ಬಟ್ಟೆಗಳನ್ನು ಬಿಸಿನೀರಿನಲ್ಲಿ ನೆನೆಸಿ, ಒಗೆಯಬೇಕು; ಸ್ನಾನ ಮಾಡಬೇಕು; ಪದೇ ಪದೇ ಕೈ ತೊಳೆಯಬೇಕು; ಜೀವನ ಶೈಲಿಯೇ ಬದಲಾಗಿ ಹೋಯಿತು;  ಶುಕ್ರವಾರ, ಮಂಗಳವಾರಗಳಂದು ಉಡುತ್ತಿದ್ದ ರೇಷ್ಮೆ ಸೀರೆಗಳಿಗೆ ಬ್ರೇಕ್‌ ಬಿತ್ತು; ಶಾಲಾ ಸಮಾರಂಭಗಳೇ ಇಲ್ಲದಿರುವುದರಿಂದ ಬೇರೆ ಬೇರೆ ರೀತಿಯ ಸೀರೆಗಳನ್ನು ಉಡುವುದೇ ನಿಂತುಹೋಯಿತು;  ಮಕ್ಕಳು ಶಾಲೆಗೆ ಬರದಿದ್ದಾಗ ಚೂಡಿದಾರ್‌ ಧರಿಸುವುದು ಸಾಮಾನ್ಯವಾಯಿತು;  ಒಗೆಯಲು ಸುಲಭ ಎಂದು ಸಿಂಥೆಟಿಕ್‌ ಸೀರೆಗಳೇ ಮುನ್ನೆಲೆಗೆ ಬಂದವು; ಒಮ್ಮೆ ಧರಿಸಿದ ಮಾತ್ರಕ್ಕೆ ಒಗೆಯಲೇಬೇಕು ಎಂಬ ಪರಿಸ್ಥಿತಿಯಲ್ಲಿ ಹೆಚ್ಚಿನ ಬೆಲೆಯ ಸೀರೆಗಳು ಮೂಲೆಗುಂಪಾದವು; ರೇಷ್ಮೆ ಸೀರೆಗಳನ್ನು ಕೊಳ್ಳುವುದು ಮಾತ್ರ ದುಬಾರಿಯಲ್ಲ, ಅವುಗಳ ನಿರ್ವಹಣೆಯೂ ದುಬಾರಿಯೇ! ಒಂದು ಸಲ ಉಟ್ಟ ಕೂಡಲೇ ಡ್ರೈ ಕ್ಲೀನ್‌ ಮಾಡಿಸಬೇಕು ಎಂದರೆ ಕಷ್ಟವೇ, ಹಾಗೂ ಉಡಬಹುದಿತ್ತೇನೋ, ಡ್ರೈ ಕ್ಲೀನ್‌ ಅಂಗಡಿಗಳು, ಇಸ್ತ್ರಿ ಅಂಗಡಿಗಳೆಲ್ಲ ಮುಚ್ಚಿಹೋಗಿವೆಯಲ್ಲ; ಆದ್ದರಿಂದಲೇ ಅಂತಹ ಸೀರೆಗಳು ಬೀರುವಿನ ಒಳಗೇ ಸಮಾಧಿಯಾದವು......

ಹೀಗೇ  ಗೀತಾ ಒಂದು ದಿನ ಬೀರು ತೆಗೆದು ಇಂದು ಸೀರೆಯನ್ನು ಉಡಲೇಬೇಕೆಂದು ಮನಸ್ಸು ಮಾಡಿ ಯಾವ ಸೀರೆಯನ್ನು ಉಡಲಿ ಎಂದು ಬೀರುವಿನ ಅರೆಗಳ ತುಂಬ ಪೇರಿಸಿ ಇಟ್ಟಿದ್ದ ಸೀರೆಗಳನ್ನೆಲ್ಲ ನೋಡುತ್ತಿರುವಾಗ, ಆಕೆಗೆ...... ಆ ಸೀರೆಗಳಿಗೆಲ್ಲ ಜೀವ ಬಂದಂತೆ.....  ಅಮ್ಮಾವ್ರು ನಮ್ಮನ್ನೇಕೆ ಬೀರುವಿನಿಂದ ಹೊರತೆಗೆಯುತ್ತಿಲ್ಲ ಎಂದು ಮಾತನಾಡಿದಂತೆ.....  ನನ್ನನ್ನು ಉಡು ನನ್ನನ್ನು ಉಡು ಎಂದು ಗೀತಾಳನ್ನು ಪೀಡಿಸಿದಂತೆ ........ ನನಗೇಕೆ ಇನ್ನೂ ಬ್ಲೌಸ್‌ ಹೊಲಿಸಿಲ್ಲ ಎಂದು ಕಾಡಿದಂತೆ.....  ನನ್ನನ್ನು ಬೀರುವಿನಿಂದ ತೆಗೆಯುವುದಿಲ್ಲವೇ??? ಬೇಕು ಬೇಕು ಎಂದು ತೆಗೆದುಕೊಂಡೆಯಲ್ಲ ಎಂದು ಕೇಳಿದಂತೆ...... ನನ್ನನ್ನು ಮುಟ್ಟಿಯೇ 6 ತಿಂಗಳಾಯಿತು ನನ್ನನ್ನು ಮೈ ಮೇಲೆಯಾದರೂ ಹಾಕಿಕೊಳ್ಳುವುದಿಲ್ಲವೇ ಎಂದು ಅತ್ತಂತೆ... ಪ್ರತಿದಿನ ಸೀರೆ ಉಡುವೆಯಾ??? ಈಗ ಏನು ಮಾಡುವೆ? ಎಂದು ನಕ್ಕಂತೆ...... ಈ ರೀತಿ ಸೀರೆ ಉಡುವ ಚೆಂದಕ್ಕೆ ಕೊಂಡಿದ್ದೇಕೆ ಎಂದು ಅಣಕಿಸಿದಂತೆ....... ಒಂದಾದ ಮೇಲೆ ಒಂದು ಸೀರೆ ಆಕೆಯ ಮೈಮೇಲೆ ಬಂದು ಬಿದ್ದಂತೆ......ಸೀರೆಗಳ ಅಡಿಯಲ್ಲಿ ತಾನು ಅಪ್ಪಚ್ಚಿಯಾದಂತೆ.... ಉಸಿರು ಕಟ್ಟಿ ಜೀವ ಹೋದಂತೆ.... ತನ್ನ ಚಿತೆಯ ಮೇಲೆ ಕಟ್ಟಿಗೆಯ ಬದಲು ಸೀರೆಗಳನ್ನೇ ಹಾಕಿದಂತೆ ಅನ್ನಿಸುತ್ತಾ ಮೈ ಬೆವರತೊಡಗಿತು.......  ಮೈ ಮೇಲೆ ಬೀಳುತ್ತಿರುವ ಸೀರೆಗಳಿಂದ ಹೊರಬರುವ ಪ್ರಯತ್ನ ಮಾಡುವಾಗಲೇ ಅದು ಕನಸು ಎಂಬುದರ ಅರಿವಾಯಿತು..... ಎಫ್.‌ ಎಂ. ನಲ್ಲಿ ತಂದೆ ಕೊಡಿಸೋ ಸೀರೆ ಮದುವೆ ಆಗುವವರೆಗೆ ಹಾಡು ತೇಲಿಬರುತ್ತಿತ್ತು....... 



64 ಕಾಮೆಂಟ್‌ಗಳು:

  1. Abhbhaba yella hengaleyara manasige kannadi hakidante ide. Adbutavada article. 👏🏻👏🏻👏🏻 totally relatable to all ladies.chennagi bandide

    ಪ್ರತ್ಯುತ್ತರಅಳಿಸಿ
  2. ಗೀತಾಳ ಬದಲು ನಾನೇ ಅಲ್ಲಿದಂತೆ ಚಿತ್ರಣ ಮೂಡಿತು. Excellent madam. No exaggeration. All true. Super👌👍

    ಪ್ರತ್ಯುತ್ತರಅಳಿಸಿ
  3. ಪ್ರಸ್ತುತ ಕಾಲದ ಕಟು(ಹಿ) ಸತ್ಯ,
    ಸೀರೆ ಉಡುವ ಬಹುತೇಕ ಎಲ್ಲ ನೀರೆಯರ ಮನದ ಮಾತು,
    ಕೊನೆಯಲ್ಲಿ ಸೀರೆಗಳ ಸ್ವಗತ ರೀತಿಯ ಆಲೋಚನೆ ಪದಗಳಲ್ಲಿ ಚೆನ್ನಾಗಿ ಮೂಡಿಬಂದಿದೆ,,,,

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿದೆ. ಹಾಡು ಪೂರ್ಣ ಗೊಳಿಸಿ ಬೇಕಿತ್ತು. ಗಂಡನ ಪಾತ್ರವು ಮುಖ್ಯ, ಅಲ್ಲವೇ???

    ಪ್ರತ್ಯುತ್ತರಅಳಿಸಿ
  5. ಬರೆವಣಿಗೆ ಬಹಳ ಚೆನ್ನಾಗಿದೆ...
    ಲೇಖನ ತನಗೆ ತಾನೇ ಓದಿಸಿಕೊಂಡು ಹೋಗುತ್ತದೆ.

    ಪ್ರತ್ಯುತ್ತರಅಳಿಸಿ
  6. ನಿಜ, ಸೀರೆ ಉಡುವ ಮಹಿಳೆಯರ ಪರಿಸ್ಥಿತಿ ಈಗ ಹಾಗೆ ಆಗಿದೆ. ಬಹಳ ಚೆನ್ನಾಗಿ ಮೂಡಿಬಂದಿದೆ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಎಲ್ಲ ಸರಿ ಹೋದ ಮೇಲೆ ಮತ್ತೆ ಸೀರೆ ಕೊಳ್ಳುವ ಬಯಕೆ ಮೂಡಬಹುದೇನೋ. ಧನ್ಯವಾದಗಳು

      ಅಳಿಸಿ
  7. ಸೀರೆ ವ್ಯಾಮೋಹ ಮಹಿಳಾ ಮಣಿಗಳಿಗೆ ಬಹಳ.
    ಕೊರೊನಾ ಬಂದು ಮಾಡಿದೆ ತೊಂದರೆ ಅವರಿಗೆ.
    ಬಹಳ ಸುಂದರವಾಗಿ ವಿವರಿಸಿದ್ದೀರಿ.
    ನಿಮ್ಮ ವೇದನೆ ನಮಗೂ ಅರ್ಥವಾಯಿತು.
    ಎನು ಮಾಡುವುದು ಇದಕ್ಕೆ ಪರಿಹಾರ ಇಲ್ಲ

    ಪ್ರತ್ಯುತ್ತರಅಳಿಸಿ
  8. ನೀರೆ..ನೀರೆ..ಏನಿದು ನಿನ್ನ ಸೀರೆಯ ವ್ಯಾಮೋಹ..ಏನಾದರೂ ಆಗಲಿ ನಿನ್ನ ಮೋರೆಗೆ ಸೀರೆಯೇ ಚಂದ..ಉತ್ತಮ ನಿರೂಪಣಾ ಶೈಲಿ..ಆಕರ್ಷಣೀಯವಾಗಿದ್ದು ಮನಮುಟ್ಟುವಂತಿದೆ ಅಭಿನಂದನೆಗಳು ಮೇಡಂ.

    ಪ್ರತ್ಯುತ್ತರಅಳಿಸಿ
  9. ಬಹುಶಃ ನಾವು korona ನೆಪದಲ್ಲಿ ಸೀರೆ ಖರೀದಿ ನಿಲ್ಲಿಸಿ, ಇರೋ ಸೀರೆಗಳ ಮುಕ್ತಿ ಮಾರ್ಗ ಹುಡುಕಬೇಕು. ತುಂಬಾ ಚೆನ್ನಾಗಿ ಬರೆದಿದ್ದೀರಿ.

    ಪ್ರತ್ಯುತ್ತರಅಳಿಸಿ
  10. ಸೀರೆ ‌‌ಹುಚ್ಚಿರುವ ನನ್ನದೇ ಕತೆಯೇನೋ ಅನಿಸಿತು. ಆಪ್ತವಾಗಿದೆ.

    ಪ್ರತ್ಯುತ್ತರಅಳಿಸಿ
  11. ಗೀತಾಳಿಗೆ ಗೀಚಿದ ಹಣೆಬರಹ,ಕನಸಿನಲ್ಲಿ ಕವಲೊಡೆದ ಕನವರಿಕೆ.ನಿಜ ಜೀವನದಲ್ಲಿ ನಡೆಯಬಹುದಾದ ಘಟನೆ.

    ಪ್ರತ್ಯುತ್ತರಅಳಿಸಿ
  12. ನಿಮ್ಮ ಆನುಭವದ ಲೇಖನಗಳು ಹೊರಬರಲು. ಕೊರೊನ ಎಎಂಬ ವೈರಾಣು ಹೊರಬರಬೇಕಾಯಿತು. ಇಲ್ಲದಿದ್ರೆ ಎಲ್ಲವು ಒಳಗೇ ಉಳಿದುಕೊಂಡು ಬಿಡುತಿದ್ದವು. ಓಕೆ ಸಮಯದ ಉಪಯೋಗ ನಿಮ್ಮನ್ನ ನೋಡಿ ಕಲಿಬೇಕು. Thanks.keep it up

    ಪ್ರತ್ಯುತ್ತರಅಳಿಸಿ
  13. ಸೀರೆಯನರಿತ ನೀರೆಗೆ ಚಪ್ಪಾಳೆ ಯ ಅಲೆಗಳು.

    ಪ್ರತ್ಯುತ್ತರಅಳಿಸಿ
  14. ಸೀರೆ ಉಟ್ಟು ಖುಷಿಪಡೋ ಎಲ್ಲ ಹೆಂಗಳೆಯರ ಕೊನೆಯಿಲ್ಲದ ಆಸೆ, ಸೀರೆ ಇದ್ದಷ್ಟು ಹೊಸ ಸೀರೆ ಕೊಂಡು ಉಡುವ ಆಸೆತರಿಸೋ ಸೀರೆ ಬಗೆಗಿನ ಲೇಖನ ತುಂಬಾ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  15. ನೀರೆಯರಿಗಿರುವ ಸೀರೆಯ ಹಂಬಲ ಅದ್ಭುತವಾಗಿ ಚಿತ್ರಿತವಾಗಿದೆ...

    ಪ್ರತ್ಯುತ್ತರಅಳಿಸಿ
  16. ಮತ್ತೊಮ್ಮೆ ಅಭಿನಂದನೆಗಳು.
    ಚೆನ್ನಾಗಿ ಮೂಡಿ ಬಂದಿದೆ. ಮನೆಯಲ್ಲಿ ನನ್ನ ಮನೆಯವಳು ಮತ್ತು ಮಗಳ ನಡುವೆ ಆಗಾಗ ನಡೆಯುವ ಚರ್ಚೆ ಅರ್ಧಂಬರ್ಧ ಕಿವಿಯ ಮೇಲೆ ಬೀಳುತ್ತಿತ್ತು. ವಾರ್ಡ್ರೋಬಲ್ಲಿ ಜಾಗವೇ ಇಲ್ಲದಷ್ಟು ತುಂಬಿ ತುಳುಕುತ್ತಿದ್ದರೂ ಅಂಗಡಿಗೆ ಹೋಗಲಾಗದ ಈ ಕಾಲದಲ್ಲಿ online ಖರೀದಿ ಎನೂ ಕಡಿಮೆ ಆಗಿಲ್ಲ. ಈಗ ತಿಳಿಯಿತು ಇದು ಕೇವಲ ನಮ್ಮನೆಯ ಕಥೆಯಲ್ಲ ಎಂದು...
    ಸಹಜ ಸುಂದರ ಬರೆವಣಿಗೆ...
    ಮುಂದುವರೆಯಲಿ...
    ವಂದನೆಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೆಣ್ಣು ಮಕ್ಕಳಿದ್ದರೆ ಹಾಗೆಯೇ ಸರ್. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙏🙏

      ಅಳಿಸಿ
  17. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  18. ಚೇಳಿನಿ
    ಎಲ್ಲ ಹೆಂಗಳೆಯರ ಮನಸ್ಥಿತಿ, ಪರಿಸ್ಥಿತಿಯನ್ನು ಅತ್ಯಂತ ಸಹಜವಾಗಿ ನಿರೂಪಿಸಿದ್ದೀರಿ.ಮುಂದುವರೆಸಿ.ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  19. Geetha is Sharadha, Jayanthi, geeta, manjula, savitha, sujatha, hema, jyothi ಎಲ್ಲರ ಸೀರೆ ಕಥೆ. ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದೀರಿ

    ಪ್ರತ್ಯುತ್ತರಅಳಿಸಿ
  20. ಪ್ರಿಯ ಶಾರದಾ,
    ಸೀರೆ ಎಂದರೆ ಹೆಣ್ಣು ಎಂಬ ಪದದ ಅನ್ವರ್ಥ. ಎಂಬಂತೆ ನಮ್ಮ ನಾರೀ ಸಮೂಹದ ಭಾವನೆ.
    ಸೀರೆಯಿಲ್ಲದೆ ನಾವಿಲ್ಲ ನಾವಿಲ್ಲದೆ ಸೀರೆಗೂ ಬೆಲೆಯಿಲ್ಲ ಎಂಬ ಮನಸ್ಥಿತಿ ನಮ್ಮದು. ಅದನ್ನು ಕೊಳ್ಳುವಾಗ ಇರುವ ಹುರುಪು, ಮೊದಲ ಸಲ ಉಡುವಾಗಿನ ಸಂಭ್ರಮ ಹೇಳತೀರದು.ಮೊದಲೆಲ್ಲಾ ಹಬ್ಬ ಹರಿದಿನಗಳಿಗೆ ಮಾತ್ರ ಹೊಸ ಸೀರೆ ಕೊಳ್ಲುವ ಸಂಪ್ರಧಾಯ ಇತ್ತು. ಆದರೆ ಕೆಲಸಕ್ಕೆ ಸೇರಿದ ಮೇಲೆ ಸಂಪರ್ಕಗಳು ಹೆಚ್ಚಾಯಿತು, ಆಸೆ ಆಕಾಂಕ್ಷೆಗಳ ದೃಷ್ಟಿಕೋನ ಬದಲಾಯಿತು, ಸೀರೆ ಕೊಳ್ಳುವ ಮನಸ್ಥಿತಿ ಸನ್ನಿವೇಶ ಪ್ರೇರಣೆ ಇವುಗಳು ಹೊಸ ಅರ್ಥ ಪಡೆದುಕೊಂಡವು. ಹಾಗಾಗಿ ಹಲವಾರು ರೀತಿಯ, ಬಣ್ಣದ, ಗುಣಮಟ್ಟದ ಸೀರೆಗಳು ನಮ್ಮ ಅಲಮಾರನ್ನು ಅಲಂಕರಿಸಿದವು, ಉಡುವ ಸಂದರ್ಭಗಳು ಬದಲಾದವು, ಬಳಕೆಯು ಹೆಚ್ಚಾಯಿತು. ಆದರೆ ಇದಕ್ಕೆಲ್ಲಾ ಅಂಕುಶವಿಟ್ಟಿತೇನೋ ಎನ್ನುವ ರೀತಿ ಕರೋನ ಸಂಕ್ರಾಮಿಕ ಪಿಡುಗು ನಮ್ಮ ಮೇಲೆ ಬಂದೆರಗಿತು.
    ಇದು ಹರಡದಂತೆ ಮುನ್ನೆಚ್ಚರಿಕೆಗಾಗಿ ಹಾಗೂ ಸರಾಗವಾಗಲೂ ಅನೂಕೂಲವಾಗುಂತೆ ನಮ್ಮ ಸೀರೆ ಉಡುವ ಆಯ್ಕೆಯಲ್ಲಿ ಬದಲಾವಣೆಯಾಯಿತು. ಪುನಃ ಸಂಭ್ರಮದ ಕಾಲದ ನಿರೀಕ್ಷೆಯಲ್ಲಿ ನಿಮ್ಮ ಲೇಖನವನ್ನು ಮೆಲುಕು ಹಾಕುತ್ತಾ ಹೋಗೋಣ.ನೆನೆಯದೆ ಇರಣ್ಣ ಆದರೆ ಒಂದೊಮ್ಮೆ ನೆನೆದರೆ ನಮ್ಮ ಮೈಸೂರು ಸಿಲ್ಕ್ ಸೀರೆ ಉಟ್ಟ ಸಂಭ್ರಮವನ್ನು ನೆನೆಯಮ್ಮ ಎನ್ನೋಣವೆ?
    ಲೇಖನ ಚೆನ್ನಾಗಿದೆ.
    ಶುಭ ರಾತ್ರಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಮ್. ಮತ್ತೆ ಮೊದಲಿನ ದಿನಗಳು ಮರುಕಳಿಸಲಿ ಹಾಗೂ ನಮ್ಮ ಖರೀದಿಗೂ ಒಂದು ಮಿತಿಯಿರಲಿ ಅಲ್ಲವೇ ಮೇಡಮ್ 🙏🙏

      ಅಳಿಸಿ
  21. ಅಬ್ಬಾ! ಅದೆಷ್ಟು ವಿಧದ ಸೀರೆಗಳು? ಲೇಖನ ಸುಂದರವಾಗಿ ಮೂಡಿಬಂದಿದೆ.ಅಣುವಿನಿಂದಲೇ ಅಚಲ ಎಂಬುದನ್ನು ತೋರಿಸಿದ್ದೀರಿ.ನಿಮ್ಮ ವಿಪಯನಿರೂಪಣಾ ವೈಖರಿ ಅದ್ಭುತವಾದುದು.ಕೊನೆಯ ಪ್ಯಾರಾಗ್ರಾಪ್ ಕಲ್ಪನಾತೀತವಾದುದು.ಅಭನಂದನೆಗಳು.

    ಪ್ರತ್ಯುತ್ತರಅಳಿಸಿ
  22. ನಿಮ್ಮ ಬರವಣಿಗೆ ಯಿಂದ ನಾವು ಮೈಸೂರು ಸಿಲ್ಕ್ ಸೀರೆಗಳನ್ನು ಕೊಂಡು ನೆನಪಾಯಿತು. ಎಲ್ಲರ ವಾಸ್ತವ ಬದುಕಿಗೆ ಹತ್ತಿರವಾಗಿದೆ.ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  23. Nice experience and expression. Continue your writing work madam it makes us happy and improving our reading habits

    ಪ್ರತ್ಯುತ್ತರಅಳಿಸಿ
  24. ಕಥೆ ಓದಿದ ನಂತರ ನನ್ನ ಬೀರುವಿನಲ್ಲಿ ಇರುವ ಸೀರೆಗಳ ನೆನಪಾಯಿತು. ಕೊಳ್ಳುಬಾಕತನಕ್ಕೆ ಅಂಕುಶ ಇಟ್ಟಿತು ಕೊರೋನ ಎಂಬುದನ್ನು ಚೆನ್ನಾಗಿ ಬರೆದಿದ್ದೀರಿ
    ಹೀಗೆಯೇ ಬರೆಯುತ್ತಾ ಇರಿ

    ಪ್ರತ್ಯುತ್ತರಅಳಿಸಿ
  25. ಎಲ್ಲಾಶಿಕ್ಷಕಿಯರ ಮನದ ಮಾತಿದು.
    ತುಂಬಾ ಸುಗಮವಾಗಿ ಓದಿಸಿಕೊಳ್ಳುತ್ತೆ.

    ಪ್ರತ್ಯುತ್ತರಅಳಿಸಿ
  26. ವಿಷದವಾಗಿದೆ, ವಿವರವಾಗಿದೆ ಸೀರೆಯ ಧಾರೆ.
    ಇಷ್ಟೆಲ್ಲಾ ಬಗೆಯ ಸೀರೆಗಳಿವೆಯೇ?
    ಈಗ ಗೊತ್ತಾಯ್ತು ನೀವೆಲ್ಲಾ ಸೀರೆಯಂಗಡಿಯಲ್ಲಿ ಆಯ್ಕೆ ಮಾಡಲು ಅಷ್ಟೊಂದು ಸಮಯ ತೆಗೆದುಕೊಳ್ಳುವ ಕಾರಣ. ಕಷ್ಟ ಕಷ್ಟ.

    ಪ್ರತ್ಯುತ್ತರಅಳಿಸಿ
  27. ಸೀರೆ ಪುರಾಣ ತುಂಬಾ ಚೆನ್ನಾಗಿದೆ ಶಾರದಾ. ಸೀರೆಯ ಬದಲು ನೀನು ಹೇಳಿದಂತೆ ಚೂಡಿದಾರ ಹೆಚ್ಚಾಗಿದೆ. ಕಥೆಯ ಕೊನೆಯಲ್ಲಂತೂ ಅಳುವುದೋ ನಗುವುದೋ ಗೊತ್ತಾಗಲಿಲ್ಲ

    ಪ್ರತ್ಯುತ್ತರಅಳಿಸಿ
  28. ಈ ಪರಿಸ್ಥಿತಿ ಬೇಗ ಬದಲಾಗಲಿ.ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  29. ಮನೆ ಮನೆ ಕಥೆ. ಆ ನೀರೆ, ಗೀತ ಈ ಶಾರದಳೇ ಏನೋ!👍😜

    ಪ್ರತ್ಯುತ್ತರಅಳಿಸಿ
  30. ಹೆಂಗೆಳೆಯರ ಮನಸ್ಸನ್ನು ಅತಿ ಸುಂದರವಾಗಿ ಚಿತ್ರಿಸಿದ್ದಿ����, ಅದು **ಬರೀ ಗೀತಾ**ಳ ಮನದಾಳದ ಮಾತಲ್ಲ, **ಶಾರದೆ,ಶೋಭಾ,ಮಾನಸ,ವೀಣಾರ....** ಅಷ್ಟೇ ಏಕೆ ರೇಖಾ, ಕಲ್ಪನಾ, ಮಂಜುಳಾ, ಮಾಧುರಿ, ಮಾಲಿನಿ....ಯರೆಲ್ಲರ ತುಮುಲ, ತಳಮಳ...������
    ಖುಷಿಯಾಗಿ ಓಡಿಸುತ್ತಿದ್ದ ಗಾಡಿಗೆ,sudden ಆಗಿ ಎದುರಿಗೆ ದೊಡ್ಡ ಪ್ರಪಾತ ಅಡ್ಡ ಬಂದಂತೆ, ಈ corona effect������‍♀️ ಇನ್ನೆಷ್ಟು ದಿನ, ವರುಷಗಳು ಬೇಕೇನೋ ಈ problem solve ಆಗಲು����.really good writing. ಸೀರೆಗಳ ಆಗರದ, ಸಾಗರದ ಪರಿಚಯವಾಯಿತು. ������������������������

    ಪ್ರತ್ಯುತ್ತರಅಳಿಸಿ

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...