ಕಾರ್ ಡ್ರೈವಿಂಗ್ ಕಲಿಸಿದ ಜೀವನ ಪಾಠಗಳು
ಅಬ್ಬಾ ಬೆನ್ನು ನೋವು, ಸುಮ್ಮನೆ ಮಲಗಿ ಬಿಡೋಣ ಅನ್ನಿಸುತ್ತಿದೆ; ಇನ್ನು ನಾಳೆ ವಾಕಿಂಗ್ ಹೋಗಲು ಆಗಲ್ಲ; ನಿಂತು ಪಾತ್ರೆ ತೊಳೆಯಲು ಅಸಾಧ್ಯ; ಮತ್ತು ನಾಳೆ ಆಕ್ಟಿವಾ ಹತ್ತಿ ಕೆಲಸಕ್ಕೆ ಹೋಗುವುದಂತೂ ದೂರದ ಮಾತು; ಅಲ್ಲದೆ ನಿಂತುಕೊಂಡು ೬ ಪಿರಿಯೆಡ್ ಪಾಠ ಮಾಡುವುದನ್ನು ನೆನೆಸಿಕೊಂಡೇ ಮೈ ಜುಮ್ಮೆಂದಿತು. ೪೦ ದಾಟಿದ ಮೇಲೆ ಈ ಬೆನ್ನುನೋವಿನ ಪುರಾಣ ಹೆಚ್ಚಾಗುತ್ತಲೇ ಹೋಯಿತು; ವಿಶ್ರಾಂತಿ ತೆಗೆದುಕೊಂಡಾಗ ಕಡಿಮೆಯಾಗುವುದು, ಹೆಚ್ಚು ಕೆಲಸ ಮಾಡಿದಾಗ ಮತ್ತೆ ನೋವು ಕಾಣಿಸಿಕೊಳ್ಳುವುದು ಇದು ಮುಂದುವರಿಯುತ್ತಲೇ ಹೋಯಿತು. ಮನೆಯಲ್ಲಿ ಎಲ್ಲರೂ ನೀನು್ ಟೂ ವೀಲರ್ ಓಡಿಸುವುದನ್ನು ಬಿಟ್ಟುಬಿಡು, ಅದರಿಂದಲೇ ನಿನಗೆ ಬೆನ್ನು ನೋವು ಎನ್ನಲಾರಂಭಿಸಿದರು; ಅಯ್ಯೋ ನನ್ನ ಗಾಡಿಯನ್ನು ಬಿಟ್ಟುಬಿಡುವುದೇ????
ನನಗೆ ಬೇಕಾದಾಗ ಎಲ್ಲಿಗೆ ಬೇಕೆಂದರೆ ಅಲ್ಲಿಗೆ ಹೋಗಲು, ಸಮಯಕ್ಕೆ ಸರಿಯಾಗಿ ನನ್ನ ಕಾರ್ಯಸ್ಥಾನವನ್ನು ತಲುಪಲು, ಮನೆ ಬಿಡುವುದು ೫ ನಿಮಿಷ ತಡವಾದರೂ, ರಸ್ತೆಯಲ್ಲಿ ಸ್ವಲ್ಪ ವೇಗವಾಗಿ ಹೋಗಿ ನನ್ನ ಗಮ್ಯಸ್ಥಾನವನ್ನು ತಲುಪಲು, ಎಣಿಸಿದ ತಕ್ಷಣ ಬ್ಯಾಂಕ್, ಪೋಸ್ಟ್ ಆಫೀಸ್, ಅಂಗಡಿಗಳಿಗೆ ಹೋಗಿ ನನ್ನ ಕೆಲಸ ಮುಗಿಸಲು, ಸಂದಿಗೊಂದಿಗಳಲ್ಲಿ ಗಾಡಿಯನ್ನು ನುಗ್ಗಿಸಿ, ಮುಖ್ಯರಸ್ತೆಯ ಟ್ರಾಫಿಕ್ ಕಿರಿಕಿರಿಗಳನ್ನು ತಪ್ಪಿಸಿಕೊಳ್ಳಲು, ಮನೆಗೆ ಅತಿಥಿಗಳು ಬಂದಾಗ ಅವರನ್ನು ಬಸ್ ಸ್ಟಾಂಡಿಗೆ ಬಿಡಲು ಮತ್ತು ಅಲ್ಲಿಂದ ಅವರನ್ನು ಕರೆದುಕೊಂಡು ಬರಲು, ಮಕ್ಕಳನ್ನು ಅವರ ಶಾಲೆಗೆ, ಡ್ರಾಯಿಂಗ್ ಕ್ಲಾಸಿಗೆ, ಸಂಗೀತದ ಪಾಠಕ್ಕೆ, ಅಬ್ಯಾಕಸ್ ತರಗತಿಗೆ ಬಿಡಲು, ಬೇಸರವಾದಾಗ ಲಿಂಗಾಂಬುಧಿ ಕೆರೆಯ ಸೌಂದರ್ಯವನ್ನು ನೋಡುತ್ತಾ,ಸುತ್ತಲೂ ಹೆಜ್ಜೆ ಹಾಕುವುದಕ್ಕಾಗಿ ಕೆರೆಯವರೆಗೆ ಗಾಡಿಯಲ್ಲಿ ಸುಂಯ್ ಎಂದು ಹೋಗಲು, ಯಾರಾದರೂ ಬಂದಾಗ ಗಾಡಿಯಲ್ಲಿ ಒಂದು ರೌಂಡ್ ಹಾಕಿಸಲು, ಎಲ್ಲಕ್ಕಿಂತ ಮುಖ್ಯವಾಗಿ ನನಗೆ ಬೇಕಾಗುವ ಕೆಲಸಗಳಿಗೆ ಯಾರನ್ನೂ ಆಶ್ರಯಿಸದೇ ಸ್ವತಂತ್ರವಾಗಿ ಹಕ್ಕಿಯಂತೆ ಹಾರಾಡಿಕೊಂಡಿರಲು, ಅಬ್ಬಾ ಒಂದೇ ಎರಡೇ? ಇಷ್ಟೆಲ್ಲ ಮಾಡಲು ಸಹಾಯ ಮಾಡುತ್ತಿರುವ ಗಾಡಿಯನ್ನು ಓಡಿಸಬಾರದೇ? ಇಲ್ಲ; ಎಂದಿಗೂ ಇಲ್ಲ; ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಮನಸ್ಸು ನಿರ್ಧಾರ ಮಾಡಿಬಿಟ್ಟಿತು.
ಎಲ್ಲರ ಎದುರಿಗೆ ನಾನು ಗಾಡಿಯನ್ನು ಓಡಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಹೇಳುವುದೇನೋ ಹೇಳಿಬಿಟ್ಟೆ; ಆದರೆ ನನ್ನ ದೇಹವೇ ನನ್ನ ಮಾತನ್ನು ಕೇಳಲು ತಯಾರಿರಲಿಲ್ಲ; ಗಾಡಿಯ ಮೇಲೆ ಕುಳಿತ ತಕ್ಷಣ ಕೆಳ ಬೆನ್ನಿನ ನೋವು ಒಳಗಿನಿಂದ ಬಂದು, ಅತೀವ ಹಿಂಸೆಯನ್ನು ದೇಹಕ್ಕೆ ಉಂಟುಮಾಡಲು ಪ್ರಾರಂಭಿಸಿತು. ನೋಡು, ಈಗ ಇಷ್ಟೇ ಇದೆ ನೀನು ಇನ್ನೂ ನಮ್ಮ ಮಾತು ಕೇಳದೇ, ನಿರ್ಲಕ್ಷ್ಯ ಮಾಡಿದರೆ ಮಲಗೇ ಇರುವ ಸ್ಥಿತಿ ಬಂದರೆ ಏನು ಮಾಡುವೆ? ಎಂಬ ಮನೆಯವರೆಲ್ಲರ ಪ್ರೀತಿ ಮತ್ತು ಕಾಳಜಿ ತುಂಬಿದ ಮಾತುಗಳಿಗೆ ನಾನು ತಲೆಬಾಗಲೇ ಬೇಕಾಯಿತು.
ಈಗ ಮುಂದಿನ ಯೋಚನೆ; ಗಾಡಿ ಇಲ್ಲ ಎಂದರೆ ಅದಕ್ಕೆ ಪರ್ಯಾಯವೇನು? ನನ್ನ ಎಲ್ಲ ಕೆಲಸಗಳನ್ನು ನಾನು ಹೇಗೆ ಮಾಡಿಕೊಳ್ಳಲಿ? ಯಾರನ್ನು ಆಶ್ರಯಿಸಲಿ? ಸಮಯ ಪ್ರಜ್ಞೆಯನ್ನು ಹೇಗೆ ಕಾಯ್ದುಕೊಳ್ಳಲಿ? ಮನೆಯ ಮತ್ತು ಮನೆಯ ಹೊರಗಿನ ಕೆಲಸ ಎರಡನ್ನೂ ಹೇಗೆ ಸಂಬಾಳಿಸಲಿ? ಎಂಬೆಲ್ಲ ಆಲೋಚನೆಗಳು ಮಾತಾಗಿ ಹೊರಹೊಮ್ಮಿದಾಗ ......
ಟೂ ವೀಲರ್ ಬೇಡ ಸರಿ, ಆದರೆ ಕಾರ್ ಓಡಿಸಬಹುದಲ್ಲ ಎಂಬ ಸಲಹೆ ಪತಿದೇವರದ್ದು. ಬೆನ್ನಿಗೂ ಸ್ವಲ್ಪ ಸಪೋರ್ಟ್ ಸಿಗುತ್ತದೆ; ಅಲ್ಲದೆ ಕಾರು, ಟೂ ವೀಲರ್ ಗಿಂತ ಸೇಫ್, ಡಾಕ್ಟರ್ ಕೂಡ ಕಾರು ಓಡಿಸಬಹುದು ಎಂದಿದ್ದಾರೆ ಮತ್ತು ಮೈಸೂರಿನ ಟ್ರಾಫಿಕ್ ಗೆ ಕಾರು ಸೂಕ್ತ; ಒಂದು ಸೆಕೆಂಡ್ ಹ್ಯಾಂಡ್ ಕಾರು ತಗೊಂಡು ಬಿಡೋಣ ಅಂತ ಹೇಳೇಬಿಟ್ಟರು.
ಕಾರು!!! ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ; ನಮ್ಮ ಮನೆಯವರು ಅಥವಾ ಮಗ ಕಾರು ಓಡಿಸುವಾಗ ನೆಮ್ಮದಿಯಿಂದ ಕುಳಿತುಕೊಂಡು ಆರಾಮವಾಗಿ ಒಂದು ನಿದ್ದೆ ಮಾಡಿ, ಇನ್ನೂ ನಾವು ಹೋಗುವ ಜಾಗ ಬಂದಿಲ್ಲವಾ ಎಂದು ಕೇಳುತ್ತಾ, ಮೊಬೈಲ್ ನೋಡಿ ವಾಟ್ಸಾಪ್ ಮೆಸೇಜ್ ಗಳನ್ನು ಕ್ಲಿಯರ್ ಮಾಡುತ್ತಾ, ನನ್ನ ಗಾಡಿ ಆಗಿದ್ರೆ ಇಷ್ಟು ಹೊತ್ತಿಗೆ ಎರಡೆರೆಡು ಬಾರಿ ಈ ಕೆಲಸಗಳನ್ನು ಮಾಡಬಹುದಿತ್ತು ಎಂದುಕೊಳ್ಳುವ ನಾನು ಡ್ರೈವರ್ ಸೀಟಿನಲ್ಲಿ???? ನನ್ನ ಊಹೆಗೂ ನಿಲುಕಲಿಲ್ಲ; ಆ ಡ್ರೈವಿಂಗ್ ರೇಜಿಗೆ ಕೆಲಸ ಯಾರಿಗೆ ಬೇಕು? ಅಂತ ಅಂದ್ಕೊತಿದ್ದ ಹಾಗೇ ಡ್ರೈವಿಂಗ್ ಕ್ಲಾಸಿಗೆ ಸೇರಲೇಬೇಕಾಯಿತು.
ಈಗ ಶುರುವಾಯಿತು ನೋಡಿ ನನ್ನ ನಿಜವಾದ ರಗಳೆ, ತೊಂದರೆ, ತಾಪತ್ರಯ
ಮೊದಲ ದಿನ ಕ್ಲಾಸಿಗೆ ಹೋದೆ; ಡ್ರೈವರ್ ಸೀಟಿನಲ್ಲಿ ಕುಳಿತೆ; ಮೇಡಂ ಸರಿಯಾಗಿ ನೋಡಿಕೊಳ್ಳಿ, ಇದು ಆಕ್ಸಿಲರೇಟರ್, ಇದು ಬ್ರೇಕ್, ಮತ್ತು ಇದು ಕ್ಲಚ್. ABC ಅಂತ ನೆನಪಿಟ್ಟುಕೊಳ್ಳಿ. ಬಲಗಾಲನ್ನು ಆಕ್ಸಿಲರೇಟರ್ ಮತ್ತು ಬ್ರೇಕ್ ಗೆ ಉಪಯೋಗಿಸಬೇಕು; ಕ್ಲಚ್ಚಿಗೆ ಎಡಗಾಲನ್ನು ಬಳಸಬೇಕು, ಗೊತ್ತಾಯ್ತಾ? ಎಲ್ಲಿ ತೋರ್ಸಿ, ಯಾವ್ದು ಕ್ಲಚ್? ಅಂದ್ರೆ ನಾನು ಬಲಗಾಲಿನಲ್ಲಿ ತೋರಿಸೋದೇ? ನಂ ಡ್ರೈವರ್ ಮೇಡಂ ಈಗ ತಾನೇ ಹೇಳ್ಲಿಲ್ವಾ? ಕ್ಲಚ್ ಎಡಗಾಲಿಗೆ ಅಂತ? ನಾಲಿಗೆ ಕಚ್ಚಿಕೊಂಡೆ. ಛೇ, ನಾನೇ ಎರಡು ಬಾರಿ ಹೇಳಿಸಿಕೊಳ್ಳುವಂತಾಯ್ತಲ್ಲ ಅಂತ ಮೊದಲ ದಿನವೇ ಸ್ವಲ್ಪ ಬೇಜಾರಾಯ್ತು. ಎಲ್ಲವನ್ನೂ ಒಂದೇ ಬಾರಿಗೆ ಅರ್ಥ ಮಾಡಿಕೊಳ್ಳುತ್ತಿದ್ದ ನಾನು ಇಲ್ಲಿ ಸೋತೆನಲ್ಲ ಅನ್ನಿಸಿಬಿಡ್ತು.
ಇನ್ನು ಗೇರ್ ನ ಪಾಠ ಶುರುವಾಯ್ತು; ಗೇರ್ ಬದಲಿಸುವಾಗ ಕ್ಲಚ್ ಹಿಡಿಯಲೇಬೇಕು; ಒಂದರಿಂದ ಐದು ಗೇರ್ ಅದೂ ಸಾಲದು ಎಂದು ರಿವರ್ಸ್ ಗೇರ್. ಅಯ್ಯೋ ಆಕ್ಸಿಲರೇಟರ್ ಒತ್ತಿದ ತಕ್ಷಣ ಮುಂದಕ್ಕೋಡುತ್ತಿದ್ದ ನನ್ನ ಆಕ್ಟಿವಾ ಎಲ್ಲಿ? ಈ ಕಾರ್ ಎಲ್ಲಿ? ಮನಸ್ಸು ಹೊಯ್ದಾಡಿತು.
ಈಗ ಕಾರು ಓಡಿಸ್ಲಾ? ಅಂದೆ. ಮೇಡಂ, ಹಾಫ್ ಕ್ಲಚ್ ಹಾಕ್ದೆ ಕಾರು ಮುಂದಕ್ಕೆ ಹೋಗಲ್ಲ, ಇವತ್ತು ಥಿಯರಿ ಮಾತ್ರ, ಇದನ್ನು ಚೆನ್ನಾಗಿ ಪ್ರಾಕ್ಟೀಸ್ ಮಾಡಿಕೊಂಡು ಬನ್ನಿ, ನಾಳೆ ಓಡಿಸಬಹುದು ಎಂದ.
ಮನೆಗೆ ಬಂದು ಮನೆಯಲ್ಲಿರುವ ಕಾರಿನಲ್ಲಿ ಪ್ರಾಕ್ಟೀಸ್ ಮಾಡಿದ್ದಾಯ್ತು. ಮಾರನೇ ದಿನ ಕಾರನ್ನು ಮೂವ್ ಮಾಡುವ ಹರಸಾಹಸ; ಕಾರು ಫರ್ಸ್ಟ್ ಗೇರ್ ನಲ್ಲಿರಬೇಕು ಆಗ ಎಡಗಾಲಿನಲ್ಲಿ ಪೂರ್ತಿ ಕ್ಲಚ್, ನಂತರ ಹಾಫ್ ಕ್ಲಚ್, ನಿಧಾನವಾಗಿ ಬಲಗಾಲನ್ನು ಬ್ರೇಕ್ ಮೇಲಿಂದ ತೆಗೆಯುತ್ತಾ ಆಕ್ಸಿಲರೇಟರ್ ಮೇಲೆ ಕಾಲಿಡಬೇಕು; ಕಾರು ಮುಂದಕ್ಕೆ ಹೋಗಬೇಕು. ಊಹೂಂ ಏನೇ ಮಾಡಿದರೂ ಕಾರು ಆಫ್ ಆಯಿತೇ ಹೊರತು ಮುಂದಕ್ಕೆ ಸಾಗಲಿಲ್ಲ. ನಂ ಡ್ರೈವರ್ ಗೂ ಸಾಕಾಯ್ತು. ಮೇಡಂ ನಾಳೆ ಪ್ರಯತ್ನಿಸಿ ಅಂದ.
ಮಾರನೇ ದಿನ ಪ್ರಯತ್ನ ಸಾಗಿತು. ಸ್ವಲ್ಪ ಫಾಸ್ಟ್ ಹೋಗ್ಬೇಕಂದ್ರೆ, ಥರ್ಡ್ ಗೇರ್, ಫೋರ್ತ್ ಗೇರ್, ಕಾರು ನಿಲ್ಲಿಸಬೇಕು ಅಂದ್ರೆ ಪೂರ್ತಿ ಕ್ಲಚ್ ಮತ್ತು ಬ್ರೇಕ್ ಇವಂತೂ ತಲೆಯೊಳಗೆ ಹೋಯಿತು. ಆದ್ರೆ ಕಾರ್ ಓಡಿಸೋವಾಗ್ಲೇ ತಿಳಿದದ್ದು ನಿಜವಾದ Skill ನ ಅರ್ಥ. ಒಂದು ಕೈ ಸ್ಟೇರಿಂಗ್ ನ ಮೇಲೆ, ಇನ್ನೊಂದು ಕೈ ಗೇರ್ ನ ಮೇಲೆ, ನೋಟ ರಸ್ತೆಯ ಮೇಲೆ, ಕಾಲುಗಳು ಕ್ಲಚ್, ಬ್ರೇಕ್, ಆಕ್ಸಿಲರೇಟರ್ ಮೇಲೆ, ಬಲಕ್ಕೆ/ಎಡಕ್ಕೆ ತಿರುಗುವಾಗ ಇಂಡಿಕೇಟರ್ ಹಾಕ್ಬೇಕು, ಮಳೆ ಬಂದ್ರೆ ವೈಪರ್ ಆನ್ ಮಾಡ್ಬೇಕು; ಕತ್ತಲಾದ್ರೆ ಲೈಟ್ ಹಾಕ್ಕೋಬೇಕು; ಕೆಲವೊಮ್ಮೆ ಹೈ ಬೀಮ್ ಬಳಸ್ಬೇಕು; ಓವರ್ ಟೇಕ್ ಮಾಡೋವಾಗ ಎದುರಿನ ಗಾಡಿಗೆ ಬೆಳಕಿನ ಸಿಗ್ನಲ್ ಕೊಡಬೇಕು; ನಿಲ್ಸೋವಾಗ ಪಾರ್ಕಿಂಗ್ ಲೈಟ್ ಹಾಕ್ಬೇಕು, ಹಂಪ್ ಬಂದಾಗ ಸೈಡ್ ಲೈಟ್ ಬರ್ಬೇಕು; ಲೇನ್ ಫಾಲೋ ಮಾಡ್ಬೇಕು ಮನಸ್ಸೆಲ್ಲಾ ಡ್ರೈವಿಂಗ್ ಕಡೆ ಇರ್ಬೇಕು; ಅಬ್ಬಬ್ಬಬ್ಬ...... ಎಷ್ಟು ವಿಷಯಗಳನ್ನು ಗಮನಿಸ್ಬೇಕು......
ಎಷ್ಟೋ ಅಮೂರ್ತ ಕಲ್ಪನೆಗಳನ್ನು ಸೋದಾಹರಣವಾಗಿ ಮಕ್ಕಳ ಕಣ್ಣಿಗೆ ಕಟ್ಟುವಂತೆ ಲೀಲಾಜಾಲವಾಗಿ ಹೇಳಿಕೊಡುತ್ತಿದ್ದ ನನಗೆ ಈ ಕಾರನ್ನು ಓಡಿಸಲು ಸಾಧ್ಯವಾಗುವುದಿಲ್ಲವೇ? ಇದೊಂದು ಅಷ್ಟು ಕಷ್ಟಕರವಾದ ವಿದ್ಯೆಯೇ? ವಿವಿಧ ಲೆಕ್ಕಗಳನ್ನು ಒಂದೇ ಏಟಿಗೆ ಬಿಡಿಸಿ, ಇದು ತುಂಬಾ ಸಿಂಪಲ್ ಅಂತಾ ಇದ್ದ ನನಗೆ ಈ ಕಾರ್ ಡ್ರೈವಿಂಗ್ ಯಾಕೆ ಸಿಂಪಲ್ ಆಗ್ತಾ ಇಲ್ಲ? ಇದನ್ನು ಕಲಿತೀನೋ ಇಲ್ವೋ? ಅಯ್ಯೋ ದಿನಬೆಳಗಾದ್ರೆ ಇದೇ ಪ್ರಶ್ನೆ. ಒಂದು ದಿನ ಇವತ್ತು ಪರವಾಗಿಲ್ಲ ಅನ್ನಿಸಿದರೆ, ಇನ್ನೊಂದು ದಿನ ಊಹೂಂ ನನ್ನ ಕೈಲಿ ಆಗೊಲ್ಲ ಅನ್ನೋ ಅಳುಕು. ಕಾಲ ಯಾರನ್ನೂ ಕಾಯುವುದಿಲ್ಲ; ೧೦ ದಿನ ಕಳೆಯಿತು; ಡ್ರೈವಿಂಗ್ ಕ್ಲಾಸ್ ಮುಗಿಯಿತು. ಆದ್ರೆ ನನ್ನ ಗೋಳು ಹೇಳತೀರದು. ಮನೆಯ ಕಾರನ್ನು ರಿಂಗ್ ರೋಡಿನಲ್ಲಿ ಓಡಿಸಿದ್ದಾಯ್ತು; ಬಯಲಿನಲ್ಲಿ ಓಡಿಸಿದ್ದಾಯ್ತು, ಸಣ್ಣ ರೋಡಿನಲ್ಲಿ ತೆಗೆದುಕೊಂಡು ಹೋಗಿದ್ದಾಯ್ತು; 8 ಸಂಖ್ಯೆಯಂತೆ ಕಾರನ್ನು ತಿರುಗಿಸಲು ಪ್ರಯತ್ನಿಸಿದ್ದಾಯ್ತು; ಮಗ ಅಥವಾ ಮನೆಯವರು ಇನ್ನೂ ಕಾರು ಓಡಿಸೋಕೆ ಬರ್ತಾ ಇಲ್ವಲ್ಲ ಅಂದ್ರೆ ಕಣ್ಣಲ್ಲಿ ನೀರು. ಅಯ್ಯೋ ಮಹರಾಯ್ತಿ, ನೀನು ಕಾರು ಕಲಿತರೆ ಕಲಿ ಇಲ್ಲವಾದರೆ ಆಟೋದಲ್ಲಿ ಓಡಾಡು; ಆದ್ರೆ ಅಳಬೇಡ ಅಂತ ನಮ್ಮ ಮನೆಯವರು.
ಒಂದಷ್ಟು ದಿನ ಕಾರಿನ ಉಸಾಬರಿಗೇ ಹೋಗಲಿಲ್ಲ.
ಇಷ್ಟರಲ್ಲೇ ನಮ್ಮ ಮನೆಯವರ ಸ್ನೇಹಿತರು ಸರ್ ಒಳ್ಳೆ ಆಲ್ಟೋ ಕಾರಿದೆ, ಒಂದೂವರೆ ಲಕ್ಷ; ತಗೊಂಡ್ಬಿಡಿ; ಸಿಂಗಲ್ ಹ್ಯಾಂಡ್, ಸಿಎಫ್‌ಟಿಆರ್‌ಐ ಸೈಂಟಿಸ್ಟ್ ದು; ಬರೀ ೨೩೦೦೦ ಕಿ.ಮೀ. ಓಡಿದೆ ಅಂದಾಗ ನಮ್ಮ ಮನೆಯವರು ಮರುಮಾತಾಡದೇ ಕಾರು ತಗೊಂಡೇ ಬಿಟ್ರು.
ಅಯ್ಯೋ ರಾಮ, ಕಾರು ಉಸಾಬರಿ ಬೇಡ ಅಂತಿದ್ರೆ, ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷೀಲಿ ಅನ್ನೋ ಹಾಗೆ ನನ್ನ ಹೆಸರಿಗೇ ಕಾರು ಬಂದು ಮನೆಯ ಮುಂದೆ ನಿಲ್ತಲ್ಲಪ್ಪ ಅನ್ನಿಸ್ತು. ಆದ್ರೂ ಅದನ್ನ ಮುಟ್ಟಲಿಲ್ಲ. ಪಕ್ಕದ ಮನೆಯವರಂತೂ, ಇದ್ಯಾಕ್ರೀ? ಕಾರು ತಗೊಂಡಿರೋದು ಮನೆಮುಂದೆ ನಿಲ್ಸೋಕಾ? ನಮ್ಮ ಮನೆಯವರಿಗೆ ಈಗ ೬೫ ವರ್ಷ. ಅವ್ರೇ ಕಾರು ಓಡಿಸ್ತಾರೆ; ಇನ್ನು ನಿಮಗೇನು? ಓಡ್ಸಿ ಕಲಿಯೋವರೆಗೂ ಬ್ರಹ್ಮವಿದ್ಯೆ; ಕಲಿತಮೇಲೆ ಕಪಿವಿದ್ಯೆ ಅಂತ ಮೆಲುವಾಗಿ ನನ್ನ ಪ್ರಜ್ಞೆಯನ್ನು ಬಡಿದೆಬ್ಬಿಸಿದರು.
ನನ್ನ ಮಗ ಹೇಗೂ ರಜಕ್ಕೆ ಬಂದಿದ್ದ. ಕಾರನ್ನು ಓಡಿಸುವ ಸಾಹಸಕ್ಕೆ ಕೈ ಹಾಕಿಯೇ ಬಿಟ್ಟೆ. ಮಗ ನನ್ನ ಜೊತೆ ಕೂರುವುದು, ನಾನು ಕಾರು ಓಡಿಸಿಕೊಂಡು ಶಾಲೆಗೆ ಹೋಗುವುದು ಅಂತ ತೀರ್ಮಾನ ಆಯ್ತು. ನನ್ನ ಮಗನೋ ವಿಪರೀತ ಸ್ಟ್ರಿಕ್ಟ್. ಹದಿನೈದು ದಿನ ನನ್ನ ಪಕ್ಕದಲ್ಲಿ ಕುಳಿತುಕೊಂಡ. ಕ್ಲಚ್ಚು, ಬ್ರೇಕು ಆಕ್ಸಿಲರೇಟರ್ ಗಳ ಪಾಠವನ್ನು ಪುನರಾವರ್ತಿಸಿದ; ಯಾವುದೇ ಕಾರಣಕ್ಕೂ ಗೇರ್ ಕಡೆ ನೋಡಬಾರದೆಂದು ತಾಕೀತು ಮಾಡಿದ. ಕಾರು ಓಡುವ ಸ್ಪೀಡಿನಲ್ಲೇ ಅದು ಯಾವ ಗೇರ್ ಎಂದು ಕಂಡುಹಿಡಿಯಬೇಕು ಎಂದು ಸವಾಲು ಹಾಕಿದ. ಯಾವತ್ತಿಗೂ ಟರ್ನಿಂಗ್ ನಲ್ಲಿ ಓವರ್ ಟೇಕ್ ಮಾಡಬಾರದು ಎಂದು ಕಿವಿಮಾತು ಹೇಳಿದ. ಅಮ್ಮಾ ಕಾರನ್ನು ಎಡಕ್ಕೆ, ಬಲಕ್ಕೆ ತಿರುಗಿಸುವಾಗ ಯಾವಾಗಲೂ ಸೆಕೆಂಡ್ ಗೇರ್‌ನಲ್ಲಿರು ಎಂದು ಸಲಹೆ ನೀಡಿದ. ಹಂಪ್ ದಾಟಿಸುವಾಗ ಸೆಕೆಂಡ್ ಗೇರ್ ಮತ್ತು ಪೂರ್ತಿ ಕ್ಲಚ್, ಬ್ರೇಕ್ ಮತ್ತು ಅರ್ಧ ಹಂಪ್ ಆಗುತ್ತಿದ್ದಂತೆ, ಹಾಫ್ ಕ್ಲಚ್ ಹಾಕು ಮತ್ತು ನಿಧಾನವಾಗಿ ಆಕ್ಸಿಲರೇಟರ್ ಕೊಡು ಎಂದು ಉಪದೇಶ ಮಾಡಿದ. ಅಪ್ ಹತ್ತಿಸುವಾಗ ಕಡಿಮೆ ಗೇರ್ ನಲ್ಲೇ ಇರಬೇಕು, ಇಳಿಜಾರಿನಲ್ಲಿ ಆಕ್ಸಿಲರೇಟರ್ ಒತ್ತಬಾರದು ಎಂದು ತಿಳಿಹೇಳಿದ; ರಸ್ತೆಯಲ್ಲಿ ಬೇಕಾಬಿಟ್ಟಿ ಹಾರ್ನ್ ಮಾಡ್ಬಾರ್ದು ಅಂದ; ಹ್ಯಾಂಡ್ ಬ್ರೇಕಿನ ಮಹತ್ವವನ್ನು ತಿಳಿಸಿಕೊಟ್ಟ. ಮ್...ಎಷ್ಟೆಲ್ಲ ಸೂಕ್ಷ್ಮಗಳು; ಎಷ್ಟೆಲ್ಲ ತಯಾರಿಗಳು; ಹದಿನೈದು ದಿನ ಒಳ್ಳೇ ಅಭ್ಯಾಸವಾಯಿತು. ಅಂತೂ ಇಂತೂ ಸುಮಾರಾಗಿ ಕಾರು ಓಡಿಸಲು ಶುರು ಮಾಡಿದೆ. ಹೀಗೇ ಉತ್ತಮ ಸಲಹೆಗಳು ಯಾರಿಂದಲಾದರೂ ಬರಲಿ, ನಮಗಿಂತ ವಯಸ್ಸಿನಲ್ಲಿ ಸಣ್ಣವರಾಗಲೀ, ಅರ್ಹತೆಯಲ್ಲಿ ಕಡಿಮೆಯಿರಲೀ, ಅಥವಾ ಯೋಗ್ಯತೆಯಲ್ಲಿ ಕೆಳಗಿರಲೀ ಸ್ವೀಕರಿಸುವ ಮನೋಭಾವ ಇರಬೇಕು ಎಂಬುದರ ಅರಿವಾಯಿತು.
ಒಂದು ಒಳ್ಳೆಯ ದಿನ ಇವತ್ತು ನಾನೇ ಕಾರು ಓಡಿಸಿಕೊಂಡು ಹೋಗ್ತಿನಿ ಅಂತ ಮನೆಯಲ್ಲಿ ಘೋಷಿಸಿದೆ. ನಿಧಾನವಾಗಿ ಹೋಗು; ಸರಿಯಾಗಿ ಪಾರ್ಕ್ ಮಾಡು; ಎಲ್ಲಾ ಕಡೆ ನೋಡು; ಎಡಗಡೆಯಿಂದ ಟೂ ವೀಲರ್‌ನೋರು ಓವರ್ ಟೇಕ್ ಮಾಡ್ತಾರೆ ಗಮನಿಸು; ಮಿರರ್ ನೋಡು; ಹೋದತಕ್ಷಣ ಫೋನ್ ಮಾಡು ಹೀಗೆ ಇನ್ನೂ ಒಂದಷ್ಟು ಸಲಹೆಗಳ ಸುರಿಮಳೆಯೇ ಬಂತು; ಧೈರ್ಯ ಮಾಡಿ ಹೊರಟೇ ಬಿಟ್ಟೆ;
ನಿಧಾನವಾಗಿ ಸೆಕೆಂಡ್ ಗೇರಿನಲ್ಲೇ ಹೊರಟೆ. ಸಿಗ್ನಲ್ ಬಳಿ ನಿಲ್ಲಿಸಿದೆ. ಗಾಡಿ ಆಫ್ ಆಯಿತು. ಗ್ರೀನ್ ಸಿಗ್ನಲ್ ಬಂತು. ಗಾಡಿ ಸ್ಟಾರ್ಟ್ ಆಗ್ಲಿಲ್ಲ. ಹಿಂದಿನಿಂದ ಹಾರನ್ ಗಳು ಕಿವಿಗಪ್ಪಳಿಸಿದವು. ಮೈ ಬೆವರತೊಡಗಿತು. ಆದರೂ ಧೈರ್ಯಗೆಡಲಿಲ್ಲ. ಎಷ್ಟೋ ಬಾರಿ ಟೂ ವೀಲರ್ ಓಡಿಸುವಾಗ ಮುಂದಿನ ಗಾಡಿ ಸ್ಟಾರ್ಟ್ ಆಗ್ಲಿಲ್ಲ ಅಂದ್ರೆ, ಹಾರ್ನ್ ಮಾಡಿದ ನೆನಪಾಯಿತು. ಛೇ ಅವರಿಗೂ ನನ್ನ ಇಂದಿನ ಸ್ಥಿತಿ ಇದ್ದಿತ್ತೇನೋ ಎನಿಸಿತು. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮುಂದಿನ ಗಾಡಿ ಸ್ಟಾರ್ಟ್ ಆಗದೇ ಇದ್ದಾಗ ಹಾರ್ನ್ ಮಾಡಿ ಕಿರಿಕಿರಿ ಮಾಡಬಾರದು ಎಂದು ಶಪಥ ಮಾಡಿದೆ. ಕಾರ್ ಡ್ರೈವಿಂಗ್ ನನಗೆ ಮತ್ತೊಬ್ಬರ ಜಾಗದಲ್ಲಿ ನಿಂತು ಸಮಸ್ಯೆಯನ್ನು ನೋಡುವ ಗುಣವನ್ನು ಕಲಿಸಿತು. ಹಿಂದಿನಿಂದ ಹಾರ್ನ್‌ಗಳ ರೂಪದಲ್ಲಿ ಎಷ್ಟೇ ಕಿರಿಕಿರಿಗಳು ಬಂದರೂ ಧೈರ್ಯಗೆಡಬಾರದು ಎಂಬುದನ್ನು ಮನಗಾಣಿಸಿತು. ಆತ್ಮವಿಶ್ವಾಸ ಇರಬೇಕು ಎಂದು ಸೂಚಿಸಿತು.
ಮತ್ತೆ ಗಾಡಿ ಸ್ಟಾರ್ಟ್ ಆಗುವಷ್ಟರಲ್ಲಿ ರೆಡ್ ಸಿಗ್ನಲ್ ಬಂತು. ಆದರೆ ಈಗ ನನಗೆ ಗೊತ್ತಿತ್ತು. ನಾನು ಗಾಡಿಯನ್ನು ಮೂವ್ ಮಾಡಬಲ್ಲೆ. ಬದುಕಿನಲ್ಲೂ ಅಷ್ಟೇ ಎಡರುತೊಡರುಗಳು ಸಾಮಾನ್ಯ ಆದರೆ ಅವು ಶಾಶ್ವತವಲ್ಲ. ರೆಡ್ ಸಿಗ್ನಲ್ ಹೋಗಿ ಗ್ರೀನ್ ಸಿಗ್ನಲ್ ಬರುವಂತೆ, ಗಾಡಿ ಆಫ್ ಆಗಿ ಮತ್ತೆ ಆನ್ ಆಗುವಂತೆ ಅವೆಲ್ಲವೂ ಕ್ಷಣಿಕ ಎಂಬುದೂ ಮನಸ್ಸಿನಲ್ಲಿ ಹಾದುಹೋಯಿತು.
ಇನ್ನೊಂದು ಕಿ.ಮೀ. ಸಾಗಿದರೆ ಮತ್ತೊಂದು ಸಿಗ್ನಲ್ ಬರುತ್ತದೆ. ಮನಸ್ಸು ಈಗಲೇ ಸಿದ್ಧವಾಯಿತು. ಕಾರಿನ ವೇಗ ಕಡಿಮೆಯಾಯಿತು. ಗ್ರೀನ್ ಸಿಗ್ನಲ್ ಕಂಡಿತಾದರೂ ಹತ್ತಿರ ಹೋಗುತ್ತಿದ್ದಂತೆ ರೆಡ್ ಸಿಗ್ನಲ್. ವೇಗ ಕಡಿಮೆ ಇದ್ದುದರಿಂದ ಕಾರು ಸರಿಯಾಗಿ ನಿಂತಿತು. ನಮ್ಮ ಜೀವನದಲ್ಲೂ ಅಷ್ಟೇ; ಸರಿಯಾಗಿ ಪ್ಲಾನ್ ಮಾಡಬೇಕು; ಆತುರ ಇರಬಾರದು; ಯಾವ ಜಾಗದಲ್ಲಿ ನಿಲ್ಲಬೇಕು? ಎಲ್ಲಿ ವೇಗವಾಗಿ ಹೋಗಬೇಕು ಎಂಬ ಅರಿವಿರಬೇಕು, ಆಗ ಜೀವನದ ಜಂಜಾಟಗಳನ್ನು ಸಮರ್ಥವಾಗಿ ಎದುರಿಸಬಹುದು ಎಂಬ ಆತ್ಮವಿಶ್ವಾಸ ಮೂಡಿತು.
ಇನ್ನೆರೆಡು ಕಿ.ಮೀ. ಏನೂ ತೊಂದರೆಯಿಲ್ಲ; ನಾಲ್ಕನೇ ಗೇರಿನಲ್ಲಿ ಹೋಗಬಹುದು ಎಂದು ಸಿದ್ಧವಾಯಿತು ದೇಹ ಮತ್ತು ಮನಸ್ಸು ಎರಡೂ.... ಆದರೆ, ನನ್ನ ಕಾರಿಗಿಂತ ಹೆಚ್ಚು ಸಾಮರ್ಥ್ಯವುಳ್ಳ ಕಾರುಗಳು ಬಂದಾಗ ನಾನು ದಾರಿ ಬಿಡಲೇಬೇಕಾಯಿತು. ಅದು ರಸ್ತೆಯ ಶಿಷ್ಟಾಚಾರವೂ ಹೌದು; ಹಾಗೇ ನಮ್ಮ ಬದುಕು; ಮರಕ್ಕಿಂತ ಮರ ದೊಡ್ಡದು ಎಂಬಂತೆ ನಮಗಿಂತ ತಿಳಿದವರು ನಮ್ಮ ಜೊತೆ ಇದ್ದಾಗ ಅವರನ್ನು ಗೌರವಿಸಬೇಕು ಮತ್ತು ಅವರ ಹಾದಿಯಲ್ಲಿ ಮುನ್ನಡೆಯಬೇಕು ಎಂಬ ಸತ್ಯದ ಅರಿವಾಗಿ ಮುಖದ ಮೇಲೊಂದು ಕಿರುನಗೆ ಮೂಡಿತು.
ಓಹ್ ಇನ್ನೊಂದೆರೆಡು ಕಿ.ಮೀ. ಸ್ವಲ್ಪ ಕಷ್ಟ. ಯಾರು ಹೇಗೆ ಬೇಕಾದರೂ ನುಗ್ಗಬಹುದು ಎಂದು ಆ ರಸ್ತೆಯ ಅರಿವಿದ್ದ ನನಗೆ ಹೊಳೆಯಿತು. ಅದಕ್ಕೆ ಸರಿಯಾಗಿ ಅಜ್ಜಿಯೊಬ್ಬಳು ಕಾರಿನ ಹಾರ್ನ್ ಕೇಳಿದರೂ ಕೇಳದಂತೆ ಅಡ್ಡ ಬಂದೇಬಿಟ್ಟಳು. ಕ್ರೀಂ......ಚ್ ಎಂದು ಬ್ರೇಕ್ ಹಾಕಿದೆ. ಸಧ್ಯ ಹಿಂದೆ ಯಾವುದೂ ಗಾಡಿ ಇರಲಿಲ್ಲ. ಹಾಗೇ ಜೀವನದಲ್ಲಿ ಮುನ್ನುಗ್ಗುವಾಗ ಎಲ್ಲಾ ದಿಕ್ಕುಗಳನ್ನೂ ಗಮನಿಸಬೇಕು; ತೊಂದರೆ ಯಾವ ಕಡೆಯಿಂದಲಾದರೂ ಬರಬಹುದು ಅನ್ನಿಸಿದ್ದು ಸುಳ್ಳಲ್ಲ. ಅಷ್ಟರಲ್ಲೇ ಅಜ್ಜಿಯ ಮೊಮ್ಮಗ ಬಂದು ಮೇಡಂ ನೀವು ನಿಧಾನವಾಗಿ ಗಾಡಿ ಓಡಿಸಿ ಅಂತ ನನಗೇ ಉಪದೇಶ ಮಾಡಲು ಬಂದ; ಏನಪ್ಪಾ ಅಜ್ಜಿಗೆ ಕಿವಿ ಕೇಳಿಸದೇ ಇದ್ದಾಗ ಒಬ್ಬರನ್ನೇ ರಸ್ತೆ ದಾಟಲು ಬಿಟ್ಟಿರುವುದು ನಿಮ್ಮ ತಪ್ಪು, ನನ್ನ ಗಾಡಿಗೂ ನಿಮ್ಮ ಅಜ್ಜಿಗೂ ಮೂರಡಿ ಅಂತರವಿದೆ. ಕರೆದುಕೊಂಡು ಹೋಗು ಅಂತ ನಿಧಾನವಾಗಿ ಹೇಳಿದೆ.
ಹೀಗೇ ಕೆಲವೊಮ್ಮೆ ನಮ್ಮ ನಿಜಜೀವನದಲ್ಲೂ...... ನಮ್ಮ ತಪ್ಪಿಲ್ಲದಿದ್ದರೂ ನಮ್ಮದೇ ತಪ್ಪು ಎಂದು ಸಾಧನೆ ಮಾಡುವವರು ಇರುತ್ತಾರೆ. ಆಗ ತಾಳ್ಮೆ ನಮ್ಮ ಕೈ ಹಿಡಿಯುತ್ತದೆ. ಸಹನೆಯಿಂದ ಸಮಸ್ಯೆಯನ್ನು ಎದುರಿಸಬೇಕು ಎಂಬುದು ಮನದಟ್ಟಾಯಿತು.
ಇನ್ನೇನು ಮೂರು ಕಿ.ಮೀ. ನನ್ನ ಶಾಲೆ ಬಂದೇ ಬಿಟ್ಟಿತು. ಉತ್ಸಾಹ ಗರಿಗೆದರಿತು. ಕಾರು ಮುಂದಕ್ಕೋಡಿತು. ಸ್ಕೂಲಿನ ಕಾಂಪೌಂಡ್ ಪಕ್ಕದಲ್ಲಿ ಕಾರು ನಿಲ್ಲಿಸುವಾಗ ಕಾಂಪೌಂಡಿಗೆ ಕಾರು ತಗಲುತ್ತದೇನೋ ಎಂದು ಭಯವಾಯಿತು. ಮತ್ತೆ ರಿವರ್ಸ್ ತೆಗೆದುಕೊಂಡು ಬಂದದ್ದಾಯಿತು. ಹಾಗೇ ನಿತ್ಯಜೀವನದಲ್ಲೂ, ಇನ್ನೇನು ಗುರಿ ಮುಟ್ಟುತ್ತೇವೆ ಎಂಬ ಕ್ಷಣದಲ್ಲಿ ನಿರ್ಲಕ್ಷ್ಯ ಮಾಡಬಾರದು, ಗುರಿ ಮುಟ್ಟುವವರೆಗೂ ಗಮನ, ಏಕಾಗ್ರತೆ ಇರಲೇಬೇಕು; ಏಕೆಂದರೆ, ಬದುಕಿನಲ್ಲಿ ರಿವರ್ಸ್ ಗೇರ್ ಇರುವುದಿಲ್ಲ; ಅಲ್ವಾ? ಅದ್ಭುತವಾದ ಸತ್ಯದ ಸಾಕ್ಷಾತ್ಕಾರವಾಯಿತು. ಅರೆರೆ ಕಾರ್ ಡ್ರೈವಿಂಗ್ ನನಗೆ ಎಷ್ಟೊಂದು ಜೀವನ ಪಾಠಗಳನ್ನು ಹೇಳಿಕೊಟ್ಟಿತಲ್ಲ ಎಂದು ಮನಸ್ಸು ಪ್ರಫುಲ್ಲವಾಯಿತು. ಅಂದು ಕೇವಲ ಸಂಭ್ರಮಾಚರಣೆ, ಶಾಲೆಯಲ್ಲೂ......... ಮನೆಯಲ್ಲೂ.......... ಕಾರಿನ ಡ್ರೈವಿಂಗ್ ಕಲಿತಿದ್ದರ ಜೊತೆಗೆ ಕಾರ್ ಡ್ರೈವಿಂಗ್ ಕಪಿ ವಿದ್ಯೆಯಾದದ್ದಕ್ಕೆ....... ಯಾವುದೇ ವಿದ್ಯೆಯನ್ನು ಕಲಿಯಲು ವಯಸ್ಸು ತಡೆಗೋಡೆಯಲ್ಲ ಎಂಬುದಕ್ಕೆ........ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ.........ಇನ್ನು ಮುಂದೆ ಬೆನ್ನು ನೋವಿಗೆ ಡಾಕ್ಟರ್ ಹತ್ರ ಹೋಗೋಹಾಗಿಲ್ಲ ಎಂಬ ಸಮಾಧಾನಕ್ಕೆ............. ಕೇವಲ ಒಬ್ರನ್ನಲ್ಲ ನಾಲ್ಕು ಜನರನ್ನು ನನ್ನ ಜೊತೆಗೆ ಕರೆದುಕೊಂಡು ಹೋಗಬಹುದು ಎಂಬ ಸಂತೋಷಕ್ಕೆ.........ಬರೀ ೧೦ ಕಿ.ಮೀ. ಅಲ್ಲ ೧೫೦ಕಿ.ಮೀ. ಕೂಡ ಪ್ರಯಾಣಿಸಿ ಪ್ರವಾಸವನ್ನೇ ಮಾಡಬಹುದು ಎಂಬ ಕಾರಣಕ್ಕೆ........ ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತು ನಿಜವಾದದ್ದಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಜೀವನದ ಸತ್ಯ ದರ್ಶನವಾದದ್ದಕ್ಕೆ................
Amogha adbutha!! Kannalli kattidahaage ide baravanige!! Badukinalli reverse gear illa annuva maatu is a best take away of the write up.. Tumba chennagi bandide. 👏🏻👏🏻
ಪ್ರತ್ಯುತ್ತರಅಳಿಸಿTY😊🙏
ಅಳಿಸಿ👌
ಪ್ರತ್ಯುತ್ತರಅಳಿಸಿ"ಬದುಕಿನಲ್ಲಿ ರಿವರ್ಸ್ ಗೇರ್ ಇರುವುದಿಲ್ಲ"ವಾವ್!!
ಪ್ರತ್ಯುತ್ತರಅಳಿಸಿನನ್ನ ಕಾರ್ ಡ್ರೈವಿಂಗ್ ತರಗತಿಗಳು ನೆನಪಾದವು, "ನೀವು ಟೀಚರ್ ಅಲ್ವಾ, ನಿಮಗೆ ಒಂದು ಸಲ ಹೇಳಿದರೆ ಅರ್ಥವಾಗುವುದಿಲ್ವಾ" ಅಂತ ನನ್ನ ಡ್ರೈವರ್ ರವರು ಹೇಳುತ್ತಿದ್ದರು.
ಅತ್ಯುತ್ತಮ ಲೇಖನ ಸೂಕ್ತ ಶೀರ್ಷಿಕೆ. ಹೀಗೇ ಬರೆಯುತ್ತಿರಿ ಮೇಡಂ.
ಹೌದು. ಏನನ್ನಾದರೂ ಕಲಿಯುವಾಗ ಶಿಕ್ಷಕರು ವಿದ್ಯಾರ್ಥಿಗಳಾಗಬೇಕಾಗುತ್ತದೆ, ಅಲ್ವಾ? ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿSuper.
ಪ್ರತ್ಯುತ್ತರಅಳಿಸಿIan also in the same track.
Not confident enough to drive.
Don't know when I make my mind 🙈
ಲೇಖನ ತುಂಬ ಉತ್ತಮವಾಗಿದೆ ಮೇಡಂ
ಪ್ರತ್ಯುತ್ತರಅಳಿಸಿಅತ್ಯುತ್ತಮ ನಿರೂಪಣೆ
ಪ್ರತ್ಯುತ್ತರಅಳಿಸಿDriving classಗೆ ಥಿಯರಿ ಪಠ್ಯವಾಗಿ ಬಹುದಾದ ಎಲ್ಲ ಲಕ್ಷಣಗಳೂ ನಿಮ್ಮ ಲೇಖನಕ್ಕಿದೆ. ಸುಲಭವಾಗಿ ಓದಿಸಿಕೊಂಡು ಹೋಗುವ ಗುಣ ಹೊಂದಿದೆ
,👌 ಕಲಿಕೆ ನಿರಂತರ
ಪ್ರತ್ಯುತ್ತರಅಳಿಸಿಕಾರ್ ಡ್ರೈವಿಂಗ್ ಜೊತೆಗೆ ಜೀವನದ ಪಾಠವೂ ಇದೆ. ಸೂಪರ್.ಬರೆಯುವುದನ್ನು ಮುಂದುವರಿಸಿ.👍
ಪ್ರತ್ಯುತ್ತರಅಳಿಸಿTY🙏
ಅಳಿಸಿManasiddare marga. Really great sharada keep it up. U will succeed in life as well as in profession. Good my ashirvadam is there for u
ಪ್ರತ್ಯುತ್ತರಅಳಿಸಿThank you very much🙏
ಅಳಿಸಿTumba channagede, I am becoming fan for your small stories
ಪ್ರತ್ಯುತ್ತರಅಳಿಸಿTY😊
ಅಳಿಸಿಜೀವನ ಮೌಲ್ಯಗಳನ್ನು ಹೆಣೆದದ್ದು ಲೇಖನಕ್ಕೆ ಘನತೆ ತಂದಿದೆ. ಲಲಿತವಾಗಿದೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್
ಅಳಿಸಿಮೇಡಮ್ ನೀವು ಬರೆದಂತಹ ಈ ಲೇಖನ ತುಂಬಾ ಚೆನ್ನಾಗಿದೆ. ಏಕಂದರೆ ಪೆಬ್ರುವರಿ 2020 ರಿಂದ ಇಲ್ಲಿಯವರೆಗೆ ಕೋರೊನಾ ಹರಡಿ ಎಲ್ಲಕ್ಕಿಂತ ಶಿಕ್ಷಣ ವ್ಯವಸ್ಥೆಗೆ ತುಂಬಾನೇ ಹೊಡೆತ ಆಗಿದೆ.ಧನ್ಯವಾದಗಳು ಮೇಡಮ್.
ಪ್ರತ್ಯುತ್ತರಅಳಿಸಿSuper,ಬರವಣಿಗೆ ತುಂಬಾ ಚೆನ್ನಾಗಿದೆ. ಹೀಗೆ ಮುಂದುವರೆಸು.
ಪ್ರತ್ಯುತ್ತರಅಳಿಸಿTY
ಅಳಿಸಿTY
ಪ್ರತ್ಯುತ್ತರಅಳಿಸಿಒಳ್ಳೆಯ ಬರೆವಣಿಗೆ...
ಪ್ರತ್ಯುತ್ತರಅಳಿಸಿತುಂಬು ಹೃದಯದ ಅಭಿನಂದನೆಗಳು
ನನ್ನ ಅನುಭವವನ್ನು ನಿಮ್ಮ ಲೇಖನಿಯ ಮೂಲಕ ಬರೆದಂತೆ ಭಾಸವಾಯಿತು.ಬರಹ ತುಂಬಾ ಆತ್ಮೀಯವಾಗಿದೆ ಮತ್ತು ನೈಜವಾಗಿದೆ .ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ
ಪ್ರತ್ಯುತ್ತರಅಳಿಸಿThank you very much
ಅಳಿಸಿಅನುಭವ ಮನಮುಟ್ಟುವಂತಿದೆ ಮನುಷ್ಯ ಎಷ್ಟೇ ಕಲಿತರು ಇನ್ನು ಕಲಿಯುವಂತದ್ದು ಬೆಟ್ಟದಷ್ಟಿದೆ. ನಿಮ್ಮ ಪದಬಳಕೆ ಅತ್ಯುತ್ತಮವಾಗಿದ್ದು ಪ್ರಶಂಸನೀಯವಾಗಿದೆ, ಹೀಗೆ ಬರವಣಿಗೆಯನ್ನು ಮುಂದುವರಿಸಿ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್
ಪ್ರತ್ಯುತ್ತರಅಳಿಸಿappreciable madam. Expressed own thoughts and experiences. Time N tide wait for none. After reading it I felt "Accepting is law of nature"
ಪ್ರತ್ಯುತ್ತರಅಳಿಸಿTY
ಅಳಿಸಿಒಂದೊಂದೂ ವಿಷಯವನ್ನು ಸೂಕ್ಷ್ಮವಾಗಿ ಬಹಳ ಚೆನ್ನಾಗಿ ಬರೆದ್ದೀಯ ಶಾರದ....ನನ್ನ ಡ್ರೈವಿಂಗ್ ಕ್ಲಾಸ್ ತರಬೇತಿಯ experience ಇದೇ ರೀತಿಯಲ್ಲಿ ಇತ್ತು ಎಂದು ನೆನಪಾಯಿತು.....good luck....ಬರವಣಿಗೆ ಹೀಗೆಯೆ ಮುಂದುವರೆಸು
ಪ್ರತ್ಯುತ್ತರಅಳಿಸಿCongratulations,you learnt car driving, very nicely written your experience
ಪ್ರತ್ಯುತ್ತರಅಳಿಸಿWay of presentation and adoption to life is good, i just remembered our practice teaching and ss sir
ಪ್ರತ್ಯುತ್ತರಅಳಿಸಿTY. Those days were golden days.
ಅಳಿಸಿಅದ್ಭುತ ಬರವಣಿಗೆ. ನಂಗೂ ಕೂಡ ಕಾರ್ ಡ್ರೈವಿಂಗ್ ಅಂದರೆ ದೂರ, ಏನಾದರೂ ನೆವ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ.Two wheeler ಹೊಡೆಯುವ ಮಜಾನೇ ಬೇರೆ ಅಲ್ವಾ 😊
ಪ್ರತ್ಯುತ್ತರಅಳಿಸಿYes. TY very much
ಅಳಿಸಿಅಭಿನಂದನೆಗಳು,
ಪ್ರತ್ಯುತ್ತರಅಳಿಸಿಉತ್ತಮವಾಗಿ ಮೂಡಿಬಂದಿದೆ. ಕಥಾ ಸಂಕಲನಕ್ಕೆ ನಾಂದಿ ಹಾಡಬಹುದು. ನಿರೂಪಣಾ ಶೈಲಿ ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತದೆ. ಘಟನೆಯಲ್ಲಿ ಸಂದರ್ಭೋಚಿತ ನೀತಿ ನಿರೂಪಣೆ ಇದೆ. ಜೀವನ ಮೌಲ್ಯಗಳಿಗೆ. ಒಬ್ಬ ಶಿಕ್ಷಕರ ಸಹಜ ಕಾಳಜಿ ಮೈದಳೆದಿದೆ. ಇಂತಹ ಕಥೆಗಳ ಗುಚ್ಛ ಹೊರಬಂದರೆ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಗುವುದರಲ್ಲಿ ಸಂಶಯವಿಲ್ಲ. ಇಂತಹ ಬರೆಹ ಇನ್ನೂ ಹೆಚ್ಚು ತಮ್ಮಿಂದ ರಚಿತವಾಗಲಿ. ಹಾರೈಕೆಗಳು
ಇನ್ನೂ ಶೈಶವಾವಸ್ಥೆಯಲ್ಲಿರುವ ನನ್ನ ಬರೆವಣಿಗೆಯನ್ನು ಅವಲೋಕಿಸಿ ಪ್ರತಿಕ್ರಿಯಿಸಿದ ತಮಗೆ ಅನಂತ ಧನ್ಯವಾದಗಳು ಸರ್
ಅಳಿಸಿಬರವಣಿಗೆ ನಿಜವಾಗಲೂ ಅತ್ಯುತ್ತಮ.. ಅದರಲ್ಲೂ ಕಾರ್ ಡ್ರೈವಿಂಗ್ ಕಲಿಕೆಯ ಪ್ರಾರಂಭ ಎಲ್ಲರ ಅನುಭವ. ನಂದು ಅದೇ ಕತೆ ಟೂ ವೀಲರ್ ಫೇವರಿಟ್..ನಿರೂಪಣಾ ಶೈಲಿ ಚನ್ನಾಗಿದೆ.. ಹೀಗೆ ಬರವಣಿಗೆ ಸಾಗಲಿ..
ಪ್ರತ್ಯುತ್ತರಅಳಿಸಿಧನ್ಯವಾದಗಳು🙏🙏
ಅಳಿಸಿತುಂಬಾ ಚೆನ್ನಾಗಿ ಇದೆ ಕಣೇ
ಪ್ರತ್ಯುತ್ತರಅಳಿಸಿThank you so much
ಅಳಿಸಿಕಣ್ಣಲ್ಲಿ ನೀರುದಯಿಸಿದ ಲೇಖನ.ಇಷ್ಟು ಜಾಣೆ ಇರುವ ಲೇಖಕಿಗೆ ಅಭ್ಯಾಸ ಕಷ್ಟವಾಯಿತಲ್ಲ ಎಂಬ ಬೇಜರು. ಮಾನವ ಪ್ರಕೃತಿಯೇ ಹೀಗೆ. ಅಭ್ಯಾಸ ಮಾಡುವುದು ಅವಶ್ಯಕತೆ ಬಂದಾಗ ಮಾತ್ರ.ವಿಜ್ಞಾನ ಕ್ಷೇತ್ರದಿಂದ ಸಾಹಿತ್ಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದೀರಿ ಶುಭವಾಗಲಿ.
ಪ್ರತ್ಯುತ್ತರಅಳಿಸಿThank you very much for your wishes
ಅಳಿಸಿಅನುಭವ ವೇಧ್ಯ. ಭವಿಷ್ಯದಲ್ಲಿ ನಿಂತಾಗ ಗತಕಾಲದ ಒಂದು ಡಾಕ್ಯುಮೆಂಟಾಗಿದೆ ಈ ಲೇಖನ. ಪ್ರತೀ ಸಮಸ್ಯೆಯಲ್ಲಿ ಒಂದು ಜ್ಞಾನ.
ಪ್ರತ್ಯುತ್ತರಅಳಿಸಿಧನ್ಯವಾದಗಳು
ಅಳಿಸಿಅಂತು ದಿನ ಸ್ಕೂಲ್ಗೆ ಕಾರಲ್ಲೇ ಹೋಗ್ ಬರ್ತೀಯ ಅಂತ ಆಯ್ತು. ನಿನ್ನ ಧೈರ್ಯ ನನಗೆ ಯಾವಾಗ ಬರುತ್ತೋ ಗೊತ್ತಿಲ್ಲ ಕಣೆ
ಪ್ರತ್ಯುತ್ತರಅಳಿಸಿಬೇಗ ಆ ಧೈರ್ಯ ಬರಲಿ 😊
ಪ್ರತ್ಯುತ್ತರಅಳಿಸಿಬಹುಶಃ ಎಲ್ಲರ ಕಾರು ಕಲಿಕೆಯ ಅನುಭವ ಹೀಗೆ ಇರುತ್ತದೆ.ನಾನು ಇನ್ನೂ ಆ ಧೈರ್ಯ ಮಾಡಿಲ್ಲ. ಆದರೆ ಬರವಣಿಗೆ ನಾಲ್ಕನೆ ಗೇರ್ ನಲ್ಲಿ ಇದೆ 🤗
ಪ್ರತ್ಯುತ್ತರಅಳಿಸಿ😁ಧನ್ಯವಾದಗಳು
ಪ್ರತ್ಯುತ್ತರಅಳಿಸಿಲೇಖನದಲ್ಲಿ ಸ್ವ ಅನುಭವವನ್ನು ಜೀವನದ ಅನುಭವದೊಂದಿಗೆ ಹೋಲಿಸಿ ತುಂಬಾ ಅಚ್ಚುಕಟ್ಟಾಗಿ ಮೂಡಿಬಂದಿದೆ. ಹಲವಾರು ಕಾರು ಕಲಿಕಾಥಿ೯ಗಳಿಗೆ ಇ ನಿಮ್ಮ ಲೇಖನ ಸ್ಪೂರ್ತಿದಾಯಕ ವಾಗಿದೆ.
ಪ್ರತ್ಯುತ್ತರಅಳಿಸಿ