ಶನಿವಾರ, ಏಪ್ರಿಲ್ 10, 2021

ಮರಳಿ ಯತ್ನವ ಮಾಡು

 

ಕಳೆದ ಒಂದೂವರೆ ವರ್ಷಗಳಿಂದ ಪ್ರತಿಯೊಬ್ಬರೂ ಅನುಭವಿಸುತ್ತಿರುವ ನೋವು ಸರ್ವವಿದಿತ. ಕೋವಿಡ್‌ 19 ನಮ್ಮ ಬದುಕಿನಲ್ಲಿ ಊಹಿಸಲಾರದಷ್ಟು ನಷ್ಟವನ್ನು ಉಂಟುಮಾಡಿತು. ವ್ಯಾಪಾರ, ಪ್ರವಾಸ, ಶಿಕ್ಷಣ, ಸಣ್ಣ ಕೈಗಾರಿಕೆ, ಆಹಾರ, ನಾಟಕ, ಸಿನೆಮಾ, ಕ್ರೀಡೆ, ಸಾರಿಗೆ, ಪುಷ್ಪೋದ್ಯಮ, ಆರೋಗ್ಯ, ಜವಳಿ, ಹೀಗೆ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಕರಿನೆರಳನ್ನು ಹಾಸಿಯೇ ಬಿಟ್ಟಿತು. ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಯಿತು. ಹೊಸ  ಉದ್ಯೋಗ ದೊರೆಯುವುದಿರಲಿ, ಇರುವ ಕೆಲಸವನ್ನು ಕಾಪಾಡಿಕೊಳ್ಳುವುದು ದುಸ್ತರವಾಯಿತು. ಮಾಧ್ಯಮಗಳಲ್ಲಿ ಕರೋನಾ ಸೋಂಕಿನ ಸಂಖ್ಯೆ ಮತ್ತು ಮೃತರ ಸಂಖ್ಯೆಯ  ಸುದ್ದಿಯನ್ನು ಕೇಳಿದ ಬಹುತೇಕ ಜನರು ಹೆದರಿ ಕಂಗಾಲಾದರು; ಸೋಂಕಿತರ ಸಂಖ್ಯೆ, ಶಂಕಿತರ ಸಂಖ್ಯೆ, ಪ್ರಾಥಮಿಕ ಸಂಪರ್ಕಿತರು, ಪ್ರತ್ಯೇಕವಾಸ, ಲಾಕ್‌ ಡೌನ್‌, ಸಾಮಾಜಿಕ ಅಂತರ  ಮುಂತಾದ ಹೊಸ ಪದಗಳು ಸೃಷ್ಟಿಯಾದವು. ಮುಖದ ಮೇಲೆ ಹೊಸ ಆಭರಣವಾಗಿ ಮಾಸ್ಕ್‌ ಕಂಡುಬಂತು; ಪದೇ ಪದೇ ಕೈ ತೊಳೆಯುವ ಅಭ್ಯಾಸ ಹೆಚ್ಚಾಗಲೇಬೇಕಾಯಿತು. ಕೋವಿಡ್‌ ಕಾರಣದಿಂದಾಗಿ ಮೃತರಾದವರಿಗೆ ಅನುಸರಿಸುತ್ತಿದ್ದ ಕ್ರಮಗಳನ್ನು ಕಂಡ ಎಷ್ಟೋ ವೃದ್ಧಜೀವಗಳು ಅಯ್ಯೋ ಈ ಕಾಲದಲ್ಲಿ ಕೋವಿಡ್‌ನಿಂದ ನಮ್ಮ ಜೀವವನ್ನು ತೆಗೆಯಬೇಡಪ್ಪ ದೇವರೇ ಎಂದು ಮೊರೆಯಿಡುವಂತಾಯಿತು. ಸಿನಿಮಾ ಥಿಯೇಟರ್ಗಳು, ಶೂಟಿಂಗ್‌ಗಳು, ರಂಗಭೂಮಿ ಚಟುವಟಿಕೆಗಳು, ಮದುವೆಗಳು, ಜಾತ್ರೆಗಳು, ವ್ಯಾಪಾರ ವ್ಯವಹಾರಗಳು, ಸಭೆ ಸಮಾರಂಭಗಳು, ಪೂಜೆ ಪುನಸ್ಕಾರಗಳು, ಮಂದಿರ-ಮಸೀದಿ-ಚರ್ಚ್ಗಳು,  ಪ್ರವಾಸ- ವಿಹಾರಗಳು, ಮೋಜು ಮಸ್ತಿಗಳು, ಊಟ ಉಪಚಾರಗಳು, ಅತಿಥಿ ಸತ್ಕಾರಗಳು, ಸಾರಿಗೆ ಸಂಪರ್ಕಗಳು ಎಲ್ಲಕ್ಕಿಂತ ಪ್ರಮುಖವಾಗಿ ಶಾಲಾ ಕಾಲೇಜುಗಳು ಪೂರ್ಣವಾಗಿ, ಸಂಪೂರ್ಣವಾಗಿ ಬಂದ್‌ ಆದವು. 
ಪರೀಕ್ಷೆಗೆ ಭರದಿಂದ ತಯಾರಾಗುತ್ತಾ ತಮ್ಮ ಭವಿಷ್ಯದ ಬಗ್ಗೆ ಸುಂದರವಾದ ಕನಸುಗಳನ್ನು ಕಂಡಿದ್ದ ವಿದ್ಯಾರ್ಥಿ ಸಮೂಹವು ಶಾಲಾ ಕಾಲೇಜುಗಳು ಬಂದ್‌ ಆದದ್ದರಿಂದ ಆಘಾತಗೊಂಡಿತು. ಉನ್ನತ ವಿದ್ಯಾಭ್ಯಾಸ, ವಿದೇಶದಲ್ಲಿ ವ್ಯಾಸಂಗ ಮಾಡುವ ಯೋಜನೆ ಇದ್ದವರ ಆತಂಕ ಒಂದು ರೀತಿಯದ್ದಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳ ಆತಂಕ ಇನ್ನೊಂದು ರೀತಿಯಲ್ಲಿತ್ತು. ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ?, ನಾವೆಲ್ಲರೂ ಮುಂದಿನ ತರಗತಿಗಳಿಗೆ ಹೋಗುತ್ತೇವೆಯೋ ಇಲ್ಲವೋ? ಎಂಬಂತಹ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಕಾಡತೊಡಗಿದವು.  1 ರಿಂದ 9 ನೇ ತರಗತಿಯ ಮಕ್ಕಳು ಉತ್ತೀರ್ಣರಾದರೂ  ಹತ್ತನೇ ತರಗತಿಯ ಮಕ್ಕಳು ಪರೀಕ್ಷೆ ಎದುರಿಸಬೇಕಾಯಿತು.
ಈಗ  ಪ್ರಾರಂಭವಾಯಿತು ನೋಡಿ; ಶಿಕ್ಷಕರ ಅಗ್ನಿಪರೀಕ್ಷೆ; ಮಕ್ಕಳು ಶಾಲೆಗೆ ಬರುತ್ತಿಲ್ಲ; ಏನು ತಯಾರಿಯಾಗಿತ್ತೋ ಅದು ಮಕ್ಕಳಿಗೆ ನೆನಪಿದೆಯೋ ಇಲ್ಲವೋ?  ಮಕ್ಕಳು ಮನೆಯಲ್ಲಿ ಓದುತ್ತಿದ್ದಾರೋ ಇಲ್ಲವೋ? ಪುಸ್ತಕಗಳನ್ನು ಸರಿಯಾಗಿ ಇಟ್ಟುಕೊಂಡಿದ್ದಾರೋ ಇಲ್ಲವೋ?, ವಿಪರೀತ ಒತ್ತಡದಿಂದ ಬೇರೆ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದಾರೋ ಏನೋ? ಮಕ್ಕಳನ್ನು ಸಂಪರ್ಕಿಸುವ ವಿಧಾನ ಹೇಗೆ? ಫೋನ್‌ ಮಾಡಿ ಅವರನ್ನು ಮೇಲ್ವಿಚಾರಣೆ ಮಾಡುವುದು ಹೇಗೆ? ಗ್ರಾಮೀಣ ಪ್ರದೇಶಗಳಲ್ಲಿ ಜೂನ್‌ ತಿಂಗಳೆಂದರೆ ಹೊಲ-ಗದ್ದೆಗಳಲ್ಲಿ ವಿಪರೀತ ಕೆಲಸದ ಸಮಯ, ನಮ್ಮ ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದಾರೋ ಏನೋ, ಅಥವಾ ಕೆಲಸ ಇರುವ ಕಡೆ ವಲಸೆ ಹೋಗಿದ್ದಾರೋ?, ಕಾರ್ಯ ನಿಮಿತ್ತ ವಲಸೆ ಬಂದಂತಹ ಮಕ್ಕಳು ಇಲ್ಲೇ ಇದ್ದಾರೋ ಅಥವಾ ಅವರ ಸ್ವಂತ ಊರಿಗೆ ಹೋಗಿದ್ದಾರೋ?  ಎಂಬಂತಹ ಹಲವಾರು ಪ್ರಶ್ನೆಗಳು ಶಿಕ್ಷಕ ಸಮುದಾಯವನ್ನು ಕಾಡತೊಡಗಿದವು.
ಯಾವುದೂ ಮೊದಲಿನಂತಿರದ ಪರಿಸ್ಥಿತಿಗೆ ಶಿಕ್ಷಕರು ಹೊಂದಿಕೊಳ್ಳಲೇ ಬೇಕಾಯಿತು; ವರ್ಚುಯಲ್‌ ಗೇಮ್ಸ್‌ ಬಗ್ಗೆ ಮಾತ್ರ ತಿಳಿದಿದ್ದ ಶಿಕ್ಷಕ ಸಮುದಾಯ, ವರ್ಚುಯಲ್‌ ಕ್ಲಾಸ್‌ ರೂಮ್‌ ಅನ್ನು ನೈಜವಾಗಿ ಜಾರಿಗೊಳಿಸಬೇಕಾಯಿತು; ಹತ್ತನೇ ತರಗತಿಯ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಬೇಕಾಯಿತು; ಕಠಿಣ ಮಾರ್ಗದರ್ಶಿ ಸೂತ್ರಗಳನ್ವಯ ಪರೀಕ್ಷೆಗಳನ್ನು ನಡೆಸಬೇಕಾಯಿತು; ಹತ್ತನೇ ತರಗತಿಯ ಪರೀಕ್ಷೆಯೇನೋ ಮುಗಿಯಿತು; ಫಲಿತಾಂಶವೂ ಬಂದಿತು. ಮುಂದಿನ ತರಗತಿಗಳಿಗೆ ದಾಖಲಾತಿಯೂ ನಡೆಯಿತು.
 ಶಿಕ್ಷಕರೇನೋ ಶಾಲೆಗೆ ಹೋಗತೊಡಗಿದರು; ಆದರೆ ಮಕ್ಕಳಿಲ್ಲದ ಶಾಲೆ, ದೇವರಿಲ್ಲದ ಗುಡಿಯಂತೆ ಭಣಗುಡುತ್ತಿತ್ತು; ತರಗತಿಗಳಲ್ಲಿ ಮಕ್ಕಳ ಧ್ವನಿಯಿಲ್ಲ; ಅಟೆಂಡೆನ್ಸ್‌ ಕರೆಯುವಂತಿಲ್ಲ; ಪಾಠ ಮಾಡುವಂತಿಲ್ಲ; ಮೈದಾನಗಳಲ್ಲಿ ಮಕ್ಕಳ ಆಟವಿಲ್ಲ; ಬೆಲ್ಲಿನ ಶಬ್ದ ಕಿವಿಗೆ ಬೀಳುತ್ತಿಲ್ಲ; ಪ್ರಾರ್ಥನೆಯಿಲ್ಲ; ಬ್ಯಾಂಡ್‌ ಸೆಟ್‌ ಶಬ್ದ ಮೊದಲೇ ಇಲ್ಲ; ಹುಟ್ಟುಹಬ್ಬಗಳ ಹಾರೈಕೆಗಳಿಲ್ಲ; ವಾರ್ತೆ ಬರೆಯುವವರಿಲ್ಲ; ಪ್ರಶ್ನೆ ಕೇಳುವವರಿಲ್ಲ; ಕಪ್ಪುಹಲಗೆಯ ಮೇಲೆ ಸೀಮೆಸುಣ್ಣದ ಬರಹಗಳಿಲ್ಲ; ಗುಡ್‌ ಮಾರ್ನಿಂಗ್‌, ಗುಡ್‌ ಆಫ್ಟರ್‌ನೂನ್‌ಗಳ ವಂದನೆಗಳಿಲ್ಲ; ಒಟ್ಟಾರೆಯಾಗಿ ಮಕ್ಕಳ ಕಲರವವಿಲ್ಲ.................  
ಶಿಕ್ಷಕರಿಗೆ ಶಾಲೆಗೆ ಹೋಗುವುದೇ ಬೇಸರವೆನಿಸತೊಡಗಿತು.  ಬದಲಾವಣೆ ಜಗದ ನಿಯಮ ಎಂಬುದು ನಮಗೆಲ್ಲ ತಿಳಿದಿದೆಯಷ್ಟೆ; ಇದೀಗ ಇಂತಹ ಸಂದರ್ಭಕ್ಕೆ ಹೊಂದಿಕೊಂಡು ಬದಲಾಗಲೇಬೇಕಾದ ಅನಿವಾರ್ಯತೆಗೆ ಶಿಕ್ಷಕರು ಒಳಗಾದರು. ಕ್ರಿಯಾಶೀಲ ಶಿಕ್ಷಕರು ಮಕ್ಕಳನ್ನು ತಲುಪಲು ಹಲವು ಮಾರ್ಗಗಳನ್ನು ಕಂಡುಕೊಂಡರು;  ವಿದ್ಯಾಗಮ ಎಂಬ ಯೋಜನೆಯಡಿಯಲ್ಲಿ ಮಕ್ಕಳ ಮನೆಬಾಗಿಲಿಗೆ ಹೋಗಿ ಮಕ್ಕಳ ಹಿನ್ನೆಲೆಯನ್ನು ತಿಳಿಯುತ್ತಾ ಅವರಿಗೆ ಬೋಧಿಸುವ ಕೈಂಕರ್ಯವನ್ನು ಕೈಗೊಂಡರು. ಫೋನ್‌ ಮೂಲಕ ಮಕ್ಕಳನ್ನು ಸಂಪರ್ಕಿಸುವುದು; ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು; ಪೋಷಕರೊಡನೆ ನಿರಂತರ ಸಂಪರ್ಕದಲ್ಲಿರುವುದು; ಮಕ್ಕಳ ಮನೆಗಳಿಗೇ ಹೋಗುವುದು; ಒಂದೊಂದು ಊರಿನಲ್ಲಿ ಒಂದು ಕೇಂದ್ರಸ್ಥಾನವನ್ನು ಮಾಡಿಕೊಂಡು ಅಲ್ಲಿ ಮಕ್ಕಳಿಗೆ ಬೋಧಿಸುವುದು; ಆನ್‌ ಲೈನ್‌ ತರಗತಿಗಳನ್ನು ನಡೆಸುವುದು; ದೂರದರ್ಶನದಲ್ಲಿ ಬರುವ ಪಾಠಗಳನ್ನು ನೋಡುವಂತೆ ತಿಳಿಸುವುದು;  ಹೀಗೇ ಹತ್ತು ಹಲವಾರು ದಾರಿಗಳನ್ನು ಶಿಕ್ಷಕ ಸಮುದಾಯ ಹುಡುಕಿಕೊಂಡಿತು. ನಿಮಗೇನು? ಮಕ್ಕಳು ಶಾಲೆಗೆ ಬರುತ್ತಿಲ್ಲ ಅಲ್ಲವಾ? ಮತ್ತೇನು ಕೆಲಸ? ಎಂದು ಕುಹಕ ನಗೆಯನ್ನು ಬೀರುತ್ತಾ ಮೂಗುಮುರಿಯುತ್ತಿದ್ದ ಜನರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಶಿಕ್ಷಕರು ಕೆಲಸ ಮಾಡಿದರು.

ಆದರೆ ಕರೋನಾ ತನ್ನ ಪ್ರಭಾವವನ್ನು ಎಲ್ಲೆಡೆ ಹೆಚ್ಚು ಮಾಡುತ್ತಿದ್ದ ಹಾಗೇ ಈ ಕಾರ್ಯಕ್ರಮಗಳೂ ನಿಂತುಹೋದವು; ಎಷ್ಟೋ ಮಕ್ಕಳು ಪುಸ್ತಕ ತೆರೆಯುವುದನ್ನು,ಪೆನ್ನು ಹಿಡಿಯುವುದನ್ನು, ಓದುವುದನ್ನು ಮರೆತೇ ಬಿಟ್ಟರು; ಮನೆಗೆಲಸ, ಹೊರಗಿನ ಕೆಲಸ, ಎಂದು ದುಡಿಮೆಯ ರುಚಿ ಕಂಡರು. ಶಾಲೆಗೆ ಬರಬೇಕು; ತಮ್ಮದಿನ್ನೂ ವಿದ್ಯಾರ್ಥಿಜೀವನ; ಕಲಿಯುವುದು ಸಾಕಷ್ಟಿದೆ ಎಂಬುದನ್ನು ಕಡೆಗಣಿಸಿಬಿಟ್ಟರು. ಭವಿಷ್ಯದಲ್ಲಿ ವಿದ್ಯೆಗಿರುವ ಪ್ರಾಮುಖ್ಯತೆಯನ್ನು ಅಕ್ಷರಶಃ ನಿರ್ಲಕ್ಷಿಸಿಬಿಟ್ಟರು.    
ಭಗವಂತ ಆದಷ್ಟು ಬೇಗ ಕರೋನಾ ತೊಲಗಲಿ, ವ್ಯಾಕ್ಸಿನ್‌ ಕಂಡುಹಿಡಿಯಲಿ, ಶಾಲೆ ಪ್ರಾರಂಭವಾಗಲಿ ಎಂದು‌ ಶಿಕ್ಷಕರು ಪ್ರಾರ್ಥಿಸುವಂತಾಯಿತು. 
ಅಂತೂ ಇಂತೂ 2021 ರ ಜನವರಿಯಿಂದ ಅಧಿಕೃತವಾಗಿ ಶಾಲೆ ಆರಂಭವಾಯಿತು; ಶಾಲಾ ಆವರಣಕ್ಕೇ ಮಕ್ಕಳು ಬರುವಂತಾಯಿತು; ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ತರಗತಿಗಳು ನಡೆಯಲು ಸಜ್ಜುಗೊಂಡವು; ಪ್ರತಿ ಶಾಲೆಗೂ ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ಗಳನ್ನು ಒದಗಿಸಲಾಯಿತು; ಮಕ್ಕಳನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು; ಮಕ್ಕಳು ಮತ್ತು ಶಿಕ್ಷಕರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಯಿತು........ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡವು; ಶಿಕ್ಷಕರಲ್ಲಿ ಪ್ರಚ್ಫನ್ನ ಶಕ್ತಿಯಾಗಿ ಮಾರ್ಪಟ್ಟಿದ್ದ ಬೋಧನಾ ಕಲೆ ಈಗ ಚಲನ ಶಕ್ತಿಯ ರೂಪವನ್ನು ಪಡೆದುಕೊಂಡಿತು;  ಕಲಿಕೆಗೆ ಇನ್ನೂ ಸಿದ್ಧಗೊಳ್ಳದ ಮಕ್ಕಳ ಕಡೆ ವಿಶೇಷ ಗಮನ ನೀಡಲಾಯಿತು. ತರಗತಿಯಲ್ಲಿ ಹೇಗೆ ಕೂರಬೇಕೆಂಬುದರಿಂದ ಹಿಡಿದು, ಅನುಸರಿಸಬೇಕಾದ ಎಲ್ಲ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು; ಪುಸ್ತಕ ತರುವುದನ್ನೂ, ಪೆನ್ನು ಹಿಡಿಯುವುದನ್ನೂ, ಶಿಸ್ತಿನಿಂದ ಓದುವುದನ್ನೂ, ಅಭ್ಯಾಸ ಮಾಡಬೇಕಾದ ವಿಧಾನವನ್ನೂ, ಹೀಗೆ ಪ್ರತಿಯೊಂದನ್ನೂ ನಿಧಾನವಾಗಿ ಮಕ್ಕಳಿಗೆ ಮತ್ತೆ ಕಲಿಸಲಾಯಿತು....... ತರಬೇತಿ ನೀಡಲಾಯಿತು..... ಮರಳಿ ಮರಳಿ ಪ್ರಯತ್ನಿಸಲಾಯಿತು...... ನಿಧಾನವಾಗಿ ಮಕ್ಕಳು ಮೊದಲಿನಂತಾದರು, ವಿದ್ಯಾರ್ಥಿ ಜೀವನಕ್ಕೆ ಹೊಂದಿಕೊಳ್ಳತೊಡಗಿದರು;  ಮನೆಯಲ್ಲೇ ಇದ್ದು ಔಪಚಾರಿಕ ಶಿಕ್ಷಣವನ್ನು ಭಾಗಶಃ ಮರೆತೇಬಿಟ್ಟಿದ್ದ ಮಕ್ಕಳು ಮತ್ತೆ ಶಾಲಾ ಮಕ್ಕಳಾದರು; ಇಷ್ಟರಲ್ಲೇ ಕೋವಿಡ್‌  ವ್ಯಾಕ್ಸಿನ್‌ ಕೂಡ ಕಂಡುಹಿಡಿಯಲ್ಪಟ್ಟಿತು; ಕೋವಿಡ್‌ ಸೋಂಕಿತರ ಸಂಖ್ಯೆಯೂ ಇಳಿಮುಖವಾಯಿತು‌  ಮತ್ತು ಎಲ್ಲವೂ ಮೊದಲಿನಂತಾಯಿತು ಎಂದು ಸಂಭ್ರಮ ಪಡುವಾಗಲೇ
ಶುರುವಾಯಿತು ನೋಡಿ ಕೋವಿಡ್‌ನ ಎರಡನೆಯ ಅಲೆ............
ದಿನದಿನಕ್ಕೂ ಸೋಂಕಿತರ ಸಂಖ್ಯೆ ಸಾವಿರ ಸಾವಿರ ದಾಟಿತು; ಸರ್ಕಾರ, ಮುನ್ನೆಚ್ಚರಿಕೆ ಕ್ರಮವಾಗಿ 6 ರಿಂದ 9 ನೇ ತರಗತಿಗಳನ್ನು ಮತ್ತೆ ಮುಚ್ಚಲೇಬೇಕಾದ ಅನಿವಾರ್ಯತೆ ಒದಗಿತು. ಎಲ್ಲವೂ ಒಂದು ಹದಕ್ಕೆ ಬಂದಿತ್ತು, ಮಕ್ಕಳೆಲ್ಲರೂ ಕಲಿಕಾ ಪಥದಲ್ಲಿ ಸಾಗುತ್ತಿದ್ದರು ಎಂದು ಶಿಕ್ಷಕರು ನಿಟ್ಟುಸಿರು ಬಿಡುತ್ತಿದ್ದಾಗಲೇ ಬರಸಿಡಿಲಿನಂತೆ ಈ ಸುದ್ದಿ ಬಂದೆರಗಿತು. ಮತ್ತೆ ಮಕ್ಕಳು ಮನೆಯಲ್ಲಿ ಉಳಿಯುವಂತಾಯಿತು; ಮತ್ತೊಮ್ಮೆ ಪರೀಕ್ಷೆಗಳು ಬೇಕೋ? ಬೇಡವೋ? ಎಂಬ ಬಿಸಿಚರ್ಚೆ ಆರಂಭವಾಯಿತು; ಮತ್ತದೇ ಚಕ್ರ, ಮತ್ತದೇ ಪ್ರಶ್ನೆಗಳ ವ್ಯೂಹ ಶಿಕ್ಷಕರನ್ನು ನಿದ್ರೆಗೆಡಿಸಿತು.  ಕಲಿಕಾ ಹಳಿಯ ಮೇಲೆ ಸಾಗುತ್ತಿದ್ದ ವಿದ್ಯಾರ್ಥಿಗಳ ರೈಲು ಮತ್ತೊಮ್ಮೆ ಹಳಿ ತಪ್ಪುವ ಎಲ್ಲ ಲಕ್ಷಣಗಳು ಗೋಚರಿಸಿದವು.
ಆದರೆ, ಆದರೆ, ಕರೋನಾ......... ಈ ಬಾರಿ ನಾವು ಹೆದರಲಾರೆವು; ನೀನೇ ಕಲಿಸಿಕೊಟ್ಟಿರುವ ಪಾಠ ನಮ್ಮೊಂದಿಗಿದೆ; ಇನ್ನು ನಿನ್ನ ಜೊತೆ ನಾವು ಬದುಕಲೇಬೇಕಲ್ಲವೇ? ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಿನ್ನನ್ನು ಹೆದರಿಸಲೇಬೇಕಲ್ಲವೇ? ಲಸಿಕೆ ಹಾಕಿಸಿಕೊಂಡು ನಿನ್ನನ್ನು ಹಿಮ್ಮೆಟ್ಟಿಸಲೇಬೇಕಲ್ಲವೇ? ಅನುಭವವೇ ನಮ್ಮ ನಿಜವಾದ ಗುರುವಲ್ಲವೇ? ಬರೋಬ್ಬರಿ  ಒಂದು ವರ್ಷದ ಅನುಭವ ನಮ್ಮ ಕೈಯಲ್ಲಿದೆ; ಇನ್ನು ನಮ್ಮ ಪ್ರಯತ್ನವನ್ನು ಮಾಡದೇ ಇರಲಾರೆವು;  ಭವ್ಯ ಭಾರತದ ನಿರ್ಮಾತೃಗಳಾದ ನಮ್ಮ ಮಕ್ಕಳನ್ನು ಹಾಗೇ ಕೂರಿಸಲಾರೆವು; ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸಲಾರೆವು. ಕಳೆದ ಸಾಲಿನ ಪ್ರಯತ್ನಗಳನ್ನೆಲ್ಲ ಮತ್ತೆ ಮಾಡುವೆವು; ಮೊದಲಿಗಿಂತ ಹೆಚ್ಚು ಆತ್ಮಸ್ಥೈರ್ಯದೊಂದಿಗೆ, ಮೊದಲಿಗಿಂತ ಹೆಚ್ಚು ಉತ್ಸಾಹದೊಂದಿಗೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ.....ಮರಳಿ ಯತ್ನವ ಮಾಡು ಎಂಬುದನ್ನು ಕೇವಲ ಪಠ್ಯದಲ್ಲಿ ಮಾತ್ರವಲ್ಲ........ ಈಗಲೂ....ನಮ್ಮ ನಿಜಜೀವನದಲ್ಲೂ ಮಾಡಿಯೇ ತೀರುವೆವು.....

 

30 ಕಾಮೆಂಟ್‌ಗಳು:

  1. ಬರೆವಣಿಗೆ ಉತ್ತಮವಾಗಿದೆ.
    ಶುಭವಾಗಲಿ.
    ಮುಂದುವರಿಸಿ.

    ಪ್ರತ್ಯುತ್ತರಅಳಿಸಿ
  2. ಅತ್ಯುತ್ತಮ ಬರಹ ಮೇಡಂ. ನಿಮ್ಮ ಬರವಣಿಗೆಯು ನಮ್ಮ ಮನಸ್ಸನ್ನು ಈ ಬ್ಲಾಗ್ನಲ್ಲಿ ಬರಹದ ಮೂಲಕ ತೆರೆದಿಟ್ಟಂತೆ ಅನಿಸುತ್ತದೆ. ಒಂದೇ ದೋಣಿಯಲ್ಲಿ ತೇಲುತ್ತಿರುವ ನಮ್ಮೆಲ್ಲರ ಮನಸ್ಸಿನಲ್ಲಿರುವುದನ್ನು ನೀವು ಅಭಿವ್ಯಕ್ತಿ ಗೊಳಿಸುತ್ತಿರುವ ರೀತಿಯು ಮತ್ತೊಮ್ಮೆ ನಮ್ಮ ಮನಸ್ಸನ್ನು ಗೆಲ್ಲುತ್ತದೆ ಶುಭವಾಗಲಿ

    ಪ್ರತ್ಯುತ್ತರಅಳಿಸಿ
  3. ಪ್ರಸ್ತುತ ಸನ್ನಿವೇಶದಲ್ಲಿ ನಾವೆಲ್ಲರೂ ಎದುರಿಸುತ್ತಿರುವ /ಜೀವಿಸುತ್ತಿರುವ ಬಗೆಯ ತುಂಬಾ ಅರ್ಥ ಪೂರ್ಣ ಚಿತ್ರಣ ನಿಮ್ಮ ಬರೆಹದಲ್ಲಿ ಕಾಣಬಹುದು. ಉತ್ತಮವಾದ ಬರೆಹ....ಶಾರದಾ ಮ್ಯಾಡಮ್ ನಿಮಗೆ ಶುಭವಾಗಲಿ

    ಪ್ರತ್ಯುತ್ತರಅಳಿಸಿ
  4. ಧನ್ಯವಾದಗಳು. ಎಲ್ಲವೂ ಸರಿಯಾಗಿದ್ದರೆ ಕೆಲಸ ಸುಲಭ. ಇಲ್ಲದಿದ್ದರೆ ಹೊಂದಾಣಿಕೆ ಅನಿವಾರ್ಯ ಅಲ್ಲವೇ?

    ಪ್ರತ್ಯುತ್ತರಅಳಿಸಿ
  5. ಅತ್ಯುತ್ತಮವಾದ ಲೇಖನ ಮೇಡಂ ...ನಿಮ್ಮ ಬರವಣಿಗೆಯ ಶೈಲಿ ..ನೀವು ಬಳಸಿರುವ ಪದಗಳು .ಅದನ್ನ ಅನುಭವಿಸಿರುವ ಪರಿ ತುಂಬಾ ಚೆನ್ನಾಗಿದೆ.ಕೋವಿಡ್ 19ರ ವಿಷಮ ಪರಿಸ್ಥಿತಿಯ ವಿವಿಧ ಆಯಾಮಗಳನ್ನು ಹಾಗೂ ಎದುರಿಸಿದ ಸವಾಲುಗಳನ್ನು ಪರಿಚಯಿಸಿದ್ದು .ತುಂಬ ಚೆನ್ನಾಗಿ ಮೂಡಿಬಂದಿದೆ...ನಿಮ್ಮ ಆಲೋಚನೆಗಳು ತುಂಬಾ ಚೆನ್ನಾಗಿದೆ
    ಅಭಿನಂದನೆಗಳು... ಶುಭಾಶಯಗಳು ಹಾಗೂ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. ಪ್ರಿಯ ಶಾರದ,
    "ಮರಳಿ ಯತ್ನವ ಮಾಡು" ಅಭಿಪ್ರಾಯ ಹಂಚಿಕೆ ಮನಸಿನಲ್ಲಿನ ತಲ್ಲಣದ ಅಭಿವ್ಯಕ್ತಿ ರೂಪವಾಗಿದೆ.ಕರೋನ ಎರಡನೇ ಅಲೆ ಪ್ರಕೃತಿ ನಮ್ಮೆಲ್ಲರಿಗೂ ಕಲಿಸುತ್ತಿರುವ ಪಾಠ, ಇನ್ನೇನು ಕರೋನ ಕಡಿಮೆಯಾಗುತ್ತಿದೆ, ನಮಗೇನೂ ಆಗೋದಿಲ್ಲ, ನಾವು ಹೇಗೆ ಬೇಕಾದರೂ ಇರಬಹುದು ಎಂಬ ಉಡಾಫೆ ಮನಣೊಭಾವದ ಪ್ರತಿಪಲ ಎಂದೆನಿಸುತ್ತದೆ
    ಪ್ರಕೃತಿಯ ಮುನಿಸು, ನಮ್ಮೆಲ್ಲರ ಜೀವನಶೈಲಿ,ಇದರ ಪ್ರತಿಫಲ ಇವುಗಳನ್ನು ಪರಿಗಣಿಸಿದ್ದರೆ ಇನ್ನು ಚೆನ್ನಾಗಿರುತ್ತಿತ್ತು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಸ್ವಲ್ಪ ಶಿಕ್ಷಣ ಕ್ಷೇತ್ರದೆಡೆಗೆ ಗಮನವಿತ್ತು. ನೀವು ಹೇಳಿದ ಅಂಶವನ್ನೂ ಗಮನಿಸುವೆ. ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು

      ಅಳಿಸಿ
  7. ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ... ಬರವಣಿಗೆ ಶೈಲಿ ಮತ್ತು ಪದ ಬಳಕೆ ಉತ್ತಮವಾಗಿದೆ... ಬರೆಯುವುದನ್ನು ಮುಂದುವರಿಸಿ... ಶುಭವಾಗಲಿ..

    ಪ್ರತ್ಯುತ್ತರಅಳಿಸಿ
  8. Very nice writing. ಶಿಕ್ಷಕರು ಎಂತಹದೇ ಪರಿಸ್ಥಿತಿಯಲ್ಲೂ ಕುಗ್ಗುವುದಿಲ್ಲ ಎಂಬ ಅಂಶವು ಸ್ಪಷ್ಟವಾಗಿದೆ. ಮಕ್ಕಳೇ ನಮ್ಮ ಆಸ್ತಿ , ಅವರ ಕಲಿಕೆಗಾಗಿ ನಾವು ಏನು‌ಮಾಡಲೂ ಸಿದ್ಧ. ಧನ್ಯವಾದಗಳು ಮೇಡಂ

    ಪ್ರತ್ಯುತ್ತರಅಳಿಸಿ
  9. ಪ್ರತ್ಯುತ್ತರಗಳು
    1. ಖಂಡಿತವಾಗಯೂ ಇದು ಎಲ್ಲಾ ಶಿಕ್ಷಕರ ಮನದ ಭಾವನೆಗಳಾಗಿತ್ತು. ಸುಂದರವಾಗಿ ನಿರೂಪಿಸಿದ್ದೀರಿ.ಎರಡನೇ ಅಲೆ ಮತ್ತೆ ಆತಂಕ ತಂದಿರುವುದು ನಿಜ.

      ಅಳಿಸಿ
  10. ಎಲ್ಲಾ ಶಿಕ್ಷಕರ ಮನದ ಮಾತುಗಳನ್ನು ಸೊಗಸಾಗಿ ಅಕ್ಷರ ರೂಪಕ್ಕೆ ಇಳಿಸಿದ್ದೀರಿ. ಎರಡನೇ ಅಲೆಯಿಂದ ಮತ್ತೆ ಆತಂಕ ಶುರುವಾಗಿದೆ.ಬರವಣಿಗೆ ಮುಂದುವರೆಸಿ.

    ಪ್ರತ್ಯುತ್ತರಅಳಿಸಿ
  11. ಬರಹ ಉತ್ತಮವಾಗಿದೆ.ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರೇರಣಾದಾಯಕವಾದ ಲೇಖನ.
    ತಮ್ಮಿಂದ ಇನ್ನಷ್ಟು ಸ್ಪೂರ್ತಿದಾಯಕ ಲೇಖನಗಳು ಬರಲೆಂದು ನನ್ನ ಆಶಯ

    ಪ್ರತ್ಯುತ್ತರಅಳಿಸಿ

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...