ಸೋಮವಾರ, ಮೇ 22, 2023

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿಕೊಳ್ಳುತ್ತಲೇ ಓಡಿ ಬಂದಳು ಚಂದ್ರಿಕ. ಅಮ್ಮಾ ಬಿ.ಕಾಂ. ರಿಸಲ್ಟ್‌ ಬಂತು, ನಾನೇ ಕಾಲೇಜಿಗೆ ಫಸ್ಟ್‌ ಅಮ್ಮಾ ಅಂತ ಪ್ರಜ್ವಲ್‌ ಮೊದಲು ಅಮ್ಮನ ಕಾಲಿಗೆರಗಿದ. ಚಂದ್ರಿಕಳಿಗೆ ಮನಸ್ಸು-ಹೃದಯ ಎರಡೂ ತುಂಬಿಬಂದು ಕಣ್ಣುಗಳಲ್ಲಿ ಅಶ್ರುಧಾರೆಯಾಗಿ ಹರಿಯಿತು. ಏಳು ಕಂದಾ! ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ಎಂತಹ ಖುಷಿಯ ವಿಚಾರ ಹೇಳಿದಯಪ್ಪ ಎಂದು ಮಗನನ್ನು ತಬ್ಬಿಕೊಂಡಳು.  ಒಂದೆರೆಡು ಕ್ಷಣಗಳಲ್ಲಿ ಆಕೆಗೆ ತನ್ನ ಮಕ್ಕಳನ್ನು ಓದಿಸಲು ಪಟ್ಟ ಕಷ್ಟದ ನೆನಪಾಯಿತು. ಗಂಡ ಸರ್ಕಾರಿ ಶಾಲೆಯಲ್ಲಿ ಮೇಷ್ಟ್ರಾಗಿದ್ದರೂ, ನಾಲ್ಕು ಜನರಿದ್ದ ಮನೆಯನ್ನು ನಿಭಾಯಿಸುವುದು ಕಷ್ಟವೇ ಇತ್ತು. ಅವಳಿಗೆ ಪದೇ ಪದೇ ಕಾಡುವ ಬೆನ್ನು ನೋವು, ಇಬ್ಬರು ಗಂಡುಮಕ್ಕಳ ಆರೋಗ್ಯವೂ ಅಷ್ಟಕ್ಕಷ್ಟೆ,., ಇದರ ನಡುವೆ ಮನೆಗೆ ಬಂದು ಹೋಗುವ ನೆಂಟರಿಷ್ಬರು ಬೇರೆ. ಒಂದು ಸಂಬಳದಲ್ಲಿ ಇಷ್ಟೆಲ್ಲವೂ ನಡೆಯಬೇಕು.  ಆದರೆ, ಮಕ್ಕಳು ಬುದ್ಧಿವಂತರು; ಚೆನ್ನಾಗಿ ಓದಿದರು. ಪಿಯುಸಿಯಲ್ಲಿ, ಪ್ರಜ್ವಲ್‌  80% ತೆಗೆದುಕೊಂಡು ಮುಂದೆ ಮೈಸೂರಿಗೆ ಹೋಗಿ ಓದುತ್ತೇನೆ ಎಂದು ಒಂದೇ ಸಮ ಗಲಾಟೆ ಮಾಡಿದ. ಇಲ್ಲೇ ಸರಗೂರಿನಲ್ಲಿ ಪದವಿ ಕಾಲೇಜಿದೆ ಅಲ್ಲೇ ಓದಿದರಾಯಿತು, ಮೈಸೂರೇಕೆ? ಸುಮ್ಮನೇ ದುಡ್ಡು ಖರ್ಚು. ಅಂತ ರಾಮಯ್ಯ ಹೇಳುತ್ತಿದ್ದಂತೆ ಉರಿದು ಬಿದ್ದಿದ್ದಳು ಚಂದ್ರಿಕ. ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಪಾಸಾಗಿದ್ದಾನೆ, ಮೈಸೂರಿಗೆ ಹೋದರೆ, ಸ್ವಲ್ಪ ಲೋಕಜ್ಞಾನವೂ ಬೆಳೆಯುತ್ತೆ. ಹಾಸ್ಟೆಲ್‌ ಹೆಂಗೂ ಫ್ರೀ ಆಗಿ ಸಿಗುತ್ತೆ. ಹೋಗಲಿ ಬಿಡಿ. ಅವನಿಗೆ ಇನ್ನೇನು ಖರ್ಚಿರುತ್ತೆ? ಪುಸ್ತಕ, ಬಟ್ಟೆ, ಕಾಲೇಜು ಫೀಸು ಕಟ್ಟಿದರಾಯಿತು ಅಂತ ಸ್ವಲ್ಪ ಜೋರಾಗಿ ಹೇಳಿದ ಮೇಲೆ ರಾಮಯ್ಯನೂ ತಲೆದೂಗಿದ. ಮಗನನ್ನು ಮೈಸೂರಿನ ಕಾಲೇಜಿಗೆ ಸೇರಿಸಿ, ಹಾಸ್ಟೆಲ್‌ ವ್ಯವಸ್ಥೆ ಮಾಡಿದ್ದಾಯ್ತು. 3 ವರ್ಷ ಕಳೆದದ್ದೇ ತಿಳಿಯಲಿಲ್ಲ. ಈಗ ಅಮ್ಮಾ ನಾನು ಕಾಲೇಜಿಗೇ ಟಾಪರ್‌ ಎಂದು ಓಡಿಬಂದಿದ್ದಾನೆ. ಎಲ್ಲ ನೆನಪುಗಳೂ ಒಂದರ ಹಿಂದೆ ಒಂದು ತೂರಿಕೊಂಡು ಬಂದು, ಚಂದ್ರಿಕಾಳ ಕಣ್ಣಾಲಿಗಳು ಇನ್ನಷ್ಟು ತುಂಬಿಬಂದವು. ಅಮ್ಮಾ, ಯಾಕೆ ಕಣ್ಣಲ್ಲಿ ನೀರು?  ಇನ್ನೊಂದೆರೆಡು ವರ್ಷ ನನ್ನನ್ನು ಓದಿಸಿಬಿಡಮ್ಮ ಆಮೇಲೆ ಒಂದು ಒಳ್ಳೆಯ ಕೆಲಸ ಹಿಡಿದು, ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಂತೆ, ಅಪ್ಪ ಒಳಗೆ ಬರುವುದು ಕಂಡಿತು.

ಏನು ಪ್ರಜ್ವಲ್‌? ಏನು ವಿಷಯ? ಎಂದು ಅಪ್ಪ ಕೇಳುತ್ತಿದ್ದಂತೆ, ಪ್ರಜ್ವಲ್‌ ತನ್ನ ರಿಸಲ್ಟ್‌ ವಿಚಾರವನ್ನು ಹೇಳಿದ. ಸಧ್ಯ! ನಿನ್ನ ಗ್ರಾಜುಯೇಷನ್‌ ಮುಗೀತಲ್ಲ; ಇನ್ನು ಬೇಗ ಕೆಲಸಕ್ಕೆ ಸೇರಿಕೊಂಡುಬಿಡು. ನನಗೂ ಸ್ವಲ್ಪ ಸಹಾಯವಾಗುತ್ತೆ ಅಂತ ಅಪ್ಪ ಹೇಳುತ್ತಿದ್ದಂತೆ, ಪ್ರಜ್ವಲ್‌, ಅಪ್ಪಾ ನಾನೀಗಲೇ ಕೆಲಸಕ್ಕೆ ಸೇರೋದಿಲ್ಲ, ಇನ್ನೂ ಎರಡು ವರ್ಷ ಓದಬೇಕು ಅಂತಿದ್ದೀನಿ ಅಂತ ತನ್ನ ಮನಸ್ಸಿನ ಮಾತನ್ನು ಹೇಳಿದ. ಏನೂ, ಇಷ್ಟು ವರ್ಷ ಓದಿಸಿರೋದು ಸಾಲ್ದಾ? ಇನ್ನೂ ನಾನು ಓದಿಸಬೇಕಾ? ಯಾವ ಪುರುಷಾರ್ಥಕ್ಕೆ ನಿನ್ನನ್ನು ಓದಿಸಲು ನಾನು ಇನ್ನೂ ಖರ್ಚು ಮಾಡಬೇಕಪ್ಪಾ? ಕಾಲೇಜಿಗೇ ಮೊದಲು ಅಂತೀಯ, ಯಾವ್ದಾದ್ರೂ ಕೆಲಸ ಸಿಕ್ಕೇ ಸಿಗುತ್ತೆ. ನೀನು ಕೆಲ್ಸಕ್ಕೇ ಪ್ರಯತ್ನ ಪಡು. ನನ್ನ ಕೈಲಿ ಓದ್ಸಕ್ಕೆ ಆಗಲ್ಲ ಅಂತ ರಾಮಯ್ಯ ಹೇಳ್ತಿದ್ದ ಹಾಗೇ, ಚಂದ್ರಿಕಾಳ ಸಿಟ್ಟು ನೆತ್ತಿಗೇರಿತ್ತು. ಇವತ್ತಿನ ಕಾಲದಲ್ಲಿ ಎಷ್ಟು ಓದಿದರೂ ಕಡಿಮೆಯೇ! ಬರೀ ಪದವಿಗೆ ಸಿಗುವ ಕೆಲಸವೂ ಅಷ್ಟಕ್ಕಷ್ಟೇ. ಇನ್ನೊಂದೆರೆಡು ವರ್ಷ ಓದಲಿ ಬಿಡಿ ಅಂತ ಮಗನ ಪರವಾಗಿ ಮಾತನಾಡಿದಳು. ಮಗ ಕೆಲಸಕ್ಕೆ ಸೇರಿಕೊಂಡರೆ ತನ್ನ ಜವಾಬ್ದಾರಿಗಳು ಕಡಿಮೆ ಆಗುತ್ತವೆ; ಹೇಗೂ ಮುಂದಿನ ವರ್ಷ ರಿಟೈರ್‌ ಆಗ್ತಾ ಇದ್ದೀನಿ, ಇನ್ನೂ ಓದಿಸಲು ದುಡ್ಡು ಖರ್ಚು ಮಾಡಬೇಕೆಂದರೆ?? ಎರಡನೆಯ ಮಗನೂ ಈಗ ಪಿಯುಸಿ ಎರಡನೇ ವರ್ಷದಲ್ಲಿದ್ದಾನೆ; ಅವನನ್ನೂ ನೋಡಬೇಕಲ್ಲ! ಎಂಬ ಆಲೋಚನೆಗಳು ರಾಮಯ್ಯನ ಮನಸ್ಸಿನಲ್ಲಿ. ಅಷ್ಟು ಹೊತ್ತಿಗೆ ಪ್ರಜ್ವಲ್‌, ಅಪ್ಪಾ ನಾನು ಎಂ.ಬಿ.ಎ. ಮಾಡ್ತೀನಿ ಅಂದಾಗ ರಾಮಯ್ಯ ಹೌಹಾರಿದ. ಏನೋ ಎಂ.ಕಾಂ. ಮಾಡಬಹುದು, ಸ್ವಲ್ಪ ಖರ್ಚು ನೋಡಿಕೊಂಡರಾಯಿತು  ಅಂತ ಎಣಿಸಿದ್ದ ರಾಮಯ್ಯನಿಗೆ ಎಂ.ಬಿ.ಎ ಅಂತಿದ್ದ ಹಾಗೇ ಸ್ವಲ್ಪ ಸಿಟ್ಟು ಹೆಚ್ಚಾಗೇ ಬಂತು. ಆ ಸಿಟ್ಟಿನ ಮಾತುಗಳು ಹೊರಬರುವ ಮುನ್ನವೇ ಚಂದ್ರಿಕಾ, ನೀವು ದುಡ್ಡು ಖರ್ಚಾಗುತ್ತೆ ಅಂತ ಅವನಿಗೆ ಓದೋದು ಬೇಡ ಅಂದ್ರೆ ನಾನು ಸುಮ್ನಿರಲ್ಲ ಎಂದು ಗುಡುಗಿದಳು. ರಾಮಯ್ಯ ಬೇರೆ ದಾರಿಯಿಲ್ಲದೇ ಒಪ್ಪಲೇಬೇಕಾಯಿತು.

ಮುಂದೆ ನಡೆದದ್ದೆಲ್ಲವೂ ಕನಸಿನಂತೆ. ಪ್ರಜ್ವಲ್‌ ಎಂಬಿಎ ಮಾಡಿಯೂ ಆಯಿತು. ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸವೂ ಸಿಕ್ಕಾಯಿತು. ಚಂದ್ರಿಕಾಳ ಆನಂದಕ್ಕೆ ಪಾರವೇ ಇರಲಿಲ್ಲ. ಮೂರು ವರ್ಷಗಳಲ್ಲಿ ಪ್ರಜ್ವಲ್‌ಗೆ ಪ್ರಮೋಷನ್‌ ಸಹ ದೊರೆಯಿತು. ಈಗಿನ್ನು ಅವನಿಗಾಗಿ ಹುಡುಗಿಯ ಹುಡುಕಾಟ. ಚಂದ್ರಿಕಾಳಿಗೆ ಇದೇ ಯೋಚನೆ. ಪ್ರಜ್ವಲ್‌ ತನ್ನ ತಂದೆಯಂತೆ ಸ್ವಲ್ಪ ಕಪ್ಪು. ಆದರೂ ನೋಡಲು ಲಕ್ಷಣವಾಗಿದ್ದ. ಹುಡುಗಿಯರಿಗೆ ಒಳ್ಳೆಯ ಹುಡುಗರು ಸಿಗಬೇಕು ಎನ್ನುವುದು ಹಿಂದಿನ ಕಾಲದ ಮಾತಾಯಿತು. ಈಗ ಹುಡುಗರಿಗೆ ಒಳ್ಳೆಯ ಹುಡುಗಿ ಸಿಗಬೇಕು. ತನ್ನ ಮಗನೋ ಡಬಲ್‌ ಗ್ರಾಜುಯೇಟ್.‌ ಇನ್ನು ಬರುವ ಹುಡುಗಿಯೂ ಓದಿರುವವಳೇ ಆಗಿರಬೇಕು; ಈಗಿನ ಕಾಲದ ಹುಡುಗಿಯರು, ಓದಿನಲ್ಲೇನೋ ಮುಂದಿರುತ್ತಾರೆ; ಒಳ್ಳೆಯ ಕೆಲಸವೂ ಇರುತ್ತದೆ. ಮನೆ ನೋಡಿಕೊಂಡು ಸಂಸಾರ ಮಾಡುವುದು ಬರುತ್ತೋ ಇಲ್ಲವೋ? ಅಡುಗೆ ಕಲಿತಿರುತ್ತಾರೋ ಇಲ್ಲವೋ?, ಮನೆಗೆಲಸ ಮಾಡುವುದರಲ್ಲಿ ಪಳಗಿರುತ್ತಾರೋ ಇಲ್ಲವೋ? ಇವನಿರುವುದು ಬೆಂಗಳೂರಿನಲ್ಲಿ. ಇಬ್ಬರೇ ಹೇಗೆ ಮನೆ ನಿರ್ವಹಿಸುತ್ತಾರೋ ಎಂಬಂತಹ ಯೋಚನೆಗಳು ಚಂದ್ರಿಕಾಳ ಮನದಲ್ಲಿದ್ದವು. 

ಈ ತುಮುಲದಲ್ಲಿದ್ದಾಗಲೇ, ಮಗನಿಗೆ ಒಂದು ಒಳ್ಳೆಯ ಸಂಬಂಧ ಕೂಡಿಬಂತು. ಹುಡುಗಿ ನೋಡಲು ಚೆನ್ನಾಗಿದ್ದಳು. ಈಗ ತಾನೇ ಎಂ.ಎ ಮುಗಿಸಿದ್ದಳು. ಮನೆ ಕಡೆಯೂ ಅನುಕೂಲವಾಗಿದ್ದರು. ಹುಡುಗಿಯನ್ನು ನೋಡಲು ಹೋದಾಗ, ಪ್ರಜ್ವಲ್‌ಗೆ ಒಳಗೊಳಗೇ ಅಳುಕು. ಹುಡುಗಿ ಒಪ್ಪುತ್ತಾಳೋ ಇಲ್ಲವೋ? ಅವಳು ನೋಡಲು ಚೆಂದ; ತಾನೋ ಸ್ವಲ್ಪ ಕಪ್ಪು; ಅವಳು ಬೇಡ ಎಂದುಬಿಟ್ಟರೆ? ಹಾಗೇಕೆ ಅನ್ನುತ್ತಾಳೆ? ಫೋಟೋ ನೋಡಿಲ್ಲವೇ? ಅದಾದ ಮೇಲೆ ತಾನೇ, ನಾನಿವಳನ್ನು ನೋಡಲು ಬಂದದ್ದು. ನೋಡೋಣ! ಅವಳ ಜೊತೆ ಮಾತನಾಡುವಾಗ ಕೇಳಿದರಾಯಿತು ಎಂದು ನಿರ್ಧರಿಸಿದ. ಮನೆಯವರೆಲ್ಲರೂ ಮಾತನಾಡಿದ ಮೇಲೆ, ಹುಡುಗ-ಹುಡುಗಿ ಮಾತನಾಡಬೇಕು ಎಂದು ತಾರಸಿಯ ಮೇಲೆ ಬಂದರು. ಆಗ ಪ್ರಜ್ವಲ್‌, ದೀಪಾಳನ್ನು ಕೇಳಿದ. ನಿಮ್ಮ ಮನೆಯವರ ಬಲವಂತಕ್ಕೆ ನನ್ನನ್ನು ಒಪ್ಪಬೇಡ! ನಿನಗೆ ನಿಜವಾಗಲೂ ಇಷ್ಟವಿದ್ದರೆ ಮಾತ್ರ ಒಪ್ಪಿಕೋ! ಇದು ನಮ್ಮಿಬ್ಬರ ಜೀವನದ ಪ್ರಶ್ನೆ. ಎಂದು ಹೇಳುತ್ತಿದ್ದಂತೆ, ದೀಪಾ, ಪ್ರಜ್ವಲ್‌ ನನಗೂ ನೀವು ಹಿಡಿಸಿದ್ದೀರಿ. ನಿಮ್ಮ ಸರಳತೆ ನನಗೆ ಇಷ್ಟವಾಗಿದೆ. ನಾನೇನೂ ಯಾರ ಬಲವಂತಕ್ಕೂ ಮದುವೆಯಾಗುತ್ತಿಲ್ಲ. ಇಷ್ಟಪಟ್ಟೇ ಮದುವೆ ಆಗುತ್ತಿದ್ದೇನೆ ಎಂದಾಗ ಪ್ರಜ್ವಲ್‌ಗೆ ಸ್ವರ್ಗಕ್ಕೆ ಮೂರೇ ಗೇಣು. 

ಮುಂದಿನದೆಲ್ಲ ಹೂವಿನ ಹಾರ ಎತ್ತಿದಂತೆ ಸುಲಭವಾಗಿ ನಡೆದುಹೋಯಿತು. ಮದುವೆಯಾಗಿ ವರ್ಷದೊಳಗೆ ಪುಟ್ಟ ಕಂದಮ್ಮನ ಆಗಮನವೂ ಆಯಿತು. ಮಗುವಿಗೆ 3 ವರ್ಷ ತುಂಬುತ್ತಿದ್ದಂತೆ, ಸ್ಕೂಲಿಗೂ ಸೇರಿಸಿದ್ದಾಯಿತು. ಈಗ ದೀಪಾಳಿಗೆ ಹೊತ್ತು ಕಳೆಯುವ ಸಮಸ್ಯೆ ಶುರುವಾಯಿತು. ಪ್ರಜ್ವಲ್‌ ಬೆಳಿಗ್ಗೆ 9ಕ್ಕೆ ಹೊರಟರೆ, ಬರುವುದು ರಾತ್ರಿ 9ಕ್ಕೆ. ಅದು ಕೆಲವೊಮ್ಮೆ 10 ಆದರೂ ಆದೀತು. ಬೆಳಿಗ್ಗೆ  ಹನ್ನೊಂದು ಗಂಟೆಯವರೆಗೆ ಸಮಯ ಹೋಗುವುದು ತಿಳಿಯುತ್ತಿರಲಿಲ್ಲ; ಬೆಳಿಗ್ಗೆ ಏಳುವುದು, ತಿಂಡಿ-ಅಡುಗೆ ಮಾಡುವುದು, ಮಗುವನ್ನು ಸ್ಕೂಲಿಗೆ ರೆಡಿ ಮಾಡುವುದು; ಪ್ರಜ್ವಲ್‌ಗೆ ಡಬ್ಬಿ ಕಟ್ಟಿಕೊಡುವುದು; ಅವರಿಬ್ಬರನ್ನೂ ಕಳಿಸಿಕೊಟ್ಟ ನಂತರ ಮನೆಗೆಲಸ ಒಂದು ಗಂಟೆಯಲ್ಲಿ ಮುಗಿದುಹೋಗುತ್ತಿತ್ತು. ಇನ್ನು ಮಗು ಬರುವುದು 2 ಗಂಟೆಗೇ! ಅಲ್ಲಿಯವರೆಗೆ ದೀಪಾಳಿಗೆ ಬೇಜಾರು. ಮಗು ಬಂದ ತಕ್ಷಣ ಊಟ ಮಾಡಿಸಿದರೆ, ಅದು ಮಲಗಿದಾಗಲೂ ದೀಪಾಳಿಗೆ ಹೊತ್ತು ಹೋಗದು. ಇಷ್ಟು ದಿನಗಳವರೆಗೆ ಅಮ್ಮ, ಅತ್ತೆ, ನೆಂಟರು-ಇಷ್ಟರು ಬಂದು ಹೋಗುತ್ತಿದ್ದರು. ಈಗ ಹಳೆಯದಾಯಿತಲ್ಲ; ಎಲ್ಲರಿಗೂ ಅವರವರ ಕೆಲಸಗಳು. ಮನೆಗೆ ಬಂದು ಹೋಗುವವರೂ ಕಡಿಮೆ. ಸಂಜೆ ಮಗುವಿನ ಜೊತೆ ಸ್ವಲ್ಪ ಹೊತ್ತು ಆಟ, ನಂತರ ಅದಕ್ಕೆ ಊಟ, ಮತ್ತೆ ಅದು ಮಲಗಿದ ಮೇಲೆ ಪ್ರಜ್ವಲ್‌ಗಾಗಿ ಕಾಯುವಾಟ, ಮನದಲ್ಲಿ ಹೊಯ್ದಾಟ. ಅವಳಿಗೆ ತನ್ನ ಎಂ.ಎ. ಚಿನ್ನದ ಪದಕಗಳು ಕಣ್ಮುಂದೆ ಬಂದವು. ನೀನು ಒಂದು ಒಳ್ಳೆ ಕಾಲೇಜಿನಲ್ಲಿ ಲೆಕ್ಚರರ್‌ ಆಗಿ ಸೇರಿಕೋ. ಬಹಳಷ್ಟು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಶಕ್ತಿ ನಿನಗಿದೆ ಎಂದು ಅವಳ ನೆಚ್ಚಿನ ಪ್ರಾಧ್ಯಾಪಕರು ಹೇಳಿದ ಮಾತುಗಳೂ ನೆನಪಾದವು. ನಾನೇಕೆ ಕೆಲಸಕ್ಕೆ ಸೇರಬಾರದು? ಎಂಬ ಆಲೋಚನೆ ಅವಳ ಮನದಲ್ಲಿ ಮೂಡಿಬಂತು.

ಸರಿ, ಪೇಪರ್‌ ನೋಡಿ, ಅವರಿವರನ್ನು ಕೇಳಿ ನಾಲ್ಕು ಕಡೆ ಅರ್ಜಿ ಹಾಕಿದ್ದೂ ಆಯಿತು; ಸಂದರ್ಶನಕ್ಕೆ ಕರೆ ಬಂದದ್ದೂ ಆಯಿತು. ದೀಪಾ ಜಾಣೆ, ಅಲ್ಲದೇ ಒಳ್ಳೆಯ ಶಿಕ್ಷಣ-ವಿದ್ಯಾಭ್ಯಾಸ; ಮಾತೂ ಪಟಪಟನೆ ಅರಳು ಹುರಿದಂತೆ,  ಉಪನ್ಯಾಸಕಿಯಾಗಲು ಇನ್ಯಾವ ಅರ್ಹತೆ ಬೇಕು? ತೀರ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಹೋಗಲು ದೀಪಾಳಿಗೆ ಮನಸ್ಸಾಗಲಿಲ್ಲ; ಹಾಗಾಗಿ, ತನ್ನ ಮನೆಗೆ ಸಮೀಪವಿರುವ ಕಾಲೇಜಿನಲ್ಲಿ ಉತ್ತಮ ಸಂಬಳವಿದ್ದ ಕಾರಣ, ಫುಲ್ ಟೈಂ ಲೆಕ್ಚರರ್‌ ಆಗಿ ಕೆಲಸಕ್ಕೆ ಸೇರಿಯೇಬಿಟ್ಟಳು ದೀಪಾ. ಈಗ್ಯಾಕೆ ಕೆಲಸ? ಮಗು ಸ್ವಲ್ಪ ದೊಡ್ಡವಳಾಗುವವರೆಗೆ ಅವಳ ಜೊತೆ ಇರಬಾರದಾ? ನನಗೂ ಈ ವರ್ಷ ಟ್ರಾನ್ಸ್‌ಫರ್‌ ಅಂತಿದ್ದಾರೆ, ಆಗ ಏನ್ಮಾಡ್ತೀಯಾ? ನನ್ನ ಜೊತೆ ಬರ್ತೀಯೋ ಅಥವಾ ಕೆಲಸ ಅಂತ ಇಲ್ಲೇ ಇರ್ತೀಯೋ? ನಿನಗೆ ನಾನು ಮುಖ್ಯ ಅಂತ ಅನ್ನಿಸೋದೇ ಇಲ್ವಾ? ಕೆಲಸಾನೇ ನಿನಗೆ ಮುಖ್ಯ ಆಯ್ತಾ? ಅಂತ ಪ್ರಜ್ವಲ್‌ನ ಗೊಣಗಾಟ ಶುರು ಆಯ್ತು. ಅಯ್ಯೋ! ನಿಮಗೇನ್ರೀ ಕಷ್ಟ? ಹೊತ್ತಿಗೆ ಸರಿಯಾಗಿ ಮಾಡಿ ಹಾಕ್ತೀನಿ. ನೀವು ಬರೋದ್ರೊಳಗೆ ಮನೆಗೆ ಬರ್ತೀನಿ. ಇನ್ನೇನು? ನನಗೂ ಬೇಜಾರು ಕಳೆಯುತ್ತೆ. ಜನಪರಿಚಯಾನೂ ಆಗುತ್ತೆ. ಮಗೂನ್ನ ಸ್ಕೂಲ್‌ ಪಕ್ಕದಲ್ಲೇ ಇರೋ ಪ್ಲೇ ಹೋಂ ನವರು ನೋಡ್ಕೊತ್ತಾರೆ. ಅವಳಿಗೂ ಸ್ವಲ್ಪ ಅಭ್ಯಾಸ ಆಗುತ್ತೆ. 3 ವರ್ಷ ಅವಳ ಜೊತೇನೇ ಇದ್ದೆ ಅಲ್ವಾ? ಇನ್ನು ನಿಮ್ಮ ಟ್ರಾನ್ಸ್‌ಫರ್‌ ವಿಷ್ಯ. ಅದು ಬಂದಾಗ ನೋಡೋಣ ಅಂತ ಪ್ರಜ್ವಲ್‌ನನ್ನು ಸಮಾಧಾನಪಡಿಸಿದಳು ದೀಪಾ.

ಎಲ್ಲವೂ ಒಂದು ಹಂತದವರೆಗೆ ಚೆನ್ನಾಗಿಯೇ ನಡೆಯುತ್ತಿತ್ತು. ಒಂದು ವರ್ಷ ಕಳೆದದ್ದೇ ತಿಳಿಯಲಿಲ್ಲ. ದೀಪಾಳ ಕೆಲಸ ಕಾಲೇಜಿನಲ್ಲಿ ಎಲ್ಲರಿಗೂ ಹಿಡಿಸಿತು. ಹೆಚ್ಚು ಹೆಚ್ಚು ಜವಾಬ್ದಾರಿಗಳು ಹೆಗಲೇರಿದವು. ಬೆಳಿಗ್ಗೆ 9.30 ಗೆ ಮನೆಯಿಂದ ಹೊರಡುತ್ತಿದ್ದವಳು ಈಗ 7.30 ಗೆ ಹೊರಡಬೇಕಾಯಿತು. ಮಗಳನ್ನು 4 ಗಂಟೆಗೆ ಪ್ಲೇ ಹೋಂನಿಂದ ತಾನೇ ಕರೆದುಕೊಂಡು ಬರುತ್ತಿದ್ದ ದೀಪಾಳಿಗೆ ಈಗ ಸಂಜೆ 6 ಗಂಟೆಯವರೆಗೆ ಕೆಲಸ. ಕಾಲೇಜಿನಲ್ಲಿ ಕೆಲಸ ಹೆಚ್ಚಾಗುತ್ತಿದ್ದಂತೆ ಮನೆಯ ಕೆಲಸಗಳು ಏರುಪೇರಾಗುತ್ತಿತ್ತು. ಎಲ್ಲ ಕೆಲಸಗಳನ್ನು ಮಾಡಿ ಕಾಲೇಜಿಗೆ ಹೋಗುತ್ತಿದ್ದ ದೀಪಾ ಸ್ವಲ್ಪ ಸ್ವಲ್ಪವೇ ಬದಲಾದಳು. ಅವಳಿಗೂ ಎರಡೂ ಕಡೆ ಒಂದೇ ರೀತಿ ಗಮನ ನೀಡಲು ಸಾಧ್ಯವಾಗುತ್ತಿರಲಿಲ್ಲ; ದೇಹಕ್ಕೆ ಆಯಾಸ; ಮನಸ್ಸಿಗೆ ದಣಿವು; ಗಂಡನನ್ನು ಗಮನಿಸಿಕೊಳ್ಳುವ ವ್ಯವಧಾನವೂ ಕಡಿಮೆ ಆಯಿತು. ಮನೆಗೆ ಬಂದರೂ ಕಾಲೇಜಿನದ್ದೇ ಕೆಲಸ. ಸದಾ ಅದೇ ಧ್ಯಾನ; ಇನ್ನು ಕೆಲಸ ಬಿಡುವ ಇಚ್ಛೆಯೋ ಮೊದಲೇ ಇರಲಿಲ್ಲ; ನಿಧಾನವಾಗಿ ಎಲ್ಲವೂ ಬದಲಾಗಲು ಶುರುವಾಯಿತು. ಪ್ರಜ್ವಲ್‌ ಇವತ್ತು ಪುಟ್ಟೀನ ನೀವೇ ಸ್ಕೂಲಿಗೆ ಬಿಡಬೇಕು; ಇವತ್ತು ನೀವೇ ತರಕಾರಿ ತಂದುಬಿಡಿ; ನನಗೆ ಲೇಟ್‌ ಆಗ್ತಾ ಇದೆ, ಪುಟ್ಟಿ ಇನ್ನೂ ಎದ್ದಿಲ್ಲ; ನೀವೇ ರೆಡಿ ಮಾಡಿಬಿಡಿ; ಇವತ್ತು ಕಾಲೇಜಲ್ಲಿ ಫಂಕ್ಷನ್‌ ಇದೆ, ನಾನು ಬರೋದು 8 ಗಂಟೆ ಆಗುತ್ತೆ; ನೀವೇ ಪುಟ್ಟೀನ ಕರ್ಕೊಂಡು ಬನ್ನಿ; ಇವತ್ತು ಸ್ಪೆಷಲ್‌ ಕ್ಲಾಸ್‌ ಇದೆ, ನಾನು ಬೇಗ ಹೋಗ್ಬೇಕು, ತಿಂಡಿ ಮಾಡಿದ್ದೀನಿ, ನೀವೇ ಅವಳಿಗೆ ತಿನ್ನಿಸಿಬಿಡಿ; ಇವೆಲ್ಲವೂ ಮನೆಯಲ್ಲಿ ಸಾಮಾನ್ಯವಾಯಿತು.

 ಪ್ರಜ್ವಲ್‌ ಹಾಸ್ಟೆಲ್‌ನಲ್ಲಿ ಇದ್ದು ಓದಿದ ಜಾಣ ಹುಡುಗನಾದರೂ ಮನೆಕೆಲಸದಲ್ಲಿ ಸೊನ್ನೆ! ಅವನಿಗೆ ಕುಕ್ಕರ್‌ ಇಡುವ ಮಾತಿರಲಿ ಎಷ್ಟು ಸಲ ವಿಷಲ್‌ ಆದ ಮೇಲೆ ಗ್ಯಾಸ್‌ ಆಫ್‌ ಮಾಡಬೇಕು ಎನ್ನುವುದೂ ನೆನಪಿರುವುದಿಲ್ಲ; ಮಗಳನ್ನು ಸ್ಕೂಲಿಗೆ  ಬಿಡುವುದು; ಅಲ್ಲಿಂದ ಕರೆದುಕೊಂಡು ಬರುವುದು; ತರಕಾರಿ ತರುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದನೇ ಹೊರತು ಬೇರೆ ಕೆಲಸ ಬರುತ್ತಲೂ ಇರಲಿಲ್ಲ; ತಾನು ಮಾಡಬೇಕು ಎಂದು ಯಾವತ್ತೂ ಅನಿಸಿರಲಿಲ್ಲ; ಯಾವಾಗ ದೋಸೆ ಮಾಡ್ಕೊಳ್ಳಿ; ಇವತ್ತಿನ ಹುಳಿ ಇದೆ; ನಾಳೆಗೆ ಅಡ್ಜಸ್ಟ್‌ ಮಾಡ್ಕೊಳ್ಳಿ;  ನಿಮ್ಮ ಬಟ್ಟೆ ಇಸ್ತ್ರಿ ಮಾಡ್ಕೊಂಬಿಡಿ; ಅಂತ ದೀಪಾ ಹೇಳಲು ಶುರುಮಾಡಿದಳೋ; ಯಾವಾಗ ವೀಕೆಂಡ್‌ಗಳಲ್ಲಿ ಹೊರಗೆ ಹೋಗೋಣ ಅಂತ ಕರೆದಾಗ ಇಲ್ಲ ನನಗೆ ಕೆಲಸ ಇದೆ ಅಂತ ದೀಪಾ ಹೇಳಲು ಪ್ರಾರಂಭಿಸಿದಳೋ; ಯಾವಾಗ ಮಗಳ ಜವಾಬ್ದಾರಿ ಅವನ ತಲೆಯ ಮೇಲೇ ಬಿತ್ತೋ ಆಗ ಪ್ರಜ್ವಲ್‌ ಸಿಡಿದೆದ್ದ. ನನ್‌ ಕೈಲಿ ಇವೆಲ್ಲ ಮಾಡೋಕೆ ಆಗಲ್ಲ ದೀಪಾ. ನಿನ್ನನ್ನು ಮದ್ವೆ ಮಾಡಿಕೊಂಡಿದ್ದು ಯಾಕೆ? ಏನೋ ಸಣ್ಣ ಪುಟ್ಟ ಕೆಲಸ ಆದ್ರೆ ಪರವಾಗಿಲ್ಲ. ಬರ್ತಾ ಬರ್ತಾ ಅತಿಯಾಯ್ತು ನಿಂದು. ಬಿಸಿ ಬಿಸಿಯಾಗಿ ತಿಂಡಿ ಮಾಡ್ಕೊಡ್ತಿದ್ದೆ; ಡಬ್ಬೀಗೆ ಊಟ ಹಾಕ್ಕೊಡ್ತಿದ್ದೆ; ವಾರದ ಕೊನೆಯಲ್ಲಿ ಎಲ್ಲಾದ್ರೂ ಹೋಗಿ ಬರ್ತಿದ್ವಿ. ನಂಗೆ ಮನೆ ಜವಾಬ್ದಾರಿ ಏನೂ ಇರ್ಲಿಲ್ಲ; ಆರಾಮಾಗಿದ್ದೆ. ಅದ್ಯಾಕಾದ್ರೂ ಕೆಲ್ಸಕ್ಕೆ ಸೇರ್ಕೊಂಡ್ಯೋ? ಅವರೆಷ್ಟು ದುಡ್ಡು ಕೊಡ್ತಾರೋ ನಾನೇ ನಿಂಗೆ ಕೊಡ್ತೀನಿ; ಕೆಲ್ಸ ಬಿಟ್ಬಿಡು; ನಂಗೆ ಮನೆಕೆಲ್ಸ ಮಾಡಕ್ಕೆ ಆಗಲ್ಲ; ಆಫೀಸ್‌ ಟೆನ್ಷನ್‌ ಬೇರೆ ಇರುತ್ತೆ; ಸ್ವಲ್ಪ ಅರ್ಥ ಮಾಡ್ಕೋ ಅಂತ ಒಂದು ದಿನ ಕೂಗಾಡಿದೆ.

ನೋಡ್ರೀ ನನಗೆ ದುಡ್ಡಲ್ಲ ಮುಖ್ಯ. ನನ್ನ ಕೆರಿಯರ್‌ ಮುಖ್ಯ. ಮದ್ವೆ ಆಗಿ ನಾಲ್ಕು ವರ್ಷ ನಿಮ್ಮ ಸೇವೇನೇ ಮಾಡಿದ್ದೀನಲ್ಲ; ನೀವೂ ಸ್ವಲ್ಪ ಅಡ್ಜಸ್ಟ್‌ ಆಗ್ಬೇಕು; ಎಲ್ಲ ಮೊದಲಿನ ಥರಾನೇ ಇರೋಕ್ಕಾಗತ್ತಾ? ನಾನು ಹೋಗೋದ್ರೊಳಗೆ ತಿಂಡಿ ಮಾಡ್ಕೊಡ್ತಿನಿ ಬನ್ನಿ ಅಂದ್ರೆ ಇಷ್ಟು ಬೇಗ ತಿಂಡಿ ಬೇಡ ಅಂತೀರ; ಬೆಳಿಗ್ಗೆ ಪುಟ್ಟೀಗೆ ರೆಡಿ ಮಾಡಿ ಅಂದ್ರೆ ಪೇಪರ್‌ ಬಿಟ್ಟು ಬರೋದೂ ಇಲ್ಲ; ಹೋಗ್ಲಿ ಗ್ಯಾಸ್‌ ಆಫ್‌ ಮಾಡಿ, ಕುಕ್ಕರ್‌ ಇಟ್ಟಿದೀನಿ ಅಂದ್ರೆ, ಮೊಬೈಲ್‌ನಲ್ಲಿ ಮುಳುಗಿರ್ತೀರ; ಸಂಜೆ ಸ್ವಲ್ಪ ತೊಳೆದಿರೋ ಪಾತ್ರೆ ಎತ್ತಿಡಿ ಅಂದ್ರೆ ಟಿ.ವಿ. ಬಿಟ್ಟು ಬರಲ್ಲ. ನಿಮ್ಮ ಸುಖಕ್ಕೆ ಏನೂ ಕಡಿಮೆ ಆಗ್ಬಾರ್ದು. ನಾನು ಕೆಲ್ಸಕ್ಕೂ ಹೋಗಿ ಮನೇಲೂ ಮೊದಲಿನ ಥರ  ಕೆಲಸ ಮಾಡ್ಬೇಕು ಅಂದ್ರೆ ಎಲ್ಲಾಗುತ್ತೆ? ನನಗೆ ಕೆಲಸ ಮಾಡೋದನ್ನು ಬಿಡೋಕ್ಕಾಗಲ್ಲ. ಈ ವರ್ಷ ಆದ್ಮೇಲೆ ಪರ್ಮನೆಂಟ್‌ ಮಾಡ್ತಾರೆ. ಏನೋ ನನ್ನ ಆಸೇನೂ ಈಡೇರುತ್ತೆ. ಮನಸ್ಸು ಮೆದುಳು ತುಕ್ಕು ಹಿಡೀದೇ ಆಕ್ಟಿವ್‌ ಆಗಿ ಇರುತ್ತೆ. ಮಗಳು ಹೇಗೋ ದೊಡ್ಡೋಳಾದ್ಲು. ಮುಂದಿನ ವರ್ಷದಿಂದ ಅವ್ಳಿಗೂ ಫುಲ್‌ ಸ್ಕೂಲ್‌ ಆಗುತ್ತೆ ಬಿಡಿ. ನೀವು ಸ್ವಲ್ಪ ಬದಲಾಗಿ ಎಲ್ಲ ಸರಿಹೋಗುತ್ತೆ. ಸ್ವಲ್ಪ ಮನೆಗೆಲಸದಲ್ಲಿ ಸಹಾಯ ಮಾಡಿ  ಅಂತ ತನ್ನ ಮನಸ್ಸಿನ ಭಾವನೆ ಹೊರಹಾಕಿಬಿಟ್ಳು ದೀಪಾ. ಮನೆಕೆಲ್ಸ ಗಂಡಸರು ಮಾಡ್ಬೇಕಾ? ನೀನು ಯಾವ ಪುರುಷಾರ್ಥಕ್ಕೆ ಕೆಲ್ಸಕ್ಕೆ ಹೋಗ್ಬೇಕು? ಬಿಟ್ಬಿಡು. ಪಾಠ ಹೇಳೋದು ತಾನೇ? ಮನೇಲಿ ನಾಲ್ಕು ಮಕ್ಕಳಿಗೆ ಪಾಠ ಹೇಳ್ಕೊಡು. ನಮ್ಮ ಮಗಳನ್ನು ಚೆನ್ನಾಗಿ ನೋಡ್ಕೋ. ಮನೆಯಿಂದಾನೇ ಏನಾದ್ರೂ ಕೆಲಸ ಮಾಡು. ಅಷ್ಟಕ್ಕೂ ದೇವರು ನಮಗೆ ಏನು ಕಡಿಮೆ ಮಾಡಿದ್ದಾನೆ? ನೀನು ಕೆಲ್ಸಕ್ಕೆ ಹೋಗಿ ದುಡಿದು ತಂದು ಹಾಕೋ ಅಗತ್ಯ ಖಂಡಿತ ಇಲ್ಲ. ನಾಳೆಯಿಂದ ಕೆಲ್ಸಕ್ಕೆ ಹೋಗ್ಬೇಡ. 

ಅಯ್ಯೋ! ನೀವು ಮಾತ್ರ ಹೊರಗಡೆ ದುಡೀಬೇಕು; ಸಂಪಾದನೆ ಮಾಡ್ಬೇಕು; ಮನೇಗೆ ಬಂದ ತಕ್ಷಣ ನಾನು ಸೇವಕಿ ಹಾಗೆ ನಿಮ್ಮ ಸೇವೆ ಮಾಡ್ಬೇಕು ಅಲ್ವೇನ್ರೀ? ನನಗೂ ನನ್ನದೇ ಆದ ಆಸೆ ಆಕಾಂಕ್ಷೆಗಳು ಇರುತ್ತೆ ಅಲ್ವಾ? ಯಾವ್ದೋ ಬೇರೆ ಊರಿಗೆ ಹೋಗಿ ನಾನು ಕೆಲಸ ಮಾಡ್ತಾ ಇದ್ದೀನಾ? ಇಲ್ಲೇ ಇದ್ದೀನಿ ತಾನೇ? ಮನೆ ಹತ್ರನೇ ಎಷ್ಟು ಜನಕ್ಕೆ ಈ ಥರ ಒಂದು ಒಳ್ಳೆ ಕೆಲಸ ಸಿಗುತ್ತೆ? ಯೋಚನೆ ಮಾಡಿ. ನಾನೂ ನನ್ನ ವೃತ್ತೀಲಿ ಸ್ವಲ್ಪ ಹೆಸರು ಮಾಡೋ ತನಕ ಕಷ್ಟ ಪಡಬೇಕಲ್ವಾ? ನಾನೇನು ಪುಟ್ಟಿಗೆ ಹೇಳಿಕೊಡೋದ್ರಲ್ಲಿ ಏನಾದ್ರೂ ವಂಚನೆ ಮಾಡಿದ್ದೀನಾ? ಹೋಗ್ಲಿ ಒಂದು ದಿನಾನಾದ್ರೂ ನೀವು ಅವಳ ಪುಸ್ತಕ ತೆಗೆದು ನೋಡಿದ್ದೀರಾ? ಅದೆಲ್ಲ ನಾನೇ ನೋಡ್ಕೋತಾ ಇದ್ದೀನಿ ಅಲ್ವಾ? ಏನೋ ನನಗೆ ಕಾಲೇಜಿನ ಒತ್ತಡ ತುಂಬಾ ಇದ್ದಾಗ ನಿಮಗೆ ಒಂದೆರೆಡು ಕೆಲಸ ಹೇಳ್ತೀನಿ ಅಷ್ಟೇ. ಅದೂ ಅಲ್ದೆ ನನಗೆ ಏನೋ ಕೊಂಡ್ಕೋಬೇಕು, ತಕ್ಷಣ ದುಡ್ಡು ಬೇಕು ಅಂದ್ರೆ ನಿಮ್ಮನ್ನ ಕೇಳ್ಬೇಕು; ಆಗ ನನಗೂ ಒಂಥರಾ ಹಿಂಸೆ ಅನ್ಸುತ್ತೆ. ಪ್ರತಿಯೊಂದಕ್ಕೂ ನಿಮ್ಮ ಮೇಲೆ ಡಿಪೆಂಡ್‌ ಆಗ್ಬೇಕು ಅಂತ; ಬರೀ ದುಡ್ಡು ಅಂತಲ್ಲ; ನನಗೆ ನನ್ನ ಕಾಲು ಮೇಲೆ ನಿಲ್ಲಬೇಕು ಅಂತಾನೂ ಮನಸ್ಸಿದೆ ರೀ, ಸ್ವಲ್ಪ ಅರ್ಥ ಮಾಡ್ಕೊಳ್ಳಿ ಅಂತ ಎದುರುತ್ತರ ಕೊಟ್ಟು ಅಲ್ಲಿ ಕ್ಷಣಕಾಲವೂ ನಿಲ್ಲದೇ, ಪುಟ್ಟಿಯನ್ನು ಮಲಗಿಸಲು ಹೋಗೇಬಿಟ್ಳು ದೀಪಾ. 

ಪ್ರಜ್ವಲ್‌ಗೆ ಸಿಟ್ಟು ತಡೆಯಲಾಗಲಿಲ್ಲ; ಆದರೂ ಅವನು ಬೆಳೆದುಬಂದ ಸಂಸ್ಕಾರ ಅವನಿಗೆ ತನ್ನ ಸಿಟ್ಟನ್ನು ನಾಲಿಗೆಗೋ ಅಥವಾ ಕೈಗೋ ಕೊಡುವುದಕ್ಕೆ ಬಿಡಲಿಲ್ಲ; ಆದರೆ, ದೀಪಾಳನ್ನು ಮಾತನಾಡಿಸಲು ಅವನಿಗೆ ಮನಸ್ಸಾಗಲಿಲ್ಲ; ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತೇ ಸುಳ್ಳಾಯಿತು; ದೀಪಾಳಿಗೂ ತಾನೇ ಮಾತನಾಡಿಸಲು ಸ್ವಾಭಿಮಾನ ; ಬದುಕು ತೀರಾ ಯಾಂತ್ರಿಕವಾಗಿಬಿಟ್ಟಿತು; ಪ್ರಜ್ವಲ್‌ ತಾನಾಯಿತು; ತನ್ನ ಕೆಲಸವಾಯಿತು ಎಂಬಂತೆ ಇದ್ದುಬಿಟ್ಟ; ಪ್ರಜ್ವಲ್‌ ಊಟದ ಡಬ್ಬಿಗೆ ಫುಲ್‌ ಮೀಲ್ಸ್‌ ಅಂತ ತಮಾಶೆ ಮಾಡುತ್ತಿದ್ದ ಗೆಳೆಯರು ಈಗ ಎಲ್ಲೋ ಪ್ರಜ್ವಲ್‌ ನಿನ್ನ ಡಬ್ಬಿ? ಎಂದು ಪ್ರಶ್ನೆ ಕೇಳಿದ್ರೆ, ಪ್ರಜ್ವಲ್‌ನ ಮೌನವೇ ಉತ್ತರವಾಗಿರುತ್ತಿತ್ತು; ಕ್ಯಾಂಟೀನ್‌ ಊಟ ಮಾಡೋದು, ಹೊತ್ತಲ್ಲದ ಹೊತ್ತಲ್ಲಿ ತಿನ್ನೋದು ಮಾಮೂಲಿಯಾಯ್ತು; ಆರೋಗ್ಯ ನಿಧಾನವಾಗಿ ಕೈ ಕೊಡತೊಡಗಿತು. ದೀಪಾಳಿಗೂ ಪ್ರಜ್ವಲ್‌ನನ್ನು ನೋಡಿ ಬೇಸರವಾಗತೊಡಗಿತು; ಎಷ್ಟು ಕೆಲಸಕ್ಕೆ ಅಂತ ಜನ ಇಟ್ಕೊಳ್ಳೋದು? ಮನೆ ಕಸ ಗುಡಿಸಿ, ಒರೆಸಿ, ಗಿಡಕ್ಕೆ, ಬಾಗಿಲಿಗೆ ನೀರು ಹಾಕಲು ಒಬ್ಬಳು ಬರುತ್ತಿದ್ದಳು.ಇರೋ ಮೂರು ಜನಕ್ಕೆ ಇನ್ನೆಷ್ಟು ಕೆಲಸ ಇರುತ್ತೆ?ಒತ್ತಡವಿದ್ದಾಗ ಸಣ್ಣ ಕೆಲಸವೂ ದೊಡ್ಡ ಕೆಲಸವೇ! ಇತ್ತ ಕೆಲಸವನ್ನೂ ಬಿಡಲಾರಳು; ಅತ್ತ ಪ್ರಜ್ವಲ್‌ಗೂ ಬಾಗಲಾರಳು; ಕೆಲಸ-ಸಂಸಾರ ಹೇಗಪ್ಪಾ ಎರಡನ್ನೂ ಬ್ಯಾಲೆನ್ಸ್‌ ಮಾಡೋದು? ಅಂತ ಅವಳಿಗೂ ತಲೆ ಸಿಡಿಯತೊಡಗಿತು. ಆದರೂ  ಮಗಳಿಗೋಸ್ಕರ ಅಡುಗೆ ಮಾಡುತ್ತಿದ್ದಳೇ ಹೊರತು ಅವಳಿಗೂ ಊಟ-ತಿಂಡಿ ಬೇಡವಾಯಿತು. ತನ್ನದೇ ತಪ್ಪಾ? ತಾನು ಸ್ವತಂತ್ರವಾಗಿರಬೇಕೆಂಬ ಯೋಚನೆಯೇ ಸರಿಯಿಲ್ಲವೇ ಎಂದು ಮನಸ್ಸು ಹೊಯ್ದಾಡುತ್ತಿತ್ತು. ದಂಪತಿಗಳ ಸಂಸಾರದಲ್ಲಿ ಸ್ವಾರಸ್ಯವೇ ಹೊರಟುಹೋಯಿತು.

ಇತ್ತ ಚಂದ್ರಿಕಾ ಸಂಬಂಧಿಕರ ಕಡೆಯ ಮದುವೆಗೆ ಬೆಂಗಳೂರಿಗೆ ಬರಬೇಕಾಯ್ತು. ಮಗ, ಸೊಸೆ ಮತ್ತು ಮೊಮ್ಮಗಳನ್ನು ನೋಡುತ್ತಾ ಮಗನ ಜೊತೆ ಎರಡು ದಿನ ಇರಬೇಕು ಅಂತ ನಿರ್ಧರಿಸಿ,  ಗಂಡನ ಹತ್ತಿರ ಹೇಳಿ ಬೆಂಗಳೂರಿನ ಬಸ್‌ ಹತ್ತೇ ಬಿಟ್ಳು ಚಂದ್ರಿಕಾ! ಮನೆಗೆ ಬರ್ತೀನಿ ಅಂತ ಪ್ರಜ್ವಲ್‌ಗೆ ಫೋನ್‌ ಮಾಡಿದಳು; ಓಹ್‌ ಅಮ್ಮಾ ಬರ್ತಿದ್ಯಾ? ಸರಿ, ನಾನೇ ಬಂದು ಕರ್ಕೊಂಡು ಹೋಗ್ತೀನಿ ಅಂತ ಅಮ್ಮನಿಗೆ ಹೇಳಿ, ಫೋನ್‌ ಕಟ್‌ ಮಾಡಿದ ಪ್ರಜ್ವಲ್.‌ ಸಂಜೆ ಇಬ್ಬರೂ ಮನೆಗೆ ಬಂದ್ರೂ ಇನ್ನೂ ದೀಪಾ ಬಂದಿರಲಿಲ್ಲ; 6 ಗಂಟೆ ಆಯ್ತು; ಇನ್ನೂ ದೀಪಾ ಬಂದಿಲ್ವಾ? ಯಾಕೆ ಪ್ರಜ್ವಲ್‌ ಅಂದ್ರೆ; ಅಮ್ಮಾ ಅವಳಿಗೆ ಕೆಲಸ ಇದೆಯಂತೆ ಬರೋದು ಲೇಟ್‌ ಆಗುತ್ತೆ ಅಂತ ಹೇಳ್ತಾ, ಅಮ್ಮಾ ಒಂದು ಲೋಟ ಕಾಫಿ ಮಾಡ್ಕೊಡಮ್ಮಾ ಅಂತ ಹೇಳಿ, ಮುಖ ತೊಳೆಯಲು ಹೊರಟ. 7 ಗಂಟೆಗೆ ಮಗಳನ್ನು ಪ್ಲೇ ಹೋಂ ನಿಂದ ಕರ್ಕೊಂಡು ಬಂದ ದೀಪಾಳಿಗೆ ಅತ್ತೆಯನ್ನು ನೋಡಿ ಖುಷಿ, ಆಶ್ಚರ್ಯ ಒಟ್ಟಿಗೇ ಆಯ್ತು. ಅತ್ತೇ ಎಷ್ಟು ಹೊತ್ತಿಗೆ ಬಂದ್ರಿ? ಕಾಫಿ ಕುಡಿದ್ರಾ? ಒಂದರ್ಧ ಗಂಟೆ ಅಡುಗೆ ಈಗ ಮಾಡಿಬಿಡ್ತೀನಿ ಅಂತ ಅಂದಳೇ ಹೊರತು ಗಂಡನನ್ನು ವಿಚಾರಿಸಲಿಲ್ಲ; ಪುಟ್ಟಿ ತನ್ನ ಅಜ್ಜಿಯ ತೊಡೆ ಏರಿ, ಅಜ್ಜೀ ನೀನು ನಮ್ಮ ಜೊತೆಗೇ ಇರು ಅಂತ ಮುದ್ದುಮುದ್ದಾಗಿ ಮಾತಾಡಲು ಶುರುಮಾಡಿದಳು. ಚಂದ್ರಿಕಾಳಿಗೆ ಸ್ವಲ್ಪ ಇರುಸುಮುರುಸಾಯ್ತು; ಇದೇನು? ಮಗನೊಂದಿಗೆ ಒಂದೂ ಮಾತಾಡಲಿಲ್ಲವಲ್ಲ ಸೊಸೆ? ಏನಾಯ್ತಪ್ಪ ಇವರಿಬ್ಬರಿಗೆ? ಏನೋ ಸುಸ್ತಾಗಿದ್ಲು ಅನ್ಸುತ್ತೆ; ಒಂದೆರೆಡು ದಿನ ನೋಡೋಣ; ನಾಳೆ ಬೆಳಿಗ್ಗೆಗೆ ಸರಿ ಹೋಗಬಹುದು; ಅಂತ ಅನ್ಕೊಳ್ತಾ ಲೋಕಾಭಿರಾಮ ಮಾತಾಡ್ಕೊಂಡು ಸೊಸೆಗೆ ಅಡುಗೆ ಕೆಲಸಕ್ಕೆ ಸಹಾಯ ಮಾಡಲು ಒಳಗೆ ಹೋದಳು.

ಊಟ ಮಾಡುವಾಗಲೂ ಮಾತಿಲ್ಲ; ಕತೆಯಿಲ್ಲ. ಮಗನ ಪಾಡಿಗೆ ಮಗ, ಸೊಸೆಯ ಪಾಡಿಗೆ ಸೊಸೆ. ಬೆಳಿಗ್ಗೆ ಮದುವೆಗೆ ಬೇರೆ ಹೋಗ್ಬೇಕು; ಅಂತ ಯೋಚನೆ ಮಾಡ್ತಿದ್ದ ಹಾಗೇ, ಪ್ರಜ್ವಲ್‌, ಅಮ್ಮ, ನಾಳೆ ನಾನು ಆಫೀಸಿಗೆ ಹೋಗ್ತಾ ನಿನ್ನನ್ನು ಮದುವೆ ಮನೆಗೆ ಬಿಟ್ಟು ಹೋಗ್ತೀನಿ; ಬರ್ತಾ ನಿನ್ನ ಸೊಸೆ ಕರ್ಕೊಂಡು ಬರ್ತಾಳಾ ಕೇಳು; ನಂಗೆ ಮಧ್ಯಾಹ್ನ ವಾಪಸ್‌ ಬರೋಕ್ಕೆ ಆಗಲ್ಲ ಅಂದ. ತಕ್ಷಣ ದೀಪಾ ನಾನೇ ಕರ್ಕೊಂಡು ಬರ್ತೀನತ್ತೆ ಅಂತ ಹೇಳಿ ಮಲಗೇ ಬಿಟ್ಳು. ಚಂದ್ರಿಕಾಳಿಗೆ ಯಾಕೋ ಎಲ್ಲ ಸರಿಯಿಲ್ಲ ಅಂತ ಬಲವಾಗಿ ಅನ್ನಿಸಿತು. ಇರಲಿ ಇವತ್ತೊಂದು ದಿನ ಕಳೀಲಿ, ನೋಡೋಣ; ಅಂತ ತಾನೂ ನಿದ್ದೆಗೆ ಜಾರಿದಳು.

ಮಾರನೇ ದಿನ, ಮದುವೇನೂ ಮುಗೀತು; ಸೊಸೆ ಮಧ್ಯಾಹ್ನ ಮನೆಗೆ ಕರೆದುಕೊಂಡೂ ಬಂದ್ಲು. ಚಂದ್ರಿಕಾ ನಿಧಾನವಾಗಿ ದೀಪಾ ಹತ್ರ ಯಾಕಮ್ಮಾ? ಇಬ್ರೂ ಜಗಳ ಮಾಡ್ಕೊಂಡಿದ್ದೀರಾ? ಏನಾಯ್ತು? ಯಾವಾಗಲೂ ಎಷ್ಟು ಖುಷಿಯಿಂದ ಇರ್ತಿದ್ರಿ; ಈಗ ಏನಾಯ್ತು? ಪ್ರಜ್ವಲ್‌ ಏನಾದ್ರೂ ತಪ್ಪು ಮಾಡಿದ್ನಾ? ಅವನು ಆ ಥರದ ಹುಡುಗ ಅಲ್ವಲ್ಲ ದೀಪಾ? ಅಂದಾಗ ದೀಪಾಳಿಗೂ ದುಃಖದ ಕಟ್ಟೆ ಒಡೆಯಿತು. ಅತ್ತೇ, ಪ್ರಜ್ವಲ್‌ಗೆ ನಾನು ಕೆಲಸಕ್ಕೆ ಹೋಗೋದು ಇಷ್ಟ ಇಲ್ವಂತೆ; ಅವ್ರಿಗೆ ನಾನು ಮನೇಲೇ ಇರ್ಬೇಕಂತೆ. ಈಗ ನಂಗೆ ಕಾಲೇಜಲ್ಲಿ ಒಳ್ಳೆ ಹೆಸರಿದೆ ಅತ್ತೇ, ಇನ್ನೊಂದು ವರ್ಷ ಪರ್ಮನೆಂಟ್‌ ಮಾಡ್ತಾರೆ; ನಂಗೆ ಮನೆ ಕೆಲಸ, ಕಾಲೇಜ್‌ ಕೆಲಸ, ಪುಟ್ಟಿಯನ್ನು ನೋಡ್ಕೊಳ್ಳೋದು ಎಲ್ಲಾ ಮಾಡೋಷ್ಟರಲ್ಲಿ ತುಂಬಾ ಸುಸ್ತಾಗುತ್ತೆ; ಆದರೆ, ಕೆಲಸ ಬಿಡೋಕೂ ಮನಸ್ಸಾಗ್ತಿಲ್ಲ. ನಂಗೆ ಒಂಚೂರು ಹೆಲ್ಪ್‌ ಮಾಡೋಲ್ಲ ಅವರು. ಬೆಳಿಗ್ಗೆ ನಾನು 7.30 ಕ್ಕೆ ಹೊರಡಬೇಕಾಗುತ್ತೆ; ಇನ್ನೂ ಎದ್ದಿರಲ್ಲ ಇವರು. ದೋಸೆ ಹಿಟ್ಟಿದೆ, ದೋಸೆ ಮಾಡ್ಕೊಳ್ಳಿ ಅಂದ್ರೆ, ಅದಕ್ಕೂ ಸಿಟ್ಟು ಮಾಡ್ಕೊತ್ತಾರೆ; ಅಡುಗೆ ಮನೆ ಕಡೆ ತಲೇನೂ ಹಾಕಲ್ಲ. ಕುಡಿದ ಲೋಟ ಸಹ ಒಳಗಡೆ ತಂದಿಡಲ್ಲ; ಪುಟ್ಟಿ ಹೋಮ್‌ವರ್ಕ್‌ ಸಹ ನಾನೇ ಮಾಡ್ಸೋದು. ಒಂಚೂರು ಬಟ್ಟೆ ಒಣಗಿಸೋಣ; ಪಾತ್ರೆ ತೆಗೆದಿಡೋಣ ಅಂತ ಅವರಿಗೆ ಅನ್ಸೋದೇ ಇಲ್ಲ ಅತ್ತೇ. ಅವರಿಗೆ ಮನೆಕೆಲಸ ಅಂದ್ರೆ ಅದು ಹೆಂಗಸರ ಜವಾಬ್ದಾರಿ ಅಂತ. ಈ ವಿಷಯದಲ್ಲಿ ನನ್ನನ್ನು ಸ್ವಲ್ಪಾನೂ ಅರ್ಥನೇ ಮಾಡಿಕೊಂಡಿಲ್ಲ; ನಂಗೆ ಅಡುಗೆ ಕೆಲಸಕ್ಕೆ ಜನರನ್ನು ಇಟ್ಕೊಳ್ಳೋಕೆ ಇಷ್ಟ ಇಲ್ಲ. ಊಟ ತಿಂಡಿಗೆ ನಾನೇನು ಕಡಿಮೆ ಮಾಡಿಲ್ಲ. ಹೊರಗಡೆಯಿಂದ ಏನೂ ತರ್ಸಲ್ಲ, ಇವರಿಗೆ ಏನು ಇಷ್ಟಾನೋ ಅದನ್ನೇ ಮಾಡ್ತೀನಿ. ಆದ್ರೂ ಸಿಡಸಿಡ. ನಾನೂ ನೋಡೋಷ್ಟು ನೋಡಿ, ಒಂದಿನ ಜೋರಾಗಿ ಹೇಳಿದೆ. ನೀವೂ ಸ್ವಲ್ಪ ನನಗೆ ಸಹಾಯ ಮಾಡಿ; ನನ್ನ ಸ್ನೇಹಿತೆಯರ ಗಂಡಂದಿರು ಅವರಿಗೆ ಎಷ್ಟು ಹೆಲ್ಪ್‌ ಮಾಡ್ತಾರೆ, ಹೆಣ್ಣುಮಕ್ಕಳು ಹೊರಗಡೆ ಕೆಲಸಕ್ಕೆ ಹೋಗ್ತಾರೆ ಅಂದ್ರೆ ಸಹಾಯ ಮಾಡ್ಬೇಕು ಅಂತ; ಅವರಿಗೆ ಸಿಟ್ಟು ಬಂದುಮಾತಾಡೋದೇ ಬಿಟ್ಬಿಟ್ರು. ನಾನೂ ಮಾತಾಡ್ತಾ ಇಲ್ಲ. ಅತ್ತೇ ನೀವೇ ಹೇಳಿ. ಹೆಣ್ಣುಮಕ್ಕಳು ಅಂದ್ರೆ, ಬರೀ ಮನೆಕೆಲಸ ಮಾಡ್ಕೊಂಡೇ ಇರ್ಬೇಕಾ? ನಾವೂ ಹೊರಗಡೆ ಹೋಗಿ ಕೆಲ್ಸ ಮಾಡೋಷ್ಟು ಸ್ವಾತಂತ್ರ್ಯ ಬೇಡ್ವಾ? ನಮಗೂ ನಮ್ಮ ಕೆರಿಯರ್‌ ಮುಖ್ಯ ಅಲ್ವಾ? ನಾನು ಇನ್ನೇನು ಕೇಳ್ಲಿಲ್ಲ ಅತ್ತೇ, ನನಗೆ ಒಂಚೂರು ಸಹಾಯ ಮಾಡಿ ಅಂದೆ ಅಷ್ಟೇ. ತಪ್ಪಾ ಅತ್ತೇ, ಹೇಳಿ. ನಿಮಗೂ ನನ್ನ ಥರಾನೇ ಒಬ್ಳು ಮಗಳಿದ್ದು, ಅಳಿಯ ಕೆಲಸಕ್ಕೆ ಕಳಿಸ್ಲಿಲ್ಲ ಅಂದ್ರೆ ನಿಮಗೆ ಹೇಗೆ ಅನ್ನಿಸ್ತಾ ಇತ್ತು? ಹೇಳಿ. ಅಂತ ಜೋರಾಗಿ ಅಳಲು ಶುರು ಮಾಡಿದಳು ದೀಪಾ.

ಚಂದ್ರಿಕಾಳಿಗೆ ಹೇಗೆ ಸಮಾಧಾನ ಹೇಳಬೇಕೋ ತಿಳಿಯಲಿಲ್ಲ; ಸೊಸೆಯ ತಲೆ ನೇವರಿಸುತ್ತಾ ಕುಳಿತುಬಿಟ್ಟಳು. ಪ್ರಜ್ವಲ್‌ ಚೆನ್ನಾಗಿ ಓದುತ್ತಿದ್ದಾನೆ ಅಂತ, ತಾನೇ ಅವನಿಗೆ ಯಾವುದೇ ಮನೆಕೆಲಸಗಳನ್ನು ಹೇಳುತ್ತಿರಲಿಲ್ಲ. ಆಗ ವಯಸ್ಸೂ ಇತ್ತು. ಮಾಡುವ ಶಕ್ತಿಯೂ ಇತ್ತು. ಮಾಡುತ್ತಿದ್ದೆ. ಹಾಸ್ಟೆಲ್‌ನಿಂದ ಪ್ರಜ್ವಲ್ ಮನೆಗೆ ಬಂದಾಗ, ಮಗ ಬಂದಿದ್ದಾನೆ ಎಂಬ ಮುಚ್ಚಟೆಯಿಂದ ಒಳ್ಳೊಳ್ಳೆ ಅಡುಗೆಯನ್ನು ಮಾಡಿ ಹಾಕ್ತಿದ್ದೆ; ಅವನಿಗೆ ಇಷ್ಟವಾದ ಕುರುಕಲು ತಿಂಡಿಗಳನ್ನು ಮಾಡ್ತಿದ್ದೆ;  ಒದ್ದಾಟವಾದರೂ ಮಗನಿಗೆ ಒಂದೂ ಕೆಲಸ ಹೇಳದೇ ಎಲ್ಲವನ್ನೂ ನಾನೇ ಮಾಡ್ತಿದ್ದೆ.  ಒಂದು ದಿನವೂ ಮಗನಿಗೆ ಬಟ್ಟೆ ಒಗೆದುಕೋ, ನಿನ್ನ ರೂಮ್‌ ಕ್ಲೀನ್‌ ಮಾಡಿಕೋ; ದೋಸೆ ಹಿಟ್ಟಿದೆ, ನೀನೇ ಮಾಡಿಕೋ; ಬಂದು ಸ್ವಲ್ಪ ಚಪಾತಿ ಬೇಯಿಸು; ಅನ್ನಕ್ಕಿಡು ಇಂತಹ ಕೆಲಸಗಳನ್ನು ಎಂದಿಗೂ ಹೇಳಲೇ ಇಲ್ಲ;‌ ಆದರೆ, ಎರಡನೆಯವನು ಹಾಗಲ್ಲ; ಓದಿನ ಜೊತೆಜೊತೆಗೇ ನನ್ನ ಹಿಂದೆ ಮುಂದೆ ತಿರುಗಾಡುತ್ತಾ ಅಡುಗೆಮನೆಯ ರೀತಿನೀತಿಗಳನ್ನು ತಿಳಿದಿದ್ದ. ಚಂದ್ರಿಕಾಳಿಗೆ ತಾನು ಮಾಡಿದ್ದ ತಪ್ಪಿನ ಅರಿವಾಯಿತು; ಇದನ್ನು ತಾನೇ ಸರಿಪಡಿಸಬೇಕು ಎಂದುಕೊಳ್ಳುತ್ತಾ, ಸೊಸೆಗೆ ಅಳಬೇಡ ತಾಯೀ, ಹೆಣ್ಣುಮಕ್ಕಳ ಕಣ್ಣೀರು ಮನೆಗೆ ಶ್ರೇಯಸ್ಸಲ್ಲ; ಎಂದು ಹೇಳಿ ಸಮಾಧಾನ ಪಡಿಸಿ, ಮಗನ ದಾರಿಯನ್ನು ಕಾಯುತ್ತಾ ಕುಳಿತಳು.

ಮಗ ಮನೆಗೆ ಬರುತ್ತಲೇ, ತಾನೇ ಊಟ ಹಾಕಿದಳು. ಅವನು ಸಮಾಧಾನದಲ್ಲಿರುವುದನ್ನು ಖಚಿತಪಡಿಸಿಕೊಂಡು, ನಿಧಾನವಾಗಿ ಮಾತಿಗೆ ಶುರುಮಾಡಿದಳು ಚಂದ್ರಿಕಾ. ಪ್ರಜ್ವಲ್‌, ಯಾಕೆ ನೀನು ದೀಪಾ ಮಾತಾಡ್ತಾ ಇಲ್ಲ? ಏನಾಯ್ತು? ಅವಳು ಏನಾದ್ರೂ ಮಾಡಿದ್ಲಾ? ನೀವಿಬ್ರೂ ಹೀಗಿದ್ರೆ, ಮಗು ಗತಿ ಏನು? ಯಾಕಪ್ಪಾ? ಪ್ರಜ್ವಲ್‌, ನೀನು ಹೀಗೆ ಬದಲಾಗಿದ್ದೀಯ? ಅಂತ ಕೇಳ್ತಾ ಇದ್ಹಾಗೆ, ಪ್ರಜ್ವಲ್‌ಗೂ ಬೇಜಾರಾಗಿ, ಏನಿಲ್ಲ ಅಮ್ಮ, ಕೆಲಸಕ್ಕೆ ಹೋಗ್ಬೇಡ ಅಂದ್ರೂ ಕೇಳಲ್ಲ; ಅವಳದ್ದೇ ಅವಳಿಗೆ. ನಾನು ಮನೆಕೆಲಸದಲ್ಲಿ ಸಹಾಯ ಮಾಡ್ಬೇಕಂತೆ. ನಂಗೇನಮ್ಮ ಗ್ರಾಚಾರ? ನಂಗೂ ಸುಸ್ತಾಗಿರಲ್ವ? ಇವಳು ಮನೇಲಿದ್ರೆ, ಆರಾಮಾಗಿ ಅಡುಗೆ ತಿಂಡಿ ಮಾಡ್ಕೊಂಡು, ಮನೆಕೆಲಸ ಮಾಡ್ಕೊಂಡು ಇರ್ಬಹುದಲ್ವಾ? ಹಠವನ್ನಂತೂ ಬಿಡಲ್ಲ ಅವಳು. ಕೆಲಸಕ್ಕೆ ಹೋಗಿ ಏನು ಸಾಧಿಸಬೇಕಾಗಿದೆ ಅವ್ಳು? ನಂಗಂತೂ ನೆಮ್ಮದೀನೇ ಇಲ್ಲ ಅಮ್ಮ.  ಬೇಜಾರಾಗಿ ಮಾತು ಬಿಟ್ಬಿಟ್ಟೆ  ಅಂದ. 

ಅಲ್ವೋ ಪ್ರಜ್ವಲ್, ಈಗ ಯಾರಾದ್ರೂ ನಿಂಗೆ ಕೆಲಸ ಬಿಡು ಅಂದ್ರೆ ಬಿಟ್ಬಿಡ್ತೀಯಾ? ನಿಂಗೆ ಕೆರಿಯರ್‌ ಮುಖ್ಯ ಅಲ್ವಾ? ದೀಪಂಗೂ ಆಸೆ ಆಕಾಂಕ್ಷೆ ಇರುತ್ತೆ. ಅರ್ಥ ಮಾಡ್ಕೋ. ಅವಳೂ ಗೋಲ್ಡ್‌ ಮೆಡಲಿಸ್ಟ್.‌ ಸಮಾಜಕ್ಕೂ ಅವಳ ಕೊಡುಗೆ ಬೇಕಲ್ವಾ? ನೀನು ಚೂರು ಬದಲಾಗಬೇಕು ಪ್ರಜ್ವಲ್.‌ ನಮ್ಮ ಮನೆ ಕೆಲಸ ನಾವು ಮಾಡೋದು ಅವಮಾನ ಅಲ್ಲಪ್ಪ! ಅಂತ ಚಂದ್ರಿಕಾ ಹೇಳ್ತಾ ಇದ್ದ ಹಾಗೇ, ಪ್ರಜ್ವಲ್‌, ಅಯ್ಯೋ ಹೋಗಮ್ಮ ಮನೆ ಕೆಲಸ ಯಾರು ಮಾಡ್ತಾರೆ?  ಅಷ್ಟು ಕೆಲಸ ಇದ್ರೂ ನೀನು, ನಂಗೆ ಒಂದಾದ್ರೂ ಕೆಲಸ ಹೇಳ್ತಿದ್ಯಾ ಅಮ್ಮ? ಎಲ್ಲ ನೀನೇ ಮಾಡ್ತಿರಲಿಲ್ವಾ? ಇವಳೂ ಮಾಡಲಿ ಬಿಡು. ನನ್ನ ಕೈಲಿ ಇದೆಲ್ಲಾ ಆಗಲ್ಲ ಅಮ್ಮ. ಅಪ್ಪ ಏನಾದ್ರೂ ನಿಂಗೆ ಸಹಾಯ ಮಾಡ್ತಿದ್ರಾ? ಹೇಳು. ಅಂದ. ಆಗ ಚಂದ್ರಿಕಾ, ನೀನು ಹಾಸ್ಟೆಲ್‌ನಲ್ಲಿ ಇದ್ದಿದ್ರಿಂದ ನಿನಗೆ ಮನೆ ವಿಚಾರಗಳು ಅಷ್ಟು ಗೊತ್ತಾಗ್ತಾ ಇರ್ಲಿಲ್ಲ ಕಣೋ. ನಿನ್ನ ತಮ್ಮನಿಗೆ ಒಂದು ಸಲ ಹುಷಾರಿಲ್ಲದೇ, ನನ್ನ ಕೈ ಬಿಟ್ಟೇ ಇರ್ಲಿಲ್ಲ; ಆಗ ನಿಮ್ಮ ಅಪ್ಪನೇ ಕಣಪ್ಪ, ಅಡುಗೆ ಮಾಡಿ, ಊಟ ಹಾಕಿದ್ದು, ಸ್ಕೂಲಿಗೆ ರಜಾ ಹಾಕಿ ಮನೆ ನೋಡ್ಕೊಂಡಿದ್ದು. ಈಗ್ಲೂ ನನಗೆ ಹುಷಾರಿಲ್ಲ ಅಂದ್ರೆ, ನಿಮ್ಮಪ್ಪ, ನಿನ್ನ ತಮ್ಮ ಸೇರಿ ಮನೆ ನೋಡ್ಕೋತ್ತಾರೆ ಗೊತ್ತಿದ್ಯಾ? ಈಗ ನಾನು ಧೈರ್ಯವಾಗಿ ಮನೆ ಬಿಟ್ಟು ಬಂದಿರೋದೂ, ಅವರು ಅಡುಗೆ ತಿಂಡಿ ಮಾಡ್ಕೊಳ್ತಾರೆ ಅಂತಾನೇ! ನೀನು ಓದೋದ್ರ ಕಡೇ ಹೆಚ್ಚು ಗಮನ ಕೊಟ್ಟೆ; ತಕ್ಷಣ ಕೆಲಸ, ತಕ್ಷಣ ಮದುವೆ, ಹಾಗಾಗಿ ಮನೆ ಕಡೆ ಹೆಚ್ಚು ಇರಲಿಲ್ಲ ನೀನು. ಈಗ ದೀಪಂಗೆ ಸಹಾಯ ಮಾಡೋದ್ರಲ್ಲಿ ಯಾವುದೇ ತಪ್ಪಿಲ್ಲ; ಅವಳಿಗೂ ಸ್ವಲ್ಪ ಆರಾಮ ಆಗುತ್ತೆ, ನಿಂಗೂ ಖುಷಿ ಸಿಗುತ್ತೆ. ಸಣ್ಣ ಸಣ್ಣ ಸಹಾಯ ಮಾಡೋದ್ರಲ್ಲಿ ಸಿಗೋ ಸುಖಾನ ವರ್ಣಿಸೋಕೆ ಪದಗಳಿರಲ್ಲ; ಹೆಣ್ಣುಮಕ್ಕಳ ಕೈಲಿ ಕಣ್ಣೀರು ಹಾಕ್ಸಿದ್ರೆ, ನಮಗೂ ಒಳ್ಳೇದಲ್ಲ; ಮನೇಲಿ ಅಮ್ಮಂಗೆ, ಹೆಂಡತೀಗೆ ಸಹಾಯ ಮಾಡೋದ್ರಿಂದ ನಿನ್ನ ಪ್ರತಿಷ್ಠೆ ಕಡಿಮೆ ಆಗಲ್ಲ; ಯೋಚನೆ ಮಾಡು. ನಾನು ನಾಳೆ ಹೊರಡ್ತೀನಿ. ನೀನು ಓದಿರೋನು. ಹೆಚ್ಚು ಹೇಳೋ ಸಾಮರ್ಥ್ಯ ನನಗೆ ಇಲ್ಲ ಕಣೋ. ನಿನ್ನ ಸಂಸಾರ ಸರಿ ಮಾಡ್ಕೊಳ್ಳೋ ಜವಾಬ್ದಾರಿ ನಿಂದು. ಗೊತ್ತಾಯ್ತಾ? ಅಂತ ಕಕ್ಕುಲಾತಿಯಿಂದ ಹೇಳುತ್ತಾ ಪ್ರಜ್ವಲ್‌ ತಲೆ ನೇವರಿಸಿ, ಮಲಗಲು ಹೊರಟಳು.

ಮಾರನೇ ದಿನ ಬೆಳಿಗ್ಗೆ, ದೀಪಾ ಕಾಫಿ ಮಾಡ್ತಿದ್ದ ಹಾಗೇ, ಕೊಡು ದೀಪಾ ನಾನೇ ಅಮ್ಮಂಗೆ ಕೊಡ್ತೀನಿ ಅಂತ, ಅಡುಗೆಮನೆಗೆ ಕಾಲಿಟ್ಟ ಪ್ರಜ್ವಲ್.‌ ಹೊಸದೊಂದು ಬದಲಾವಣೆಯನ್ನು ಗಂಡನ ಮುಖದಲ್ಲಿ ಕಂಡ ದೀಪಾಳಿಗೆ ಸಂತಸವಾಯ್ತು. ದೇವರಂತೆ ಈ ಸಮಯದಲ್ಲಿ ಮನೆಗೆ ಬಂದು, ಇಬ್ಬರೊಂದಿಗೂ ಮಾತನಾಡಿದ, ಅತ್ತೆಗೆ ಸಾವಿರಾರು ವಂದನೆಗಳನ್ನು ಮನದಲ್ಲೇ ಅರ್ಪಿಸಿ, ದೀಪಾ, ಮುಂದಿನ ಕೆಲಸಕ್ಕೆ ಅಣಿಯಾಗತೊಡಗಿದಳು. ಮಗ ಕಾಫಿ ತಂದದ್ದನ್ನು ನೋಡಿದ ಚಂದ್ರಿಕಾಳ ಮನ ಅರಳಿತು.


24 ಕಾಮೆಂಟ್‌ಗಳು:

  1. ,👌👌ಸಕಾಲಿಕ. ನಾವು ನಮ್ಮ ಸಮಯಕ್ಕೆ ಸರಿ ಮಾಡಿಕೊಡುವುದಿಲ್ಲ ಎಂದು ಮಕ್ಕಳಿಂದ ಕೆಲಸ ಮಾಡಿಸುವುದಿಲ್ಲ. ಈಗ ಅವರು ಕಷ್ಟ ಪಡುವುದನ್ನು ನೋಡಿ ಪಶ್ಚಾತ್ತಾಪ ಪಡುವುದು

    ಪ್ರತ್ಯುತ್ತರಅಳಿಸಿ
  2. ಪರಸ್ಪರ ಸಹಕಾರ, ಅನ್ಯೋನ್ಯತೆ ಸುಖ ಸಂಸಾರದ ಗುಟ್ಟು..... ಸಕಲವೂ ಬಯಸುವ ನಾವು ಎಲ್ಲದರ ಬಗೆಗೆ ಕಲಿಯುವುದು ಅಗತ್ಯ...❤️👌👍

    ಪ್ರತ್ಯುತ್ತರಅಳಿಸಿ
  3. ಉತ್ತಮ ಕಥೆ ಮತ್ತು ನಿರೂಪಣೆ ಹಾಗೂ ಪ್ರಸ್ತುತ ಜನರ ಮನಸ್ಥಿತಿ

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿದೆ. ಇನ್ನು ಈ ರೀತಿಯ ಹಾಗೂ ಜೀವನಕ್ಕೆ ಹತ್ತಿರವಾದ ಕಥೆಗಳನ್ನು ಬರೆಯಿರಿ

    ಪ್ರತ್ಯುತ್ತರಅಳಿಸಿ
  5. ಕತೆ ಚನ್ನಾಗಿದೆ ಮೇಡಂ. ಸರಳ , ಸುಂದರ. ಇಡೀ ಕುಟುಂಬದ ಜವಾಬ್ದಾರಿಯನ್ನು ಉತ್ತಮವಾಗಿ ಬಿಂಬಿಸಿದ್ದೀರಿ. ತಮ್ಮನ ಪಾತ್ರವನ್ನು ಓದುಗರ ಕಲ್ಪನೆಗೆ ಬಿಟ್ಟು ಏನೋ ಒಂದು ರೀತಿ ಮುದ ನೀಡಿದ್ದೀರಿ. ಉತ್ತಮ ಪ್ರಯತ್ನ ಹೆಚ್ಚು ಹೆಚ್ಚು ಬರೀರಿ. ಹಾರ್ದಿಕ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
  6. ಕಣ್ಣಮುಂದೆಯೇ ಕಥೆ ನಡೆಯುತ್ತಿರುವಂತೆ ಭಾಸವಾಯಿತು

    ಪ್ರತ್ಯುತ್ತರಅಳಿಸಿ
  7. ನಮಸ್ತೆ ಬಹಳ ಸೊಗಸಾಗಿದೆ . ಹೆಣ್ಣು, ಆಕೆಯ ಗಿಲ್ಟ್ ಟ್ರಿಪ್, ಅದರಿಂದ ಹೊರ ಬರಲು ಶ್ರಮ ಪಡುವ ಬಗ್ಗೆ ತುಂಬಾನೇ ಚೆನ್ನಾಗಿ ಬರೆದಿದೀರಿ . ಅತ್ತೆಯ ತಾಯಿ ಹೃದಯ ಕೂಡ ಇಷ್ಟ ಆಯಿತು.

    ಪ್ರತ್ಯುತ್ತರಅಳಿಸಿ
  8. ಹೆಣ್ಣಿಗೆ ಹೆಣ್ಣು ಬೆಂಬಲವಾಗಿ ನಿಲ್ಲುವುದು ಸುಖ ಸಂಸಾರದ ಸೂತ್ರಗಳಲ್ಲಿ ಒಂದು
    ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  9. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಗಂಡು ಎಂಬ ಭೇದ ಭಾವ ತೋರಿಸಿದೆ ಬೆಳೆಸಿದರೆ ಖಂಡಿತ ನೀವು ಬರೆದ ಬದಲಾವಣೆ ಸಾಧ್ಯ.ಬರೆವಣಿಗೆ ಶೈಲಿ ತುಂಬಾ ಆಪ್ತವಾಗಿದೆ.

    ಪ್ರತ್ಯುತ್ತರಅಳಿಸಿ
  10. ಎಲ್ಲ ಗಂಡುಗಳ ಮನ ಪರಿವರ್ತನೆ ಹೀಗಾದರೆ ಅದೆಷ್ಟು ಚೆನ್ನ ಅಲ್ಲವೆ

    ಪ್ರತ್ಯುತ್ತರಅಳಿಸಿ

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...