ಸೀರೆ, ಸೀರೆ ಸೀರೆ ಎಲ್ಲೆಲ್ಲೂ ಹಾರೈತೆ, ಸೂರೆ ಸೂರೆ ಸೂರೆ ಮನಸೂರೆ ಮಾಡೈತೆ ಎಂಬ ಹಾಡನ್ನು ಗುನುಗುತ್ತಾ ಸೀರೆ ಉಟ್ಟು ಸ್ವಾತಂತ್ರ್ಯ ದಿನದ ಸಂಭ್ರಮವನ್ನಾಚರಿಸಲು ಶಾಲೆಗೆ ಹೊರಡಲು ಸಿದ್ಧಳಾದಳು ಗೀತ. ಹೆಂಗೆಳೆಯರ ಮನಕದ್ದಿರುವ ಹಾಗೂ ಮನಗೆದ್ದಿರುವ ಸೀರೆಗೆ ಎಲ್ಲೇ ಹೋಗಲಿ ಅಗ್ರಸ್ಥಾನ. ಕಚೇರಿಗಳಲ್ಲಾದರೆ ಬೇರೆ ರೀತಿಯ ಉಡುಪು ನಡೆಯುತ್ತದೆ; ಆದರೆ ಶಾಲೆ ಕಾಲೇಜು ಎಂದರೆ, ಸೀರೆಯನ್ನು ಉಡಲೇಬೇಕು ಮಹಿಳಾಮಣಿಗಳು. ಮಕ್ಕಳಿಗಿಂತ ವಿಭಿನ್ನವಾಗಿ ಕಾಣಲು, ಮಕ್ಕಳೆದುರಿಗೆ ಸ್ವಲ್ಪ ದೊಡ್ಡವರಂತೆ ತೋರಿಸಿಕೊಳ್ಳಲು, ಗೌರವ ಭಾವನೆಯನ್ನು ಮೂಡಿಸಲು, ಸೀರೆ ಸಹಾಯ ಮಾಡಿದಷ್ಟು ಇನ್ಯಾವ ಉಡುಪೂ ಮಾಡಲಾರದು. ಇನ್ನು ವಿಶೇಷ ಸಂದರ್ಭಗಳು ಬಂದರಂತೂ ಕೇಳುವುದೇ ಬೇಡ; ರಾಷ್ಟ್ರೀಯ ಹಬ್ಬಗಳು, ವಿವಿಧ ದಿನಾಚರಣೆಗಳು, ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ, ಸೆಂಡ್ ಆಫ್ ಹೀಗೆ ಶಾಲಾ ಕಾರ್ಯಕ್ರಮಗಳ ಪಟ್ಟಿ ಬಲು ದೊಡ್ಡದಿರುತ್ತದೆ. ಅದಕ್ಕೆ ತಕ್ಕಂತೆ ಸೀರೆಗಳನ್ನು ಉಡುವ ವಿಶೇಷ ಕೌಶಲವೂ ಶಿಕ್ಷಕಿಯರಿಗಿರುತ್ತದೆ.
ಇಂದು ಸ್ವಾತಂತ್ರ್ಯ ದಿನದ ಸಂಭ್ರಮ; ತ್ರಿವರ್ಣಧ್ವಜವನ್ನು ನೆನಪಿಸುವ ಕೇಸರಿ ಬಿಳಿ ಹಸಿರಿನ ಬಣ್ಣಗಳ ಛಾಯೆಯಿರುವ ಸೀರೆಯನ್ನುಟ್ಟು ನೆರಿಗೆಗಳನ್ನು ಚಿಮ್ಮುತ್ತಾ ಶಾಲೆಗೆ ಬಂದು ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುವಾಗಲೇ ಗೀತಾಳಿಗೆ ನೆನಪಾದದ್ದು ಓಹ್ ಇಂದು ಸ್ಟಾಫ್ ನ ಹೆಂಗೆಳೆಯರೆಲ್ಲರೂ ಸಮಾರಂಭದ ನಂತರ, ಮೈಸೂರು ಸಿಲ್ಕ್ ಸೀರೆಯನ್ನು ಕೊಳ್ಳಲು ಹೋಗಬೇಕು ಎಂದು.ಸ್ಯಾಲರಿ ಸರ್ಟಿಫಿಕೇಟ್ ತೋರಿಸಿದರಾಯಿತು, ಅಪ್ಲಿಕೇಷನ್ ತುಂಬಿ, ಫೋಟೋ ಅಂಟಿಸಿ, ಆಧಾರ್ ಕಾರ್ಡ್ ಕೊಟ್ಟು, 10 ಬ್ಲಾಂಕ್ ಚೆಕ್ ಗಳನ್ನು ನೀಡಿದರಾಯಿತು; ನಾವು ಆಯ್ಕೆ ಮಾಡುವ ಸೀರೆಗೆ ಮೊದಲ ಕಂತು ನೀಡಿದ ನಂತರ ಉಳಿದ ಹಣವನ್ನು ಸಮಾನವಾಗಿ ಚೆಕ್ ಮೂಲಕ ಕೊಡಬೇಕು. ಒಂದೇ ಬಾರಿಗೆ 25, 30 ಸಾವಿರದ ಖರ್ಚಿಲ್ಲ; ಬಡ್ಡಿಯೂ ಇಲ್ಲ; ಆದ್ದರಿಂದಲೇ ನಾವು 5 ಜನ ಮಹಿಳೆಯರು ಮೈಸೂರು ಸಿಲ್ಕ್ ಸೀರೆ ಕೊಳ್ಳಬೇಕೆಂಬ ಮನಸ್ಸು ಮಾಡಿದ್ದು.
ಸೀರೆ ಅಂಗಡಿಗೆ ಹೋಗಿದ್ದೂ ಆಯಿತು; ಸೀರೆ ಕೊಂಡಿದ್ದೂ ಆಯಿತು; ಮನೆಯಲ್ಲಿ ಸೀರೆ ತೋರಿಸಿದ್ದೂ ಆಯಿತು; ಸಂಕ್ರಾಂತಿಗೆ, ಯುಗಾದಿಗೆ ಸೀರೆ ತಗೊಂಡಾಗಿದೆ, ಈಗ ಮತ್ತೆ ಸೀರೆ? ಅಂತ ಮನೆಯಲ್ಲಿ ಬೈಸಿಕೊಂಡದ್ದೂ ಆಯಿತು. ಇರಲಿ ಬಿಡಿ; ಪ್ರತಿದಿನ ಶಾಲೆಗೆ ಸೀರೆ ಉಡಲೇಬೇಕಲ್ಲವೇ? ಅಂತ ಸಮಜಾಯಿಷಿ ಮಾಡಿದ್ದೂ ಆಯಿತು. ಸೀರೆಯನ್ನು ಬೀರುವಿನಲ್ಲಿ ಎತ್ತಿಡಲು ಹೋದಾಗ ಹಲವಾರು ಬಣ್ಣಗಳ, ಬೇರೆ ಬೇರೆ ಗುಣಮಟ್ಟದ ಅನೇಕ ಸೀರೆಗಳು ಕಣ್ಣಿಗೆ ಬಿದ್ದವು.
ಶಿಕ್ಷಕರಿಗೆ ಶೋಭೆಯನ್ನು ನೀಡುವುದೇ ಕಾಟನ್ ಸೀರೆ ಎಂದು ಹಲವು ಕಾಟನ್ ಸೀರೆಗಳು; ವಿಶೇಷ ಸಂದರ್ಭಗಳಲ್ಲಿ ಉಡಲು ಡಿಸೈನರ್ ಸೀರೆಗಳು; ಹಬ್ಬ ಹರಿದಿನಗಳಿಗಾಗಿ ಕಂಚಿ ಸೀರೆಗಳು; ಹಗುರವಾಗಿರುತ್ತದೆ ಮತ್ತು ಆರಾಮದಾಯಕ ಎಂದು ಮೈಸೂರು ಸಿಲ್ಕ್ ಸೀರೆಗಳು; ಟ್ರೈನಿಂಗ್, ವರ್ಕ್ ಶಾಪ್ ಗಳಲ್ಲಿ ಭಾಗವಹಿಸಲು ರಾ ಸಿಲ್ಕ್ ಮತ್ತು ಕ್ರೇಪ್ ಸಿಲ್ಕ್ ಸೀರೆಗಳು, ಸರಳವಾದ ಸಮಾರಂಭಗಳಿಗಾಗಿ ಪ್ರಿಂಟೆಡ್ ಸಿಲ್ಕ್ ಸೀರೆಗಳು, ಮದುವೆಗಳಿಗೆ ಹೋಗುವುದಕ್ಕಾಗಿ ದೊಡ್ಡ ಅಂಚಿನ ಭಾರೀ ಸೀರೆಗಳು, ಅಪ್ಪ ಕೊಡಿಸಿದ ಮೊದಲ ವಾಟರ್ ಪ್ರೂಫ್ ಸೀರೆ, ಗಂಡ ಕೊಡಿಸಿದ ಮೊದಲ ಮೈಸೂರು ಸಿಲ್ಕ್ ಸೀರೆ, ತಾನೇ ಇಷ್ಟಪಟ್ಟು ತೆಗೆದುಕೊಂಡ ಕಾಟನ್ ಸಿಲ್ಕ್ ಸೀರೆ, ಹೊಸದಾಗಿದೆ ಟ್ರೆಂಡಿ ಎಂದು ಕೊಂಡು ಕೊಂಡ ಲಿನೆನ್ ಸೀರೆ, ಟ್ರೈನಿಂಗ್ ನೆನಪಿಗಾಗಿ ತೆಗೆದುಕೊಂಡ ಸಾಫ್ಟ್ ಸಿಲ್ಕ್ ಸೀರೆ, ಎಲ್ಲವೂ ಕಂಚಿಮಯ ಎಂದುಕೊಂಡು ಖರೀದಿಸಿದ ಬೆನಾರಸ್ ಸೀರೆ; ಬೇರೆ ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿ ಪ್ರಸಿದ್ಧವಾಗಿದೆ ಎಂದು ತೆಗೆದುಕೊಂಡ ಪಟೋಲ ಸೀರೆ, ಪೂಚಂಪಲ್ಲಿ ಸೀರೆ, ಕಾಶ್ಮೀರಿ ಸಿಲ್ಕ್ ಸೀರೆ, ಬಾಂದನಿ ಡಿಸೈನ್ ಸೀರೆ.. ಅತ್ತೆ ಕೊಡಿಸಿದ ಜಾರ್ಜೆಟ್ ಸೀರೆ, ಕಸೂತಿ ಸೀರೆ, ನನಗೆ ವಯಸ್ಸಾಯಿತು, ನೀನು ಉಡು ಎಂದು ಅಮ್ಮ ಕೊಟ್ಟಿರುವ ಭಾರವಾಗಿರುವ ಹಳೆಯ ಕಾಲದ ಅಚ್ಚ ರೇಷ್ಮೆ ಸೀರೆ, ಸಂಬಂಧಿಕರು ನೀಡಿದ ಸಿಂಥೆಟಿಕ್ ಸೀರೆಗಳು......
ಅಬ್ಬಬ್ಬಾ ಒಂದೇ ಎರಡೇ ??? ಬೀರುವಿನ ಅರೆಗಳ ತುಂಬಾ ಸೀರೆಗಳು.... ಏನೇ ಆಗಲೀ ಸೀರೆಗಳನ್ನು ಬೀರುವಿನಲ್ಲೇ ಇಟ್ಟು ಪೂಜಿಸುವುದಿಲ್ಲ; ಪ್ರತಿದಿನ ಒಂದೊಂದು ಸೀರೆ ಉಟ್ಟೇ ಉಡುತ್ತೇನೆ ಎಷ್ಟು ಸೀರೆಗಳಿದ್ದರೂ ಸಾಕಾಗುವುದಿಲ್ಲ; ಅದಕ್ಕೇ ಸೀರೆ ಕೊಳ್ಳಲು ಒಂದು ಸಂದರ್ಭವೇ ಬೇಕೆಂದಿಲ್ಲ; ಹಬ್ಬಗಳು, ಹುಟ್ಟಿದ ದಿನ, ಮದುವೆ ಮುಂಜಿಗಳೆಲ್ಲ ನೆಪಮಾತ್ರ; ಕೊಳ್ಳಬೇಕೆನಿಸಿದಾಗ ಸೀರೆಗಳನ್ನು ಕೊಳ್ಳುತ್ತಿದ್ದಳು ಗೀತ!!! ಯಾಕೆ ಸೀರೆಗಳೆಂದರೆ ಅಷ್ಟು ಮೋಹ? ಅಷ್ಟು ದುಡ್ಡು ಕೊಟ್ಟು ಸೀರೆಗಳನ್ನು ಕೊಳ್ಳುವುದಾದರೂ ಏಕೆ? ಸೀರೆಗಳಿಗೆ ಹಾಕುವ ದುಡ್ಡು ಡೆಡ್ ಇನ್ವೆಸ್ಟ್‌ಮೆಂಟ್ ಅಂತ ಗೊತ್ತಿದ್ದರೂ ಅದಕ್ಕೆ ದುಡ್ಡು ಸುರಿಯುವುದು ಏಕೆ? ಅನಗತ್ಯವಾಗಿ ಈ ಕೊಳ್ಳುಬಾಕತನ ಏಕೆ? ಹೋಗಲಿ ಕಡಿಮೆ ದುಡ್ಡು ಕೊಟ್ಟು ಸಾಮಾನ್ಯ ಸೀರೆಗಳನ್ನು ಕೊಳ್ಳಬಹುದಲ್ಲ?? ಎಂಬಂತಹ ಎಷ್ಟೋ ಪ್ರಶ್ನೆಗಳು ಗೀತಾಳನ್ನು ಕಾಡಿದ್ದಿದೆ. ಈ ಪ್ರಶ್ನೆಗಳಿಗೆಲ್ಲ ಒಂದೇ ಉತ್ತರ..... ಒಂದು ಒಳ್ಳೆಯ ಸೀರೆಯನ್ನು ಉಟ್ಟಾಗ ಸಿಗುವ ಆನಂದ....ಸ್ನೇಹಿತರು, ಗೆಳತಿಯರು, ಸಂಬಂಧಿಕರು ಎಷ್ಟು ಚೆನ್ನಾಗಿದೆ ಈ ಸೀರೆ! ನಿಮಗೆ ಚೆನ್ನಾಗಿ ಒಪ್ಪುತ್ತೆ ಎಂದು ಹೇಳಿದಾಗ ಸಿಗುವ ಸಂತೋಷ ಎಷ್ಟು ದುಡ್ಡು ಕೊಟ್ಟರೂ ಸಿಗುವುದಿಲ್ಲ ಎಂಬುದೇ ಆಗಿತ್ತು. ಅಲ್ಲದೇ ನಮ್ಮಂತಹವರು ಸೀರೆ ಉಡುವುದರಿಂದ ತಾನೇ ನೇಕಾರರಿಗೆ ವ್ಯಾಪಾರ, ಸರ್ಕಾರಕ್ಕೆ ವ್ಯವಹಾರ ಎಂಬ ಸಮರ್ಥನೆಯೂ ಆಕೆಗಿತ್ತು.
ಹೀಗೆ ದಿನಕ್ಕೊಂದು ಸೀರೆ ಉಡುತ್ತಾ ಶಾಲಾಕಾರ್ಯಗಳಲ್ಲಿ ಮುಳುಗಿಹೋಗಿ, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಬರಸಿಡಿಲಿನಂತೆ ಬಂದೆರಗಿತ್ತು ಕೊರೊನಾ ವೈರಸ್‌ನ ಅಟ್ಟಹಾಸ!! ಪ್ರಪಂಚವನ್ನೇ ನಡುಗಿಸಿದ್ದ ಕೋವಿಡ್ 19 ಎಂಬ ಮಹಾಮಾರಿ ಭಾರತಕ್ಕೆ ದಾಂಗುಡಿಯಿಟ್ಟು ಒಂದೊಂದೇ ಜೀವಗಳನ್ನು ಬಲಿ ಪಡೆಯತೊಡಗಿತು; ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಯಿತು; ಲಾಕ್ ಡೌನ್ ಮೊರೆಹೋಗಲೇಬೇಕಾಯಿತು; ಶಾಲೆಗೆ ಹೋಗುವುದಿರಲಿ, ಮನೆಯಿಂದ ಹೊರಗೆ ಹೋಗುವುದೇ ದುಸ್ತರವಾಯಿತು. ಮದುವೆ-ವಿವಾಹಗಳಿರಲಿ, ಸರಳ ಸಮಾರಂಭಗಳಿಗೆ ಹಾಜರಿ ಹಾಕುವುದಕ್ಕೂ ಕತ್ತರಿ ಬಿತ್ತು. ಟ್ರೈನಿಂಗ್, ವರ್ಕ್ ಶಾಪ್ ಗಳಿರಲಿ ಸಧ್ಯ, ಗುಂಪಿನಲ್ಲಿ ಐದಾರು ಜನ ಸೇರುವುದೂ ಕಷ್ಟವಾಯಿತು; ಸೀರೆಗಳನ್ನು ಉಡುವುದಿರಲಿ......ಬೀರುವಿನ ಬಾಗಿಲನ್ನು ತೆರೆಯುವುದೇ ಅಪರೂಪವಾಯಿತು. ಮನೆಯಲ್ಲಿಯೇ ಕಟ್ಟಿಹಾಕಿದಂತಾಯಿತು.....ಯಾವ ಕೆಲಸವನ್ನು ಮಾಡಲು ಹೋದರೂ ಹಿಡಿದು ಬಿಟ್ಟಂತಾಯಿತು......
ಅಂತೂ ಇಂತೂ ಶಾಲೆ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾದರೂ.... ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು; ಶಾಲೆಯಿಂದ ಬಂದ ತಕ್ಷಣ ಧರಿಸಿದ ಬಟ್ಟೆಗಳನ್ನು ಬಿಸಿನೀರಿನಲ್ಲಿ ನೆನೆಸಿ, ಒಗೆಯಬೇಕು; ಸ್ನಾನ ಮಾಡಬೇಕು; ಪದೇ ಪದೇ ಕೈ ತೊಳೆಯಬೇಕು; ಜೀವನ ಶೈಲಿಯೇ ಬದಲಾಗಿ ಹೋಯಿತು; ಶುಕ್ರವಾರ, ಮಂಗಳವಾರಗಳಂದು ಉಡುತ್ತಿದ್ದ ರೇಷ್ಮೆ ಸೀರೆಗಳಿಗೆ ಬ್ರೇಕ್ ಬಿತ್ತು; ಶಾಲಾ ಸಮಾರಂಭಗಳೇ ಇಲ್ಲದಿರುವುದರಿಂದ ಬೇರೆ ಬೇರೆ ರೀತಿಯ ಸೀರೆಗಳನ್ನು ಉಡುವುದೇ ನಿಂತುಹೋಯಿತು; ಮಕ್ಕಳು ಶಾಲೆಗೆ ಬರದಿದ್ದಾಗ ಚೂಡಿದಾರ್ ಧರಿಸುವುದು ಸಾಮಾನ್ಯವಾಯಿತು; ಒಗೆಯಲು ಸುಲಭ ಎಂದು ಸಿಂಥೆಟಿಕ್ ಸೀರೆಗಳೇ ಮುನ್ನೆಲೆಗೆ ಬಂದವು; ಒಮ್ಮೆ ಧರಿಸಿದ ಮಾತ್ರಕ್ಕೆ ಒಗೆಯಲೇಬೇಕು ಎಂಬ ಪರಿಸ್ಥಿತಿಯಲ್ಲಿ ಹೆಚ್ಚಿನ ಬೆಲೆಯ ಸೀರೆಗಳು ಮೂಲೆಗುಂಪಾದವು; ರೇಷ್ಮೆ ಸೀರೆಗಳನ್ನು ಕೊಳ್ಳುವುದು ಮಾತ್ರ ದುಬಾರಿಯಲ್ಲ, ಅವುಗಳ ನಿರ್ವಹಣೆಯೂ ದುಬಾರಿಯೇ! ಒಂದು ಸಲ ಉಟ್ಟ ಕೂಡಲೇ ಡ್ರೈ ಕ್ಲೀನ್ ಮಾಡಿಸಬೇಕು ಎಂದರೆ ಕಷ್ಟವೇ, ಹಾಗೂ ಉಡಬಹುದಿತ್ತೇನೋ, ಡ್ರೈ ಕ್ಲೀನ್ ಅಂಗಡಿಗಳು, ಇಸ್ತ್ರಿ ಅಂಗಡಿಗಳೆಲ್ಲ ಮುಚ್ಚಿಹೋಗಿವೆಯಲ್ಲ; ಆದ್ದರಿಂದಲೇ ಅಂತಹ ಸೀರೆಗಳು ಬೀರುವಿನ ಒಳಗೇ ಸಮಾಧಿಯಾದವು......
ಹೀಗೇ ಗೀತಾ ಒಂದು ದಿನ ಬೀರು ತೆಗೆದು ಇಂದು ಸೀರೆಯನ್ನು ಉಡಲೇಬೇಕೆಂದು ಮನಸ್ಸು ಮಾಡಿ ಯಾವ ಸೀರೆಯನ್ನು ಉಡಲಿ ಎಂದು ಬೀರುವಿನ ಅರೆಗಳ ತುಂಬ ಪೇರಿಸಿ ಇಟ್ಟಿದ್ದ ಸೀರೆಗಳನ್ನೆಲ್ಲ ನೋಡುತ್ತಿರುವಾಗ, ಆಕೆಗೆ...... ಆ ಸೀರೆಗಳಿಗೆಲ್ಲ ಜೀವ ಬಂದಂತೆ..... ಅಮ್ಮಾವ್ರು ನಮ್ಮನ್ನೇಕೆ ಬೀರುವಿನಿಂದ ಹೊರತೆಗೆಯುತ್ತಿಲ್ಲ ಎಂದು ಮಾತನಾಡಿದಂತೆ..... ನನ್ನನ್ನು ಉಡು ನನ್ನನ್ನು ಉಡು ಎಂದು ಗೀತಾಳನ್ನು ಪೀಡಿಸಿದಂತೆ ........ ನನಗೇಕೆ ಇನ್ನೂ ಬ್ಲೌಸ್ ಹೊಲಿಸಿಲ್ಲ ಎಂದು ಕಾಡಿದಂತೆ..... ನನ್ನನ್ನು ಬೀರುವಿನಿಂದ ತೆಗೆಯುವುದಿಲ್ಲವೇ??? ಬೇಕು ಬೇಕು ಎಂದು ತೆಗೆದುಕೊಂಡೆಯಲ್ಲ ಎಂದು ಕೇಳಿದಂತೆ...... ನನ್ನನ್ನು ಮುಟ್ಟಿಯೇ 6 ತಿಂಗಳಾಯಿತು ನನ್ನನ್ನು ಮೈ ಮೇಲೆಯಾದರೂ ಹಾಕಿಕೊಳ್ಳುವುದಿಲ್ಲವೇ ಎಂದು ಅತ್ತಂತೆ... ಪ್ರತಿದಿನ ಸೀರೆ ಉಡುವೆಯಾ??? ಈಗ ಏನು ಮಾಡುವೆ? ಎಂದು ನಕ್ಕಂತೆ...... ಈ ರೀತಿ ಸೀರೆ ಉಡುವ ಚೆಂದಕ್ಕೆ ಕೊಂಡಿದ್ದೇಕೆ ಎಂದು ಅಣಕಿಸಿದಂತೆ....... ಒಂದಾದ ಮೇಲೆ ಒಂದು ಸೀರೆ ಆಕೆಯ ಮೈಮೇಲೆ ಬಂದು ಬಿದ್ದಂತೆ......ಸೀರೆಗಳ ಅಡಿಯಲ್ಲಿ ತಾನು ಅಪ್ಪಚ್ಚಿಯಾದಂತೆ.... ಉಸಿರು ಕಟ್ಟಿ ಜೀವ ಹೋದಂತೆ.... ತನ್ನ ಚಿತೆಯ ಮೇಲೆ ಕಟ್ಟಿಗೆಯ ಬದಲು ಸೀರೆಗಳನ್ನೇ ಹಾಕಿದಂತೆ ಅನ್ನಿಸುತ್ತಾ ಮೈ ಬೆವರತೊಡಗಿತು....... ಮೈ ಮೇಲೆ ಬೀಳುತ್ತಿರುವ ಸೀರೆಗಳಿಂದ ಹೊರಬರುವ ಪ್ರಯತ್ನ ಮಾಡುವಾಗಲೇ ಅದು ಕನಸು ಎಂಬುದರ ಅರಿವಾಯಿತು..... ಎಫ್. ಎಂ. ನಲ್ಲಿ ತಂದೆ ಕೊಡಿಸೋ ಸೀರೆ ಮದುವೆ ಆಗುವವರೆಗೆ ಹಾಡು ತೇಲಿಬರುತ್ತಿತ್ತು.......