ಕೋವಿಡ್‌ ಸಂಕಷ್ಟಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೋವಿಡ್‌ ಸಂಕಷ್ಟಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಏಪ್ರಿಲ್ 28, 2021

ಮೋಹ

 ಸೀರೆ, ಸೀರೆ ಸೀರೆ ಎಲ್ಲೆಲ್ಲೂ ಹಾರೈತೆ, ಸೂರೆ ಸೂರೆ ಸೂರೆ  ಮನಸೂರೆ ಮಾಡೈತೆ ಎಂಬ ಹಾಡನ್ನು ಗುನುಗುತ್ತಾ ಸೀರೆ ಉಟ್ಟು ಸ್ವಾತಂತ್ರ್ಯ ದಿನದ ಸಂಭ್ರಮವನ್ನಾಚರಿಸಲು  ಶಾಲೆಗೆ ಹೊರಡಲು ಸಿದ್ಧಳಾದಳು ಗೀತ.  ಹೆಂಗೆಳೆಯರ ಮನಕದ್ದಿರುವ ಹಾಗೂ ಮನಗೆದ್ದಿರುವ ಸೀರೆಗೆ ಎಲ್ಲೇ ಹೋಗಲಿ ಅಗ್ರಸ್ಥಾನ. ಕಚೇರಿಗಳಲ್ಲಾದರೆ ಬೇರೆ ರೀತಿಯ ಉಡುಪು ನಡೆಯುತ್ತದೆ; ಆದರೆ ಶಾಲೆ ಕಾಲೇಜು ಎಂದರೆ, ಸೀರೆಯನ್ನು ಉಡಲೇಬೇಕು ಮಹಿಳಾಮಣಿಗಳು. ಮಕ್ಕಳಿಗಿಂತ ವಿಭಿನ್ನವಾಗಿ ಕಾಣಲು, ಮಕ್ಕಳೆದುರಿಗೆ ಸ್ವಲ್ಪ ದೊಡ್ಡವರಂತೆ ತೋರಿಸಿಕೊಳ್ಳಲು, ಗೌರವ ಭಾವನೆಯನ್ನು ಮೂಡಿಸಲು, ಸೀರೆ  ಸಹಾಯ ಮಾಡಿದಷ್ಟು ಇನ್ಯಾವ ಉಡುಪೂ ಮಾಡಲಾರದು. ಇನ್ನು ವಿಶೇಷ ಸಂದರ್ಭಗಳು ಬಂದರಂತೂ ಕೇಳುವುದೇ ಬೇಡ; ರಾಷ್ಟ್ರೀಯ ಹಬ್ಬಗಳು, ವಿವಿಧ ದಿನಾಚರಣೆಗಳು, ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ, ಸೆಂಡ್‌ ಆಫ್‌ ಹೀಗೆ ಶಾಲಾ ಕಾರ್ಯಕ್ರಮಗಳ ಪಟ್ಟಿ ಬಲು ದೊಡ್ಡದಿರುತ್ತದೆ. ಅದಕ್ಕೆ ತಕ್ಕಂತೆ ಸೀರೆಗಳನ್ನು ಉಡುವ ವಿಶೇಷ ಕೌಶಲವೂ ಶಿಕ್ಷಕಿಯರಿಗಿರುತ್ತದೆ. 

ಇಂದು ಸ್ವಾತಂತ್ರ್ಯ ದಿನದ ಸಂಭ್ರಮ; ತ್ರಿವರ್ಣಧ್ವಜವನ್ನು ನೆನಪಿಸುವ ಕೇಸರಿ ಬಿಳಿ ಹಸಿರಿನ ಬಣ್ಣಗಳ ಛಾಯೆಯಿರುವ ಸೀರೆಯನ್ನುಟ್ಟು ನೆರಿಗೆಗಳನ್ನು ಚಿಮ್ಮುತ್ತಾ ಶಾಲೆಗೆ ಬಂದು ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುವಾಗಲೇ ಗೀತಾಳಿಗೆ ನೆನಪಾದದ್ದು  ಓಹ್‌ ಇಂದು ಸ್ಟಾಫ್‌ ನ ಹೆಂಗೆಳೆಯರೆಲ್ಲರೂ ಸಮಾರಂಭದ ನಂತರ, ಮೈಸೂರು ಸಿಲ್ಕ್‌ ಸೀರೆಯನ್ನು ಕೊಳ್ಳಲು ಹೋಗಬೇಕು ಎಂದು.ಸ್ಯಾಲರಿ ಸರ್ಟಿಫಿಕೇಟ್‌ ತೋರಿಸಿದರಾಯಿತು, ಅಪ್ಲಿಕೇಷನ್‌ ತುಂಬಿ, ಫೋಟೋ ಅಂಟಿಸಿ, ಆಧಾರ್‌ ಕಾರ್ಡ್‌ ಕೊಟ್ಟು, 10 ಬ್ಲಾಂಕ್‌ ಚೆಕ್‌ ಗಳನ್ನು ನೀಡಿದರಾಯಿತು; ನಾವು ಆಯ್ಕೆ ಮಾಡುವ ಸೀರೆಗೆ ಮೊದಲ ಕಂತು ನೀಡಿದ ನಂತರ ಉಳಿದ ಹಣವನ್ನು ಸಮಾನವಾಗಿ ಚೆಕ್‌ ಮೂಲಕ ಕೊಡಬೇಕು. ಒಂದೇ ಬಾರಿಗೆ 25, 30 ಸಾವಿರದ ಖರ್ಚಿಲ್ಲ; ಬಡ್ಡಿಯೂ ಇಲ್ಲ; ಆದ್ದರಿಂದಲೇ ನಾವು 5 ಜನ ಮಹಿಳೆಯರು ಮೈಸೂರು ಸಿಲ್ಕ್‌ ಸೀರೆ ಕೊಳ್ಳಬೇಕೆಂಬ ಮನಸ್ಸು ಮಾಡಿದ್ದು. 

ಸೀರೆ ಅಂಗಡಿಗೆ ಹೋಗಿದ್ದೂ ಆಯಿತು; ಸೀರೆ ಕೊಂಡಿದ್ದೂ ಆಯಿತು; ಮನೆಯಲ್ಲಿ ಸೀರೆ ತೋರಿಸಿದ್ದೂ ಆಯಿತು; ಸಂಕ್ರಾಂತಿಗೆ, ಯುಗಾದಿಗೆ ಸೀರೆ ತಗೊಂಡಾಗಿದೆ, ಈಗ ಮತ್ತೆ ಸೀರೆ? ಅಂತ ಮನೆಯಲ್ಲಿ ಬೈಸಿಕೊಂಡದ್ದೂ ಆಯಿತು. ಇರಲಿ ಬಿಡಿ; ಪ್ರತಿದಿನ ಶಾಲೆಗೆ ಸೀರೆ ಉಡಲೇಬೇಕಲ್ಲವೇ? ಅಂತ ಸಮಜಾಯಿಷಿ ಮಾಡಿದ್ದೂ ಆಯಿತು. ಸೀರೆಯನ್ನು ಬೀರುವಿನಲ್ಲಿ ಎತ್ತಿಡಲು ಹೋದಾಗ ಹಲವಾರು ಬಣ್ಣಗಳ, ಬೇರೆ ಬೇರೆ ಗುಣಮಟ್ಟದ ಅನೇಕ ಸೀರೆಗಳು ಕಣ್ಣಿಗೆ ಬಿದ್ದವು.

ಶಿಕ್ಷಕರಿಗೆ ಶೋಭೆಯನ್ನು ನೀಡುವುದೇ ಕಾಟನ್‌ ಸೀರೆ ಎಂದು ಹಲವು ಕಾಟನ್‌ ಸೀರೆಗಳು; ವಿಶೇಷ ಸಂದರ್ಭಗಳಲ್ಲಿ ಉಡಲು ಡಿಸೈನರ್‌ ಸೀರೆಗಳು; ಹಬ್ಬ ಹರಿದಿನಗಳಿಗಾಗಿ ಕಂಚಿ ಸೀರೆಗಳು; ಹಗುರವಾಗಿರುತ್ತದೆ ಮತ್ತು ಆರಾಮದಾಯಕ ಎಂದು ಮೈಸೂರು ಸಿಲ್ಕ್‌ ಸೀರೆಗಳು; ಟ್ರೈನಿಂಗ್‌, ವರ್ಕ್ ಶಾಪ್‌ ಗಳಲ್ಲಿ ಭಾಗವಹಿಸಲು ರಾ ಸಿಲ್ಕ್‌ ಮತ್ತು ಕ್ರೇಪ್‌ ಸಿಲ್ಕ್‌ ಸೀರೆಗಳು, ಸರಳವಾದ ಸಮಾರಂಭಗಳಿಗಾಗಿ ಪ್ರಿಂಟೆಡ್ ಸಿಲ್ಕ್‌ ಸೀರೆಗಳು, ಮದುವೆಗಳಿಗೆ ಹೋಗುವುದಕ್ಕಾಗಿ ದೊಡ್ಡ ಅಂಚಿನ ಭಾರೀ ಸೀರೆಗಳು,  ಅಪ್ಪ ಕೊಡಿಸಿದ ಮೊದಲ ವಾಟರ್‌ ಪ್ರೂಫ್‌ ಸೀರೆ, ಗಂಡ ಕೊಡಿಸಿದ ಮೊದಲ ಮೈಸೂರು ಸಿಲ್ಕ್‌ ಸೀರೆ, ತಾನೇ ಇಷ್ಟಪಟ್ಟು ತೆಗೆದುಕೊಂಡ ಕಾಟನ್‌ ಸಿಲ್ಕ್‌ ಸೀರೆ, ಹೊಸದಾಗಿದೆ ಟ್ರೆಂಡಿ ಎಂದು ಕೊಂಡು ಕೊಂಡ ಲಿನೆನ್‌ ಸೀರೆ, ಟ್ರೈನಿಂಗ್‌ ನೆನಪಿಗಾಗಿ ತೆಗೆದುಕೊಂಡ ಸಾಫ್ಟ್‌ ಸಿಲ್ಕ್‌ ಸೀರೆ, ಎಲ್ಲವೂ ಕಂಚಿಮಯ ಎಂದುಕೊಂಡು ಖರೀದಿಸಿದ ಬೆನಾರಸ್‌ ಸೀರೆ; ಬೇರೆ ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿ ಪ್ರಸಿದ್ಧವಾಗಿದೆ ಎಂದು ತೆಗೆದುಕೊಂಡ ಪಟೋಲ ಸೀರೆ, ಪೂಚಂಪಲ್ಲಿ ಸೀರೆ, ಕಾಶ್ಮೀರಿ ಸಿಲ್ಕ್‌ ಸೀರೆ, ಬಾಂದನಿ ಡಿಸೈನ್‌ ಸೀರೆ.. ಅತ್ತೆ ಕೊಡಿಸಿದ ಜಾರ್ಜೆಟ್‌ ಸೀರೆ,  ಕಸೂತಿ ಸೀರೆ, ನನಗೆ ವಯಸ್ಸಾಯಿತು, ನೀನು ಉಡು ಎಂದು ಅಮ್ಮ ಕೊಟ್ಟಿರುವ ಭಾರವಾಗಿರುವ ಹಳೆಯ ಕಾಲದ ಅಚ್ಚ ರೇಷ್ಮೆ ಸೀರೆ, ಸಂಬಂಧಿಕರು ನೀಡಿದ ಸಿಂಥೆಟಿಕ್‌ ಸೀರೆಗಳು......

ಅಬ್ಬಬ್ಬಾ ಒಂದೇ ಎರಡೇ ??? ಬೀರುವಿನ ಅರೆಗಳ ತುಂಬಾ ಸೀರೆಗಳು.... ಏನೇ ಆಗಲೀ ಸೀರೆಗಳನ್ನು ಬೀರುವಿನಲ್ಲೇ ಇಟ್ಟು ಪೂಜಿಸುವುದಿಲ್ಲ; ಪ್ರತಿದಿನ ಒಂದೊಂದು ಸೀರೆ ಉಟ್ಟೇ ಉಡುತ್ತೇನೆ ಎಷ್ಟು ಸೀರೆಗಳಿದ್ದರೂ ಸಾಕಾಗುವುದಿಲ್ಲ; ಅದಕ್ಕೇ ಸೀರೆ ಕೊಳ್ಳಲು ಒಂದು ಸಂದರ್ಭವೇ ಬೇಕೆಂದಿಲ್ಲ; ಹಬ್ಬಗಳು, ಹುಟ್ಟಿದ ದಿನ, ಮದುವೆ ಮುಂಜಿಗಳೆಲ್ಲ ನೆಪಮಾತ್ರ; ಕೊಳ್ಳಬೇಕೆನಿಸಿದಾಗ ಸೀರೆಗಳನ್ನು ಕೊಳ್ಳುತ್ತಿದ್ದಳು ಗೀತ!!! ಯಾಕೆ ಸೀರೆಗಳೆಂದರೆ ಅಷ್ಟು ಮೋಹ? ಅಷ್ಟು ದುಡ್ಡು ಕೊಟ್ಟು ಸೀರೆಗಳನ್ನು ಕೊಳ್ಳುವುದಾದರೂ ಏಕೆ? ಸೀರೆಗಳಿಗೆ ಹಾಕುವ ದುಡ್ಡು ಡೆಡ್‌ ಇನ್ವೆಸ್ಟ್‌ಮೆಂಟ್ ಅಂತ ಗೊತ್ತಿದ್ದರೂ ಅದಕ್ಕೆ ದುಡ್ಡು ಸುರಿಯುವುದು ಏಕೆ? ಅನಗತ್ಯವಾಗಿ ಈ ಕೊಳ್ಳುಬಾಕತನ ಏಕೆ?  ಹೋಗಲಿ ಕಡಿಮೆ ದುಡ್ಡು ಕೊಟ್ಟು ಸಾಮಾನ್ಯ ಸೀರೆಗಳನ್ನು ಕೊಳ್ಳಬಹುದಲ್ಲ?? ಎಂಬಂತಹ ಎಷ್ಟೋ ಪ್ರಶ್ನೆಗಳು ಗೀತಾಳನ್ನು ಕಾಡಿದ್ದಿದೆ. ಈ ಪ್ರಶ್ನೆಗಳಿಗೆಲ್ಲ ಒಂದೇ  ಉತ್ತರ..... ಒಂದು ಒಳ್ಳೆಯ ಸೀರೆಯನ್ನು ಉಟ್ಟಾಗ ಸಿಗುವ ಆನಂದ....ಸ್ನೇಹಿತರು, ಗೆಳತಿಯರು, ಸಂಬಂಧಿಕರು ಎಷ್ಟು ಚೆನ್ನಾಗಿದೆ ಈ ಸೀರೆ! ನಿಮಗೆ ಚೆನ್ನಾಗಿ ಒಪ್ಪುತ್ತೆ ಎಂದು ಹೇಳಿದಾಗ ಸಿಗುವ ಸಂತೋಷ ಎಷ್ಟು ದುಡ್ಡು ಕೊಟ್ಟರೂ ಸಿಗುವುದಿಲ್ಲ ಎಂಬುದೇ  ಆಗಿತ್ತು. ಅಲ್ಲದೇ ನಮ್ಮಂತಹವರು ಸೀರೆ ಉಡುವುದರಿಂದ ತಾನೇ ನೇಕಾರರಿಗೆ ವ್ಯಾಪಾರ, ಸರ್ಕಾರಕ್ಕೆ ವ್ಯವಹಾರ ಎಂಬ  ಸಮರ್ಥನೆಯೂ ಆಕೆಗಿತ್ತು.

 ಹೀಗೆ ದಿನಕ್ಕೊಂದು ಸೀರೆ ಉಡುತ್ತಾ ಶಾಲಾಕಾರ್ಯಗಳಲ್ಲಿ ಮುಳುಗಿಹೋಗಿ, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಬರಸಿಡಿಲಿನಂತೆ ಬಂದೆರಗಿತ್ತು ಕೊರೊನಾ ವೈರಸ್‌ನ ಅಟ್ಟಹಾಸ!! ಪ್ರಪಂಚವನ್ನೇ ನಡುಗಿಸಿದ್ದ ಕೋವಿಡ್‌ 19 ಎಂಬ ಮಹಾಮಾರಿ ಭಾರತಕ್ಕೆ ದಾಂಗುಡಿಯಿಟ್ಟು ಒಂದೊಂದೇ ಜೀವಗಳನ್ನು ಬಲಿ ಪಡೆಯತೊಡಗಿತು; ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಯಿತು; ಲಾಕ್‌ ಡೌನ್‌ ಮೊರೆಹೋಗಲೇಬೇಕಾಯಿತು; ಶಾಲೆಗೆ ಹೋಗುವುದಿರಲಿ, ಮನೆಯಿಂದ ಹೊರಗೆ ಹೋಗುವುದೇ ದುಸ್ತರವಾಯಿತು. ಮದುವೆ-ವಿವಾಹಗಳಿರಲಿ, ಸರಳ ಸಮಾರಂಭಗಳಿಗೆ ಹಾಜರಿ ಹಾಕುವುದಕ್ಕೂ ಕತ್ತರಿ ಬಿತ್ತು. ಟ್ರೈನಿಂಗ್‌, ವರ್ಕ್‌ ಶಾಪ್‌ ಗಳಿರಲಿ ಸಧ್ಯ,  ಗುಂಪಿನಲ್ಲಿ ಐದಾರು ಜನ ಸೇರುವುದೂ ಕಷ್ಟವಾಯಿತು;  ಸೀರೆಗಳನ್ನು ಉಡುವುದಿರಲಿ......ಬೀರುವಿನ ಬಾಗಿಲನ್ನು ತೆರೆಯುವುದೇ ಅಪರೂಪವಾಯಿತು. ಮನೆಯಲ್ಲಿಯೇ ಕಟ್ಟಿಹಾಕಿದಂತಾಯಿತು.....ಯಾವ ಕೆಲಸವನ್ನು ಮಾಡಲು ಹೋದರೂ ಹಿಡಿದು ಬಿಟ್ಟಂತಾಯಿತು......

ಅಂತೂ ಇಂತೂ ಶಾಲೆ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾದರೂ.... ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಬೇಕು; ಶಾಲೆಯಿಂದ ಬಂದ ತಕ್ಷಣ ಧರಿಸಿದ ಬಟ್ಟೆಗಳನ್ನು ಬಿಸಿನೀರಿನಲ್ಲಿ ನೆನೆಸಿ, ಒಗೆಯಬೇಕು; ಸ್ನಾನ ಮಾಡಬೇಕು; ಪದೇ ಪದೇ ಕೈ ತೊಳೆಯಬೇಕು; ಜೀವನ ಶೈಲಿಯೇ ಬದಲಾಗಿ ಹೋಯಿತು;  ಶುಕ್ರವಾರ, ಮಂಗಳವಾರಗಳಂದು ಉಡುತ್ತಿದ್ದ ರೇಷ್ಮೆ ಸೀರೆಗಳಿಗೆ ಬ್ರೇಕ್‌ ಬಿತ್ತು; ಶಾಲಾ ಸಮಾರಂಭಗಳೇ ಇಲ್ಲದಿರುವುದರಿಂದ ಬೇರೆ ಬೇರೆ ರೀತಿಯ ಸೀರೆಗಳನ್ನು ಉಡುವುದೇ ನಿಂತುಹೋಯಿತು;  ಮಕ್ಕಳು ಶಾಲೆಗೆ ಬರದಿದ್ದಾಗ ಚೂಡಿದಾರ್‌ ಧರಿಸುವುದು ಸಾಮಾನ್ಯವಾಯಿತು;  ಒಗೆಯಲು ಸುಲಭ ಎಂದು ಸಿಂಥೆಟಿಕ್‌ ಸೀರೆಗಳೇ ಮುನ್ನೆಲೆಗೆ ಬಂದವು; ಒಮ್ಮೆ ಧರಿಸಿದ ಮಾತ್ರಕ್ಕೆ ಒಗೆಯಲೇಬೇಕು ಎಂಬ ಪರಿಸ್ಥಿತಿಯಲ್ಲಿ ಹೆಚ್ಚಿನ ಬೆಲೆಯ ಸೀರೆಗಳು ಮೂಲೆಗುಂಪಾದವು; ರೇಷ್ಮೆ ಸೀರೆಗಳನ್ನು ಕೊಳ್ಳುವುದು ಮಾತ್ರ ದುಬಾರಿಯಲ್ಲ, ಅವುಗಳ ನಿರ್ವಹಣೆಯೂ ದುಬಾರಿಯೇ! ಒಂದು ಸಲ ಉಟ್ಟ ಕೂಡಲೇ ಡ್ರೈ ಕ್ಲೀನ್‌ ಮಾಡಿಸಬೇಕು ಎಂದರೆ ಕಷ್ಟವೇ, ಹಾಗೂ ಉಡಬಹುದಿತ್ತೇನೋ, ಡ್ರೈ ಕ್ಲೀನ್‌ ಅಂಗಡಿಗಳು, ಇಸ್ತ್ರಿ ಅಂಗಡಿಗಳೆಲ್ಲ ಮುಚ್ಚಿಹೋಗಿವೆಯಲ್ಲ; ಆದ್ದರಿಂದಲೇ ಅಂತಹ ಸೀರೆಗಳು ಬೀರುವಿನ ಒಳಗೇ ಸಮಾಧಿಯಾದವು......

ಹೀಗೇ  ಗೀತಾ ಒಂದು ದಿನ ಬೀರು ತೆಗೆದು ಇಂದು ಸೀರೆಯನ್ನು ಉಡಲೇಬೇಕೆಂದು ಮನಸ್ಸು ಮಾಡಿ ಯಾವ ಸೀರೆಯನ್ನು ಉಡಲಿ ಎಂದು ಬೀರುವಿನ ಅರೆಗಳ ತುಂಬ ಪೇರಿಸಿ ಇಟ್ಟಿದ್ದ ಸೀರೆಗಳನ್ನೆಲ್ಲ ನೋಡುತ್ತಿರುವಾಗ, ಆಕೆಗೆ...... ಆ ಸೀರೆಗಳಿಗೆಲ್ಲ ಜೀವ ಬಂದಂತೆ.....  ಅಮ್ಮಾವ್ರು ನಮ್ಮನ್ನೇಕೆ ಬೀರುವಿನಿಂದ ಹೊರತೆಗೆಯುತ್ತಿಲ್ಲ ಎಂದು ಮಾತನಾಡಿದಂತೆ.....  ನನ್ನನ್ನು ಉಡು ನನ್ನನ್ನು ಉಡು ಎಂದು ಗೀತಾಳನ್ನು ಪೀಡಿಸಿದಂತೆ ........ ನನಗೇಕೆ ಇನ್ನೂ ಬ್ಲೌಸ್‌ ಹೊಲಿಸಿಲ್ಲ ಎಂದು ಕಾಡಿದಂತೆ.....  ನನ್ನನ್ನು ಬೀರುವಿನಿಂದ ತೆಗೆಯುವುದಿಲ್ಲವೇ??? ಬೇಕು ಬೇಕು ಎಂದು ತೆಗೆದುಕೊಂಡೆಯಲ್ಲ ಎಂದು ಕೇಳಿದಂತೆ...... ನನ್ನನ್ನು ಮುಟ್ಟಿಯೇ 6 ತಿಂಗಳಾಯಿತು ನನ್ನನ್ನು ಮೈ ಮೇಲೆಯಾದರೂ ಹಾಕಿಕೊಳ್ಳುವುದಿಲ್ಲವೇ ಎಂದು ಅತ್ತಂತೆ... ಪ್ರತಿದಿನ ಸೀರೆ ಉಡುವೆಯಾ??? ಈಗ ಏನು ಮಾಡುವೆ? ಎಂದು ನಕ್ಕಂತೆ...... ಈ ರೀತಿ ಸೀರೆ ಉಡುವ ಚೆಂದಕ್ಕೆ ಕೊಂಡಿದ್ದೇಕೆ ಎಂದು ಅಣಕಿಸಿದಂತೆ....... ಒಂದಾದ ಮೇಲೆ ಒಂದು ಸೀರೆ ಆಕೆಯ ಮೈಮೇಲೆ ಬಂದು ಬಿದ್ದಂತೆ......ಸೀರೆಗಳ ಅಡಿಯಲ್ಲಿ ತಾನು ಅಪ್ಪಚ್ಚಿಯಾದಂತೆ.... ಉಸಿರು ಕಟ್ಟಿ ಜೀವ ಹೋದಂತೆ.... ತನ್ನ ಚಿತೆಯ ಮೇಲೆ ಕಟ್ಟಿಗೆಯ ಬದಲು ಸೀರೆಗಳನ್ನೇ ಹಾಕಿದಂತೆ ಅನ್ನಿಸುತ್ತಾ ಮೈ ಬೆವರತೊಡಗಿತು.......  ಮೈ ಮೇಲೆ ಬೀಳುತ್ತಿರುವ ಸೀರೆಗಳಿಂದ ಹೊರಬರುವ ಪ್ರಯತ್ನ ಮಾಡುವಾಗಲೇ ಅದು ಕನಸು ಎಂಬುದರ ಅರಿವಾಯಿತು..... ಎಫ್.‌ ಎಂ. ನಲ್ಲಿ ತಂದೆ ಕೊಡಿಸೋ ಸೀರೆ ಮದುವೆ ಆಗುವವರೆಗೆ ಹಾಡು ತೇಲಿಬರುತ್ತಿತ್ತು....... 



ಶನಿವಾರ, ಏಪ್ರಿಲ್ 10, 2021

ಮರಳಿ ಯತ್ನವ ಮಾಡು

 

ಕಳೆದ ಒಂದೂವರೆ ವರ್ಷಗಳಿಂದ ಪ್ರತಿಯೊಬ್ಬರೂ ಅನುಭವಿಸುತ್ತಿರುವ ನೋವು ಸರ್ವವಿದಿತ. ಕೋವಿಡ್‌ 19 ನಮ್ಮ ಬದುಕಿನಲ್ಲಿ ಊಹಿಸಲಾರದಷ್ಟು ನಷ್ಟವನ್ನು ಉಂಟುಮಾಡಿತು. ವ್ಯಾಪಾರ, ಪ್ರವಾಸ, ಶಿಕ್ಷಣ, ಸಣ್ಣ ಕೈಗಾರಿಕೆ, ಆಹಾರ, ನಾಟಕ, ಸಿನೆಮಾ, ಕ್ರೀಡೆ, ಸಾರಿಗೆ, ಪುಷ್ಪೋದ್ಯಮ, ಆರೋಗ್ಯ, ಜವಳಿ, ಹೀಗೆ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಕರಿನೆರಳನ್ನು ಹಾಸಿಯೇ ಬಿಟ್ಟಿತು. ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಯಿತು. ಹೊಸ  ಉದ್ಯೋಗ ದೊರೆಯುವುದಿರಲಿ, ಇರುವ ಕೆಲಸವನ್ನು ಕಾಪಾಡಿಕೊಳ್ಳುವುದು ದುಸ್ತರವಾಯಿತು. ಮಾಧ್ಯಮಗಳಲ್ಲಿ ಕರೋನಾ ಸೋಂಕಿನ ಸಂಖ್ಯೆ ಮತ್ತು ಮೃತರ ಸಂಖ್ಯೆಯ  ಸುದ್ದಿಯನ್ನು ಕೇಳಿದ ಬಹುತೇಕ ಜನರು ಹೆದರಿ ಕಂಗಾಲಾದರು; ಸೋಂಕಿತರ ಸಂಖ್ಯೆ, ಶಂಕಿತರ ಸಂಖ್ಯೆ, ಪ್ರಾಥಮಿಕ ಸಂಪರ್ಕಿತರು, ಪ್ರತ್ಯೇಕವಾಸ, ಲಾಕ್‌ ಡೌನ್‌, ಸಾಮಾಜಿಕ ಅಂತರ  ಮುಂತಾದ ಹೊಸ ಪದಗಳು ಸೃಷ್ಟಿಯಾದವು. ಮುಖದ ಮೇಲೆ ಹೊಸ ಆಭರಣವಾಗಿ ಮಾಸ್ಕ್‌ ಕಂಡುಬಂತು; ಪದೇ ಪದೇ ಕೈ ತೊಳೆಯುವ ಅಭ್ಯಾಸ ಹೆಚ್ಚಾಗಲೇಬೇಕಾಯಿತು. ಕೋವಿಡ್‌ ಕಾರಣದಿಂದಾಗಿ ಮೃತರಾದವರಿಗೆ ಅನುಸರಿಸುತ್ತಿದ್ದ ಕ್ರಮಗಳನ್ನು ಕಂಡ ಎಷ್ಟೋ ವೃದ್ಧಜೀವಗಳು ಅಯ್ಯೋ ಈ ಕಾಲದಲ್ಲಿ ಕೋವಿಡ್‌ನಿಂದ ನಮ್ಮ ಜೀವವನ್ನು ತೆಗೆಯಬೇಡಪ್ಪ ದೇವರೇ ಎಂದು ಮೊರೆಯಿಡುವಂತಾಯಿತು. ಸಿನಿಮಾ ಥಿಯೇಟರ್ಗಳು, ಶೂಟಿಂಗ್‌ಗಳು, ರಂಗಭೂಮಿ ಚಟುವಟಿಕೆಗಳು, ಮದುವೆಗಳು, ಜಾತ್ರೆಗಳು, ವ್ಯಾಪಾರ ವ್ಯವಹಾರಗಳು, ಸಭೆ ಸಮಾರಂಭಗಳು, ಪೂಜೆ ಪುನಸ್ಕಾರಗಳು, ಮಂದಿರ-ಮಸೀದಿ-ಚರ್ಚ್ಗಳು,  ಪ್ರವಾಸ- ವಿಹಾರಗಳು, ಮೋಜು ಮಸ್ತಿಗಳು, ಊಟ ಉಪಚಾರಗಳು, ಅತಿಥಿ ಸತ್ಕಾರಗಳು, ಸಾರಿಗೆ ಸಂಪರ್ಕಗಳು ಎಲ್ಲಕ್ಕಿಂತ ಪ್ರಮುಖವಾಗಿ ಶಾಲಾ ಕಾಲೇಜುಗಳು ಪೂರ್ಣವಾಗಿ, ಸಂಪೂರ್ಣವಾಗಿ ಬಂದ್‌ ಆದವು. 
ಪರೀಕ್ಷೆಗೆ ಭರದಿಂದ ತಯಾರಾಗುತ್ತಾ ತಮ್ಮ ಭವಿಷ್ಯದ ಬಗ್ಗೆ ಸುಂದರವಾದ ಕನಸುಗಳನ್ನು ಕಂಡಿದ್ದ ವಿದ್ಯಾರ್ಥಿ ಸಮೂಹವು ಶಾಲಾ ಕಾಲೇಜುಗಳು ಬಂದ್‌ ಆದದ್ದರಿಂದ ಆಘಾತಗೊಂಡಿತು. ಉನ್ನತ ವಿದ್ಯಾಭ್ಯಾಸ, ವಿದೇಶದಲ್ಲಿ ವ್ಯಾಸಂಗ ಮಾಡುವ ಯೋಜನೆ ಇದ್ದವರ ಆತಂಕ ಒಂದು ರೀತಿಯದ್ದಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳ ಆತಂಕ ಇನ್ನೊಂದು ರೀತಿಯಲ್ಲಿತ್ತು. ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ?, ನಾವೆಲ್ಲರೂ ಮುಂದಿನ ತರಗತಿಗಳಿಗೆ ಹೋಗುತ್ತೇವೆಯೋ ಇಲ್ಲವೋ? ಎಂಬಂತಹ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಕಾಡತೊಡಗಿದವು.  1 ರಿಂದ 9 ನೇ ತರಗತಿಯ ಮಕ್ಕಳು ಉತ್ತೀರ್ಣರಾದರೂ  ಹತ್ತನೇ ತರಗತಿಯ ಮಕ್ಕಳು ಪರೀಕ್ಷೆ ಎದುರಿಸಬೇಕಾಯಿತು.
ಈಗ  ಪ್ರಾರಂಭವಾಯಿತು ನೋಡಿ; ಶಿಕ್ಷಕರ ಅಗ್ನಿಪರೀಕ್ಷೆ; ಮಕ್ಕಳು ಶಾಲೆಗೆ ಬರುತ್ತಿಲ್ಲ; ಏನು ತಯಾರಿಯಾಗಿತ್ತೋ ಅದು ಮಕ್ಕಳಿಗೆ ನೆನಪಿದೆಯೋ ಇಲ್ಲವೋ?  ಮಕ್ಕಳು ಮನೆಯಲ್ಲಿ ಓದುತ್ತಿದ್ದಾರೋ ಇಲ್ಲವೋ? ಪುಸ್ತಕಗಳನ್ನು ಸರಿಯಾಗಿ ಇಟ್ಟುಕೊಂಡಿದ್ದಾರೋ ಇಲ್ಲವೋ?, ವಿಪರೀತ ಒತ್ತಡದಿಂದ ಬೇರೆ ಅಭ್ಯಾಸಗಳನ್ನು ಬೆಳೆಸಿಕೊಂಡಿದ್ದಾರೋ ಏನೋ? ಮಕ್ಕಳನ್ನು ಸಂಪರ್ಕಿಸುವ ವಿಧಾನ ಹೇಗೆ? ಫೋನ್‌ ಮಾಡಿ ಅವರನ್ನು ಮೇಲ್ವಿಚಾರಣೆ ಮಾಡುವುದು ಹೇಗೆ? ಗ್ರಾಮೀಣ ಪ್ರದೇಶಗಳಲ್ಲಿ ಜೂನ್‌ ತಿಂಗಳೆಂದರೆ ಹೊಲ-ಗದ್ದೆಗಳಲ್ಲಿ ವಿಪರೀತ ಕೆಲಸದ ಸಮಯ, ನಮ್ಮ ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದಾರೋ ಏನೋ, ಅಥವಾ ಕೆಲಸ ಇರುವ ಕಡೆ ವಲಸೆ ಹೋಗಿದ್ದಾರೋ?, ಕಾರ್ಯ ನಿಮಿತ್ತ ವಲಸೆ ಬಂದಂತಹ ಮಕ್ಕಳು ಇಲ್ಲೇ ಇದ್ದಾರೋ ಅಥವಾ ಅವರ ಸ್ವಂತ ಊರಿಗೆ ಹೋಗಿದ್ದಾರೋ?  ಎಂಬಂತಹ ಹಲವಾರು ಪ್ರಶ್ನೆಗಳು ಶಿಕ್ಷಕ ಸಮುದಾಯವನ್ನು ಕಾಡತೊಡಗಿದವು.
ಯಾವುದೂ ಮೊದಲಿನಂತಿರದ ಪರಿಸ್ಥಿತಿಗೆ ಶಿಕ್ಷಕರು ಹೊಂದಿಕೊಳ್ಳಲೇ ಬೇಕಾಯಿತು; ವರ್ಚುಯಲ್‌ ಗೇಮ್ಸ್‌ ಬಗ್ಗೆ ಮಾತ್ರ ತಿಳಿದಿದ್ದ ಶಿಕ್ಷಕ ಸಮುದಾಯ, ವರ್ಚುಯಲ್‌ ಕ್ಲಾಸ್‌ ರೂಮ್‌ ಅನ್ನು ನೈಜವಾಗಿ ಜಾರಿಗೊಳಿಸಬೇಕಾಯಿತು; ಹತ್ತನೇ ತರಗತಿಯ ಪರೀಕ್ಷೆಗೆ ಮಕ್ಕಳನ್ನು ಸಜ್ಜುಗೊಳಿಸಬೇಕಾಯಿತು; ಕಠಿಣ ಮಾರ್ಗದರ್ಶಿ ಸೂತ್ರಗಳನ್ವಯ ಪರೀಕ್ಷೆಗಳನ್ನು ನಡೆಸಬೇಕಾಯಿತು; ಹತ್ತನೇ ತರಗತಿಯ ಪರೀಕ್ಷೆಯೇನೋ ಮುಗಿಯಿತು; ಫಲಿತಾಂಶವೂ ಬಂದಿತು. ಮುಂದಿನ ತರಗತಿಗಳಿಗೆ ದಾಖಲಾತಿಯೂ ನಡೆಯಿತು.
 ಶಿಕ್ಷಕರೇನೋ ಶಾಲೆಗೆ ಹೋಗತೊಡಗಿದರು; ಆದರೆ ಮಕ್ಕಳಿಲ್ಲದ ಶಾಲೆ, ದೇವರಿಲ್ಲದ ಗುಡಿಯಂತೆ ಭಣಗುಡುತ್ತಿತ್ತು; ತರಗತಿಗಳಲ್ಲಿ ಮಕ್ಕಳ ಧ್ವನಿಯಿಲ್ಲ; ಅಟೆಂಡೆನ್ಸ್‌ ಕರೆಯುವಂತಿಲ್ಲ; ಪಾಠ ಮಾಡುವಂತಿಲ್ಲ; ಮೈದಾನಗಳಲ್ಲಿ ಮಕ್ಕಳ ಆಟವಿಲ್ಲ; ಬೆಲ್ಲಿನ ಶಬ್ದ ಕಿವಿಗೆ ಬೀಳುತ್ತಿಲ್ಲ; ಪ್ರಾರ್ಥನೆಯಿಲ್ಲ; ಬ್ಯಾಂಡ್‌ ಸೆಟ್‌ ಶಬ್ದ ಮೊದಲೇ ಇಲ್ಲ; ಹುಟ್ಟುಹಬ್ಬಗಳ ಹಾರೈಕೆಗಳಿಲ್ಲ; ವಾರ್ತೆ ಬರೆಯುವವರಿಲ್ಲ; ಪ್ರಶ್ನೆ ಕೇಳುವವರಿಲ್ಲ; ಕಪ್ಪುಹಲಗೆಯ ಮೇಲೆ ಸೀಮೆಸುಣ್ಣದ ಬರಹಗಳಿಲ್ಲ; ಗುಡ್‌ ಮಾರ್ನಿಂಗ್‌, ಗುಡ್‌ ಆಫ್ಟರ್‌ನೂನ್‌ಗಳ ವಂದನೆಗಳಿಲ್ಲ; ಒಟ್ಟಾರೆಯಾಗಿ ಮಕ್ಕಳ ಕಲರವವಿಲ್ಲ.................  
ಶಿಕ್ಷಕರಿಗೆ ಶಾಲೆಗೆ ಹೋಗುವುದೇ ಬೇಸರವೆನಿಸತೊಡಗಿತು.  ಬದಲಾವಣೆ ಜಗದ ನಿಯಮ ಎಂಬುದು ನಮಗೆಲ್ಲ ತಿಳಿದಿದೆಯಷ್ಟೆ; ಇದೀಗ ಇಂತಹ ಸಂದರ್ಭಕ್ಕೆ ಹೊಂದಿಕೊಂಡು ಬದಲಾಗಲೇಬೇಕಾದ ಅನಿವಾರ್ಯತೆಗೆ ಶಿಕ್ಷಕರು ಒಳಗಾದರು. ಕ್ರಿಯಾಶೀಲ ಶಿಕ್ಷಕರು ಮಕ್ಕಳನ್ನು ತಲುಪಲು ಹಲವು ಮಾರ್ಗಗಳನ್ನು ಕಂಡುಕೊಂಡರು;  ವಿದ್ಯಾಗಮ ಎಂಬ ಯೋಜನೆಯಡಿಯಲ್ಲಿ ಮಕ್ಕಳ ಮನೆಬಾಗಿಲಿಗೆ ಹೋಗಿ ಮಕ್ಕಳ ಹಿನ್ನೆಲೆಯನ್ನು ತಿಳಿಯುತ್ತಾ ಅವರಿಗೆ ಬೋಧಿಸುವ ಕೈಂಕರ್ಯವನ್ನು ಕೈಗೊಂಡರು. ಫೋನ್‌ ಮೂಲಕ ಮಕ್ಕಳನ್ನು ಸಂಪರ್ಕಿಸುವುದು; ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು; ಪೋಷಕರೊಡನೆ ನಿರಂತರ ಸಂಪರ್ಕದಲ್ಲಿರುವುದು; ಮಕ್ಕಳ ಮನೆಗಳಿಗೇ ಹೋಗುವುದು; ಒಂದೊಂದು ಊರಿನಲ್ಲಿ ಒಂದು ಕೇಂದ್ರಸ್ಥಾನವನ್ನು ಮಾಡಿಕೊಂಡು ಅಲ್ಲಿ ಮಕ್ಕಳಿಗೆ ಬೋಧಿಸುವುದು; ಆನ್‌ ಲೈನ್‌ ತರಗತಿಗಳನ್ನು ನಡೆಸುವುದು; ದೂರದರ್ಶನದಲ್ಲಿ ಬರುವ ಪಾಠಗಳನ್ನು ನೋಡುವಂತೆ ತಿಳಿಸುವುದು;  ಹೀಗೇ ಹತ್ತು ಹಲವಾರು ದಾರಿಗಳನ್ನು ಶಿಕ್ಷಕ ಸಮುದಾಯ ಹುಡುಕಿಕೊಂಡಿತು. ನಿಮಗೇನು? ಮಕ್ಕಳು ಶಾಲೆಗೆ ಬರುತ್ತಿಲ್ಲ ಅಲ್ಲವಾ? ಮತ್ತೇನು ಕೆಲಸ? ಎಂದು ಕುಹಕ ನಗೆಯನ್ನು ಬೀರುತ್ತಾ ಮೂಗುಮುರಿಯುತ್ತಿದ್ದ ಜನರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಶಿಕ್ಷಕರು ಕೆಲಸ ಮಾಡಿದರು.

ಆದರೆ ಕರೋನಾ ತನ್ನ ಪ್ರಭಾವವನ್ನು ಎಲ್ಲೆಡೆ ಹೆಚ್ಚು ಮಾಡುತ್ತಿದ್ದ ಹಾಗೇ ಈ ಕಾರ್ಯಕ್ರಮಗಳೂ ನಿಂತುಹೋದವು; ಎಷ್ಟೋ ಮಕ್ಕಳು ಪುಸ್ತಕ ತೆರೆಯುವುದನ್ನು,ಪೆನ್ನು ಹಿಡಿಯುವುದನ್ನು, ಓದುವುದನ್ನು ಮರೆತೇ ಬಿಟ್ಟರು; ಮನೆಗೆಲಸ, ಹೊರಗಿನ ಕೆಲಸ, ಎಂದು ದುಡಿಮೆಯ ರುಚಿ ಕಂಡರು. ಶಾಲೆಗೆ ಬರಬೇಕು; ತಮ್ಮದಿನ್ನೂ ವಿದ್ಯಾರ್ಥಿಜೀವನ; ಕಲಿಯುವುದು ಸಾಕಷ್ಟಿದೆ ಎಂಬುದನ್ನು ಕಡೆಗಣಿಸಿಬಿಟ್ಟರು. ಭವಿಷ್ಯದಲ್ಲಿ ವಿದ್ಯೆಗಿರುವ ಪ್ರಾಮುಖ್ಯತೆಯನ್ನು ಅಕ್ಷರಶಃ ನಿರ್ಲಕ್ಷಿಸಿಬಿಟ್ಟರು.    
ಭಗವಂತ ಆದಷ್ಟು ಬೇಗ ಕರೋನಾ ತೊಲಗಲಿ, ವ್ಯಾಕ್ಸಿನ್‌ ಕಂಡುಹಿಡಿಯಲಿ, ಶಾಲೆ ಪ್ರಾರಂಭವಾಗಲಿ ಎಂದು‌ ಶಿಕ್ಷಕರು ಪ್ರಾರ್ಥಿಸುವಂತಾಯಿತು. 
ಅಂತೂ ಇಂತೂ 2021 ರ ಜನವರಿಯಿಂದ ಅಧಿಕೃತವಾಗಿ ಶಾಲೆ ಆರಂಭವಾಯಿತು; ಶಾಲಾ ಆವರಣಕ್ಕೇ ಮಕ್ಕಳು ಬರುವಂತಾಯಿತು; ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ತರಗತಿಗಳು ನಡೆಯಲು ಸಜ್ಜುಗೊಂಡವು; ಪ್ರತಿ ಶಾಲೆಗೂ ಥರ್ಮಲ್‌ ಸ್ಕ್ಯಾನರ್‌, ಸ್ಯಾನಿಟೈಸರ್‌ಗಳನ್ನು ಒದಗಿಸಲಾಯಿತು; ಮಕ್ಕಳನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು; ಮಕ್ಕಳು ಮತ್ತು ಶಿಕ್ಷಕರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಯಿತು........ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಂಡವು; ಶಿಕ್ಷಕರಲ್ಲಿ ಪ್ರಚ್ಫನ್ನ ಶಕ್ತಿಯಾಗಿ ಮಾರ್ಪಟ್ಟಿದ್ದ ಬೋಧನಾ ಕಲೆ ಈಗ ಚಲನ ಶಕ್ತಿಯ ರೂಪವನ್ನು ಪಡೆದುಕೊಂಡಿತು;  ಕಲಿಕೆಗೆ ಇನ್ನೂ ಸಿದ್ಧಗೊಳ್ಳದ ಮಕ್ಕಳ ಕಡೆ ವಿಶೇಷ ಗಮನ ನೀಡಲಾಯಿತು. ತರಗತಿಯಲ್ಲಿ ಹೇಗೆ ಕೂರಬೇಕೆಂಬುದರಿಂದ ಹಿಡಿದು, ಅನುಸರಿಸಬೇಕಾದ ಎಲ್ಲ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು; ಪುಸ್ತಕ ತರುವುದನ್ನೂ, ಪೆನ್ನು ಹಿಡಿಯುವುದನ್ನೂ, ಶಿಸ್ತಿನಿಂದ ಓದುವುದನ್ನೂ, ಅಭ್ಯಾಸ ಮಾಡಬೇಕಾದ ವಿಧಾನವನ್ನೂ, ಹೀಗೆ ಪ್ರತಿಯೊಂದನ್ನೂ ನಿಧಾನವಾಗಿ ಮಕ್ಕಳಿಗೆ ಮತ್ತೆ ಕಲಿಸಲಾಯಿತು....... ತರಬೇತಿ ನೀಡಲಾಯಿತು..... ಮರಳಿ ಮರಳಿ ಪ್ರಯತ್ನಿಸಲಾಯಿತು...... ನಿಧಾನವಾಗಿ ಮಕ್ಕಳು ಮೊದಲಿನಂತಾದರು, ವಿದ್ಯಾರ್ಥಿ ಜೀವನಕ್ಕೆ ಹೊಂದಿಕೊಳ್ಳತೊಡಗಿದರು;  ಮನೆಯಲ್ಲೇ ಇದ್ದು ಔಪಚಾರಿಕ ಶಿಕ್ಷಣವನ್ನು ಭಾಗಶಃ ಮರೆತೇಬಿಟ್ಟಿದ್ದ ಮಕ್ಕಳು ಮತ್ತೆ ಶಾಲಾ ಮಕ್ಕಳಾದರು; ಇಷ್ಟರಲ್ಲೇ ಕೋವಿಡ್‌  ವ್ಯಾಕ್ಸಿನ್‌ ಕೂಡ ಕಂಡುಹಿಡಿಯಲ್ಪಟ್ಟಿತು; ಕೋವಿಡ್‌ ಸೋಂಕಿತರ ಸಂಖ್ಯೆಯೂ ಇಳಿಮುಖವಾಯಿತು‌  ಮತ್ತು ಎಲ್ಲವೂ ಮೊದಲಿನಂತಾಯಿತು ಎಂದು ಸಂಭ್ರಮ ಪಡುವಾಗಲೇ
ಶುರುವಾಯಿತು ನೋಡಿ ಕೋವಿಡ್‌ನ ಎರಡನೆಯ ಅಲೆ............
ದಿನದಿನಕ್ಕೂ ಸೋಂಕಿತರ ಸಂಖ್ಯೆ ಸಾವಿರ ಸಾವಿರ ದಾಟಿತು; ಸರ್ಕಾರ, ಮುನ್ನೆಚ್ಚರಿಕೆ ಕ್ರಮವಾಗಿ 6 ರಿಂದ 9 ನೇ ತರಗತಿಗಳನ್ನು ಮತ್ತೆ ಮುಚ್ಚಲೇಬೇಕಾದ ಅನಿವಾರ್ಯತೆ ಒದಗಿತು. ಎಲ್ಲವೂ ಒಂದು ಹದಕ್ಕೆ ಬಂದಿತ್ತು, ಮಕ್ಕಳೆಲ್ಲರೂ ಕಲಿಕಾ ಪಥದಲ್ಲಿ ಸಾಗುತ್ತಿದ್ದರು ಎಂದು ಶಿಕ್ಷಕರು ನಿಟ್ಟುಸಿರು ಬಿಡುತ್ತಿದ್ದಾಗಲೇ ಬರಸಿಡಿಲಿನಂತೆ ಈ ಸುದ್ದಿ ಬಂದೆರಗಿತು. ಮತ್ತೆ ಮಕ್ಕಳು ಮನೆಯಲ್ಲಿ ಉಳಿಯುವಂತಾಯಿತು; ಮತ್ತೊಮ್ಮೆ ಪರೀಕ್ಷೆಗಳು ಬೇಕೋ? ಬೇಡವೋ? ಎಂಬ ಬಿಸಿಚರ್ಚೆ ಆರಂಭವಾಯಿತು; ಮತ್ತದೇ ಚಕ್ರ, ಮತ್ತದೇ ಪ್ರಶ್ನೆಗಳ ವ್ಯೂಹ ಶಿಕ್ಷಕರನ್ನು ನಿದ್ರೆಗೆಡಿಸಿತು.  ಕಲಿಕಾ ಹಳಿಯ ಮೇಲೆ ಸಾಗುತ್ತಿದ್ದ ವಿದ್ಯಾರ್ಥಿಗಳ ರೈಲು ಮತ್ತೊಮ್ಮೆ ಹಳಿ ತಪ್ಪುವ ಎಲ್ಲ ಲಕ್ಷಣಗಳು ಗೋಚರಿಸಿದವು.
ಆದರೆ, ಆದರೆ, ಕರೋನಾ......... ಈ ಬಾರಿ ನಾವು ಹೆದರಲಾರೆವು; ನೀನೇ ಕಲಿಸಿಕೊಟ್ಟಿರುವ ಪಾಠ ನಮ್ಮೊಂದಿಗಿದೆ; ಇನ್ನು ನಿನ್ನ ಜೊತೆ ನಾವು ಬದುಕಲೇಬೇಕಲ್ಲವೇ? ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಿನ್ನನ್ನು ಹೆದರಿಸಲೇಬೇಕಲ್ಲವೇ? ಲಸಿಕೆ ಹಾಕಿಸಿಕೊಂಡು ನಿನ್ನನ್ನು ಹಿಮ್ಮೆಟ್ಟಿಸಲೇಬೇಕಲ್ಲವೇ? ಅನುಭವವೇ ನಮ್ಮ ನಿಜವಾದ ಗುರುವಲ್ಲವೇ? ಬರೋಬ್ಬರಿ  ಒಂದು ವರ್ಷದ ಅನುಭವ ನಮ್ಮ ಕೈಯಲ್ಲಿದೆ; ಇನ್ನು ನಮ್ಮ ಪ್ರಯತ್ನವನ್ನು ಮಾಡದೇ ಇರಲಾರೆವು;  ಭವ್ಯ ಭಾರತದ ನಿರ್ಮಾತೃಗಳಾದ ನಮ್ಮ ಮಕ್ಕಳನ್ನು ಹಾಗೇ ಕೂರಿಸಲಾರೆವು; ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸಲಾರೆವು. ಕಳೆದ ಸಾಲಿನ ಪ್ರಯತ್ನಗಳನ್ನೆಲ್ಲ ಮತ್ತೆ ಮಾಡುವೆವು; ಮೊದಲಿಗಿಂತ ಹೆಚ್ಚು ಆತ್ಮಸ್ಥೈರ್ಯದೊಂದಿಗೆ, ಮೊದಲಿಗಿಂತ ಹೆಚ್ಚು ಉತ್ಸಾಹದೊಂದಿಗೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ.....ಮರಳಿ ಯತ್ನವ ಮಾಡು ಎಂಬುದನ್ನು ಕೇವಲ ಪಠ್ಯದಲ್ಲಿ ಮಾತ್ರವಲ್ಲ........ ಈಗಲೂ....ನಮ್ಮ ನಿಜಜೀವನದಲ್ಲೂ ಮಾಡಿಯೇ ತೀರುವೆವು.....

 

ಶುಕ್ರವಾರ, ಏಪ್ರಿಲ್ 2, 2021

ಗೂಗಲ್‌ ಮೀಟ್‌

 ಗೂಗಲ್‌ ಮೀಟ್‌

ಕರೋನ ಪ್ರಾರಂಭವಾಗಿ ನೋಡನೋಡುತ್ತಲೇ ೧ ವರ್ಷ ಕಳೆದೇಹೋಯಿತು. ೨೦೨೧ ಬರಲಿ ಈ ಕಷ್ಟಗಳೆಲ್ಲ ಕಳೆದುಹೋಗುತ್ತವೆ ಎಂಬ ಆಶಾಭಾವನೆಯಿಂದ ಕಾದಿದ್ದೇ ಬಂತು, ಈಗ ಎರಡನೇ ಅಲೆ. ಕರೋನ ಸೃಷ್ಟಿಸಿದ ಅವಾಂತರಗಳು ಅನೇಕ; ಅದು ಬೀರಿದ ದುಷ್ಟರಿಣಾಮಗಳು ಅನೇಕಾನೇಕ; ಕರೋನಾ ಅಲೆಗೆ ಸಿಲುಕಿದ ಹಲವಾರು ಕ್ಷೇತ್ರಗಳಲ್ಲಿ ಶೈಕ್ಷಣಿಕ ಕ್ಷೇತ್ರವೂ ಒಂದು; ಪ್ರತಿದಿನ ಶಾಲೆಗೆ ಹೋಗಿ ತಮ್ಮ ಸ್ನೇಹಿತರೊಂದಿಗೆ ಬೆರೆತು, ಶಿಕ್ಷಕರೊಂದಿಗೆ ಚರ್ಚಿಸಿ, ಆಟ ಪಾಠಗಳನ್ನು ಕಲಿಯುತ್ತಾ, ಹಲವು ಸಾಮಾಜಿಕ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ಉತ್ತಮ ನಾಗರೀಕರಾಗಲು ದಿಟ್ಟ ಹೆಜ್ಜೆಯನ್ನಿಡುತ್ತಾ ಸಾಗುತ್ತಿದ್ದ ಎಳೆಯ ಕಂದಮ್ಮಗಳನ್ನು, ಹದಿಹರೆಯದ ಮಕ್ಕಳನ್ನು, ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ತರುಣ-ತರುಣಿಯರನ್ನು ಕರೋನ ಶಾಲೆ ಕಾಲೇಜುಗಳಿಂದ ದೂರ ಮಾಡಿಬಿಟ್ಟಿತು. 

ಇನ್ನು ಶಿಕ್ಷಕರ, ಉಪನ್ಯಾಸಕರ ಪಾಡಂತೂ ಹೇಳತೀರದು. ಆನ್‌ ಲೈನ್‌ ತರಗತಿಗಳಿಗೆ ಒಗ್ಗಿಕೊಳ್ಳುವಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಲೇಬೇಕಾಯಿತು. ನೇರವಾಗಿ ವಿದ್ಯಾರ್ಥಿಗಳ ಮುಖಗಳನ್ನು ನೋಡಿ ಪಾಠ ಮಾಡುತ್ತಾ ಅರ್ಥವಾಯಿತಾ ಮಕ್ಕಳೇ ಎಂದು ಕೇಳುತ್ತಾ ಎಲ್ಲಿ, ಯಾವ ಅಂಶ ಅರ್ಥವಾಗಲಿಲ್ಲವೆಂಬುದನ್ನು ನೇರವಾಗಿ ಕೇಳುತ್ತಾ ಅದನ್ನು ಅವರಿಗೆ ತಿಳಿಸಿ ಹೇಳಿಕೊಡುತ್ತಿದ್ದ ಪರಿಯನ್ನು, ಗೂಗಲ್‌ ಮೀಟ್‌ ಎಂಬ ಕ್ಲಾಸ್‌ ರೂಂ, ನುಂಗಿಬಿಟ್ಟಿತು.  ವೀಡಿಯೋ ಆಫ್‌ ಮಾಡಿ, ಮ್ಯೂಟ್‌ ಮಾಡಿ, ಯಾರಿಗಾದರೂ ಸಂದೇಹವಿದ್ದರೆ ಅನ್ ಮ್ಯೂಟ್‌ ಮಾಡಿ ಕೇಳಿ ಎಂಬ ಪದಗಳು ಪದೇ ಪದೇ ತರಗತಿಯಲ್ಲಿ ಕೇಳಿಬರಲು ಪ್ರಾರಂಭಿಸಿದವು. ‌೧ ರಿಂದ ೪ನೇ ತರಗತಿಯವರೆಗಿನ ಮಕ್ಕಳಿಗೆ ಆನ್‌ ಲೈನ್‌ ತರಗತಿಗಳನ್ನು ಮಾಡಲೇಬಾರದೆಂಬ ಕೂಗು ಕೇಳಿಬಂದವು. ಆದರೂ ಆ ಸಣ್ಣ ಮಕ್ಕಳು, ದೊಡ್ಡವರಿಗಿಂತ ಹೆಚ್ಚಾಗಿ ಗೂಗಲ್‌ ಮೀಟ್‌ ಡೌನ್‌ ಲೋಡ್‌ ಮಾಡುವುದು, ಮ್ಯೂಟ್‌ ಮಾಡಿಕೊಳ್ಳುವುದು, ಸಾಧ್ಯವಾದಲ್ಲಿ ಎಲ್ಲರನ್ನೂ ಮ್ಯೂಟ್‌ ಮಾಡುವುದು, ಇನ್ನೊಬ್ಬರು ಉತ್ತರಿಸುವಾಗ ತಾವೂ ಉತ್ತರಿಸುವುದು ಇದನ್ನು ಕಲಿತೇಬಿಟ್ಟರು. ಯಾವುದನ್ನು ಮಕ್ಕಳ ಕೈಗೆ ಕೊಡಬಾರದು ಎಂದು ಎಲ್ಲ ಶಿಕ್ಷಿತ ಸಮುದಾಯದವರು ಅಂದುಕೊಂಡಿದ್ದರೋ ಆ ಸಾಧನವಾದ ಮೊಬೈಲ್‌ ಅನ್ನು ಮಕ್ಕಳ ಕೈಗೆ ಕೊಡಲೇಬೇಕಾದ ಅನಿವಾರ್ಯತೆ ಬಂದೇ ಬಿಟ್ಟಿತು. ಮೊಬೈಲ್‌, ಲ್ಯಾಪ್‌ ಟಾಪ್‌ ಗಳನ್ನು ತೆರೆದು ಕೂರುವುದು ಮಕ್ಕಳ ನಿತ್ಯದ ಕಾಯಕವಾಗಿಬಿಟ್ಟಿತು. ನಗರ ಪ್ರದೇಶಗಳಲ್ಲಿ, ವಿದ್ಯಾವಂತ ಪೋಷಕರಿರುವಲ್ಲಿ ಮಕ್ಕಳಿಗೆ ಸರ್ವವಿಧವಾದ ಸೌಲಭ್ಯವೂ ದೊರೆಯಿತು. ಆದರೆ....

ಹಳ್ಳಿಗಳಲ್ಲಿರುವ ಮಕ್ಕಳ ಕಥೆ??? 

ಸ್ಮಾರ್ಟ್‌ ಫೋನ್‌ ಎಷ್ಟು ಜನರ ಬಳಿ ಇದೆ ಎಂಬ ಸರ್ವೇ ಆರಂಭವಾಯಿತು. ಸ್ಮಾರ್ಟ್‌ ಫೋನ್‌  ಇಲ್ಲದಿರುವವರ ಗೋಳು ಹೇಳತೀರದು. ಪೋಷಕರಿಗೆ ಫೋನ್‌ ಮಾಡಿ ನಿಮ್ಮ ಬಳಿ ಸ್ಮಾರ್ಟ್‌ ಫೋನ್‌ ಇದೆಯೇ ಎಂಬ ಪ್ರಶ್ನೆ ಕೇಳಿಬಿಟ್ಟರೆ ಸಾಕು.... ಅಯ್ಯೋ ಮೇಡಮ್ಮೋರೆ ನಮ್ಮ ಮನೆಯಲ್ಲಿ ಟಚ್‌ ಫೋನ್‌ ಇಲ್ಲ, ಈ ಸಲ ಹತ್ತಿಗೆ ಅಂತ ರೇಟ್‌ ಬಂದಿಲ್ಲ, ೧೦೦೦೦ ದುಡ್ಡು ಕೊಟ್ಟು ನಾನು ಸ್ಮಾರ್ಟ್‌ ಫೋನ್‌ ಹೇಗೆ ತೆಗೆಸಿಕೊಡಲಿ ಎಂದು ಒಬ್ಬರು ಹೇಳಿದರೆ, ಮೇಡಂ, ನಮ್ಮ ಮನೆಯಲ್ಲಿ ಸ್ಮಾರ್ಟ್‌ ಫೋನ್‌ ಇದೆ ಆದರೆ ಕರೆನ್ಸಿ ಇಲ್ಲ ಅಂತ ಇನ್ನೊಬ್ಬರು, ಮೇಡಂ ಸ್ವಲ್ಪ ನಮ್ಮ ಮಗಳಿಗೆ ಬುದ್ಧಿ ಹೇಳಿ, ಅದೇನೋ ಟಚ್‌ ಫೋನ್‌ ಬೇಕು ಅಂತ ಹಠ ಮಾಡ್ತಿದ್ದಾಳೆ, ಗೇಯ್ಕೊಂಡು ತಿನ್ನೋರು ನಾವು ಅಷ್ಟು ದುಡ್ಡು ಎಲ್ಲಿಂದ ತರಾಂವಾ? ಅನ್ನೋ ರಾಗ ಮತ್ತೊಬ್ಬರದು, ಮೇಡಂ ಸ್ಮಾರ್ಟ್‌ ಫೋನ್‌ ಇದೆ, ನನ್ನ ಮಗ ಯಾವಾಗಲೂ ಫೋನ್‌ ನೋಡ್ತಾ ಇರ್ತಾನೆ ಅದೇನ್‌ ಓದ್ತಾ ಇದ್ದಾನೋ ಇನ್ನೇನು ನೋಡ್ತಾನೋ ಗೊತ್ತಿಲ್ಲ ಅಂತ ಮಗದೊಬ್ಬರು, ನನ್ನ ಮಗಳು ದೊಡ್ಡವಳಾಗಿದ್ದಾಳೆ ಮೇಡಂ, ಇನ್ನು ೬ ತಿಂಗಳು ಅವಳಿಗೆ ಯಾವ ಮೊಬೈಲೂ ಕೊಡಲ್ಲ; ಈ ರೋಗ ಇರೋವಾಗ ಸ್ಕೂಲಿಗೂ ಕಳ್ಸಲ್ಲ ಅಂತ ಮತ್ತೊಬ್ಬ ಮಹನೀಯರು, ಮೇಡಂ, ಎಷ್ಟು ಫೋನ್‌ ತಗೋಬೇಕು ಹೇಳಿ, ಇಬ್ರು ಮಕ್ಕಳು ೯ ಮತ್ತು ೧೦ನೇ ತರಗತಿಯಲ್ಲಿದ್ದಾರೆ, ಇಬ್ಬರೂ ಇರುವ ಒಂದು ಮೊಬೈಲಿಗೆ ಕಚ್ಚಾಡುತ್ತಾರೆ, ನೀವೇ ಹೇಳಿ ನಾನೇನ್ಮಾಡ್ಲಿ ಅಂತ ಕೈ ಚೆಲ್ಲುವ ತಾಯಿ; ಮೇಡಂ, ಫೋನ್‌ ನಂಬರ್‌ ಕಿರಣಂದೇ ಆದ್ರೆ ನಾನು ಫೋನ್‌ ತಗೊಂಡು ಕೆಲ್ಸದ ಮೇಲೆ ಬೇರೆ ಊರಿಗೆ ಬಂದಿದ್ದೀನೆ; ಮತ್ತೆ ಹಳ್ಳಿಗೆ ಹೋಗೋದು ಒಂದು ತಿಂಗಳಾಗುತ್ತೆ ಅನ್ನೋ ಅಸಹಾಯಕತೆ ಒಬ್ಬ ಪೋಷಕರದ್ದು. ವಾಟ್ಸ್‌ ಅಪ್‌ ಗ್ರೂಪಿಗೆ ಸೇರಿಸ್ತಾರಂತೆ, ಗೂಗಲ್‌ ಮೀಟ್‌ ನಲ್ಲಿ ಕ್ಲಾಸ್‌ ಮಾಡ್ತಾರಂತೆ ಅಂತ ಪಕ್ಕದ ಮನೆಯವರದ್ದು, ಫ್ರೆಂಡಿಂದು, ಅತ್ತೇದು, ಮಾವಂದು ಹೀಗೆ ಯಾರದ್ದಾದರೂ ಒಂದು ನಂಬರ್ ಕೊಟ್ರೆ ಸೈ ಆದ್ರೆ ನಂ ಹತ್ರನೂ ಸ್ಮಾರ್ಟ್‌ ಫೋನ್‌ ಇದೆ ಅಂತ ತೋರಿಸ್ಕೋಬೇಕು ಅಂತ ಮಕ್ಕಳು ನಂಬರ್‌ ಕೊಟ್ಟಿದ್ದೇ ಕೊಟ್ಟಿದ್ದು; ಸ್ಮಾರ್ಟ್‌ ಫೋನ್‌ ಇಲ್ಲದವರು ಸುಮ್ಮನೇ ಕೂತಿದ್ದೇ ಕೂತಿದ್ದು...

ಈ ಎಲ್ಲಾ ಫೋನ್‌ ನಂಬರ್‌ಗಳಲ್ಲಿ ಅಸಲಿ ಯಾವ್ದು, ಯಾವ ನಂಬರ್‌ ನಂ ಸ್ಕೂಲ್‌ ಮಕ್ಕಳದ್ದು ಅಂತ ಕಂಡುಹಿಡಿಯೋ ಹೊತ್ತಿಗೆ  ಸಾಕು ಸಾಕಾಯ್ತು. ಇನ್ನು ಮೊಬೈಲ್‌ ಮೂಲಕ ಪಾಠ ಮಾಡೋದು ಅಂದ್ರೆ ಸುಮ್ನೆನಾ? ಅದಕ್ಕೆ ಸಾಕಷ್ಟು ತಯಾರಿ ಬೇಕು. ಎಲ್ಲಾ ಮಕ್ಕಳೂ ಗೂಗಲ್‌ ಮೀಟ್‌ ಇನ್ಸ್ಟಾಲ್‌ ಮಾಡಿಕೊಂಡಿದ್ದಾರಾ ಅಂತ ಪರೀಕ್ಷಿಸಬೇಕು. ಅಥವಾ ಇನ್ಯಾವುದಾದರೂ ಆಪ್‌ ಇದ್ರೆ, ಗೂಗಲ್‌ ಕ್ಲಾಸ್‌ ರೂಂ, ಮೈಕ್ರೋಸಾಫ್ಟ್‌ ಟೀಮ್ಸ್‌, ಝೂಮ್‌, ಹೀಗೆ ಯಾವ್ದು ಒಳ್ಳೇದು ಅಂತ ನೋಡಿ ಅದನ್ನು ಪ್ರತಿ ಫೋನ್‌ನಲ್ಲಿ ಇನ್ಸ್ಟಾಲ್‌ ಮಾಡಿಕೊಳ್ಳಲು ಹೇಳ್ಭೇಕು; ಅಲ್ಲದೆ ಸೂಕ್ತವಾಗಿ ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌ ತಯಾರಾಗ್ಬೇಕು; ಅಥವಾ ಕೈಯಲ್ಲಿ ಬರೆದು ತೋರಿಸೋದಾದ್ರೆ  ಒಳ್ಳೆ ಬೋರ್ಡ್‌ ಇರ್ಬೇಕು, ಕ್ಯಾಮರಾ ಅಡ್ಜಸ್ಟ್‌ ಮಾಡ್ಬೇಕು; ಸ್ಕ್ರೀನ್‌ ಮೇಲೆ ಕಾಣೋದ್ರಿಂದ ಮುಖ ತುಂಬ ಹತ್ರ ಬರ್ದೇ ಇರೋ ಥರ ನೋಡ್ಕೋಬೇಕು; ಮೊದಲು ಈ ಆಪ್ಗಳ ಶಿಷ್ಟಾಚಾರವನ್ನು ಕರಗತ ಮಾಡ್ಕೋಬೇಕು; ಒಂದೇ ಎರಡೇ? ಎಷ್ಟೇ ಆದ್ರೂ ಮಕ್ಕಳ ಮುಂದೆ ನಮಗೆ ಹೆಚ್ಚು ತಿಳಿದಿದೆ ಅಂತ ತೋರಿಸಿಕೊಳ್ಳೊಕಾದ್ರೂ ನಾವು ಅಪ್ ಡೇಟ್‌ ಆಗ್ಲೇಬೇಕು; ಇದು ಶಿಕ್ಷಕರಿಗೂ ಒಂದು ಸವಾಲು; ಅಲ್ದೇ ಮಕ್ಕಳಿಗೂ, ಮಕ್ಕಳ ಪೋಷಕರಿಗೂ....

ಇಷ್ಟೆಲ್ಲ ಆಗಿ ನಾನೂ ಒಂದು ಗೂಗಲ್‌ ಕ್ಲಾಸ್‌ ಮಾಡೇ ಬಿಡೋಣ ಅಂತ ತೀರ್ಮಾನ ಮಾಡಿ, ಮೊದಲು ಮಕ್ಕಳ ವಾಟ್ಸ್‌ ಅಪ್‌ ಗ್ರೂಪಿಗೆ ಲಿಂಕ್‌ ಕಳಿಸಬೇಕು ಅನ್ಕೊಂಡು, ಲಿಂಕ್‌ ಜನರೇಟ್‌ ಮಾಡಿ ಕಳಿಸಿದ್ದಾಯ್ತು. ನಾವೆಲ್ಲ ಆನ್‌ ಲೈನ್‌ ಟ್ರೈನಿಂಗ್‌ ಅಟೆಂಡ್‌ ಮಾಡೋವಾಗ ಚಾಚೂ ತಪ್ಪದೆ ಲಿಂಕನ್ನು ಸರಿಯಾದ ಸಮಯಕ್ಕೆ ಓಪನ್‌ ಮಾಡಿ ಕಾಯ್ತಾ ಇರ್ತಿದ್ವಿ. ಲೇಟ್‌ ಆದ್ರೆ  ನಮ್ಮನ್ನು ಅಡ್ಮಿಟ್‌ ಮಾಡ್ಕೊಳ್ತಾರೋ ಇಲ್ವೋ ಅನ್ನೋ ಭಯ ಬೇರೆ. ನಮ್ಮ ೧೦ನೇ ತರಗತಿಯ ಮಕ್ಕಳೂ ಹಾಗೇ ಇರ್ತಾರೆ ಅಂತ, ನಾನೇನೋ ನಿಗದಿತ ಸಮಯಕ್ಕೆ, ಲಿಂಕ್‌ ಓಪನ್‌ ಮಾಡಿ, ಕೋಣೆಯಲ್ಲಿ ಒಂದೂ ಶಬ್ದವೂ ಇರದಂತೆ, ಸಾಕಷ್ಟು ಬೆಳಕು ಇರುವಂತೆ ಎಲ್ಲಾ ತಯಾರಿ ಮಾಡಿ ಕಾದಿದ್ದೇ ಬಂತು; ಕೇವಲ ಇಬ್ಬರೇ ಮಕ್ಕಳು ಮೊದಲ ದಿನ ಮೀಟಿಂಗ್‌  ಜಾಯಿನ್‌ ಆದ್ರು. ಪ್ರಥಮ ಚುಂಬನೇ ದಂತಭಗ್ನಂ ಎನ್ನುವಂತೆ ಸಾಕಷ್ಟು ನಿರಾಸೆ ಆಯ್ತು. ಮೀಟಿಂಗ್‌ ಅಟೆಂಡ್‌ ಮಾಡಿದ ಮಕ್ಕಳಿಗಾದ್ರೂ ಉಪಯೋಗವಾಗ್ಲಿ ಅಂತ ಕೆಲವು ಪ್ರಶ್ನೆಗಳನ್ನು ಕೇಳಿ ಮೊದಲ ದಿನದ ಗೂಗಲ್‌ ಕ್ಲಾಸ್‌ ಮುಕ್ತಾಯ ಮಾಡಿದ್ದಾಯ್ತು. ಇದೇ ಗುಂಗಿನಲ್ಲಿ ಪ್ರತಿಯೊಬ್ಬರಿಗೂ ಫೋನ್‌ ಮಾಡಿ ಯಾಕೆ ಕ್ಲಾಸ್‌ ಅಟೆಂಡ್‌ ಮಾಡ್ಲಿಲ್ಲ ಅಂತ ಕೇಳ್ದಾಗ, ಅಯ್ಯೋ ಮೇಡಂ, ಇಂಟರ್ನೆಟ್‌ ಕನೆಕ್ಷನ್‌ ಇರ್ಲಿಲ್ಲ; ನಮ್ಮಪ್ಪ ಮೊಬೈಲ್‌ ತಗೊಂಡು ಹೋಗಿದ್ರು; ಮನೇಲಿ ನೀರು ಬರ್ತಿತ್ತು ಹಿಡೀತಾ ಇದ್ದೆ; ಹೊಲದಲ್ಲಿ ಯಾರೂ ಆಳು ಇರ್ಲಿಲ್ಲ ಅದಕ್ಕೇ ಹೊಲಕ್ಕೆ ಹೋಗು ಅಂತ ಅಪ್ಪ ಹೇಳಿದ್ರು, ನಾನು ಹೊಲಕ್ಕೆ ಹೋಗಿದ್ದೆ, ನಾನು ಊರಲ್ಲಿ ಇರ್ಲಿಲ್ಲ,  ಮೇಡಂ, ನನಗೆ ಲಿಂಕ್‌ ಓಪನ್‌ ಆಗ್ಲೇ ಇಲ್ಲ ಹೀ‌ಗೆ ನೂರಾರು ಕಾರಣಗಳು ಕೇಳಿಬಂದವು.

ನಾನು ತಪ್ಪಿದ್ದೆಲ್ಲಿ? ಎಷ್ಟೋ ಜನ ಒಂದೇ ವೆಬಿನಾರ್‌ ನಲ್ಲಿ ನೂರಾರು ಜನರನ್ನ ತಲ್ಪಲ್ವಾ? ಎಷ್ಟೋ ವರ್ಕ್‌ ಶಾಪ್‌ ಗಳು ಆನ್‌ ಲೈನ್‌ ನಲ್ಲಿ ನಡೀತಿಲ್ವಾ?  ಎಷ್ಟೋ ಸರ್ಟಿಫಿಕೇಟ್‌ ಕೋರ್ಸ್ಗಳು ಇಂಟರ್ನೆಟ್‌ ನಲ್ಲಿ ಆಗ್ತಾ ಇಲ್ವಾ? ನಗರ ಪ್ರದೇಶದ ಸುಪ್ರಸಿದ್ಧ ಶಾಲೆಗಳು ಆನ್‌ ಲೈನ್‌ ತರಗತಿಗಳನ್ನು ನಡೆಸ್ತಾ ಇಲ್ವಾ? ಯಾಕೆ? ನಾನ್ಯಾಕೆ ಪ್ರಯತ್ನಿಸಬಾರ್ದು?  ಇದು ಸರಿಯಾಗ್ಬೇಕು ಅಂದ್ರೆ ನಾನು ಏನ್ಮಾಡ್ಬೇಕು? ಅನ್ನೋ ಹತ್ತಾರು ಪ್ರಶ್ನೆಗಳು ಮನದಲ್ಲಿ ಮೂಡಿದವು.  ಹೇಗಾದ್ರೂ ನಾನು ಗೂಗಲ್‌ ಮೀಟ್‌ ನಲ್ಲಿ ಕ್ಲಾಸ್‌ ಮಾಡ್ಲೇಬೇಕು ಅನ್ನೋ ಸಾತ್ವಿಕ ಹಠ ಮೂಡಿತು.

ಇರುವ ೪೦ ಮಕ್ಕಳನ್ನು ೨  ವಾಟ್ಸ್‌ ಅಪ್‌ ಗುಂಪುಗಳನ್ನಾಗಿ ಮಾಡಿದೆ; ವಾರಕ್ಕೆ ಎರಡು ಬಾರಿ ಎರಡೂ ಗುಂಪಿಗೂ ಕ್ಲಾಸ್‌ ತೆಗೆದುಕೊಳ್ಳಲೇಬೇಕೆಂಬ ಸಂಕಲ್ಪ ಮಾಡಿದೆ. ಮಕ್ಕಳ ಪೋಷಕರನ್ನು ಫೋನ್‌ ಮೂಲಕ ಸಂಪರ್ಕಿಸಿ ಇಂತಹ ದಿನ ಆನ್‌ ಲೈನ್‌ ಕ್ಲಾಸ್‌ ಇರುತ್ತದೆ. ನೀವು ನಿಮ್ಮ ಮಕ್ಕಳಿಗೆ ಫೋನ್‌ ಕೊಡಿ ಎಂದೆ; ಅವರಿಗೆ ಸೂಕ್ತವಾದ ಸಮಯ ಯಾವುದು ಎಂದು ಕೇಳಿದೆ; ಎಲ್ಲರಿಗೂ ಗೂಗಲ್‌ ಮೀಟ್‌ ನಲ್ಲಿ ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ತಿಳಿಸಿದೆ; ಇಷ್ಟೆಲ್ಲ ಆದ ನಂತರ, ನಾಳೆ ಕ್ಲಾಸ್‌ ಇದೆ ಅಂದ್ರೆ, ಇವತ್ತೇ ಫೋನ್‌ ಮಾಡಿ, ಲಿಂಕ್‌ ಕಳಿಸ್ತೀನಿ, ನಾಳೆ ಇಷ್ಟು ಹೊತ್ತಿಗೆ ಕ್ಲಾಸ್‌ ಅಂತ ತಿಳಿಸಿದೆ, ಅಲ್ಲದೇ ವಾಟ್ಸ್‌ ಅಪ್‌ ಗ್ರೂಪಿನಲ್ಲಿ ಲಿಂಕ್‌ ಕಳಿಸಿದೆ. ಇಷ್ಟೆಲ್ಲ ಪೂರ್ವ ತಯಾರಿ ಫಲ ಕೊಡುತ್ತದೋ ಇಲ್ಲವೋ? ಮಕ್ಕಳು ಕ್ಲಾಸಿಗೆ ಬರುತ್ತಾರೋ ಇಲ್ಲವೋ ಎಂಬ ಆತಂಕ ಇದ್ದೇ ಇತ್ತು. ತರಗತಿ ಇದ್ದ ದಿನ ಕೇವಲ ಅರ್ಧ ಗಂಟೆ ಕ್ಲಾಸಿಗೆ ಪ್ಲಾನ್‌ ಮಾಡಿದೆ. ೧೦ ನಿಮಿಷ ಮೊದಲೇ ನಾನು ಜಾಯಿನ್‌ ಆಗಿ ಕಾಯುತ್ತಾ ಕುಳಿತೆ. ಮೊದಲು ಶರತ್‌, ನಂತರ ಕಿರಣ, ಆಮೇಲೆ ಮೋನಿಕ, ತದನಂತರ ಕಾವ್ಯ ಹೀಗೆ ೨೦ ಮಕ್ಕಳಿಗೆ ೧೬ ಮಕ್ಕಳು ಆ ದಿನ ಮೀಟಿಂಗ್ ಜಾಯಿನ್‌ ಆದರು. ಆಮೇಲೆ......

ನಮ್ಮ ಮಕ್ಕಳು ಕಿವಿಯಲ್ಲಿ ಇಯರ್‌ ಫೋನ್ ಹಾಕುವಷ್ಟು,, ಮೊಬೈಲ್‌ ಅನ್ನು ನಿಧಾನವಾಗಿ ತಮ್ಮ ಕೋಣೆಯಲ್ಲಿಟ್ಟು, ತಮ್ಮ ಅಪ್ಪ ಅವ್ವರಿಗೆ ಶ್‌ ಮಾತನಾಡಬೇಡಿ, ಮೇಡಂ ಕ್ಲಾಸ್‌ ಇದೆ ಎಂದು ಹೇಳುವಷ್ಟು, ಮೊಬೈಲ್‌ ಸ್ಕ್ರೀನ್‌ ನೋಡುತ್ತಾ ನಿಧಾನವಾಗಿ ಟೆಕ್ಷ್ಟ್‌ ಬುಕ್‌, ನೋಟ್ಸ್‌ ತೆರೆಯುವಷ್ಟು, ಯಾರಾದರೂ ಮಧ್ಯದಲ್ಲಿ ಅನ್‌ ಮ್ಯೂಟ್‌ ಮಾಡಿದರೆ, ಏಯ್‌ ಮ್ಯೂಟ್‌ ಮಾಡಿ ಎಂದು ಹೇಳುವಷ್ಟು, ಯಾರ ಹೆಸರನ್ನು ಕರೆಯುತ್ತೇನೋ ಅವರು ಮಾತ್ರ ಅನ್‌ ಮ್ಯೂಟ್‌ ಮಾಡಿ ಉತ್ತರಿಸುವಷ್ಟು, ಮತ್ತೆ ಏನಾದರೂ ಅನುಮಾನಗಳಿದ್ದರೆ, ಚಾಟ್‌ ಬಾಕ್ಸ್ನಲ್ಲಿ ಬರೆಯುವಷ್ಟು, ಗೂಗಲ್‌ ಫಾರಂ ಗಳ ಮೂಲಕ ಕ್ವಿಜ್‌ ಅಟೆಂಡ್‌ ಮಾಡುವಷ್ಟು ಹೀಗೆ ತರಗತಿಗಳು ಆಗುತ್ತಾ ಆಗುತ್ತಾ ಪಳಗಿಬಿಟ್ಟರು ನಮ್ಮ ಹಳ್ಳಿ ಹೈಕಳು. ಹಳ್ಳಿ ಮಕ್ಕಳು ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿದರು; ನನ್ನ ಸಾತ್ವಿಕ ಹಠ ಗೆದ್ದಿತು.  ಹಳ್ಳಿ ಮಕ್ಕಳು, ಸಿಟಿ ಮಕ್ಕಳು ಎಂದು ವರ್ಗೀಕರಣ ಮಾಡುವುದೇ ತಪ್ಪು ಎನಿಸಿತು. ಯಾರಿಗೇ ಆಗಲಿ ಅವಕಾಶಗಳನ್ನು ಕಲ್ಪಿಸಿಕೊಡುವುದು ಮುಖ್ಯ ಎಂದು  ಮತ್ತೊಮ್ಮೆ ನನ್ನ ಮನ ನುಡಿಯಿತು. 

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...