ಭಾನುವಾರ, ನವೆಂಬರ್ 21, 2021

ಅರಳಿ ಬಿಡು, ಬಾಡುವ ಮುನ್ನ

ದೀಪಾ.... ಏ...ದೀಪಾ... ತಿಂಡಿ ತಿಂದ್ಯಾ?  ಎಲ್ಲಿದ್ಯಾ? ಬಸ್‌ ಬರೋ ಹೊತ್ತಾಯ್ತು, ಸ್ಕೂಲಿಗೆ ಹೋಗಲ್ವಾ? ಏ ದೀಪಾ... ಅಂತ ನಂಜಿ ಮಗಳನ್ನು ಒಂದೇ ಸಮ ಕೂಗಲು ಶುರು ಮಾಡಿದಳು. ಇನ್ನು ಇವ್ಳು ಇವತ್ತೂ ಸ್ಕೂಲಿಗೆ ಹೋಗ್ಲಿಲ್ಲ ಅಂದ್ರೆ ಸ್ಕೂಲಿಂದ ಫೋನ್‌ ಬರೋದು ದಿಟವೇ. ಮೊನ್ನೆ ಅವ್ಳಿಗೆ ಹುಷಾರಿಲ್ಲ ಅಂತ, ನಿನ್ನೆ ನನಗೆ ಹುಷಾರಿಲ್ಲ ಅಂತ ದೀಪನ್ನ ಮನೇಲೇ ಉಳ್ಸಿಕೊಂಡಿದ್ದಾಯ್ತು. ಈ ವರ್ಷ ದೊಡ್ಡ ಪರೀಕ್ಷೆ ಬೇರೆ ಬರೀಬೇಕು; ಅದ್ಯಾವ್ದೋ ಕರೋನಾ ಅಂತ ರೋಗ ಬೇರೆ ಬಂದು ಅಮರಿಕೊಂಡಿದೆ. ಬೇಕೂ ಅಂದ ತಕ್ಷಣ ಎಲ್ಲಿಗೂ ಹೋಗೋಕಾಗಲ್ಲ; ಅದೂ ಅಲ್ದೆ ನಾವೇನು ಸಿಟಿ ಮಧ್ಯದಲ್ಲಾ ಇದ್ದೀವಿ? ಸುತ್ಲೂ ಕಾಡು, ಒಂದೈವತ್ತು ವರ್ಷದ ಹಿಂದೆ ನಮ್ಮ ಮಾವ ಇಲ್ಲಿಗೆ ಬಂದು, ಬೇಸಾಯ ಶುರು ಮಾಡಿ ಜೀವ್ನ ನಡ್ಸಿದ್ರು, ನನ್‌ ಗ್ರಾಚಾರಾನೋ, ಹಣೆಬರಹಾನೋ ಅಂತೂ  ಸೀನನ್ನ ಕಟ್ಕೊಂಡು ಈ ಕೊಂಪೆಗೆ ಬಂದು ಸೇರಿದ್ದಾಯ್ತು. ಏನೋ ಜಮೀನೈತೆ ಅಂತ ನಮ್ಮಪ್ಪ ಇವ್ನಿಗೆ ನನ್ನನ್ನ ಕಟ್ದ; ಇನ್ನೂ 9ನೇ ಕ್ಲಾಸ್‌ ಮುಗ್ಸಿ ಆಗ ತಾನೇ ದೊಡ್ಡೋಳಾಗಿದ್ದೆ ನಾನು.  ನಂಗೇ ಗೊತ್ತಿಲ್ದ ಹಾಗೆ ನಮ್ಮಪ್ಪ ಸೀನನ್ನ ನೋಡ್ಕೊಂಡು ಬಂದು ಮದ್ವೆ ಮಾಡ್ಲೇಬೇಕು ಅಂತ ನನ್ನನ್ನ ಒಪ್ಪಿಸಿದ್ದ. ನಾನು 10ನೇ ಕ್ಲಾಸ್‌ ಗಂಟ ಓದ್ತೀನಿ ಅಂದ್ರೂ ಕೇಳ್ಲಿಲ್ಲ. ಒಬ್ಬನೇ ಮಗ, ಇನ್ನಿಬ್ರು ಹೆಣ್‌ ಮಕ್ಳು, 5ಎಕರೆ ಸ್ವಂತ ಜಮೀನೈತೆ ಇನ್ನೇನ್‌ ಬೇಕು ಮದ್ವೆ ಮಾಡ್ಕೋ; ನಂ ಜವಾಬ್ದಾರಿ ಕಳ್ಯುತ್ತೆ ಅಂತ  ನನ್ನನ್ನ ಮನೆಯಿಂದ ದಾಟಿಸಿ ತನ್ನ ಕೈ ತೊಳ್ಕೊಂಡ ನಮ್ಮಪ್ಪ.

ಇರೋ 5 ಎಕರೆ ಜಮೀನಿನ ಸುಖ ನಮ್‌ ಗೇ ಪ್ರೀತಿ. ಕೈಲಾದಷ್ಟು ಕೆಲ್ಸ ಮಾಡಿ, ಇರೋ ಜಮೀನಲ್ಲಿ ಹುರುಳಿ, ಹತ್ತಿ, ರಾಗಿ ಬೆಳೀತಾ ಇದ್ದೀವಿ. ಕಾಲಕ್ಕೆ ತಕ್ಕಂತೆ ಮಳೆ ಆಗ್ಬೇಕು; ಜಮೀನಲ್ಲಿ ಮೈ ಬೆವರೋ ಹಾಗೆ ದುಡೀಬೇಕು; ನೆಟ್ಟಗೆ ಕೆಲ್ಸ ಮಾಡೋ ಆಳುಗಳು ಸಿಗ್ಬೇಕು; ಎಲ್ಲಾ ಸರಿಯಾಯ್ತು ಇನ್ನೇನು ಬೆಳೆ ಕಟಾವಿಗೆ ಬಂತು ಅಂದ್ರೆ  ಆನೆಗಳ ಕಾಟ ಅಥವಾ ವಿಪರೀತ ಮಳೆ. ಕೆಲವೊಂದ್ಸಲ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ; ಸಾಲ, ಸಾಲ... ಈ ವರ್ಷದ ಸಾಲ ತೀರ್ಸಿ ಉಸ್ಸಪ್ಪಾ ಅನ್ನೋವರ್ಗೆ ಮತ್ತೊಂದ್‌ ಸಲ ಉತ್ತು ಬಿತ್ತು ಮಾಡೋಕೆ ಮತ್ತೆ ಸಾಲ; ಗಂಡ್‌ ಮಕ್ಳು ಇದ್ದಿದ್ರೆ ಸ್ಕೂಲಿಗೆ ರಜಾ ಇರೋವಾಗಾದ್ರೂ ಹೊಲದ್‌ ಕೆಲ್ಸ ಮಾಡಿಸ್ಬೋದಾಗಿತ್ತು ಇರೋವು ಹೆಣ್‌ ಮಕ್ಳು; ಅವೂ ಕೈಲಾದಷ್ಟು ಕೆಲ್ಸ ಮಾಡ್ತವೆ; ಹೊರ್ಗಡೆ ಕೆಲ್ಸ ಮಾಡಕ್ಕೆ ಇಬ್ರಿಗೂ ಆಗಲ್ಲ; ಬೇಗ ಮದ್ವೆ ಆಗಿ ಒಂದರ ಹಿಂದೆ ಒಂದು ಅಂತ ಎರಡು ಮಕ್ಳು ಹುಟ್ಟಿದ್ದಕ್ಕೋ ಏನೋ? ಇಬ್ರುಗೂ ಶಕ್ತಿ ಕಡ್ಮೆನೇ.  ಸೀನಂಗೆ ಗೊತ್ತಾಗ್ದೇ ಇರೋ ಹಾಗೆ ಆಪರೇಷನ್‌ ಮಾಡ್ಸಿಕೊಂಡಿದ್ದಕ್ಕೆ ಬಚಾವ್. ಮತ್ತೆ ಮತ್ತೆ ಮಕ್ಳನ್ನ ಹೆರೋ ಕಷ್ಟ ಇಲ್ದೇ ಇದ್ರೂ ಇರೋ ಮಕ್ಳನ್ನ ನೋಡ್ಕೊಳ್ಳೋದು ಒಸಿ ಕಷ್ಟನೇ ಆಯ್ತು.  ದೊಡ್ಡೋಳು ನೋಡೋಕ್ಕೆ ಗಟ್ಟಿ; ಆದ್ರೆ ಜೀವದಲ್ಲಿ ಏನಿಲ್ಲ. 10 ವರ್ಷದ ಮಗುವಾಗಿದ್ದಾಗ ಜ್ವರ ಬಂದಿದ್ದೊಂದು ನೆಪ, ಆಸ್ಪತ್ರೆಗೆ ಹೋಗ್ಬೇಕಂದ್ರೆ 6 ಮೈಲಿ ನಡೀಬೇಕು, ನಮ್ಮನೇಲೋ ಯಾವ್ದೂ ಗಾಡಿ ಇಲ್ಲ, ಮನೆ ಔಷ್ದಿ, ಕಷಾಯ ಅಂತ ಮಾಡುವ ಹೊತ್ತಿಗೆ ಜ್ವರ ಜಾಸ್ತಿಯಾಗೇ ಬಿಡ್ತು; ಅಯ್ಯೋ ಶಿವ್ನೇ ಜ್ವರ ಕಡ್ಮೇನೇ ಆಗ್ಲಿಲ್ವಲ್ಲ ಇನ್ನು ಆಸ್ಪತ್ರೆಗೆ ಹೋಗ್ಲೇಬೇಕು ಅಂತ ಸೀನಂಗೆ ಹೇಳಿ ಯಾವ್ದಾದ್ರೂ ಗಾಡಿ ವ್ಯವಸ್ಥೆ ಮಾಡು ಅಂತ ಹೇಳ್ತಾ ಇದ್ದಂಗೆ, ಮಗು ಮುಷ್ಟಿ ಹಿಡಿಯೋಕೆ ಶುರು ಮಾಡ್ತು, ನೋಡ್ತಾ ನೋಡ್ತಾ ಎಚ್ರ ತಪ್ಪಿ ಬಿದ್ದೇ ಬಿಡ್ತು. ಈ ಥರ ಆಗೋದನ್ನ ಯಾವತ್ತೂ ನೋಡೇ ಇಲ್ದೇ ಇರೋ ನಾನು, ನನ್ ಮಗೂನ ಯಾರಾದ್ರೂ ಕಾಪಾಡಿ ಅಂತ‌ ಜೋರಾಗಿ ಕಿರಿಚಿಕೊಳ್ಳೋಕೆ ಶುರು ಮಾಡ್ದೆ. ಸದ್ಯ, ಯಾರೋ ಪುಣ್ಯಾತ್ಮರು ಗಾಡಿ ಕೊಟ್ರು; ಮಗೂಗೆ ನೀರು ಚಿಮುಕ್ಸಿ, ಗಾಳಿ ಹಾಕಿ ಅಂತ ಹೇಳ್ತಾ ಇದ್ದಂಗೇ, ಮಗೂನ ಎತ್ತಿಕೊಂಡು ಅಸ್ಪತ್ರೆಗೆ ಓಡಿದ್ದಾಯ್ತು; ಒಳ್ಳೇ ಡಾಕ್ಟ್ರು, ಮಗೂನ ಚೆನ್ನಾಗಿ ಪರೀಕ್ಷೆ ಮಾಡಿ, ಕೆಲವೊಂದು ಪರೀಕ್ಷೆ ಮಾಡ್ಸಬೇಕು; ದೊಡ್ಡಾಸ್ಪತ್ರೆಗೆ ಬರ್ಕೊಡ್ತೀನಿ, ಕರ್ಕೊಂಡು ಹೋಗಿ, ಯಾವ ಕಾರಣಕ್ಕೂ ತಡ ಮಾಡ್ಬೇಡಿ ಅಂತ ಎಚ್ಚರಿಕೆ ಹೇಳುದ್ರು. ಇದೇನಪ್ಪಾ ಗ್ರಾಚಾರ? ಏನೋ ಜ್ವರ ಕಡ್ಮೆಆಗುತ್ತೆ ಅನ್ಕೊಂಡ್ರೆ ಪರೀಕ್ಷೆ ಮಾಡ್ಬೇಕು ಅಂತ ಹೇಳ್ತಾ ಅವ್ರಲ್ಲ ಅಂತ ಯೋಚ್ನೆ ಮಾಡೀ ಮಾಡೀ ಸಾಕಾಯ್ತು. ಹಿಂಗೆ ಯೋಚ್ನೆ ಮಾಡ್ಕೊಂಡು ಅಳ್ತಾ ಕುಂತ್ಕಂಡ್ರೆ ಮಗೂ ಹುಷಾರಾಯ್ತದಾ? ಹೋಗಿ ಡಾಕ್ಟ್ರನ್ನ ನೋಡ್ಕೊಂಡ್‌ ಬನ್ನಿ ಅಂತ ನಮ್ಮತ್ತೆ. ಅದೇನ್‌ ರೋಗಿಷ್ಟ ಮಗೂನ ಹಡೆದ್ಬಿಟ್ಳೋ 10 ವರ್ಷಕ್ಕೇ ದೊಡ್ಡಾಸ್ಪತ್ರೆ ಕಾಣೋ ಹಾಗಾಯ್ತು. ದುಡ್ಡು ಎಲ್ಲಿಂದ ತರೋದು? ಆಸ್ಪತ್ರೇಲಿ ಇರ್ಬೇಕು ಅಂದ್ರೆ ಇಲ್ಲಿ ಮನೆ ಕೆಲ್ಸ ನೋಡೋರ್‌ ಯಾರು? ಅದೆಷ್ಟು ದಿನ ಆಗುತ್ತೋ ಏನೋ? ಅಂತ ಎಲ್ಲಾ ತಪ್ಪುನ್ನ ನನ್‌ ಮೇಲೆ ಹೊರೆಸಿ ಗೊಣಗಾಟ ಶುರುಮಾಡ್ದ ಸೀನ.

ಅಯ್ಯೋ ನೀನೇನ್‌ ಮಗೂಗೆ ತಂದೆ ಅಲ್ವಾ? ನಡೀ ಆಸ್ಪತ್ರೆಗೆ ಹೋಗಾಣ, ಇಲ್ಲಿ ಹೆಂಗೋ ಆಯ್ತದೆ ಅಂತ ಜೋರು ಗಂಟ್ಲು ಮಾಡಿ, ಮಗೂನ ಕರ್ಕೊಂಡು 70 ಮೈಲಿ ದೂರದಲ್ಲಿರೋ ಆಸ್ಪತ್ರೆಗೆ ಹೋಗಿದ್ದಾಯ್ತು. ನಂ ಅದೃಷ್ಟನೋ, ನಂ ಮಗು ಅದೃಷ್ಟನೋ ಅಂತೂ ಅಲ್ಲೂ ಒಳ್ಳೆ ಡಾಕ್ಟ್ರು ಸಿಕ್ಕಿದ್ರು; ಪರೀಕ್ಷೆ ಎಲ್ಲಾ ಮಾಡಿ, ನೋಡೀಮ್ಮಾ ಈ ಮಗೂಗಿರೋದು ಸಾಮಾನ್ಯವಾದ ಕಾಯಿಲೇನೇ. ಭಯ ಪಡ್ಬೇಡಿ. ಇದಕ್ಕೆ ಎಪಿಲಪ್ಸಿ ಅಥವಾ ಫಿಟ್ಸ್‌ ಅಂತಾರೆ. ವಾಸಿ ಆಗುತ್ತೆ ಆದ್ರೆ  ನಾನು ಕೊಡೋ ಮಾತ್ರೆನಾ  ಪ್ರತಿದಿನ ಬೆಳಿಗ್ಗೆ ಮಗು ತಿಂಡಿ ತಿಂದಾದ್ಮೇಲೆ ಕೊಡ್ಬೇಕು; ಒಂದು ದಿನಾನೂ ತಪ್ಪಿಸ್ಬಾರ್ದು; ನಾನು ಹೇಳೋ ಅಷ್ಟು ದಿವ್ಸ ಮಗೂಗೆ ಮಾತ್ರೆ ಕೊಡ್ಬೇಕು. ಪ್ರತಿ ಮೂರು ತಿಂಗ್ಳಿಗೆ ಬಂದು ಮಗೂನ್ನ ಪರೀಕ್ಷೆ ಮಾಡಿಸ್ಬೇಕು ಅಂದ್ಬುಟ್ರು. ಹಣೆಬರಾನ ತಪ್ಸೋರ್ಯಾರು? ಮಗೂ ಜೀವ ಉಳುದ್ರೆ ಸಾಕು; ಇನ್ಯಾವತ್ತೂ ಹೀಗಾಗ್ದೇ ಇದ್ರೆ ಸಾಕು ಅಂತ ಅವ್ರು ಹೇಳಿದ್ದಕ್ಕೆಲ್ಲಾ ಹೂಂಗುಟ್ಟಿ, ಔಷ್ದಿ ಎಲ್ಲಾ ತಗೊಂಡು ಮನೇಗೆ ಬಂದಿದ್ದಾಯ್ತು. ಎಷ್ಟಾದ್ರೂ ಹಡೆದ ಕರುಳು, ಮಗೂನ ಚೆನ್ನಾಗಿ ನೋಡ್ಕೋಬೇಕು ಅಂತ ಮನಸ್ಸನ್ನ ಗಟ್ಟಿ ಮಾಡ್ಕೊಂಡೆ; ಎಷ್ಟೇ ಕಷ್ಟ ಆದ್ರೂ ಔಷ್ದಿ ಕೊಡೋದುನ್ನ ತಪ್ಪಿಸ್ಬಾರ್ದು ಅಂತ ತೀರ್ಮಾನ ಮಾಡ್ಕೊಂಡೆ. ಹೇಗಾದ್ರೂ ಇವ್ಳು ಚೆನ್ನಾಗಿ ಓದಿ, ಕಾಲೇಜ್‌ ಮೆಟ್ಲು ಹತ್ಲಪ್ಪ, ನನ್‌ ಥರ ಇದೇ ಕೊಂಪೇಲಿ ಅವಳ ಆಯುಷ್ಯ ಕಳ್ಯೋದು ಬೇಡ ಮಾದೇಶ್ವರ ನಿಂಗೆ ತುಪ್ಪದ್‌ ದೀಪ ಬೆಳಗ್ತೀನಿ ಅಂತ ಪ್ರಾರ್ಥನೆ ಮಾಡ್ದೆ.  ಕಾಲ ಯಾರಪ್ಪನ ಮನೇದು? ಹಂಗೂ ಹಿಂಗೂ ವರ್ಷಗಳು ಕಳುದ್ವು; ನಂ ದೀಪ, ದೀಪದ ಥರಾನೇ ಬೆಳೆದ್ಲು. ನಾನೇ ಗಮ್ನ ಕೊಟ್ಟು ಮಾತ್ರೆ ಕೊಡ್ತಿದ್ದೆ. ಬೇರೆ ಏನ್‌ ಮರೆತ್ರೂ ಇದನ್ನ ಮಾತ್ರ ಮರೀತಿರ್ಲಿಲ್ಲ. ಮಧ್ಯದಲ್ಲಿ ಒಂದೇಳೆಂಟು ಸಲ ಇವ್ಳು ಎಚ್ರ ತಪ್ಪಿ ಬಿದ್ದಿದ್ರೂ ಅಂಥ ತೊಂದ್ರೆ ಏನೂ ಆಗಿರ್ಲಿಲ್ಲ; ಇನ್ನು ಅವ್ಳ ತಂಗೀನೂ ಬೆಳೀತಾ ಇದ್ಲು. ಆದ್ರೆ ಅವ್ಳಿಗೆ ಅಂತ ಕಾಯ್ಲೆ ಏನೂ ಇಲ್ದೇ ಇದ್ರೂ ದೀಪನ್‌ ಹಿಂದೇನೇ ಹುಟ್ಟಿದ್ರಿಂದ ಅಷ್ಟೇನೂ ಗಟ್ಟಿ ಇಲ್ಲ. ಇಬ್ರು ಹೆಣ್‌ ಮಕ್ಳೂ ನೋಡ್ತಾ ನೋಡ್ತಾ ದೊಡ್ಡೋರಾದ್ರು. ಇಬ್ರೂ ನೋಡೋಕ್ಕೆ ಲಕ್ಷಣವಾಗೇ ಇದ್ರು. ಹದ್ನಾರಕ್ಕೆ ಕತ್ತೇನೂ ಚೆನ್ನಾಗಿ ಕಾಣುತ್ತಂತೆ. ಈಗೀಗ ದೀಪಂಗೆ ಉದಾಸೀನ; ಅವ್ಳ ಗಮ್ನ ಎಲ್ಲೋ ಇರುತ್ತೆ. ನಾನೂ ಒಂದ್‌ ಕಣ್‌ ಅವ್ಳ ಮೇಲೆ ಇಟ್ಟೀದ್ದೀನಿ. ಬೆಳೆಯೋ ವಯಸ್ಸಿನ ಆಸೆಗಳು ನಂಗೂ ಗೊತ್ತು. 

ನಾನು ಚೆನ್ನಾಗೇ ಇದ್ದೀನಲ್ಲ; ಮಾತ್ರೆ ಯಾಕ್‌ ತಗೋಬೇಕು ಅಂತ ಒಂದೊಂದ್ಸಲ ಹಠ ಮಾಡ್ತಾಳೆ; ಅವಾಗೆಲ್ಲ ನಂ ಅಂಜು ಅವ್ಳಿಗೆ ನಿಧಾನವಾಗಿ, ಅಕ್ಕ ಮಾತ್ರೆ ತಗೋ ಅಂತ ಹೇಳಿ ಮಾತ್ರೆ ನುಂಗಿಸ್ತಾಳೆ; ಈ ಮಕ್ಳ ಹಣೇಲಿ ಏನ್‌ ಬರ್ದಿದ್ಯೋ? ಇವ್ರಿಬ್ರೂ ಚೆನ್ನಾಗಿ ಓದ್ಬೇಕು; ಸ್ಕೂಲಿಂದ ಫೋನ್‌ ಮಾಡ್ತಾನೇ ಇರ್ತಾರೆ, ಒಂದಿನ ತಪ್ಪಿಸಕೊಂಡ್ರೂ ಯಾಕೆ ಅಂತ ಕೇಳ್ತಾರೆ. ನಂ ಪುಣ್ಯ ಡಾಕ್ಟ್ರು, ಟೀಚರು ಎಲ್ರೂ ಒಳ್ಯೋರು ಸಿಕ್ಕವ್ರೆ ಅಂತ ಯೋಚ್ನೆ ಮಾಡ್ತಿದ್‌ ಹಂಗೇನೇ, ಅವ್ವಾ ಅದ್ಯಾಕೆ ಹಂಗ್‌ ಅರಚ್ತಾ ಇದ್ಯಾ? ಇವತ್ತು ಸ್ಕೂಲಿಗೆ ಹೋಗ್ತಿದ್ದೀನಿ, ನಂಗೆ ತಿಂಡಿ ಬೇಡಾ ನಾ ಹೊರ್ಟೆ ಅಂತ ದೀಪಾ ಬ್ಯಾಗ್‌ ತಗೊಂಡ್‌ ಹೊರ್ಟೇಬಿಟ್ಳು. ಅಯ್ಯೋ ಮಾದೇಶ, ಮಾತ್ರೆ ತಗೋಬೇಕು; ಒಂಚೂರು ತಿಂಡಿ ತಿನ್ನು ಅಂತ ಹೇಳ್ತಾ ಓಡ್‌ ಬಂದ್ಲು ನಂಜಿ. ಮಾತ್ರೆನೂ ಬೇಡ ಏನೂ ಬೇಡ ಬರ್ತೀನವ್ವಾ ಅಂತ ಓಡೇ ಬಿಟ್ಳು ದೀಪಾ. ಇತ್ತೀಚೆಗೆ ದೀಪಂದು ಬಾಳಾ ಆಯ್ತು ಅಂತ ಬೈಯ್ಕೊಂಡು, ಅಂಜೂ ಈ ಡಬ್ಬಿಲಿರೋ ತಿಂಡಿ ತಿಂದು ಮಾತ್ರೆ ತಗೋಳೋಕೆ ಹೇಳು ಅವ್ಳಿಗೆ ಅಂತ ತಿಂಡಿ ಡಬ್ಬಿ ಮತ್ತೆ ಮಾತ್ರೆನಾ ಅಂಜೂ ಕೈಗೆ ತುರುಕಿದ್ಲು ನಂಜಿ. ಸರಿ ಬರ್ತೀನವ್ವಾ ಅಂತ ಅವ್ಳೂ ಬ್ಯಾಗ್‌ ಏರಿಸ್ಕಂಡು ಓಡೇಬಿಟ್ಳು.

ಈ ಥರ ಎಷ್ಟೋ ಸಲ ಆಗ್ತಾ ಇತ್ತು. ನಂಜೀಗೆ ಒಳಗೊಳಗೇ ಭಯ, ಇವ್ಳು ಸ್ಕೂಲಲ್ಲಿ ಮಾತ್ರೆ ನುಂಗ್ತಾಳೋ ಇಲ್ವೋ? ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಏನ್‌ ಮಾಡೋದು ಅಂತ. ಇದೂವರ್ಗೂ ಹಂಗೇನೂ ಆಗಿಲ್ಲ ಎಲ್ಲ ಮಾದೇಶ್ವರನ್‌ ದಯೆ ಅಂತ ಅನ್ಕೊಳ್ತಾ ಕೆಲ್ಸಕ್ಕೆ ಹೋದ್ಲು ನಂಜಿ. ಇಷ್ಟು ವರ್ಷ ಆದ್ರೂ ಒಂದ್‌ ಗಾಡಿ ಇಟ್ಕೊಳ್ಳಕ್ಕೆ ಆಗ್ಲಿಲ್ಲ ನಂ ಕೈಲಿ. ಬರೋ ದುಡ್ಡು ಅಲ್ಲಿಂದಲ್ಲಿಗೇ. ಈ ವರ್ಷ ಯಾರೋ ಪುಣ್ಯಾತ್ಮರು ದೀಪ, ಅಂಜು ಇಬ್ರಿಗೂ ಸ್ಕೂಲಲ್ಲಿ ಹತ್ಹತ್ತು ಬೈಂಡ್‌ ಕೊಟ್ಟವ್ರೆ. ಅಷ್ಟು ಖರ್ಚು ನಂಗೆ ಉಳೀತು. ಹೆಂಗೋ ವರ್ಷಕ್ಕೆ ಎರಡ್‌ ಜೊತೆ ಹೊಸ ಬಟ್ಟೆ, ಊಟಕ್ಕೆ ತೊಂದ್ರೆ ಇಲ್ಲ ಅಷ್ಟೇ. ಕಷ್ಟ ಪಟ್ಟು ಒಂದ್‌ ಕೀಪ್ಯಾಡ್‌ ಮೊಬೈಲ್‌ ತಗೊಂಡಿದ್ದೇ ಸಾಧ್ನೆ. ಟಿವಿ-ಗಿವಿ ಎಲ್ಲಾ ದೂರದ್‌ ಮಾತು. ಈ ಕರೋನಾ ಟೈಮಲ್ಲಿ ಒಂದ್‌ ಟಚ್‌ ಮೊಬೈಲ್‌ ತಗೊಳ್ಳಿ ಅಂತ ಮಾಷ್ಟ್ರು ಹೇಳಿದ್ರು ಆದ್ರೆ ಆಗ್ಲಿಲ್ಲ; ಅದೇನೋ ಆನ್‌ ಲೈನ್‌ ಕ್ಲಾಸಂತೆ, ಹೆಂಗೋ ನಂ ಪಕ್ಕದ್ಮನೆ ಹುಡ್ಗಿ ಹತ್ರ ಕೂತ್ಕೊಂಡು, ಮೊಬೈಲ್‌ ನೋಡ್ಕಂಡು ಓದ್ಕತಾ ಇದ್ರು ಮಕ್ಳು. ನಮ್ಮೂರಲ್ಲಿ ಈ ರೋಗ ತೊಂದ್ರೆ ಕೊಡ್ಲಿಲ್ಲ; ಈಗ ಸ್ಕೂಲ್‌ ಬಾಗ್ಲು ತೆಗೀತು. ಇನ್‌ ಯೋಚ್ನೆ ಇಲ್ಲ ಅಂತಿದ್‌ ಹಾಗೇನೇ, ನಂಜೀ ಬೇಗ ಮನೇಕೆಲ್ಸ ಮುಗ್ಸಿ, ಹೊಲದ್‌ ಕಡೆ ಬಂದ್ಬುಡು ಇವೊತ್ತು ಹತ್ತಿ ಬಿಡಿಸ್ಬೇಕು ಅಂತ ಹೇಳ್ತಾನೇ ಟವೆಲ್‌ ಹಾಕ್ಕೊಂಡು ಹೋದ ಸೀನ. ಇನ್‌ ಹೊಲದ್‌ ಕಡೆ ಹೋದ್ರೆ ಬರೋದು ಸಂಜೆಗೇ ಅನ್ಕೊಂಡು ಮನೆ ಕೆಲ್ಸ ಮಾಡಿ ಹೊಲಕ್ಕೆ ಹೋದ್ಲು ನಂಜಿ.

ಮೇಲ್ಗಡೆ ಸುಡುಸುಡು ಬಿಸ್ಲು. ಮೈ ಎಲ್ಲಾ ಬೆವ್ರು. ಅಪ್ಪಾ ಇದೇನ್‌ ಇಂತಾ ಬಿಸ್ಲು ಇವತ್ತು ಅಂತ ಆಕಾಶ ನೋಡ್ತಿದ್ದ ಹಾಗೇ ಸೀನನ ಫೋನ್‌ ಒಂದೇ ಸಮ ಬಡ್ಕೊಳ್ಳೋಕೆ ಶುರು ಮಾಡ್ತು. ಕೆಲ್ಸ ಮಾಡ್ತಾ ಇದ್ದ ಸೀನ  ಫೋನೆತ್ತಿ ಮಾತಾಡ್ತಾ ಅಯ್ಯೋ ನಾವಿಲ್ಲಿಂದ ಬರ್ಬೇಕು ಅಂದ್ರೆ ಸುಮ್ನೆ ಆಯ್ತದಾ? ಗಾಡಿ ಇಲ್ಲ ಸಾರ್.‌ ಹೆಂಗ್‌ ಬರೋದು? ಹತ್ತಿ ಬುಡುಸ್ತಾ ಇದ್ದೀವಿ ಸಾರ್‌  ಹುಷಾರಾಗೆ ಇದ್ಲು ಸಾರ್‌ ಅಂತ ಹೇಳೋದು ಕೇಳಿ ನಂಜೀಗೆ ಗಾಬ್ರಿ ಆಯ್ತು. ಇವ್ನು ಯಾರ್‌ ಹತ್ರ ಮಾತಾಡ್ತಾ ಇದ್ದಾನಪ್ಪ ಅಂತ? ಆಯ್ತು ಸಾರ್‌ ಆಯ್ತು ಸಾರ್‌ ಅಂತಾನೇ ಫೋನ್‌ ಮಡಗ್ದ ಸೀನ. ಏನಾಯ್ತು ಸೀನ? ಅಂತಿದ್ದಂಗೇ, ಅಯ್ಯೋ ದೀಪ ಸ್ಕೂಲಲ್ಲಿ ಬಿದ್ಬುಟ್ಳಂತೆ, ವಾಂತಿ ಆಯ್ತಂತೆ, ಲಂಗಾನೂ ಒದ್ದೆ ಮಾಡ್ಕಂಡ್ಳಂತೆ,  ಪಾಪ ಅಂಜು, ಎಲ್ಲಾ ಕಿಲೀನ್‌ ಮಾಡುದ್ಲಂತೆ. ಅಂತ ಹೇಳ್ದ ಸೀನ. ಅಯ್ಯೋ ಮಾದೇಶ, ನಾನ್‌ ಏನ್‌ ಆಗ್ಬಾರ್ದು ಅನ್ಕೊಂಡಿದ್ನೋ ಅದೇ ಆಯ್ತಲ್ಲಪ್ಪ, ಸೀನ ಯಾರ್‌ ಹತ್ರಾನಾದ್ರೂ ಗಾಡಿ ಇಸ್ಕೋ, ಸ್ಕೂಲಿಗೆ ಹೋಗಾಣ ಅಂದ್ರೆ, ಏಯ್‌ ಬರ್ತಾಳೆ ಬಿಡು, ಈ ಕೆಲ್ಸ ಮಾಡು. ಈಗ ಹತ್ತಿ ಬುಡುಸ್ಲಿಲ್ಲ ಅಂದ್ರೆ ಗೊತ್ತಲ್ಲ, ಬರೋ ದುಡ್ಡೂ ಬರಲ್ಲ. ಅಂತ ಹೇಳ್ತಾ ಇದ್ದ ಸೀನನ್ನ ನೋಡಿ ನಂಜೀಗೆ ಪಿತ್ಥ ನೆತ್ತಿಗೇರ್ತು. ಹೋಗ್ಲಿ ಅದೇ ನಂಬರ್ಗೆ ಫೋನ್‌ ಮಾಡ್ಕೊಡು ನಾನ್‌ ಮಾತಾಡ್ತೀನಿ ಅಂತ ಫೋನ್‌ ಮಾಡಿ, ಮಾಷ್ಟ್ರ ಹತ್ರ ಮಾತಾಡಿ ದೀಪಂಗೆ ಫೋನ್‌ ಕೊಡಿ ಅಂತ ಹೇಳಿ ದೀಪಾ ಮಾತ್ರೆ ನುಂಗ್ದ್ಯಾ? ಅಂತ ಕೇಳೋಷ್ಟರಲ್ಲಿ ಫೋನ್‌ ಕಟ್‌ ಆಯ್ತು. ಈ ಊರಲ್ಲಿ ಸಿಗ್ನಲ್‌ ಎಲ್ಲಿ ಸಿಗುತ್ತೆ? ಎಲ್ಲ ನನ್‌ ಕರ್ಮ ಅಂತ ಗೊಣಗಾಡ್ತಾ ಒಲ್ಲದ ಮನ್ಸಿಂದ ಹತ್ತಿ ಬಿಡ್ಸೋದನ್ನ ಮುಂದುವರ್ಸಿದ್ಲು ನಂಜಿ.

ಸಂಜೆ ಆಯ್ತು. ಮಗಳು ಬರೋದನ್ನೇ ಕಾಯ್ತಾ ಕೂತ್ಲು ನಂಜಿ. ಮಕ್ಕಳಿಬ್ರೂ ಬಂದ್ರು. ದೀಪನ್‌ ಮುಖ ನೋಡ್ತಿದ್ದ ಹಾಗೇ, ಓಡ್ಹೋಗಿ ಅವ್ಳನ್ನ ತಬ್ಕೊಂಡ್ಲು ನಂಜಿ. ದೀಪಾ, ಯಾಕೇ ನನ್ನವ್ವ? ಏನಾಯ್ತು? ಮಾತ್ರೆ ತಗೊಂಡ್ಲಿಲ್ವಾ? ಯಾಕವ್ವಾ ಬಿದ್ದೆ? ಎಚ್ರ ತಪ್ತಾ? ಇಷ್ಟು ದೊಡ್ಡೋಳನ್ನಾಗಿ ಮಾಡಕ್ಕೆ ನಾನ್‌ ಎಷ್ಟ್‌ ಕಷ್ಟ ಪಟ್ಟಿದ್ದೀನಿ ಗೊತ್ತಾವ್ವಾ? ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ನಾನ್‌ ಜೀವ ಸಹಿತ ಉಳೀತೀನಿ ಅಂದ್ಕೊಂಡ್ಯಾ? ದೀಪಾ ದೀಪಾ ಅಂತ ಮಗ್ಳನ್ನ ಮತ್ತಷ್ಟು ಬಿಗಿಯಾಗಿ ಹಿಡ್ಕೊಂಡ್ಳು ನಂಜಿ.

ಅವ್ವಾ ಇವತ್‌ ಮಾತ್ರ ಅಲ್ಲ, ದೀಪ ಎಷ್ಟೋ ಸಲ ಮಾತ್ರೇನೇ ತಗೊಳಲ್ಲ, ಕೊಟ್ರೆ ಬಿಸಾಕ್ತಾಳೆ. ನಾನ್‌ ಚೆನ್ನಾಗಿದ್ದೀನಿ ನಂಗ್‌ ಬೇಡ ಅಂತ ಕೂಗ್ತಾಳೆ. ಸ್ಕೂಲಲ್ಲಿ ಎರಡ್ಮೂರ್‌ ಸಲ ಬಿದ್ದಿದ್ದಾಳೆ ಅವ್ವಾ. ಹೇಳಿದ್ರೆ ನನ್ನಾಣೆ ಅಂತ ಆಣೆ ಹಾಕಿಸ್ಕೊಂಡವ್ಳೆ. ಇವತ್ತು ಮಾಷ್ಟ್ರು ಕ್ಲಾಸಲ್ಲಿ ಇದ್ದಾಗ್ಲೇ ಬಿದ್ಲು. ಅದ್ಕೇ ಫೋನ್‌ ಮಾಡಿದ್ರು ಅಂತ ಅಂಜು ಹೇಳ್ತಿದ್‌ ಹಾಗೇ, ನಂಜೀ ಸಿಟ್ನಿಂದ ದೀಪಂಗೆ ಎರಡೇಟು ಬಿಗಿದ್ಲು. ಯಾಕೇ ಯಾಕೇ ನನ್‌ ಹೊಟ್ಟೆ ಉರುಸ್ತ್ಯಾ? ಯಾಕ್‌ ಮಾತ್ರೆ ತಗೊಳಲ್ಲ? ಗೊತ್ತಾ ನಿಂಗೆ ನಾನ್‌ ಎಷ್ಟ್‌ ಕಷ್ಟ ಪಟ್ಟಿದ್ದೀನಿ ಅಂತ?? ಯಾರ್‌ ಯಾರ್‌ ಹತ್ರ ಏನೇನ್‌ ಅನ್ಸ್ಕೊಂಡಿದ್ದೀನಿ ಗೊತ್ತಾ? ನಾನ್‌ ಸೀರೆ ತಗೊಳ್ದೇ ಇದ್ರೂ ನಿನ್‌ ಔಷ್ದಿಗೆ ಯಾವತ್ತೂ ಕಡ್ಮೆ ಮಾಡಿಲ್ಲ ಗೊತ್ತಾ? ಅಂತಾದ್ರಲ್ಲಿ ಮಾತ್ರೆನಾ ಎಸ್ಯೋಷ್ಟು ಕೊಬ್ಬೈತಾ ನಿಂಗೆ ಅಂತ ಇನ್ನೂ ಎರಡು ಬಾರಿಸಿದ್ಲು. ಬಿಡವ್ವ, ಬಿಡವ್ವ ನನ್ನನ್ನ. ಆಯ್ತು ಇನ್ಮೇಲೇ ತಗೋತೀನಿ  ಮಾತ್ರೆಯಾ. ನನ್ನ ಹೊಡ್ದು ಸಾಯಿಸ್ಬುಡ್ಬೇಡ ಕಣವ್ವಾ ಅಂತ ಜೋರಾಗಿ ಅತ್ಲು ದೀಪಾ. ನಿನ್ನನ್ನ ಸಾಯ್ಸೋಕೆ ಅಲ್ಲ ಕಣೇ ನಾನ್‌ ಹಡ್ದಿದ್ದು. ನೀನ್‌ ಚೆಂದಾಗಿ ಓದಿ ಕಾಲೇಜ್‌ ಸೇರ್ಕಬೇಕು ಒಂದ್‌ ಕೆಲ್ಸ ಅಂತ ಮಾಡ್ಬೇಕು; ಸ್ವಲ್ಪ ಸಿಟಿ ಮುಖ ನೋಡ್ಬೇಕು ಅಂತ ಕನ್ಸು ಕಣೇ ದೀಪಾ ಅದೇ ನನ್‌ ಕನ್ಸು. ಅಂತ ಮಗ್ಳಿಗೆ ಹೊಡೆದ ಕೈನಲ್ಲೇ ತನ್‌ ತಲೇನ ಹೊಡ್ಕೊಂಡ್ಳು ನಂಜಿ. ಬಿಡವ್ವಾ ಆಯ್ತು; ಇನ್ಮೇಲೆ ನಾನ್‌ ಅವ್ಳನ್ನ ಇನ್ನೂ ಚೆನ್ನಾಗ್‌ ನೋಡ್ಕೋತ್ತೀನಿ ನೀನ್‌ ಅಳ್ಬೇಡ ಅವ್ವಾ ಅಂತ ಅಮ್ಮನ್‌ ಕೈ ಹಿಡ್ಕೊಂಡ್ಳು ಅಂಜು. ಇದೇನಿದು? ಅವಾಗಿಂದಾ ನೋಡ್ತಾ ಇದ್ದೀನಿ ಅದೇನ್‌  ಅಮ್ಮ  ಮಕ್ಳ ನಾಟ್ಕ? ಇದೆಲ್ಲ ಸಾಕು; ಮೊದ್ಲು ಊಟಕ್ಕಿಕ್ಕು ಅಂತ ಜೋರ್‌ ಮಾಡ್ದ ಸೀನ. ಯಾವಾಗ್ಲೂ ಊಟದ್ದೇ ಗ್ಯಾನ ನಿಂಗೆ ಅಂತ ತಲೆ ಗಂಟು ಹಾಕ್ಕೊಳ್ತಾ, ಕಣ್ಣೀರನ್ನ ಸೆರಗಲ್ಲಿ ಒರೆಸ್ಕೊಂಡು ಎದ್ಲು ನಂಜಿ. ಮಕ್ಳಿಬ್ರೂ ಅಳ್ತಾನೇ ಊಟಕ್ಕೆ ಎದ್ರು.

ಒಂದ್‌ ವಾರ ಎಲ್ಲಾ ಸರ್ಯಾಗಿತ್ತು. ಆಮೇಲೆ ಕರೋನಾ ಜಾಸ್ತಿಯಾಯ್ತು ಅಂತ ಸ್ಕೂಲ್‌ ಬಾಗ್ಲು ಮತ್ತೆ ಮುಚ್ಬಿಟ್ರು. ಬೆಳಿಗ್ಗೆ ಎದ್ರೆ ಇಬ್ರೂ ಮಕ್ಳು ಬ್ಯಾಗ್‌ ತಗೊಂಡು ಸ್ಕೂಲಿಗೆ ಹೋಗ್ತಾ ಇದ್‌ ದೃಶ್ಯ ಮಾಯವಾಗೋಯ್ತು. ಈಗ ಮನೇಲೇ ಇಬ್ರೂ ಉಳ್ಕೊಂಡ್‌ ಬಿಟ್ರು. ಟಚ್‌ ಫೋನ್‌ ತಗೋಬೋಕು ಅಂತ ಅನ್ಕೊಂಡ್ರೂ ಇಲ್ಲಿ ಸಿಗ್ನಲ್‌ ಸಿಗಲ್ಲ ಅಂತನೋ ದುಡ್ಡಿಲ್ಲ ಅಂತಾನೋ ಒಟ್ನಲ್ಲಿ ಫೋನ್‌ ತಗೊಳ್ಳೊಕೆ ಆಗ್ಲಿಲ್ಲ; ದೀಪಾ ಬೇರೆ ದೊಡ್‌ ಪರೀಕ್ಷೆ ಬರೀಬೇಕು; ಪರೀಕ್ಷೆ ನಡ್ಯತ್ತೋ ಇಲ್ವೋ ಅಂತಾನೇ ಗೊತ್ತಿಲ್ಲ; ಅಯ್ಯೋ ಇದೆಲ್ಲ ಯಾವಾಗ್‌ ಮುಗ್ಯತ್ತೋ? ನನ್‌ ಮಗ್ಳು ಕಾಲೇಜ್‌ ಮುಖ ನೋಡ್ತಾಳೋ ಇಲ್ವೋ ಅಂತ ಯೋಚ್ನೆ ಆಗ್ತಿತ್ತು ನಂಜೀಗೆ. ಸ್ಕೂಲಿಂದ ವಾರಕ್ಕೆ ಮೂರು ಸಲ ಫೋನ್‌ ಬರ್ತಿತ್ತು. ಪರೀಕ್ಷೆ ಇರುತ್ತೆ ಮಕ್ಳು ಓದ್ಕೋಬೇಕು; ಅಂತ್ಹೇಳಿ ಒಂದಷ್ಟ್‌ ಬರ್ಯೋಕೂ ಕೊಡ್ತಿದ್ರು. ಆದ್ರೂ ಸ್ಕೂಲಲ್ಲಿ ಕಲ್ತ್ಹಂಗೆ ಆಗ್ಲಿಲ್ಲ. ಇನ್ನು ದೀಪಾ ಅವ್ಳ ಫ್ರೆಂಡ್‌ ಜೊತೆ ಆನ್‌ ಲೈನ್‌ ಕ್ಲಾಸ್‌ ಗೆ ಹೋಗ್ತಿನಿ ಅಂತ ಆ ಟಚ್‌ ಮೊಬೈಲ್‌ ನೋಡ್ಕೊಂಡು ಓದ್ಕೊಳ್ತಾ ಇದ್ಲು. ಮನೇಲೇ ಇದ್ದಿದ್ರಿಂದ ಮನೇ ಕೆಲ್ಸ ಎಲ್ಲಾ ಮಕ್ಳೇ ನಿಭಾಯಿಸ್ತಾ ಇದ್ರು; ಹೊಲದ್‌ ಕೆಲ್ಸ ನಂಜಿ, ಸೀನ ಸೇರ್ಕೊಂಡು ಮಾಡ್ತಾ ಇದ್ರು.

ಒಂದಿನ ಸೀನ ಮನೆಗ್‌ ಬಂದು, ನಂಜೀ ನಂ ದೀಪಂಗೆ ಒಂದು ಸಂಬಂಧ ಬಂದಿದೆ. ದೀಪನ್ನ ಅವ್ರು ಈಗಾಗ್ಲೇ ನೋಡಿದಾರಂತೆ. ಹುಡ್ಗ 10ನೇ ಕ್ಲಾಸ್‌ ಓದಿದಾನಂತೆ; ಮಾಮೂಲಿ ಜಮೀನ್‌ ಕೆಲ್ಸ, ಇಲ್ಲೇ ಪಕ್ಕದೂರು. ಅವ್ರೇ ಮದ್ವೆ ಖರ್ಚೆಲ್ಲ ಹಾಕಿ ಮದ್ವೆ ಮಾಡ್ಕೊತಾರಂತೆ, ಜೊತೆಗೆ ನಮ್‌ ಗೆ ಒಂದ್‌ ಲಕ್ಷ ಕೊಡ್ತಾರಂತೆ ಮದ್ವೆ ಮಾಡ್ಬಿಡೋಣ ಕಣೇ ಅಂತಿದ್‌ ಹಾಗೇ ಸಿಡಿದ್‌ ಬಿದ್ಲು ನಂಜಿ. ಈಗಿನ್ನೂ 16 ಆಯ್ತಾ ಇದೆ, ಈಗ್ಲೇ ಮದ್ವೆ ಅಂತೆ, ಮಕ್ಳು ಮನೇಲಿರೋದು ನಿನ್‌ ಕಣ್ಣಿಗ್‌ ಬಂತು ನೋಡು. ಆ ಮಕ್ಳು ಓದ್ಲಿ ಬುಡು. ಇನ್ನೊಂದ್‌ ತಿಂಗ್ಳು ಪರೀಕ್ಷೆ ಬರುತ್ತೆ; ಹೆಂಗೋ ಆಯ್ತದೆ, ಇಷ್ಟ್‌ ಬೇಗ ಮದ್ವೆ ಗಿದ್ವೆ ಬೇಡ ಅಂತ ಕಡ್ಡಿ ತುಂಡ್‌ ಮಾಡ್ದಂಗೆ ಹೇಳ್ಬಿಟ್ಲು. ಅಷ್ಟೊತ್ತಿಗೆ ದೀಪಾನೂ ಬಂದ್ಲು. ಅಪ್ಪಾ ನಂಗೆ ಮದ್ವೆ ಈಗ್ಲೇ ಬ್ಯಾಡಾ, ನಾನು ಓದ್ಬೇಕು, ನಮಗೆ ಕಾಲೇಜಿಗೂ ದುಡ್ಡೇನೂ ಕಟ್ಟಂಗಿಲ್ವಂತೆ; ನಂ ಮಾಷ್ಟ್ರು ಹೇಳವ್ರೆ; 18 ವರ್ಷ ಆಗೋಗಂಟ ಮದ್ವೆ ಮಾಡ್ಕೋಬಾರ್ದು ಅಂತ, ನಾನ್‌ ಇಷ್ಟ್‌ ಬೇಗ ಮದ್ವೆ ಆಗಲ್ಲ ಅಂತ ರಾಗ ಹಾಡಿದ್ಲು. ನಿಮ್‌ ಮಾಷ್ಟ್ರು ಬಂದು ನಂ ಸಾಲ ತೀರಿಸ್ತಾರಾ? ನೀನ್‌ ಸ್ವಲ್ಪ ಬಾಯ್‌ ಮುಚ್ಕೊಂಡಿರು; ನಿಂಗೆ ಕಾಯ್ಲೆ ಬೇರೆ; ಹುಡುಗನ್‌ ಕಡೆಯವ್ರಿಗೆ ಅದು ಗೊತ್ತಿಲ್ಲ; ನಾನು ಹೇಳೋದೂ ಇಲ್ಲ; ನಾವು ಲಕ್ಷ ಸಂಪಾದ್ನೆ ಮಾಡ್ಬೇಕು ಅಂದ್ರೆ 10 ವರ್ಷ ಆದ್ರೂ ಆಗಲ್ಲ; ನಿಂದಾದ್ಮೇಲೆ ಅಂಜು ಮದ್ವೆ ಮಾಡ್ಬೇಕು. ಎಷ್ಟ್‌ ಓದ್ಸಿದ್ರೂ ಮದ್ವೆ ಅಂತೂ ಮಾಡ್ಲೇಬೇಕು ತಾನೇ?? ಸುಮ್ನೆ ಒಪ್ಕೊ ಅಂತ ದಬಾಯಿಸಿದ ಸೀನ. ಅವ್ವಾ ನೀನಾದ್ರೂ ಹೇಳವ್ವಾ. ನಾನು ಓದ್ಬೇಕು; ಮದ್ವೆ ಬೇಡ ಅಂತ ಅಳೋಕೆ ಶುರು ಮಾಡ್ಬಿಟ್ಳು ದೀಪಾ. ಇದೆಲ್ಲ ನೋಡ್ತಾ ಇದ್ದ ಅಂಜೂಗೆ ಪರಿಸ್ಥಿತಿ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಯ್ತು. ನೀವ್‌ ಅಮ್ಮ ಮಗ್ಳು ಎಷ್ಟ್‌ ಬಡ್ಕೊಂಡ್ರೂ ಅಷ್ಟೇ. ಮದ್ವೆ ಮಾಡದೇಯಾ. ನಿಮ್ಗೆ ನಾನ್‌ ಬೇಕಾ ನಿಮ್‌ ಕಾಲೇಜ್‌ ಬೇಕಾ ಅಂತ ನಿರ್ಧಾರ ಮಾಡಿ. ಏನಾದ್ರೂ ಮದ್ವೆಗೆ ಒಪ್ಕೊಂಡ್ಲಿಲ್ಲ ಅಂದ್ರೆ ನನ್‌ ಹೆಣ ನೋಡ್ಬೇಕಾಯ್ತದೆ ನೀವಿಬ್ರೂ ತಿಳ್ಕಳಿ ಅಂತ ಎದ್‌ ಹೋಗೇಬಿಟ್ಟ ಸೀನ.

ಮುಂದಿನದೆಲ್ಲ ಕಣ್ಮುಚ್ಚಿಬಿಡುವಷ್ಟರಲ್ಲಿ ನಡೆದೇ ಹೋಯಿತು. ಹುಡುಗ ನಾಗ ನೋಡಲು ಸುಮಾರಾಗಿದ್ದ, ದೀಪಾಳ ಲಕ್ಷಣಕ್ಕೆ ಅವನ ಜೋಡಿ ಅಷ್ಟಕ್ಕಷ್ಟೇ. ಆದ್ರೂ ಹಣವೆಂಬ ಮಾಯಾಜಾಲದಲ್ಲಿ ಬಿದ್ದ ಸೀನ ಮಗಳನ್ನ ನಾಗಂಗೆ ಮದ್ವೆ ಮಾಡಿಕೊಟ್ಟೇ ಬಿಟ್ಟ. ನಂಜಿ ಅವುಡುಗಚ್ಚಿ, ಕಣ್ಣೀರಿಡುತ್ತಲೇ ದೀಪಾಳನ್ನು ಗಂಡನ ಮನೆಗೆ ಕಳಿಸಿಕೊಟ್ಳು. ಸೀನ 1 ಲಕ್ಷ ರೂಪಾಯಲ್ಲಿ ಸ್ವಲ್ಪ ಸಾಲ ತೀರಿಸ್ದ, ಸ್ವಲ್ಪ ದುಡ್ಡಲ್ಲಿ ಕುಡ್ದು ಮಜಾ ಮಾಡ್ದ. ನಂಜಿ ಅವನ ಹತ್ರ ಜಗಳ ಆಡಿ 25000 ರೂಪಾಯಿ ಬ್ಯಾಂಕಲ್ಲಿ ಇಟ್ಳು. ಇನ್ನೂ ಸ್ಕೂಲ್‌ ಬಾಗ್ಲು ತೆಗೆದಿಲ್ಲ. ಅಂಜು ಮನೇಲೇ ಇದ್ಲು. ಈಗೊಂಚೂರು ಮೈ ಕೈ ತುಂಬ್ಕೊಂಡು ಚೆನ್ನಾಗಿ ಕಾಣಿಸ್ತಿದ್ಲು.

ಪರೀಕ್ಷೆ, ಕಾಲೇಜಿನ ಕನವರಿಕೆಯಲ್ಲಿದ್ದ ದೀಪಾ ನಾಗನ್ನ ಒಪ್ಪಿಸಿ ಪರೀಕ್ಷೆ ಬರೆದೇ ಬಿಟ್ಳು. ಆದ್ರೆ ಯಾವ ಕಾರಣಕ್ಕೂ ಕಾಲೇಜಿಗೆ ಕಳ್ಸಲ್ಲ ಅಂತ ಖಡಾಖಂಡಿತವಾಗಿ ಹೇಳ್ಬಿಟ್ಟ ನಾಗ. ತಾನೂ ತನ್ನ ಓರಗೆಯ ಹುಡುಗಿಯರಂತೆ ಕಾಲೇಜಿಗೆ ಹೋಗಬೇಕೆಂಬ ಆಸೆಯಲ್ಲಿ ಕನಸು ಕಾಣುತ್ತಿದ್ದ ದೀಪ ಮಾತ್ರೆ ತಗೊಳೋದನ್ನ ಮರೆತ್ಲು. ಮದ್ವೆಯಾದ ಹೊಸತು ಎಲ್ಲವೂ ಚೆನ್ನಾಗೇ ಇತ್ತು. ನಾಗ ಅವತ್ತು ಮಧ್ಯಾಹ್ನ ಊಟಕ್ಕೆ ಮನೆಗೆ ಬಂದ. ಕೆಲ್ಸ ಮಾಡಿಬಂದ ಸುಸ್ತೋ ಏನೋ ದೀಪಾ... ದೀಪಾ.... ಅಂತ ಜೋರಾಗಿ ಕರೀತಾನೇ, ಊಟಕ್ಕಿಕ್ಕು ಅಂತ ಕೈಕಾಲು ತೊಳ್ಯೋಕೆ ಹೋದ. ಸಾಂಬಾರ್‌ ಸ್ವಲ್ಪ ಕುದೀಬೇಕು... ಬಂದೇ ಅಂತ ತಟ್ಟೆ ಇಡೋದಕ್ಕೆ ಅಡುಗೆ ಮನೆಗೆ ಓಡಿದಳು ದೀಪಾ. ತಟ್ಟೆ ತೆಗೀಬೇಕು ಅನ್ನೋಷ್ಟರಲ್ಲಿ ಒಂಥರಾ ತಲೆ ತಿರುಗಿದ ಹಾಗೆ, ಅವ್ಳಿಗೆ ಗೊತ್ತಾಯ್ತು ತಾನು ಬೀಳ್ತೀನಿ ಅಂತ.... ಕಷ್ಟಪಟ್ಟು ತಡ್ಯೋಕೆ ನೋಡಿದ್ಲು... ಮಾತ್ರೆ ತಗೊಂಡ್ಯಾ??? ಅನ್ನೋ ಅವ್ವನ ಪ್ರಶ್ನೆ  ಕಿವೀಲಿ ಕೇಳ್ತಾ ಇದ್‌ ಹಾಗೇ ಊಹ್ಞೂಂ ಇನ್ನು ಸಾಧ್ಯ ಆಗ್ಲಿಲ್ಲ ಬಿದ್ಲು, ತಟ್ಟೆ ದಢಾರ್‌ ಅಂತ ಶಬ್ದ ಆಯ್ತು, ಓಡಿ ಬಂದ ನಾಗ, ದೀಪಾ ಅವ್ತಾರ ನೋಡಿ ಗಾಬ್ರಿ ಆಗ್ಬಿಟ್ಟ. ಕೈಕಾಲು ಸೆಟೆದುಕೊಂಡು ದೀಪಾ ಬಿದ್ದಿದ್ದಾಳೆ, ಬಾಯಲ್ಲಿ ನೊರೆ, ಅವಳ ಚೂಡಿದಾರವೆಲ್ಲ ಒದ್ದೆ. ಪ್ರಜ್ಞೆ ತಪ್ಪಿದೆ. ಇಂತಹ ಸ್ಥಿತಿಯನ್ನು ಊಹೆಯೇ ಮಾಡಿರದ ನಾಗ ಬೆಚ್ಚಿಬಿದ್ದ. ಇವ್ಳನ್ನೇನಾ ನಾನು ನೋಡಿ ಮದ್ವೆ ಆಗ್ತೀನಿ ಅಂದಿದ್ದು? ಇವ್ಳೇನಾ ನನ್‌ ಹೆಂಡ್ತಿ? ಇಲ್ಲ ಖಂಡಿತ ಇಲ್ಲ. ನಾನು ಇಂತ ಹುಡ್ಗಿ ಜೊತೆ ಸಂಸಾರ ಮಾಡಲ್ಲ ಅಂತ ಅವ್ನ ಮನಸ್ಸು ಕೂಗಿ ಹೇಳ್ತು. ಏನೂ ಮಾಡೋದಕ್ಕೆ ತೋಚ್ದೆ, ಮುಖದ್‌ ಮೇಲೆ ಸ್ವಲ್ಪ ನೀರು ಹಾಕ್ದ. ಒಂದೆರೆಡು ನಿಮಿಷ ಆದ್ಮೇಲೆ ದೀಪಾ ಎದ್ದು ಕೂತ್ಲು. ಒಂದ್ಹತ್ತು ನಿಮಿಷ ಹಂಗೇ ಕೂತಿದ್ಲು. ಆಮೇಲೆ ನಿಧಾನಕ್ಕೆ ಎದ್ದು ಮುಖ ತೊಳ್ಕೊಂಡು ಮಲಗಿಬಿಟ್ಳು. ನಾಗ ಅಪ್ಪ ಅಮ್ಮನ ಹತ್ರ ಗಲಾಟೆ ಮಾಡ್ದ. ನಂಗೆ ಇವ್ಳು ಬೇಡ. ಅವ್ಳನ್ನ ಬಿಡ್ತೀನಿ. ಇಂಥ ಹುಡ್ಗಿ ಜೊತೆ ಖಂಡಿತ ನಾನಿರಲ್ಲ. ಇವ್ಳನ್ನ ಅವಳ ತವರು ಮನೇಗೆ ಕಳ್ಸಿಬಿಡೋಣ ಅಂದ.

ಹೊತ್ತಾರೆನೇ ಎದ್ದು ಹೆಂಗೂ ಮನೆ ಕೆಲ್ಸ ಅಂಜು ಮಾಡ್ತಾಳೆ ನಾನು ಹಟ್ಟೀ ಕೆಲ್ಸ ಮುಗ್ಸಿ, ಹೊಲಕ್ಕೆ ಹೋಯ್ತೀನಿ ಅಂತ ಅನ್ಕೊಳ್ತಾ, ಯಾಕೋ ಇವತ್ತು ಮನ್ಸೇ ಸರಿಯಿಲ್ಲ.ತಿಂಡಿ ಗಿಂಡಿ ಬೇಡ, ರಾಗಿ ಅಂಬಲಿ ಮಾಡಕ್ಕೆ ಅಂಜುಗೆ ಹೇಳ್ತೀನಿ. ಯಾಕೋ ಒಂಥರಾ ಸಂಕ್ಟ. ಹೊಟ್ಟೆಯೆಲ್ಲಾ ಕಲುಸ್ದಂಗೇ, ರಾಗಿ ಅಂಬ್ಲಿ ಕುಡುದ್ರೆ  ಹೊಟ್ಟೆ ತಣ್ಣಗಾಯ್ತದೆ ಅಂತ ಅನ್ಕೊಳ್ತಾ ಕೈ ಕಾಲು ಮುಖ ತೊಳೆದಳು ನಂಜಿ. ದೀಪಾ ಮದ್ವೆ ಆಗಿ 1 ತಿಂಗ್ಳಾಯ್ತು. ಯಾವಾಗ್ಲಾದ್ರೂ ಫೋನ್‌ ಮಾಡ್ತಾಳೆ. ನಾಗ ಚೆನ್ನಾಗಿ ನೋಡ್ಕೊತಾ ಅವ್ನೆ ಅನ್ಸುತ್ತೆ. ಪರೀಕ್ಷೆ ಬರುದ್ಲು ಆದ್ರೆ ಕಾಲೇಜ್‌ ಮೆಟ್ಲು ಹತ್ತಕ್ಕಾಗ್ಲಿಲ್ಲ; ಇರ್ಲಿ, 10ನೇ ಕ್ಲಾಸಾದ್ರೂ  ಓದಿದ್ಲಲ್ಲ ಅವ್ಳ ಹಣೇಲಿ ಅದೇ ಬರ್ದಿತ್ತು ಅನ್ಸುತ್ತೆ. ಹೊಟ್ಟೇಲಿ ಹುಟ್ಟಿದ್‌ ಮಕ್ಳು ಚೆಂದಾಗಿದ್ರೆ ತಾಯಿ ಆದೋಳಿಗೆ ಸಂತೋಷ ಅಂತ ಅನ್ಕೊಳ್ತಾ ಹೊಟ್ಟೆ ಹಿಡಿದುಕೊಂಡೇ ಕೆಲ್ಸಕ್ಕೆ ಶುರುವಿಟ್ಕೊಂಡ್ಲು ನಂಜಿ. ಈ ಸೀನಂಗೆ ಬೆಳಗಾಗೋದು ತಡ. ನಿನ್ನೆ ಬೇರೆ ಚೆನ್ನಾಗೇ ಕುಡ್ದಿದ್ದಾನೆ ಇರ್ಲಿ ಎಬ್ಬಿಸ್ತೀನಿ ಅಂತ ಒಳಗೆ ಹೋಗೋಕೂ, ಗಾಡಿ ಶಬ್ದ ಕೇಳೋಕೂ ಸರಿಯಾಯ್ತು

ಅವ್ವಾ ದೀಪಾ ಬಂದ್ಲು, ಬಾವಾನೂ ಜೊತೆಗೆ ಬಂದವ್ರೆ ಅಂತ ಅಂಜು ಸಡಗರದಿಂದ ಹೇಳ್ತಾ ಇದ್ರೆ, ಸೀನ ತಡಬಡಾಯಿಸಿ ಎದ್ದ, ನಂಜೀನೂ ಮುಂದ್ಗಡೆ ಬಂದ್ಲು. ದೀಪಾ ಸಣ್‌ ಮಕ ಮಾಡ್ಕಂಡು ಒಂದ್‌ ಚೀಲ ಹೊತ್ಕಂಡು ಬಂದ್ಲು. ನಾಗ ಅವ್ಳ ಹಿಂದೆ ಬಂದ. ಇನ್ನೊಂದೆರೆಡು ಗಾಡೀಲಿ, ಅವರ ಅಪ್ಪ ಅಮ್ಮ, ಅಣ್ಣ ಅತ್ಗೆ ಎಲ್ಲಾ ಬಂದ್ರು. ಇದೇನಪ್ಪ ಹಿಂಗೆ ಎಲ್ರೂ ಒಟ್ಗೆ ಬಂದವ್ರೆ ಅಂತ ಆಶ್ಚರ್ಯದಿಂದ ನೋಡ್ತಾ, ಟೀನಾದ್ರೂ ಕಾಯ್ಸಣ ಅಂತ ಒಳಗೆ ಹೋಗ್ಬೇಕು ಅನ್ನೋಷ್ಟರಲ್ಲಿ ನಾಗ ಜೋರಾಗಿ ಮಾತಾಡಿದ. ನೀವೆಲ್ಲಾಸೇರಿ ನಂಗೆ ಮೋಸ ಮಾಡಿ ಇವ್ಳನ್ನ ಕಟ್ಬಿಟ್ರಿ. ಇವ್ಳಿಗೆ ಆ ದರಿದ್ರ ಕಾಯ್ಲೆ ಇರೋ ವಿಚಾರಾನಾ ನನ್ನಿಂದ ಮುಚ್ಚಿಟ್ರಿ. ಮದ್ವೆ ಖರ್ಚು ಹಾಕಿದ್ದೇ ಅಲ್ದೇ 1 ಲಕ್ಷ ಬೇರೆ ನಿಮ್ಗೆ ಕೊಟ್ಟಿದ್ದಾಯ್ತು. ಎಂಥ ಹುಡ್ಗೀನ ಕೊಟ್ರಿ ನಂಗೆ. ನಿನ್ನೆ ಇವ್ಳು ಹೆಂಗ್ ಬಿದ್ಲು ಗೊತ್ತಾ? ಬಾಯಲ್ಲಿ ವಾಂತಿ, ಕೈಕಾಲು ಆ‌ ಕಡೆ ಈ ಕಡೆ. ಎಂಥ ಮೋಸ ಹಾಡು ಹಗಲೇ ಮೋಸ. ನಾನು ಇವ್ಳ ಜೊತೆ ಸಂಸಾರ ಮಾಡಲ್ಲ. ನಂಗೆ ಈ ಹುಡ್ಗಿ ಬೇಡ. ಅಣ್ಣ, ಅಪ್ಪ ಹೇಳಿ ಇವ್ರಿಗೆ ಅಂದ. ನಾಗನ ಅಪ್ಪ, ಸೀನ ನೀನು ಈ ಥರ ಮೋಸ ಮಾಡ್ತ್ಯಾ ಅಂತ ಗೊತ್ತಿರ್ಲಿಲ್ಲ, ಹುಡ್ಗಿ ನೋಡಕ್ಕೆ ಚೆನ್ನಾಗಿದ್ದಾಳೆ ಅಂತ ಮದ್ವೆಗೆ ನಾವೆಲ್ರೂ ಒಪ್ಕೊಂಡ್ವಿ. ಆದ್ರೆ ಈ ಕಾಯ್ಲೆ ಇದೆ ಅಂತ ಯಾಕ್‌ ಹೇಳ್ಲಿಲ್ಲ? ನಿಮ್‌ ಹುಡ್ಗೀನಾ ನಿಮ್‌ ಮನೇಲೇ ಇಟ್ಕೊಂಡು ನಾವು ಕೊಟ್ಟಿದ್‌ 1 ಲಕ್ಷ ವಾಪಸ್‌ ಕೊಟ್ಬಿಡಿ ಅಂತ ಹೇಳ್ದ. ಸೀನ ಮೇಲೆ ಕೆಳ್ಗೆ ನೋಡ್ದ. ಅಯ್ಯೋ ದೇವ್ರೇ! ಒಂದ್‌ ಲಕ್ಷ ಕೊಟ್ಬಿಡಿ ಅಂದ್ರೆ ನಾವೇನ್‌ ದುಡ್ಡಿನ ಗಿಡ ನೆಟ್ಟಿದೀವಾ? ಅಂತ ಹೇಳ್ತಾ ಇದ್ದ..

 ಅಷ್ಟ್‌ ಹೊತ್ತಿಗೆ ನಂಜೀಗೆ ಸಿಟ್ಟು ನೆತ್ತಿಗೇರಿತ್ತು. ಏನು ನಾಗ, ಒಂದ್‌ ತಿಂಗ್ಳು ಸಂಸಾರ ಮಾಡೋಕೆ ನನ್‌ ಮಗ್ಳು ಬೇಕಾಯ್ತಾ?  ನಾವೇನ್ ನಿನ್‌ ಕಾಲಿಗ್‌ ಬಿದ್ದಿದ್ವಾ? ನಂ ಹುಡ್ಗೀನ ಮದ್ವೆ ಮಾಡ್ಕೋ ಅಂತ, ನೀವೇ ತಾನೇ ನನ್‌ ಗಂಡನ್‌ ತಲೆ ಕೆಡ್ಸೀ ಮದ್ವೆ ಮಾಡ್ಕೊಡಿ ಅಂತ ಗ್ವಾಗರ್ದಿದ್ದು?  ಅಷ್ಟಕ್ಕೂ ಅವ್ಳಿಗಿರೋ ಕಾಯ್ಲೆ ವಾಸಿಯಾಗ್ದೇ ಇರೋ ಕಾಯ್ಲೆ ಏನಲ್ಲ. ಇನ್ನೊಂದ್‌ ಆರ್‌ ತಿಂಗ್ಳು ಮಾತ್ರೆ ತಗೊಂಡ್ರೆ ಸಾಕು ಅಂದವ್ರೆ ಡಾಕ್ಟ್ರು . ಒಂದ್‌ ಸಲ ಬಿದ್ಲು ಅಂತ ಒಂದ್‌ ತಿಂಗ್ಳು ಸಂಸಾರ ಮಾಡಿದ್‌ ಹುಡ್ಗೀನೇ ಬಿಡ್ತೀನಿ ಅಂತ್ಯಲ್ಲ ಇದೇನಾ ನೀನ್‌ ಕಲ್ತಿರೋ ಬುದ್ಧಿ?? ಎಲ್ಲೋ ಒಂದೆರ್ಡ್‌ ದಿನ ಮಾತ್ರೆ ತಗೊಂಡಿಲ್ಲ ಅನ್ಸುತ್ತೆ, ಅದ್ಕೇ ಹಂಗಾಗಿದೆ.  ಅಷ್ಟಕ್ಕೇ ಹುಡ್ಗೀನ ಬಿಟ್ಟು, ದುಡ್‌ ಕೊಡಿ ಅಂತ್ಯಲ್ಲ ಇದ್ಯಾವ್‌ ನ್ಯಾಯ? ನನ್‌ ಮಗ್ಳೇನು ಅಂಗಡೀಲಿ ಸಿಗೋ ಬಟ್ಟೆ ಥರಾನಾ? ಬ್ಯಾಡಾ ಅಂದ ತಕ್ಷಣ ವಾಪಸ್‌ ಕೊಡಕ್ಕ? ಅಂತ ಖಾರವಾಗಿ ಪ್ರಶ್ನೆ ಮಾಡಿದ್ಲು.

ಅದೆಲ್ಲ ಗೊತ್ತಿಲ್ಲ. ನಿಮ್‌ ಹುಡ್ಗಿ ನಮ್ಗೆ ಬೇಡ. ಕಾಯ್ಲೆ ವಿಷ್ಯ ಮುಚ್ಚಿಟ್ಟಿರೋದು ನಿಮ್‌ ತಪ್ಪು. ನಮ್‌ ದುಡ್‌ ನಮ್ಗೆ ಕೊಟ್ಬಿಡಿ. ನಿಮ್ ಹುಡ್ಗೀನ ನೀವೇ ಮಡಿಕ್ಕಳಿ. ಅದೂ ಆಗಲ್ಲ ಅಂದ್ರೆ ಇಲ್ಲೇ ಇದ್ದಾಳಲ್ಲ ಅಂಜು ಅವ್ಳನ್ನ ನಮ್‌ ಮನೇಗೆ ಕಳ್ಸ್ಕೊಡಿ‌ ಅವ್ಳನ್ನೇ ನಂ ನಾಗಂಗೆ ತಂದ್ಕೊಂಡು  ಮನೆ ತುಂಬುಸ್ಕೊತೀವಿ ಅಂತ ನಾಗನ ಅಪ್ಪ ಹೇಳ್ತಾ ಇದ್‌ ಹಾಗೇನೇ, ಏಯ್‌ ಏನನ್ಕೊಂಡಿದ್ದೀರೋ ನೀವೆಲ್ಲಾ? ಹೆಣ್‌ ಮಕ್ಳು ಅಂದ್ರೆ ಪೇಟೇಲಿ ದುಡ್ಡಿಗೆ  ಸಿಗೋ ವಸ್ತು ಅಂತನಾ? ಅಥ್ವಾ  ನಿಮ್ಮ ತೀಟೆ ತೀರ್ಸೋಕ್ಕೆ ಇರೋ ಆಳ್ಗಳು ಅಂತಾನಾ?? ಅಕ್ಕನ್ನ ಮದ್ವೆ ಮಾಡ್ಕೊಂಡ; ಕಾಯ್ಲೆ ಇದೆ ಅಂತ ಅವ್ಳನ್ನ ಬಿಟ್ಟು ತಂಗೀನ ಮಾಡ್ಕೊತಾನಂತೆ ಥೂ ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕ! ನಿಮ್ಮ ಬಾಯಿಗೆ ಮಣ್ಹಾಕ! ನಿಮ್ಗೆ ಹಾವು ಚೇಳು ಕಡಿಯ! ಅವ್ಳಿಗೂ ಏನಾದ್ರೂ ಕಾಯ್ಲೆ ಇದೆ ಅಂದ್ರೆ ಅವ್ಳನ್ನೂ ಬಿಡ್ತೀಯೇನೋ ನಾಯಿ? ಬೇಕೂ ಅಂದಾಗ ಕಟ್ಕೊಂಡು ಬೇಡ ಅಂದ್‌ ತಕ್ಷಣ ಬಿಡೋಕೆ ನನ್‌ ಮಗ್ಳೇನೂ ಬಿಟ್ಟಿ ಬಿದ್ದಿಲ್ಲ. ಅಪ್ಪ ಅಮ್ಮ ಅಂತ ನಾವಿನ್ನೂ ಬದ್ಕಿದ್ದೀವಿ. ಮದ್ವೆ ಮಾಡ್ಕೊಬೇಕಾದ್ರೆ ಗ್ಯಾನ ಇರ್ಬೇಕು. ಬಡ್ಕೊಂಡೆ ಇಷ್ಟ್‌ ಬೇಗ ಅವ್ಳಿಗೆ ಮದ್ವೆ ಮಾಡ್ಬೇಡ ಅಂತ ಕೇಳಿದ್ಯಾ ನನ್‌ ಮಾತ್ನ? ನಂಜಿಯ ಸಿಟ್ಟು ಗಂಡನ ಕಡೆ ತಿರುಗಿತು. ಅಂಜೂನ ಮದ್ವೆ ಮಾಡ್ಕೊಡು ಅನ್ನೋ ಮಾತನ್ನ ಕೇಳಿ ಸೀನನಿಗೂ ಒಳಗಿಂದ್ಲೇ ಸಿಟ್ಟು ಕುದ್ದು ಬಂತು. ಸೀನ ಕುಡಿದ್ರೂ, ಬೈಯ್ದ್ರೂ  ಕಟ್ಕೊಂಡ ಹೆಂಡ್ತಿಗೆ ನಿಷ್ಠನಾಗಿದ್ದೋನು. ಏಯ್‌ ನಿಮ್ಮ ಕೆಟ್ಟ ಕಣ್ಣು ನನ್‌ ಎರಡ್ನೇ ಮಗಳ್‌ ಮೇಲೂ ಬಿತ್ತೇನ್ರೋ? ನಾನು ಇನ್ನೊಂದು ವರ್ಷ ಕಷ್ಟಪಟ್ಟು ದುಡ್ದಾದ್ರೂ ನಿಮ್‌ ದುಡ್‌ ವಾಪಸ್‌ ಕೊಡ್ತೀನಿ ಆದ್ರೆ ನನ್‌ ಮಕ್ಳನ್ನ ಕಳ್ಸಲ್ಲ ಕಣ್ರೋ ಯಾವ್‌ ಕಾರ್ಣಕ್ಕೂ ನಿಮ್‌ ಮನೇಗೆ ಕಳ್ಸಲ್ಲ. ಎಲ್ಲದನ್ನೂ ದುಡ್ಡಲ್ಲೇ ಅಳ್ತೆ ಮಾಡೋರ್‌ ನೀವು ದೊಡ್ಡ ಮನುಷ್ಯರಪ್ಪಾ. ಹೆಣ್‌ ಹೆತ್ತೋರ್‌ ಸಂಕ್ಟ ನಿಮ್ಗೇನ್‌ ಅರ್ಥ ಆಗ್ಬೇಕು? ಬೇಡ ಎಷ್ಟಾದ್ರೂ ನಾವ್‌ ಹೆತ್ತ ಮಕ್ಳು. ಕೆಟ್‌ ಮನಸ್ಸಿನ ಜನ್ರ ಮಧ್ಯ ಅವ್ಳು ಇರೋದೇ ಬೇಡ. ಹೋಗ್ರೋ ಹೋಗಿ, ಇನ್ನೊಂದ್ಸಲ ನಂಗೆ ಮುಖ ತೋರಿಸ್ಬೇಡಿ. ಅಕ್ಕ ಬೇಡ ತಂಗೀನ್‌ ಕೊಡು ಅಂತ ಅವ್ಳ ಬಾಳನ್ನೂ ಹಾಳ್‌ ಮಾಡೋಕೆ ಬಂದ್‌ಬಿಟ್ಟ ಅಂತ ಮೂಲೆಯಲ್ಲಿದ್ದ ಕತ್ತಿ ತಗೊಂಡ ಸೀನ.

ಇವರಿಬ್ಬರ ರೌದ್ರಾವತಾರ ನೋಡಿ ನಾಗ ಮತ್ತು ಮನೆಯವರು ಪರಾರಿಯಾದ್ರು. ಅಂಜು, ದೀಪಾ, ನಂಜಿ, ಸೀನ ನಾಲ್ಕು ಜನ ತಬ್ಬಿಕೊಂಡು ಒಂದೇ ಸಮನೆ ಅಳಲು ಪ್ರಾರಂಭಿಸಿದರು. ಅವ್ವಾ ನಾನ್‌ ಆ ಮನೆಗೆ ಹೋಗಲ್ಲ ಅವ್ವಾ ಇಲ್ಲೇ ಇರ್ತೀನಿ. ಮಾತ್ರೆ ತಗೋತೀನಿ ಅವ್ವಾ. ನನ್ನನ್‌ ಕಾಲೇಜಿಗೆ ಕಳ್ಸವ್ವಾ. ಚೆನ್ನಾಗಿ ಓದ್ತೀನಿ. ಅಂಜುನೂ ಓದಿಸ್ತೀನಿ. ನನ್ನನ್‌ ಮಾತ್ರ ಆ ಮನೆಗೆ ಕಳಿಸ್ಬೇಡ ಅವ್ವಾ. ಅಪ್ಪಾ ನನ್‌ ಮೇಲೆ ನಂಬಿಕೆ ಇಟ್ಕೋ ಅಪ್ಪಾ. ನಾನ್‌ ಖಂಡಿತ ಚೆನ್ನಾಗಿ ಓದ್ತೀನಿ. ಅಂತ  ದೀಪಾ ಒಂದೇ ಸಮನೆ ಬಿಕ್ಕಿದಳು. ಸೀನನಿಗೆ ಮಾತೇ ಹೊರಡಲಿಲ್ಲ. ನಂಜೀ ಅಳುತ್ತಲೇ ಇದ್ದಳು. ಅವಳ ಕೈ ಮಕ್ಕಳ ತಲೆಯನ್ನು ನೇವರಿಸುತ್ತಿತ್ತು. ಆದದ್ದೆಲ್ಲ ಒಂದ್‌ ಕೆಟ್‌ ಕನ್ಸು ಅಂತ ಮರ್ತುಬಿಡೋಣ. ನನ್‌ ಕನ್ಸ್‌ ನನ್ಸ್‌ ಮಾಡ್ಬೇಕು ಅಂತ ಓದ್ತೀನಿ ಅಂತಿದ್ಯಾ ದೀಪಾ? ಓದಿಸ್ತೀನಿ ಎಷ್ಟೇ ಕಷ್ಟ ಆದ್ರೂ ಓದಿಸ್ತೀನಿ ನನ್ನವ್ವಾ. ನೀನು ಆ ಮನೇಲಿ ಪಟ್ಟ ಕಷ್ಟ ಸಾಕು. ಇನ್ನೂ ಬಾಳಿ ಬದುಕಬೇಕಾದೋಳು ನೀನು. ಇನ್ನೊಂದ್‌ ಆರೇಳ್‌ ತಿಂಗ್ಳು ಸರ್ಯಾಗಿ ಔಷ್ದಿ ತಗೊಂಬಿಡವ್ವ. ನೀನು ಪೂರ್ತಿ ಹುಷಾರಾಗ್ಬಿಡ್ತ್ಯ. ಏಯ್ ಸೀನ ಇನ್ನೊಂದ್‌ ಸಲ ನೀನು ದೀಪಂಗಾಗ್ಲೀ, ಅಂಜುಗಾಗ್ಲೀ ಮದ್ವೆ ವಿಷ್ಯ ಎತ್ತಿದ್ರೆ, ನನ್‌ ಸಾವ್‌ ನೋಡ್ಬೇಕಾಗುತ್ತೆ ಅಂತ ಹೇಳ್ತಾ ಓದಿ ಮಕ್ಳೇ ಅದೊಂದೇ ನಮ್ಗೆ ಈ ಜೀವ್ನ ಎದುರಿಸೋಕೆ ಧೈರ್ಯ ಕೊಡೋದು ಅಂತ ಹೇಳ್ತಾ ಗಟ್ಟಿ ನಿರ್ಧಾರದೊಂದಿಗೆ ಮೇಲೆದ್ದಳು. ರಾಗಿ ಅಂಬಲಿ ಕುಡಿಯದೆಯೇ ನಂಜಿಯ ಹೊಟ್ಟೆ ಈಗ ತಣ್ಣಗಾಗಿತ್ತು. ಕೈತೋಟದಿಂದ ಮಲ್ಲಿಗೆ ಹೂಗಳ ಪರಿಮಳ ಗಾಳಿಯಲ್ಲಿ ತೇಲಿ ಬಂತು. ಅತ್ತೂ ಅತ್ತೂ ಮುಖವನ್ನು ಬಾಡಿಸಿಕೊಂಡಿದ್ದ ಮಕ್ಕಳಿಬ್ರೂ ಅಮ್ಮನ ಮುಖ ನೋಡಿ ತಮ್ಮ ಮುಖವನ್ನೂ ಅರಳಿಸಿಕೊಂಡರು.



41 ಕಾಮೆಂಟ್‌ಗಳು:

  1. ಕಥೆನಾ,ನಿಜ ಜೀವನದಲ್ಲಿ ಕಂಡ ಘಟನೆನಾ, ಆದರೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    ಪ್ರತ್ಯುತ್ತರಅಳಿಸಿ
  2. Tumba emotional agide. Manassina bhavanena tallana golisitu.Igloo hingella agutta Or kalpanika kathe na? Chennagide. Haage odkondu hogutte. Halli bhashe sogadu tumba sogasagide.

    ಪ್ರತ್ಯುತ್ತರಅಳಿಸಿ
  3. ಉತ್ತರಾರ್ಧ ಓದಿಸಿಕೊಂಡು ಹೋಗುತ್ತದೆ. ಪೂರ್ವಾರ್ಧ ಸ್ವಲ್ಪ clumsy ಅನ್ನಿಸಿತು. ಗ್ರಾಮ್ಯ ಭಾಷೆ ಚೆನ್ನಾಗಿದೆ. ಕಾಡಿನ ಪರಿಸರದ ಕತೆ ನಿಮ್ಮ ಕೆಲಸ ಮಾಡುವ ಪರಿಸರದ ಪ್ರಭಾವ ಅನ್ನಿಸುತ್ತದೆ.

    ಪ್ರತ್ಯುತ್ತರಅಳಿಸಿ
  4. ಬರೆವಣಿಗೆಯ ಹಾದಿಯಲ್ಲಿ ಸಾಗಿರುವಿರಿ.ನಿಮ್ಮ ಅನುಭವಗಳು ಚೆನ್ನಾಗಿ ಹೊರಹೊಮ್ಮಿದೆ. ತಾಯಿಯ ತುಮುಲ ಹೊಯ್ದಾಟಗಳ ಭಾಷೆ ಸ್ಥಳೀಯ ಸೊಗಡನ್ನು ಹೊಂದಿದ್ದರೆ ಮತ್ತಷ್ಟು ಚೆನ್ನಾಗಿತ್ತು. ಅಂತ್ಯ ಕತೆ ಮುಂದುವರಿಯಬಹುದೆನ್ನುವ ಭಾವ ಮೂಡಿಸುತ್ತದೆ. ಅಂತ್ಯ ಹೆಣ್ಣು ಸಬಲಳು ಎಂಬುದನ್ನ ಹೈಲೈಟ್ ಮಾಡಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹೌದು ಮೇಡಮ್, ಗ್ರಾಮ್ಯ ಭಾಷೆಯಲ್ಲಿ ಇನ್ನೂ ಪಳಗಬೇಕು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙏

      ಅಳಿಸಿ
    2. ನಮಸ್ತೆ. ಹಳ್ಳಿಯ ಸೊಗಡನ್ನು ಹೊತ್ತಿರುವ ಅನುಭವ ಕಥೆಯಾದರೂ, ನಡೆಯುತ್ತಿರುವ ನಿಜವೇ ಸರಿ, ನೀವು ನಗರದ ಅವರಾಗಿದ್ದರು ಹಳ್ಳಿಯ ಸೊಗಡಿನ ಭಾಷೆಯನ್ನು ಚೆನ್ನಾಗಿ ವೀಕ್ಷಣೆ ಮಾಡಿ ಕೇಳಿ ಅನುಭವಿಸಿ ಬರೆದಿದ್ದೀರಿ, ನನಗೆ ತುಂಬಾ ಸಂತೋಷವಾಯಿತು, ಈ ರೀತಿಯ ಘಟನೆಗಳು ಅನೇಕ ಬಡವರ್ಗದ ಜನರ ಮನೆ ಮನೆ ಕಥೆಯಾಗಿದೆ, ನಾವು ನಮ್ಮ ಸಮಾಜಮುಖಿ ಕೆಲಸಗಳನ್ನು ಇಡುವೆ ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಶ್ರಮಿಸಲು ದೇವರು ನಮಗೆ ಶಕ್ತಿ ಹಾಗೂ ಯುಕ್ತಿ ಮತ್ತು ಅವಕಾಶಗಳನ್ನು ಒದಗಿಸಬೇಕು ಅಲ್ಲವೇ?
      ನಿಮ್ಮ ಪ್ರಸ್ತುತಿ ಯೊಂದಿಗೆ ನಮ್ಮ ಅನುಭವಗಳು ಮಿಳಿತವಾಗಿತ್ತಾ ಜೊತೆಗೂಡಿ ಈ ಕಥನ ಮನಸ್ಸಿಗೆ ಮುಟ್ಟುವಂತಿತ್ತು.
      ಮುಂದುವರಿಸಿ ನಿಮ್ಮ ಬರಹವನ್ನು ಒಳ್ಳೆಯದಾಗಲಿ.

      ಅಳಿಸಿ
    3. ತೀರಾ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಜ್ವಲಂತ ಸಮಸ್ಯೆಗಳು ಇನ್ನೂ ಜೀವಂತವಾಗಿವೆ ಎನ್ನುವುದೇ ದುರಂತ. ಬದಲಾಗಲು ಇನ್ನೂ ಬಹಳ ಸಮಯ ಬೇಕು. ಬದಲಾವಣೆ ತರುವಲ್ಲಿ ಶಿಕ್ಷಕರು, ಪೋಷಕರು ಶ್ರಮಿಸಲೇಬೇಕು, ಅಲ್ಲವೇ ಮೇಡಂ

      ಅಳಿಸಿ
  5. ಪಾತ್ರಗಳೆಲ್ಲಾ ನಮ್ಮ ನಡುವೆಯೇ ಇವೆ ಎನ್ನುವಷ್ಟು ಸಹಜ ನಿರೂಪಣೆ.ಪರಿಹಾರವಿಲ್ಲದ ಸಮಸ್ಯೆಗಳು.

    ಪ್ರತ್ಯುತ್ತರಅಳಿಸಿ
  6. ಟೈಪಿಂಗ್ ನಲ್ಲಿ ಕೆಲವು ದೋಷಗಳು ಆಗಿದೆ. ಕ್ಷಮೆ ಇರಲಿ

    ಪ್ರತ್ಯುತ್ತರಅಳಿಸಿ
  7. ಬಡತನ ಮತ್ತು ಹೆಣ್ಣುಮಕ್ಕಳಿರುವ ಕುಟುಂಬದಲ್ಲಿ ನಡೆಯುವ ಕಥೆ. ಗ್ರಾಮೀಣ ಮತ್ತು ನಗರ ಭಾಷೆ mix ಆಗಿದೆ ಅನಿಸಿತು

    ಪ್ರತ್ಯುತ್ತರಅಳಿಸಿ
  8. ಹಳ್ಳಿಯ ವಾಸ್ತವ್ಯವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ

    ಪ್ರತ್ಯುತ್ತರಅಳಿಸಿ
  9. ಗ್ರಾಮೀಣ ಬದುಕಿನ ನೈಜ ಅನುಭವ ಸೊಗಸಾಗಿ ಕಟ್ಟಿಕೊಟ್ಟಿದ್ದೀರಿ

    ಪ್ರತ್ಯುತ್ತರಅಳಿಸಿ
  10. ಬಹಳ ಚೆನ್ನಾಗಿ ಮೂಡಿಬಂದಿದೆ. ಹಳ್ಳಿ ಕಡೆ ಇದು ಎಷ್ಟು ಮನೆಯ ಕಥೆಯೋ. ಸುಧಾರಣೆ ತರಲು ಕಷ್ಟ

    ಪ್ರತ್ಯುತ್ತರಅಳಿಸಿ
  11. ತುಂಬಾ ಚೆನ್ನಾಗಿದೆ ಮೇಡಂ, ನಮ್ಮ ಶಾಲೆಗಳಲ್ಲಿ ಪ್ರತಿ ಮಗುವಿನಲ್ಲೂ ಈ ತರಹದ ಕಥೆಗಳಿವೆ ಎಂಬುದನ್ನು ನಾವು ಗಮನಿಸಬೇಕು ಎಂಬ ಅರಿವು ಉಂಟಾಗುತ್ತಿದೆ. ಗ್ರಾಮ್ಯ ಶೈಲಿ ಇಷ್ಟ ಆಯ್ತು.

    ಪ್ರತ್ಯುತ್ತರಅಳಿಸಿ
  12. ಕಥೆಯ ವೀಕ್ಷಕರಾಗಿ, ಕಥೆಯ ಜೊತೆ ಜೊತೆಯಲ್ಲಿ ಸಾಗಿದೆ ಅನುಭವವಾಯ್ತು

    ಪ್ರತ್ಯುತ್ತರಅಳಿಸಿ
  13. ಕತೆ ಚನ್ನಾಗಿದೆ. Comments ನೋಡಿದೆ. Distinction ನಲ್ಲಿ ಪಾಸ್ ಆಗಿದೆ ಕತೆ. ಸಂಪೂರ್ಣ ವಾಚ್ಯವಾಗಿಸದೆ ಧ್ವನಿಗೆ ಸ್ಥಾನ ಕೊಡಬಹುದಾ. Between the lines ವಾಚಕರ ಚಿಂತನೆಗೆ ಸ್ಥಳ ಕೊಡಬಹುದಾ, ಪಾತ್ರ ದ ಚಿತ್ರಣಕ್ಕೆ ಇನ್ನೊಂದಿಷ್ಟು ಪ್ರಯತ್ನಿಸಬಹುದಾ ನೋಡಿ. ಇವೆಲ್ಲಾ ನನಗೆ ಕಥನ ಕಮ್ಮಟದಲ್ಲಿ ನುರಿತ ಕತೆಗಾರರು ಹೇಳಿದ್ದು. ನಿಮಗೆ ಪ್ರಯೋಜನ ಆದಿತೆಂದು ಹೇಳಿದೆ. ತಡವಾಯ್ತು ಕ್ಷಮೆ ಇರಲಿ

    ಪ್ರತ್ಯುತ್ತರಅಳಿಸಿ
  14. ಧನ್ಯವಾದಗಳು ಸರ್. ಹೌದು ಸರ್. ಖಂಡಿತ ಪ್ರಯತ್ನಿಸುತ್ತೇನೆ

    ಪ್ರತ್ಯುತ್ತರಅಳಿಸಿ

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...