ಅಮ್ಮಾ.... ನಾಳೆ ತಿಂಡಿ ಪುಳಿಯೋಗರೆ ತಗೊಂಡು ಬರಬೇಕಂತೆ ಅಂತ ತನ್ನ ಮುದ್ದು ಭಾಷೆಯಲ್ಲಿ ಉಲಿಯುತ್ತಾ, ಓಡುತ್ತಾ ಬಂದ ಅಪ್ಪು. ನಾಳೆ ಶನಿವಾರ; ಇಡ್ಲಿ ಆದರೆ ಬೇಗ ಆಗುತ್ತೆ; ಬೆಳಿಗ್ಗೆ ಎದ್ದು ಇಡ್ಲಿ ಹಿಟ್ಟನ್ನು ಬೇಯಲು ಇಟ್ಟು ಚಟ್ನಿ ಮಾಡಿಬಿಟ್ಟರೆ ಸ್ಕೂಲಿಗೆ ತಯಾರಾದ ಹಾಗೆಯೇ.... ಹೇಗೂ ಅರ್ಧ ದಿನ ಶಾಲೆ; ಅಲ್ಲಿಂದ ಬಂದು ಬಿಸಿಯಾಗಿ ಅಡುಗೆ ಮಾಡಬಹುದು ಅಂತ ಗಡಿಬಿಡಿಯಲ್ಲಿ ಇಡ್ಲಿ ಹಿಟ್ಟನ್ನು ಈಗ ತಾನೇ ತಯಾರು ಮಾಡುತ್ತಿದ್ದ ಸುಮಾಳಿಗೆ, ಮಗನ ಪುಳಿಯೋಗರೆ ತಗೊಂಡು ಬರ್ಬೇಕಂತೆ ಅನ್ನೋ ಮಾತು ಕಿವಿಗೆ ಕಾದ ಸೀಸ ಸುರಿದಂತಾಯಿತು. ಹೂಂ.... ಇನ್ನು ಮತ್ತೆ ನಾಳೆ 4.30 ಕ್ಕಾದ್ರೂ ಏಳಲೇಬೇಕು. ಇಡ್ಲಿ ಜೊತೆಗೇ ಪುಳಿಯೋಗರೆನೂ ಮಾಡ್ಬೇಕು; ಇರ್ಲಿ, ಮಧ್ಯಾಹ್ನ ಊಟಕ್ಕೆ ಅದೇ ಆಗುತ್ತೆ ಅಂತ ಅನ್ಕೊಳ್ತಾ, ಅಲ್ಲ ಅಪ್ಪು, ನಾಳೆ ತಿಂಡಿ ಏನು ತಗೊಂಡು ಬರೋಕೆ ಹೇಳಿದಾರೆ ಅಂತ ಸ್ಕೂಲಿಂದ ಬಂದ ತಕ್ಷಣ ಹೇಳೋದಲ್ವಾ? ಅಂತ ಮಗನನ್ನು ಮುದ್ದು ಮಾಡುತ್ತಾ ಕೇಳಿದಳು ಸುಮ. ಅಮ್ಮಾ ಸ್ಕೂಲಿಂದ ಬಂದ ತಕ್ಷಣ ಆಟ ಆಡೊಕ್ಕೆ ಹೋಗಿದ್ನಲ್ಲಮ್ಮ ಅದೂ ಅಲ್ದೆ ನೀನು ಬಂದಿದ್ದೂ ಲೇಟು ಅಂತ ಮುಗ್ಧತೆಯಿಂದ ಅಮ್ಮನ ಮುಖ ನೋಡುತ್ತಾ ಹೇಳಿದ ಯುಕೆಜಿ ಓದುತ್ತಿದ್ದ ಅಪ್ಪು. ಆಯ್ತು ಸರಿ, ಈಗ ಬೇಗ ಊಟ ಮಾಡು, ನಾಳೆ ಮಾರ್ನಿಂಗ್ ಕ್ಲಾಸ್ ಅಲ್ವಾ? ಬೆಳಿಗ್ಗೆ ಬೇಗ ಏಳ್ಬೇಕು; ವೈಟ್ ಯೂನಿಫಾರಂ ರೆಡಿ ಇದೆ ಅಲ್ವಾ? ಶೂ ಪಾಲಿಷ್ ಆಗಿದ್ಯಾ? ಅಂತ ಕೇಳ್ತಾ ಎಲ್ಲ ತಯಾರಿ ಮುಗಿಸಿ ನಿದ್ರೆಗೆ ಜಾರಿದಳು ಸುಮ.
ಮರುದಿನ ಶನಿವಾರ. ಶಾಲೆ ಮುಗಿಸಿ ಬಂದ ಸುಮ, ಪುಳಿಯೋಗರೆ ಜೊತೆಗೆ, ಮೊಸರನ್ನವನ್ನೂ ತಯಾರಿಸಬೇಕು ಎಂದುಕೊಳ್ಳುತ್ತಾ, ಅರ್ಧ ಲೋಟ ಕಾಫಿ ಕುಡಿದುಬಿಡೋಣ ಎಂದು ಅಡುಗೆ ಮನೆಗೆ ಹೋದರೆ, ಡಿಕಾಕ್ಷನ್ ಸ್ವಲ್ಪವೇ ಇದೆ, ಸಂಜೆಗೆ ಕಾಫಿಪುಡಿ ಇಲ್ಲ; ಅಯ್ಯೋ! ಸಂಜೆ ಇವರ ಸ್ನೇಹಿತರು ಬೇರೆ ಬರ್ತಾರೆ, ಕಾಫಿಪುಡಿ ತರಬೇಕಲ್ಲ; ಇನ್ನು ಸರ್ಕಲ್ ತನಕ ಹೋಗಬೇಕು; ಕುಕ್ಕರ್ ಬೇರೆ ಒಲೆ ಮೇಲೆ ಇದೆ; ಆ ಕಾಫಿಪುಡಿ ಅಂಗಡಿಯವನು 2 ಗಂಟೆಗೆ ಅಂಗಡಿ ಕ್ಲೋಸ್ ಮಾಡಿದರೆ ಇನ್ನು ತೆರೆಯುವುದು ಸಂಜೆ 4.30 ಮೇಲೆಯೇ. ಈಗಲೇ ಹೋಗಬೇಕು; ಹೊಟ್ಟೆ ತಾಳ ಹಾಕುತ್ತಿದೆ ಅಂತೆಲ್ಲ ಯೋಚನೆ ಮಾಡ್ತಾ ಮಾಡ್ತಾ, ಅಪ್ಪುನ ಕಳ್ಸಿಬಿಡೋಣ, ಅವನಿಗೆ ಅಂಗಡಿ ಗೊತ್ತಿದೆ. ಅಂಗಡಿಯವನ ಪರಿಚಯವೂ ಇದೆ. ಎಷ್ಟೋ ಸಲ ನಮ್ಮ ಜೊತೆ ಕಾಫಿಪುಡಿ ತರಲು ಅಂಗಡಿಗೆ ಬಂದಿದ್ದಾನೆ...ಅನ್ನೋ ಯೋಚನೆ ಬರ್ತಿದ್ದ ಹಾಗೇ, ಇನ್ನೂ 5 ವರ್ಷ, ಅವನಿಗೆ ಗೊತ್ತಾಗತ್ತೋ ಇಲ್ವೋ, ನಾನೇ ಹೋಗ್ಲಾ? ಅನ್ನೋ ದ್ವಂದ್ವ ಬೇರೆ... ಕಾಡತೊಡಗಿತು. ಒಂದೂವರೆ ಆಯ್ತು, ಇನ್ನು ಸ್ವಲ್ಪ ಹೊತ್ತಿಗೇ ಅಂಗಡಿ ಮುಚ್ಚಿಬಿಡುತ್ತಾನೆ.... ಮಗನನ್ನೇ ಕಳಿಸಿಬಿಡ್ತೀನಿ, ಅವನು ಬರುವಷ್ಟರಲ್ಲಿ ಅಡುಗೆ ರೆಡಿ ಮಾಡಿಬಿಟ್ರೆ ಬಂದ ಕೂಡಲೇ ಊಟ ಮಾಡ್ಬಹುದು ಅಂತ ಗಟ್ಟಿ ನಿರ್ಧಾರ ಮಾಡಿ, ಅಪ್ಪೂನ ಕರೆದು, 100 ರೂಪಾಯಿ ನೋಟು ಕೊಟ್ಟು ಅಪ್ಪು ಕಾಫಿಪುಡಿ ಅಂಗಡಿ ಗೊತ್ತಲ್ವಾ? ಹೋಗಿ 200ಗ್ರಾಂ ಕಾಫಿಪುಡಿ ತಗೊಂಡು ಬಾ ಅಂತ ಹೇಳೇಬಿಟ್ಳು ಸುಮ;
ಆಯ್ತಮ್ಮ, ಅಂತ ಹೇಳ್ತಾ 100 ರೂಪಾಯಿ ನೋಟು ತಗೊಂಡು ಓಡಿದ ಅಪ್ಪು. ಹೋದ ಏಳೆಂಟು ನಿಮಿಷಗಳಲ್ಲಿ ವಾಪಸ್ ಬಂದ; ತನ್ನ ಪುಟ್ಟ ಪುಟ್ಟ ಕೈಗಳಲ್ಲಿ, ಒಂದರಲ್ಲಿ ಕಾಫಿಪುಡಿಯನ್ನೂ ಇನ್ನೊಂದರಲ್ಲಿ ಚಿಲ್ಲರೆಯನ್ನೂಹಿಡಿದುಕೊಂಡು ಬಂದು, ಅಮ್ಮನಿಗೆ ಕೊಟ್ಟು ಅಮ್ಮಾ ಊಟ ಅಂದ. ಸುಮ ಕಾಫಿಪುಡಿಯನ್ನು ಎತ್ತಿಡುತ್ತಾ ಚಿಲ್ಲರೆ ಎಣಿಸಿದಳು; ಒಂದು ರೂಪಾಯಿ ಕಡಿಮೆ ಇತ್ತು; ಅಪ್ಪೂ ಎಲ್ಲಿ ಬೀಳಿಸಿದೆ? ಒಂದು ರೂಪಾಯಿ ಎನ್ನುತ್ತಾ ಮನೆ ತುಂಬ ನೋಡಿದಳು; ಪುಟ್ಟ ಮಗುವೂ ಗೇಟಿನ ತನಕ ಹೋಗಿ ಎಲ್ಲ ಕಡೆ ನೋಡಿತು. ಒಂದು ರೂಪಾಯಿ ಕಾಣಲಿಲ್ಲ;
ಅಲ್ಲ ಕಂದ ಒಂದು ರೂಪಾಯಿ ಬೀಳಿಸಿಕೊಂಡು ಬಂದಿದ್ಯಲ್ಲ; ಸರಿಯಾಗಿ ತಗೊಂಡು ಬರಬಾರದಾ? ಹೋಗು ನೋಡ್ಕೊಂಡು ಬಾ; ದಾರಿಯಲ್ಲಿ ಬಿದ್ದಿರಬಹುದು; ಒಂದು ರೂಪಾಯಿ ತಗೊಂಡು ಬರ್ಲೇಬೇಕು ನೀನು, ಆಗಲೇ ಊಟ ಅಂತ ತನ್ನ ಪಾಠ ಮಾಡುವ ಅವಕಾಶವನ್ನೂ, ಶಿಕ್ಷಿಸುವ ಅವಕಾಶವನ್ನೂ ಏಕಕಾಲಕ್ಕೆ ಬಳಸಿಕೊಂಡಳು ಸುಮ. ಹೊರಗೆ ರಣಬಿಸಿಲು. ಅಪ್ಪೂಗೆ ಅದೇನನ್ನಿಸಿತೋ ಹೊರಟ..... ಒಂದು ರೂಪಾಯಿ ಅಂತ ಈಗ ಬಿಟ್ರೆ ಅದರ ಬೆಲೆ ಗೊತ್ತಾಗೋದಾದ್ರೂ ಹೇಗೆ? ಹೋಗಿ ತಗೊಂಡ್ಬರ್ಲಿ; ಇಲ್ಲೇ ಎಲ್ಲೋ ಬೀಳ್ಸಿರ್ತಾನೆ ಅಂತ ಸುಮ ತನ್ನ ಕೆಲಸದ ಕಡೆ ಗಮನ ಕೊಟ್ಟಳು. ಆ ಕ್ಷಣದಲ್ಲಿ ಆಕೆಗೆ ಮಗನ ವಯಸ್ಸು, ಆತನು ತೆಗೆದುಕೊಳ್ಳಬಹುದಾದ ನಿರ್ಧಾರ ಯಾವುದರ ಕಡೆಗೂ ಯೋಚನೆಯಿರಲಿಲ್ಲ.
ಐದು ನಿಮಿಷವಾಯಿತು; ಹತ್ತು ನಿಮಿಷವಾಯಿತು; ಅಪ್ಪು ಬರಲಿಲ್ಲ; ಮೊಸರನ್ನವೂ ಆಯಿತು.... ಬೆಳಗಿನ ಪಾತ್ರೆಗಳನ್ನು ತೊಳೆದದ್ದೂ ಆಯಿತು; ಅಪ್ಪುವಿನ ಆಗಮನವಾಗಲಿಲ್ಲ.....ಸುಮಳಿಗೆ ಎದೆ ಹೊಡೆದುಕೊಳ್ಳಲು ಪ್ರಾರಂಭಿಸಿತು; ಈ ಕಡೆ ಆ ಕಡೆ ತಿರುಗಾಡಿದಳು; ಹೊಟ್ಟೆ ಹಸಿವಿನ ಜೊತೆಗೆ ಆತಂಕವೂ ಸೇರಿಕೊಂಡು ಸಣ್ಣಗೆ ತಲೆ ಸಿಡಿಯಲಾರಂಭಿಸಿತು. ಒಂದು ನಿಮಿಷ.. ತಾನೇ ಗಾಡಿಯಲ್ಲಿ ಹೋಗಿ ಕಾಫಿಪುಡಿ ತರಬಾರದಿತ್ತಾ? 5 ನಿಮಿಷ ಉಳಿಸಲು ಹೋಗಿ ಎಂತಹ ಅನಾಹುತವಾಯಿತು? ಈಗ ಮಗ ಇನ್ನೂ ಬರಲಿಲ್ಲವಲ್ಲ; ಏನಾಗಿರಬಹುದು? ಅಂಗಡಿಯ ಹತ್ತಿರವೇ ಇದ್ದಾನೋ? ದುಡ್ಡು ಹುಡುಕುತ್ತಾ ಅಲ್ಲೇ ನಿಂತನೋ? ಯಾರಾದರೂ ಆಟಕ್ಕೆ ಕರೆದರೋ? ಬಸ್ಸಿನಲ್ಲಿ ಹೋಗುತ್ತೇನೆ ಎಂದು ಬಸ್ ಹತ್ತಿದನೋ? ಹಣ್ಣಿನ ಗಾಡಿಗಳ ಬಳಿ ನಿಂತನೋ? ಹಸಿವೆಯಾಗುತ್ತಿದೆ ಎನ್ನುತ್ತಿದ್ದ... ಶ್ರೀರಾಮ....... ಪುಟ್ಟ ಎಲ್ಲಿ ಹೋಗಿರಬಹುದು? ಛೇ! ನಾನೆಂಥಾ ಪಾಪಿ! ತಾನು ಶಿಸ್ತಿನ ಸಿಪಾಯಿ, ಎಲ್ಲರಿಗಿಂತ ವಿಭಿನ್ನವಾಗಿ ಮಗನನ್ನು ಬೆಳೆಸಿದ್ದೇನೆ... ಅವನಿಗೆ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವನ್ನೂ ಕಲಿಸಿದ್ದೇನೆ ಎಂದು ಹೇಳಿಸಿಕೊಳ್ಳುವ ತವಕದಲ್ಲಿ ಹೀಗಾಯಿತೇ? ತನ್ನ ಮಗ ಎಲ್ಲವನ್ನೂ ಮಾಡಬಲ್ಲ ಎಂಬ ತಪ್ಪು ಅಂದಾಜು ಇದಕ್ಕೆ ಕಾರಣವಾಯಿತೇ? 5 ವರ್ಷದ ಮಗುವನ್ನು 13 ವರ್ಷದ ಮಗುವಂತೆ ನೋಡಿದ್ದಕ್ಕೇ ಹೀಗಾಯಿತೇ? ಯಾರಿಗೆ ಯಾವ ಕೆಲಸವನ್ನು ಹೇಳಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಾಯಿತೇ? ಅಯ್ಯೋ ಕರ್ಮ!! ಇನ್ನೂ 5 ವರ್ಷದ ಹಸುಳೆ, ಕೇವಲ ಒಂದು ರೂಪಾಯಿ ಚಿಲ್ಲರೆಗೋಸ್ಕರ ಆ ಮಗುವನ್ನು ಮತ್ತೆ ವಾಪಸ್ ಏಕೆ ಕಳಿಸಬೇಕಿತ್ತು? ಅದೂ ಕೂಡ, ಜೇಬು ಇರುವ ಪ್ಯಾಂಟನ್ನಾಗಲೀ, ಶರ್ಟನ್ನಾಗಲೀ ಅವನು ಹಾಕಿರಲಿಲ್ಲ; ಆ ಪುಟ್ಟ ಕೈಗಳಲ್ಲಿ ಅಷ್ಟನ್ನು ಹಿಡಿದುಕೊಂಡು ಬಂದದ್ದೇ ಹೆಚ್ಚು. ಇನ್ನು ಮೇಲೆ ಹೀಗೆ ಮಾಡಬೇಡ ಎಂದು ಹೇಳಿದ್ದರೆ ಮುಗಿಯುತ್ತಿರಲಿಲ್ಲವೇ? ವಾಪಸ್ ಏಕೆ ಕಳಿಸಿದ್ದು? ಮನೆಯವರಿಗೆ ಏನು ಹೇಳಲಿ? ಯಾರಿಗೆ ಫೋನ್ ಮಾಡಲಿ? ಇಷ್ಟೆಲ್ಲ ಆಲೋಚನೆಗಳು ಕೇವಲ ಅರ್ಧ ನಿಮಿಷದಲ್ಲಿ ಸುಮಳ ತಲೆಯಲ್ಲಿ ಹಾದು ಹೋದವು. ಅಬ್ಬಬ್ಬಾ ದೇವರೇ ಕಾಪಾಡು, ಮಗುವಿಗೆ ಏನೂ ಆಗದಿರಲಿ ಎಂದು ಮನಸ್ಸು ದೇವರನ್ನು ನೆನೆಯಿತು. ಸಂಕಟ ಬಂದಾಗ ವೆಂಕಟರಮಣ ಎಂಬುವುದು ಸತ್ಯ ತಾನೇ?
ಕೂಡಲೇ ಮನೆಗೆ ಬೀಗ ಹಾಕಿ, ಸರ್ಕಲ್ ತನಕ ಹೋಗಿ ನೋಡಿಕೊಂಡು ಬರೋಣ ಅಂತ ಹೊರಟಳು. ಗೇಟು ದಾಟಿ, ಮನೆಯಿಂದ ಎಡಗಡೆಗೆ ತಿರುಗಿ, ಮತ್ತೆ ಎಡಕ್ಕೆ ಧಾವಿಸಬೇಕು ಎನ್ನುವಷ್ಟರಲ್ಲಿ ಎದುರುಗಡೆ ಮನೆಯವರು, ನೋಡಿ ಸುಮ ನಿಮ್ಮ ಮಗ ಆಗಿನಿಂದ ಈ ರಸ್ತೆಯ ಪ್ರತಿ ಮನೆಗೂ ಹೋಗಿ ಹೋಗಿ ಬರುತ್ತಿದ್ದಾನೆ ಯಾಕೆ ನೀವೇನಾದರೂ ಹೇಳಿ ಕಳಿಸಿದ್ರಾ? ಎಂದು ಕೇಳುವುದಕ್ಕೂ, ರಸ್ತೆಯ ಮೂಲೆಯಲ್ಲಿರುವ ಸ್ಟುಡಿಯೋದವರು ಮಗುವಿನ ಜೊತೆಯಲ್ಲಿ ಬರುವುದಕ್ಕೂ ಸರಿ ಹೋಯಿತು. ಮಗನನ್ನು ನೋಡಿದ್ದೇ ನೋಡಿದ್ದು ಸುಮಳಿಗೆ ಹೋದ ಜೀವ ಬಂದಂತಾಯ್ತು; ದೇವರಿಗೆ ಸಾವಿರ ವಂದನೆಗಳನ್ನು ಸಲ್ಲಿಸುತ್ತಾ ಓಡಿಹೋಗಿ ಮಗುವನ್ನು ತಬ್ಬಿಕೊಂಡಳು. ಮಗುವಿನ ಮುಖ ಕೆಂಪಾಗಿತ್ತು, ಆದರೆ ತನ್ನ ಪುಟ್ಟ ಕೈಗಳನ್ನು ಚಾಚುತ್ತಾ ತಗೋ ನಿನ್ನ ಒಂದು ರೂಪಾಯಿ ಎಂದು ಹೇಳುತ್ತಾ, ಅಮ್ಮಾ ಊಟ ಹಾಕ್ತೀಯಾ ತಾನೇ ಎಂದು ಕೇಳಿತು.
ಸ್ಟುಡಿಯೋದವರು, ಮೇಡಂ ಇವನು ನಿಮ್ಮ ಮಗ ತಾನೇ? ಯಾಕೆ ಮೇಡಂ ಇಷ್ಟು ಚಿಕ್ಕ ಹುಡುಗನನ್ನು ಅಂಗಡಿಗೆ ಕಳ್ಸಿದ್ರಿ? ಅದೇನೋ ಒಂದು ರೂಪಾಯಿ ತರೋಕೆ ಹೇಳಿದ್ರಂತೆ? ಇವನು ದಾರಿಯಲ್ಲಿ ನೋಡಿದ್ದಾನೆ. ಎಲ್ಲೂ ಒಂದು ರೂಪಾಯಿ ಸಿಗಲಿಲ್ಲ... ಅದಕ್ಕೇ ಪ್ರತೀ ಮನೆಗೂ ಹೋಗಿ ಆಂಟಿ ನಂಗೆ ಒಂದು ರೂಪಾಯಿ ಕೊಡಿ, ತರದಿದ್ರೆ ಅಮ್ಮ ಬೈತಾಳೆ ಅಂತ ಹೇಳಿದ್ದಾನೆ. ಎಲ್ರೂ, ಏನೋ ಪುಟ್ಟ ನೋಡೋಕ್ಕೆ ಇಷ್ಟು ಚೆನ್ನಾಗಿ ಇದ್ಯ. ದುಡ್ಡು ಬೇರೆ ಕೇಳ್ತಾ ಇದ್ಯಾ? ಹಾಗೆಲ್ಲಾ ಕೇಳ್ಬಾರ್ದು ಅಂತ ಹೇಳಿ ಕಳ್ಸಿದಾರೆ; ನಮ್ಮ ಸ್ಟುಡಿಯೋಗೂ ಬಂದು ಹೀಗೇ ಕೇಳಿದ; ನನಗೆ ನಿಮ್ಮ ಜೊತೆ ಮಗುವನ್ನು ನೋಡಿದ ನೆನಪು. ಮಗು ಬೇರೆ ಎಲ್ಲೂ ಹೋಗ್ಬಾರ್ದು ಅಂತ ಈಗ ಕೊಟ್ಟಿರ್ತೀನಪ್ಪ; ಆದ್ರೆ ಈ ಥರ ಮನೆ ಮನೆಗೂ ಹೋಗಿ ದುಡ್ಡು ಕೇಳ್ಬಾರ್ದು ಅಂತ ನಾನೇ ಒಂದು ರೂಪಾಯಿ ಕೊಟ್ಟೆ ಮೇಡಂ. ನೀವ್ಯಾಕೆ ಹೀಗ್ಮಾಡಿದ್ರಿ ಮೇಡಂ? ಅಂತ ಕೇಳಿದರು.
ಆ ಕ್ಷಣವೇ ಆಕೆಗೆ ನಿಂತ ನೆಲ ಕುಸಿಯಬಾರದೇ ಅನಿಸಿತ್ತು. ಛೇ ನಾನೊಂದು ವಿಧದಲ್ಲಿ ಯೋಚನೆ ಮಾಡಿದರೆ ಅದು ಇನ್ನೊಂದು ರೀತಿಯಾಯಿತಲ್ಲ . ತಾನೊಂದು ಬಗೆದರೆ, ದೈವವೊಂದು ಬಗೆಯಿತಲ್ಲಾ... ಒಂದು ರೂಪಾಯಿಯ ಬೆಲೆಯನ್ನು ಮಗನಿಗೆ ತಿಳಿಸಲು ಹೋಗಿ ಮಗನ ಬೆಲೆಯೇ ತನಗೆ ತಿಳಿದುಬಿಟ್ಟಿತಲ್ಲಾ.... ಎಂದೆನಿಸಿತು. ಅತಿಯಾದ ಶಿಸ್ತನ್ನು ಹೇರಿದಾಗ ಉಂಟಾಗಬಹುದಾದ ಪರಿಣಾಮಗಳನ್ನು ನೆನೆದು ಮನ ನಡುಗಿತು. ಆ ಒಂದು ರೂಪಾಯಿಯನ್ನು ಅವರಿಗೆ ಹಿಂದಿರುಗಿಸಿ, ಅವರಿಗೆ ಧನ್ಯವಾದಗಳನ್ನು ಹೇಳಿ ಮಗನನ್ನು ಮನೆಗೆ ಕರೆದುಕೊಂಡು ಬಂದು ಮೊದಲು ಊಟ ಹಾಕಿದಳು ಸುಮ. ಯಾಕೋ ಅಪ್ಪು ಹೀಗೆ ಮಾಡಿದೆ? ಅಂದ್ರೆ.... ಅಮ್ಮಾ, ನೀನು ಒಂದು ರೂಪಾಯಿ ತರ್ದೇ ಇದ್ರೆ ಊಟ ಹಾಕಲ್ಲ ಅಂದ್ಯಲ್ಲ ಅದಕ್ಕೇ ಹೀಗ್ಮಾಡಿದೆ ಅಮ್ಮಾ. ತಪ್ಪೇನಮ್ಮ? ಅಂತ ತನ್ನ ಬಟ್ಟಲು ಕಂಗಳನ್ನು ಅರಳಿಸಿಕೊಂಡು ಅಮ್ಮನ ಮುಖವನ್ನೇ ನೋಡಿಕೊಂಡು ಕೇಳಿದ ಅಪ್ಪು.
ಬಿಕ್ಕಟ್ಟಿನ ಸಂದರ್ಭಗಳಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಸಮಸ್ಯೆಗೆ ಪರಿಹಾರವನ್ನು ನಾವು ಕಂಡುಕೊಳ್ಳುತ್ತೇವೆ; ಅದು ಮಗುವಾಗಿರಲಿ; ದೊಡ್ಡವರಾಗಿರಲಿ; ಅಲ್ಲವೇ? ಮಗು ಯಾವ ವಿಜ್ಞಾನವನ್ನು ಓದಿತ್ತು? ಯಾವ ಮನೋವಿಜ್ಞಾನವನ್ನು ಅಭ್ಯಾಸ ಮಾಡಿತ್ತು? ಸಮಸ್ಯೆಯನ್ನು ಬಿಡಿಸುವ ವಿಧಾನದ ಬಗ್ಗೆ ಅದಕ್ಕೇನು ಗೊತ್ತಿತ್ತು? ಮಗು ಎದುರಿಸಿದ ಸನ್ನಿವೇಶದಲ್ಲಿ ಅದು ಕಂಡುಕೊಂಡ ಪರಿಹಾರ ನಮ್ಮನ್ನು ಬೆರಗುಗೊಳಿಸುತ್ತದೆ ಅಲ್ಲವೇ? ಯಾವಾಗಲೂ ನಾವು ಯೋಚಿಸಿದಂತೆ ಅಥವಾ ಯೋಜಿಸಿದಂತೆ ನಡೆಯುವುದಿಲ್ಲ ಸರಿಯೇ? ನಾವು ಅಂದುಕೊಂಡಂತೆಯೇ ನಮ್ಮ ಮಕ್ಕಳು ಯೋಚಿಸಬೇಕೆನ್ನುವುದು ನಮ್ಮ ಮೂರ್ಖತನ. ನಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರುವುದೂ ನಮ್ಮ ದಡ್ಡತನ.... ನಮ್ಮ ಆಸೆ ಆಕಾಂಕ್ಷೆಗಳನ್ನು ನಮ್ಮ ಮಕ್ಕಳ ಮೇಲೆ ಹೊರಿಸುವುದು ನಮ್ಮ ಹುಚ್ಚತನ. ನಮ್ಮ ಮಕ್ಕಳ ಮನಸ್ಸು ಬಲು ಸೂಕ್ಷ್ಮ. ಅವರ ಮನಸ್ಸು ಯಾವಾಗ ಹೇಗೆ ವರ್ತಿಸುತ್ತಿರುತ್ತದೆಯೋ ಯಾರು ಬಲ್ಲರು? ಹೀಗೇ ಮಾಡಬೇಕು ಹಾಗೇ ಇರಬೇಕು ಎಂದು ಅವರ ಮೇಲೆ ನಿರ್ಬಂಧಗಳನ್ನು ಹಾಕುವುದು ಅವರನ್ನು ಬೇರೆ ರೀತಿ ಯೋಚಿಸುವಂತೆ ಮಾಡುತ್ತದೆಯಲ್ಲವೇ? ನಮ್ಮ ಅನುಭವದಿಂದ ಮಾತ್ರ ನಾವು ಮಕ್ಕಳ ಮನಸ್ಸಿನ ಆಳಕ್ಕೆ ಇಳಿಯಬಲ್ಲೆವು. ನಮ್ಮ ವೃತ್ತಿಯ ನೆರಳುಗಳನ್ನು ಅವರ ಮೇಲೆ ಯಾವಾಗಲೂ ಬೀಳುವಂತೆ ಮಾಡಬಾರದು ಅಲ್ಲವೇ? ನಾವು ನಮ್ಮ ಮಕ್ಕಳಿಗಿಂತ ದೊಡ್ಡವರು; ಮಕ್ಕಳಿಗೇನು ತಿಳಿಯುತ್ತದೆ? ಎಂಬ ಭಾವನೆ ಯಾವಾಗಲೂ ಇರಬಾರದು ಹೌದೇ? ನಮಗಿಂತ ವಿಭಿನ್ನವಾಗಿ ಯೋಚಿಸುವ ಮಕ್ಕಳು ಖಂಡಿತ ಇರುತ್ತಾರೆ. ಆದರೆ ಅದನ್ನು ಜೀರ್ಣಗೊಳಿಸಿಕೊಳ್ಳುವ ಶಕ್ತಿ ನಮಗೆ ಇರಬೇಕಷ್ಟೆ.....ಅಲ್ಲದೇ ಆ ಆಲೋಚನೆಗಳು ಸರಿಯೇ, ತಪ್ಪೇ ಎಂದು ನಿರ್ಧರಿಸುವಷ್ಟು ಸಾಮರ್ಥ್ಯವೂ..... ಮತ್ತು ವಿಭಿನ್ನವಾಗಿ ಯೋಚಿಸುವ ಮಕ್ಕಳ ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಸೌಜನ್ಯವೂ....... ಇದನ್ನು ಪೋಷಕರೂ ಮತ್ತು ವಿಶೇಷವಾಗಿ ಶಿಕ್ಷಕರೂ ಅರಿತುಕೊಳ್ಳುವ ಅಗತ್ಯವಿದೆಯಲ್ಲವೇ?
ಅಂದ ಹಾಗೇ ಪ್ರಿಯ ಓದುಗರೇ! ಸುಮಳ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ಮಗನಿಗೆ ಏನುತ್ತರ ಹೇಳುತ್ತಿದ್ದಿರಿ?
ತುಂಬಾ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ👌
ಪ್ರತ್ಯುತ್ತರಅಳಿಸಿKannige kattida haage ide. Athee shistu na parinama naija vagi bandide. Well written👏🏻👏🏻👏🏻
ಪ್ರತ್ಯುತ್ತರಅಳಿಸಿಉರಿಬಿಸಿಲಲ್ಲಿ ಮಗುವನ್ನು ಕಳಿಸುತ್ಹಿರಲಿಲ್ಲ .ಒನ್ ರು ಹೊಹಿತು ಎನ್ನತಿದ್ದೆ.ಮಗು ಎಲ್ಲಿಯಾದರೂ ಹೋಗಿದ್ದರೆ ಇoದು ಅಪ್ಪು ಇರುತಿರಲಿಲ್ಲ.ಸ್ಟೋರಿ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಬಹುಶಃ ಒಂದು ಏಟು ಹೊಡೆದು ಬುದ್ದಿ ಹೇಳಿ ಊಟ ಹಾಕುತ್ತಿದ್ದೆ
ಪ್ರತ್ಯುತ್ತರಅಳಿಸಿEager to read your next article
ಪ್ರತ್ಯುತ್ತರಅಳಿಸಿನಾನು ಖಂಡಿತ ಮಗುವನ್ನು ಹಾಗೆ ಕಲಿಸುತ್ತಿರಲಿಲ್ಲ ಹಾಗೂ ಅದು ತಾಯಿಯ trust issues ಸಹ ಇರಬಹುದು alve?
ಪ್ರತ್ಯುತ್ತರಅಳಿಸಿSuper..madam....i lv to read your articles....
ಪ್ರತ್ಯುತ್ತರಅಳಿಸಿ🙏🤝
ಅಳಿಸಿಕಥೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ.ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಅಭಿಪ್ರಾಯ ಕೇಳಿದ್ದೀರಿ. ಸುಮ ನಾನಾಗಿದ್ದರೆ ಮಗುವನ್ನು ಹಾಗೆ ನಡೆಸಿಕೊಳ್ಳುತ್ತಿರಲಿಲ್ಲ. ಅಷ್ಟು ಚಿಕ್ಕ ಮಗುವನ್ನು ಅಂಗಡಿಗೆ ಕಳುಹಿಸಿದ್ದು ತಪ್ಪು.
ಘಟನೆಯಲ್ಲಿ ಕಠಿಣ ಶಿಕ್ಷೆಯ ವಿಚಾರ ಪ್ರಸ್ತಾಪಿಸಿದ್ದೀರಿ. ಯಾವುದೂ ಅತಿ ಆದರೆ ವಿಷ. ಶಿಕ್ಷೆ ತಕ್ಕಮಟ್ಟಿಗೆ ಇರಬೇಕು.
ಮಕ್ಕಳ ಆಲೋಚನೆ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಒಪ್ಪುವೆ ತಲೆಮಾರಿನಿಂದ ತಲೆಮಾರಿಗೆ ಅಂತರ ಇದ್ದೇ ಇದೆ.ವಿವೇಚನೆ ಯಾವಾಗಲೂ ಜೊತೆಯಲ್ಲಿ ಇರಬೇಕು ಅಲ್ವಾ...
ಮತ್ತೊಮ್ಮೆ ನೀತಿಯುತ ಕಥೆ ಕೊಟ್ಟಿದ್ದಕ್ಕೆ ಧನ್ಯವಾದಗಳು. ಮುಂದಿನ ಕಥೆಯ ನಿರೀಕ್ಷೆಯಲ್ಲಿ...
ವಂದನೆಗಳು 🙏
ಸಮಸ್ಯೆಯ ಸನ್ನಿವೇಶದಲ್ಲಿ ಮಗು ತೆಗೆದುಕೊಂಡ ನಿರ್ಣಯವೇ ಬಹು ಅಚ್ಚರಿಯ ವಿಷಯ. ಅಳುತ್ತಾ ವಾಪಸ್ ಬರಬಹುದಿತ್ತು ಅಥವಾ ದುಡ್ಡು ಸಿಗಲಿಲ್ಲ ಅನ್ನಬಹುದಿತ್ತು. ಆದರೆ ಈ ನಿರ್ಧಾರ ಹೇಗೆ ಅದರ ಮನಸ್ಸಿಗೆ ಬಂದಿತೋ??
ಅಳಿಸಿಪೋಷಕರಾಗಿ ನಾವು ಎಷ್ಟು ಎಚ್ಚರಿಕೆ ವಹಿಸಬೇಕು ಅಲ್ಲವೇ?
ಮತ್ತೊಮ್ಮೆ ಧನ್ಯವಾದಗಳು ಸರ್
ಅಂಗಡಿಗೆ ನಾವು ಹೋದಾಗಲೆಲ್ಲ ಅವನನ್ನೂ ಕರೆದುಕೊಂಡು ಹೋಗಿ ಅಭ್ಯಾಸ ಮಾಡಿಸಿ ಜವಾಬ್ದಾರಿಗಳನ್ನು ಕಲಿಸುವುದು ಸೂಕ್ತ.
ಪ್ರತ್ಯುತ್ತರಅಳಿಸಿಐದು ವರ್ಷವಾಗಲಿ ಹತ್ತು ವರ್ಷವಾಗಿಲಿ.
ಸಾಮಾನ್ಯವಾಗಿ ಬಹುತೇಕ ಜನರು ವರ್ತಿಸುವ ರೀತಿ ಹಾಗೆಯೇ. ಮಕ್ಕಳು ತಪ್ಪುಮಾಡಿದಾಗ ತಕ್ಷಣ ಹಿಂದೆ ಮುಂದೆ ಯೋಚಿಸದೇ ಸಿಕ್ಕಿದ್ದರಲ್ಲಿ ಬಡಿಯುವುದು. ಆ ನಂತರ ಅಯ್ಯೋ ಹೊಡೆದು ಶಿಕ್ಷಿಸಿದರೆ ನಷ್ಟ ಭರಿಸಬಹುದೇ ಎಂದು ಪಶ್ಛಾತ್ತಾಪ ಪಡುವುದು ಇದೇ ರೀತಿ ನಡೆಯುತ್ತದೆ. ಘಟನೆಯ ನಿರೂಪಣೆ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಪುಳಿಯೋಗರೆ ಖಾರ ಜಾಸ್ತಿ ಆಯ್ತು ಮೇಡಂ!!!
ಪ್ರತ್ಯುತ್ತರಅಳಿಸಿವಿಭಿನ್ನ ಆಲೋಚನೆಯ ಮಗು,ವಿಭಿನ್ನ ಬರಹ.
ಹೀಗೆ ಬರೆಯುತ್ತಿರಿ.
ಮಗು ವಾಪಸ್ ಬಂದಿದ್ದೇ ಸಿಹಿ!!
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏🙏 ಮೇಡಮ್
ಪ್ರಿಯ ಶಾರದ
ಪ್ರತ್ಯುತ್ತರಅಳಿಸಿಹಿಂದೆ ನಾವೆಲ್ಲ ಬಾಲ್ಯದಲ್ಲಿ ಎನಾದರೂ ವಸ್ತು,ಹಣ ಕಳೆದುಕೊಂಡರೆ, ಮುರಿದು ಕೊಂಡರೆ ಇಂತಹ ಶಿಕ್ಷೆಯನ್ನೇ ಪೋಷಕರು ನೀಡುತ್ತಾ ಇದ್ದರು. ಕಳೆದುಕೊಂಡದ್ದನ್ನು ಹುಡುಕಿ ತರುವವರೆಗೆ ಬಿಡುತ್ತಾ ಇರಲಿಲ್ಲ. ಆಗ ಜನವಸತಿಯ ಪರಿಧಿ ತುಂಬಾ ವಿಸ್ತಾರವಾಗಿರಲಿಲ್ಲ, ಮಕ್ಕಳು ಎಲ್ಲಿ ಹೋದರೂ ಹಿಂತಿರುಗಿ ಬರುತ್ತಾರೆ, ಬೇರೆ ಉಪಾಯಗಳ ಮೂಲಕ ಶಿಕ್ಷೆ ತಪ್ಪಿಸಿಕೊಳ್ಳುತ್ತಿದ್ದರು..ಬಿಕ್ಷೆ ಬೇಡುವುದು ಅಪರಾಧ ಎಂಬ ಮನೋಭಾವ ನಮ್ಮಲ್ಲಿ ಬೆಳೆದಿರುತ್ತಿತ್ತು, ಹಾಗಾಗಿ ಅಂತಹ ಪರ್ಯಾಲೋಚನೆಗೆ ಹೋಗುತ್ತಿರಲಿಲ್ಲ.ಪೋಷಕರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಆದರೆ ಇಂದಿನ ಪರಿಸ್ಥಿತಿ ಭಿನ್ನವಾಗಿದೆ ತಹ ಆಲೋಚನೆಗಳಿಗೆ ಮಾಧ್ಯಮ ಸಹ ಪ್ರಭಾವ ಭೀರುತ್ತಿದೆ.ಪೋಷಕರು ಸಹ ಇಂತಹ ಶಿಕ್ಷೆ ನೀಡಲು ಹೆದರುತ್ತಾರೆ.
ಹೌದು ಮೇಡಮ್. ಇಂದು ಶಿಕ್ಷೆ ಕೊಡುವ ಮುನ್ನ ಹಲವು ಬಾರಿ ಯೋಚಿಸಬೇಕು.
ಅಳಿಸಿಧನ್ಯವಾದಗಳು 🙏
ಮನಸೂರೆಗೊಳ್ಳುವ ಲೇಖನ.ವೈಚಾರಿಕತೆ ಮೈದಾಳಿದೆ.ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಅಳಿಸಿನಿಮ್ಮ ಅನುಭವಗಳಿಗೆ ಅಕ್ಷರಗಳ ರೂಪವನ್ನು ನೀಡಿರುವುದು ಅದ್ಭುತವಾಗಿದೆ. ಇದು ನಮ್ಮ ಆಲೋಚನೆಗಳು, ಮಕ್ಕಳ ಆಲೋಚನೆಗಳು ವಿಭಿನ್ನವಾಗಿರುತ್ತವೆ ಎಂಬುದನ್ನು ತಿಳಿಸುತ್ತದೆ.
ಪ್ರತ್ಯುತ್ತರಅಳಿಸಿಹೌದು ಮೇಡಮ್. ಧನ್ಯವಾದಗಳು 🙏
ಪ್ರತ್ಯುತ್ತರಅಳಿಸಿನಿಜ ಇಂದಿನ ಕಾಲದಲ್ಲಿ ಮಕ್ಕಳಿಗೆ ಎರಡು ಮಾತು ಹೇಳಿದರೆ ಹೆಚ್ಚು ಒಂದು ಮಾತನಾಡಿದರೆ ಕಡಿಮೆ ಎನಿಸುತ್ತದೆ. ಹಿಂದಿನ ಕಾಲದವರು 10 ಮಕ್ಕಳನ್ನಾದರೂ ಸುಲಭವಾಗಿ ಸಾಕುತ್ತಿದ್ದರು.ಆದರೆ ಈಗ ಒಂದು ಮಗುವನ್ನೇ ಸತ್ಪ್ರಜೆಯಾಗಿ ಮಾಡುವುದು ಸವಾಲಾಗಿದೆ
ಪ್ರತ್ಯುತ್ತರಅಳಿಸಿಹೌದು. ಪೋಷಕರಾಗಿ ನಾವು ಎಷ್ಟು ಎಚ್ಚರದಿಂದ ಇರಬೇಕು ಅಲ್ವಾ? ಧನ್ಯವಾದಗಳು
ಪ್ರತ್ಯುತ್ತರಅಳಿಸಿರುಪಾಯಿ ಮೌಲ್ಯ ತಿಳಿಸಬೇಕು ಹೌದು. ಈಗಿನ ಕಾಲದಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ
ಪ್ರತ್ಯುತ್ತರಅಳಿಸಿNicely narrated
I remember the days when my children asked for the items to be taken for the tiffin box to the school
Those days were golden days. Thank you very much ಜ್ಯೋತಿ
ಅಳಿಸಿ