ಸೋಮವಾರ, ಮೇ 22, 2023

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿಕೊಳ್ಳುತ್ತಲೇ ಓಡಿ ಬಂದಳು ಚಂದ್ರಿಕ. ಅಮ್ಮಾ ಬಿ.ಕಾಂ. ರಿಸಲ್ಟ್‌ ಬಂತು, ನಾನೇ ಕಾಲೇಜಿಗೆ ಫಸ್ಟ್‌ ಅಮ್ಮಾ ಅಂತ ಪ್ರಜ್ವಲ್‌ ಮೊದಲು ಅಮ್ಮನ ಕಾಲಿಗೆರಗಿದ. ಚಂದ್ರಿಕಳಿಗೆ ಮನಸ್ಸು-ಹೃದಯ ಎರಡೂ ತುಂಬಿಬಂದು ಕಣ್ಣುಗಳಲ್ಲಿ ಅಶ್ರುಧಾರೆಯಾಗಿ ಹರಿಯಿತು. ಏಳು ಕಂದಾ! ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ಎಂತಹ ಖುಷಿಯ ವಿಚಾರ ಹೇಳಿದಯಪ್ಪ ಎಂದು ಮಗನನ್ನು ತಬ್ಬಿಕೊಂಡಳು.  ಒಂದೆರೆಡು ಕ್ಷಣಗಳಲ್ಲಿ ಆಕೆಗೆ ತನ್ನ ಮಕ್ಕಳನ್ನು ಓದಿಸಲು ಪಟ್ಟ ಕಷ್ಟದ ನೆನಪಾಯಿತು. ಗಂಡ ಸರ್ಕಾರಿ ಶಾಲೆಯಲ್ಲಿ ಮೇಷ್ಟ್ರಾಗಿದ್ದರೂ, ನಾಲ್ಕು ಜನರಿದ್ದ ಮನೆಯನ್ನು ನಿಭಾಯಿಸುವುದು ಕಷ್ಟವೇ ಇತ್ತು. ಅವಳಿಗೆ ಪದೇ ಪದೇ ಕಾಡುವ ಬೆನ್ನು ನೋವು, ಇಬ್ಬರು ಗಂಡುಮಕ್ಕಳ ಆರೋಗ್ಯವೂ ಅಷ್ಟಕ್ಕಷ್ಟೆ,., ಇದರ ನಡುವೆ ಮನೆಗೆ ಬಂದು ಹೋಗುವ ನೆಂಟರಿಷ್ಬರು ಬೇರೆ. ಒಂದು ಸಂಬಳದಲ್ಲಿ ಇಷ್ಟೆಲ್ಲವೂ ನಡೆಯಬೇಕು.  ಆದರೆ, ಮಕ್ಕಳು ಬುದ್ಧಿವಂತರು; ಚೆನ್ನಾಗಿ ಓದಿದರು. ಪಿಯುಸಿಯಲ್ಲಿ, ಪ್ರಜ್ವಲ್‌  80% ತೆಗೆದುಕೊಂಡು ಮುಂದೆ ಮೈಸೂರಿಗೆ ಹೋಗಿ ಓದುತ್ತೇನೆ ಎಂದು ಒಂದೇ ಸಮ ಗಲಾಟೆ ಮಾಡಿದ. ಇಲ್ಲೇ ಸರಗೂರಿನಲ್ಲಿ ಪದವಿ ಕಾಲೇಜಿದೆ ಅಲ್ಲೇ ಓದಿದರಾಯಿತು, ಮೈಸೂರೇಕೆ? ಸುಮ್ಮನೇ ದುಡ್ಡು ಖರ್ಚು. ಅಂತ ರಾಮಯ್ಯ ಹೇಳುತ್ತಿದ್ದಂತೆ ಉರಿದು ಬಿದ್ದಿದ್ದಳು ಚಂದ್ರಿಕ. ಒಳ್ಳೆಯ ಅಂಕಗಳನ್ನು ತೆಗೆದುಕೊಂಡು ಪಾಸಾಗಿದ್ದಾನೆ, ಮೈಸೂರಿಗೆ ಹೋದರೆ, ಸ್ವಲ್ಪ ಲೋಕಜ್ಞಾನವೂ ಬೆಳೆಯುತ್ತೆ. ಹಾಸ್ಟೆಲ್‌ ಹೆಂಗೂ ಫ್ರೀ ಆಗಿ ಸಿಗುತ್ತೆ. ಹೋಗಲಿ ಬಿಡಿ. ಅವನಿಗೆ ಇನ್ನೇನು ಖರ್ಚಿರುತ್ತೆ? ಪುಸ್ತಕ, ಬಟ್ಟೆ, ಕಾಲೇಜು ಫೀಸು ಕಟ್ಟಿದರಾಯಿತು ಅಂತ ಸ್ವಲ್ಪ ಜೋರಾಗಿ ಹೇಳಿದ ಮೇಲೆ ರಾಮಯ್ಯನೂ ತಲೆದೂಗಿದ. ಮಗನನ್ನು ಮೈಸೂರಿನ ಕಾಲೇಜಿಗೆ ಸೇರಿಸಿ, ಹಾಸ್ಟೆಲ್‌ ವ್ಯವಸ್ಥೆ ಮಾಡಿದ್ದಾಯ್ತು. 3 ವರ್ಷ ಕಳೆದದ್ದೇ ತಿಳಿಯಲಿಲ್ಲ. ಈಗ ಅಮ್ಮಾ ನಾನು ಕಾಲೇಜಿಗೇ ಟಾಪರ್‌ ಎಂದು ಓಡಿಬಂದಿದ್ದಾನೆ. ಎಲ್ಲ ನೆನಪುಗಳೂ ಒಂದರ ಹಿಂದೆ ಒಂದು ತೂರಿಕೊಂಡು ಬಂದು, ಚಂದ್ರಿಕಾಳ ಕಣ್ಣಾಲಿಗಳು ಇನ್ನಷ್ಟು ತುಂಬಿಬಂದವು. ಅಮ್ಮಾ, ಯಾಕೆ ಕಣ್ಣಲ್ಲಿ ನೀರು?  ಇನ್ನೊಂದೆರೆಡು ವರ್ಷ ನನ್ನನ್ನು ಓದಿಸಿಬಿಡಮ್ಮ ಆಮೇಲೆ ಒಂದು ಒಳ್ಳೆಯ ಕೆಲಸ ಹಿಡಿದು, ನಿನ್ನನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಂತೆ, ಅಪ್ಪ ಒಳಗೆ ಬರುವುದು ಕಂಡಿತು.

ಏನು ಪ್ರಜ್ವಲ್‌? ಏನು ವಿಷಯ? ಎಂದು ಅಪ್ಪ ಕೇಳುತ್ತಿದ್ದಂತೆ, ಪ್ರಜ್ವಲ್‌ ತನ್ನ ರಿಸಲ್ಟ್‌ ವಿಚಾರವನ್ನು ಹೇಳಿದ. ಸಧ್ಯ! ನಿನ್ನ ಗ್ರಾಜುಯೇಷನ್‌ ಮುಗೀತಲ್ಲ; ಇನ್ನು ಬೇಗ ಕೆಲಸಕ್ಕೆ ಸೇರಿಕೊಂಡುಬಿಡು. ನನಗೂ ಸ್ವಲ್ಪ ಸಹಾಯವಾಗುತ್ತೆ ಅಂತ ಅಪ್ಪ ಹೇಳುತ್ತಿದ್ದಂತೆ, ಪ್ರಜ್ವಲ್‌, ಅಪ್ಪಾ ನಾನೀಗಲೇ ಕೆಲಸಕ್ಕೆ ಸೇರೋದಿಲ್ಲ, ಇನ್ನೂ ಎರಡು ವರ್ಷ ಓದಬೇಕು ಅಂತಿದ್ದೀನಿ ಅಂತ ತನ್ನ ಮನಸ್ಸಿನ ಮಾತನ್ನು ಹೇಳಿದ. ಏನೂ, ಇಷ್ಟು ವರ್ಷ ಓದಿಸಿರೋದು ಸಾಲ್ದಾ? ಇನ್ನೂ ನಾನು ಓದಿಸಬೇಕಾ? ಯಾವ ಪುರುಷಾರ್ಥಕ್ಕೆ ನಿನ್ನನ್ನು ಓದಿಸಲು ನಾನು ಇನ್ನೂ ಖರ್ಚು ಮಾಡಬೇಕಪ್ಪಾ? ಕಾಲೇಜಿಗೇ ಮೊದಲು ಅಂತೀಯ, ಯಾವ್ದಾದ್ರೂ ಕೆಲಸ ಸಿಕ್ಕೇ ಸಿಗುತ್ತೆ. ನೀನು ಕೆಲ್ಸಕ್ಕೇ ಪ್ರಯತ್ನ ಪಡು. ನನ್ನ ಕೈಲಿ ಓದ್ಸಕ್ಕೆ ಆಗಲ್ಲ ಅಂತ ರಾಮಯ್ಯ ಹೇಳ್ತಿದ್ದ ಹಾಗೇ, ಚಂದ್ರಿಕಾಳ ಸಿಟ್ಟು ನೆತ್ತಿಗೇರಿತ್ತು. ಇವತ್ತಿನ ಕಾಲದಲ್ಲಿ ಎಷ್ಟು ಓದಿದರೂ ಕಡಿಮೆಯೇ! ಬರೀ ಪದವಿಗೆ ಸಿಗುವ ಕೆಲಸವೂ ಅಷ್ಟಕ್ಕಷ್ಟೇ. ಇನ್ನೊಂದೆರೆಡು ವರ್ಷ ಓದಲಿ ಬಿಡಿ ಅಂತ ಮಗನ ಪರವಾಗಿ ಮಾತನಾಡಿದಳು. ಮಗ ಕೆಲಸಕ್ಕೆ ಸೇರಿಕೊಂಡರೆ ತನ್ನ ಜವಾಬ್ದಾರಿಗಳು ಕಡಿಮೆ ಆಗುತ್ತವೆ; ಹೇಗೂ ಮುಂದಿನ ವರ್ಷ ರಿಟೈರ್‌ ಆಗ್ತಾ ಇದ್ದೀನಿ, ಇನ್ನೂ ಓದಿಸಲು ದುಡ್ಡು ಖರ್ಚು ಮಾಡಬೇಕೆಂದರೆ?? ಎರಡನೆಯ ಮಗನೂ ಈಗ ಪಿಯುಸಿ ಎರಡನೇ ವರ್ಷದಲ್ಲಿದ್ದಾನೆ; ಅವನನ್ನೂ ನೋಡಬೇಕಲ್ಲ! ಎಂಬ ಆಲೋಚನೆಗಳು ರಾಮಯ್ಯನ ಮನಸ್ಸಿನಲ್ಲಿ. ಅಷ್ಟು ಹೊತ್ತಿಗೆ ಪ್ರಜ್ವಲ್‌, ಅಪ್ಪಾ ನಾನು ಎಂ.ಬಿ.ಎ. ಮಾಡ್ತೀನಿ ಅಂದಾಗ ರಾಮಯ್ಯ ಹೌಹಾರಿದ. ಏನೋ ಎಂ.ಕಾಂ. ಮಾಡಬಹುದು, ಸ್ವಲ್ಪ ಖರ್ಚು ನೋಡಿಕೊಂಡರಾಯಿತು  ಅಂತ ಎಣಿಸಿದ್ದ ರಾಮಯ್ಯನಿಗೆ ಎಂ.ಬಿ.ಎ ಅಂತಿದ್ದ ಹಾಗೇ ಸ್ವಲ್ಪ ಸಿಟ್ಟು ಹೆಚ್ಚಾಗೇ ಬಂತು. ಆ ಸಿಟ್ಟಿನ ಮಾತುಗಳು ಹೊರಬರುವ ಮುನ್ನವೇ ಚಂದ್ರಿಕಾ, ನೀವು ದುಡ್ಡು ಖರ್ಚಾಗುತ್ತೆ ಅಂತ ಅವನಿಗೆ ಓದೋದು ಬೇಡ ಅಂದ್ರೆ ನಾನು ಸುಮ್ನಿರಲ್ಲ ಎಂದು ಗುಡುಗಿದಳು. ರಾಮಯ್ಯ ಬೇರೆ ದಾರಿಯಿಲ್ಲದೇ ಒಪ್ಪಲೇಬೇಕಾಯಿತು.

ಮುಂದೆ ನಡೆದದ್ದೆಲ್ಲವೂ ಕನಸಿನಂತೆ. ಪ್ರಜ್ವಲ್‌ ಎಂಬಿಎ ಮಾಡಿಯೂ ಆಯಿತು. ಒಂದು ಒಳ್ಳೆಯ ಕಂಪೆನಿಯಲ್ಲಿ ಕೆಲಸವೂ ಸಿಕ್ಕಾಯಿತು. ಚಂದ್ರಿಕಾಳ ಆನಂದಕ್ಕೆ ಪಾರವೇ ಇರಲಿಲ್ಲ. ಮೂರು ವರ್ಷಗಳಲ್ಲಿ ಪ್ರಜ್ವಲ್‌ಗೆ ಪ್ರಮೋಷನ್‌ ಸಹ ದೊರೆಯಿತು. ಈಗಿನ್ನು ಅವನಿಗಾಗಿ ಹುಡುಗಿಯ ಹುಡುಕಾಟ. ಚಂದ್ರಿಕಾಳಿಗೆ ಇದೇ ಯೋಚನೆ. ಪ್ರಜ್ವಲ್‌ ತನ್ನ ತಂದೆಯಂತೆ ಸ್ವಲ್ಪ ಕಪ್ಪು. ಆದರೂ ನೋಡಲು ಲಕ್ಷಣವಾಗಿದ್ದ. ಹುಡುಗಿಯರಿಗೆ ಒಳ್ಳೆಯ ಹುಡುಗರು ಸಿಗಬೇಕು ಎನ್ನುವುದು ಹಿಂದಿನ ಕಾಲದ ಮಾತಾಯಿತು. ಈಗ ಹುಡುಗರಿಗೆ ಒಳ್ಳೆಯ ಹುಡುಗಿ ಸಿಗಬೇಕು. ತನ್ನ ಮಗನೋ ಡಬಲ್‌ ಗ್ರಾಜುಯೇಟ್.‌ ಇನ್ನು ಬರುವ ಹುಡುಗಿಯೂ ಓದಿರುವವಳೇ ಆಗಿರಬೇಕು; ಈಗಿನ ಕಾಲದ ಹುಡುಗಿಯರು, ಓದಿನಲ್ಲೇನೋ ಮುಂದಿರುತ್ತಾರೆ; ಒಳ್ಳೆಯ ಕೆಲಸವೂ ಇರುತ್ತದೆ. ಮನೆ ನೋಡಿಕೊಂಡು ಸಂಸಾರ ಮಾಡುವುದು ಬರುತ್ತೋ ಇಲ್ಲವೋ? ಅಡುಗೆ ಕಲಿತಿರುತ್ತಾರೋ ಇಲ್ಲವೋ?, ಮನೆಗೆಲಸ ಮಾಡುವುದರಲ್ಲಿ ಪಳಗಿರುತ್ತಾರೋ ಇಲ್ಲವೋ? ಇವನಿರುವುದು ಬೆಂಗಳೂರಿನಲ್ಲಿ. ಇಬ್ಬರೇ ಹೇಗೆ ಮನೆ ನಿರ್ವಹಿಸುತ್ತಾರೋ ಎಂಬಂತಹ ಯೋಚನೆಗಳು ಚಂದ್ರಿಕಾಳ ಮನದಲ್ಲಿದ್ದವು. 

ಈ ತುಮುಲದಲ್ಲಿದ್ದಾಗಲೇ, ಮಗನಿಗೆ ಒಂದು ಒಳ್ಳೆಯ ಸಂಬಂಧ ಕೂಡಿಬಂತು. ಹುಡುಗಿ ನೋಡಲು ಚೆನ್ನಾಗಿದ್ದಳು. ಈಗ ತಾನೇ ಎಂ.ಎ ಮುಗಿಸಿದ್ದಳು. ಮನೆ ಕಡೆಯೂ ಅನುಕೂಲವಾಗಿದ್ದರು. ಹುಡುಗಿಯನ್ನು ನೋಡಲು ಹೋದಾಗ, ಪ್ರಜ್ವಲ್‌ಗೆ ಒಳಗೊಳಗೇ ಅಳುಕು. ಹುಡುಗಿ ಒಪ್ಪುತ್ತಾಳೋ ಇಲ್ಲವೋ? ಅವಳು ನೋಡಲು ಚೆಂದ; ತಾನೋ ಸ್ವಲ್ಪ ಕಪ್ಪು; ಅವಳು ಬೇಡ ಎಂದುಬಿಟ್ಟರೆ? ಹಾಗೇಕೆ ಅನ್ನುತ್ತಾಳೆ? ಫೋಟೋ ನೋಡಿಲ್ಲವೇ? ಅದಾದ ಮೇಲೆ ತಾನೇ, ನಾನಿವಳನ್ನು ನೋಡಲು ಬಂದದ್ದು. ನೋಡೋಣ! ಅವಳ ಜೊತೆ ಮಾತನಾಡುವಾಗ ಕೇಳಿದರಾಯಿತು ಎಂದು ನಿರ್ಧರಿಸಿದ. ಮನೆಯವರೆಲ್ಲರೂ ಮಾತನಾಡಿದ ಮೇಲೆ, ಹುಡುಗ-ಹುಡುಗಿ ಮಾತನಾಡಬೇಕು ಎಂದು ತಾರಸಿಯ ಮೇಲೆ ಬಂದರು. ಆಗ ಪ್ರಜ್ವಲ್‌, ದೀಪಾಳನ್ನು ಕೇಳಿದ. ನಿಮ್ಮ ಮನೆಯವರ ಬಲವಂತಕ್ಕೆ ನನ್ನನ್ನು ಒಪ್ಪಬೇಡ! ನಿನಗೆ ನಿಜವಾಗಲೂ ಇಷ್ಟವಿದ್ದರೆ ಮಾತ್ರ ಒಪ್ಪಿಕೋ! ಇದು ನಮ್ಮಿಬ್ಬರ ಜೀವನದ ಪ್ರಶ್ನೆ. ಎಂದು ಹೇಳುತ್ತಿದ್ದಂತೆ, ದೀಪಾ, ಪ್ರಜ್ವಲ್‌ ನನಗೂ ನೀವು ಹಿಡಿಸಿದ್ದೀರಿ. ನಿಮ್ಮ ಸರಳತೆ ನನಗೆ ಇಷ್ಟವಾಗಿದೆ. ನಾನೇನೂ ಯಾರ ಬಲವಂತಕ್ಕೂ ಮದುವೆಯಾಗುತ್ತಿಲ್ಲ. ಇಷ್ಟಪಟ್ಟೇ ಮದುವೆ ಆಗುತ್ತಿದ್ದೇನೆ ಎಂದಾಗ ಪ್ರಜ್ವಲ್‌ಗೆ ಸ್ವರ್ಗಕ್ಕೆ ಮೂರೇ ಗೇಣು. 

ಮುಂದಿನದೆಲ್ಲ ಹೂವಿನ ಹಾರ ಎತ್ತಿದಂತೆ ಸುಲಭವಾಗಿ ನಡೆದುಹೋಯಿತು. ಮದುವೆಯಾಗಿ ವರ್ಷದೊಳಗೆ ಪುಟ್ಟ ಕಂದಮ್ಮನ ಆಗಮನವೂ ಆಯಿತು. ಮಗುವಿಗೆ 3 ವರ್ಷ ತುಂಬುತ್ತಿದ್ದಂತೆ, ಸ್ಕೂಲಿಗೂ ಸೇರಿಸಿದ್ದಾಯಿತು. ಈಗ ದೀಪಾಳಿಗೆ ಹೊತ್ತು ಕಳೆಯುವ ಸಮಸ್ಯೆ ಶುರುವಾಯಿತು. ಪ್ರಜ್ವಲ್‌ ಬೆಳಿಗ್ಗೆ 9ಕ್ಕೆ ಹೊರಟರೆ, ಬರುವುದು ರಾತ್ರಿ 9ಕ್ಕೆ. ಅದು ಕೆಲವೊಮ್ಮೆ 10 ಆದರೂ ಆದೀತು. ಬೆಳಿಗ್ಗೆ  ಹನ್ನೊಂದು ಗಂಟೆಯವರೆಗೆ ಸಮಯ ಹೋಗುವುದು ತಿಳಿಯುತ್ತಿರಲಿಲ್ಲ; ಬೆಳಿಗ್ಗೆ ಏಳುವುದು, ತಿಂಡಿ-ಅಡುಗೆ ಮಾಡುವುದು, ಮಗುವನ್ನು ಸ್ಕೂಲಿಗೆ ರೆಡಿ ಮಾಡುವುದು; ಪ್ರಜ್ವಲ್‌ಗೆ ಡಬ್ಬಿ ಕಟ್ಟಿಕೊಡುವುದು; ಅವರಿಬ್ಬರನ್ನೂ ಕಳಿಸಿಕೊಟ್ಟ ನಂತರ ಮನೆಗೆಲಸ ಒಂದು ಗಂಟೆಯಲ್ಲಿ ಮುಗಿದುಹೋಗುತ್ತಿತ್ತು. ಇನ್ನು ಮಗು ಬರುವುದು 2 ಗಂಟೆಗೇ! ಅಲ್ಲಿಯವರೆಗೆ ದೀಪಾಳಿಗೆ ಬೇಜಾರು. ಮಗು ಬಂದ ತಕ್ಷಣ ಊಟ ಮಾಡಿಸಿದರೆ, ಅದು ಮಲಗಿದಾಗಲೂ ದೀಪಾಳಿಗೆ ಹೊತ್ತು ಹೋಗದು. ಇಷ್ಟು ದಿನಗಳವರೆಗೆ ಅಮ್ಮ, ಅತ್ತೆ, ನೆಂಟರು-ಇಷ್ಟರು ಬಂದು ಹೋಗುತ್ತಿದ್ದರು. ಈಗ ಹಳೆಯದಾಯಿತಲ್ಲ; ಎಲ್ಲರಿಗೂ ಅವರವರ ಕೆಲಸಗಳು. ಮನೆಗೆ ಬಂದು ಹೋಗುವವರೂ ಕಡಿಮೆ. ಸಂಜೆ ಮಗುವಿನ ಜೊತೆ ಸ್ವಲ್ಪ ಹೊತ್ತು ಆಟ, ನಂತರ ಅದಕ್ಕೆ ಊಟ, ಮತ್ತೆ ಅದು ಮಲಗಿದ ಮೇಲೆ ಪ್ರಜ್ವಲ್‌ಗಾಗಿ ಕಾಯುವಾಟ, ಮನದಲ್ಲಿ ಹೊಯ್ದಾಟ. ಅವಳಿಗೆ ತನ್ನ ಎಂ.ಎ. ಚಿನ್ನದ ಪದಕಗಳು ಕಣ್ಮುಂದೆ ಬಂದವು. ನೀನು ಒಂದು ಒಳ್ಳೆ ಕಾಲೇಜಿನಲ್ಲಿ ಲೆಕ್ಚರರ್‌ ಆಗಿ ಸೇರಿಕೋ. ಬಹಳಷ್ಟು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಶಕ್ತಿ ನಿನಗಿದೆ ಎಂದು ಅವಳ ನೆಚ್ಚಿನ ಪ್ರಾಧ್ಯಾಪಕರು ಹೇಳಿದ ಮಾತುಗಳೂ ನೆನಪಾದವು. ನಾನೇಕೆ ಕೆಲಸಕ್ಕೆ ಸೇರಬಾರದು? ಎಂಬ ಆಲೋಚನೆ ಅವಳ ಮನದಲ್ಲಿ ಮೂಡಿಬಂತು.

ಸರಿ, ಪೇಪರ್‌ ನೋಡಿ, ಅವರಿವರನ್ನು ಕೇಳಿ ನಾಲ್ಕು ಕಡೆ ಅರ್ಜಿ ಹಾಕಿದ್ದೂ ಆಯಿತು; ಸಂದರ್ಶನಕ್ಕೆ ಕರೆ ಬಂದದ್ದೂ ಆಯಿತು. ದೀಪಾ ಜಾಣೆ, ಅಲ್ಲದೇ ಒಳ್ಳೆಯ ಶಿಕ್ಷಣ-ವಿದ್ಯಾಭ್ಯಾಸ; ಮಾತೂ ಪಟಪಟನೆ ಅರಳು ಹುರಿದಂತೆ,  ಉಪನ್ಯಾಸಕಿಯಾಗಲು ಇನ್ಯಾವ ಅರ್ಹತೆ ಬೇಕು? ತೀರ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಹೋಗಲು ದೀಪಾಳಿಗೆ ಮನಸ್ಸಾಗಲಿಲ್ಲ; ಹಾಗಾಗಿ, ತನ್ನ ಮನೆಗೆ ಸಮೀಪವಿರುವ ಕಾಲೇಜಿನಲ್ಲಿ ಉತ್ತಮ ಸಂಬಳವಿದ್ದ ಕಾರಣ, ಫುಲ್ ಟೈಂ ಲೆಕ್ಚರರ್‌ ಆಗಿ ಕೆಲಸಕ್ಕೆ ಸೇರಿಯೇಬಿಟ್ಟಳು ದೀಪಾ. ಈಗ್ಯಾಕೆ ಕೆಲಸ? ಮಗು ಸ್ವಲ್ಪ ದೊಡ್ಡವಳಾಗುವವರೆಗೆ ಅವಳ ಜೊತೆ ಇರಬಾರದಾ? ನನಗೂ ಈ ವರ್ಷ ಟ್ರಾನ್ಸ್‌ಫರ್‌ ಅಂತಿದ್ದಾರೆ, ಆಗ ಏನ್ಮಾಡ್ತೀಯಾ? ನನ್ನ ಜೊತೆ ಬರ್ತೀಯೋ ಅಥವಾ ಕೆಲಸ ಅಂತ ಇಲ್ಲೇ ಇರ್ತೀಯೋ? ನಿನಗೆ ನಾನು ಮುಖ್ಯ ಅಂತ ಅನ್ನಿಸೋದೇ ಇಲ್ವಾ? ಕೆಲಸಾನೇ ನಿನಗೆ ಮುಖ್ಯ ಆಯ್ತಾ? ಅಂತ ಪ್ರಜ್ವಲ್‌ನ ಗೊಣಗಾಟ ಶುರು ಆಯ್ತು. ಅಯ್ಯೋ! ನಿಮಗೇನ್ರೀ ಕಷ್ಟ? ಹೊತ್ತಿಗೆ ಸರಿಯಾಗಿ ಮಾಡಿ ಹಾಕ್ತೀನಿ. ನೀವು ಬರೋದ್ರೊಳಗೆ ಮನೆಗೆ ಬರ್ತೀನಿ. ಇನ್ನೇನು? ನನಗೂ ಬೇಜಾರು ಕಳೆಯುತ್ತೆ. ಜನಪರಿಚಯಾನೂ ಆಗುತ್ತೆ. ಮಗೂನ್ನ ಸ್ಕೂಲ್‌ ಪಕ್ಕದಲ್ಲೇ ಇರೋ ಪ್ಲೇ ಹೋಂ ನವರು ನೋಡ್ಕೊತ್ತಾರೆ. ಅವಳಿಗೂ ಸ್ವಲ್ಪ ಅಭ್ಯಾಸ ಆಗುತ್ತೆ. 3 ವರ್ಷ ಅವಳ ಜೊತೇನೇ ಇದ್ದೆ ಅಲ್ವಾ? ಇನ್ನು ನಿಮ್ಮ ಟ್ರಾನ್ಸ್‌ಫರ್‌ ವಿಷ್ಯ. ಅದು ಬಂದಾಗ ನೋಡೋಣ ಅಂತ ಪ್ರಜ್ವಲ್‌ನನ್ನು ಸಮಾಧಾನಪಡಿಸಿದಳು ದೀಪಾ.

ಎಲ್ಲವೂ ಒಂದು ಹಂತದವರೆಗೆ ಚೆನ್ನಾಗಿಯೇ ನಡೆಯುತ್ತಿತ್ತು. ಒಂದು ವರ್ಷ ಕಳೆದದ್ದೇ ತಿಳಿಯಲಿಲ್ಲ. ದೀಪಾಳ ಕೆಲಸ ಕಾಲೇಜಿನಲ್ಲಿ ಎಲ್ಲರಿಗೂ ಹಿಡಿಸಿತು. ಹೆಚ್ಚು ಹೆಚ್ಚು ಜವಾಬ್ದಾರಿಗಳು ಹೆಗಲೇರಿದವು. ಬೆಳಿಗ್ಗೆ 9.30 ಗೆ ಮನೆಯಿಂದ ಹೊರಡುತ್ತಿದ್ದವಳು ಈಗ 7.30 ಗೆ ಹೊರಡಬೇಕಾಯಿತು. ಮಗಳನ್ನು 4 ಗಂಟೆಗೆ ಪ್ಲೇ ಹೋಂನಿಂದ ತಾನೇ ಕರೆದುಕೊಂಡು ಬರುತ್ತಿದ್ದ ದೀಪಾಳಿಗೆ ಈಗ ಸಂಜೆ 6 ಗಂಟೆಯವರೆಗೆ ಕೆಲಸ. ಕಾಲೇಜಿನಲ್ಲಿ ಕೆಲಸ ಹೆಚ್ಚಾಗುತ್ತಿದ್ದಂತೆ ಮನೆಯ ಕೆಲಸಗಳು ಏರುಪೇರಾಗುತ್ತಿತ್ತು. ಎಲ್ಲ ಕೆಲಸಗಳನ್ನು ಮಾಡಿ ಕಾಲೇಜಿಗೆ ಹೋಗುತ್ತಿದ್ದ ದೀಪಾ ಸ್ವಲ್ಪ ಸ್ವಲ್ಪವೇ ಬದಲಾದಳು. ಅವಳಿಗೂ ಎರಡೂ ಕಡೆ ಒಂದೇ ರೀತಿ ಗಮನ ನೀಡಲು ಸಾಧ್ಯವಾಗುತ್ತಿರಲಿಲ್ಲ; ದೇಹಕ್ಕೆ ಆಯಾಸ; ಮನಸ್ಸಿಗೆ ದಣಿವು; ಗಂಡನನ್ನು ಗಮನಿಸಿಕೊಳ್ಳುವ ವ್ಯವಧಾನವೂ ಕಡಿಮೆ ಆಯಿತು. ಮನೆಗೆ ಬಂದರೂ ಕಾಲೇಜಿನದ್ದೇ ಕೆಲಸ. ಸದಾ ಅದೇ ಧ್ಯಾನ; ಇನ್ನು ಕೆಲಸ ಬಿಡುವ ಇಚ್ಛೆಯೋ ಮೊದಲೇ ಇರಲಿಲ್ಲ; ನಿಧಾನವಾಗಿ ಎಲ್ಲವೂ ಬದಲಾಗಲು ಶುರುವಾಯಿತು. ಪ್ರಜ್ವಲ್‌ ಇವತ್ತು ಪುಟ್ಟೀನ ನೀವೇ ಸ್ಕೂಲಿಗೆ ಬಿಡಬೇಕು; ಇವತ್ತು ನೀವೇ ತರಕಾರಿ ತಂದುಬಿಡಿ; ನನಗೆ ಲೇಟ್‌ ಆಗ್ತಾ ಇದೆ, ಪುಟ್ಟಿ ಇನ್ನೂ ಎದ್ದಿಲ್ಲ; ನೀವೇ ರೆಡಿ ಮಾಡಿಬಿಡಿ; ಇವತ್ತು ಕಾಲೇಜಲ್ಲಿ ಫಂಕ್ಷನ್‌ ಇದೆ, ನಾನು ಬರೋದು 8 ಗಂಟೆ ಆಗುತ್ತೆ; ನೀವೇ ಪುಟ್ಟೀನ ಕರ್ಕೊಂಡು ಬನ್ನಿ; ಇವತ್ತು ಸ್ಪೆಷಲ್‌ ಕ್ಲಾಸ್‌ ಇದೆ, ನಾನು ಬೇಗ ಹೋಗ್ಬೇಕು, ತಿಂಡಿ ಮಾಡಿದ್ದೀನಿ, ನೀವೇ ಅವಳಿಗೆ ತಿನ್ನಿಸಿಬಿಡಿ; ಇವೆಲ್ಲವೂ ಮನೆಯಲ್ಲಿ ಸಾಮಾನ್ಯವಾಯಿತು.

 ಪ್ರಜ್ವಲ್‌ ಹಾಸ್ಟೆಲ್‌ನಲ್ಲಿ ಇದ್ದು ಓದಿದ ಜಾಣ ಹುಡುಗನಾದರೂ ಮನೆಕೆಲಸದಲ್ಲಿ ಸೊನ್ನೆ! ಅವನಿಗೆ ಕುಕ್ಕರ್‌ ಇಡುವ ಮಾತಿರಲಿ ಎಷ್ಟು ಸಲ ವಿಷಲ್‌ ಆದ ಮೇಲೆ ಗ್ಯಾಸ್‌ ಆಫ್‌ ಮಾಡಬೇಕು ಎನ್ನುವುದೂ ನೆನಪಿರುವುದಿಲ್ಲ; ಮಗಳನ್ನು ಸ್ಕೂಲಿಗೆ  ಬಿಡುವುದು; ಅಲ್ಲಿಂದ ಕರೆದುಕೊಂಡು ಬರುವುದು; ತರಕಾರಿ ತರುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದನೇ ಹೊರತು ಬೇರೆ ಕೆಲಸ ಬರುತ್ತಲೂ ಇರಲಿಲ್ಲ; ತಾನು ಮಾಡಬೇಕು ಎಂದು ಯಾವತ್ತೂ ಅನಿಸಿರಲಿಲ್ಲ; ಯಾವಾಗ ದೋಸೆ ಮಾಡ್ಕೊಳ್ಳಿ; ಇವತ್ತಿನ ಹುಳಿ ಇದೆ; ನಾಳೆಗೆ ಅಡ್ಜಸ್ಟ್‌ ಮಾಡ್ಕೊಳ್ಳಿ;  ನಿಮ್ಮ ಬಟ್ಟೆ ಇಸ್ತ್ರಿ ಮಾಡ್ಕೊಂಬಿಡಿ; ಅಂತ ದೀಪಾ ಹೇಳಲು ಶುರುಮಾಡಿದಳೋ; ಯಾವಾಗ ವೀಕೆಂಡ್‌ಗಳಲ್ಲಿ ಹೊರಗೆ ಹೋಗೋಣ ಅಂತ ಕರೆದಾಗ ಇಲ್ಲ ನನಗೆ ಕೆಲಸ ಇದೆ ಅಂತ ದೀಪಾ ಹೇಳಲು ಪ್ರಾರಂಭಿಸಿದಳೋ; ಯಾವಾಗ ಮಗಳ ಜವಾಬ್ದಾರಿ ಅವನ ತಲೆಯ ಮೇಲೇ ಬಿತ್ತೋ ಆಗ ಪ್ರಜ್ವಲ್‌ ಸಿಡಿದೆದ್ದ. ನನ್‌ ಕೈಲಿ ಇವೆಲ್ಲ ಮಾಡೋಕೆ ಆಗಲ್ಲ ದೀಪಾ. ನಿನ್ನನ್ನು ಮದ್ವೆ ಮಾಡಿಕೊಂಡಿದ್ದು ಯಾಕೆ? ಏನೋ ಸಣ್ಣ ಪುಟ್ಟ ಕೆಲಸ ಆದ್ರೆ ಪರವಾಗಿಲ್ಲ. ಬರ್ತಾ ಬರ್ತಾ ಅತಿಯಾಯ್ತು ನಿಂದು. ಬಿಸಿ ಬಿಸಿಯಾಗಿ ತಿಂಡಿ ಮಾಡ್ಕೊಡ್ತಿದ್ದೆ; ಡಬ್ಬೀಗೆ ಊಟ ಹಾಕ್ಕೊಡ್ತಿದ್ದೆ; ವಾರದ ಕೊನೆಯಲ್ಲಿ ಎಲ್ಲಾದ್ರೂ ಹೋಗಿ ಬರ್ತಿದ್ವಿ. ನಂಗೆ ಮನೆ ಜವಾಬ್ದಾರಿ ಏನೂ ಇರ್ಲಿಲ್ಲ; ಆರಾಮಾಗಿದ್ದೆ. ಅದ್ಯಾಕಾದ್ರೂ ಕೆಲ್ಸಕ್ಕೆ ಸೇರ್ಕೊಂಡ್ಯೋ? ಅವರೆಷ್ಟು ದುಡ್ಡು ಕೊಡ್ತಾರೋ ನಾನೇ ನಿಂಗೆ ಕೊಡ್ತೀನಿ; ಕೆಲ್ಸ ಬಿಟ್ಬಿಡು; ನಂಗೆ ಮನೆಕೆಲ್ಸ ಮಾಡಕ್ಕೆ ಆಗಲ್ಲ; ಆಫೀಸ್‌ ಟೆನ್ಷನ್‌ ಬೇರೆ ಇರುತ್ತೆ; ಸ್ವಲ್ಪ ಅರ್ಥ ಮಾಡ್ಕೋ ಅಂತ ಒಂದು ದಿನ ಕೂಗಾಡಿದೆ.

ನೋಡ್ರೀ ನನಗೆ ದುಡ್ಡಲ್ಲ ಮುಖ್ಯ. ನನ್ನ ಕೆರಿಯರ್‌ ಮುಖ್ಯ. ಮದ್ವೆ ಆಗಿ ನಾಲ್ಕು ವರ್ಷ ನಿಮ್ಮ ಸೇವೇನೇ ಮಾಡಿದ್ದೀನಲ್ಲ; ನೀವೂ ಸ್ವಲ್ಪ ಅಡ್ಜಸ್ಟ್‌ ಆಗ್ಬೇಕು; ಎಲ್ಲ ಮೊದಲಿನ ಥರಾನೇ ಇರೋಕ್ಕಾಗತ್ತಾ? ನಾನು ಹೋಗೋದ್ರೊಳಗೆ ತಿಂಡಿ ಮಾಡ್ಕೊಡ್ತಿನಿ ಬನ್ನಿ ಅಂದ್ರೆ ಇಷ್ಟು ಬೇಗ ತಿಂಡಿ ಬೇಡ ಅಂತೀರ; ಬೆಳಿಗ್ಗೆ ಪುಟ್ಟೀಗೆ ರೆಡಿ ಮಾಡಿ ಅಂದ್ರೆ ಪೇಪರ್‌ ಬಿಟ್ಟು ಬರೋದೂ ಇಲ್ಲ; ಹೋಗ್ಲಿ ಗ್ಯಾಸ್‌ ಆಫ್‌ ಮಾಡಿ, ಕುಕ್ಕರ್‌ ಇಟ್ಟಿದೀನಿ ಅಂದ್ರೆ, ಮೊಬೈಲ್‌ನಲ್ಲಿ ಮುಳುಗಿರ್ತೀರ; ಸಂಜೆ ಸ್ವಲ್ಪ ತೊಳೆದಿರೋ ಪಾತ್ರೆ ಎತ್ತಿಡಿ ಅಂದ್ರೆ ಟಿ.ವಿ. ಬಿಟ್ಟು ಬರಲ್ಲ. ನಿಮ್ಮ ಸುಖಕ್ಕೆ ಏನೂ ಕಡಿಮೆ ಆಗ್ಬಾರ್ದು. ನಾನು ಕೆಲ್ಸಕ್ಕೂ ಹೋಗಿ ಮನೇಲೂ ಮೊದಲಿನ ಥರ  ಕೆಲಸ ಮಾಡ್ಬೇಕು ಅಂದ್ರೆ ಎಲ್ಲಾಗುತ್ತೆ? ನನಗೆ ಕೆಲಸ ಮಾಡೋದನ್ನು ಬಿಡೋಕ್ಕಾಗಲ್ಲ. ಈ ವರ್ಷ ಆದ್ಮೇಲೆ ಪರ್ಮನೆಂಟ್‌ ಮಾಡ್ತಾರೆ. ಏನೋ ನನ್ನ ಆಸೇನೂ ಈಡೇರುತ್ತೆ. ಮನಸ್ಸು ಮೆದುಳು ತುಕ್ಕು ಹಿಡೀದೇ ಆಕ್ಟಿವ್‌ ಆಗಿ ಇರುತ್ತೆ. ಮಗಳು ಹೇಗೋ ದೊಡ್ಡೋಳಾದ್ಲು. ಮುಂದಿನ ವರ್ಷದಿಂದ ಅವ್ಳಿಗೂ ಫುಲ್‌ ಸ್ಕೂಲ್‌ ಆಗುತ್ತೆ ಬಿಡಿ. ನೀವು ಸ್ವಲ್ಪ ಬದಲಾಗಿ ಎಲ್ಲ ಸರಿಹೋಗುತ್ತೆ. ಸ್ವಲ್ಪ ಮನೆಗೆಲಸದಲ್ಲಿ ಸಹಾಯ ಮಾಡಿ  ಅಂತ ತನ್ನ ಮನಸ್ಸಿನ ಭಾವನೆ ಹೊರಹಾಕಿಬಿಟ್ಳು ದೀಪಾ. ಮನೆಕೆಲ್ಸ ಗಂಡಸರು ಮಾಡ್ಬೇಕಾ? ನೀನು ಯಾವ ಪುರುಷಾರ್ಥಕ್ಕೆ ಕೆಲ್ಸಕ್ಕೆ ಹೋಗ್ಬೇಕು? ಬಿಟ್ಬಿಡು. ಪಾಠ ಹೇಳೋದು ತಾನೇ? ಮನೇಲಿ ನಾಲ್ಕು ಮಕ್ಕಳಿಗೆ ಪಾಠ ಹೇಳ್ಕೊಡು. ನಮ್ಮ ಮಗಳನ್ನು ಚೆನ್ನಾಗಿ ನೋಡ್ಕೋ. ಮನೆಯಿಂದಾನೇ ಏನಾದ್ರೂ ಕೆಲಸ ಮಾಡು. ಅಷ್ಟಕ್ಕೂ ದೇವರು ನಮಗೆ ಏನು ಕಡಿಮೆ ಮಾಡಿದ್ದಾನೆ? ನೀನು ಕೆಲ್ಸಕ್ಕೆ ಹೋಗಿ ದುಡಿದು ತಂದು ಹಾಕೋ ಅಗತ್ಯ ಖಂಡಿತ ಇಲ್ಲ. ನಾಳೆಯಿಂದ ಕೆಲ್ಸಕ್ಕೆ ಹೋಗ್ಬೇಡ. 

ಅಯ್ಯೋ! ನೀವು ಮಾತ್ರ ಹೊರಗಡೆ ದುಡೀಬೇಕು; ಸಂಪಾದನೆ ಮಾಡ್ಬೇಕು; ಮನೇಗೆ ಬಂದ ತಕ್ಷಣ ನಾನು ಸೇವಕಿ ಹಾಗೆ ನಿಮ್ಮ ಸೇವೆ ಮಾಡ್ಬೇಕು ಅಲ್ವೇನ್ರೀ? ನನಗೂ ನನ್ನದೇ ಆದ ಆಸೆ ಆಕಾಂಕ್ಷೆಗಳು ಇರುತ್ತೆ ಅಲ್ವಾ? ಯಾವ್ದೋ ಬೇರೆ ಊರಿಗೆ ಹೋಗಿ ನಾನು ಕೆಲಸ ಮಾಡ್ತಾ ಇದ್ದೀನಾ? ಇಲ್ಲೇ ಇದ್ದೀನಿ ತಾನೇ? ಮನೆ ಹತ್ರನೇ ಎಷ್ಟು ಜನಕ್ಕೆ ಈ ಥರ ಒಂದು ಒಳ್ಳೆ ಕೆಲಸ ಸಿಗುತ್ತೆ? ಯೋಚನೆ ಮಾಡಿ. ನಾನೂ ನನ್ನ ವೃತ್ತೀಲಿ ಸ್ವಲ್ಪ ಹೆಸರು ಮಾಡೋ ತನಕ ಕಷ್ಟ ಪಡಬೇಕಲ್ವಾ? ನಾನೇನು ಪುಟ್ಟಿಗೆ ಹೇಳಿಕೊಡೋದ್ರಲ್ಲಿ ಏನಾದ್ರೂ ವಂಚನೆ ಮಾಡಿದ್ದೀನಾ? ಹೋಗ್ಲಿ ಒಂದು ದಿನಾನಾದ್ರೂ ನೀವು ಅವಳ ಪುಸ್ತಕ ತೆಗೆದು ನೋಡಿದ್ದೀರಾ? ಅದೆಲ್ಲ ನಾನೇ ನೋಡ್ಕೋತಾ ಇದ್ದೀನಿ ಅಲ್ವಾ? ಏನೋ ನನಗೆ ಕಾಲೇಜಿನ ಒತ್ತಡ ತುಂಬಾ ಇದ್ದಾಗ ನಿಮಗೆ ಒಂದೆರೆಡು ಕೆಲಸ ಹೇಳ್ತೀನಿ ಅಷ್ಟೇ. ಅದೂ ಅಲ್ದೆ ನನಗೆ ಏನೋ ಕೊಂಡ್ಕೋಬೇಕು, ತಕ್ಷಣ ದುಡ್ಡು ಬೇಕು ಅಂದ್ರೆ ನಿಮ್ಮನ್ನ ಕೇಳ್ಬೇಕು; ಆಗ ನನಗೂ ಒಂಥರಾ ಹಿಂಸೆ ಅನ್ಸುತ್ತೆ. ಪ್ರತಿಯೊಂದಕ್ಕೂ ನಿಮ್ಮ ಮೇಲೆ ಡಿಪೆಂಡ್‌ ಆಗ್ಬೇಕು ಅಂತ; ಬರೀ ದುಡ್ಡು ಅಂತಲ್ಲ; ನನಗೆ ನನ್ನ ಕಾಲು ಮೇಲೆ ನಿಲ್ಲಬೇಕು ಅಂತಾನೂ ಮನಸ್ಸಿದೆ ರೀ, ಸ್ವಲ್ಪ ಅರ್ಥ ಮಾಡ್ಕೊಳ್ಳಿ ಅಂತ ಎದುರುತ್ತರ ಕೊಟ್ಟು ಅಲ್ಲಿ ಕ್ಷಣಕಾಲವೂ ನಿಲ್ಲದೇ, ಪುಟ್ಟಿಯನ್ನು ಮಲಗಿಸಲು ಹೋಗೇಬಿಟ್ಳು ದೀಪಾ. 

ಪ್ರಜ್ವಲ್‌ಗೆ ಸಿಟ್ಟು ತಡೆಯಲಾಗಲಿಲ್ಲ; ಆದರೂ ಅವನು ಬೆಳೆದುಬಂದ ಸಂಸ್ಕಾರ ಅವನಿಗೆ ತನ್ನ ಸಿಟ್ಟನ್ನು ನಾಲಿಗೆಗೋ ಅಥವಾ ಕೈಗೋ ಕೊಡುವುದಕ್ಕೆ ಬಿಡಲಿಲ್ಲ; ಆದರೆ, ದೀಪಾಳನ್ನು ಮಾತನಾಡಿಸಲು ಅವನಿಗೆ ಮನಸ್ಸಾಗಲಿಲ್ಲ; ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತೇ ಸುಳ್ಳಾಯಿತು; ದೀಪಾಳಿಗೂ ತಾನೇ ಮಾತನಾಡಿಸಲು ಸ್ವಾಭಿಮಾನ ; ಬದುಕು ತೀರಾ ಯಾಂತ್ರಿಕವಾಗಿಬಿಟ್ಟಿತು; ಪ್ರಜ್ವಲ್‌ ತಾನಾಯಿತು; ತನ್ನ ಕೆಲಸವಾಯಿತು ಎಂಬಂತೆ ಇದ್ದುಬಿಟ್ಟ; ಪ್ರಜ್ವಲ್‌ ಊಟದ ಡಬ್ಬಿಗೆ ಫುಲ್‌ ಮೀಲ್ಸ್‌ ಅಂತ ತಮಾಶೆ ಮಾಡುತ್ತಿದ್ದ ಗೆಳೆಯರು ಈಗ ಎಲ್ಲೋ ಪ್ರಜ್ವಲ್‌ ನಿನ್ನ ಡಬ್ಬಿ? ಎಂದು ಪ್ರಶ್ನೆ ಕೇಳಿದ್ರೆ, ಪ್ರಜ್ವಲ್‌ನ ಮೌನವೇ ಉತ್ತರವಾಗಿರುತ್ತಿತ್ತು; ಕ್ಯಾಂಟೀನ್‌ ಊಟ ಮಾಡೋದು, ಹೊತ್ತಲ್ಲದ ಹೊತ್ತಲ್ಲಿ ತಿನ್ನೋದು ಮಾಮೂಲಿಯಾಯ್ತು; ಆರೋಗ್ಯ ನಿಧಾನವಾಗಿ ಕೈ ಕೊಡತೊಡಗಿತು. ದೀಪಾಳಿಗೂ ಪ್ರಜ್ವಲ್‌ನನ್ನು ನೋಡಿ ಬೇಸರವಾಗತೊಡಗಿತು; ಎಷ್ಟು ಕೆಲಸಕ್ಕೆ ಅಂತ ಜನ ಇಟ್ಕೊಳ್ಳೋದು? ಮನೆ ಕಸ ಗುಡಿಸಿ, ಒರೆಸಿ, ಗಿಡಕ್ಕೆ, ಬಾಗಿಲಿಗೆ ನೀರು ಹಾಕಲು ಒಬ್ಬಳು ಬರುತ್ತಿದ್ದಳು.ಇರೋ ಮೂರು ಜನಕ್ಕೆ ಇನ್ನೆಷ್ಟು ಕೆಲಸ ಇರುತ್ತೆ?ಒತ್ತಡವಿದ್ದಾಗ ಸಣ್ಣ ಕೆಲಸವೂ ದೊಡ್ಡ ಕೆಲಸವೇ! ಇತ್ತ ಕೆಲಸವನ್ನೂ ಬಿಡಲಾರಳು; ಅತ್ತ ಪ್ರಜ್ವಲ್‌ಗೂ ಬಾಗಲಾರಳು; ಕೆಲಸ-ಸಂಸಾರ ಹೇಗಪ್ಪಾ ಎರಡನ್ನೂ ಬ್ಯಾಲೆನ್ಸ್‌ ಮಾಡೋದು? ಅಂತ ಅವಳಿಗೂ ತಲೆ ಸಿಡಿಯತೊಡಗಿತು. ಆದರೂ  ಮಗಳಿಗೋಸ್ಕರ ಅಡುಗೆ ಮಾಡುತ್ತಿದ್ದಳೇ ಹೊರತು ಅವಳಿಗೂ ಊಟ-ತಿಂಡಿ ಬೇಡವಾಯಿತು. ತನ್ನದೇ ತಪ್ಪಾ? ತಾನು ಸ್ವತಂತ್ರವಾಗಿರಬೇಕೆಂಬ ಯೋಚನೆಯೇ ಸರಿಯಿಲ್ಲವೇ ಎಂದು ಮನಸ್ಸು ಹೊಯ್ದಾಡುತ್ತಿತ್ತು. ದಂಪತಿಗಳ ಸಂಸಾರದಲ್ಲಿ ಸ್ವಾರಸ್ಯವೇ ಹೊರಟುಹೋಯಿತು.

ಇತ್ತ ಚಂದ್ರಿಕಾ ಸಂಬಂಧಿಕರ ಕಡೆಯ ಮದುವೆಗೆ ಬೆಂಗಳೂರಿಗೆ ಬರಬೇಕಾಯ್ತು. ಮಗ, ಸೊಸೆ ಮತ್ತು ಮೊಮ್ಮಗಳನ್ನು ನೋಡುತ್ತಾ ಮಗನ ಜೊತೆ ಎರಡು ದಿನ ಇರಬೇಕು ಅಂತ ನಿರ್ಧರಿಸಿ,  ಗಂಡನ ಹತ್ತಿರ ಹೇಳಿ ಬೆಂಗಳೂರಿನ ಬಸ್‌ ಹತ್ತೇ ಬಿಟ್ಳು ಚಂದ್ರಿಕಾ! ಮನೆಗೆ ಬರ್ತೀನಿ ಅಂತ ಪ್ರಜ್ವಲ್‌ಗೆ ಫೋನ್‌ ಮಾಡಿದಳು; ಓಹ್‌ ಅಮ್ಮಾ ಬರ್ತಿದ್ಯಾ? ಸರಿ, ನಾನೇ ಬಂದು ಕರ್ಕೊಂಡು ಹೋಗ್ತೀನಿ ಅಂತ ಅಮ್ಮನಿಗೆ ಹೇಳಿ, ಫೋನ್‌ ಕಟ್‌ ಮಾಡಿದ ಪ್ರಜ್ವಲ್.‌ ಸಂಜೆ ಇಬ್ಬರೂ ಮನೆಗೆ ಬಂದ್ರೂ ಇನ್ನೂ ದೀಪಾ ಬಂದಿರಲಿಲ್ಲ; 6 ಗಂಟೆ ಆಯ್ತು; ಇನ್ನೂ ದೀಪಾ ಬಂದಿಲ್ವಾ? ಯಾಕೆ ಪ್ರಜ್ವಲ್‌ ಅಂದ್ರೆ; ಅಮ್ಮಾ ಅವಳಿಗೆ ಕೆಲಸ ಇದೆಯಂತೆ ಬರೋದು ಲೇಟ್‌ ಆಗುತ್ತೆ ಅಂತ ಹೇಳ್ತಾ, ಅಮ್ಮಾ ಒಂದು ಲೋಟ ಕಾಫಿ ಮಾಡ್ಕೊಡಮ್ಮಾ ಅಂತ ಹೇಳಿ, ಮುಖ ತೊಳೆಯಲು ಹೊರಟ. 7 ಗಂಟೆಗೆ ಮಗಳನ್ನು ಪ್ಲೇ ಹೋಂ ನಿಂದ ಕರ್ಕೊಂಡು ಬಂದ ದೀಪಾಳಿಗೆ ಅತ್ತೆಯನ್ನು ನೋಡಿ ಖುಷಿ, ಆಶ್ಚರ್ಯ ಒಟ್ಟಿಗೇ ಆಯ್ತು. ಅತ್ತೇ ಎಷ್ಟು ಹೊತ್ತಿಗೆ ಬಂದ್ರಿ? ಕಾಫಿ ಕುಡಿದ್ರಾ? ಒಂದರ್ಧ ಗಂಟೆ ಅಡುಗೆ ಈಗ ಮಾಡಿಬಿಡ್ತೀನಿ ಅಂತ ಅಂದಳೇ ಹೊರತು ಗಂಡನನ್ನು ವಿಚಾರಿಸಲಿಲ್ಲ; ಪುಟ್ಟಿ ತನ್ನ ಅಜ್ಜಿಯ ತೊಡೆ ಏರಿ, ಅಜ್ಜೀ ನೀನು ನಮ್ಮ ಜೊತೆಗೇ ಇರು ಅಂತ ಮುದ್ದುಮುದ್ದಾಗಿ ಮಾತಾಡಲು ಶುರುಮಾಡಿದಳು. ಚಂದ್ರಿಕಾಳಿಗೆ ಸ್ವಲ್ಪ ಇರುಸುಮುರುಸಾಯ್ತು; ಇದೇನು? ಮಗನೊಂದಿಗೆ ಒಂದೂ ಮಾತಾಡಲಿಲ್ಲವಲ್ಲ ಸೊಸೆ? ಏನಾಯ್ತಪ್ಪ ಇವರಿಬ್ಬರಿಗೆ? ಏನೋ ಸುಸ್ತಾಗಿದ್ಲು ಅನ್ಸುತ್ತೆ; ಒಂದೆರೆಡು ದಿನ ನೋಡೋಣ; ನಾಳೆ ಬೆಳಿಗ್ಗೆಗೆ ಸರಿ ಹೋಗಬಹುದು; ಅಂತ ಅನ್ಕೊಳ್ತಾ ಲೋಕಾಭಿರಾಮ ಮಾತಾಡ್ಕೊಂಡು ಸೊಸೆಗೆ ಅಡುಗೆ ಕೆಲಸಕ್ಕೆ ಸಹಾಯ ಮಾಡಲು ಒಳಗೆ ಹೋದಳು.

ಊಟ ಮಾಡುವಾಗಲೂ ಮಾತಿಲ್ಲ; ಕತೆಯಿಲ್ಲ. ಮಗನ ಪಾಡಿಗೆ ಮಗ, ಸೊಸೆಯ ಪಾಡಿಗೆ ಸೊಸೆ. ಬೆಳಿಗ್ಗೆ ಮದುವೆಗೆ ಬೇರೆ ಹೋಗ್ಬೇಕು; ಅಂತ ಯೋಚನೆ ಮಾಡ್ತಿದ್ದ ಹಾಗೇ, ಪ್ರಜ್ವಲ್‌, ಅಮ್ಮ, ನಾಳೆ ನಾನು ಆಫೀಸಿಗೆ ಹೋಗ್ತಾ ನಿನ್ನನ್ನು ಮದುವೆ ಮನೆಗೆ ಬಿಟ್ಟು ಹೋಗ್ತೀನಿ; ಬರ್ತಾ ನಿನ್ನ ಸೊಸೆ ಕರ್ಕೊಂಡು ಬರ್ತಾಳಾ ಕೇಳು; ನಂಗೆ ಮಧ್ಯಾಹ್ನ ವಾಪಸ್‌ ಬರೋಕ್ಕೆ ಆಗಲ್ಲ ಅಂದ. ತಕ್ಷಣ ದೀಪಾ ನಾನೇ ಕರ್ಕೊಂಡು ಬರ್ತೀನತ್ತೆ ಅಂತ ಹೇಳಿ ಮಲಗೇ ಬಿಟ್ಳು. ಚಂದ್ರಿಕಾಳಿಗೆ ಯಾಕೋ ಎಲ್ಲ ಸರಿಯಿಲ್ಲ ಅಂತ ಬಲವಾಗಿ ಅನ್ನಿಸಿತು. ಇರಲಿ ಇವತ್ತೊಂದು ದಿನ ಕಳೀಲಿ, ನೋಡೋಣ; ಅಂತ ತಾನೂ ನಿದ್ದೆಗೆ ಜಾರಿದಳು.

ಮಾರನೇ ದಿನ, ಮದುವೇನೂ ಮುಗೀತು; ಸೊಸೆ ಮಧ್ಯಾಹ್ನ ಮನೆಗೆ ಕರೆದುಕೊಂಡೂ ಬಂದ್ಲು. ಚಂದ್ರಿಕಾ ನಿಧಾನವಾಗಿ ದೀಪಾ ಹತ್ರ ಯಾಕಮ್ಮಾ? ಇಬ್ರೂ ಜಗಳ ಮಾಡ್ಕೊಂಡಿದ್ದೀರಾ? ಏನಾಯ್ತು? ಯಾವಾಗಲೂ ಎಷ್ಟು ಖುಷಿಯಿಂದ ಇರ್ತಿದ್ರಿ; ಈಗ ಏನಾಯ್ತು? ಪ್ರಜ್ವಲ್‌ ಏನಾದ್ರೂ ತಪ್ಪು ಮಾಡಿದ್ನಾ? ಅವನು ಆ ಥರದ ಹುಡುಗ ಅಲ್ವಲ್ಲ ದೀಪಾ? ಅಂದಾಗ ದೀಪಾಳಿಗೂ ದುಃಖದ ಕಟ್ಟೆ ಒಡೆಯಿತು. ಅತ್ತೇ, ಪ್ರಜ್ವಲ್‌ಗೆ ನಾನು ಕೆಲಸಕ್ಕೆ ಹೋಗೋದು ಇಷ್ಟ ಇಲ್ವಂತೆ; ಅವ್ರಿಗೆ ನಾನು ಮನೇಲೇ ಇರ್ಬೇಕಂತೆ. ಈಗ ನಂಗೆ ಕಾಲೇಜಲ್ಲಿ ಒಳ್ಳೆ ಹೆಸರಿದೆ ಅತ್ತೇ, ಇನ್ನೊಂದು ವರ್ಷ ಪರ್ಮನೆಂಟ್‌ ಮಾಡ್ತಾರೆ; ನಂಗೆ ಮನೆ ಕೆಲಸ, ಕಾಲೇಜ್‌ ಕೆಲಸ, ಪುಟ್ಟಿಯನ್ನು ನೋಡ್ಕೊಳ್ಳೋದು ಎಲ್ಲಾ ಮಾಡೋಷ್ಟರಲ್ಲಿ ತುಂಬಾ ಸುಸ್ತಾಗುತ್ತೆ; ಆದರೆ, ಕೆಲಸ ಬಿಡೋಕೂ ಮನಸ್ಸಾಗ್ತಿಲ್ಲ. ನಂಗೆ ಒಂಚೂರು ಹೆಲ್ಪ್‌ ಮಾಡೋಲ್ಲ ಅವರು. ಬೆಳಿಗ್ಗೆ ನಾನು 7.30 ಕ್ಕೆ ಹೊರಡಬೇಕಾಗುತ್ತೆ; ಇನ್ನೂ ಎದ್ದಿರಲ್ಲ ಇವರು. ದೋಸೆ ಹಿಟ್ಟಿದೆ, ದೋಸೆ ಮಾಡ್ಕೊಳ್ಳಿ ಅಂದ್ರೆ, ಅದಕ್ಕೂ ಸಿಟ್ಟು ಮಾಡ್ಕೊತ್ತಾರೆ; ಅಡುಗೆ ಮನೆ ಕಡೆ ತಲೇನೂ ಹಾಕಲ್ಲ. ಕುಡಿದ ಲೋಟ ಸಹ ಒಳಗಡೆ ತಂದಿಡಲ್ಲ; ಪುಟ್ಟಿ ಹೋಮ್‌ವರ್ಕ್‌ ಸಹ ನಾನೇ ಮಾಡ್ಸೋದು. ಒಂಚೂರು ಬಟ್ಟೆ ಒಣಗಿಸೋಣ; ಪಾತ್ರೆ ತೆಗೆದಿಡೋಣ ಅಂತ ಅವರಿಗೆ ಅನ್ಸೋದೇ ಇಲ್ಲ ಅತ್ತೇ. ಅವರಿಗೆ ಮನೆಕೆಲಸ ಅಂದ್ರೆ ಅದು ಹೆಂಗಸರ ಜವಾಬ್ದಾರಿ ಅಂತ. ಈ ವಿಷಯದಲ್ಲಿ ನನ್ನನ್ನು ಸ್ವಲ್ಪಾನೂ ಅರ್ಥನೇ ಮಾಡಿಕೊಂಡಿಲ್ಲ; ನಂಗೆ ಅಡುಗೆ ಕೆಲಸಕ್ಕೆ ಜನರನ್ನು ಇಟ್ಕೊಳ್ಳೋಕೆ ಇಷ್ಟ ಇಲ್ಲ. ಊಟ ತಿಂಡಿಗೆ ನಾನೇನು ಕಡಿಮೆ ಮಾಡಿಲ್ಲ. ಹೊರಗಡೆಯಿಂದ ಏನೂ ತರ್ಸಲ್ಲ, ಇವರಿಗೆ ಏನು ಇಷ್ಟಾನೋ ಅದನ್ನೇ ಮಾಡ್ತೀನಿ. ಆದ್ರೂ ಸಿಡಸಿಡ. ನಾನೂ ನೋಡೋಷ್ಟು ನೋಡಿ, ಒಂದಿನ ಜೋರಾಗಿ ಹೇಳಿದೆ. ನೀವೂ ಸ್ವಲ್ಪ ನನಗೆ ಸಹಾಯ ಮಾಡಿ; ನನ್ನ ಸ್ನೇಹಿತೆಯರ ಗಂಡಂದಿರು ಅವರಿಗೆ ಎಷ್ಟು ಹೆಲ್ಪ್‌ ಮಾಡ್ತಾರೆ, ಹೆಣ್ಣುಮಕ್ಕಳು ಹೊರಗಡೆ ಕೆಲಸಕ್ಕೆ ಹೋಗ್ತಾರೆ ಅಂದ್ರೆ ಸಹಾಯ ಮಾಡ್ಬೇಕು ಅಂತ; ಅವರಿಗೆ ಸಿಟ್ಟು ಬಂದುಮಾತಾಡೋದೇ ಬಿಟ್ಬಿಟ್ರು. ನಾನೂ ಮಾತಾಡ್ತಾ ಇಲ್ಲ. ಅತ್ತೇ ನೀವೇ ಹೇಳಿ. ಹೆಣ್ಣುಮಕ್ಕಳು ಅಂದ್ರೆ, ಬರೀ ಮನೆಕೆಲಸ ಮಾಡ್ಕೊಂಡೇ ಇರ್ಬೇಕಾ? ನಾವೂ ಹೊರಗಡೆ ಹೋಗಿ ಕೆಲ್ಸ ಮಾಡೋಷ್ಟು ಸ್ವಾತಂತ್ರ್ಯ ಬೇಡ್ವಾ? ನಮಗೂ ನಮ್ಮ ಕೆರಿಯರ್‌ ಮುಖ್ಯ ಅಲ್ವಾ? ನಾನು ಇನ್ನೇನು ಕೇಳ್ಲಿಲ್ಲ ಅತ್ತೇ, ನನಗೆ ಒಂಚೂರು ಸಹಾಯ ಮಾಡಿ ಅಂದೆ ಅಷ್ಟೇ. ತಪ್ಪಾ ಅತ್ತೇ, ಹೇಳಿ. ನಿಮಗೂ ನನ್ನ ಥರಾನೇ ಒಬ್ಳು ಮಗಳಿದ್ದು, ಅಳಿಯ ಕೆಲಸಕ್ಕೆ ಕಳಿಸ್ಲಿಲ್ಲ ಅಂದ್ರೆ ನಿಮಗೆ ಹೇಗೆ ಅನ್ನಿಸ್ತಾ ಇತ್ತು? ಹೇಳಿ. ಅಂತ ಜೋರಾಗಿ ಅಳಲು ಶುರು ಮಾಡಿದಳು ದೀಪಾ.

ಚಂದ್ರಿಕಾಳಿಗೆ ಹೇಗೆ ಸಮಾಧಾನ ಹೇಳಬೇಕೋ ತಿಳಿಯಲಿಲ್ಲ; ಸೊಸೆಯ ತಲೆ ನೇವರಿಸುತ್ತಾ ಕುಳಿತುಬಿಟ್ಟಳು. ಪ್ರಜ್ವಲ್‌ ಚೆನ್ನಾಗಿ ಓದುತ್ತಿದ್ದಾನೆ ಅಂತ, ತಾನೇ ಅವನಿಗೆ ಯಾವುದೇ ಮನೆಕೆಲಸಗಳನ್ನು ಹೇಳುತ್ತಿರಲಿಲ್ಲ. ಆಗ ವಯಸ್ಸೂ ಇತ್ತು. ಮಾಡುವ ಶಕ್ತಿಯೂ ಇತ್ತು. ಮಾಡುತ್ತಿದ್ದೆ. ಹಾಸ್ಟೆಲ್‌ನಿಂದ ಪ್ರಜ್ವಲ್ ಮನೆಗೆ ಬಂದಾಗ, ಮಗ ಬಂದಿದ್ದಾನೆ ಎಂಬ ಮುಚ್ಚಟೆಯಿಂದ ಒಳ್ಳೊಳ್ಳೆ ಅಡುಗೆಯನ್ನು ಮಾಡಿ ಹಾಕ್ತಿದ್ದೆ; ಅವನಿಗೆ ಇಷ್ಟವಾದ ಕುರುಕಲು ತಿಂಡಿಗಳನ್ನು ಮಾಡ್ತಿದ್ದೆ;  ಒದ್ದಾಟವಾದರೂ ಮಗನಿಗೆ ಒಂದೂ ಕೆಲಸ ಹೇಳದೇ ಎಲ್ಲವನ್ನೂ ನಾನೇ ಮಾಡ್ತಿದ್ದೆ.  ಒಂದು ದಿನವೂ ಮಗನಿಗೆ ಬಟ್ಟೆ ಒಗೆದುಕೋ, ನಿನ್ನ ರೂಮ್‌ ಕ್ಲೀನ್‌ ಮಾಡಿಕೋ; ದೋಸೆ ಹಿಟ್ಟಿದೆ, ನೀನೇ ಮಾಡಿಕೋ; ಬಂದು ಸ್ವಲ್ಪ ಚಪಾತಿ ಬೇಯಿಸು; ಅನ್ನಕ್ಕಿಡು ಇಂತಹ ಕೆಲಸಗಳನ್ನು ಎಂದಿಗೂ ಹೇಳಲೇ ಇಲ್ಲ;‌ ಆದರೆ, ಎರಡನೆಯವನು ಹಾಗಲ್ಲ; ಓದಿನ ಜೊತೆಜೊತೆಗೇ ನನ್ನ ಹಿಂದೆ ಮುಂದೆ ತಿರುಗಾಡುತ್ತಾ ಅಡುಗೆಮನೆಯ ರೀತಿನೀತಿಗಳನ್ನು ತಿಳಿದಿದ್ದ. ಚಂದ್ರಿಕಾಳಿಗೆ ತಾನು ಮಾಡಿದ್ದ ತಪ್ಪಿನ ಅರಿವಾಯಿತು; ಇದನ್ನು ತಾನೇ ಸರಿಪಡಿಸಬೇಕು ಎಂದುಕೊಳ್ಳುತ್ತಾ, ಸೊಸೆಗೆ ಅಳಬೇಡ ತಾಯೀ, ಹೆಣ್ಣುಮಕ್ಕಳ ಕಣ್ಣೀರು ಮನೆಗೆ ಶ್ರೇಯಸ್ಸಲ್ಲ; ಎಂದು ಹೇಳಿ ಸಮಾಧಾನ ಪಡಿಸಿ, ಮಗನ ದಾರಿಯನ್ನು ಕಾಯುತ್ತಾ ಕುಳಿತಳು.

ಮಗ ಮನೆಗೆ ಬರುತ್ತಲೇ, ತಾನೇ ಊಟ ಹಾಕಿದಳು. ಅವನು ಸಮಾಧಾನದಲ್ಲಿರುವುದನ್ನು ಖಚಿತಪಡಿಸಿಕೊಂಡು, ನಿಧಾನವಾಗಿ ಮಾತಿಗೆ ಶುರುಮಾಡಿದಳು ಚಂದ್ರಿಕಾ. ಪ್ರಜ್ವಲ್‌, ಯಾಕೆ ನೀನು ದೀಪಾ ಮಾತಾಡ್ತಾ ಇಲ್ಲ? ಏನಾಯ್ತು? ಅವಳು ಏನಾದ್ರೂ ಮಾಡಿದ್ಲಾ? ನೀವಿಬ್ರೂ ಹೀಗಿದ್ರೆ, ಮಗು ಗತಿ ಏನು? ಯಾಕಪ್ಪಾ? ಪ್ರಜ್ವಲ್‌, ನೀನು ಹೀಗೆ ಬದಲಾಗಿದ್ದೀಯ? ಅಂತ ಕೇಳ್ತಾ ಇದ್ಹಾಗೆ, ಪ್ರಜ್ವಲ್‌ಗೂ ಬೇಜಾರಾಗಿ, ಏನಿಲ್ಲ ಅಮ್ಮ, ಕೆಲಸಕ್ಕೆ ಹೋಗ್ಬೇಡ ಅಂದ್ರೂ ಕೇಳಲ್ಲ; ಅವಳದ್ದೇ ಅವಳಿಗೆ. ನಾನು ಮನೆಕೆಲಸದಲ್ಲಿ ಸಹಾಯ ಮಾಡ್ಬೇಕಂತೆ. ನಂಗೇನಮ್ಮ ಗ್ರಾಚಾರ? ನಂಗೂ ಸುಸ್ತಾಗಿರಲ್ವ? ಇವಳು ಮನೇಲಿದ್ರೆ, ಆರಾಮಾಗಿ ಅಡುಗೆ ತಿಂಡಿ ಮಾಡ್ಕೊಂಡು, ಮನೆಕೆಲಸ ಮಾಡ್ಕೊಂಡು ಇರ್ಬಹುದಲ್ವಾ? ಹಠವನ್ನಂತೂ ಬಿಡಲ್ಲ ಅವಳು. ಕೆಲಸಕ್ಕೆ ಹೋಗಿ ಏನು ಸಾಧಿಸಬೇಕಾಗಿದೆ ಅವ್ಳು? ನಂಗಂತೂ ನೆಮ್ಮದೀನೇ ಇಲ್ಲ ಅಮ್ಮ.  ಬೇಜಾರಾಗಿ ಮಾತು ಬಿಟ್ಬಿಟ್ಟೆ  ಅಂದ. 

ಅಲ್ವೋ ಪ್ರಜ್ವಲ್, ಈಗ ಯಾರಾದ್ರೂ ನಿಂಗೆ ಕೆಲಸ ಬಿಡು ಅಂದ್ರೆ ಬಿಟ್ಬಿಡ್ತೀಯಾ? ನಿಂಗೆ ಕೆರಿಯರ್‌ ಮುಖ್ಯ ಅಲ್ವಾ? ದೀಪಂಗೂ ಆಸೆ ಆಕಾಂಕ್ಷೆ ಇರುತ್ತೆ. ಅರ್ಥ ಮಾಡ್ಕೋ. ಅವಳೂ ಗೋಲ್ಡ್‌ ಮೆಡಲಿಸ್ಟ್.‌ ಸಮಾಜಕ್ಕೂ ಅವಳ ಕೊಡುಗೆ ಬೇಕಲ್ವಾ? ನೀನು ಚೂರು ಬದಲಾಗಬೇಕು ಪ್ರಜ್ವಲ್.‌ ನಮ್ಮ ಮನೆ ಕೆಲಸ ನಾವು ಮಾಡೋದು ಅವಮಾನ ಅಲ್ಲಪ್ಪ! ಅಂತ ಚಂದ್ರಿಕಾ ಹೇಳ್ತಾ ಇದ್ದ ಹಾಗೇ, ಪ್ರಜ್ವಲ್‌, ಅಯ್ಯೋ ಹೋಗಮ್ಮ ಮನೆ ಕೆಲಸ ಯಾರು ಮಾಡ್ತಾರೆ?  ಅಷ್ಟು ಕೆಲಸ ಇದ್ರೂ ನೀನು, ನಂಗೆ ಒಂದಾದ್ರೂ ಕೆಲಸ ಹೇಳ್ತಿದ್ಯಾ ಅಮ್ಮ? ಎಲ್ಲ ನೀನೇ ಮಾಡ್ತಿರಲಿಲ್ವಾ? ಇವಳೂ ಮಾಡಲಿ ಬಿಡು. ನನ್ನ ಕೈಲಿ ಇದೆಲ್ಲಾ ಆಗಲ್ಲ ಅಮ್ಮ. ಅಪ್ಪ ಏನಾದ್ರೂ ನಿಂಗೆ ಸಹಾಯ ಮಾಡ್ತಿದ್ರಾ? ಹೇಳು. ಅಂದ. ಆಗ ಚಂದ್ರಿಕಾ, ನೀನು ಹಾಸ್ಟೆಲ್‌ನಲ್ಲಿ ಇದ್ದಿದ್ರಿಂದ ನಿನಗೆ ಮನೆ ವಿಚಾರಗಳು ಅಷ್ಟು ಗೊತ್ತಾಗ್ತಾ ಇರ್ಲಿಲ್ಲ ಕಣೋ. ನಿನ್ನ ತಮ್ಮನಿಗೆ ಒಂದು ಸಲ ಹುಷಾರಿಲ್ಲದೇ, ನನ್ನ ಕೈ ಬಿಟ್ಟೇ ಇರ್ಲಿಲ್ಲ; ಆಗ ನಿಮ್ಮ ಅಪ್ಪನೇ ಕಣಪ್ಪ, ಅಡುಗೆ ಮಾಡಿ, ಊಟ ಹಾಕಿದ್ದು, ಸ್ಕೂಲಿಗೆ ರಜಾ ಹಾಕಿ ಮನೆ ನೋಡ್ಕೊಂಡಿದ್ದು. ಈಗ್ಲೂ ನನಗೆ ಹುಷಾರಿಲ್ಲ ಅಂದ್ರೆ, ನಿಮ್ಮಪ್ಪ, ನಿನ್ನ ತಮ್ಮ ಸೇರಿ ಮನೆ ನೋಡ್ಕೋತ್ತಾರೆ ಗೊತ್ತಿದ್ಯಾ? ಈಗ ನಾನು ಧೈರ್ಯವಾಗಿ ಮನೆ ಬಿಟ್ಟು ಬಂದಿರೋದೂ, ಅವರು ಅಡುಗೆ ತಿಂಡಿ ಮಾಡ್ಕೊಳ್ತಾರೆ ಅಂತಾನೇ! ನೀನು ಓದೋದ್ರ ಕಡೇ ಹೆಚ್ಚು ಗಮನ ಕೊಟ್ಟೆ; ತಕ್ಷಣ ಕೆಲಸ, ತಕ್ಷಣ ಮದುವೆ, ಹಾಗಾಗಿ ಮನೆ ಕಡೆ ಹೆಚ್ಚು ಇರಲಿಲ್ಲ ನೀನು. ಈಗ ದೀಪಂಗೆ ಸಹಾಯ ಮಾಡೋದ್ರಲ್ಲಿ ಯಾವುದೇ ತಪ್ಪಿಲ್ಲ; ಅವಳಿಗೂ ಸ್ವಲ್ಪ ಆರಾಮ ಆಗುತ್ತೆ, ನಿಂಗೂ ಖುಷಿ ಸಿಗುತ್ತೆ. ಸಣ್ಣ ಸಣ್ಣ ಸಹಾಯ ಮಾಡೋದ್ರಲ್ಲಿ ಸಿಗೋ ಸುಖಾನ ವರ್ಣಿಸೋಕೆ ಪದಗಳಿರಲ್ಲ; ಹೆಣ್ಣುಮಕ್ಕಳ ಕೈಲಿ ಕಣ್ಣೀರು ಹಾಕ್ಸಿದ್ರೆ, ನಮಗೂ ಒಳ್ಳೇದಲ್ಲ; ಮನೇಲಿ ಅಮ್ಮಂಗೆ, ಹೆಂಡತೀಗೆ ಸಹಾಯ ಮಾಡೋದ್ರಿಂದ ನಿನ್ನ ಪ್ರತಿಷ್ಠೆ ಕಡಿಮೆ ಆಗಲ್ಲ; ಯೋಚನೆ ಮಾಡು. ನಾನು ನಾಳೆ ಹೊರಡ್ತೀನಿ. ನೀನು ಓದಿರೋನು. ಹೆಚ್ಚು ಹೇಳೋ ಸಾಮರ್ಥ್ಯ ನನಗೆ ಇಲ್ಲ ಕಣೋ. ನಿನ್ನ ಸಂಸಾರ ಸರಿ ಮಾಡ್ಕೊಳ್ಳೋ ಜವಾಬ್ದಾರಿ ನಿಂದು. ಗೊತ್ತಾಯ್ತಾ? ಅಂತ ಕಕ್ಕುಲಾತಿಯಿಂದ ಹೇಳುತ್ತಾ ಪ್ರಜ್ವಲ್‌ ತಲೆ ನೇವರಿಸಿ, ಮಲಗಲು ಹೊರಟಳು.

ಮಾರನೇ ದಿನ ಬೆಳಿಗ್ಗೆ, ದೀಪಾ ಕಾಫಿ ಮಾಡ್ತಿದ್ದ ಹಾಗೇ, ಕೊಡು ದೀಪಾ ನಾನೇ ಅಮ್ಮಂಗೆ ಕೊಡ್ತೀನಿ ಅಂತ, ಅಡುಗೆಮನೆಗೆ ಕಾಲಿಟ್ಟ ಪ್ರಜ್ವಲ್.‌ ಹೊಸದೊಂದು ಬದಲಾವಣೆಯನ್ನು ಗಂಡನ ಮುಖದಲ್ಲಿ ಕಂಡ ದೀಪಾಳಿಗೆ ಸಂತಸವಾಯ್ತು. ದೇವರಂತೆ ಈ ಸಮಯದಲ್ಲಿ ಮನೆಗೆ ಬಂದು, ಇಬ್ಬರೊಂದಿಗೂ ಮಾತನಾಡಿದ, ಅತ್ತೆಗೆ ಸಾವಿರಾರು ವಂದನೆಗಳನ್ನು ಮನದಲ್ಲೇ ಅರ್ಪಿಸಿ, ದೀಪಾ, ಮುಂದಿನ ಕೆಲಸಕ್ಕೆ ಅಣಿಯಾಗತೊಡಗಿದಳು. ಮಗ ಕಾಫಿ ತಂದದ್ದನ್ನು ನೋಡಿದ ಚಂದ್ರಿಕಾಳ ಮನ ಅರಳಿತು.


ಭಾನುವಾರ, ನವೆಂಬರ್ 21, 2021

ಅರಳಿ ಬಿಡು, ಬಾಡುವ ಮುನ್ನ

ದೀಪಾ.... ಏ...ದೀಪಾ... ತಿಂಡಿ ತಿಂದ್ಯಾ?  ಎಲ್ಲಿದ್ಯಾ? ಬಸ್‌ ಬರೋ ಹೊತ್ತಾಯ್ತು, ಸ್ಕೂಲಿಗೆ ಹೋಗಲ್ವಾ? ಏ ದೀಪಾ... ಅಂತ ನಂಜಿ ಮಗಳನ್ನು ಒಂದೇ ಸಮ ಕೂಗಲು ಶುರು ಮಾಡಿದಳು. ಇನ್ನು ಇವ್ಳು ಇವತ್ತೂ ಸ್ಕೂಲಿಗೆ ಹೋಗ್ಲಿಲ್ಲ ಅಂದ್ರೆ ಸ್ಕೂಲಿಂದ ಫೋನ್‌ ಬರೋದು ದಿಟವೇ. ಮೊನ್ನೆ ಅವ್ಳಿಗೆ ಹುಷಾರಿಲ್ಲ ಅಂತ, ನಿನ್ನೆ ನನಗೆ ಹುಷಾರಿಲ್ಲ ಅಂತ ದೀಪನ್ನ ಮನೇಲೇ ಉಳ್ಸಿಕೊಂಡಿದ್ದಾಯ್ತು. ಈ ವರ್ಷ ದೊಡ್ಡ ಪರೀಕ್ಷೆ ಬೇರೆ ಬರೀಬೇಕು; ಅದ್ಯಾವ್ದೋ ಕರೋನಾ ಅಂತ ರೋಗ ಬೇರೆ ಬಂದು ಅಮರಿಕೊಂಡಿದೆ. ಬೇಕೂ ಅಂದ ತಕ್ಷಣ ಎಲ್ಲಿಗೂ ಹೋಗೋಕಾಗಲ್ಲ; ಅದೂ ಅಲ್ದೆ ನಾವೇನು ಸಿಟಿ ಮಧ್ಯದಲ್ಲಾ ಇದ್ದೀವಿ? ಸುತ್ಲೂ ಕಾಡು, ಒಂದೈವತ್ತು ವರ್ಷದ ಹಿಂದೆ ನಮ್ಮ ಮಾವ ಇಲ್ಲಿಗೆ ಬಂದು, ಬೇಸಾಯ ಶುರು ಮಾಡಿ ಜೀವ್ನ ನಡ್ಸಿದ್ರು, ನನ್‌ ಗ್ರಾಚಾರಾನೋ, ಹಣೆಬರಹಾನೋ ಅಂತೂ  ಸೀನನ್ನ ಕಟ್ಕೊಂಡು ಈ ಕೊಂಪೆಗೆ ಬಂದು ಸೇರಿದ್ದಾಯ್ತು. ಏನೋ ಜಮೀನೈತೆ ಅಂತ ನಮ್ಮಪ್ಪ ಇವ್ನಿಗೆ ನನ್ನನ್ನ ಕಟ್ದ; ಇನ್ನೂ 9ನೇ ಕ್ಲಾಸ್‌ ಮುಗ್ಸಿ ಆಗ ತಾನೇ ದೊಡ್ಡೋಳಾಗಿದ್ದೆ ನಾನು.  ನಂಗೇ ಗೊತ್ತಿಲ್ದ ಹಾಗೆ ನಮ್ಮಪ್ಪ ಸೀನನ್ನ ನೋಡ್ಕೊಂಡು ಬಂದು ಮದ್ವೆ ಮಾಡ್ಲೇಬೇಕು ಅಂತ ನನ್ನನ್ನ ಒಪ್ಪಿಸಿದ್ದ. ನಾನು 10ನೇ ಕ್ಲಾಸ್‌ ಗಂಟ ಓದ್ತೀನಿ ಅಂದ್ರೂ ಕೇಳ್ಲಿಲ್ಲ. ಒಬ್ಬನೇ ಮಗ, ಇನ್ನಿಬ್ರು ಹೆಣ್‌ ಮಕ್ಳು, 5ಎಕರೆ ಸ್ವಂತ ಜಮೀನೈತೆ ಇನ್ನೇನ್‌ ಬೇಕು ಮದ್ವೆ ಮಾಡ್ಕೋ; ನಂ ಜವಾಬ್ದಾರಿ ಕಳ್ಯುತ್ತೆ ಅಂತ  ನನ್ನನ್ನ ಮನೆಯಿಂದ ದಾಟಿಸಿ ತನ್ನ ಕೈ ತೊಳ್ಕೊಂಡ ನಮ್ಮಪ್ಪ.

ಇರೋ 5 ಎಕರೆ ಜಮೀನಿನ ಸುಖ ನಮ್‌ ಗೇ ಪ್ರೀತಿ. ಕೈಲಾದಷ್ಟು ಕೆಲ್ಸ ಮಾಡಿ, ಇರೋ ಜಮೀನಲ್ಲಿ ಹುರುಳಿ, ಹತ್ತಿ, ರಾಗಿ ಬೆಳೀತಾ ಇದ್ದೀವಿ. ಕಾಲಕ್ಕೆ ತಕ್ಕಂತೆ ಮಳೆ ಆಗ್ಬೇಕು; ಜಮೀನಲ್ಲಿ ಮೈ ಬೆವರೋ ಹಾಗೆ ದುಡೀಬೇಕು; ನೆಟ್ಟಗೆ ಕೆಲ್ಸ ಮಾಡೋ ಆಳುಗಳು ಸಿಗ್ಬೇಕು; ಎಲ್ಲಾ ಸರಿಯಾಯ್ತು ಇನ್ನೇನು ಬೆಳೆ ಕಟಾವಿಗೆ ಬಂತು ಅಂದ್ರೆ  ಆನೆಗಳ ಕಾಟ ಅಥವಾ ವಿಪರೀತ ಮಳೆ. ಕೆಲವೊಂದ್ಸಲ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ; ಸಾಲ, ಸಾಲ... ಈ ವರ್ಷದ ಸಾಲ ತೀರ್ಸಿ ಉಸ್ಸಪ್ಪಾ ಅನ್ನೋವರ್ಗೆ ಮತ್ತೊಂದ್‌ ಸಲ ಉತ್ತು ಬಿತ್ತು ಮಾಡೋಕೆ ಮತ್ತೆ ಸಾಲ; ಗಂಡ್‌ ಮಕ್ಳು ಇದ್ದಿದ್ರೆ ಸ್ಕೂಲಿಗೆ ರಜಾ ಇರೋವಾಗಾದ್ರೂ ಹೊಲದ್‌ ಕೆಲ್ಸ ಮಾಡಿಸ್ಬೋದಾಗಿತ್ತು ಇರೋವು ಹೆಣ್‌ ಮಕ್ಳು; ಅವೂ ಕೈಲಾದಷ್ಟು ಕೆಲ್ಸ ಮಾಡ್ತವೆ; ಹೊರ್ಗಡೆ ಕೆಲ್ಸ ಮಾಡಕ್ಕೆ ಇಬ್ರಿಗೂ ಆಗಲ್ಲ; ಬೇಗ ಮದ್ವೆ ಆಗಿ ಒಂದರ ಹಿಂದೆ ಒಂದು ಅಂತ ಎರಡು ಮಕ್ಳು ಹುಟ್ಟಿದ್ದಕ್ಕೋ ಏನೋ? ಇಬ್ರುಗೂ ಶಕ್ತಿ ಕಡ್ಮೆನೇ.  ಸೀನಂಗೆ ಗೊತ್ತಾಗ್ದೇ ಇರೋ ಹಾಗೆ ಆಪರೇಷನ್‌ ಮಾಡ್ಸಿಕೊಂಡಿದ್ದಕ್ಕೆ ಬಚಾವ್. ಮತ್ತೆ ಮತ್ತೆ ಮಕ್ಳನ್ನ ಹೆರೋ ಕಷ್ಟ ಇಲ್ದೇ ಇದ್ರೂ ಇರೋ ಮಕ್ಳನ್ನ ನೋಡ್ಕೊಳ್ಳೋದು ಒಸಿ ಕಷ್ಟನೇ ಆಯ್ತು.  ದೊಡ್ಡೋಳು ನೋಡೋಕ್ಕೆ ಗಟ್ಟಿ; ಆದ್ರೆ ಜೀವದಲ್ಲಿ ಏನಿಲ್ಲ. 10 ವರ್ಷದ ಮಗುವಾಗಿದ್ದಾಗ ಜ್ವರ ಬಂದಿದ್ದೊಂದು ನೆಪ, ಆಸ್ಪತ್ರೆಗೆ ಹೋಗ್ಬೇಕಂದ್ರೆ 6 ಮೈಲಿ ನಡೀಬೇಕು, ನಮ್ಮನೇಲೋ ಯಾವ್ದೂ ಗಾಡಿ ಇಲ್ಲ, ಮನೆ ಔಷ್ದಿ, ಕಷಾಯ ಅಂತ ಮಾಡುವ ಹೊತ್ತಿಗೆ ಜ್ವರ ಜಾಸ್ತಿಯಾಗೇ ಬಿಡ್ತು; ಅಯ್ಯೋ ಶಿವ್ನೇ ಜ್ವರ ಕಡ್ಮೇನೇ ಆಗ್ಲಿಲ್ವಲ್ಲ ಇನ್ನು ಆಸ್ಪತ್ರೆಗೆ ಹೋಗ್ಲೇಬೇಕು ಅಂತ ಸೀನಂಗೆ ಹೇಳಿ ಯಾವ್ದಾದ್ರೂ ಗಾಡಿ ವ್ಯವಸ್ಥೆ ಮಾಡು ಅಂತ ಹೇಳ್ತಾ ಇದ್ದಂಗೆ, ಮಗು ಮುಷ್ಟಿ ಹಿಡಿಯೋಕೆ ಶುರು ಮಾಡ್ತು, ನೋಡ್ತಾ ನೋಡ್ತಾ ಎಚ್ರ ತಪ್ಪಿ ಬಿದ್ದೇ ಬಿಡ್ತು. ಈ ಥರ ಆಗೋದನ್ನ ಯಾವತ್ತೂ ನೋಡೇ ಇಲ್ದೇ ಇರೋ ನಾನು, ನನ್ ಮಗೂನ ಯಾರಾದ್ರೂ ಕಾಪಾಡಿ ಅಂತ‌ ಜೋರಾಗಿ ಕಿರಿಚಿಕೊಳ್ಳೋಕೆ ಶುರು ಮಾಡ್ದೆ. ಸದ್ಯ, ಯಾರೋ ಪುಣ್ಯಾತ್ಮರು ಗಾಡಿ ಕೊಟ್ರು; ಮಗೂಗೆ ನೀರು ಚಿಮುಕ್ಸಿ, ಗಾಳಿ ಹಾಕಿ ಅಂತ ಹೇಳ್ತಾ ಇದ್ದಂಗೇ, ಮಗೂನ ಎತ್ತಿಕೊಂಡು ಅಸ್ಪತ್ರೆಗೆ ಓಡಿದ್ದಾಯ್ತು; ಒಳ್ಳೇ ಡಾಕ್ಟ್ರು, ಮಗೂನ ಚೆನ್ನಾಗಿ ಪರೀಕ್ಷೆ ಮಾಡಿ, ಕೆಲವೊಂದು ಪರೀಕ್ಷೆ ಮಾಡ್ಸಬೇಕು; ದೊಡ್ಡಾಸ್ಪತ್ರೆಗೆ ಬರ್ಕೊಡ್ತೀನಿ, ಕರ್ಕೊಂಡು ಹೋಗಿ, ಯಾವ ಕಾರಣಕ್ಕೂ ತಡ ಮಾಡ್ಬೇಡಿ ಅಂತ ಎಚ್ಚರಿಕೆ ಹೇಳುದ್ರು. ಇದೇನಪ್ಪಾ ಗ್ರಾಚಾರ? ಏನೋ ಜ್ವರ ಕಡ್ಮೆಆಗುತ್ತೆ ಅನ್ಕೊಂಡ್ರೆ ಪರೀಕ್ಷೆ ಮಾಡ್ಬೇಕು ಅಂತ ಹೇಳ್ತಾ ಅವ್ರಲ್ಲ ಅಂತ ಯೋಚ್ನೆ ಮಾಡೀ ಮಾಡೀ ಸಾಕಾಯ್ತು. ಹಿಂಗೆ ಯೋಚ್ನೆ ಮಾಡ್ಕೊಂಡು ಅಳ್ತಾ ಕುಂತ್ಕಂಡ್ರೆ ಮಗೂ ಹುಷಾರಾಯ್ತದಾ? ಹೋಗಿ ಡಾಕ್ಟ್ರನ್ನ ನೋಡ್ಕೊಂಡ್‌ ಬನ್ನಿ ಅಂತ ನಮ್ಮತ್ತೆ. ಅದೇನ್‌ ರೋಗಿಷ್ಟ ಮಗೂನ ಹಡೆದ್ಬಿಟ್ಳೋ 10 ವರ್ಷಕ್ಕೇ ದೊಡ್ಡಾಸ್ಪತ್ರೆ ಕಾಣೋ ಹಾಗಾಯ್ತು. ದುಡ್ಡು ಎಲ್ಲಿಂದ ತರೋದು? ಆಸ್ಪತ್ರೇಲಿ ಇರ್ಬೇಕು ಅಂದ್ರೆ ಇಲ್ಲಿ ಮನೆ ಕೆಲ್ಸ ನೋಡೋರ್‌ ಯಾರು? ಅದೆಷ್ಟು ದಿನ ಆಗುತ್ತೋ ಏನೋ? ಅಂತ ಎಲ್ಲಾ ತಪ್ಪುನ್ನ ನನ್‌ ಮೇಲೆ ಹೊರೆಸಿ ಗೊಣಗಾಟ ಶುರುಮಾಡ್ದ ಸೀನ.

ಅಯ್ಯೋ ನೀನೇನ್‌ ಮಗೂಗೆ ತಂದೆ ಅಲ್ವಾ? ನಡೀ ಆಸ್ಪತ್ರೆಗೆ ಹೋಗಾಣ, ಇಲ್ಲಿ ಹೆಂಗೋ ಆಯ್ತದೆ ಅಂತ ಜೋರು ಗಂಟ್ಲು ಮಾಡಿ, ಮಗೂನ ಕರ್ಕೊಂಡು 70 ಮೈಲಿ ದೂರದಲ್ಲಿರೋ ಆಸ್ಪತ್ರೆಗೆ ಹೋಗಿದ್ದಾಯ್ತು. ನಂ ಅದೃಷ್ಟನೋ, ನಂ ಮಗು ಅದೃಷ್ಟನೋ ಅಂತೂ ಅಲ್ಲೂ ಒಳ್ಳೆ ಡಾಕ್ಟ್ರು ಸಿಕ್ಕಿದ್ರು; ಪರೀಕ್ಷೆ ಎಲ್ಲಾ ಮಾಡಿ, ನೋಡೀಮ್ಮಾ ಈ ಮಗೂಗಿರೋದು ಸಾಮಾನ್ಯವಾದ ಕಾಯಿಲೇನೇ. ಭಯ ಪಡ್ಬೇಡಿ. ಇದಕ್ಕೆ ಎಪಿಲಪ್ಸಿ ಅಥವಾ ಫಿಟ್ಸ್‌ ಅಂತಾರೆ. ವಾಸಿ ಆಗುತ್ತೆ ಆದ್ರೆ  ನಾನು ಕೊಡೋ ಮಾತ್ರೆನಾ  ಪ್ರತಿದಿನ ಬೆಳಿಗ್ಗೆ ಮಗು ತಿಂಡಿ ತಿಂದಾದ್ಮೇಲೆ ಕೊಡ್ಬೇಕು; ಒಂದು ದಿನಾನೂ ತಪ್ಪಿಸ್ಬಾರ್ದು; ನಾನು ಹೇಳೋ ಅಷ್ಟು ದಿವ್ಸ ಮಗೂಗೆ ಮಾತ್ರೆ ಕೊಡ್ಬೇಕು. ಪ್ರತಿ ಮೂರು ತಿಂಗ್ಳಿಗೆ ಬಂದು ಮಗೂನ್ನ ಪರೀಕ್ಷೆ ಮಾಡಿಸ್ಬೇಕು ಅಂದ್ಬುಟ್ರು. ಹಣೆಬರಾನ ತಪ್ಸೋರ್ಯಾರು? ಮಗೂ ಜೀವ ಉಳುದ್ರೆ ಸಾಕು; ಇನ್ಯಾವತ್ತೂ ಹೀಗಾಗ್ದೇ ಇದ್ರೆ ಸಾಕು ಅಂತ ಅವ್ರು ಹೇಳಿದ್ದಕ್ಕೆಲ್ಲಾ ಹೂಂಗುಟ್ಟಿ, ಔಷ್ದಿ ಎಲ್ಲಾ ತಗೊಂಡು ಮನೇಗೆ ಬಂದಿದ್ದಾಯ್ತು. ಎಷ್ಟಾದ್ರೂ ಹಡೆದ ಕರುಳು, ಮಗೂನ ಚೆನ್ನಾಗಿ ನೋಡ್ಕೋಬೇಕು ಅಂತ ಮನಸ್ಸನ್ನ ಗಟ್ಟಿ ಮಾಡ್ಕೊಂಡೆ; ಎಷ್ಟೇ ಕಷ್ಟ ಆದ್ರೂ ಔಷ್ದಿ ಕೊಡೋದುನ್ನ ತಪ್ಪಿಸ್ಬಾರ್ದು ಅಂತ ತೀರ್ಮಾನ ಮಾಡ್ಕೊಂಡೆ. ಹೇಗಾದ್ರೂ ಇವ್ಳು ಚೆನ್ನಾಗಿ ಓದಿ, ಕಾಲೇಜ್‌ ಮೆಟ್ಲು ಹತ್ಲಪ್ಪ, ನನ್‌ ಥರ ಇದೇ ಕೊಂಪೇಲಿ ಅವಳ ಆಯುಷ್ಯ ಕಳ್ಯೋದು ಬೇಡ ಮಾದೇಶ್ವರ ನಿಂಗೆ ತುಪ್ಪದ್‌ ದೀಪ ಬೆಳಗ್ತೀನಿ ಅಂತ ಪ್ರಾರ್ಥನೆ ಮಾಡ್ದೆ.  ಕಾಲ ಯಾರಪ್ಪನ ಮನೇದು? ಹಂಗೂ ಹಿಂಗೂ ವರ್ಷಗಳು ಕಳುದ್ವು; ನಂ ದೀಪ, ದೀಪದ ಥರಾನೇ ಬೆಳೆದ್ಲು. ನಾನೇ ಗಮ್ನ ಕೊಟ್ಟು ಮಾತ್ರೆ ಕೊಡ್ತಿದ್ದೆ. ಬೇರೆ ಏನ್‌ ಮರೆತ್ರೂ ಇದನ್ನ ಮಾತ್ರ ಮರೀತಿರ್ಲಿಲ್ಲ. ಮಧ್ಯದಲ್ಲಿ ಒಂದೇಳೆಂಟು ಸಲ ಇವ್ಳು ಎಚ್ರ ತಪ್ಪಿ ಬಿದ್ದಿದ್ರೂ ಅಂಥ ತೊಂದ್ರೆ ಏನೂ ಆಗಿರ್ಲಿಲ್ಲ; ಇನ್ನು ಅವ್ಳ ತಂಗೀನೂ ಬೆಳೀತಾ ಇದ್ಲು. ಆದ್ರೆ ಅವ್ಳಿಗೆ ಅಂತ ಕಾಯ್ಲೆ ಏನೂ ಇಲ್ದೇ ಇದ್ರೂ ದೀಪನ್‌ ಹಿಂದೇನೇ ಹುಟ್ಟಿದ್ರಿಂದ ಅಷ್ಟೇನೂ ಗಟ್ಟಿ ಇಲ್ಲ. ಇಬ್ರು ಹೆಣ್‌ ಮಕ್ಳೂ ನೋಡ್ತಾ ನೋಡ್ತಾ ದೊಡ್ಡೋರಾದ್ರು. ಇಬ್ರೂ ನೋಡೋಕ್ಕೆ ಲಕ್ಷಣವಾಗೇ ಇದ್ರು. ಹದ್ನಾರಕ್ಕೆ ಕತ್ತೇನೂ ಚೆನ್ನಾಗಿ ಕಾಣುತ್ತಂತೆ. ಈಗೀಗ ದೀಪಂಗೆ ಉದಾಸೀನ; ಅವ್ಳ ಗಮ್ನ ಎಲ್ಲೋ ಇರುತ್ತೆ. ನಾನೂ ಒಂದ್‌ ಕಣ್‌ ಅವ್ಳ ಮೇಲೆ ಇಟ್ಟೀದ್ದೀನಿ. ಬೆಳೆಯೋ ವಯಸ್ಸಿನ ಆಸೆಗಳು ನಂಗೂ ಗೊತ್ತು. 

ನಾನು ಚೆನ್ನಾಗೇ ಇದ್ದೀನಲ್ಲ; ಮಾತ್ರೆ ಯಾಕ್‌ ತಗೋಬೇಕು ಅಂತ ಒಂದೊಂದ್ಸಲ ಹಠ ಮಾಡ್ತಾಳೆ; ಅವಾಗೆಲ್ಲ ನಂ ಅಂಜು ಅವ್ಳಿಗೆ ನಿಧಾನವಾಗಿ, ಅಕ್ಕ ಮಾತ್ರೆ ತಗೋ ಅಂತ ಹೇಳಿ ಮಾತ್ರೆ ನುಂಗಿಸ್ತಾಳೆ; ಈ ಮಕ್ಳ ಹಣೇಲಿ ಏನ್‌ ಬರ್ದಿದ್ಯೋ? ಇವ್ರಿಬ್ರೂ ಚೆನ್ನಾಗಿ ಓದ್ಬೇಕು; ಸ್ಕೂಲಿಂದ ಫೋನ್‌ ಮಾಡ್ತಾನೇ ಇರ್ತಾರೆ, ಒಂದಿನ ತಪ್ಪಿಸಕೊಂಡ್ರೂ ಯಾಕೆ ಅಂತ ಕೇಳ್ತಾರೆ. ನಂ ಪುಣ್ಯ ಡಾಕ್ಟ್ರು, ಟೀಚರು ಎಲ್ರೂ ಒಳ್ಯೋರು ಸಿಕ್ಕವ್ರೆ ಅಂತ ಯೋಚ್ನೆ ಮಾಡ್ತಿದ್‌ ಹಂಗೇನೇ, ಅವ್ವಾ ಅದ್ಯಾಕೆ ಹಂಗ್‌ ಅರಚ್ತಾ ಇದ್ಯಾ? ಇವತ್ತು ಸ್ಕೂಲಿಗೆ ಹೋಗ್ತಿದ್ದೀನಿ, ನಂಗೆ ತಿಂಡಿ ಬೇಡಾ ನಾ ಹೊರ್ಟೆ ಅಂತ ದೀಪಾ ಬ್ಯಾಗ್‌ ತಗೊಂಡ್‌ ಹೊರ್ಟೇಬಿಟ್ಳು. ಅಯ್ಯೋ ಮಾದೇಶ, ಮಾತ್ರೆ ತಗೋಬೇಕು; ಒಂಚೂರು ತಿಂಡಿ ತಿನ್ನು ಅಂತ ಹೇಳ್ತಾ ಓಡ್‌ ಬಂದ್ಲು ನಂಜಿ. ಮಾತ್ರೆನೂ ಬೇಡ ಏನೂ ಬೇಡ ಬರ್ತೀನವ್ವಾ ಅಂತ ಓಡೇ ಬಿಟ್ಳು ದೀಪಾ. ಇತ್ತೀಚೆಗೆ ದೀಪಂದು ಬಾಳಾ ಆಯ್ತು ಅಂತ ಬೈಯ್ಕೊಂಡು, ಅಂಜೂ ಈ ಡಬ್ಬಿಲಿರೋ ತಿಂಡಿ ತಿಂದು ಮಾತ್ರೆ ತಗೋಳೋಕೆ ಹೇಳು ಅವ್ಳಿಗೆ ಅಂತ ತಿಂಡಿ ಡಬ್ಬಿ ಮತ್ತೆ ಮಾತ್ರೆನಾ ಅಂಜೂ ಕೈಗೆ ತುರುಕಿದ್ಲು ನಂಜಿ. ಸರಿ ಬರ್ತೀನವ್ವಾ ಅಂತ ಅವ್ಳೂ ಬ್ಯಾಗ್‌ ಏರಿಸ್ಕಂಡು ಓಡೇಬಿಟ್ಳು.

ಈ ಥರ ಎಷ್ಟೋ ಸಲ ಆಗ್ತಾ ಇತ್ತು. ನಂಜೀಗೆ ಒಳಗೊಳಗೇ ಭಯ, ಇವ್ಳು ಸ್ಕೂಲಲ್ಲಿ ಮಾತ್ರೆ ನುಂಗ್ತಾಳೋ ಇಲ್ವೋ? ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಏನ್‌ ಮಾಡೋದು ಅಂತ. ಇದೂವರ್ಗೂ ಹಂಗೇನೂ ಆಗಿಲ್ಲ ಎಲ್ಲ ಮಾದೇಶ್ವರನ್‌ ದಯೆ ಅಂತ ಅನ್ಕೊಳ್ತಾ ಕೆಲ್ಸಕ್ಕೆ ಹೋದ್ಲು ನಂಜಿ. ಇಷ್ಟು ವರ್ಷ ಆದ್ರೂ ಒಂದ್‌ ಗಾಡಿ ಇಟ್ಕೊಳ್ಳಕ್ಕೆ ಆಗ್ಲಿಲ್ಲ ನಂ ಕೈಲಿ. ಬರೋ ದುಡ್ಡು ಅಲ್ಲಿಂದಲ್ಲಿಗೇ. ಈ ವರ್ಷ ಯಾರೋ ಪುಣ್ಯಾತ್ಮರು ದೀಪ, ಅಂಜು ಇಬ್ರಿಗೂ ಸ್ಕೂಲಲ್ಲಿ ಹತ್ಹತ್ತು ಬೈಂಡ್‌ ಕೊಟ್ಟವ್ರೆ. ಅಷ್ಟು ಖರ್ಚು ನಂಗೆ ಉಳೀತು. ಹೆಂಗೋ ವರ್ಷಕ್ಕೆ ಎರಡ್‌ ಜೊತೆ ಹೊಸ ಬಟ್ಟೆ, ಊಟಕ್ಕೆ ತೊಂದ್ರೆ ಇಲ್ಲ ಅಷ್ಟೇ. ಕಷ್ಟ ಪಟ್ಟು ಒಂದ್‌ ಕೀಪ್ಯಾಡ್‌ ಮೊಬೈಲ್‌ ತಗೊಂಡಿದ್ದೇ ಸಾಧ್ನೆ. ಟಿವಿ-ಗಿವಿ ಎಲ್ಲಾ ದೂರದ್‌ ಮಾತು. ಈ ಕರೋನಾ ಟೈಮಲ್ಲಿ ಒಂದ್‌ ಟಚ್‌ ಮೊಬೈಲ್‌ ತಗೊಳ್ಳಿ ಅಂತ ಮಾಷ್ಟ್ರು ಹೇಳಿದ್ರು ಆದ್ರೆ ಆಗ್ಲಿಲ್ಲ; ಅದೇನೋ ಆನ್‌ ಲೈನ್‌ ಕ್ಲಾಸಂತೆ, ಹೆಂಗೋ ನಂ ಪಕ್ಕದ್ಮನೆ ಹುಡ್ಗಿ ಹತ್ರ ಕೂತ್ಕೊಂಡು, ಮೊಬೈಲ್‌ ನೋಡ್ಕಂಡು ಓದ್ಕತಾ ಇದ್ರು ಮಕ್ಳು. ನಮ್ಮೂರಲ್ಲಿ ಈ ರೋಗ ತೊಂದ್ರೆ ಕೊಡ್ಲಿಲ್ಲ; ಈಗ ಸ್ಕೂಲ್‌ ಬಾಗ್ಲು ತೆಗೀತು. ಇನ್‌ ಯೋಚ್ನೆ ಇಲ್ಲ ಅಂತಿದ್‌ ಹಾಗೇನೇ, ನಂಜೀ ಬೇಗ ಮನೇಕೆಲ್ಸ ಮುಗ್ಸಿ, ಹೊಲದ್‌ ಕಡೆ ಬಂದ್ಬುಡು ಇವೊತ್ತು ಹತ್ತಿ ಬಿಡಿಸ್ಬೇಕು ಅಂತ ಹೇಳ್ತಾನೇ ಟವೆಲ್‌ ಹಾಕ್ಕೊಂಡು ಹೋದ ಸೀನ. ಇನ್‌ ಹೊಲದ್‌ ಕಡೆ ಹೋದ್ರೆ ಬರೋದು ಸಂಜೆಗೇ ಅನ್ಕೊಂಡು ಮನೆ ಕೆಲ್ಸ ಮಾಡಿ ಹೊಲಕ್ಕೆ ಹೋದ್ಲು ನಂಜಿ.

ಮೇಲ್ಗಡೆ ಸುಡುಸುಡು ಬಿಸ್ಲು. ಮೈ ಎಲ್ಲಾ ಬೆವ್ರು. ಅಪ್ಪಾ ಇದೇನ್‌ ಇಂತಾ ಬಿಸ್ಲು ಇವತ್ತು ಅಂತ ಆಕಾಶ ನೋಡ್ತಿದ್ದ ಹಾಗೇ ಸೀನನ ಫೋನ್‌ ಒಂದೇ ಸಮ ಬಡ್ಕೊಳ್ಳೋಕೆ ಶುರು ಮಾಡ್ತು. ಕೆಲ್ಸ ಮಾಡ್ತಾ ಇದ್ದ ಸೀನ  ಫೋನೆತ್ತಿ ಮಾತಾಡ್ತಾ ಅಯ್ಯೋ ನಾವಿಲ್ಲಿಂದ ಬರ್ಬೇಕು ಅಂದ್ರೆ ಸುಮ್ನೆ ಆಯ್ತದಾ? ಗಾಡಿ ಇಲ್ಲ ಸಾರ್.‌ ಹೆಂಗ್‌ ಬರೋದು? ಹತ್ತಿ ಬುಡುಸ್ತಾ ಇದ್ದೀವಿ ಸಾರ್‌  ಹುಷಾರಾಗೆ ಇದ್ಲು ಸಾರ್‌ ಅಂತ ಹೇಳೋದು ಕೇಳಿ ನಂಜೀಗೆ ಗಾಬ್ರಿ ಆಯ್ತು. ಇವ್ನು ಯಾರ್‌ ಹತ್ರ ಮಾತಾಡ್ತಾ ಇದ್ದಾನಪ್ಪ ಅಂತ? ಆಯ್ತು ಸಾರ್‌ ಆಯ್ತು ಸಾರ್‌ ಅಂತಾನೇ ಫೋನ್‌ ಮಡಗ್ದ ಸೀನ. ಏನಾಯ್ತು ಸೀನ? ಅಂತಿದ್ದಂಗೇ, ಅಯ್ಯೋ ದೀಪ ಸ್ಕೂಲಲ್ಲಿ ಬಿದ್ಬುಟ್ಳಂತೆ, ವಾಂತಿ ಆಯ್ತಂತೆ, ಲಂಗಾನೂ ಒದ್ದೆ ಮಾಡ್ಕಂಡ್ಳಂತೆ,  ಪಾಪ ಅಂಜು, ಎಲ್ಲಾ ಕಿಲೀನ್‌ ಮಾಡುದ್ಲಂತೆ. ಅಂತ ಹೇಳ್ದ ಸೀನ. ಅಯ್ಯೋ ಮಾದೇಶ, ನಾನ್‌ ಏನ್‌ ಆಗ್ಬಾರ್ದು ಅನ್ಕೊಂಡಿದ್ನೋ ಅದೇ ಆಯ್ತಲ್ಲಪ್ಪ, ಸೀನ ಯಾರ್‌ ಹತ್ರಾನಾದ್ರೂ ಗಾಡಿ ಇಸ್ಕೋ, ಸ್ಕೂಲಿಗೆ ಹೋಗಾಣ ಅಂದ್ರೆ, ಏಯ್‌ ಬರ್ತಾಳೆ ಬಿಡು, ಈ ಕೆಲ್ಸ ಮಾಡು. ಈಗ ಹತ್ತಿ ಬುಡುಸ್ಲಿಲ್ಲ ಅಂದ್ರೆ ಗೊತ್ತಲ್ಲ, ಬರೋ ದುಡ್ಡೂ ಬರಲ್ಲ. ಅಂತ ಹೇಳ್ತಾ ಇದ್ದ ಸೀನನ್ನ ನೋಡಿ ನಂಜೀಗೆ ಪಿತ್ಥ ನೆತ್ತಿಗೇರ್ತು. ಹೋಗ್ಲಿ ಅದೇ ನಂಬರ್ಗೆ ಫೋನ್‌ ಮಾಡ್ಕೊಡು ನಾನ್‌ ಮಾತಾಡ್ತೀನಿ ಅಂತ ಫೋನ್‌ ಮಾಡಿ, ಮಾಷ್ಟ್ರ ಹತ್ರ ಮಾತಾಡಿ ದೀಪಂಗೆ ಫೋನ್‌ ಕೊಡಿ ಅಂತ ಹೇಳಿ ದೀಪಾ ಮಾತ್ರೆ ನುಂಗ್ದ್ಯಾ? ಅಂತ ಕೇಳೋಷ್ಟರಲ್ಲಿ ಫೋನ್‌ ಕಟ್‌ ಆಯ್ತು. ಈ ಊರಲ್ಲಿ ಸಿಗ್ನಲ್‌ ಎಲ್ಲಿ ಸಿಗುತ್ತೆ? ಎಲ್ಲ ನನ್‌ ಕರ್ಮ ಅಂತ ಗೊಣಗಾಡ್ತಾ ಒಲ್ಲದ ಮನ್ಸಿಂದ ಹತ್ತಿ ಬಿಡ್ಸೋದನ್ನ ಮುಂದುವರ್ಸಿದ್ಲು ನಂಜಿ.

ಸಂಜೆ ಆಯ್ತು. ಮಗಳು ಬರೋದನ್ನೇ ಕಾಯ್ತಾ ಕೂತ್ಲು ನಂಜಿ. ಮಕ್ಕಳಿಬ್ರೂ ಬಂದ್ರು. ದೀಪನ್‌ ಮುಖ ನೋಡ್ತಿದ್ದ ಹಾಗೇ, ಓಡ್ಹೋಗಿ ಅವ್ಳನ್ನ ತಬ್ಕೊಂಡ್ಲು ನಂಜಿ. ದೀಪಾ, ಯಾಕೇ ನನ್ನವ್ವ? ಏನಾಯ್ತು? ಮಾತ್ರೆ ತಗೊಂಡ್ಲಿಲ್ವಾ? ಯಾಕವ್ವಾ ಬಿದ್ದೆ? ಎಚ್ರ ತಪ್ತಾ? ಇಷ್ಟು ದೊಡ್ಡೋಳನ್ನಾಗಿ ಮಾಡಕ್ಕೆ ನಾನ್‌ ಎಷ್ಟ್‌ ಕಷ್ಟ ಪಟ್ಟಿದ್ದೀನಿ ಗೊತ್ತಾವ್ವಾ? ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ನಾನ್‌ ಜೀವ ಸಹಿತ ಉಳೀತೀನಿ ಅಂದ್ಕೊಂಡ್ಯಾ? ದೀಪಾ ದೀಪಾ ಅಂತ ಮಗ್ಳನ್ನ ಮತ್ತಷ್ಟು ಬಿಗಿಯಾಗಿ ಹಿಡ್ಕೊಂಡ್ಳು ನಂಜಿ.

ಅವ್ವಾ ಇವತ್‌ ಮಾತ್ರ ಅಲ್ಲ, ದೀಪ ಎಷ್ಟೋ ಸಲ ಮಾತ್ರೇನೇ ತಗೊಳಲ್ಲ, ಕೊಟ್ರೆ ಬಿಸಾಕ್ತಾಳೆ. ನಾನ್‌ ಚೆನ್ನಾಗಿದ್ದೀನಿ ನಂಗ್‌ ಬೇಡ ಅಂತ ಕೂಗ್ತಾಳೆ. ಸ್ಕೂಲಲ್ಲಿ ಎರಡ್ಮೂರ್‌ ಸಲ ಬಿದ್ದಿದ್ದಾಳೆ ಅವ್ವಾ. ಹೇಳಿದ್ರೆ ನನ್ನಾಣೆ ಅಂತ ಆಣೆ ಹಾಕಿಸ್ಕೊಂಡವ್ಳೆ. ಇವತ್ತು ಮಾಷ್ಟ್ರು ಕ್ಲಾಸಲ್ಲಿ ಇದ್ದಾಗ್ಲೇ ಬಿದ್ಲು. ಅದ್ಕೇ ಫೋನ್‌ ಮಾಡಿದ್ರು ಅಂತ ಅಂಜು ಹೇಳ್ತಿದ್‌ ಹಾಗೇ, ನಂಜೀ ಸಿಟ್ನಿಂದ ದೀಪಂಗೆ ಎರಡೇಟು ಬಿಗಿದ್ಲು. ಯಾಕೇ ಯಾಕೇ ನನ್‌ ಹೊಟ್ಟೆ ಉರುಸ್ತ್ಯಾ? ಯಾಕ್‌ ಮಾತ್ರೆ ತಗೊಳಲ್ಲ? ಗೊತ್ತಾ ನಿಂಗೆ ನಾನ್‌ ಎಷ್ಟ್‌ ಕಷ್ಟ ಪಟ್ಟಿದ್ದೀನಿ ಅಂತ?? ಯಾರ್‌ ಯಾರ್‌ ಹತ್ರ ಏನೇನ್‌ ಅನ್ಸ್ಕೊಂಡಿದ್ದೀನಿ ಗೊತ್ತಾ? ನಾನ್‌ ಸೀರೆ ತಗೊಳ್ದೇ ಇದ್ರೂ ನಿನ್‌ ಔಷ್ದಿಗೆ ಯಾವತ್ತೂ ಕಡ್ಮೆ ಮಾಡಿಲ್ಲ ಗೊತ್ತಾ? ಅಂತಾದ್ರಲ್ಲಿ ಮಾತ್ರೆನಾ ಎಸ್ಯೋಷ್ಟು ಕೊಬ್ಬೈತಾ ನಿಂಗೆ ಅಂತ ಇನ್ನೂ ಎರಡು ಬಾರಿಸಿದ್ಲು. ಬಿಡವ್ವ, ಬಿಡವ್ವ ನನ್ನನ್ನ. ಆಯ್ತು ಇನ್ಮೇಲೇ ತಗೋತೀನಿ  ಮಾತ್ರೆಯಾ. ನನ್ನ ಹೊಡ್ದು ಸಾಯಿಸ್ಬುಡ್ಬೇಡ ಕಣವ್ವಾ ಅಂತ ಜೋರಾಗಿ ಅತ್ಲು ದೀಪಾ. ನಿನ್ನನ್ನ ಸಾಯ್ಸೋಕೆ ಅಲ್ಲ ಕಣೇ ನಾನ್‌ ಹಡ್ದಿದ್ದು. ನೀನ್‌ ಚೆಂದಾಗಿ ಓದಿ ಕಾಲೇಜ್‌ ಸೇರ್ಕಬೇಕು ಒಂದ್‌ ಕೆಲ್ಸ ಅಂತ ಮಾಡ್ಬೇಕು; ಸ್ವಲ್ಪ ಸಿಟಿ ಮುಖ ನೋಡ್ಬೇಕು ಅಂತ ಕನ್ಸು ಕಣೇ ದೀಪಾ ಅದೇ ನನ್‌ ಕನ್ಸು. ಅಂತ ಮಗ್ಳಿಗೆ ಹೊಡೆದ ಕೈನಲ್ಲೇ ತನ್‌ ತಲೇನ ಹೊಡ್ಕೊಂಡ್ಳು ನಂಜಿ. ಬಿಡವ್ವಾ ಆಯ್ತು; ಇನ್ಮೇಲೆ ನಾನ್‌ ಅವ್ಳನ್ನ ಇನ್ನೂ ಚೆನ್ನಾಗ್‌ ನೋಡ್ಕೋತ್ತೀನಿ ನೀನ್‌ ಅಳ್ಬೇಡ ಅವ್ವಾ ಅಂತ ಅಮ್ಮನ್‌ ಕೈ ಹಿಡ್ಕೊಂಡ್ಳು ಅಂಜು. ಇದೇನಿದು? ಅವಾಗಿಂದಾ ನೋಡ್ತಾ ಇದ್ದೀನಿ ಅದೇನ್‌  ಅಮ್ಮ  ಮಕ್ಳ ನಾಟ್ಕ? ಇದೆಲ್ಲ ಸಾಕು; ಮೊದ್ಲು ಊಟಕ್ಕಿಕ್ಕು ಅಂತ ಜೋರ್‌ ಮಾಡ್ದ ಸೀನ. ಯಾವಾಗ್ಲೂ ಊಟದ್ದೇ ಗ್ಯಾನ ನಿಂಗೆ ಅಂತ ತಲೆ ಗಂಟು ಹಾಕ್ಕೊಳ್ತಾ, ಕಣ್ಣೀರನ್ನ ಸೆರಗಲ್ಲಿ ಒರೆಸ್ಕೊಂಡು ಎದ್ಲು ನಂಜಿ. ಮಕ್ಳಿಬ್ರೂ ಅಳ್ತಾನೇ ಊಟಕ್ಕೆ ಎದ್ರು.

ಒಂದ್‌ ವಾರ ಎಲ್ಲಾ ಸರ್ಯಾಗಿತ್ತು. ಆಮೇಲೆ ಕರೋನಾ ಜಾಸ್ತಿಯಾಯ್ತು ಅಂತ ಸ್ಕೂಲ್‌ ಬಾಗ್ಲು ಮತ್ತೆ ಮುಚ್ಬಿಟ್ರು. ಬೆಳಿಗ್ಗೆ ಎದ್ರೆ ಇಬ್ರೂ ಮಕ್ಳು ಬ್ಯಾಗ್‌ ತಗೊಂಡು ಸ್ಕೂಲಿಗೆ ಹೋಗ್ತಾ ಇದ್‌ ದೃಶ್ಯ ಮಾಯವಾಗೋಯ್ತು. ಈಗ ಮನೇಲೇ ಇಬ್ರೂ ಉಳ್ಕೊಂಡ್‌ ಬಿಟ್ರು. ಟಚ್‌ ಫೋನ್‌ ತಗೋಬೋಕು ಅಂತ ಅನ್ಕೊಂಡ್ರೂ ಇಲ್ಲಿ ಸಿಗ್ನಲ್‌ ಸಿಗಲ್ಲ ಅಂತನೋ ದುಡ್ಡಿಲ್ಲ ಅಂತಾನೋ ಒಟ್ನಲ್ಲಿ ಫೋನ್‌ ತಗೊಳ್ಳೊಕೆ ಆಗ್ಲಿಲ್ಲ; ದೀಪಾ ಬೇರೆ ದೊಡ್‌ ಪರೀಕ್ಷೆ ಬರೀಬೇಕು; ಪರೀಕ್ಷೆ ನಡ್ಯತ್ತೋ ಇಲ್ವೋ ಅಂತಾನೇ ಗೊತ್ತಿಲ್ಲ; ಅಯ್ಯೋ ಇದೆಲ್ಲ ಯಾವಾಗ್‌ ಮುಗ್ಯತ್ತೋ? ನನ್‌ ಮಗ್ಳು ಕಾಲೇಜ್‌ ಮುಖ ನೋಡ್ತಾಳೋ ಇಲ್ವೋ ಅಂತ ಯೋಚ್ನೆ ಆಗ್ತಿತ್ತು ನಂಜೀಗೆ. ಸ್ಕೂಲಿಂದ ವಾರಕ್ಕೆ ಮೂರು ಸಲ ಫೋನ್‌ ಬರ್ತಿತ್ತು. ಪರೀಕ್ಷೆ ಇರುತ್ತೆ ಮಕ್ಳು ಓದ್ಕೋಬೇಕು; ಅಂತ್ಹೇಳಿ ಒಂದಷ್ಟ್‌ ಬರ್ಯೋಕೂ ಕೊಡ್ತಿದ್ರು. ಆದ್ರೂ ಸ್ಕೂಲಲ್ಲಿ ಕಲ್ತ್ಹಂಗೆ ಆಗ್ಲಿಲ್ಲ. ಇನ್ನು ದೀಪಾ ಅವ್ಳ ಫ್ರೆಂಡ್‌ ಜೊತೆ ಆನ್‌ ಲೈನ್‌ ಕ್ಲಾಸ್‌ ಗೆ ಹೋಗ್ತಿನಿ ಅಂತ ಆ ಟಚ್‌ ಮೊಬೈಲ್‌ ನೋಡ್ಕೊಂಡು ಓದ್ಕೊಳ್ತಾ ಇದ್ಲು. ಮನೇಲೇ ಇದ್ದಿದ್ರಿಂದ ಮನೇ ಕೆಲ್ಸ ಎಲ್ಲಾ ಮಕ್ಳೇ ನಿಭಾಯಿಸ್ತಾ ಇದ್ರು; ಹೊಲದ್‌ ಕೆಲ್ಸ ನಂಜಿ, ಸೀನ ಸೇರ್ಕೊಂಡು ಮಾಡ್ತಾ ಇದ್ರು.

ಒಂದಿನ ಸೀನ ಮನೆಗ್‌ ಬಂದು, ನಂಜೀ ನಂ ದೀಪಂಗೆ ಒಂದು ಸಂಬಂಧ ಬಂದಿದೆ. ದೀಪನ್ನ ಅವ್ರು ಈಗಾಗ್ಲೇ ನೋಡಿದಾರಂತೆ. ಹುಡ್ಗ 10ನೇ ಕ್ಲಾಸ್‌ ಓದಿದಾನಂತೆ; ಮಾಮೂಲಿ ಜಮೀನ್‌ ಕೆಲ್ಸ, ಇಲ್ಲೇ ಪಕ್ಕದೂರು. ಅವ್ರೇ ಮದ್ವೆ ಖರ್ಚೆಲ್ಲ ಹಾಕಿ ಮದ್ವೆ ಮಾಡ್ಕೊತಾರಂತೆ, ಜೊತೆಗೆ ನಮ್‌ ಗೆ ಒಂದ್‌ ಲಕ್ಷ ಕೊಡ್ತಾರಂತೆ ಮದ್ವೆ ಮಾಡ್ಬಿಡೋಣ ಕಣೇ ಅಂತಿದ್‌ ಹಾಗೇ ಸಿಡಿದ್‌ ಬಿದ್ಲು ನಂಜಿ. ಈಗಿನ್ನೂ 16 ಆಯ್ತಾ ಇದೆ, ಈಗ್ಲೇ ಮದ್ವೆ ಅಂತೆ, ಮಕ್ಳು ಮನೇಲಿರೋದು ನಿನ್‌ ಕಣ್ಣಿಗ್‌ ಬಂತು ನೋಡು. ಆ ಮಕ್ಳು ಓದ್ಲಿ ಬುಡು. ಇನ್ನೊಂದ್‌ ತಿಂಗ್ಳು ಪರೀಕ್ಷೆ ಬರುತ್ತೆ; ಹೆಂಗೋ ಆಯ್ತದೆ, ಇಷ್ಟ್‌ ಬೇಗ ಮದ್ವೆ ಗಿದ್ವೆ ಬೇಡ ಅಂತ ಕಡ್ಡಿ ತುಂಡ್‌ ಮಾಡ್ದಂಗೆ ಹೇಳ್ಬಿಟ್ಲು. ಅಷ್ಟೊತ್ತಿಗೆ ದೀಪಾನೂ ಬಂದ್ಲು. ಅಪ್ಪಾ ನಂಗೆ ಮದ್ವೆ ಈಗ್ಲೇ ಬ್ಯಾಡಾ, ನಾನು ಓದ್ಬೇಕು, ನಮಗೆ ಕಾಲೇಜಿಗೂ ದುಡ್ಡೇನೂ ಕಟ್ಟಂಗಿಲ್ವಂತೆ; ನಂ ಮಾಷ್ಟ್ರು ಹೇಳವ್ರೆ; 18 ವರ್ಷ ಆಗೋಗಂಟ ಮದ್ವೆ ಮಾಡ್ಕೋಬಾರ್ದು ಅಂತ, ನಾನ್‌ ಇಷ್ಟ್‌ ಬೇಗ ಮದ್ವೆ ಆಗಲ್ಲ ಅಂತ ರಾಗ ಹಾಡಿದ್ಲು. ನಿಮ್‌ ಮಾಷ್ಟ್ರು ಬಂದು ನಂ ಸಾಲ ತೀರಿಸ್ತಾರಾ? ನೀನ್‌ ಸ್ವಲ್ಪ ಬಾಯ್‌ ಮುಚ್ಕೊಂಡಿರು; ನಿಂಗೆ ಕಾಯ್ಲೆ ಬೇರೆ; ಹುಡುಗನ್‌ ಕಡೆಯವ್ರಿಗೆ ಅದು ಗೊತ್ತಿಲ್ಲ; ನಾನು ಹೇಳೋದೂ ಇಲ್ಲ; ನಾವು ಲಕ್ಷ ಸಂಪಾದ್ನೆ ಮಾಡ್ಬೇಕು ಅಂದ್ರೆ 10 ವರ್ಷ ಆದ್ರೂ ಆಗಲ್ಲ; ನಿಂದಾದ್ಮೇಲೆ ಅಂಜು ಮದ್ವೆ ಮಾಡ್ಬೇಕು. ಎಷ್ಟ್‌ ಓದ್ಸಿದ್ರೂ ಮದ್ವೆ ಅಂತೂ ಮಾಡ್ಲೇಬೇಕು ತಾನೇ?? ಸುಮ್ನೆ ಒಪ್ಕೊ ಅಂತ ದಬಾಯಿಸಿದ ಸೀನ. ಅವ್ವಾ ನೀನಾದ್ರೂ ಹೇಳವ್ವಾ. ನಾನು ಓದ್ಬೇಕು; ಮದ್ವೆ ಬೇಡ ಅಂತ ಅಳೋಕೆ ಶುರು ಮಾಡ್ಬಿಟ್ಳು ದೀಪಾ. ಇದೆಲ್ಲ ನೋಡ್ತಾ ಇದ್ದ ಅಂಜೂಗೆ ಪರಿಸ್ಥಿತಿ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಯ್ತು. ನೀವ್‌ ಅಮ್ಮ ಮಗ್ಳು ಎಷ್ಟ್‌ ಬಡ್ಕೊಂಡ್ರೂ ಅಷ್ಟೇ. ಮದ್ವೆ ಮಾಡದೇಯಾ. ನಿಮ್ಗೆ ನಾನ್‌ ಬೇಕಾ ನಿಮ್‌ ಕಾಲೇಜ್‌ ಬೇಕಾ ಅಂತ ನಿರ್ಧಾರ ಮಾಡಿ. ಏನಾದ್ರೂ ಮದ್ವೆಗೆ ಒಪ್ಕೊಂಡ್ಲಿಲ್ಲ ಅಂದ್ರೆ ನನ್‌ ಹೆಣ ನೋಡ್ಬೇಕಾಯ್ತದೆ ನೀವಿಬ್ರೂ ತಿಳ್ಕಳಿ ಅಂತ ಎದ್‌ ಹೋಗೇಬಿಟ್ಟ ಸೀನ.

ಮುಂದಿನದೆಲ್ಲ ಕಣ್ಮುಚ್ಚಿಬಿಡುವಷ್ಟರಲ್ಲಿ ನಡೆದೇ ಹೋಯಿತು. ಹುಡುಗ ನಾಗ ನೋಡಲು ಸುಮಾರಾಗಿದ್ದ, ದೀಪಾಳ ಲಕ್ಷಣಕ್ಕೆ ಅವನ ಜೋಡಿ ಅಷ್ಟಕ್ಕಷ್ಟೇ. ಆದ್ರೂ ಹಣವೆಂಬ ಮಾಯಾಜಾಲದಲ್ಲಿ ಬಿದ್ದ ಸೀನ ಮಗಳನ್ನ ನಾಗಂಗೆ ಮದ್ವೆ ಮಾಡಿಕೊಟ್ಟೇ ಬಿಟ್ಟ. ನಂಜಿ ಅವುಡುಗಚ್ಚಿ, ಕಣ್ಣೀರಿಡುತ್ತಲೇ ದೀಪಾಳನ್ನು ಗಂಡನ ಮನೆಗೆ ಕಳಿಸಿಕೊಟ್ಳು. ಸೀನ 1 ಲಕ್ಷ ರೂಪಾಯಲ್ಲಿ ಸ್ವಲ್ಪ ಸಾಲ ತೀರಿಸ್ದ, ಸ್ವಲ್ಪ ದುಡ್ಡಲ್ಲಿ ಕುಡ್ದು ಮಜಾ ಮಾಡ್ದ. ನಂಜಿ ಅವನ ಹತ್ರ ಜಗಳ ಆಡಿ 25000 ರೂಪಾಯಿ ಬ್ಯಾಂಕಲ್ಲಿ ಇಟ್ಳು. ಇನ್ನೂ ಸ್ಕೂಲ್‌ ಬಾಗ್ಲು ತೆಗೆದಿಲ್ಲ. ಅಂಜು ಮನೇಲೇ ಇದ್ಲು. ಈಗೊಂಚೂರು ಮೈ ಕೈ ತುಂಬ್ಕೊಂಡು ಚೆನ್ನಾಗಿ ಕಾಣಿಸ್ತಿದ್ಲು.

ಪರೀಕ್ಷೆ, ಕಾಲೇಜಿನ ಕನವರಿಕೆಯಲ್ಲಿದ್ದ ದೀಪಾ ನಾಗನ್ನ ಒಪ್ಪಿಸಿ ಪರೀಕ್ಷೆ ಬರೆದೇ ಬಿಟ್ಳು. ಆದ್ರೆ ಯಾವ ಕಾರಣಕ್ಕೂ ಕಾಲೇಜಿಗೆ ಕಳ್ಸಲ್ಲ ಅಂತ ಖಡಾಖಂಡಿತವಾಗಿ ಹೇಳ್ಬಿಟ್ಟ ನಾಗ. ತಾನೂ ತನ್ನ ಓರಗೆಯ ಹುಡುಗಿಯರಂತೆ ಕಾಲೇಜಿಗೆ ಹೋಗಬೇಕೆಂಬ ಆಸೆಯಲ್ಲಿ ಕನಸು ಕಾಣುತ್ತಿದ್ದ ದೀಪ ಮಾತ್ರೆ ತಗೊಳೋದನ್ನ ಮರೆತ್ಲು. ಮದ್ವೆಯಾದ ಹೊಸತು ಎಲ್ಲವೂ ಚೆನ್ನಾಗೇ ಇತ್ತು. ನಾಗ ಅವತ್ತು ಮಧ್ಯಾಹ್ನ ಊಟಕ್ಕೆ ಮನೆಗೆ ಬಂದ. ಕೆಲ್ಸ ಮಾಡಿಬಂದ ಸುಸ್ತೋ ಏನೋ ದೀಪಾ... ದೀಪಾ.... ಅಂತ ಜೋರಾಗಿ ಕರೀತಾನೇ, ಊಟಕ್ಕಿಕ್ಕು ಅಂತ ಕೈಕಾಲು ತೊಳ್ಯೋಕೆ ಹೋದ. ಸಾಂಬಾರ್‌ ಸ್ವಲ್ಪ ಕುದೀಬೇಕು... ಬಂದೇ ಅಂತ ತಟ್ಟೆ ಇಡೋದಕ್ಕೆ ಅಡುಗೆ ಮನೆಗೆ ಓಡಿದಳು ದೀಪಾ. ತಟ್ಟೆ ತೆಗೀಬೇಕು ಅನ್ನೋಷ್ಟರಲ್ಲಿ ಒಂಥರಾ ತಲೆ ತಿರುಗಿದ ಹಾಗೆ, ಅವ್ಳಿಗೆ ಗೊತ್ತಾಯ್ತು ತಾನು ಬೀಳ್ತೀನಿ ಅಂತ.... ಕಷ್ಟಪಟ್ಟು ತಡ್ಯೋಕೆ ನೋಡಿದ್ಲು... ಮಾತ್ರೆ ತಗೊಂಡ್ಯಾ??? ಅನ್ನೋ ಅವ್ವನ ಪ್ರಶ್ನೆ  ಕಿವೀಲಿ ಕೇಳ್ತಾ ಇದ್‌ ಹಾಗೇ ಊಹ್ಞೂಂ ಇನ್ನು ಸಾಧ್ಯ ಆಗ್ಲಿಲ್ಲ ಬಿದ್ಲು, ತಟ್ಟೆ ದಢಾರ್‌ ಅಂತ ಶಬ್ದ ಆಯ್ತು, ಓಡಿ ಬಂದ ನಾಗ, ದೀಪಾ ಅವ್ತಾರ ನೋಡಿ ಗಾಬ್ರಿ ಆಗ್ಬಿಟ್ಟ. ಕೈಕಾಲು ಸೆಟೆದುಕೊಂಡು ದೀಪಾ ಬಿದ್ದಿದ್ದಾಳೆ, ಬಾಯಲ್ಲಿ ನೊರೆ, ಅವಳ ಚೂಡಿದಾರವೆಲ್ಲ ಒದ್ದೆ. ಪ್ರಜ್ಞೆ ತಪ್ಪಿದೆ. ಇಂತಹ ಸ್ಥಿತಿಯನ್ನು ಊಹೆಯೇ ಮಾಡಿರದ ನಾಗ ಬೆಚ್ಚಿಬಿದ್ದ. ಇವ್ಳನ್ನೇನಾ ನಾನು ನೋಡಿ ಮದ್ವೆ ಆಗ್ತೀನಿ ಅಂದಿದ್ದು? ಇವ್ಳೇನಾ ನನ್‌ ಹೆಂಡ್ತಿ? ಇಲ್ಲ ಖಂಡಿತ ಇಲ್ಲ. ನಾನು ಇಂತ ಹುಡ್ಗಿ ಜೊತೆ ಸಂಸಾರ ಮಾಡಲ್ಲ ಅಂತ ಅವ್ನ ಮನಸ್ಸು ಕೂಗಿ ಹೇಳ್ತು. ಏನೂ ಮಾಡೋದಕ್ಕೆ ತೋಚ್ದೆ, ಮುಖದ್‌ ಮೇಲೆ ಸ್ವಲ್ಪ ನೀರು ಹಾಕ್ದ. ಒಂದೆರೆಡು ನಿಮಿಷ ಆದ್ಮೇಲೆ ದೀಪಾ ಎದ್ದು ಕೂತ್ಲು. ಒಂದ್ಹತ್ತು ನಿಮಿಷ ಹಂಗೇ ಕೂತಿದ್ಲು. ಆಮೇಲೆ ನಿಧಾನಕ್ಕೆ ಎದ್ದು ಮುಖ ತೊಳ್ಕೊಂಡು ಮಲಗಿಬಿಟ್ಳು. ನಾಗ ಅಪ್ಪ ಅಮ್ಮನ ಹತ್ರ ಗಲಾಟೆ ಮಾಡ್ದ. ನಂಗೆ ಇವ್ಳು ಬೇಡ. ಅವ್ಳನ್ನ ಬಿಡ್ತೀನಿ. ಇಂಥ ಹುಡ್ಗಿ ಜೊತೆ ಖಂಡಿತ ನಾನಿರಲ್ಲ. ಇವ್ಳನ್ನ ಅವಳ ತವರು ಮನೇಗೆ ಕಳ್ಸಿಬಿಡೋಣ ಅಂದ.

ಹೊತ್ತಾರೆನೇ ಎದ್ದು ಹೆಂಗೂ ಮನೆ ಕೆಲ್ಸ ಅಂಜು ಮಾಡ್ತಾಳೆ ನಾನು ಹಟ್ಟೀ ಕೆಲ್ಸ ಮುಗ್ಸಿ, ಹೊಲಕ್ಕೆ ಹೋಯ್ತೀನಿ ಅಂತ ಅನ್ಕೊಳ್ತಾ, ಯಾಕೋ ಇವತ್ತು ಮನ್ಸೇ ಸರಿಯಿಲ್ಲ.ತಿಂಡಿ ಗಿಂಡಿ ಬೇಡ, ರಾಗಿ ಅಂಬಲಿ ಮಾಡಕ್ಕೆ ಅಂಜುಗೆ ಹೇಳ್ತೀನಿ. ಯಾಕೋ ಒಂಥರಾ ಸಂಕ್ಟ. ಹೊಟ್ಟೆಯೆಲ್ಲಾ ಕಲುಸ್ದಂಗೇ, ರಾಗಿ ಅಂಬ್ಲಿ ಕುಡುದ್ರೆ  ಹೊಟ್ಟೆ ತಣ್ಣಗಾಯ್ತದೆ ಅಂತ ಅನ್ಕೊಳ್ತಾ ಕೈ ಕಾಲು ಮುಖ ತೊಳೆದಳು ನಂಜಿ. ದೀಪಾ ಮದ್ವೆ ಆಗಿ 1 ತಿಂಗ್ಳಾಯ್ತು. ಯಾವಾಗ್ಲಾದ್ರೂ ಫೋನ್‌ ಮಾಡ್ತಾಳೆ. ನಾಗ ಚೆನ್ನಾಗಿ ನೋಡ್ಕೊತಾ ಅವ್ನೆ ಅನ್ಸುತ್ತೆ. ಪರೀಕ್ಷೆ ಬರುದ್ಲು ಆದ್ರೆ ಕಾಲೇಜ್‌ ಮೆಟ್ಲು ಹತ್ತಕ್ಕಾಗ್ಲಿಲ್ಲ; ಇರ್ಲಿ, 10ನೇ ಕ್ಲಾಸಾದ್ರೂ  ಓದಿದ್ಲಲ್ಲ ಅವ್ಳ ಹಣೇಲಿ ಅದೇ ಬರ್ದಿತ್ತು ಅನ್ಸುತ್ತೆ. ಹೊಟ್ಟೇಲಿ ಹುಟ್ಟಿದ್‌ ಮಕ್ಳು ಚೆಂದಾಗಿದ್ರೆ ತಾಯಿ ಆದೋಳಿಗೆ ಸಂತೋಷ ಅಂತ ಅನ್ಕೊಳ್ತಾ ಹೊಟ್ಟೆ ಹಿಡಿದುಕೊಂಡೇ ಕೆಲ್ಸಕ್ಕೆ ಶುರುವಿಟ್ಕೊಂಡ್ಲು ನಂಜಿ. ಈ ಸೀನಂಗೆ ಬೆಳಗಾಗೋದು ತಡ. ನಿನ್ನೆ ಬೇರೆ ಚೆನ್ನಾಗೇ ಕುಡ್ದಿದ್ದಾನೆ ಇರ್ಲಿ ಎಬ್ಬಿಸ್ತೀನಿ ಅಂತ ಒಳಗೆ ಹೋಗೋಕೂ, ಗಾಡಿ ಶಬ್ದ ಕೇಳೋಕೂ ಸರಿಯಾಯ್ತು

ಅವ್ವಾ ದೀಪಾ ಬಂದ್ಲು, ಬಾವಾನೂ ಜೊತೆಗೆ ಬಂದವ್ರೆ ಅಂತ ಅಂಜು ಸಡಗರದಿಂದ ಹೇಳ್ತಾ ಇದ್ರೆ, ಸೀನ ತಡಬಡಾಯಿಸಿ ಎದ್ದ, ನಂಜೀನೂ ಮುಂದ್ಗಡೆ ಬಂದ್ಲು. ದೀಪಾ ಸಣ್‌ ಮಕ ಮಾಡ್ಕಂಡು ಒಂದ್‌ ಚೀಲ ಹೊತ್ಕಂಡು ಬಂದ್ಲು. ನಾಗ ಅವ್ಳ ಹಿಂದೆ ಬಂದ. ಇನ್ನೊಂದೆರೆಡು ಗಾಡೀಲಿ, ಅವರ ಅಪ್ಪ ಅಮ್ಮ, ಅಣ್ಣ ಅತ್ಗೆ ಎಲ್ಲಾ ಬಂದ್ರು. ಇದೇನಪ್ಪ ಹಿಂಗೆ ಎಲ್ರೂ ಒಟ್ಗೆ ಬಂದವ್ರೆ ಅಂತ ಆಶ್ಚರ್ಯದಿಂದ ನೋಡ್ತಾ, ಟೀನಾದ್ರೂ ಕಾಯ್ಸಣ ಅಂತ ಒಳಗೆ ಹೋಗ್ಬೇಕು ಅನ್ನೋಷ್ಟರಲ್ಲಿ ನಾಗ ಜೋರಾಗಿ ಮಾತಾಡಿದ. ನೀವೆಲ್ಲಾಸೇರಿ ನಂಗೆ ಮೋಸ ಮಾಡಿ ಇವ್ಳನ್ನ ಕಟ್ಬಿಟ್ರಿ. ಇವ್ಳಿಗೆ ಆ ದರಿದ್ರ ಕಾಯ್ಲೆ ಇರೋ ವಿಚಾರಾನಾ ನನ್ನಿಂದ ಮುಚ್ಚಿಟ್ರಿ. ಮದ್ವೆ ಖರ್ಚು ಹಾಕಿದ್ದೇ ಅಲ್ದೇ 1 ಲಕ್ಷ ಬೇರೆ ನಿಮ್ಗೆ ಕೊಟ್ಟಿದ್ದಾಯ್ತು. ಎಂಥ ಹುಡ್ಗೀನ ಕೊಟ್ರಿ ನಂಗೆ. ನಿನ್ನೆ ಇವ್ಳು ಹೆಂಗ್ ಬಿದ್ಲು ಗೊತ್ತಾ? ಬಾಯಲ್ಲಿ ವಾಂತಿ, ಕೈಕಾಲು ಆ‌ ಕಡೆ ಈ ಕಡೆ. ಎಂಥ ಮೋಸ ಹಾಡು ಹಗಲೇ ಮೋಸ. ನಾನು ಇವ್ಳ ಜೊತೆ ಸಂಸಾರ ಮಾಡಲ್ಲ. ನಂಗೆ ಈ ಹುಡ್ಗಿ ಬೇಡ. ಅಣ್ಣ, ಅಪ್ಪ ಹೇಳಿ ಇವ್ರಿಗೆ ಅಂದ. ನಾಗನ ಅಪ್ಪ, ಸೀನ ನೀನು ಈ ಥರ ಮೋಸ ಮಾಡ್ತ್ಯಾ ಅಂತ ಗೊತ್ತಿರ್ಲಿಲ್ಲ, ಹುಡ್ಗಿ ನೋಡಕ್ಕೆ ಚೆನ್ನಾಗಿದ್ದಾಳೆ ಅಂತ ಮದ್ವೆಗೆ ನಾವೆಲ್ರೂ ಒಪ್ಕೊಂಡ್ವಿ. ಆದ್ರೆ ಈ ಕಾಯ್ಲೆ ಇದೆ ಅಂತ ಯಾಕ್‌ ಹೇಳ್ಲಿಲ್ಲ? ನಿಮ್‌ ಹುಡ್ಗೀನಾ ನಿಮ್‌ ಮನೇಲೇ ಇಟ್ಕೊಂಡು ನಾವು ಕೊಟ್ಟಿದ್‌ 1 ಲಕ್ಷ ವಾಪಸ್‌ ಕೊಟ್ಬಿಡಿ ಅಂತ ಹೇಳ್ದ. ಸೀನ ಮೇಲೆ ಕೆಳ್ಗೆ ನೋಡ್ದ. ಅಯ್ಯೋ ದೇವ್ರೇ! ಒಂದ್‌ ಲಕ್ಷ ಕೊಟ್ಬಿಡಿ ಅಂದ್ರೆ ನಾವೇನ್‌ ದುಡ್ಡಿನ ಗಿಡ ನೆಟ್ಟಿದೀವಾ? ಅಂತ ಹೇಳ್ತಾ ಇದ್ದ..

 ಅಷ್ಟ್‌ ಹೊತ್ತಿಗೆ ನಂಜೀಗೆ ಸಿಟ್ಟು ನೆತ್ತಿಗೇರಿತ್ತು. ಏನು ನಾಗ, ಒಂದ್‌ ತಿಂಗ್ಳು ಸಂಸಾರ ಮಾಡೋಕೆ ನನ್‌ ಮಗ್ಳು ಬೇಕಾಯ್ತಾ?  ನಾವೇನ್ ನಿನ್‌ ಕಾಲಿಗ್‌ ಬಿದ್ದಿದ್ವಾ? ನಂ ಹುಡ್ಗೀನ ಮದ್ವೆ ಮಾಡ್ಕೋ ಅಂತ, ನೀವೇ ತಾನೇ ನನ್‌ ಗಂಡನ್‌ ತಲೆ ಕೆಡ್ಸೀ ಮದ್ವೆ ಮಾಡ್ಕೊಡಿ ಅಂತ ಗ್ವಾಗರ್ದಿದ್ದು?  ಅಷ್ಟಕ್ಕೂ ಅವ್ಳಿಗಿರೋ ಕಾಯ್ಲೆ ವಾಸಿಯಾಗ್ದೇ ಇರೋ ಕಾಯ್ಲೆ ಏನಲ್ಲ. ಇನ್ನೊಂದ್‌ ಆರ್‌ ತಿಂಗ್ಳು ಮಾತ್ರೆ ತಗೊಂಡ್ರೆ ಸಾಕು ಅಂದವ್ರೆ ಡಾಕ್ಟ್ರು . ಒಂದ್‌ ಸಲ ಬಿದ್ಲು ಅಂತ ಒಂದ್‌ ತಿಂಗ್ಳು ಸಂಸಾರ ಮಾಡಿದ್‌ ಹುಡ್ಗೀನೇ ಬಿಡ್ತೀನಿ ಅಂತ್ಯಲ್ಲ ಇದೇನಾ ನೀನ್‌ ಕಲ್ತಿರೋ ಬುದ್ಧಿ?? ಎಲ್ಲೋ ಒಂದೆರ್ಡ್‌ ದಿನ ಮಾತ್ರೆ ತಗೊಂಡಿಲ್ಲ ಅನ್ಸುತ್ತೆ, ಅದ್ಕೇ ಹಂಗಾಗಿದೆ.  ಅಷ್ಟಕ್ಕೇ ಹುಡ್ಗೀನ ಬಿಟ್ಟು, ದುಡ್‌ ಕೊಡಿ ಅಂತ್ಯಲ್ಲ ಇದ್ಯಾವ್‌ ನ್ಯಾಯ? ನನ್‌ ಮಗ್ಳೇನು ಅಂಗಡೀಲಿ ಸಿಗೋ ಬಟ್ಟೆ ಥರಾನಾ? ಬ್ಯಾಡಾ ಅಂದ ತಕ್ಷಣ ವಾಪಸ್‌ ಕೊಡಕ್ಕ? ಅಂತ ಖಾರವಾಗಿ ಪ್ರಶ್ನೆ ಮಾಡಿದ್ಲು.

ಅದೆಲ್ಲ ಗೊತ್ತಿಲ್ಲ. ನಿಮ್‌ ಹುಡ್ಗಿ ನಮ್ಗೆ ಬೇಡ. ಕಾಯ್ಲೆ ವಿಷ್ಯ ಮುಚ್ಚಿಟ್ಟಿರೋದು ನಿಮ್‌ ತಪ್ಪು. ನಮ್‌ ದುಡ್‌ ನಮ್ಗೆ ಕೊಟ್ಬಿಡಿ. ನಿಮ್ ಹುಡ್ಗೀನ ನೀವೇ ಮಡಿಕ್ಕಳಿ. ಅದೂ ಆಗಲ್ಲ ಅಂದ್ರೆ ಇಲ್ಲೇ ಇದ್ದಾಳಲ್ಲ ಅಂಜು ಅವ್ಳನ್ನ ನಮ್‌ ಮನೇಗೆ ಕಳ್ಸ್ಕೊಡಿ‌ ಅವ್ಳನ್ನೇ ನಂ ನಾಗಂಗೆ ತಂದ್ಕೊಂಡು  ಮನೆ ತುಂಬುಸ್ಕೊತೀವಿ ಅಂತ ನಾಗನ ಅಪ್ಪ ಹೇಳ್ತಾ ಇದ್‌ ಹಾಗೇನೇ, ಏಯ್‌ ಏನನ್ಕೊಂಡಿದ್ದೀರೋ ನೀವೆಲ್ಲಾ? ಹೆಣ್‌ ಮಕ್ಳು ಅಂದ್ರೆ ಪೇಟೇಲಿ ದುಡ್ಡಿಗೆ  ಸಿಗೋ ವಸ್ತು ಅಂತನಾ? ಅಥ್ವಾ  ನಿಮ್ಮ ತೀಟೆ ತೀರ್ಸೋಕ್ಕೆ ಇರೋ ಆಳ್ಗಳು ಅಂತಾನಾ?? ಅಕ್ಕನ್ನ ಮದ್ವೆ ಮಾಡ್ಕೊಂಡ; ಕಾಯ್ಲೆ ಇದೆ ಅಂತ ಅವ್ಳನ್ನ ಬಿಟ್ಟು ತಂಗೀನ ಮಾಡ್ಕೊತಾನಂತೆ ಥೂ ನಿಮ್ಮ ಜನ್ಮಕ್ಕಿಷ್ಟು ಬೆಂಕಿ ಹಾಕ! ನಿಮ್ಮ ಬಾಯಿಗೆ ಮಣ್ಹಾಕ! ನಿಮ್ಗೆ ಹಾವು ಚೇಳು ಕಡಿಯ! ಅವ್ಳಿಗೂ ಏನಾದ್ರೂ ಕಾಯ್ಲೆ ಇದೆ ಅಂದ್ರೆ ಅವ್ಳನ್ನೂ ಬಿಡ್ತೀಯೇನೋ ನಾಯಿ? ಬೇಕೂ ಅಂದಾಗ ಕಟ್ಕೊಂಡು ಬೇಡ ಅಂದ್‌ ತಕ್ಷಣ ಬಿಡೋಕೆ ನನ್‌ ಮಗ್ಳೇನೂ ಬಿಟ್ಟಿ ಬಿದ್ದಿಲ್ಲ. ಅಪ್ಪ ಅಮ್ಮ ಅಂತ ನಾವಿನ್ನೂ ಬದ್ಕಿದ್ದೀವಿ. ಮದ್ವೆ ಮಾಡ್ಕೊಬೇಕಾದ್ರೆ ಗ್ಯಾನ ಇರ್ಬೇಕು. ಬಡ್ಕೊಂಡೆ ಇಷ್ಟ್‌ ಬೇಗ ಅವ್ಳಿಗೆ ಮದ್ವೆ ಮಾಡ್ಬೇಡ ಅಂತ ಕೇಳಿದ್ಯಾ ನನ್‌ ಮಾತ್ನ? ನಂಜಿಯ ಸಿಟ್ಟು ಗಂಡನ ಕಡೆ ತಿರುಗಿತು. ಅಂಜೂನ ಮದ್ವೆ ಮಾಡ್ಕೊಡು ಅನ್ನೋ ಮಾತನ್ನ ಕೇಳಿ ಸೀನನಿಗೂ ಒಳಗಿಂದ್ಲೇ ಸಿಟ್ಟು ಕುದ್ದು ಬಂತು. ಸೀನ ಕುಡಿದ್ರೂ, ಬೈಯ್ದ್ರೂ  ಕಟ್ಕೊಂಡ ಹೆಂಡ್ತಿಗೆ ನಿಷ್ಠನಾಗಿದ್ದೋನು. ಏಯ್‌ ನಿಮ್ಮ ಕೆಟ್ಟ ಕಣ್ಣು ನನ್‌ ಎರಡ್ನೇ ಮಗಳ್‌ ಮೇಲೂ ಬಿತ್ತೇನ್ರೋ? ನಾನು ಇನ್ನೊಂದು ವರ್ಷ ಕಷ್ಟಪಟ್ಟು ದುಡ್ದಾದ್ರೂ ನಿಮ್‌ ದುಡ್‌ ವಾಪಸ್‌ ಕೊಡ್ತೀನಿ ಆದ್ರೆ ನನ್‌ ಮಕ್ಳನ್ನ ಕಳ್ಸಲ್ಲ ಕಣ್ರೋ ಯಾವ್‌ ಕಾರ್ಣಕ್ಕೂ ನಿಮ್‌ ಮನೇಗೆ ಕಳ್ಸಲ್ಲ. ಎಲ್ಲದನ್ನೂ ದುಡ್ಡಲ್ಲೇ ಅಳ್ತೆ ಮಾಡೋರ್‌ ನೀವು ದೊಡ್ಡ ಮನುಷ್ಯರಪ್ಪಾ. ಹೆಣ್‌ ಹೆತ್ತೋರ್‌ ಸಂಕ್ಟ ನಿಮ್ಗೇನ್‌ ಅರ್ಥ ಆಗ್ಬೇಕು? ಬೇಡ ಎಷ್ಟಾದ್ರೂ ನಾವ್‌ ಹೆತ್ತ ಮಕ್ಳು. ಕೆಟ್‌ ಮನಸ್ಸಿನ ಜನ್ರ ಮಧ್ಯ ಅವ್ಳು ಇರೋದೇ ಬೇಡ. ಹೋಗ್ರೋ ಹೋಗಿ, ಇನ್ನೊಂದ್ಸಲ ನಂಗೆ ಮುಖ ತೋರಿಸ್ಬೇಡಿ. ಅಕ್ಕ ಬೇಡ ತಂಗೀನ್‌ ಕೊಡು ಅಂತ ಅವ್ಳ ಬಾಳನ್ನೂ ಹಾಳ್‌ ಮಾಡೋಕೆ ಬಂದ್‌ಬಿಟ್ಟ ಅಂತ ಮೂಲೆಯಲ್ಲಿದ್ದ ಕತ್ತಿ ತಗೊಂಡ ಸೀನ.

ಇವರಿಬ್ಬರ ರೌದ್ರಾವತಾರ ನೋಡಿ ನಾಗ ಮತ್ತು ಮನೆಯವರು ಪರಾರಿಯಾದ್ರು. ಅಂಜು, ದೀಪಾ, ನಂಜಿ, ಸೀನ ನಾಲ್ಕು ಜನ ತಬ್ಬಿಕೊಂಡು ಒಂದೇ ಸಮನೆ ಅಳಲು ಪ್ರಾರಂಭಿಸಿದರು. ಅವ್ವಾ ನಾನ್‌ ಆ ಮನೆಗೆ ಹೋಗಲ್ಲ ಅವ್ವಾ ಇಲ್ಲೇ ಇರ್ತೀನಿ. ಮಾತ್ರೆ ತಗೋತೀನಿ ಅವ್ವಾ. ನನ್ನನ್‌ ಕಾಲೇಜಿಗೆ ಕಳ್ಸವ್ವಾ. ಚೆನ್ನಾಗಿ ಓದ್ತೀನಿ. ಅಂಜುನೂ ಓದಿಸ್ತೀನಿ. ನನ್ನನ್‌ ಮಾತ್ರ ಆ ಮನೆಗೆ ಕಳಿಸ್ಬೇಡ ಅವ್ವಾ. ಅಪ್ಪಾ ನನ್‌ ಮೇಲೆ ನಂಬಿಕೆ ಇಟ್ಕೋ ಅಪ್ಪಾ. ನಾನ್‌ ಖಂಡಿತ ಚೆನ್ನಾಗಿ ಓದ್ತೀನಿ. ಅಂತ  ದೀಪಾ ಒಂದೇ ಸಮನೆ ಬಿಕ್ಕಿದಳು. ಸೀನನಿಗೆ ಮಾತೇ ಹೊರಡಲಿಲ್ಲ. ನಂಜೀ ಅಳುತ್ತಲೇ ಇದ್ದಳು. ಅವಳ ಕೈ ಮಕ್ಕಳ ತಲೆಯನ್ನು ನೇವರಿಸುತ್ತಿತ್ತು. ಆದದ್ದೆಲ್ಲ ಒಂದ್‌ ಕೆಟ್‌ ಕನ್ಸು ಅಂತ ಮರ್ತುಬಿಡೋಣ. ನನ್‌ ಕನ್ಸ್‌ ನನ್ಸ್‌ ಮಾಡ್ಬೇಕು ಅಂತ ಓದ್ತೀನಿ ಅಂತಿದ್ಯಾ ದೀಪಾ? ಓದಿಸ್ತೀನಿ ಎಷ್ಟೇ ಕಷ್ಟ ಆದ್ರೂ ಓದಿಸ್ತೀನಿ ನನ್ನವ್ವಾ. ನೀನು ಆ ಮನೇಲಿ ಪಟ್ಟ ಕಷ್ಟ ಸಾಕು. ಇನ್ನೂ ಬಾಳಿ ಬದುಕಬೇಕಾದೋಳು ನೀನು. ಇನ್ನೊಂದ್‌ ಆರೇಳ್‌ ತಿಂಗ್ಳು ಸರ್ಯಾಗಿ ಔಷ್ದಿ ತಗೊಂಬಿಡವ್ವ. ನೀನು ಪೂರ್ತಿ ಹುಷಾರಾಗ್ಬಿಡ್ತ್ಯ. ಏಯ್ ಸೀನ ಇನ್ನೊಂದ್‌ ಸಲ ನೀನು ದೀಪಂಗಾಗ್ಲೀ, ಅಂಜುಗಾಗ್ಲೀ ಮದ್ವೆ ವಿಷ್ಯ ಎತ್ತಿದ್ರೆ, ನನ್‌ ಸಾವ್‌ ನೋಡ್ಬೇಕಾಗುತ್ತೆ ಅಂತ ಹೇಳ್ತಾ ಓದಿ ಮಕ್ಳೇ ಅದೊಂದೇ ನಮ್ಗೆ ಈ ಜೀವ್ನ ಎದುರಿಸೋಕೆ ಧೈರ್ಯ ಕೊಡೋದು ಅಂತ ಹೇಳ್ತಾ ಗಟ್ಟಿ ನಿರ್ಧಾರದೊಂದಿಗೆ ಮೇಲೆದ್ದಳು. ರಾಗಿ ಅಂಬಲಿ ಕುಡಿಯದೆಯೇ ನಂಜಿಯ ಹೊಟ್ಟೆ ಈಗ ತಣ್ಣಗಾಗಿತ್ತು. ಕೈತೋಟದಿಂದ ಮಲ್ಲಿಗೆ ಹೂಗಳ ಪರಿಮಳ ಗಾಳಿಯಲ್ಲಿ ತೇಲಿ ಬಂತು. ಅತ್ತೂ ಅತ್ತೂ ಮುಖವನ್ನು ಬಾಡಿಸಿಕೊಂಡಿದ್ದ ಮಕ್ಕಳಿಬ್ರೂ ಅಮ್ಮನ ಮುಖ ನೋಡಿ ತಮ್ಮ ಮುಖವನ್ನೂ ಅರಳಿಸಿಕೊಂಡರು.



ಗುರುವಾರ, ಜೂನ್ 17, 2021

ಮತ್ತೆ ಮಗುವಾಗಿಬಿಡು ಕಂದ!

 ಅಮ್ಮಾ.. ತಿಂಡಿ ರೆಡಿ ಇದ್ಯಾ? 9.30 ಗೆ ಮೀಟಿಂಗ್‌ ಇದೆ, ಆಗ್ಲೇ 9.10 ಆಯ್ತು ಅಂತ ಕೇಳ್ತಾ ಅಡುಗೆ ಮನೆಗೆ ಬಂದ, ಅಭಿ.  ಈಗ ತಾನೇ ಕೆಲಸಕ್ಕೆ ಸೇರ್ಕೊಂಡು, ಮನೆಯಿಂದಲೇ ಕೆಲಸ ಮಾಡ್ತಾ ಇದ್ದ ಅಭೀಗೆ ಈಗ ಶುರುವಾಗಲಿದ್ದ ಮೀಟಿಂಗ್‌ ಟೆನ್ಷನ್‌. ಆಯ್ತು ಕಂದಾ ಇನ್ನೆರೆಡೇ ನಿಮಿಷ ಚಟ್ನಿಗೆ ಒಂದು ಒಗ್ಗರಣೆ ಕೊಟ್ಟುಬಿಟ್ರೆ ತಿಂಡಿ ರೆಡಿ ಅಂತ ಒಗ್ಗರಣೆಯನ್ನು ಚಟ್ನಿಗೆ ಸುರಿದಳು ರೇಖಾ. ಅಲ್ಲಮ್ಮಾ ಲೇಟ್‌ ಆಗ್ತಿದೆ ಅಂತ ಹೇಳ್ತಾ ಇದ್ದೀನಿ, ಇನ್ನೂ 2 ನಿಮಿಷ ಅಂತ್ಯಲ್ಲ ಅಂತ ಗೊಣಗುತ್ತಲೇ ತಟ್ಟೆ ತಗೊಂಡು, ತಿಂಡಿ ತಿನ್ತಾನೇ ಲ್ಯಾಪ್‌ ಟಾಪ್ ತೆರೆಯಲು, ರೂಮಿಗೆ ಓಡಿದ ಅಭಿ. ತನಗಿಂತ ಎತ್ತರವಾಗಿ ಬೆಳೆದುನಿಂತ ಮಗ ಹೋದದ್ದನ್ನೇ ನೋಡುತ್ತಾ ನಿಂತಳು ರೇಖಾ. ತಕ್ಷಣ ಆಕೆಗೆ ಅಮ್ಮಾ ಚಪಾತಿ ಚೂರು ಮಾಡಿ ತಟ್ಟೆಗೆ ಹಾಕಿದ್ದೆಲ್ಲ ತಿಂದಿದ್ದೀನಿ, ನೋಡಮ್ಮಾ ನೀನು ಬಟ್ಟೆ ಒಗೆದುಕೊಂಡು ಬರುವಷ್ಟರಲ್ಲಿ ತಟ್ಟೆ ಖಾಲಿ ಅಂತ ಪುಟ್ಟ ಪುಟ್ಟ ಹಲ್ಲುಗಳನ್ನು ತೋರಿಸುತ್ತಾ ಹೇಳುತ್ತಿದ್ದ ಪುಟ್ಟ ಅಭಿ ನೆನಪಾದ.

ಮಗನ ಬಾಲ್ಯದ ತುಂಟಾಟಗಳು ಎಷ್ಟು ಚೆನ್ನಾಗಿದ್ದವು; ಅದರಲ್ಲೂ 3 ವರ್ಷದೊಳಗಿನ ಆಟಗಳಂತೂ ಮರೆಯಲಸಾಧ್ಯ.7 ತಿಂಗಳ ಮಗುವಾಗಿದ್ದಾಗ ಸಂಜೆ 5.30 ಆಗುವುದು ಅದು ಹೇಗೆ ಗೊತ್ತಾಗುತ್ತಿತ್ತೋ?? ಅಪ್ಪ ಬರುತ್ತಾರೆ ಎನ್ನುವ ಅರಿವು ಅದು ಹೇಗೆ ಇರುತ್ತಿತ್ತೋ? ಆ ಸಮಯಕ್ಕೆ ಸರಿಯಾಗಿ ಹೊಸ್ತಿಲ ಬಳಿಯೇ ಆಟ, ಅಪ್ಪನ ಮುಖ ನೋಡಿದಾಗ ಬೊಚ್ಚು ಬಾಯಿಯ ನಗು, ಇವರಿಗೆ ಕೈಕಾಲು ತೊಳೆಯುವ ಪುರುಸೊತ್ತನ್ನೂ ಕೊಡುತ್ತಿರಲಿಲ್ಲ; ಆದರೂ ಬೇಗನೇ ಕೈಕಾಲು ಮುಖ ತೊಳೆದುಕೊಂಡು ಬಂದು, ಮಗನನ್ನು ಎತ್ತಿಕೊಂಡು ಆಟವಾಡಿಸಿದ ಮೇಲೆಯೇ ಉಳಿದ ಕೆಲಸ. ರೇಖಾ ಎರಡೂ ರೂಮಿನ ಕಡೆ ದೃಷ್ಟಿ ಹಾಯಿಸುತ್ತಾ ಅಂದುಕೊಂಡಳು, ಈಗ ಅಪ್ಪ ಒಂದು ಲ್ಯಾಪ್‌ ಟಾಪ್‌, ಮಗ ಒಂದು ಲ್ಯಾಪ್ ಟಾಪ್ ಹಿಡಿದು ಕೂರಲೇಬೇಕು. ಇಬ್ಬರಿಗೂ ಕೆಲಸದ ಒತ್ತಡ; ಇಬ್ಬರ ಕೆಲಸವೂ ಒಟ್ಟಿಗೇ ಮುಗಿಯಿತು ಎನ್ನುವಂತೆ ಇಲ್ಲ; ವರ್ಕ್‌ ಫ್ರಮ್‌ ಹೋಮ್‌ ಆಗಿದ್ದರಿಂದ ಕೆಲಸ ಮುಗಿಸಿ ಆಯ್ತಪ್ಪಾ ಇವತ್ತಿಗೆ ಅನ್ನುವ ಹಾಗಿಲ್ಲ; ಇಬ್ಬರಿಗೂ ಅವರವರದ್ದೇ ಆದ ಟಾರ್ಗೆಟ್...‌

ರೇಖಾಳಿಗೆ ಪುಟ್ಟ ಅಭಿಯ ಒಂದೊಂದೇ ನೆನಪುಗಳು ಸುರುಳಿ ಸುರುಳಿಯಾಗಿ, ಸಿನಿಮಾದ ರೀಲಿನಂತೆ  ಹೊರಹೊಮ್ಮತೊಡಗಿದವು. ರೇಖಾಳ ಸ್ವಗತ ಆರಂಭವಾಯಿತು.

ಇನ್ನೂ ನಡಿಗೆ ಕಲಿತು ಪುಟ್ಟ ಪುಟ್ಟ ಹೆಜ್ಜೆ ಇಡುವ ಒಂದೂವರೆ ಎರಡು ವರ್ಷದ ಮಗುವಾಗಿದ್ದಾಗ ಹೊರಗೆ ಹೋದಾಗಲೆಲ್ಲ ಕರೆದುಕೊಂಡು ಹೋಗಬೇಕು; ಹತ್ತಿರದ ಅಂಗಡಿಗಳಿಗೆ ನಡೆದುಕೊಂಡೇ ಹೋಗುತ್ತಿದ್ದ ಕಾಲವದು; ಮಗನನ್ನು ಎತ್ತಿಕೊಳ್ಳೋಕೆ ದೊಡ್ಡೋನು; ನಡೆಸಲು ಸಣ್ಣೋನು ಎನ್ನುವ ವಯಸ್ಸು. ನಡೆಯುವಾಗಲೆಲ್ಲಾ, ಅದೇನು? ಇದೇನು? ಅಂತ ಸುತ್ತಮುತ್ತಲೂ ನೋಡುತ್ತಾ ಬಾಲಭಾಷೆಯಲ್ಲಿ ಕೇಳುವ ಕುತೂಹಲಕಾರಿ ಪ್ರಶ್ನೆಗಳು. ಅದಕ್ಕೆಲ್ಲ ಸಮಾಧಾನಕರ ಉತ್ತರವನ್ನು ಕೊಡುತ್ತಾ ಅಂಗಡಿಗೆ ಹೋಗಿ ಬೇಕಾದ  ತರಕಾರಿ, ಸಾಮಾನುಗಳನ್ನು ಕೊಂಡು ವಾಪಸ್‌ ಬರುವಾಗ ಅಮ್ಮಾ ಎತ್ತಿಕೋ ಅಂತ ಸಣ್ಣ ಹಠ.  ಚೀಲವನ್ನು ಹೊತ್ತುಕೊಂಡು, ಮಗನನ್ನು ಎತ್ತಿಕೊಂಡು ಮನೆಗೆ ಬಂದು ಬೆವರು ಒರೆಸಿಕೊಂಡದ್ದು ಈಗಲೇನೋ ಅನ್ನುವ ಹಾಗಿದೆ. ಆದರೆ ಈಗ ಎಲ್ಲಿಗಾದರೂ ಒಟ್ಟಿಗೆ ಹೋಗುವಾಗ, ಎರಡು ಮೂರು ಬ್ಯಾಗ್‌ ಗಳನ್ನು ಎತ್ತಿಕೊಂಡು, ಅವನು ಮುಂದೆ ನಡೆಯುತ್ತಾ ಸಾಗಿದರೆ ಅವನ ವೇಗಕ್ಕೆ ಹೆಜ್ಜೆ ಹಾಕಲು ನಾನು ಬೆವರು ಒರೆಸಿಕೊಳ್ಳಬೇಕು.... ಇದನ್ನು ಯೋಚಿಸುತ್ತಿದ್ದ ರೇಖಾಳಿಗೆ ನಿಜವಾಗಲೂ ಬೆವರು ಒರೆಸಿಕೊಳ್ಳುವಂತಾಯಿತು.

ಮಾತು ಕಲಿಯುತ್ತಾ ಎರಡು ಅಕ್ಷರದ ಮಾತುಗಳನ್ನಾಡುತ್ತಾ, ಹೇಳಿಕೊಟ್ಟ ಚಿಕ್ಕ ಚಿಕ್ಕ ಪದ್ಯಗಳನ್ನು ತೊದಲು ಮಾತಿನಲ್ಲಿ ರಾಗವಾಗಿ ಹೇಳುತ್ತಾ,  ತನ್ನದೇ ಆದ ಭಾಷೆಯನ್ನು ಸತತವಾಗಿ ಮಾತನಾಡುತ್ತಿದ್ದ ಅಭಿ ನೆನಪಾದ.  ಅದು ಕನ್ನಡವೋ, ಇಂಗ್ಲಿಷೋ, ಜಪಾನೀಸೋ, ಚೈನೀಸೋ??? ಅಲ್ಲ ಅಲ್ಲ ಅದು ಅಭಿಯಭಾಷೆ; ಹಾಲಿನವನು ಮಗುವಿನ ಮಾತನ್ನು ಕೇಳಿಸಿಕೊಂಡು,  ಮೇಡಂ, ಇದನ್ನು ರೆಕಾರ್ಡ್‌ ಮಾಡಿಡಿ. ಮತ್ತೆ ನಿಮಗೆ ಸಿಗುವುದಿಲ್ಲ ಎನ್ನುತ್ತಿದ್ದ. ಹರೇ ರಾಮ, ಹರೇ ರಾಮ, ರಾಮ ರಾಮ ಹರೇ, ಹರೇ, ಅಂತ ಹೇಳ್ಕೊಟ್ರೆ, ಹಯೇ ಮಾಮ, ಹಯೇ ಮಾಮ ಅಂತ ಹೇಳ್ತಾ ನನ್ನ ಮಾವಂದಿರ ಹೆಸರನ್ನೆಲ್ಲ ಕರೆದುಬಿಟ್ಟಿದ್ದ... ಕೆಲಸ ಮಾಡಿ ಸಾಕಾಗಿರುತ್ತಿದ್ದ  ನನಗೆ ಒಮ್ಮೊಮ್ಮೆ ಈ ಮಾತುಗಳು ತಲೆ ಚಿಟ್ಟು ಹಿಡಿಸುತ್ತಿದ್ದವು. ಅಭೀ  ಮಾತು ನಿಲ್ಲಿಸೋ ಅಂದಷ್ಟೂ ಅವನ ಮಾತು ಜಾಸ್ತಿಯಾಗುತ್ತಿತ್ತು... ಈಗ ಮಾತು ಆಡಲೇ ಸಮಯವಿರುವುದಿಲ್ಲ ಅವನಿಗೆ; ಏನೇ ಕೇಳಿದರೂ ಕ್ಲುಪ್ತವಾದ ಮತ್ತು ಚುಟುಕಾದ ಉತ್ತರ; ತಲೆಯಲ್ಲಿ ಅವನದ್ದೇ ಆದ ಯೋಚನೆಗಳಿರುತ್ತವಲ್ಲ....

 ಊಟ ಮಾಡಿಸುವಾಗ ಅಭಿಗೆ ಕಥೆಗಳನ್ನು ಹೇಳಬೇಕಿತ್ತು; ನನಗೋ ಕಥೆಗಳನ್ನು ಹೆಣೆದೂ ಹೆಣೆದೂ ಸಾಕಾಗುತ್ತಿತ್ತು.ಒಂದೊಂದು ಸಲವಂತೂ  ತುತ್ತು ಬಾಯಿಗಿಟ್ಟಾಗ ಪುರ್.....‌ ಅಂತ ಆಟವಾಡುತ್ತಾ ಮನೆ ತುಂಬಾ ಅನ್ನದ ಅಗುಳುಗಳನ್ನು ಹರಡಿಬಿಡುತ್ತಿದ್ದ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗುತ್ತಿತ್ತು ನನ್ನ ಸ್ಥಿತಿ.  ಆದಷ್ಟು ಬೇಗ ಇವನು ಊಟ ಮಾಡುವುದನ್ನು ಕಲಿಯಲಪ್ಪಾ ಅಂತ ಮನಸ್ಸು ಹಂಬಲಿಸುತ್ತಿತ್ತು. ಅಭಿ ಮೊದಲು ಊಟ ಮಾಡಲು ಕಲಿತಾಗ ನನ್ನ ಸಂತೋಷಕ್ಕೆ ಕೊನೆಯೇ ಇರಲಿಲ್ಲ; ಇನ್ನು ಮಗನಿಗೆ ಊಟ ಮಾಡಿಸುವ ಕೆಲಸ ತಪ್ಪಿತು ಅಂತ. ತಟ್ಟೆಯಲ್ಲಿ ಒಂದು ಕಡೆ ಸಾಂಬಾರು ಮತ್ತು ಅನ್ನ ಇನ್ನೊಂದು ಕಡೆ ಮೊಸರನ್ನ ಹಾಕಿ, ಕಲೆಸಿ ಸಣ್ಣ ಸಣ್ಣ ತುತ್ತುಗಳನ್ನು ಮಾಡಿಟ್ಟರೆ ಬೇಗ ಊಟ ಮಾಡಿ ಬಿಡುತ್ತಿದ್ದ; ಎಲ್ಲರೂ ರೇಖಾ, ನಿನ್ನ ಮಗ ಬಿಡು, ಒಂದು ದಿನವೂ ಊಟಕ್ಕೆ ತೊಂದರೆ ಕೊಟ್ಟವನಲ್ಲ ಅಂತ  ಹೇಳುವಾಗ ಏನೋ ಹೆಮ್ಮೆ; ಆದರೂ ನನ್ನ ಸ್ನೇಹಿತೆಯೊಬ್ಬರು, ಮಗು ಊಟ ಮಾಡೋದು, ಕಲೀತು ಅಂತ ಊಟ ಮಾಡ್ಸೋದನ್ನು ಬಿಡ್ಬೇಡ ರೇಖಾ, ಯಾಕೇಂದ್ರೆ ಅವರು ದೊಡ್ಡವರಾದ ಮೇಲೆ ಊಟ ಮಾಡ್ಸೋಕಾಗಲ್ಲ ಅಂತ ಹೇಳಿದ್ದು ಈಗ ಅನ್ನುವ ಹಾಗಿದೆ. ಆದರೀಗ ಹಸಿವಾಗಿದೆಯೋ ಇಲ್ಲವೋ ಇರುವ ಟೈಮಿನಲ್ಲಿಊಟ ಮಾಡಿಬಿಡಬೇಕು. ಇಲ್ಲವಾದರೆ ಮತ್ತೆ ಕೆಲಸದ ಒತ್ತಡ.  ಅವಸರದಲ್ಲಿ ಅವನು ಊಟ ಮಾಡುವುದನ್ನು ನೋಡುವಾಗ, ಮತ್ತೆ ಅವನಿಗೆ ಕಥೆ ಹೇಳುತ್ತಾ ಊಟ ಮಾಡಿಸಬೇಕು ಅನಿಸುವುದು ಸುಳ್ಳಲ್ಲ. 

ಇನ್ನು ಮೊದಲ ಬಾರಿಗೆ ಸ್ಕೂಲಿಗೆ ಹೋದ ಸಂಭ್ರಮವನ್ನು ಮರೆಯಲಾದೀತೇ? ಮನೆಯಿಂದ ಜೈಲಿಗೆ ಕಳಿಸುತ್ತಿರುವೆನೋ ಅನ್ನುವ ಭಾವನೆಯೊಂದಿಗೆ, ಅವನಿಗಿಂತ ಹೆಚ್ಚಾಗಿ ನಾನು ಆತಂಕಕ್ಕೊಳಗಾಗಿ ಅವನನ್ನು ಸ್ಕೂಲಿಗೆ ಕರೆದುಕೊಂಡು ಹೊರಟಿದ್ದೆ. ಅಲ್ಲಿ ಎಲ್ಲಾ ಮಕ್ಕಳೂ ಅಮ್ಮಂದಿರು ಬಿಟ್ಟು ಹೋಗುವುದನ್ನು ನೋಡುತ್ತಾ ಅಳುತ್ತಿರುವಾಗ, ಅಭಿಯೂ ಇನ್ನೇನು ಅಳಬೇಕು ಅನ್ನುವಷ್ಟರಲ್ಲಿ ಪುಟ್ಟಾ ಇದು ಸ್ಕೂಲು, ಅಳಬಾರದು, ಹೊಸ ಹೊಸ ಕಥೆ ಹೇಳುತ್ತಾರೆ, ಪದ್ಯ ಹೇಳಿಕೊಡುತ್ತಾರೆ; ಆಟ ಆಡಿಸುತ್ತಾರೆ ಅಂತ ಮನೆಯಲ್ಲಿ ಹೇಳಿದ್ದನ್ನೇ ಪುನರಾವರ್ತಿಸಿ ಬಹು ಕಷ್ಟದಿಂದ ಮಗನನ್ನು ಬಿಟ್ಟು ಹಿಂತಿರುಗಿ ನೋಡದೇ ಮನೆಗೆ ಬಂದಾಗಿತ್ತು. ಪ್ರತಿದಿನ ಅವನನ್ನು ಸ್ಕೂಲಿಗೆ ಬಿಟ್ಟು, ಆ ಪುಟ್ಟ ಮಕ್ಕಳು ಸಾಲಿನಲ್ಲಿ ನಿಂತು ನಾಡಗೀತೆ, ರಾಷ್ಟ್ರಗೀತೆ ಹಾಡುವುದನ್ನು ನೋಡುತ್ತಾ ನಿಲ್ಲುತ್ತಿದ್ದ ಪರಿಪಾಠ ಮನದಲ್ಲಿ ಅಚ್ಚಹಸಿರಾಗಿದೆ. ಮಕ್ಕಳು ಆದಷ್ಟು ಬೇಗ ದೊಡ್ಡವರಾಗಿ ಅವರಾಗಿ ಸೈಕಲ್‌ ತೆಗೆದುಕೊಂಡು ಹೋಗುವಂತಾಗಲಪ್ಪ  ಸ್ಕೂಲಿಗೆ ಬಿಡುವುದು, ಕರೆದುಕೊಂಡು ಬರುವುದು; ಈ ಕೆಲಸಗಳೆಲ್ಲ ಕಡಿಮೆಯಾಗುತ್ತವೆ  ಅಂತ ಎಷ್ಟೋ ಬಾರಿ ಅನಿಸಿತ್ತು. ಈಗ ಅವನನ್ನು ಕರೆದುಕೊಂಡು ಹೋಗಲು ಬರಲು ನಾನು ಬೇಕೇ ಆಗಿಲ್ಲ. ನಾನು ಎಲ್ಲಾದರೂ ಹೋಗಬೇಕೆಂದರೆ, ಅಮ್ಮಾ ಇವತ್ತು ಬಿಡುವಾಗಿದ್ದೇನೆ, ನಾನೇ ಬಿಟ್ಟು ಬರುತ್ತೇನೆ ಅಂತ ಹೊರಡುತ್ತಾನೆ! 

ಆಟ, ಆಟ, ಆಟ. ಇಡೀ ದಿನ ಬೇಕಾದರೆ ಆಟವಾಡುತ್ತಲೇ,  ಓಡುತ್ತಲೇ ಕಾಲಕಳೆಯುತ್ತಿದ್ದ ಅಭಿ. ಅವನ ಆಟದ ಹುಚ್ಚು ಹೇಗಿತ್ತೆಂದರೆ, ಆಟವಾಡಲು ಯಾರೂ ಸಿಗಲಿಲ್ಲವೆಂದರೆ, ನಾನಾದರೂ ಹೋಗಿ ಅವನ ಜೊತೆ ಆಡಲೇಬೇಕಿತ್ತು. ಇಲ್ಲವಾದಲ್ಲಿ ಅವನಿಗೆ ಅಳುವೇ ಬಂದುಬಿಡುತ್ತಿತ್ತು. ಅವನನ್ನು ಹಿಡಿದು ಕೂರಿಸಿ ಏನಾದರೂ ಬರೆಸಬೇಕು, ಓದಿಸಬೇಕು ಎಂದರೆ ಹರಸಾಹಸ ಮಾಡಬೇಕಾಗುತ್ತಿತ್ತು. ಒಂದು ನಿಮಿಷವೂ ಕೂತಲ್ಲಿ ಕೂರುತ್ತಿರಲಿಲ್ಲ; ಎಲ್ಲರನ್ನೂ ಸುಮ್ಮನೇ ಕೂರಿಸಿ ಇನ್ನೇನು ಪಾಠವನ್ನು ಶುರು ಮಾಡಬೇಕು ಎನ್ನುವಷ್ಟರಲ್ಲಿ ಅಭಿ ಎದ್ದು ಮಕ್ಕಳನ್ನೆಲ್ಲ ನಗಿಸಿಬಿಡುತ್ತಾನೆ; ಮತ್ತೆ ಎಲ್ಲರನ್ನೂ ತಹಬಂದಿಗೆ ತರಬೇಕು ಅಂತ ನಗು ನಗುತ್ತಲೇ, ಅಭಿಯ ಯುಕೆಜಿ ಕ್ಲಾಸ್‌ ಟೀಚರ್‌ ಹೇಳಿದ್ದು, ಇನ್ನೂ ಕಿವಿಯಲ್ಲಿ ಕೇಳಿದ ಹಾಗಿದೆ. ಓಡುವಾಗ ಬಿದ್ದು ಹಣೆಯಲ್ಲಿ, ಮಂಡಿಯಲ್ಲಿ, ಮೊಣಕೈಯಲ್ಲಿ ಮಾಡಿಕೊಂಡ ಗಾಯಗಳಿಗೆ ಲೆಕ್ಕವೇ ಇರಲಿಲ್ಲ; ಅಂತೂ ಕಷ್ಟಪಟ್ಟು ಹಿಡಿದು ಕೂರಿಸಿ, ಬರೆಸುವಷ್ಟರಲ್ಲಿ ಸಾಕು ಸಾಕಾಗುತ್ತಿತ್ತು. ಸ್ಕೂಲಿನಿಂದ ಅವನನ್ನು ಕರೆದುಕೊಂಡು ಬರುವಾಗ ನನ್ನ ಸ್ನೇಹಿತೆಯೊಬ್ಬಳು,  ರೇಖಾ ಅದೇನು ಎನರ್ಜಿ ನಿಮ್ಮ ಮಗನಿಗೆ... ಆಗಿನಿಂದ ನೋಡ್ತಾ ಇದ್ದೀನಿ ಫೀಲ್ಡ್‌ ತುಂಬಾ ಓಡ್ತಾನೇ ಇದ್ದಾನೆ ಅಂತ  ಹೇಳ್ತಾ ಇದ್ದಿದ್ದು ನೆನಪಾಗುತ್ತೆ.  ಓಡುತ್ತಲೇ ಇರುತ್ತಿದ್ದ ಅಭಿ, ಈಗ ಕೆಲಸಕ್ಕಾಗಿ ಒಂದು ಕಡೆ ಕೂರಲೇಬೇಕು. ಹೆಡ್‌ ಫೋನ್‌ ಹಾಕಿಕೊಂಡು, ಲ್ಯಾಪ್‌ ಟಾಪ್‌ ಸ್ಕ್ರೀನ್‌ ನೋಡುತ್ತಾ ಕೆಲಸದಲ್ಲಿ ತಲ್ಲೀನನಾಗಿ ಗಂಟೆಗಟ್ಟಲೆ ಒಂದೇ ಕಡೆ ಕೂರುವ ಅಭಿಯನ್ನು ನೋಡಿದಾಗ ಒಂದು ಕ್ಷಣವೂ ಕೂತಲ್ಲಿ ಕೂರದ ಅಭಿ ಇವನೇನಾ?  ಅಂತ ಮತ್ತೆ  ಮತ್ತೆ ಮನಸ್ಸು ಪ್ರಶ್ನಿಸುತ್ತದೆ. 

ನಾನೂ ಕೆಲಸಕ್ಕೆ ಹೋಗುತ್ತಿದ್ದುದ್ದರಿಂದ ಎಷ್ಟೋ ಸಲ ಅವನ ಪಕ್ಕ ಕೂತು  ಪಾಠ ಹೇಳಿಕೊಡಲಾಗಲೀ ಅಥವಾ ಹೋಮ್‌ ವರ್ಕ್‌ ಮಾಡಿಸುವುದಾಗಲೀ ಸಾಧ್ಯವಾಗುತ್ತಿರಲಿಲ್ಲ. ಅದು ಹೇಗೆ ಒಂದರಿಂದ ನೂರು ಬರೆಯುವುದನ್ನು ಕಲಿತನೋ?? ಹೇಗೆ ಮಗ್ಗಿ ಬಾಯಿಪಾಠವಾಯಿತೋ?? ಅಕ್ಷರಗಳನ್ನು ಹೇಗೆ ಅರಿತನೋ? ದೇವರೇ ಬಲ್ಲ. ತ್ರೀ ಇನ್‌ ಯುವರ್‌ ಮೈಂಡ್‌‌ ಫೋರ್ ಫಿಂಗರ್ಸ್‌ ಅಪ್‌. ಆಫ್ಟರ್‌ ತ್ರೀ ಕೌಂಟ್‌ ಫೋರ್‌, ಫೈವ್‌, ಸಿಕ್ಸ್‌, ಸೆವೆನ್‌ ಅಂತ ರಾಗವಾಗಿ ಹೇಳ್ತಾ ಹೇಳ್ತಾ  ಪುಟ್ಟ ಪುಟ್ಟ ಬೆರಳುಗಳನ್ನು ಎಣಿಸುತ್ತಾ ಕೂಡುವ ಲೆಕ್ಕಗಳನ್ನು ಮಾಡ್ತಿದ್ದ. ಅಮ್ಮಾ ಇದನ್ನು ಹೇಗೆ ಬರೀಬೇಕು? ಇದಕ್ಕೆ ಏನು ಉತ್ತರ? ಎಂಬ ಪ್ರಶ್ನೆಗಳನ್ನು ಕೇಳಿದಾಗ  ಒಂದು ಸಲ ಹೇಳಿಕೊಟ್ಟರೂ, ಅಷ್ಟೂ  ಗೊತ್ತಾಗಲ್ವಾ? ಕ್ಲಾಸಲ್ಲಿ ಕಲೀಲಿಲ್ವಾ? ಅನ್ನೋದು ನನ್ನ ಸಾಮಾನ್ಯ ಉತ್ತರವಾಗಿರುತ್ತಿತ್ತು. ಈಗ ನಾನು, ಕೆಲವೊಮ್ಮೆ ಆನ್‌ ಲೈನ್‌ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದಾಗ ಅಮ್ಮ ಎಷ್ಟು ಈಸಿ ಇದೆ. ಅಷ್ಟೂ ಗೊತ್ತಾಗಲ್ವಾ? ಅನ್ನೋದು ಅವನ ಸಾಮಾನ್ಯ ಉತ್ತರ!

ಕಾರೆಂದರೆ ಬಹಳ ಹುಚ್ಚು ಅವನಿಗೆ. ಒಂದು ಆಟಿಕೆಯ ಕಾರನ್ನು ಇಟ್ಟುಕೊಂಡು ತರಹೇವಾರಿ ಆಟವಾಡುತ್ತಿದ್ದ. ಒಮ್ಮೆ ಅಮ್ಮಾ ನನಗೆ ಮಾಟಿಜ್‌ ಕಾರು ಬೇಕು ಎಂಬ ಹಠ ಶುರುವಾಯಿತು. ನಾವಿಬ್ಬರೂ ಅವನನ್ನು ಕರೆದುಕೊಂಡು ಅಂಗಡಿಗೆ ಹೋಗಿ ಕಾರು  ಕೊಡಿಸಿ ಚೆನ್ನಾಗಿದ್ಯಾ ಪುಟ್ಟಾ? ಅಂತ ಕೇಳಿದರೆ, ಇವನೋ ಇದು ಮಾಟಿಜ್‌ ಕಾರಲ್ಲ; ಇದು ಸ್ಯಾಂಟ್ರೋ. ನನಗೆ ಮಾಟಿಜ್‌ ಕಾರೇ ಬೇಕು ಅಂತ ಅಳತೊಡಗಿದ. ಇನ್ನೂ ಸರಿಯಾಗಿ 4 ವರ್ಷ ತುಂಬಿರಲಿಲ್ಲ; ಆಗಲೇ ಅದ್ಹೇಗೆ ಸ್ಯಾಂಟ್ರೋ, ಮಾಟಿಜ್‌ ನಡುವಿನ ವ್ಯತ್ಯಾಸ ಗೊತ್ತಾಗುತ್ತಿತ್ತೋ? ನಾನು ಈಗಲೂ ಕಾರಿನ ಹೆಸರು ಓದಿ, ಅದು ಯಾವ ಕಾರ್‌ ಎಂದು ಕಂಡುಹಿಡಿಯುತ್ತೇನೆಯೇ ಹೊರತು, ಕಾರನ್ನು ನೋಡಿ ಅಲ್ಲ; ಅಂತೂ ಅಂಗಡಿಯವನು ಹುಡುಕಿ ಮಾಟಿಜ್‌ ಕಾರೇ ಕೊಟ್ಟಾಗ ಅವನ ಕಂಗಳು ಅರಳಿ, ಹೊಳೆದದ್ದು ಈಗ ನನ್ನೆದುರಿಗೇ ಅನ್ನುವ ಹಾಗಿದೆ. ಈಗಲೂ ಹಾಗೆಯೇ, ಮಾರ್ಕೆಟ್‌ ನಲ್ಲಿ ಯಾವ ಕಾರು ಚೆನ್ನಾಗಿದೆ? ಯಾವುದು ಕೊಡುವ ದುಡ್ಡಿಗೆ ತಕ್ಕುದಾಗಿದೆ? ಯಾವುದರಲ್ಲಿ ಡ್ರೈವಿಂಗ್‌ ಆರಾಮದಾಯಕವಾಗಿದೆ? ಎನ್ನುವುದನ್ನೆಲ್ಲ ರಿಸರ್ಚ್‌ ಮಾಡಿ, ಅಪ್ಪನಿಗೆ ಸಲಹೆ ನೀಡುವವನು ಅವನೇ! ಈಗ ಕಾರ್ ಡ್ರೈವಿಂಗೇ ಅವನಿಗೆ ಆಟವಾಗಿಬಿಟ್ಟಿದೆ.

ಅಭಿಗೆ ಕಾರಿನ ಆಟದಲ್ಲಿದ್ದ ಏಕಾಗ್ರತೆ ಬಣ್ಣ ಹಾಕುವುದರಲ್ಲಾಗಲೀ, ಚಿತ್ರ ಬಿಡಿಸುವುದರಲ್ಲಾಗಲೀ ಇರಲಿಲ್ಲ. ಶಾಲೆಯಲ್ಲಿ ಎಲ್ಲ ವರ್ಕ್ ಶೀಟ್‌ ಗಳಲ್ಲಿ ಚೆನ್ನಾಗಿ ಮಾಡಿದರೂ, ಬಣ್ಣ ಹಾಕುವುದರಲ್ಲಿ ಅಭಿ ಸೋಲುತ್ತಿದ್ದ. ಕೊಟ್ಟಿರುವ ಆಕಾರದೊಳಗೆ ಬಣ್ಣ ತುಂಬುವ ಸಹನೆ ಅವನಿಗಿರಲಿಲ್ಲ. ಯುಕೆಜಿ ಮಾರ್ಕ್ಸ್‌ ಕಾರ್ಡ್‌ ಕೊಟ್ಟಾಗ ಗ್ರೇಡ್‌ ಗಳನ್ನು ನೋಡಿ, ಅಮ್ಮಾ ಎಲ್ಲದರಲ್ಲೂ ಎ+, ಆದರೆ ನಮ್ಮ ಮಿಸ್ಸು ಡ್ರಾಯಿಂಗ್‌ ನಲ್ಲಿ ಎ ಮುಂದೆ + ಹಾಕೋದೇ ಮರ್ತುಬಿಟ್ಟಿದ್ದಾರೆ ಅಮ್ಮಾ ಅಂತ ಹೇಳಿದ್ದು ಮೊನ್ನೆ ಮೊನ್ನೆ ಎನ್ನುವ ಹಾಗಿದೆ. ಈಗ ನಾನೇನಾದರೂ ಗ್ರೇಡ್‌ ಬಗ್ಗೆ ಕೇಳಿದರೆ, ಆ ಗ್ರೇಡ್‌ ಯಾವ್ದೂ ಜೀವನಕ್ಕೆ ಬರಲ್ಲ ಸುಮ್ನಿರಮ್ಮ ಅಂತ ಹೇಳಿ, ಶೈಕ್ಷಣಿಕ ವಲಯದಲ್ಲಿರುವಂತಹ  ಪರೀಕ್ಷೆಯೇ ಮುಖ್ಯ; ಅಂಕಪಟ್ಟಿಯೇ ಅಮೂಲ್ಯ ಎಂಬ ಬಲವಾದ ನಂಬಿಕೆಗೆ ತಣ್ಣೀರೆರೆಚಿ ಬಿಡುತ್ತಾನೆ.

3ನೇ ಕ್ಲಾಸಿನ ಮೊದಲ ದಿನ ಸ್ಕೂಲಿನಿಂದ ಮನೆಗೆ ಬಂದು, ಅಮ್ಮ ನಮ್ಮ ಮಿಸ್‌ ಗೆ ಟೂ ಫೇಸಸ್‌ ಇದೆಯಂತೆ. ನಾವು ಜಾಣ ಮಕ್ಕಳಾದರೆ ಒಂದು ಫೇಸ್‌ ತೋರಿಸ್ತಾರಂತೆ; ಇಲ್ಲ ಅಂದ್ರೆ ಇನ್ನೊಂದು ಫೇಸ್‌ ತೋರಿಸ್ತಾರಂತೆ ಅಂತ ತನ್ನ ಮುಖವನ್ನಗಲಿಸಿ, ಬೆರಗುಗಣ್ಣುಗಳಲ್ಲಿ ಹೇಳಿದ್ದ ಮಾತು ಈಗ ಕೇಳಿದಂತಿದೆ. ಈಗ ಅವನೇ,  ಒಬ್ಬ ಲೆಕ್ಚರರ್‌ ಅವರ ಒಂದು ಕ್ಲಾಸ್‌ ಕೇಳಿದರೆ ಸಾಕು ಅವರ ಮುಂದಿನ ಪಾಠಗಳು ಹೇಗಿರುತ್ತವೆ? ಅಂತ ಊಹೆ ಮಾಡುವಷ್ಟು ಪರಿಣಿತನಾಗಿಬಿಟ್ಟಿದ್ದಾನೆ. ಮನುಷ್ಯರ ಮುಖ ನೋಡಿ ಇವರು ಹೀಗಿರಬಹುದು ಅನ್ನುವ ಊಹೆ ಮಾಡಲು ತೊಡಗಿಬಿಡುತ್ತಾನೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಅಮ್ಮಾ, ನಯವಾಗಿ ಮಾತನಾಡುವವರೆಲ್ಲ ಒಳ್ಳೆಯವರಲ್ಲ ಅಂತ ಸೈಕಾಲಜಿ ಓದಿದ ದೊಡ್ಡ ಸೈಂಟಿಸ್ಟ್‌ ಥರ ಮಾತಾಡ್ತಾನೆ.

ಮೊದಲೆಲ್ಲ ಯಾವುದಾದರೂ ಹಾಡು ಹೇಳು ಎಂದರೆ ಸಾಕು; ರಾಗ ಶುರು ಮಾಡಿಬಿಡುತ್ತಿದ್ದ. ಆಯಾ ವಯಸ್ಸಿಗೆ ತಕ್ಕಂತೆ ಹಾಡುಗಳು. ಸ್ಟಮಕ್‌ ಈಸ್‌ ಏಕಿಂಗ್‌ ಸ್ಟಮಕ್‌ ಈಸ್‌ ಏಕಿಂಗ್‌ ಜಸ್ಟ್‌ ನೌ ಅನ್ನುವ ಇಂಗ್ಲಿಷ್‌ ಅಭಿನಯ ಗೀತೆ, ಮುಂದೆ ಬರತ್ತೆ, ಹಿಂದೆ ಹೋಗುತ್ತೆ, ನಮ್ಮ ಮೋಟಾರ್‌ ಗಾಡಿ ಎನ್ನುವ ಕನ್ನಡ ಗೀತೆಯಿಂದ ಹಿಡಿದು, ಮುಂದೆ ಪಾರ್ವತಿ ಕಂದನೇ ಓ ಸುಮುಖ ಎಂಬ ಹಾಡಿನವರೆಗೆ, ಹಾಡು ಎಂದ ತಕ್ಷಣ ಹಾಡುತ್ತಿದ್ದ. ಆದರೆ ಕೆಲಸದ ಒತ್ತಡದಲ್ಲಿ ಕೇಳಲು ಕೆಲವೊಮ್ಮೆ ಸಮಯವೇ ಸಿಗುತ್ತಿರಲಿಲ್ಲ.  ಆದರೆ ಈಗ,  ಅಭಿ ಅಷ್ಟು ಒಳ್ಳೆ ವಾಯ್ಸ್‌ ಇದೆ ಹಾಡೋ ಅಂದ್ರೆ ಸುಮ್ನಿರಮ್ಮ, ನನಗಿಂತ ಚೆನ್ನಾಗಿ ಹಾಡೋರು ಎಷ್ಟೋ ಜನ ಇದ್ದಾರೆ. ನಿನಗೋ ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ಅಂತ ಹೇಳಿ ತನ್ನ ಹಾಡನ್ನು ಗಂಟಲಿನೊಳಗೇ ಗುನುಗುತ್ತಾ ನನ್ನ ಬಾಯಿಯನ್ನು ಮುಚ್ಚಿಸಿಬಿಡುತ್ತಾನೆ... 

ಮಗ, ಮಗುವಾಗಿದ್ದಾಗಿನ ನೆನಪುಗಳು ರೇಖಾಳ ಎದೆಯಲ್ಲಿ ಆರ್ದ್ರಭಾವವನ್ನು ಮೂಡಿಸಿತು. ಎಷ್ಟು ಬೇಗ ಬೆಳೆದುಬಿಟ್ಟನಲ್ಲ ಮಗ ಎಂದು ರೇಖಾಳ ಮನಸ್ಸು ಮುದುಡಿತು. ಕಾಲ ಎಷ್ಟು ಬೇಗ ಓಡಿಬಿಡುತ್ತದೆ? ಅಲ್ಲ ಹಾರಿಬಿಡುತ್ತದೆ? ಮೊನ್ನೆ ಮೊನ್ನೆಯವರೆಗೆ ಎಲ್ಲದಕ್ಕೂ ನಮ್ಮ ಸಹಾಯವನ್ನು ಅಪೇಕ್ಷಿಸುತ್ತಿದ್ದ ಮಕ್ಕಳು, ಎಷ್ಟು ಬೇಗ ನಮಗೆ ಬುದ್ಧಿ ಹೇಳುವಂತಾಗುತ್ತಾರೆ? ಅವರು ಸಣ್ಣವರಿರುವಾಗ ನಮ್ಮ ಕೆಲಸದ ಗಡಿಬಿಡಿಯಲ್ಲಿ ಕೆಲವೊಮ್ಮೆ ಅವರಿಗೆ ಕೊಡಬೇಕಾದಷ್ಟು ಗಮನ ಕೊಡಲು ಸಾಧ್ಯವೇ ಆಗಿರುವುದಿಲ್ಲ; ಗಮನ ಕೊಡಬೇಕು ಅನ್ನುವಷ್ಟರಲ್ಲಿ ಅವರಿಗೆ ನಮ್ಮ ಸಹಾಯದ, ಅವಶ್ಯಕತೆಯೇ ಇರುವುದಿಲ್ಲ. ಮಕ್ಕಳು ಸಣ್ಣವರಿದ್ದಾಗ ಇವರು ಯಾವಾಗ ಬೆಳೆದು ದೊಡ್ಡವರಾಗುತ್ತಾರೋ ಎಂದು ಬಹಳಷ್ಟು ಬಾರಿ ಅನಿಸುತ್ತದೆ. ಅವರ ತುಂಟಾಟಗಳನ್ನು ಸಹಿಸಿಕೊಳ್ಳುವುದು ದುಸ್ತರವಾಗುತ್ತದೆ.ಆದರೆ ಈಗ ರೇಖಾಳ ಮನಸ್ಸು ಮಾತನಾಡತೊಡಗಿತು. ಅಭಿ ನೀನು ಮಗುವಾಗಿದ್ದಾಗಿಲಿನ ಎಷ್ಟೋ ಸಂಭ್ರಮಗಳು ಕಣ್ಣೆದುರಿಗಿದ್ದರೂ, ನಿನ್ನ ತುಂಟಾಟಗಳನ್ನು ಮತ್ತೆ ನೋಡಬೇಕೆನಿಸುತ್ತದೆ. ನನ್ನ ಹಿಂದೆ ಮುಂದೆ ನೀನು ಮತ್ತೆ ಓಡಾಡಬೇಕೆನಿಸುತ್ತದೆ. ನಿನ್ನ ಮುಗ್ಧ ನಗುವನ್ನು ಮತ್ತು ಸ್ನಿಗ್ಧ ಮೊಗವನ್ನು ಕಣ್ತುಂಬಿಕೊಳ್ಳಬೇಕು ಅನಿಸುತ್ತದೆ.

  ನಿನಗೆ ಕಥೆ ಹೇಳುತ್ತಾ ಊಟ ಮಾಡಿಸಲು, ನಿನ್ನನ್ನು ಎತ್ತಿಕೊಂಡೇ ಮಾರ್ಕೆಟ್‌ ಗೆ ಹೋಗಲು, ಇನ್ನಷ್ಟು ಆಟಿಕೆಯ ಕಾರುಗಳನ್ನು ಕೊಡಿಸಲು, ನಿನ್ನ ಬಾಲ ಭಾಷೆಯನ್ನು ಕೇಳಲು,  ನಿನಗೆ ಅಕ್ಷರಗಳನ್ನು ಕಲಿಸಲು, ಕೂಡಿ ಕಳೆಯುವ ಲೆಕ್ಕಾಚಾರಗಳನ್ನು ಮಾಡಿಸಲು, ಪದ್ಯಗಳನ್ನು ರಾಗವಾಗಿ ಹೇಳಿಕೊಡಲು, ನಿನ್ನ ವೈವಿಧ್ಯಮಯ ರಾಗದ ಹಾಡುಗಳನ್ನು ಕೇಳಲು, ಪುಸ್ತಕಗಳನ್ನು ತೋರಿಸುತ್ತಾ ಪಾತ್ರಗಳೇ ನೀನಾಗುವಂತೆ ಮಾಡಲು, ನಿನ್ನ ಎರಡು ಪುಟ್ಟ ಕೈಗಳನ್ನು ನನ್ನ ಸೊಂಟದ ಸುತ್ತಲೂ ಹಿಡಿದುಕೊಂಡು ಗಾಡಿಯಲ್ಲಿ ಕೂತರೆ ನಿನ್ನನ್ನು ಮತ್ತೆ ಸ್ಕೂಲಿಗೆ ಬಿಡಲು, ನಿನ್ನ ಜೊತೆ ಆಟವಾಡಿ ಸಂತೋಷಪಡಲು, ಅಭೀ,  ಮತ್ತೊಮ್ಮೆ ಮಗುವಾಗಿ ಬಿಡು ಕಂದ!!!



ಮಂಗಳವಾರ, ಜೂನ್ 8, 2021

ನೀವು ಇರಬೇಕಿತ್ತು

 ಲೀಲಮ್ಮಾ...ಲೀಲಮ್ಮಾ..... ಇದ್ದೀರೆನ್ರೀ? ಅಂತ ಜೋರಾಗಿ ಗೇಟ್‌ ಶಬ್ದ ಆಗುವುದು ಕೇಳಿಸಿತು. ಯಾರಪ್ಪಾ ಅದು ಅಂತ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಲೀಲಮ್ಮ ಕಿಟಕಿಯಲ್ಲಿ ನೋಡ್ತಾ ಕೇಳಿದರು. ಮೇಡಂ ನಿಮಗೆ ಒಂದು ಪಾರ್ಸೆಲ್‌ ಇದೆ. ಬನ್ನಿ, ತೆಗೆದುಕೊಳ್ಳಿ ಅಂತ ಕೊರಿಯರ್‌ ನವನು ಜೋರಾಗಿ ಕೂಗಿದ. ಬಂದೇ ಇರಪ್ಪ ಅಂತ ಹೇಳ್ತಾನೇ, ನನಗ್ಯಾರಪ್ಪ ಕೊರಿಯರ್‌ ನಲ್ಲಿ ಪಾರ್ಸೆಲ್‌ ಕಳುಹಿಸುವವರು ಅಂತ ಯೋಚ್ನೆ ಮಾಡ್ತಾನೇ ಗೇಟಿನ ಬಳಿ ಬಂದರು ಲೀಲಮ್ಮ. ಸೈನ್‌ ಮಾಡಿ ಕೊರಿಯರ್‌ ತಗೊಂಡು, ಮನೆ ಒಳಗೆ ಬಂದು ಆ ಪಾರ್ಸೆಲ್‌ ಅನ್ನು ಆಶ್ಚರ್ಯದಿಂದ ಬಿಡಿಸಲು ಶುರು ಮಾಡುವುದಕ್ಕೂ, ಮೇಲಿನ ಮಹಡಿಯಲ್ಲಿದ್ದ ಮೊಮ್ಮಗ  ಓಡಿ ಬಂದು ಓಹ್‌ ಇಷ್ಟು ಬೇಗ ಬಂತಾ ಅಂತ ಕೇಳುವುದಕ್ಕೂ ಸರಿ ಹೋಯಿತು. ಏಯ್‌ ನಿನಗೆ ಮೊದಲೇ ಈ ಪಾರ್ಸೆಲ್‌ ಬಗ್ಗೆ ಗೊತ್ತಿತ್ತೇನೋ ಅಂತ ಮೊಮ್ಮಗನನ್ನು ಪ್ರೀತಿ ತುಂಬಿದ ಆಶ್ಚರ್ಯದಿಂದ ಕೇಳಿದರು ಲೀಲಮ್ಮ. ಇರ್ಲಿ ಅಜ್ಜಿ, ಮೊದಲು ಪಾರ್ಸೆಲ್‌ ತೆಗೆದು ನೋಡು ಅಂತ ಚಿಗುರುತ್ತಿದ್ದ ಮೀಸೆಯ ಅಡಿಯಲ್ಲಿ ತುಂಟ ನಗುವನ್ನು ಚಿಮ್ಮಿಸುತ್ತಾ ಹೇಳಿದ ಮೊಮ್ಮಗ ದೀಪು. ಅಷ್ಟು ಹೊತ್ತಿಗೇ ಮೇಲಿನ ಮನೆಯಿಂದ ಮಗಳೂ ಬಂದಳು. ಲೀಲಮ್ಮ ನಿಧಾನವಾಗಿ ಪಾರ್ಸೆಲ್‌ ತೆರೆದರು; ನೋಡಿದರೆ, ಹೊಸ ಮೊಬೈಲ್.‌ ಅವರ ಕಣ್ಣುಗಳು ಆಶ್ಚರ್ಯದಿಂದ ಮಿನುಗಿದವು. ಅಮ್ಮ ಹೆಂಗಿದೆ ಸರ್‌ಪ್ರೈಸ್ ಅಂತ ಮಗಳು ಕೇಳಿದಾಗ ಲೀಲಮ್ಮನವರೂ ಅಯ್ಯೋ ನಂಗೆ ಯಾಕೆ ಬೇಕಿತ್ತು ಇಷ್ಟು ದುಡ್ಡಿನ ಮೊಬೈಲ್‌? ಹೆಂಗೋ ಇರೋದ್ರಲ್ಲೇ ಇನ್ನೊಂದು ಸ್ವಲ್ಪ ದಿವಸ ಅಡ್ಜಸ್ಟ್ ಮಾಡ್ಕೋಬಹುದಿತ್ತು ಅಂತ ಮಮತೆಯಿಂದ ಮಗಳನ್ನು ಗದರಿದರೂ ಮನಸ್ಸಿನಲ್ಲಿ ಖುಷಿಯಾಗಿತ್ತು. ಅಲ್ಲ ಅಜ್ಜೀ, ಮೊಬೈಲ್‌ ಚಾರ್ಜ್‌ ಆಗ್ತಿರಲಿಲ್ಲ; ಡಿಸ್ಪ್ಲೇ ಕಾಣಿಸ್ತಾ ಇರ್ಲಿಲ್ಲ, ಫೋನ್‌ ಮಾಡೋಕ್ಕೆ ಎಷ್ಟು ಕಷ್ಟ ಪಡ್ತಿರಲಿಲ್ವ ನೀನು? ಅದಕ್ಕೇ ಅಮ್ಮ 4 ದಿನದ ಹಿಂದೇನೇ ಮೊಬೈಲ್‌ ಬುಕ್‌ ಮಾಡಿದ್ಲು. ನಿಂಗೆ ಹೇಳಿರ್ಲಿಲ್ಲ ಅಷ್ಟೇ. ಈಗ ನಂಗೆ ಮೊಬೈಲ್ ಕೊಡು;‌ ನಾನು ಸಿಮ್‌ ಹಾಕಿ ಎಲ್ಲಾ ಸೆಟ್‌ ಮಾಡಿ ಕೊಡ್ತೀನಿ ಅಂತ ಅಂದ ದೀಪು. ಇಷ್ಟ ಆಯ್ತೇನಮ್ಮಾ? ಅಂತ ಮಗಳು ಕಕ್ಕುಲತೆಯಿಂದ ಕೇಳಿದಳು. ಇಷ್ಟ ಆಯ್ತು; ಆದ್ರೆ ದುಡ್ಡು ಎಷ್ಟಾಯ್ತೋ? ನಾನೇ ಕೊಡ್ತಿದ್ದೆ ಅಂತ ಲೀಲಮ್ಮ ರಾಗ ಎಳೀತಿದ್ದ ಹಾಗೇ, ಸೀಮಾ ಸ್ವಲ್ಪ ಸುಮ್ನಿರ್ತೀಯಾ ಅಮ್ಮಾ ನೀನು, ತೆಗೆಸಿಕೊಟ್ಟಿದ್ದೀನಿ; ಉಪಯೋಗಿಸು ಅಷ್ಟೇ ಅಂತ ಹೇಳ್ತಾ ಕೆಲ್ಸ ಇದೆ ಅಂತ ಮೇಲ್ಗಡೆ ಹೊರಟೇಹೋದಳು. ಅಬ್ಬಬ್ಬಾ ಅಪ್ಪನ ಮಗಳೇ; ತನಗೆ ಏನಾದ್ರೂ ಆಗಬೇಕು ಅಂದ್ರೆ ತಕ್ಷಣ ಮಾಡಿಬಿಡಬೇಕು; ಇದನ್ನೆಲ್ಲಾ ನೋಡೋಕೆ ನೀವು ಇರ್ಬೇಕಿತ್ತು ರೀ ಅಂತ ಲೀಲಮ್ಮನ ಮನಸ್ಸು 45 ವರ್ಷಗಳ ಹಿಂದಕ್ಕೆ ಜಾರಿತು.

ಮನೆಗೆ ಮೊದಲ ಮಗಳಾಗಿ, ಜವಾಬ್ದಾರಿಗಳನ್ನು ತೆಗೆದುಕೊಂಡ ಹಾಗೆಯೇ, ಮನೆಗೆ ದೊಡ್ಡ ಮಗನಾದ ವೆಂಕಟೇಶನನ್ನು ಮದುವೆಯಾಗಿ, ಹೋದ ಮನೆಯಲ್ಲಿ ಹಿರೇಸೊಸೆಯಾಗಿಯೂ ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು ಲೀಲಾ. ಸರ್ಕಾರಿ ಕೆಲಸದಲ್ಲಿದ್ದ ವೆಂಕಟೇಶನಿಗೆ ವಿವಿಧ ಊರುಗಳಿಗೆ ವರ್ಗಾವಣೆಯಾಗುತ್ತಿತ್ತು; ಆ ಊರಿಗೆ ಹೋಗಿ ಸಂಸಾರ ಮಾಡಲೇಬೇಕಿತ್ತು; ಮದುವೆಯಾಗಿ ವರ್ಷದ ಒಳಗೆ ಲೀಲಾ ಹೆಣ್ಣುಮಗುವಿನ ತಾಯಿಯಾದಳು; ಮನೆಯಲ್ಲಿ ಸಂತೋಷಕ್ಕೆ ಪಾರವಿರಲಿಲ್ಲ; ಲಕ್ಷ್ಮೀ ಹುಟ್ಟಿದಂತೆ ಹುಟ್ಟಿದ್ದಾಳೆ ಎಂದು, ರಮಾ ಅಂತ ಹೆಸರಿಟ್ಟು ಸಂಭ್ರಮಿಸಿದ್ದಾಯಿತು; ಅತ್ತೆಯ ಮನೆಯಲ್ಲಿ ಅಯ್ಯೋ ಹೆಣ್ಣಾ! ಎಂಬ ಉದ್ಗಾರ ಬಂದರೂ, ಮೊದಲ ಮಗುವಲ್ವಾ ಅಂತ ಸಮಾಧಾನ ಪಟ್ಟುಕೊಂಡಿದ್ದಾಯಿತು. ಮಗುವಿನ ಆಟಪಾಠಗಳಲ್ಲಿ ದಿನಗಳು ಕಳೆದದ್ದೇ ತಿಳಿಯಲಿಲ್ಲ; ಇನ್ನೆರೆಡು ವರ್ಷಗಳಲ್ಲಿ ಲೀಲಾ ಮತ್ತೊಂದು ಹೆಣ್ಣುಮಗುವಿಗೆ ಜನ್ಮ ನೀಡಿದಳು. ಈಗ ವೆಂಕಟೇಶನಿಗೆ ಕೊಂಚ ಅಸಹನೆ ಉಂಟಾಯಿತು; ಆದರೂ ಸಕ್ಕರೆಯ ಗೊಂಬೆಯಂತಿದ್ದ ಮಗುವನ್ನು ನೋಡಿ, ಅಸಹನೆ ಸ್ವಲ್ಪ ಕಡಿಮೆಯಾಯಿತಾದರೂ, ಮೊದಲ ಮಗುವಿಗೆ ತೋರಿಸಿದ್ದ ವಾತ್ಸಲ್ಯ, ಅಕ್ಕರೆ ಈ ಮಗುವಿಗೆ ಇರಲಿಲ್ಲ; ದೊಡ್ಡ ಮಗಳಿಗೆ ತಾನೇ ಹೆಸರಿಟ್ಟಿದ್ದ ವೆಂಕಟೇಶ, ಎರಡನೇ ಮಗುವಿಗೆ ಆ ಜವಾಬ್ದಾರಿಯನ್ನೇ ತೆಗೆದುಕೊಳ್ಳಲಿಲ್ಲ; ಲೀಲಾ ತಾನೇ ಪ್ರಾಸಬದ್ಧವಾಗಿರಲಿ ಅಂತ ಸೀಮಾ ಅಂತ ಹೆಸರಿಟ್ಟಳು;  ಪರಿಚಯಸ್ಥರು ಇನ್ನೊಂದು ಮಗುವೂ ಹೆಣ್ಣಾಯಿತಾ? ಎಂದು ಕೇಳಿದಾಗ ಲೀಲಾಳಿಗೆ ಸಂಕಟವಾಗುತ್ತಿತ್ತು; ವೆಂಕಟೇಶನಿಗಂತೂ ಯಾರಾದರೂ,  ಸಾರ್‌ ಇಬ್ರೂ ಹೆಣ್ಣುಮಕ್ಕಳಾ? ಅಂತ ಕೇಳಿದಾಗ ವಿಪರೀತ ಸಿಟ್ಟು ಬರುತ್ತಿತ್ತು. ಸಾಲದ್ದಕ್ಕೆ, ತನ್ನ ತಂಗಿಗೆ, ತನ್ನ ತಮ್ಮನಿಗೆ ಗಂಡುಮಕ್ಕಳೇ ಜನಿಸಿದಾಗ, ತನಗೂ ಒಂದು ಗಂಡುಮಗು ಬೇಕು ಎಂಬ ಆಸೆ  ಮತ್ತೆ ಶುರುವಾಯಿತು ವೆಂಕಟೇಶನಿಗೆ.

 ಕಾಲ ಯಾರನ್ನೂ ಕಾಯುವುದಿಲ್ಲ; ವೆಂಕಟೇಶನಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು; 8 ವರ್ಷ ಮತ್ತು 6 ವರ್ಷದ ಹೆಣ್ಣುಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದಾಯಿತು; ಮಕ್ಕಳಿಬ್ಬರೂ ಚುರುಕಾಗಿದ್ದರು; ಲೀಲಾ ಸಹ ಮನೆಯಲ್ಲಿ ತನಗೆ ಗೊತ್ತಿರುವ ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಳು. ಎಷ್ಟೇ ಕೆಲಸಗಳಿರಲಿ, ಮನೆಗೆ ಯಾರೇ ಬರಲಿ, ಮಕ್ಕಳಿಗೆ ಉಕ್ತಲೇಖನ ಬರೆಸುವುದು; ಮಗ್ಗಿ ಹೇಳಿಸುವುದು; ಕಥೆ ಬರೆಯುವಂತೆ ಹೇಳುವುದು; ಪುಸ್ತಕಗಳನ್ನು ಓದಲು ಹೇಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ವೆಂಕಟೇಶನಿಗೆ ಇನ್ನೊಂದು ಗಂಡು ಮಗು ಬೇಕು ಎಂಬ ಆಸೆ ಪ್ರಬಲವಾಗತೊಡಗಿತು. 35 ವರ್ಷಗಳ ಹಿಂದೆ ಮೂರು, ನಾಲ್ಕು  ಮಕ್ಕಳು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿದ್ದ ವಿಚಾರವೇ. ದೊಡ್ಡ ಮಗಳಿಗೆ 8 ತುಂಬಿದಾಗ ಲೀಲಾ ಇನ್ನೊಂದು ಮಗುವನ್ನು ಹಡೆದಳು. ಅದೂ ಸಹ ಹೆಣ್ಣೇ ಆಗಿದ್ದು ಮಾತ್ರ ವಿಧಿಲಿಖಿತ. ಮೂರನೆಯ ಮಗುವೂ ಹೆಣ್ಣೇ ಎಂದು ತಿಳಿದಾಗ ವೆಂಕಟೇಶ ಆ ಮಗುವನ್ನು ನೋಡಲು ಹೋಗಿಯೇ ಇರಲಿಲ್ಲ; ಲೀಲಾಳಿಗೆ ಗಂಡನ ಮುಖವನ್ನು ನೋಡಲೂ ಭಯ. ಆದರೆ ಇದರಲ್ಲಿ ತನ್ನ ತಪ್ಪೇನಿದೆ? ಎಂದು ಲೀಲಾಳಿಗೆ ಇಂದಿಗೂ ಅರ್ಥವಾಗಿಲ್ಲ. ಮೂರನೆಯ ಹೆಣ್ಣು ಮಗುವಿಗೆ ಉಮಾ ಅಂತ ಪ್ರೀತಿಯಿಂದ ತಾನೇ ಕರೆದಳು ಲೀಲಾ. ತಲೆಯ ತುಂಬ ಕೂದಲು; ಕಪ್ಪು ಕಣ್ಣುಗಳು; ಕೆಂಪು ತುಟಿ, ಬಣ್ಣವಂತೂ ಅಚ್ಚ ಬಿಳಿ; ಗೊಂಬೆಯಂತೆ ಸುಂದರವಾಗಿದ್ದ ಆ ಪಾಪುವನ್ನು ನೋಡಿದಾಗ ಯಾರಿಗಾದರೂ ವಾತ್ಸಲ್ಯ ಉಕ್ಕಿ ಬರದೇ ಇರದು. 3 ತಿಂಗಳ ಮಗುವನ್ನು ಕರೆದುಕೊಂಡು ತವರು ಮನೆಯಿಂದ ಬೆಂಗಳೂರಿಗೆ ಬಂದಾಗ 1 ವಾರ ವೆಂಕಟೇಶ ಮಾತೇ ಆಡಿರಲಿಲ್ಲ; ಲೀಲಾಳೂ ಸಹ ಇವರ ಕೋಪ ತಣ್ಣಗಾದ ಮೇಲೇ ಮಾತನಾಡುತ್ತೇನೆ ಅಂತ ಸುಮ್ಮನಿದ್ದಳು. 3 ಮಕ್ಕಳನ್ನು ಅತ್ತೆಯ ಮನೆಗೆ ಕರೆದುಕೊಂಡು ಹೋದಾಗ ಮಾತ್ರ ಲೀಲಾಳಿಗೆ ಪರಿಸ್ಥಿತಿಯನ್ನು ಎದುರಿಸುವುದು ಕಷ್ಟವಾಗುತ್ತಿತ್ತು. ಎರಡು ಹೆಣ್ಣಾದ ಮೇಲೆ ಇನ್ನೊಂದು ಗಂಡಾಗುತ್ತೆ ಅಂತಾರೆ, ಆದ್ರೆ ನಮ್ಮ ವೆಂಕೀಗೆ ಯಾಕೋ ಮೂರನೆಯದೂ ಹೆಣ್ಣೇ ಎಂಬ ಮೂದಲಿಕೆಯ ಮಾತುಗಳನ್ನು ಕೇಳಿದಾಗ ಲೀಲಾಳಿಗೆ ಹೊಟ್ಟೆಯಲ್ಲಿ ಒಂಥರಾ ಸಂಕಟವಾಗುತ್ತಿತ್ತು. ಎಷ್ಟಾದರೂ 9 ತಿಂಗಳು ಹೊಟ್ಟೆಯಲ್ಲಿ ಹೊತ್ತಿದ್ದಳಲ್ಲವೇ? ಆಗ, ಸಹಾಯಕ್ಕೆ ಬರುತ್ತಿದ್ದುದು ಆ ಮನೆಯಲ್ಲಿದ್ದ ಅತ್ತೆಯ ಅಕ್ಕ, ದೊಡ್ಡಮ್ಮ. ಅಯ್ಯೋ ವೆಂಕಿ ಮೂರೂ ಹೆಣ್ಣು ಅಂತ ಯಾಕೆ ಬೇಜಾರು ಮಾಡ್ಕೋತೀಯ? ಮಕ್ಕಳು ನೋಡೋಕೆ ಚೆನ್ನಾಗಿದ್ದಾರೆ; ಸಾಲದ್ದಕ್ಕೆ ಬಿಳೀ ತೊಗಲು; ಚುರುಕಾಗಿದ್ದಾರೆ; ಹೇಗೋ ಆಗುತ್ತೆ ಬಿಡು. ಅಂತ ಸಮಾಧಾನ ಹೇಳ್ತಾ ಇದ್ರು. ಲೀಲಾಳಿಗೆ ಉಮಾ ಗಂಡುಮಗುವಾಗಬಾರದಿತ್ತೇ ಅಂತ ಎಷ್ಟೋ ಸಲ ಅನ್ನಿಸಿದರೂ, ಆ ದುಃಖವನ್ನು ಮಕ್ಕಳ ಮೇಲೆ ಎಂದಿಗೂ ತೋರಿಸಿದವಳಲ್ಲ. ವೆಂಕಟೇಶನಿಗೆ  ಮಾತ್ರ ನಾನೊಬ್ಬ ಮೈನಾರಿಟಿ ಈ ಮನೆಯಲ್ಲಿ; ಎಲ್ಲರೂ ಹೆಣ್ಣು ಮಕ್ಕಳು, ಎಷ್ಟಾದರೂ ಕಂಡವರ ಮನೆಗೆ ಹೋಗುವವರು; ಎಂಬ ಭಾವನೆ ಅಚ್ಚೊತ್ತಿಬಿಟ್ಟಿತ್ತು.

ಹಾಗಾಗಿಯೇ ಮಕ್ಕಳನ್ನು ಅತ್ಯಂತ ಶಿಸ್ತಿನಿಂದ ಬೆಳೆಸಿದ. ಮದುವೆ ಮಾಡಿಕೊಟ್ಟ ಮೇಲೆ ಇನ್ನೊಬ್ಬರ ಮನೆಗೆ ಹೋಗಿ ತನಗೆ ಕೆಟ್ಟ ಹೆಸರು ತರಬಾರದು ಎಂಬ ಭಾವನೆ ಇದ್ದುದರಿಂದ ಮನೆಯಲ್ಲಿ ಕೆಲವೊಮ್ಮೆ ಉಸಿರುಗಟ್ಟಿಸುವ ವಾತಾವರಣವೇ ಇರುತ್ತಿತ್ತು. ರಮಾಳಿಗೆ ಎಲ್ಲ ವಿಷಯಗಳನ್ನೂ ಕಲಿಯುವ ಆಸಕ್ತಿ. ಹಿಂದಿ‌ ಕ್ಲಾಸ್, ಸಂಸ್ಕೃತ ಕ್ಲಾಸ್‌ , ವಾಲಿಬಾಲ್‌ ಪ್ರಾಕ್ಟೀಸ್‌ ಅಂತ ಶಾಲೆ ಮುಗಿದ ಒಂದು ಗಂಟೆಯ ನಂತರ ಮನೆ ಸೇರುತ್ತಿದ್ದಳು. ಅಕಸ್ಮಾತ್‌ ವೆಂಕಟೇಶ ಬೇಗ ಬಂದು ರಮಾ ಇನ್ನೂ ಸ್ಕೂಲಿಂದ ಬಂದಿಲ್ಲ ಎಂದರೆ ಬೈಗುಳ ಶುರುವಾಗುತ್ತಿತ್ತು. ಆಗ ಎಷ್ಟೋ ಬಾರಿ ಲೀಲಾ ಮಗಳ ಪರ ವಹಿಸಿಕೊಂಡದ್ದಿದೆ. ಅವಳೇನೂ ಎಲ್ಲೂ ತಿರುಗಲು ಹೋಗಿಲ್ಲ; ಬರ್ತಾಳೆ, ನಾನೂ ವಿಚಾರಿಸಿಕೊಳ್ತಾ ಇದ್ದೀನಿ ಅಂತ ಹೇಳಿ ರಮಾಳನ್ನು ವೆಂಕಟೇಶನ ಹೊಡೆತದಿಂದ ಪಾರು ಮಾಡುತ್ತಿದ್ದಳು. ಹೆಣ್ಣುಮಕ್ಕಳಿಗೆ ಯಾಕೆ ಇದೆಲ್ಲಾ? ತಾವಾಯಿತು, ತಮ್ಮ ಓದಾಯಿತು ಅಂತ ಇರಬಾರದಾ? ಅಂತ ಗುಡುಗುತ್ತಿದ್ದ ವೆಂಕಟೇಶ. ಹೆಣ್ಣುಮಕ್ಕಳು ಏನಾದರೂ ಕಲಿಯಬೇಕು ಎಂದಾಗ ಅವರ ಆಸೆಗೆ ಲೀಲಾ ನೀರೆರೆಯುತ್ತಿದ್ದಳು. ಸಂಗೀತ, ಹೊಲಿಗೆ, ಕಸೂತಿ ಇನ್ನಿತರ ಕರಕುಶಲ ಕಲೆಗಳನ್ನೂ ಮಕ್ಕಳು ಮೈಗೂಡಿಸಿಕೊಂಡರು.

ಕೆಲವೊಮ್ಮೆ ವೆಂಕಟೇಶ ಲೀಲಾಳ ಬಳಿ, ಮೂರೂ ಮಕ್ಕಳೂ ಹೆಣ್ಣುಮಕ್ಕಳಾದವಲ್ಲ; ಎಲ್ಲರೂ ಮನೆಯಿಂದ ಹೊರಹೋಗುವವರೇ, ನಮ್ಮ ಜೊತೆ ಇರುವವರಾರು? ಅಂತ ಬೇಸರಪಟ್ಟುಕೊಳ್ಳುತ್ತಿದ್ದ. ಮೂವರೂ ದಂಡಪಿಂಡಗಳೇ, ಪಿಂಡಕ್ಕೂ ಇಲ್ಲ; ಬರೀ ದಂಡಕ್ಕೆ ಅಂತ ಸಿಡಿಮಿಡಿಗುಟ್ಟುತ್ತಿದ್ದ. ಅಪುತ್ರಸ್ಯ ಗತಿರ್ನಾಸ್ತಿ ಅಂತ ದೊಡ್ಡವರು ಹೇಳಿದ್ದಾರಲ್ಲ ಲೀಲಾ, ನಾನು ಹೋದ ಮೇಲೆ ನನಗೆ ಉತ್ತರಕ್ರಿಯಾದಿಗಳನ್ನು ಮಾಡುವವರು ಯಾರು? ಅಂತ ಅಲವತ್ತುಗೊಳ್ಳುತ್ತಿದ್ದ. ಆಗೆಲ್ಲ, ಲೀಲಾ, ಮಕ್ಕಳು ಎಷ್ಟಾದರೂ ಮಕ್ಕಳಲ್ಲವೇ? ಹೆಣ್ಣಾದರೇನು? ಗಂಡಾದರೇನು? ಯಾಕೆ ಹಾಗೆ ಕೋಪಿಸಿಕೊಳ್ಳುತ್ತೀರಿ? ಆ ಮಕ್ಕಳಿಗೆ ಯಾಕೆ ಕಣ್ಣಿಗೆ ಕೈ ಹಾಕಿದ ಹಾಗೆ ಬೈಯುತ್ತೀರಿ? ಅವರು ಇನ್ನೆಷ್ಟು ದಿನ ನಮ್ಮ ಜೊತೆ ಇರುತ್ತಾರೆ? ಎಷ್ಟೋ ಜನರಿಗೆ ಗಂಡುಮಕ್ಕಳಿದ್ದರೂ ಅನಿವಾರ್ಯವಾಗಿ ಆ ಮಕ್ಕಳು ತಂದೆ ತಾಯಿಯರನ್ನು ಬಿಟ್ಟು ಬೇರೆ ಕಡೆ ಇರುವುದಿಲ್ಲವಾ? ನಮ್ಮ ಕಣ್ಣೆದುರಿಗೇ ಎಷ್ಟೋ ಜನ ವಯಸ್ಸಾದವರು ಇಬ್ಬರೇ ಇರುವುದನ್ನು ನೀವು ನೋಡುತ್ತಿಲ್ಲವಾ? ಹೆಂಡತಿ ಬಂದ ನಂತರ ಅಪ್ಪ ಅಮ್ಮ ಇಬ್ಬರನ್ನೂ ಸಸಾರ ಮಾಡುವ ಗಂಡುಮಕ್ಕಳಿಲ್ಲವಾ? ಆಸ್ತಿಗೋಸ್ಕರ ನಾಟಕ ಮಾಡುವ ಗಂಡುಮಕ್ಕಳನ್ನು ನಾವು ನೋಡಿಲ್ಲವಾ? ಈ ಕಲಿಯುಗದಲ್ಲಿ ಎಲ್ಲವನ್ನೂ ನಾವು ಇಲ್ಲೇ ಅನುಭವಿಸಬೇಕು, ಹೋದ ಮೇಲೆ ಇರುವ ಲೋಕವನ್ನು ನಾವು ನೋಡಿದ್ದೇವೆಯೇ? ಕೆಲವೊಮ್ಮೆ ಗಂಡುಮಕ್ಕಳು ಹೊರದೇಶದಲ್ಲಿದ್ದಾಗ ತಂದೆ ಹೋದರೂ ನೋಡಲು ಬರಲು ಸಾಧ್ಯವಾಗುವುದಿಲ್ಲ; ವೈದಿಕ ಮಾಡಲು ಅನುಕೂಲವಾಗುವುದಿಲ್ಲ. ನೀವೇಕೆ ನಿಮಗೆ ಗಂಡುಮಕ್ಕಳಿಲ್ಲದಿರುವುದಕ್ಕೆ ಸದ್ಗತಿ ಸಿಗುವುದಿಲ್ಲ ಎಂದು ಭಾವಿಸುತ್ತೀರಿ? ನೀವು ಮಾಡಿರುವ ಒಳ್ಳೆಯ ಕೆಲಸಗಳು ನಿಮ್ಮನ್ನು ಕಾಯುತ್ತವೆ.  ನಾವಿದ್ದಾಗ ಮಕ್ಕಳು ಸುಖವಾಗಿದ್ದರೆ ಅದೇ ನಮಗೆ ಖುಷಿಯಲ್ಲವೇ? ನಮ್ಮ ಹೆಣ್ಣುಮಕ್ಕಳ ಹಣೆಬರಹ ಚೆನ್ನಾಗಿದ್ದರೆ ಅವರು ಚೆನ್ನಾಗಿಯೇ ನಮ್ಮ ಕಣ್ಣೆದುರಿಗೇ ಇರುತ್ತಾರೆ ಬಿಡಿ, ಅಂತ ಸಮಾಧಾನ ಹೇಳುತ್ತಿದ್ದಳು ಲೀಲಾ. 

ಏನೇ ಆಗಲಿ, ಮೂರೂ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡ ವೆಂಕಟೇಶ. ಮಕ್ಕಳಿಗೆ ಮನೆಯಲ್ಲಿ ಬೈಯುತ್ತಿದ್ದರೂ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಗಾದೆಯನ್ನು ಯಾವಾಗಲೂ ಹೇಳುತ್ತಿದ್ದರೂ,ನೀವು ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು ಎಂದು ಕುಹಕದ ನುಡಿಗಳನ್ನಾಡುತ್ತಿದ್ದರೂ,  ಬ್ಯಾಂಕ್‌, ಪೋಸ್ಟ್‌ ಆಫೀಸ್‌, ದಿನಸಿ, ಸೊಸೈಟಿ, ರೇಷನ್‌,  ಹೀಗೆ ಹೊರಗಿನ  ವ್ಯವಹಾರಗಳನ್ನೂ ಮಕ್ಕಳಿಗೆ ಕಲಿಸಿಕೊಟ್ಟ. ನೋಡನೋಡುತ್ತಾ ಮಕ್ಕಳು ದೊಡ್ಡವರಾದರು. ಓದಿನಲ್ಲಿ, ಇತರೇ ಕೆಲಸ ಕಾರ್ಯಗಳಲ್ಲಿ ಚುರುಕಾಗಿದ್ದರು. ದೊಡ್ಡ ಮಗಳಿಗೆ ಪದವಿ ಮುಗಿಯುತ್ತಲೇ ಸರ್ಕಾರಿ ಕೆಲಸ ಸಿಕ್ಕಿತು; ಮದುವೆಯೂ ಆಯಿತು. ಎರಡನೇ ಮಗಳಿಗೂ ಬ್ಯಾಂಕಿನಲ್ಲಿ ನೌಕರಿ ದೊರೆಯಿತು. ಆಕೆಗೂ ಒಳ್ಳೆಯ ಸಂಬಂಧ ಕೂಡಿಬಂದು ವಿವಾಹವಾಯಿತು. ಅಪ್ಪ, ನಿಮಗೆ ಇನ್ನೂ ಪುತ್ರ ವ್ಯಾಮೋಹ ಕಡಿಮೆಯಾಗಿಲ್ಲವೇ ಎಂದು ಮಕ್ಕಳು ತಮಾಷೆ ಮಾಡುವಷ್ಟು ಬೆಳೆದರು. ಮೂರನೆಯ ಮಗಳು ಲಾ ಮಾಡಬೇಕು ಅಂದಾಗ ಹೆಣ್ಣುಮಕ್ಕಳಿಗ್ಯಾಕೆ ಲಾ? ಅಂತ ಹೇಳುತ್ತಾ, ಬೈಯುತ್ತಲೇ ಕಾಲೇಜಿಗೆ ಕಳುಹಿಸಿದ್ದ. ಆಕೆ ಲಾ ಓದುತ್ತಿದ್ದಾಗಲೇ, ವೆಂಕಟೇಶನ ಆರೋಗ್ಯ ಹದಗೆಟ್ಟಿತು; ಲೀಲಾಳನ್ನು ಕರೆದು, ನಾನು ಇನ್ನು ಹೆಚ್ಚು ದಿನ ಇರಲಾರೆ. ಉಮಾಳಿಗೆ ಓದು ಮುಗಿದ ಕೂಡಲೇ ಮದುವೆ ಮಾಡಿಬಿಡು. ಅದೊಂದು ಜವಾಬ್ದಾರಿಯನ್ನು ನಾನು ನೆರವೇರಿಸಲಾಗಲಿಲ್ಲ. ಆದರೆ, ನೀನು  ಏನೂ ಯೋಚಿಸಬೇಡ. ನಿನಗಾಗಿ ಒಂದು ಸ್ವಂತ ಮನೆ ಇದೆ. ನಾನು ಹೋದರೂ ನನ್ನ ಪೆನ್ಷನ್‌ ಬರುತ್ತದೆ. ಲೀಲಾ ನೀನು ಯಾರ ಬಳಿಯೂ ಕೈ ಚಾಚುವ ಅಗತ್ಯವಿಲ್ಲ. ಧೈರ್ಯವಾಗಿರು, ನಾನು ಹೋಗುತ್ತೇನೆ ಎಂದು ಹೇಳುತ್ತಲೇ ಅಸು ನೀಗಿದನು.  ಹಳೆಯ ನೆನಪುಗಳು ಲೀಲಮ್ಮನ ಕಣ್ಣುಗಳನ್ನು ಒದ್ದೆ ಮಾಡಿದವು. 

ಈಗ ಉಮಾಳಿಗೂ ಮದುವೆಯಾಗಿದೆ. ಸೀಮಾ ಅಮ್ಮನ ಜೊತೆಯಲ್ಲೇ ಇರುತ್ತೇನೆ ಅಂತ ತಮ್ಮ ಮನೆಯ ಮೇಲೆ ಮನೆ ಕಟ್ಟಿಸಿಕೊಂಡು ಅಲ್ಲಿದ್ದಾಳೆ. ರಮಾ, ಉಮಾ ಇಬ್ಬರೂ ಆಗಾಗ ಬಂದು ಹೋಗುತ್ತಾರೆ. ಹೆಣ್ಣು ಮಕ್ಕಳೀಗ ಅಮ್ಮನಿಗೆ ಏನು ಬೇಕೋ ಅದನ್ನು ತೆಗೆದುಕೋ ಅನ್ನುತ್ತಾರೆ. ನಿನ್ನ ಖರ್ಚಿಗಾಗುತ್ತೆ ಇಟ್ಕೊಳಮ್ಮ ಅಂತ ಕೈಯಲ್ಲಿ ದುಡ್ಡು ತುರುಕಿ ಹೋಗುತ್ತಾರೆ. ಸೀರೆ ಅಂಗಡಿಗೆ  ಹೋಗಿದ್ವಿ ಅಮ್ಮ, ನಿನಗೆ ಈ ಕಲರ್‌ ಸೀರೆ ತುಂಬಾ ಚೆನ್ನಾಗಿ ಕಾಣುತ್ತೆ ಅಂತ ತಂದ್ವಿ ಅಂತ ಸೀರೆ ಕೈಯಲ್ಲಿಡುತ್ತಾರೆ. ಹುಷಾರಿಲ್ಲದಾಗ ಬಂದು ಆರೈಕೆ ಮಾಡುತ್ತಾರೆ. ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಮ್ಮ ಅಂತ ಒಂದರೆಡು ಪ್ರವಾಸಗಳಿಗೂ ಕಳಿಸಿದ್ದಾರೆ. ವರ್ಷದಲ್ಲಿ ಒಂದು ಹಬ್ಬಕ್ಕೆ ಎಲ್ಲರೂ ಒಟ್ಟಿಗೇ ಸೇರುತ್ತಾರೆ. ಲೀಲಮ್ಮಳೂ ಸ್ವಾಭಿಮಾನಿ. ಎಂದೂ ಮಕ್ಕಳನ್ನು ತನಗೆ ಇದು ಬೇಕು; ಅದು ಬೇಕು ಎಂದು ಕೇಳಿದವಳಲ್ಲ; ಆದರೆ ಅಮ್ಮನ ಅವಶ್ಯಕತೆಗಳನ್ನು ಗಮನಿಸಿಯೇ ಅಮ್ಮ ಕೇಳುವ ಮೊದಲೇ ಅವುಗಳನ್ನು ಪೂರೈಸಿಬಿಡುತ್ತಾರೆ ಹೆಣ್ಣುಮಕ್ಕಳು. ಒಟ್ಟಿನಲ್ಲಿ ಗಂಡು ಮಕ್ಕಳಿಲ್ಲ ಅಂತ ಲೀಲಮ್ಮಳಿಗೆ ಒಂದು ಬಾರಿಯೂ ಅನ್ನಿಸಿಯೇ ಇಲ್ಲ. 

ಲೀಲಮ್ಮಳ ದೃಷ್ಟಿ ಗೋಡೆಯ ಮೇಲಿದ್ದ ಗಂಡನ ಫೋಟೋ ಕಡೆಗೆ ಹೋಯಿತು. ಅದನ್ನು  ನೋಡುತ್ತಾ ಲೀಲಮ್ಮ ನಿಧಾನವಾಗಿ ಉಸುರಿದರು; ನೀವು ಇರಬೇಕಿತ್ತು ರೀ, ನಮ್ಮ ಹೆಣ್ಣುಮಕ್ಕಳನ್ನು ನೋಡಿ ಎಲ್ಲರೂ ಎಂತಹ ಪುಣ್ಯ ಮಾಡಿದ್ದೀರಾ? ಇಂತಹ ಮಕ್ಕಳನ್ನು ಪಡೆಯಲು ಎಂದು ಹೇಳುವುದನ್ನು ಕೇಳಿಸಿಕೊಳ್ಳಲು, ಅವರವರ ಉದ್ಯೋಗದಲ್ಲಿ ಯಶಸ್ಸನ್ನು ಪಡೆದಿರುವುದನ್ನು ನೋಡಲು, ಮೂರೂ ಜನ ಕಾರಿನಲ್ಲಿ ಓಡಾಡುವುದನ್ನು ನೋಡಿ ಸಂಭ್ರಮಿಸಲು, ನನ್ನನ್ನು ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುವುದನ್ನು ಗಮನಿಸಲು, ಹೋದವರ ಮನೆಯಲ್ಲಿ ಒಳ್ಳೆಯ ಹೆಸರು ತೆಗೆದುಕೊಂಡಿರುವುದನ್ನು ನೋಡಿ ಸಂತೋಷ ಪಡಲು, ಅಷ್ಟೇ ಅಲ್ಲ ನಿಮ್ಮ ಹೆಣ್ಣುಮಕ್ಕಳು, ಯಾರಿಗೂ ಕಡಿಮೆ ಇಲ್ಲದಂತೆ ತಮ್ಮ ಜೀವನ ನಡೆಸುತ್ತಿದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ಒಗ್ಗಟ್ಟಿನಿಂದ ಇದ್ದಾರೆ ಎಂಬುದನ್ನು ನೋಡುತ್ತಾ ಹೆಮ್ಮೆಪಡಲು, ನೀವು ಇರಬೇಕಿತ್ತು ರೀ ಎನ್ನುತ್ತಾ ಉರುಳಿ ಬಂದ ಕಣ್ಣೀರಿನ ಹನಿಗಳನ್ನು ಸೆರಗಿನ ತುದಿಯಲ್ಲಿ ಒರೆಸಿಕೊಂಡರು ಲೀಲಮ್ಮ. ಅಷ್ಟು ಹೊತ್ತಿಗೆ ದೀಪು, ಅಜ್ಜೀ ಇದೇನು? ಕಣ್ಣಿಗೇನಾದ್ರೂ ಬಿತ್ತಾ? ಯಾಕೆ ಅಳ್ತಿದ್ದೀಯಾ? ಅಂತ ಕೇಳ್ತಾನೇ, ತಗೋ ನಿನ್ನ ಮೊಬೈಲ್‌, ಇನ್ನು ನೀನು ಆರಾಮಾಗಿ ನಿನಗೆ ಬೇಕಾದ ಭಕ್ತಿಗೀತೆಗಳನ್ನು ಕೇಳಬಹುದು, ಮೆಸೇಜ್‌ ಕಳಿಸಬಹುದು, ದೇವರ ಸ್ತೋತ್ರಗಳನ್ನು ಓದಬಹುದು ಅಂತ ಹೇಳ್ತಾ ಅಜ್ಜಿಯ ಕಣ್ಣೀರನ್ನು ಒರೆಸಿದ.


ಸೋಮವಾರ, ಮೇ 24, 2021

ದೇವರ ಮಕ್ಕಳು

ನಮಸ್ತೆ ಸರ್‌, ನಾನು ಈ ಶಾಲೆಗೆ ಹೊಸದಾಗಿ ಬಂದಿರೋ ಮ್ಯಾಥ್ಸ್‌ ಟೀಚರ್ ಅಂತ ತನ್ನನ್ನು ತಾನು ಪರಿಚಯಿಸಿಕೊಂಡಳು ವಿಜಿ. ಶಾಲೆಯ ಮುಖ್ಯಸ್ಥರು ಆಕೆಯನ್ನು ನೋಡುತ್ತಾ ಓಹ್‌ 18 ನೇ ತಾರೀಕು ಕೌನ್ಸಿಲಿಂಗ್‌ ಆಯ್ತಲ್ಲಾ ಅದರಲ್ಲಿ ನಂ ಸ್ಕೂಲ್‌ ಸೆಲೆಕ್ಟ್‌ ಮಾಡಿಕೊಂಡ್ರಾ? ಕಂಗ್ರಾಚ್ಯುಲೇಷನ್ಸ್‌ ಅಂಡ್‌ ವೆಲ್‌ ಕಮ್‌ ಟು ಅವರ್ ಸ್ಕೂಲ್ ಅಂತ ಬರಮಾಡಿಕೊಂಡರು. ಮೂಲತಃ ಎಲ್ಲಿಯವರು ನೀವು? ವಿದ್ಯಾಭ್ಯಾಸ ಯಾವ ಊರಿನಲ್ಲಿ? ಡ್ಯೂಟಿ ರಿಪೋರ್ಟ್‌ ಬರೆಯಿರಿ. ಮಾರ್ಕ್ಸ್‌ ಕಾರ್ಡ್ಸ್‌ ಎಲ್ಲಾ ಫೋಟೋಕಾಪಿ ತಂದಿದ್ದೀರಾ? ನಿಮ್ಮ ಮನೆಯವರು ಎಲ್ಲಿ ಕೆಲಸ ಮಾಡ್ತಾರೆ?  ಅಂದಹಾಗೆ ನಿಮಗೆ ಎಷ್ಟು ಜನ ಮಕ್ಕಳು? ಅಂತ ಪ್ರಶ್ನೆಗಳ ಸುರಿಮಳೆಗೈದರು,  ಆಫೀಸರ್.‌ ಎಲ್ಲ ಪ್ರಶ್ನೆಗಳಿಗೂ ಸೂಕ್ತವಾಗಿ ಉತ್ತರಿಸಿ, ಡ್ಯೂಟಿ ರಿಪೋರ್ಟ್‌ ಮಾಡಿಕೊಂಡು, ಎಲ್ಲರ ಪರಿಚಯ ಮಾಡಿಕೊಳ್ಳಲು ಸ್ಟಾಫ್‌ ರೂಮಿಗೆ ತೆರಳಿದಳು ವಿಜಿ. ಅಲ್ಲಿ ಇದ್ದವರೆಲ್ಲ ಹೆಂಗೆಳೆಯರೇ. ಎಲ್ಲರ ಪರಿಚಯ ಮಾಡಿಕೊಂಡಾಗಲೂ ಮತ್ತೆ ಇದೇ ಪ್ರಶ್ನೆಗಳು. ಮತ್ತೆ ಅದೇ ಉತ್ತರಗಳು. 
ಉಭಯ ಕುಶಲೋಪರಿ ಮುಗಿದ ಮೇಲೆ, ಸ್ವಲ್ಪ ಸೀನಿಯರ್‌ ಹಾಗೂ ವಯಸ್ಸಿನಲ್ಲಿ ಹಿರಿಯವರಾದ ಸಾರಾ ಅವರು ಒಬ್ಬನೇ ಮಗ ಅಂತೀರಾ, ಮಗೂಗೆ ಎರಡೂವರೆ ವರ್ಷ ಅಂತೀರಾ.... ಯಾರಿದ್ದಾರೆ? ನೋಡಿಕೊಳ್ಳೋಕೆ? ಅಂತ ಕಾಳಜಿ ತೋರಿದರು. ಸಧ್ಯಕ್ಕೆ ಅತ್ತೆ, ಮಾವ ಬಂದಿದ್ದಾರೆ.. ಮುಂದೆ ನೋಡ್ಬೇಕು ಅಂತ ಹೇಳ್ತಾ ಉತ್ಸಾಹದಿಂದ ಕೆಲಸಕ್ಕೆ ತೊಡಗಿಕೊಂಡಳು ವಿಜಿ. 
ಕೆಲಸ ಮಾಡ್ತಾ ಮಾಡ್ತಾ... ಸಮಾನ ವಯಸ್ಕರ ಜೊತೆ ಬೆರೆಯುತ್ತಾ... ಮಕ್ಕಳೊಂದಿಗೆ ಮಕ್ಕಳಾಗುತ್ತಾ.. ತಾನಾಗಿಯೇ ಬಯಸಿ ಬಂದ ಶಿಕ್ಷಕ ವೃತ್ತಿಗೆ ಸಂಪೂರ್ಣ ನ್ಯಾಯ ಒದಗಿಸತೊಡಗಿದಳು ವಿಜಿ.
ಬೆಳಿಗ್ಗೆ ತನ್ನ ಮಗನನ್ನು ಸ್ಕೂಲಿಗೆ ಬಿಟ್ಟು, ಅವನಿಗೆ ಸ್ಕೂಲ್‌ ಮುಗಿದ ತಕ್ಷಣ ಶಾಲೆಯ ಎದುರಿಗಿದ್ದ ಪ್ಲೇ ಹೋಮ್‌ ಗೆ ಹೋಗಲು ತಿಳಿಸಿ, ಮಧ್ಯಾಹ್ನದ ಊಟ, ಸಂಜೆಯ ಸ್ನಾಕ್ಸ್‌ ಅನ್ನೂ ಸಹ ಪ್ಯಾಕ್‌ ಮಾಡಿ, ಪ್ಲೇ ಹೋಂ ನಲ್ಲಿ ಹಾಕಲು ಬೇರೆ ಬಟ್ಟೆಯನ್ನೂ ಸಿದ್ಧ ಮಾಡಿಟ್ಟು, ಎರಡು ಬ್ಯಾಗ್‌ ಗಳನ್ನು ತಯಾರು ಮಾಡಿಬಿಡುತ್ತಿದ್ದಳು ವಿಜಿ. ಕೆಲವೊಮ್ಮೆ ಸಂಜೆ ಬರುವುದು 5 ಗಂಟೆ ಆಗಬಹುದು... ಅಥವಾ 6 ಗಂಟೆ... ಅಷ್ಟರವರೆಗೆ ಮಗ ಪ್ಲೇ ಹೋಂ ನಲ್ಲೇ ಇರಬೇಕಿತ್ತು. ಅವಳು ಸ್ಕೂಲಿನಿಂದ ಬರುವಾಗ ಮಗನನ್ನೂ ಕರೆದುಕೊಂಡು ಬಂದು, ಮನೆಯಲ್ಲಿ ಹಾಲು ಕೊಟ್ಟು, ಏನಾದರೂ ತಿಂಡಿ ತಿನ್ನಿಸಿದ ಕೂಡಲೇ, ಮಗ  ಮತ್ತೆ ತನ್ನದೇ ಓರಗೆಯವರಾದ ಗೆಳೆಯರೊಂದಿಗೆ ಬೀದಿಯಲ್ಲಿ ಆಟವಾಡಲು ಹೋಗುತ್ತಿದ್ದ. ಬಂದ ಕೂಡಲೇ ಹೋಮ್‌ ವರ್ಕ್‌, ಸ್ವಲ್ಪ ಓದಿಸುವುದು... ದಿನ ಕಳೆದದ್ದೇ ತಿಳಿಯುತ್ತಿರಲಿಲ್ಲ.
ಇನ್ನು ಔದ್ಯೋಗಿಕ ಕ್ಷೇತ್ರದಲ್ಲಿ ಪರಿಚಯಗಳು ಬೆಳೆಯುತ್ತಾ ಬೆಳೆಯುತ್ತಾ ವಿಜಿಯ ಸಂಪರ್ಕ ಕ್ಷೇತ್ರ ದೊಡ್ಡದಾಗುತ್ತಾ ಹೋಯಿತು. ಪರಿಚಯವಾದವರೆಲ್ಲ ಒಂದೆರೆಡು ಪ್ರಶ್ನೆಗಳ ನಂತರ ಕೇಳುವ ಸಾಮಾನ್ಯ ಪ್ರಶ್ನೆ ಅಂದಹಾಗೆ ನಿಮಗೆ ಮಕ್ಕಳೆಷ್ಟು? ಅವರು ಏನು ಮಾಡುತ್ತಾರೆ? 
ಪ್ರಾರಂಭದಲ್ಲಿ ಒಬ್ಬನೇ ಮಗ ಈಗ ಯುಕೆಜಿ ಅನ್ನುತ್ತಿದ್ದ ವಿಜಿ,  ವರ್ಷಗಳು ಕಳೆದಂತೆ ಸ್ವಲ್ಪ ಪರಿಚಯಸ್ಥರಿಂದ ಇನ್ನೊಂದು ಪ್ರಶ್ನೆಯನ್ನೂ ಎದುರಿಸಬೇಕಾಯಿತು. ಓಹ್‌ ಒಬ್ಬನೇ ಮಗನಾ? ಯಾಕೆ ಮೇಡಂ ಇನ್ನೊಂದು ಮಗು ಬೇಡವಾ? ಅಂತ ಒಬ್ಬರಂದರೆ,  ಇಬ್ಬರೂ ಕೆಲಸಕ್ಕೆ ಹೋಗ್ತೀರಾ, ದುಡ್ಡಿನ ತೊಂದರೆ ನಿಮಗೆ ಇಲ್ಲವಲ್ಲ; ಎರಡು ಮಕ್ಕಳನ್ನು ಸಾಕಲು ಆಗೊಲ್ವಾ? ಯಾಕೆ ಒಂದೇ ಮಗು ಸಾಕಾ??  ಅಂತ ಮತ್ತೊಬ್ಬರು.   ಮನೆಯ ಓನರ್‌ ಅಂತೂ... ವಿಜಿಯವರೆ ಒಂದು ವಿಷಯ ಹೇಳ್ತೀನಿ ಬೇಜಾರು ಮಾಡ್ಕೊಬೇಡಿ.. ಒಬ್ಬ ಮಗ ಮಗ ಅಲ್ಲ... ಒಂದು ಕಣ್ಣು ಕಣ್ಣಲ್ಲ ಅಂತ ಗಾದೇನೇ ಇದೆ. ನಿಮ್ಮ ಮಗ ಈಗ 1ನೇ ಕ್ಲಾಸು. ಇದು ಸರಿಯಾದ ವಯಸ್ಸು... ನೀವ್ಯಾಕೆ ಇನ್ನೊಂದು ಮಗುವಿನ ಯೋಚನೆ ಮಾಡ್ಬಾರ್ದು? ಈ ಪ್ರಶ್ನೆಗೆ ಉತ್ತರ ಕೊಡಲು ತಡಕಾಡುತ್ತಿದ್ದಳು ವಿಜಿ. 
ಈಗ ಇರುವ ಮಗುವನ್ನೇ ಪ್ಲೇ ಹೋಮ್‌ ನಲ್ಲಿ ಬಿಟ್ಟು ಸ್ಕೂಲಿಗೆ ಹೋಗಬೇಕು. ಮನೆಯಲ್ಲಿ ಸಹಾಯ ಮಾಡುವವರು ಯಾರೂ ಇಲ್ಲ. ಇರುವ ಸಂಬಂಧಿಕರೂ ಬೇರೆಯ ಊರಿನಲ್ಲಿ. ಪತಿದೇವರದ್ದೋ 24 ಗಂಟೆಗಳೂ ಸಾಲದು ಎಂಬಂತಹ ಕೆಲಸ. ಒಮ್ಮೆಯಂತೂ ಮಗನನ್ನು ಪ್ಲೇ ಹೋಮ್‌ ನಲ್ಲಿ ಬಿಟ್ಟಿದ್ದಾಗ ಮಧ್ಯಾಹ್ನದ ಸಮಯದಲ್ಲಿ ಅವನು ಬಿದ್ದು, ತಲೆಗೆ ಕಲ್ಲು ಹೊಡೆದು, ರಕ್ತ ಹೊಳೆಯಂತೆ ಹರಿದು ಡಾಕ್ಟರ್‌ 4 ಹೊಲಿಗೆಗಳನ್ನು ಹಾಕಿದ್ದರು. ಇದು ವಿಜಿಗೆ ತಿಳಿದದ್ದು, ಸಂಜೆ ಅವನನ್ನು ಕರೆದುಕೊಂಡು ಬರಲು ಹೋದಾಗಲೇ. ತಲೆಗೆ ಬ್ಯಾಂಡೇಜ್‌ ಹಾಕಿಕೊಂಡು ಸಪ್ಪೆ ಮುಖ ಮಾಡಿಕೊಂಡು ಓಡಿಬಂದು ಅಮ್ಮಾ ಎಂದು ವಿಜಿಯನ್ನು ಮಗು ತಬ್ಬಿಕೊಂಡ ನೆನಪು ಅವಳಿಗೆ ಇನ್ನೂ ಹಸಿರಾಗಿದೆ. ಇರುವ ಮಗನನ್ನು ಹೀಗೆ ಇನ್ನೊಬ್ಬರು ನೋಡಿಕೊಳ್ಳುವಂತೆ ಬಿಡಬೇಕಾಯಿತಲ್ಲ ಎಂಬ ಹೊಟ್ಟೆಯ ಸಂಕಟ ಯಾರಿಗೆ ತಿಳಿಯುತ್ತದೆ? ಅದಕ್ಕೇ ಒಂದೇ ಮಗು ಸಾಕು ಎಂದು ನಿರ್ಧರಿಸಿಬಿಟ್ಟಿದ್ದರು ದಂಪತಿಗಳು..  ಈ ಮಗನೇನೋ ಎಲ್ಲರ ಜೊತೆ ಹೊಂದಿಕೊಂಡು ಎಲ್ಲಿ ಬಿಟ್ಟರೂ ಅಲ್ಲಿ ಇರುವ ಅಭ್ಯಾಸವನ್ನು ಮಾಡಿಕೊಂಡಿದ್ದಾನೆ.  ಆದರೆ ಇನ್ನೊಂದು ಮಗುವಾದರೆ ಬಿಟ್ಟು ಹೋಗುವುದೆಲ್ಲಿ? ಅಲ್ಲದೇ ಇಷ್ಟು ಕೆಲಸಗಳ ಒತ್ತಡಗಳ ಮಧ್ಯೆ ಇನ್ನೊಂದು ಮಗುವಿನ ಯೋಚನೆಯನ್ನೂ ಮಾಡಲು ಸಾಧ್ಯವಾಗಿರಲಿಲ್ಲ..
ಆದರೆ ಜನಗಳು ಬಿಡಬೇಕಲ್ಲ; ಸ್ಕೂಲಿನಲ್ಲಿ ಒಬ್ಬ ಟೀಚರ್‌ ಮೆಟರ್ನಿಟಿ ಲೀವ್‌ ಮುಗಿಸಿ ಬಂದ ಕೂಡಲೇ, ಸ್ನೇಹಿತರು ತಮಾಷೆ ಮಾಡುತ್ತಿದ್ದರು. ಇನ್ನು ನೆಕ್ಸ್ಟ್‌ ವಿಜಿಯದ್ದು ಅಂತ... ಇನ್ನೂ ನಿಮ್ಮ ವಯಸ್ಸು ಚಿಕ್ಕದು ವಿಜಿ. ಮನಸ್ಸು ಮಾಡಿ ಇನ್ನೊಂದು ಮಗುವಿಗೆ ಅಂತ ತುಂಬಾ ಆಪ್ತರಾದ ಸಾರಾ ಹೇಳಿದರೆ, ವಿಜಿ,  ವಯಸ್ಸಿದ್ದಾಗಲೇ ಇನ್ನೊಂದು ಮಗುವನ್ನು ಹೆತ್ತುಬಿಡಬೇಕು. ಆಮೇಲೆ ಬೇಕೂ ಅಂದ್ರೂ ಆಗಲ್ಲ... ಈಗ ನಿಮಗೆ 28 ವರ್ಷ ಇನ್ನು ತಡ ಮಾಡಬೇಡಿ, ಬೇಕಾದರೆ, ಇರುವ ರಜ ಎಲ್ಲ ಉಪಯೋಗಿಸಿಕೊಂಡರಾಯಿತು ಅಂತ  ಶಶಿ.  ವಿಜಿ.. ಪುಟ್ಟಂಗೆ 6 ವರ್ಷ ಆಯ್ತು; ಅವನಿಗೆ ತಮ್ಮನೋ ತಂಗೀನೋ ಯಾವಾಗ? ಅಂತ ಓರಗಿತ್ತಿಯ ಕಳಕಳಿ; ನೋಡು ವಿಜಿ ಈಗ್ಲೇ ಮಗು ಆದ್ರೆ ನನ್ನ ಕೈ ಕಾಲು ಗಟ್ಟಿ ಇದೆ. ಬಾಣಂತನ ಮಾಡ್ತೀನಿ ಅಂತ ಅಮ್ಮ; ನೋಡು ಆ ಮಗು ಬೆಳೆದು ದೊಡ್ಡವನಾದ ಮೇಲೆ, ತನ್ನ ಕಷ್ಟ ಸುಖವನ್ನ ಯಾರ ಜೊತೆ ಹಂಚಿಕೊಳ್ಳಬೇಕು? ಇನ್ನೊಂದು ಮಗು ಮನೆಯಲ್ಲಿ ಇರಬೇಕು ಅಂತ ಅತ್ತೆ; ನಿಮ್ಮ ಕಾಲಾನಂತರ ಆ ಮಗುವಿಗೆ ಜೊತೆ ಯಾರು? ಅಂತ ಆತ್ಮೀಯ ಗೆಳತಿ..... ಹೀಗೆ ಹಲವಾರು ಮಂದಿ ಹೇಳಿದಾಗಲೆಲ್ಲ ಮೊದಮೊದಲು ಉತ್ತರಿಸಲು ಹೆಣಗಾಡುತ್ತಿದ್ದ ವಿಜಿ... ನಂತರ ಒಂದೇ ಮಗು ಸಾಕು ಅಂತ ನಿರ್ಧಾರ ಮಾಡಿದ್ದೇವೆ ಅಂತ ಧೈರ್ಯವಾಗಿ ಹೇಳಿಬಿಡುತ್ತಿದ್ದಳು.
ಮಕ್ಕಳಿಗೆ ಪಾಠ ಮಾಡುವ ಸಂಭ್ರಮದಲ್ಲಿ, ಪರೀಕ್ಷೆಗಳ ತಯಾರಿಯಲ್ಲಿ, ವಿವಿಧ ಮಾಡ್ಯೂಲ್‌ ಗಳ ರಚನೆಯಲ್ಲಿ,  ಹೀಗೇ ಸಂಪೂರ್ಣವಾಗಿ ಶಾಲಾ ಕೆಲಸಗಳಲ್ಲಿ ಮುಳುಗಿಹೋದಳು ವಿಜಿ... 
ಮನೆಗೆ ಸ್ವಲ್ಪ ಹತ್ತಿರವಾಗುತ್ತದೆ ಎಂದು ಇನ್ನೊಂದು ಶಾಲೆಗೆ ವರ್ಗಾವಣೆಯಾದರೂ ಕೆಲಸಗಳ ಒತ್ತಡ ತಪ್ಪಲಿಲ್ಲ. ಆ ಸ್ಕೂಲಿನಲ್ಲಿ ಇದ್ದವರೆಲ್ಲರೂ ಮಹಿಳಾಮಣಿಗಳೇ... ವಿಜಿ ಇನ್ನೂ ಕಾಲ ಮಿಂಚಿಲ್ಲ... 36 ವರ್ಷ  ಅಂತೀರಿ. ಎಷ್ಟೋ ಜನಕ್ಕೆ 30ಕ್ಕೆ ಮದುವೆಯಾಗಿ ಈ ವಯಸ್ಸಿನಲ್ಲಿ ಮಕ್ಕಳಾಗುತ್ತವೆ. ನೀವು ಖಂಡಿತ ಇನ್ನೊಂದು ಮಗುವಿನ ಬಗ್ಗೆ ಯೋಚಿಸಿ  ಅಂತ ಎಲ್ಲರೂ ಹೇಳುವವರೇ.....
ಅದಕ್ಕೆಲ್ಲ ಉತ್ತರ  ಸಿದ್ಧವಾಗಿರುತ್ತಿತ್ತು. ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ. ಕಾಯಕವೇ ಕೈಲಾಸ.. ಸ್ಕೂಲಿಗೆ 6 ತಿಂಗಳು ರಜಾ ಹಾಕಲು ಸಾಧ್ಯವಿಲ್ಲ... ಮಗುವನ್ನು ಹೆರುವುದೊಂದೇ ಅಲ್ಲ... ಅದನ್ನು ಚೆನ್ನಾಗಿ ನೋಡಿಕೊಳ್ಳಬೇಕು... ಒಳ್ಳೆಯ ಸಂಸ್ಕಾರ ಕೊಡಬೇಕು... ಮಗನಿಗೆ ಎರಡೂವರೆ ವರ್ಷ ಆದಾಗ ಕೆಲಸ ಸಿಕ್ಕಿದ್ರಿಂದ  ಅವನನ್ನೇನೋ ಅಷ್ಟು ವರ್ಷ ಮನೆಯಲ್ಲಿದ್ದು ನೋಡಿಕೊಂಡೆ; ಆದರೆ  6 ತಿಂಗಳಿಂದಲೇ ಮತ್ತೆ ಪ್ಲೇ ಹೋಮಿನಲ್ಲಿ ಬಿಟ್ಟು ಹೋಗಲು ಮತ್ತೊಂದು ಮಗುವೇಕೆ? ಕೆಲಸದ ಒತ್ತಡವೇ ಸಾಕಷ್ಟಿದೆ;  ಮಗನಿಗೆ ಈಗಾಗಲೇ 14 ವರ್ಷ.... ಮತ್ತೆ ಈ ವಯಸ್ಸಿನಲ್ಲಿ ಆಸ್ಪತ್ರೆ ಓಡಾಟ... ಅಮ್ಮನಿಗೂ ವಯಸ್ಸಾಯ್ತು..... ಹೀಗೇ ನೆಪಗಳ ಮೇಲೆ ನೆಪ.....
ಕಾಲ ಯಾರನ್ನೂ ಕಾಯುವುದಿಲ್ಲ..... ಮಗನಿಗೆ ಬೆಂಗಳೂರಿನ ಒಳ್ಳೆಯ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಸೀಟು ಸಿಕ್ಕಿದಾಗ ಕಳುಹಿಸಲೇಬೇಕಾಯಿತು. ಈಗ ಮನೆಯಲ್ಲಿ ಇಬ್ಬರೇ.... ಮೊದಲಿಗಿಂತ ಹೆಚ್ಚು ಕೆಲಸ... ಒತ್ತಡವೂ ಹೆಚ್ಚು.... ಹಿಂದಿನದೆಲ್ಲ ನೆನೆದು ಮನಸ್ಸು ಮತ್ತೆ ಮತ್ತೆ ಭಾರ.... ಇನ್ನೊಂದು ಮಗು ಇರಬೇಕಿತ್ತು.... ನನ್ನ ಹಿಂದೆ ಮುಂದೆ ಓಡಾಡಿಕೊಂಡಿರಲು.... ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡಲು...  ಮಗಳಾಗಿದ್ದರೆ, ನನ್ನ ಸೀರೆ, ಒಡವೆಗಳನ್ನು ಧರಿಸಲು.... ನನ್ನ ಕಷ್ಟಗಳನ್ನು ಹಂಚಿಕೊಳ್ಳಲು.... ನನ್ನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು.... ಮಗನಾಗಿದ್ದರೆ, ಅಮ್ಮ,  ಅಣ್ಣ ಊರಿನಲ್ಲಿ ಇರಲಿ, ನಾನು ನಿನ್ನ ಜೊತೆ ಇರುತ್ತೇನೆ ಎಂದು ಹೇಳಲು, ಅಣ್ಣನಿಗೆ ಪ್ರೀತಿಯ ತಮ್ಮನಾಗಲು... ಅಪ್ಪನಿಗೆ ಮುದ್ದಿನ ಮಗನಾಗಲು.... ಎಲ್ಲರಿಗೂ ಕೈ ಕೂಸಾಗಲು.... ದೇವರೇ! ಈ ಮನಸ್ಸು ಮೊದಲೇ ಏಕೆ ಬರಲಿಲ್ಲ?  ಕೆಲಸಗಳು ಯಾವತ್ತೂ ಇದ್ದಿದ್ದೇ... ವಯಸ್ಸು ಇದ್ದಾಗ ಮನಸ್ಸು ಏಕೆ ಮಾಡಲಿಲ್ಲ?  ಆದರೆ ..... ಈಗ ವಯಸ್ಸು ಮೀರಿ ಹೋಯಿತಲ್ಲ...ಈ ವಯಸ್ಸಿನಲ್ಲಿ ಮಗುವನ್ನು ಹೆರಲು ಸಾಧ್ಯವಿಲ್ಲ... ಸಾಕುವ ಸಹನೆ ಮೊದಲೇ ಇಲ್ಲ....  ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ....ವರ್ತಮಾನವನ್ನು ಬಿಟ್ಟು,  ಭೂತಕಾಲದಲ್ಲಿ ಇರುವುದು ತರವಲ್ಲ..... ಹೀಗೆ ಹಲವು ವಿಧದಲ್ಲಿ ಯೋಚನೆಗಳು ಕಾಡಲಾರಂಭಿಸಿದವು. ಸಣ್ಣ ಮಕ್ಕಳು ಆಟವಾಡುವುದನ್ನು ನೋಡಿದಾಗಲೆಲ್ಲ ಮನೆಯಲ್ಲಿ ಇನ್ನೊಂದು ಮಗು ಇರಬೇಕಿತ್ತು ಎಂಬ ಜಪ ಪ್ರಾರಂಭವಾಗುತ್ತಿತ್ತು...
ಆದರೆ ಮನವೆಂಬ ಮರ್ಕಟ ಇನ್ನೊಂದು ವಿಧವಾಗಿ ಯೋಚಿಸಲು ಶುರುವಿಟ್ಟಿತು...
 ಅದೇಕೆ? ಜೀವಿಯನ್ನು ಭೂಮಿಗೆ ತರುವ ಯೋಗ್ಯತೆ ನಮಗೆ ಮಾತ್ರವಿದೆಯೇ? ನಾವು ಮನಸ್ಸು ಮಾಡಿದರೆ ಮಕ್ಕಳಾಗಿ ಬಿಡುತ್ತದೆಯೇ? ಮಗುವೊಂದು  ಭೂಮಿಗೆ ಬರಲು ನಾವು ಕಾರಣವಾಗುತ್ತೇವೆ ಅಷ್ಟೇ... ನಮಗೆ ಒಂದು ಮಗುವನ್ನು ಮಾತ್ರ ಭೂಮಿಗೆ ತರುವ ಅವಕಾಶ... ಎಷ್ಟೋ ಜನ ಮಕ್ಕಳಾಗದಂತೆ ಎಚ್ಚರಿಕೆ ವಹಿಸಿದರೂ ಮಕ್ಕಳಾಗುವುದಿಲ್ಲವೇ?  ಅಥವಾ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ, ವೈದ್ಯಕೀಯವಾಗಿ ಎಲ್ಲವೂ ಸರಿ ಇದ್ದರೂ ಅವರಿಗೆ ಮಕ್ಕಳೇ ಆಗುವುದಿಲ್ಲವಲ್ಲವೇ? ನನಗೇ ತಿಳಿದಿರುವಂತೆ ನನ್ನ ಆತ್ಮೀಯ ಗೆಳತಿ ಎರಡು ಬಾರಿ ಗರ್ಭ ಧರಿಸಿದರೂ ಮಗುವನ್ನು ಉಳಿಸಿಕೊಳ್ಳಲಾಗಲಿಲ್ಲ; ಮತ್ತೊಬ್ಬಳಿಗೆ ದಿನ ತುಂಬಿದ ನಂತರ ಹೆರಿಗೆಯಾದರೂ ಜನಿಸಿದ ಕೆಲವೇ ಗಂಟೆಗಳಲ್ಲಿ ಶಿಶುವಿನ ಮರಣ; ಮತ್ತೊಬ್ಬಳ ಮನೆಯಲ್ಲಿ ಗಂಡುಮಗುವೇ ಬೇಕೆಂದು, ಇಬ್ಬರು ಹೆಣ್ಣುಮಕ್ಕಳಿದ್ದರೂ ಮತ್ತೆ ಮಗುವಿಗಾಗಿ ಪ್ರಯತ್ನ ಆದರೆ ಅದೂ ಹೆಣ್ಣು; ಹಾಗಾದರೆ ಇದು ದೈವ ನಿಯಾಮಕವೇ? ಹೆಚ್ಚು ಮಕ್ಕಳು ಇರಬೇಕು ಎಂಬ ಬಯಕೆ ಏಕೆ? ಭಾರತೀಯ ಸಂಸ್ಕೃತಿಯಲ್ಲಿ ಮಕ್ಕಳು ಪೋಷಕರಿಗೆ ಆಸರೆ ಎಂದೇ?
ಎಷ್ಟೇ ಮಕ್ಕಳಿದ್ದರೂ ಕೊನೆಗಾಲದಲ್ಲಿ ಅವರ ಜೊತೆಗೆ ಯಾರೂ ಇಲ್ಲದಂತೆ ಎಷ್ಟೋ ಜನರ ಬದುಕು ಅಂತ್ಯಗೊಳ್ಳುವುದಿಲ್ಲವೇ? ಒಬ್ಬೊಬ್ಬ ಮಗ/ಮಗಳು ಒಂದೊಂದು ಕಡೆ ಇದ್ದು ವೃದ್ಧಾಶ್ರಮದಲ್ಲಿ ಇರುವ ಎಷ್ಟೋ ಹಿರಿಯ ಜೀವಗಳಿಲ್ಲವೇ? ವಯಸ್ಸಾದ ನಂತರ ನಮ್ಮನ್ನು ನೋಡಿಕೊಳ್ಳಬೇಕು ಎಂಬ ಸ್ವಾರ್ಥವೂ ಇದರಲ್ಲಿ ಅಡಗಿದೆಯೇ?  ಒಂದು ಮುತ್ತಿನಂಥ ಮಗುವನ್ನು ಹಡೆದರೆ ಸಾಲದೇ?  ಜನಸಂಖ್ಯೆ ಬಿಲಿಯನ್‌ ಗಳನ್ನು ದಾಟುತ್ತಿರುವಾಗ ನಾವು ಮಾಡಿದ ಆಲೋಚನೆ ಸರಿಯಲ್ಲವೇ? ಹೇಗಿದ್ದರೂ ನಾವು ಬರುವಾಗಲೂ ಒಂಟಿ, ಹೋಗುವಾಗಲೂ ಒಂಟಿ ಅಲ್ಲವೇ? ಎಂದು ಯೋಚಿಸುತ್ತಾ ಯೋಚಿಸುತ್ತಾ ಹೈರಾಣಾಗಿ ಹೋಗಿದ್ದ ವಿಜಿಗೆ.... ಒಂದೆರೆಡು ದಿನಗಳ ಹಿಂದೆ ಕೇಳಿದ ಖಲೀಲ್‌ ಗಿಬ್ರಾನ್‌ ಅವರ ಕವಿತೆ ನೆನಪಾಯಿತು...
ನಿಮ್ಮ ಮಕ್ಕಳು ನಿಮ್ಮವರಲ್ಲ.....  ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು ನಿಮ್ಮಿಂದಾಗಿ ಅಲ್ಲ .... ನೀವು ಬಿಲ್ಲಾದರೆ, ನಿಮ್ಮ ಮಕ್ಕಳು ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು.... ಬಿಲ್ಲುಗಾರನು ಬಾಣಗಳನ್ನು ದೂರಕ್ಕೆ ಚಿಮ್ಮಿಸಲು ಬಿಲ್ಲನ್ನು ಬಾಗಿಸುತ್ತಾನೆ; ನೀವು ಬಾಗಬೇಕು....  ಈ ಕವಿತೆಯ ಆಶಯ ನಮ್ಮ ಮಕ್ಕಳ ಮೇಲೆ ನಮ್ಮ ಆಲೋಚನೆಗಳನ್ನು ಹೇರಬಾರದು, ಅವರಿಗೆ ಅವರದ್ದೇ ದಾರಿಯಿದೆ, ಗುರಿಯಿದೆ ಎಂಬುದಾಗಿದ್ದರೂ ವಿಜಿಗೆ ಇನ್ನೊಂದು ಸತ್ಯ ಹೊಳೆಯಿತು....
ಜೀವಂತ ಬಾಣಗಳು... ಯಾರ ಮಕ್ಕಳಾದರೇನು? ಆ ಬಾಣಗಳು  ಬಿಲ್ಲುಗಾರನೆಂಬ ದೇವನಿಂದ ಹೊರಟ ದೇವರ ಮಕ್ಕಳು..... ದೇವರ ಮಕ್ಕಳು...... ಮಕ್ಕಳ ಸುತ್ತಲೇ ಕೆಲಸ ಮಾಡುವ ತನಗೇಕೆ ಇದರ ಅರಿವಾಗಲಿಲ್ಲ? ವಿವಿಧ ಹಿನ್ನೆಲೆಗಳಿಂದ ಬಂದ ಹಲವು ಮಕ್ಕಳು. ವಿಜಿಗೆ ನೆಮ್ಮದಿಯಾಯಿತು.... ಈಗ,  ಆಕೆ ನಿಮಗೆ ಎಷ್ಟು ಜನ ಮಕ್ಕಳು? ಎಂಬ ಪ್ರಶ್ನೆಗೆ ಉತ್ತರಿಸಲು ಹಿಂಜರಿಯಲಾರಳು... ಈಗ ಆಕೆಗೆ ಬಹಳಷ್ಟು ಮಕ್ಕಳು... ಶಾಲೆಯ ಮಕ್ಕಳೆಲ್ಲರೂ ಆಕೆಯ ಮಕ್ಕಳು....ದೇವರ ಮಕ್ಕಳು....  ನಾವೇನನ್ನೋ ಸಾಧಿಸುತ್ತೇವೆ ಎಂಬ ಅದ್ಭುತ ಹೊಳಪನ್ನು ಕಂಗಳಲ್ಲಿ ಇಟ್ಟುಕೊಂಡು, ನಾಳಿನ ಸುಂದರ ಬದುಕಿನ ಹೊಂಗನಸನ್ನು ಹೊಂದಿರುವ, ಅನಂತದೆಡೆಗೆ ಹಾರಿಹೋಗಲು ಸಜ್ಜಾಗಿ ಮಾರ್ಗದರ್ಶನಕ್ಕಾಗಿ ಕಾದಿರುವ ಜೀವಂತ ಬಾಣಗಳಾದ ದೇವರ ಮಕ್ಕಳು....

ಬುಧವಾರ, ಏಪ್ರಿಲ್ 28, 2021

ಮೋಹ

 ಸೀರೆ, ಸೀರೆ ಸೀರೆ ಎಲ್ಲೆಲ್ಲೂ ಹಾರೈತೆ, ಸೂರೆ ಸೂರೆ ಸೂರೆ  ಮನಸೂರೆ ಮಾಡೈತೆ ಎಂಬ ಹಾಡನ್ನು ಗುನುಗುತ್ತಾ ಸೀರೆ ಉಟ್ಟು ಸ್ವಾತಂತ್ರ್ಯ ದಿನದ ಸಂಭ್ರಮವನ್ನಾಚರಿಸಲು  ಶಾಲೆಗೆ ಹೊರಡಲು ಸಿದ್ಧಳಾದಳು ಗೀತ.  ಹೆಂಗೆಳೆಯರ ಮನಕದ್ದಿರುವ ಹಾಗೂ ಮನಗೆದ್ದಿರುವ ಸೀರೆಗೆ ಎಲ್ಲೇ ಹೋಗಲಿ ಅಗ್ರಸ್ಥಾನ. ಕಚೇರಿಗಳಲ್ಲಾದರೆ ಬೇರೆ ರೀತಿಯ ಉಡುಪು ನಡೆಯುತ್ತದೆ; ಆದರೆ ಶಾಲೆ ಕಾಲೇಜು ಎಂದರೆ, ಸೀರೆಯನ್ನು ಉಡಲೇಬೇಕು ಮಹಿಳಾಮಣಿಗಳು. ಮಕ್ಕಳಿಗಿಂತ ವಿಭಿನ್ನವಾಗಿ ಕಾಣಲು, ಮಕ್ಕಳೆದುರಿಗೆ ಸ್ವಲ್ಪ ದೊಡ್ಡವರಂತೆ ತೋರಿಸಿಕೊಳ್ಳಲು, ಗೌರವ ಭಾವನೆಯನ್ನು ಮೂಡಿಸಲು, ಸೀರೆ  ಸಹಾಯ ಮಾಡಿದಷ್ಟು ಇನ್ಯಾವ ಉಡುಪೂ ಮಾಡಲಾರದು. ಇನ್ನು ವಿಶೇಷ ಸಂದರ್ಭಗಳು ಬಂದರಂತೂ ಕೇಳುವುದೇ ಬೇಡ; ರಾಷ್ಟ್ರೀಯ ಹಬ್ಬಗಳು, ವಿವಿಧ ದಿನಾಚರಣೆಗಳು, ಸರಸ್ವತಿ ಪೂಜೆ, ಶಾಲಾ ವಾರ್ಷಿಕೋತ್ಸವ, ಸೆಂಡ್‌ ಆಫ್‌ ಹೀಗೆ ಶಾಲಾ ಕಾರ್ಯಕ್ರಮಗಳ ಪಟ್ಟಿ ಬಲು ದೊಡ್ಡದಿರುತ್ತದೆ. ಅದಕ್ಕೆ ತಕ್ಕಂತೆ ಸೀರೆಗಳನ್ನು ಉಡುವ ವಿಶೇಷ ಕೌಶಲವೂ ಶಿಕ್ಷಕಿಯರಿಗಿರುತ್ತದೆ. 

ಇಂದು ಸ್ವಾತಂತ್ರ್ಯ ದಿನದ ಸಂಭ್ರಮ; ತ್ರಿವರ್ಣಧ್ವಜವನ್ನು ನೆನಪಿಸುವ ಕೇಸರಿ ಬಿಳಿ ಹಸಿರಿನ ಬಣ್ಣಗಳ ಛಾಯೆಯಿರುವ ಸೀರೆಯನ್ನುಟ್ಟು ನೆರಿಗೆಗಳನ್ನು ಚಿಮ್ಮುತ್ತಾ ಶಾಲೆಗೆ ಬಂದು ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುವಾಗಲೇ ಗೀತಾಳಿಗೆ ನೆನಪಾದದ್ದು  ಓಹ್‌ ಇಂದು ಸ್ಟಾಫ್‌ ನ ಹೆಂಗೆಳೆಯರೆಲ್ಲರೂ ಸಮಾರಂಭದ ನಂತರ, ಮೈಸೂರು ಸಿಲ್ಕ್‌ ಸೀರೆಯನ್ನು ಕೊಳ್ಳಲು ಹೋಗಬೇಕು ಎಂದು.ಸ್ಯಾಲರಿ ಸರ್ಟಿಫಿಕೇಟ್‌ ತೋರಿಸಿದರಾಯಿತು, ಅಪ್ಲಿಕೇಷನ್‌ ತುಂಬಿ, ಫೋಟೋ ಅಂಟಿಸಿ, ಆಧಾರ್‌ ಕಾರ್ಡ್‌ ಕೊಟ್ಟು, 10 ಬ್ಲಾಂಕ್‌ ಚೆಕ್‌ ಗಳನ್ನು ನೀಡಿದರಾಯಿತು; ನಾವು ಆಯ್ಕೆ ಮಾಡುವ ಸೀರೆಗೆ ಮೊದಲ ಕಂತು ನೀಡಿದ ನಂತರ ಉಳಿದ ಹಣವನ್ನು ಸಮಾನವಾಗಿ ಚೆಕ್‌ ಮೂಲಕ ಕೊಡಬೇಕು. ಒಂದೇ ಬಾರಿಗೆ 25, 30 ಸಾವಿರದ ಖರ್ಚಿಲ್ಲ; ಬಡ್ಡಿಯೂ ಇಲ್ಲ; ಆದ್ದರಿಂದಲೇ ನಾವು 5 ಜನ ಮಹಿಳೆಯರು ಮೈಸೂರು ಸಿಲ್ಕ್‌ ಸೀರೆ ಕೊಳ್ಳಬೇಕೆಂಬ ಮನಸ್ಸು ಮಾಡಿದ್ದು. 

ಸೀರೆ ಅಂಗಡಿಗೆ ಹೋಗಿದ್ದೂ ಆಯಿತು; ಸೀರೆ ಕೊಂಡಿದ್ದೂ ಆಯಿತು; ಮನೆಯಲ್ಲಿ ಸೀರೆ ತೋರಿಸಿದ್ದೂ ಆಯಿತು; ಸಂಕ್ರಾಂತಿಗೆ, ಯುಗಾದಿಗೆ ಸೀರೆ ತಗೊಂಡಾಗಿದೆ, ಈಗ ಮತ್ತೆ ಸೀರೆ? ಅಂತ ಮನೆಯಲ್ಲಿ ಬೈಸಿಕೊಂಡದ್ದೂ ಆಯಿತು. ಇರಲಿ ಬಿಡಿ; ಪ್ರತಿದಿನ ಶಾಲೆಗೆ ಸೀರೆ ಉಡಲೇಬೇಕಲ್ಲವೇ? ಅಂತ ಸಮಜಾಯಿಷಿ ಮಾಡಿದ್ದೂ ಆಯಿತು. ಸೀರೆಯನ್ನು ಬೀರುವಿನಲ್ಲಿ ಎತ್ತಿಡಲು ಹೋದಾಗ ಹಲವಾರು ಬಣ್ಣಗಳ, ಬೇರೆ ಬೇರೆ ಗುಣಮಟ್ಟದ ಅನೇಕ ಸೀರೆಗಳು ಕಣ್ಣಿಗೆ ಬಿದ್ದವು.

ಶಿಕ್ಷಕರಿಗೆ ಶೋಭೆಯನ್ನು ನೀಡುವುದೇ ಕಾಟನ್‌ ಸೀರೆ ಎಂದು ಹಲವು ಕಾಟನ್‌ ಸೀರೆಗಳು; ವಿಶೇಷ ಸಂದರ್ಭಗಳಲ್ಲಿ ಉಡಲು ಡಿಸೈನರ್‌ ಸೀರೆಗಳು; ಹಬ್ಬ ಹರಿದಿನಗಳಿಗಾಗಿ ಕಂಚಿ ಸೀರೆಗಳು; ಹಗುರವಾಗಿರುತ್ತದೆ ಮತ್ತು ಆರಾಮದಾಯಕ ಎಂದು ಮೈಸೂರು ಸಿಲ್ಕ್‌ ಸೀರೆಗಳು; ಟ್ರೈನಿಂಗ್‌, ವರ್ಕ್ ಶಾಪ್‌ ಗಳಲ್ಲಿ ಭಾಗವಹಿಸಲು ರಾ ಸಿಲ್ಕ್‌ ಮತ್ತು ಕ್ರೇಪ್‌ ಸಿಲ್ಕ್‌ ಸೀರೆಗಳು, ಸರಳವಾದ ಸಮಾರಂಭಗಳಿಗಾಗಿ ಪ್ರಿಂಟೆಡ್ ಸಿಲ್ಕ್‌ ಸೀರೆಗಳು, ಮದುವೆಗಳಿಗೆ ಹೋಗುವುದಕ್ಕಾಗಿ ದೊಡ್ಡ ಅಂಚಿನ ಭಾರೀ ಸೀರೆಗಳು,  ಅಪ್ಪ ಕೊಡಿಸಿದ ಮೊದಲ ವಾಟರ್‌ ಪ್ರೂಫ್‌ ಸೀರೆ, ಗಂಡ ಕೊಡಿಸಿದ ಮೊದಲ ಮೈಸೂರು ಸಿಲ್ಕ್‌ ಸೀರೆ, ತಾನೇ ಇಷ್ಟಪಟ್ಟು ತೆಗೆದುಕೊಂಡ ಕಾಟನ್‌ ಸಿಲ್ಕ್‌ ಸೀರೆ, ಹೊಸದಾಗಿದೆ ಟ್ರೆಂಡಿ ಎಂದು ಕೊಂಡು ಕೊಂಡ ಲಿನೆನ್‌ ಸೀರೆ, ಟ್ರೈನಿಂಗ್‌ ನೆನಪಿಗಾಗಿ ತೆಗೆದುಕೊಂಡ ಸಾಫ್ಟ್‌ ಸಿಲ್ಕ್‌ ಸೀರೆ, ಎಲ್ಲವೂ ಕಂಚಿಮಯ ಎಂದುಕೊಂಡು ಖರೀದಿಸಿದ ಬೆನಾರಸ್‌ ಸೀರೆ; ಬೇರೆ ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿ ಪ್ರಸಿದ್ಧವಾಗಿದೆ ಎಂದು ತೆಗೆದುಕೊಂಡ ಪಟೋಲ ಸೀರೆ, ಪೂಚಂಪಲ್ಲಿ ಸೀರೆ, ಕಾಶ್ಮೀರಿ ಸಿಲ್ಕ್‌ ಸೀರೆ, ಬಾಂದನಿ ಡಿಸೈನ್‌ ಸೀರೆ.. ಅತ್ತೆ ಕೊಡಿಸಿದ ಜಾರ್ಜೆಟ್‌ ಸೀರೆ,  ಕಸೂತಿ ಸೀರೆ, ನನಗೆ ವಯಸ್ಸಾಯಿತು, ನೀನು ಉಡು ಎಂದು ಅಮ್ಮ ಕೊಟ್ಟಿರುವ ಭಾರವಾಗಿರುವ ಹಳೆಯ ಕಾಲದ ಅಚ್ಚ ರೇಷ್ಮೆ ಸೀರೆ, ಸಂಬಂಧಿಕರು ನೀಡಿದ ಸಿಂಥೆಟಿಕ್‌ ಸೀರೆಗಳು......

ಅಬ್ಬಬ್ಬಾ ಒಂದೇ ಎರಡೇ ??? ಬೀರುವಿನ ಅರೆಗಳ ತುಂಬಾ ಸೀರೆಗಳು.... ಏನೇ ಆಗಲೀ ಸೀರೆಗಳನ್ನು ಬೀರುವಿನಲ್ಲೇ ಇಟ್ಟು ಪೂಜಿಸುವುದಿಲ್ಲ; ಪ್ರತಿದಿನ ಒಂದೊಂದು ಸೀರೆ ಉಟ್ಟೇ ಉಡುತ್ತೇನೆ ಎಷ್ಟು ಸೀರೆಗಳಿದ್ದರೂ ಸಾಕಾಗುವುದಿಲ್ಲ; ಅದಕ್ಕೇ ಸೀರೆ ಕೊಳ್ಳಲು ಒಂದು ಸಂದರ್ಭವೇ ಬೇಕೆಂದಿಲ್ಲ; ಹಬ್ಬಗಳು, ಹುಟ್ಟಿದ ದಿನ, ಮದುವೆ ಮುಂಜಿಗಳೆಲ್ಲ ನೆಪಮಾತ್ರ; ಕೊಳ್ಳಬೇಕೆನಿಸಿದಾಗ ಸೀರೆಗಳನ್ನು ಕೊಳ್ಳುತ್ತಿದ್ದಳು ಗೀತ!!! ಯಾಕೆ ಸೀರೆಗಳೆಂದರೆ ಅಷ್ಟು ಮೋಹ? ಅಷ್ಟು ದುಡ್ಡು ಕೊಟ್ಟು ಸೀರೆಗಳನ್ನು ಕೊಳ್ಳುವುದಾದರೂ ಏಕೆ? ಸೀರೆಗಳಿಗೆ ಹಾಕುವ ದುಡ್ಡು ಡೆಡ್‌ ಇನ್ವೆಸ್ಟ್‌ಮೆಂಟ್ ಅಂತ ಗೊತ್ತಿದ್ದರೂ ಅದಕ್ಕೆ ದುಡ್ಡು ಸುರಿಯುವುದು ಏಕೆ? ಅನಗತ್ಯವಾಗಿ ಈ ಕೊಳ್ಳುಬಾಕತನ ಏಕೆ?  ಹೋಗಲಿ ಕಡಿಮೆ ದುಡ್ಡು ಕೊಟ್ಟು ಸಾಮಾನ್ಯ ಸೀರೆಗಳನ್ನು ಕೊಳ್ಳಬಹುದಲ್ಲ?? ಎಂಬಂತಹ ಎಷ್ಟೋ ಪ್ರಶ್ನೆಗಳು ಗೀತಾಳನ್ನು ಕಾಡಿದ್ದಿದೆ. ಈ ಪ್ರಶ್ನೆಗಳಿಗೆಲ್ಲ ಒಂದೇ  ಉತ್ತರ..... ಒಂದು ಒಳ್ಳೆಯ ಸೀರೆಯನ್ನು ಉಟ್ಟಾಗ ಸಿಗುವ ಆನಂದ....ಸ್ನೇಹಿತರು, ಗೆಳತಿಯರು, ಸಂಬಂಧಿಕರು ಎಷ್ಟು ಚೆನ್ನಾಗಿದೆ ಈ ಸೀರೆ! ನಿಮಗೆ ಚೆನ್ನಾಗಿ ಒಪ್ಪುತ್ತೆ ಎಂದು ಹೇಳಿದಾಗ ಸಿಗುವ ಸಂತೋಷ ಎಷ್ಟು ದುಡ್ಡು ಕೊಟ್ಟರೂ ಸಿಗುವುದಿಲ್ಲ ಎಂಬುದೇ  ಆಗಿತ್ತು. ಅಲ್ಲದೇ ನಮ್ಮಂತಹವರು ಸೀರೆ ಉಡುವುದರಿಂದ ತಾನೇ ನೇಕಾರರಿಗೆ ವ್ಯಾಪಾರ, ಸರ್ಕಾರಕ್ಕೆ ವ್ಯವಹಾರ ಎಂಬ  ಸಮರ್ಥನೆಯೂ ಆಕೆಗಿತ್ತು.

 ಹೀಗೆ ದಿನಕ್ಕೊಂದು ಸೀರೆ ಉಡುತ್ತಾ ಶಾಲಾಕಾರ್ಯಗಳಲ್ಲಿ ಮುಳುಗಿಹೋಗಿ, ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಬರಸಿಡಿಲಿನಂತೆ ಬಂದೆರಗಿತ್ತು ಕೊರೊನಾ ವೈರಸ್‌ನ ಅಟ್ಟಹಾಸ!! ಪ್ರಪಂಚವನ್ನೇ ನಡುಗಿಸಿದ್ದ ಕೋವಿಡ್‌ 19 ಎಂಬ ಮಹಾಮಾರಿ ಭಾರತಕ್ಕೆ ದಾಂಗುಡಿಯಿಟ್ಟು ಒಂದೊಂದೇ ಜೀವಗಳನ್ನು ಬಲಿ ಪಡೆಯತೊಡಗಿತು; ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಯಿತು; ಲಾಕ್‌ ಡೌನ್‌ ಮೊರೆಹೋಗಲೇಬೇಕಾಯಿತು; ಶಾಲೆಗೆ ಹೋಗುವುದಿರಲಿ, ಮನೆಯಿಂದ ಹೊರಗೆ ಹೋಗುವುದೇ ದುಸ್ತರವಾಯಿತು. ಮದುವೆ-ವಿವಾಹಗಳಿರಲಿ, ಸರಳ ಸಮಾರಂಭಗಳಿಗೆ ಹಾಜರಿ ಹಾಕುವುದಕ್ಕೂ ಕತ್ತರಿ ಬಿತ್ತು. ಟ್ರೈನಿಂಗ್‌, ವರ್ಕ್‌ ಶಾಪ್‌ ಗಳಿರಲಿ ಸಧ್ಯ,  ಗುಂಪಿನಲ್ಲಿ ಐದಾರು ಜನ ಸೇರುವುದೂ ಕಷ್ಟವಾಯಿತು;  ಸೀರೆಗಳನ್ನು ಉಡುವುದಿರಲಿ......ಬೀರುವಿನ ಬಾಗಿಲನ್ನು ತೆರೆಯುವುದೇ ಅಪರೂಪವಾಯಿತು. ಮನೆಯಲ್ಲಿಯೇ ಕಟ್ಟಿಹಾಕಿದಂತಾಯಿತು.....ಯಾವ ಕೆಲಸವನ್ನು ಮಾಡಲು ಹೋದರೂ ಹಿಡಿದು ಬಿಟ್ಟಂತಾಯಿತು......

ಅಂತೂ ಇಂತೂ ಶಾಲೆ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾದರೂ.... ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಬೇಕು; ಶಾಲೆಯಿಂದ ಬಂದ ತಕ್ಷಣ ಧರಿಸಿದ ಬಟ್ಟೆಗಳನ್ನು ಬಿಸಿನೀರಿನಲ್ಲಿ ನೆನೆಸಿ, ಒಗೆಯಬೇಕು; ಸ್ನಾನ ಮಾಡಬೇಕು; ಪದೇ ಪದೇ ಕೈ ತೊಳೆಯಬೇಕು; ಜೀವನ ಶೈಲಿಯೇ ಬದಲಾಗಿ ಹೋಯಿತು;  ಶುಕ್ರವಾರ, ಮಂಗಳವಾರಗಳಂದು ಉಡುತ್ತಿದ್ದ ರೇಷ್ಮೆ ಸೀರೆಗಳಿಗೆ ಬ್ರೇಕ್‌ ಬಿತ್ತು; ಶಾಲಾ ಸಮಾರಂಭಗಳೇ ಇಲ್ಲದಿರುವುದರಿಂದ ಬೇರೆ ಬೇರೆ ರೀತಿಯ ಸೀರೆಗಳನ್ನು ಉಡುವುದೇ ನಿಂತುಹೋಯಿತು;  ಮಕ್ಕಳು ಶಾಲೆಗೆ ಬರದಿದ್ದಾಗ ಚೂಡಿದಾರ್‌ ಧರಿಸುವುದು ಸಾಮಾನ್ಯವಾಯಿತು;  ಒಗೆಯಲು ಸುಲಭ ಎಂದು ಸಿಂಥೆಟಿಕ್‌ ಸೀರೆಗಳೇ ಮುನ್ನೆಲೆಗೆ ಬಂದವು; ಒಮ್ಮೆ ಧರಿಸಿದ ಮಾತ್ರಕ್ಕೆ ಒಗೆಯಲೇಬೇಕು ಎಂಬ ಪರಿಸ್ಥಿತಿಯಲ್ಲಿ ಹೆಚ್ಚಿನ ಬೆಲೆಯ ಸೀರೆಗಳು ಮೂಲೆಗುಂಪಾದವು; ರೇಷ್ಮೆ ಸೀರೆಗಳನ್ನು ಕೊಳ್ಳುವುದು ಮಾತ್ರ ದುಬಾರಿಯಲ್ಲ, ಅವುಗಳ ನಿರ್ವಹಣೆಯೂ ದುಬಾರಿಯೇ! ಒಂದು ಸಲ ಉಟ್ಟ ಕೂಡಲೇ ಡ್ರೈ ಕ್ಲೀನ್‌ ಮಾಡಿಸಬೇಕು ಎಂದರೆ ಕಷ್ಟವೇ, ಹಾಗೂ ಉಡಬಹುದಿತ್ತೇನೋ, ಡ್ರೈ ಕ್ಲೀನ್‌ ಅಂಗಡಿಗಳು, ಇಸ್ತ್ರಿ ಅಂಗಡಿಗಳೆಲ್ಲ ಮುಚ್ಚಿಹೋಗಿವೆಯಲ್ಲ; ಆದ್ದರಿಂದಲೇ ಅಂತಹ ಸೀರೆಗಳು ಬೀರುವಿನ ಒಳಗೇ ಸಮಾಧಿಯಾದವು......

ಹೀಗೇ  ಗೀತಾ ಒಂದು ದಿನ ಬೀರು ತೆಗೆದು ಇಂದು ಸೀರೆಯನ್ನು ಉಡಲೇಬೇಕೆಂದು ಮನಸ್ಸು ಮಾಡಿ ಯಾವ ಸೀರೆಯನ್ನು ಉಡಲಿ ಎಂದು ಬೀರುವಿನ ಅರೆಗಳ ತುಂಬ ಪೇರಿಸಿ ಇಟ್ಟಿದ್ದ ಸೀರೆಗಳನ್ನೆಲ್ಲ ನೋಡುತ್ತಿರುವಾಗ, ಆಕೆಗೆ...... ಆ ಸೀರೆಗಳಿಗೆಲ್ಲ ಜೀವ ಬಂದಂತೆ.....  ಅಮ್ಮಾವ್ರು ನಮ್ಮನ್ನೇಕೆ ಬೀರುವಿನಿಂದ ಹೊರತೆಗೆಯುತ್ತಿಲ್ಲ ಎಂದು ಮಾತನಾಡಿದಂತೆ.....  ನನ್ನನ್ನು ಉಡು ನನ್ನನ್ನು ಉಡು ಎಂದು ಗೀತಾಳನ್ನು ಪೀಡಿಸಿದಂತೆ ........ ನನಗೇಕೆ ಇನ್ನೂ ಬ್ಲೌಸ್‌ ಹೊಲಿಸಿಲ್ಲ ಎಂದು ಕಾಡಿದಂತೆ.....  ನನ್ನನ್ನು ಬೀರುವಿನಿಂದ ತೆಗೆಯುವುದಿಲ್ಲವೇ??? ಬೇಕು ಬೇಕು ಎಂದು ತೆಗೆದುಕೊಂಡೆಯಲ್ಲ ಎಂದು ಕೇಳಿದಂತೆ...... ನನ್ನನ್ನು ಮುಟ್ಟಿಯೇ 6 ತಿಂಗಳಾಯಿತು ನನ್ನನ್ನು ಮೈ ಮೇಲೆಯಾದರೂ ಹಾಕಿಕೊಳ್ಳುವುದಿಲ್ಲವೇ ಎಂದು ಅತ್ತಂತೆ... ಪ್ರತಿದಿನ ಸೀರೆ ಉಡುವೆಯಾ??? ಈಗ ಏನು ಮಾಡುವೆ? ಎಂದು ನಕ್ಕಂತೆ...... ಈ ರೀತಿ ಸೀರೆ ಉಡುವ ಚೆಂದಕ್ಕೆ ಕೊಂಡಿದ್ದೇಕೆ ಎಂದು ಅಣಕಿಸಿದಂತೆ....... ಒಂದಾದ ಮೇಲೆ ಒಂದು ಸೀರೆ ಆಕೆಯ ಮೈಮೇಲೆ ಬಂದು ಬಿದ್ದಂತೆ......ಸೀರೆಗಳ ಅಡಿಯಲ್ಲಿ ತಾನು ಅಪ್ಪಚ್ಚಿಯಾದಂತೆ.... ಉಸಿರು ಕಟ್ಟಿ ಜೀವ ಹೋದಂತೆ.... ತನ್ನ ಚಿತೆಯ ಮೇಲೆ ಕಟ್ಟಿಗೆಯ ಬದಲು ಸೀರೆಗಳನ್ನೇ ಹಾಕಿದಂತೆ ಅನ್ನಿಸುತ್ತಾ ಮೈ ಬೆವರತೊಡಗಿತು.......  ಮೈ ಮೇಲೆ ಬೀಳುತ್ತಿರುವ ಸೀರೆಗಳಿಂದ ಹೊರಬರುವ ಪ್ರಯತ್ನ ಮಾಡುವಾಗಲೇ ಅದು ಕನಸು ಎಂಬುದರ ಅರಿವಾಯಿತು..... ಎಫ್.‌ ಎಂ. ನಲ್ಲಿ ತಂದೆ ಕೊಡಿಸೋ ಸೀರೆ ಮದುವೆ ಆಗುವವರೆಗೆ ಹಾಡು ತೇಲಿಬರುತ್ತಿತ್ತು....... 



ಭಾನುವಾರ, ಏಪ್ರಿಲ್ 18, 2021

ಒಂದು ರೂಪಾಯಿ

 ಅಮ್ಮಾ.... ನಾಳೆ ತಿಂಡಿ ಪುಳಿಯೋಗರೆ ತಗೊಂಡು ಬರಬೇಕಂತೆ ಅಂತ  ತನ್ನ ಮುದ್ದು ಭಾಷೆಯಲ್ಲಿ ಉಲಿಯುತ್ತಾ, ಓಡುತ್ತಾ ಬಂದ ಅಪ್ಪು. ನಾಳೆ ಶನಿವಾರ; ಇಡ್ಲಿ ಆದರೆ ಬೇಗ ಆಗುತ್ತೆ; ಬೆಳಿಗ್ಗೆ ಎದ್ದು ಇಡ್ಲಿ ಹಿಟ್ಟನ್ನು ಬೇಯಲು ಇಟ್ಟು ಚಟ್ನಿ ಮಾಡಿಬಿಟ್ಟರೆ ಸ್ಕೂಲಿಗೆ ತಯಾರಾದ ಹಾಗೆಯೇ....‌ ಹೇಗೂ ಅರ್ಧ ದಿನ ಶಾಲೆ; ಅಲ್ಲಿಂದ ಬಂದು ಬಿಸಿಯಾಗಿ ಅಡುಗೆ ಮಾಡಬಹುದು  ಅಂತ ಗಡಿಬಿಡಿಯಲ್ಲಿ ಇಡ್ಲಿ ಹಿಟ್ಟನ್ನು ಈಗ ತಾನೇ ತಯಾರು ಮಾಡುತ್ತಿದ್ದ ಸುಮಾಳಿಗೆ, ಮಗನ ಪುಳಿಯೋಗರೆ ತಗೊಂಡು ಬರ್ಬೇಕಂತೆ ಅನ್ನೋ ಮಾತು  ಕಿವಿಗೆ ಕಾದ ಸೀಸ ಸುರಿದಂತಾಯಿತು. ಹೂಂ.... ಇನ್ನು ಮತ್ತೆ ನಾಳೆ 4.30 ಕ್ಕಾದ್ರೂ ಏಳಲೇಬೇಕು. ಇಡ್ಲಿ ಜೊತೆಗೇ ಪುಳಿಯೋಗರೆನೂ ಮಾಡ್ಬೇಕು; ಇರ್ಲಿ, ಮಧ್ಯಾಹ್ನ ಊಟಕ್ಕೆ ಅದೇ ಆಗುತ್ತೆ ಅಂತ ಅನ್ಕೊಳ್ತಾ, ಅಲ್ಲ ಅಪ್ಪು, ನಾಳೆ ತಿಂಡಿ ಏನು ತಗೊಂಡು ಬರೋಕೆ ಹೇಳಿದಾರೆ ಅಂತ ಸ್ಕೂಲಿಂದ ಬಂದ ತಕ್ಷಣ ಹೇಳೋದಲ್ವಾ? ಅಂತ ಮಗನನ್ನು ಮುದ್ದು ಮಾಡುತ್ತಾ ಕೇಳಿದಳು ಸುಮ. ಅಮ್ಮಾ ಸ್ಕೂಲಿಂದ ಬಂದ ತಕ್ಷಣ ಆಟ ಆಡೊಕ್ಕೆ ಹೋಗಿದ್ನಲ್ಲಮ್ಮ ಅದೂ ಅಲ್ದೆ ನೀನು ಬಂದಿದ್ದೂ ಲೇಟು ಅಂತ ಮುಗ್ಧತೆಯಿಂದ ಅಮ್ಮನ ಮುಖ ನೋಡುತ್ತಾ ಹೇಳಿದ ಯುಕೆಜಿ ಓದುತ್ತಿದ್ದ ಅಪ್ಪು. ಆಯ್ತು ಸರಿ, ಈಗ ಬೇಗ ಊಟ ಮಾಡು, ನಾಳೆ ಮಾರ್ನಿಂಗ್‌ ಕ್ಲಾಸ್‌ ಅಲ್ವಾ? ಬೆಳಿಗ್ಗೆ ಬೇಗ ಏಳ್ಬೇಕು; ವೈಟ್‌ ಯೂನಿಫಾರಂ ರೆಡಿ ಇದೆ ಅಲ್ವಾ? ಶೂ ಪಾಲಿಷ್‌ ಆಗಿದ್ಯಾ? ಅಂತ ಕೇಳ್ತಾ ಎಲ್ಲ ತಯಾರಿ ಮುಗಿಸಿ ನಿದ್ರೆಗೆ ಜಾರಿದಳು ಸುಮ.

ಮರುದಿನ ಶನಿವಾರ. ಶಾಲೆ ಮುಗಿಸಿ ಬಂದ ಸುಮ, ಪುಳಿಯೋಗರೆ ಜೊತೆಗೆ, ಮೊಸರನ್ನವನ್ನೂ ತಯಾರಿಸಬೇಕು ಎಂದುಕೊಳ್ಳುತ್ತಾ, ಅರ್ಧ ಲೋಟ ಕಾಫಿ ಕುಡಿದುಬಿಡೋಣ ಎಂದು ಅಡುಗೆ ಮನೆಗೆ ಹೋದರೆ, ಡಿಕಾಕ್ಷನ್‌ ಸ್ವಲ್ಪವೇ ಇದೆ, ಸಂಜೆಗೆ ಕಾಫಿಪುಡಿ ಇಲ್ಲ; ಅಯ್ಯೋ! ಸಂಜೆ ಇವರ ಸ್ನೇಹಿತರು ಬೇರೆ ಬರ್ತಾರೆ, ಕಾಫಿಪುಡಿ ತರಬೇಕಲ್ಲ; ಇನ್ನು ಸರ್ಕಲ್‌ ತನಕ ಹೋಗಬೇಕು; ಕುಕ್ಕರ್‌ ಬೇರೆ ಒಲೆ ಮೇಲೆ ಇದೆ; ಆ ಕಾಫಿಪುಡಿ ಅಂಗಡಿಯವನು 2 ಗಂಟೆಗೆ ಅಂಗಡಿ ಕ್ಲೋಸ್‌ ಮಾಡಿದರೆ ಇನ್ನು ತೆರೆಯುವುದು  ಸಂಜೆ 4.30 ಮೇಲೆಯೇ. ಈಗಲೇ ಹೋಗಬೇಕು; ಹೊಟ್ಟೆ ತಾಳ ಹಾಕುತ್ತಿದೆ ಅಂತೆಲ್ಲ ಯೋಚನೆ ಮಾಡ್ತಾ ಮಾಡ್ತಾ, ಅಪ್ಪುನ ಕಳ್ಸಿಬಿಡೋಣ, ಅವನಿಗೆ ಅಂಗಡಿ ಗೊತ್ತಿದೆ. ಅಂಗಡಿಯವನ ಪರಿಚಯವೂ ಇದೆ. ಎಷ್ಟೋ ಸಲ ನಮ್ಮ ಜೊತೆ ಕಾಫಿಪುಡಿ ತರಲು ಅಂಗಡಿಗೆ ಬಂದಿದ್ದಾನೆ...ಅನ್ನೋ ಯೋಚನೆ ಬರ್ತಿದ್ದ ಹಾಗೇ, ಇನ್ನೂ 5 ವರ್ಷ, ಅವನಿಗೆ ಗೊತ್ತಾಗತ್ತೋ ಇಲ್ವೋ, ನಾನೇ ಹೋಗ್ಲಾ?  ಅನ್ನೋ ದ್ವಂದ್ವ ಬೇರೆ... ಕಾಡತೊಡಗಿತು.  ಒಂದೂವರೆ ಆಯ್ತು, ಇನ್ನು ಸ್ವಲ್ಪ ಹೊತ್ತಿಗೇ ಅಂಗಡಿ ಮುಚ್ಚಿಬಿಡುತ್ತಾನೆ.... ಮಗನನ್ನೇ ಕಳಿಸಿಬಿಡ್ತೀನಿ, ಅವನು ಬರುವಷ್ಟರಲ್ಲಿ ಅಡುಗೆ ರೆಡಿ ಮಾಡಿಬಿಟ್ರೆ ಬಂದ ಕೂಡಲೇ ಊಟ ಮಾಡ್ಬಹುದು ಅಂತ ಗಟ್ಟಿ ನಿರ್ಧಾರ ಮಾಡಿ, ಅಪ್ಪೂನ ಕರೆದು, 100 ರೂಪಾಯಿ ನೋಟು ಕೊಟ್ಟು ಅಪ್ಪು ಕಾಫಿಪುಡಿ ಅಂಗಡಿ ಗೊತ್ತಲ್ವಾ? ಹೋಗಿ 200ಗ್ರಾಂ ಕಾಫಿಪುಡಿ ತಗೊಂಡು ಬಾ ಅಂತ ಹೇಳೇಬಿಟ್ಳು ಸುಮ;

ಆಯ್ತಮ್ಮ, ಅಂತ ಹೇಳ್ತಾ 100 ರೂಪಾಯಿ ನೋಟು ತಗೊಂಡು ಓಡಿದ ಅಪ್ಪು. ಹೋದ ಏಳೆಂಟು ನಿಮಿಷಗಳಲ್ಲಿ ವಾಪಸ್‌ ಬಂದ; ತನ್ನ ಪುಟ್ಟ ಪುಟ್ಟ ಕೈಗಳಲ್ಲಿ, ಒಂದರಲ್ಲಿ ಕಾಫಿಪುಡಿಯನ್ನೂ ಇನ್ನೊಂದರಲ್ಲಿ ಚಿಲ್ಲರೆಯನ್ನೂಹಿಡಿದುಕೊಂಡು ಬಂದು,  ಅಮ್ಮನಿಗೆ ಕೊಟ್ಟು ಅಮ್ಮಾ ಊಟ ಅಂದ. ಸುಮ ಕಾಫಿಪುಡಿಯನ್ನು ಎತ್ತಿಡುತ್ತಾ ಚಿಲ್ಲರೆ ಎಣಿಸಿದಳು; ಒಂದು ರೂಪಾಯಿ ಕಡಿಮೆ ಇತ್ತು; ಅಪ್ಪೂ ಎಲ್ಲಿ ಬೀಳಿಸಿದೆ? ಒಂದು ರೂಪಾಯಿ ಎನ್ನುತ್ತಾ ಮನೆ ತುಂಬ ನೋಡಿದಳು; ಪುಟ್ಟ ಮಗುವೂ  ಗೇಟಿನ ತನಕ ಹೋಗಿ ಎಲ್ಲ ಕಡೆ ನೋಡಿತು. ಒಂದು ರೂಪಾಯಿ ಕಾಣಲಿಲ್ಲ; 

ಅಲ್ಲ ಕಂದ ಒಂದು ರೂಪಾಯಿ ಬೀಳಿಸಿಕೊಂಡು ಬಂದಿದ್ಯಲ್ಲ; ಸರಿಯಾಗಿ ತಗೊಂಡು ಬರಬಾರದಾ? ಹೋಗು ನೋಡ್ಕೊಂಡು ಬಾ; ದಾರಿಯಲ್ಲಿ ಬಿದ್ದಿರಬಹುದು;  ಒಂದು ರೂಪಾಯಿ ತಗೊಂಡು ಬರ್ಲೇಬೇಕು ನೀನು, ಆಗಲೇ ಊಟ ಅಂತ ತನ್ನ ಪಾಠ ಮಾಡುವ ಅವಕಾಶವನ್ನೂ, ಶಿಕ್ಷಿಸುವ ಅವಕಾಶವನ್ನೂ ಏಕಕಾಲಕ್ಕೆ ಬಳಸಿಕೊಂಡಳು ಸುಮ. ಹೊರಗೆ ರಣಬಿಸಿಲು. ಅಪ್ಪೂಗೆ ಅದೇನನ್ನಿಸಿತೋ ಹೊರಟ.....  ಒಂದು ರೂಪಾಯಿ ಅಂತ ಈಗ ಬಿಟ್ರೆ ಅದರ ಬೆಲೆ ಗೊತ್ತಾಗೋದಾದ್ರೂ ಹೇಗೆ? ಹೋಗಿ ತಗೊಂಡ್ಬರ್ಲಿ; ಇಲ್ಲೇ ಎಲ್ಲೋ ಬೀಳ್ಸಿರ್ತಾನೆ ಅಂತ ಸುಮ ತನ್ನ ಕೆಲಸದ ಕಡೆ ಗಮನ ಕೊಟ್ಟಳು. ಆ ಕ್ಷಣದಲ್ಲಿ ಆಕೆಗೆ ಮಗನ ವಯಸ್ಸು, ಆತನು ತೆಗೆದುಕೊಳ್ಳಬಹುದಾದ ನಿರ್ಧಾರ ಯಾವುದರ ಕಡೆಗೂ ಯೋಚನೆಯಿರಲಿಲ್ಲ.

ಐದು ನಿಮಿಷವಾಯಿತು; ಹತ್ತು ನಿಮಿಷವಾಯಿತು; ಅಪ್ಪು ಬರಲಿಲ್ಲ; ಮೊಸರನ್ನವೂ ಆಯಿತು.... ಬೆಳಗಿನ ಪಾತ್ರೆಗಳನ್ನು ತೊಳೆದದ್ದೂ ಆಯಿತು; ಅಪ್ಪುವಿನ ಆಗಮನವಾಗಲಿಲ್ಲ.....ಸುಮಳಿಗೆ ಎದೆ ಹೊಡೆದುಕೊಳ್ಳಲು ಪ್ರಾರಂಭಿಸಿತು;  ಈ ಕಡೆ ಆ ಕಡೆ ತಿರುಗಾಡಿದಳು; ಹೊಟ್ಟೆ ಹಸಿವಿನ ಜೊತೆಗೆ ಆತಂಕವೂ ಸೇರಿಕೊಂಡು ಸಣ್ಣಗೆ ತಲೆ ಸಿಡಿಯಲಾರಂಭಿಸಿತು. ಒಂದು ನಿಮಿಷ.. ತಾನೇ ಗಾಡಿಯಲ್ಲಿ ಹೋಗಿ ಕಾಫಿಪುಡಿ ತರಬಾರದಿತ್ತಾ? 5 ನಿಮಿಷ ಉಳಿಸಲು ಹೋಗಿ ಎಂತಹ ಅನಾಹುತವಾಯಿತು?  ಈಗ ಮಗ ಇನ್ನೂ ಬರಲಿಲ್ಲವಲ್ಲ; ಏನಾಗಿರಬಹುದು? ಅಂಗಡಿಯ ಹತ್ತಿರವೇ ಇದ್ದಾನೋ? ದುಡ್ಡು ಹುಡುಕುತ್ತಾ ಅಲ್ಲೇ ನಿಂತನೋ? ಯಾರಾದರೂ ಆಟಕ್ಕೆ ಕರೆದರೋ? ಬಸ್ಸಿನಲ್ಲಿ ಹೋಗುತ್ತೇನೆ ಎಂದು ಬಸ್‌ ಹತ್ತಿದನೋ? ಹಣ್ಣಿನ ಗಾಡಿಗಳ ಬಳಿ ನಿಂತನೋ? ಹಸಿವೆಯಾಗುತ್ತಿದೆ ಎನ್ನುತ್ತಿದ್ದ...  ಶ್ರೀರಾಮ....... ಪುಟ್ಟ ಎಲ್ಲಿ ಹೋಗಿರಬಹುದು?  ಛೇ! ನಾನೆಂಥಾ ಪಾಪಿ!  ತಾನು ಶಿಸ್ತಿನ ಸಿಪಾಯಿ, ಎಲ್ಲರಿಗಿಂತ ವಿಭಿನ್ನವಾಗಿ ಮಗನನ್ನು ಬೆಳೆಸಿದ್ದೇನೆ... ಅವನಿಗೆ ಚಿಕ್ಕ ವಯಸ್ಸಿನಲ್ಲಿಯೇ ಎಲ್ಲವನ್ನೂ ಕಲಿಸಿದ್ದೇನೆ ಎಂದು ಹೇಳಿಸಿಕೊಳ್ಳುವ ತವಕದಲ್ಲಿ ಹೀಗಾಯಿತೇ? ತನ್ನ ಮಗ ಎಲ್ಲವನ್ನೂ ಮಾಡಬಲ್ಲ ಎಂಬ ತಪ್ಪು ಅಂದಾಜು ಇದಕ್ಕೆ ಕಾರಣವಾಯಿತೇ? 5 ವರ್ಷದ ಮಗುವನ್ನು 13 ವರ್ಷದ ಮಗುವಂತೆ ನೋಡಿದ್ದಕ್ಕೇ ಹೀಗಾಯಿತೇ? ಯಾರಿಗೆ ಯಾವ ಕೆಲಸವನ್ನು ಹೇಳಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲದಾಯಿತೇ?   ಅಯ್ಯೋ ಕರ್ಮ!! ಇನ್ನೂ 5 ವರ್ಷದ ಹಸುಳೆ, ಕೇವಲ ಒಂದು ರೂಪಾಯಿ ಚಿಲ್ಲರೆಗೋಸ್ಕರ  ಆ ಮಗುವನ್ನು ಮತ್ತೆ ವಾಪಸ್‌ ಏಕೆ ಕಳಿಸಬೇಕಿತ್ತು? ಅದೂ ಕೂಡ, ಜೇಬು ಇರುವ ಪ್ಯಾಂಟನ್ನಾಗಲೀ, ಶರ್ಟನ್ನಾಗಲೀ ಅವನು ಹಾಕಿರಲಿಲ್ಲ; ಆ ಪುಟ್ಟ ಕೈಗಳಲ್ಲಿ ಅಷ್ಟನ್ನು ಹಿಡಿದುಕೊಂಡು ಬಂದದ್ದೇ ಹೆಚ್ಚು. ಇನ್ನು ಮೇಲೆ ಹೀಗೆ ಮಾಡಬೇಡ ಎಂದು ಹೇಳಿದ್ದರೆ ಮುಗಿಯುತ್ತಿರಲಿಲ್ಲವೇ? ವಾಪಸ್‌ ಏಕೆ ಕಳಿಸಿದ್ದು? ಮನೆಯವರಿಗೆ ಏನು ಹೇಳಲಿ? ಯಾರಿಗೆ ಫೋನ್‌ ಮಾಡಲಿ? ಇಷ್ಟೆಲ್ಲ ಆಲೋಚನೆಗಳು ಕೇವಲ ಅರ್ಧ ನಿಮಿಷದಲ್ಲಿ ಸುಮಳ ತಲೆಯಲ್ಲಿ ಹಾದು ಹೋದವು. ಅಬ್ಬಬ್ಬಾ ದೇವರೇ ಕಾಪಾಡು, ಮಗುವಿಗೆ ಏನೂ ಆಗದಿರಲಿ ಎಂದು ಮನಸ್ಸು ದೇವರನ್ನು ನೆನೆಯಿತು.  ಸಂಕಟ ಬಂದಾಗ ವೆಂಕಟರಮಣ ಎಂಬುವುದು ಸತ್ಯ ತಾನೇ? 

ಕೂಡಲೇ  ಮನೆಗೆ ಬೀಗ ಹಾಕಿ, ಸರ್ಕಲ್‌ ತನಕ ಹೋಗಿ ನೋಡಿಕೊಂಡು ಬರೋಣ ಅಂತ ಹೊರಟಳು.  ಗೇಟು ದಾಟಿ, ಮನೆಯಿಂದ ಎಡಗಡೆಗೆ ತಿರುಗಿ, ಮತ್ತೆ ಎಡಕ್ಕೆ ಧಾವಿಸಬೇಕು ಎನ್ನುವಷ್ಟರಲ್ಲಿ ಎದುರುಗಡೆ ಮನೆಯವರು, ನೋಡಿ ಸುಮ ನಿಮ್ಮ ಮಗ ಆಗಿನಿಂದ ಈ ರಸ್ತೆಯ ಪ್ರತಿ ಮನೆಗೂ ಹೋಗಿ ಹೋಗಿ ಬರುತ್ತಿದ್ದಾನೆ ಯಾಕೆ ನೀವೇನಾದರೂ ಹೇಳಿ ಕಳಿಸಿದ್ರಾ? ಎಂದು ಕೇಳುವುದಕ್ಕೂ, ರಸ್ತೆಯ ಮೂಲೆಯಲ್ಲಿರುವ ಸ್ಟುಡಿಯೋದವರು ಮಗುವಿನ ಜೊತೆಯಲ್ಲಿ ಬರುವುದಕ್ಕೂ ಸರಿ ಹೋಯಿತು. ಮಗನನ್ನು ನೋಡಿದ್ದೇ  ನೋಡಿದ್ದು  ಸುಮಳಿಗೆ ಹೋದ ಜೀವ ಬಂದಂತಾಯ್ತು;  ದೇವರಿಗೆ ಸಾವಿರ ವಂದನೆಗಳನ್ನು ಸಲ್ಲಿಸುತ್ತಾ ಓಡಿಹೋಗಿ ಮಗುವನ್ನು ತಬ್ಬಿಕೊಂಡಳು. ಮಗುವಿನ ಮುಖ ಕೆಂಪಾಗಿತ್ತು, ಆದರೆ  ತನ್ನ ಪುಟ್ಟ ಕೈಗಳನ್ನು ಚಾಚುತ್ತಾ ತಗೋ ನಿನ್ನ ಒಂದು ರೂಪಾಯಿ ಎಂದು ಹೇಳುತ್ತಾ, ಅಮ್ಮಾ ಊಟ ಹಾಕ್ತೀಯಾ ತಾನೇ ಎಂದು ಕೇಳಿತು.

ಸ್ಟುಡಿಯೋದವರು, ಮೇಡಂ ಇವನು ನಿಮ್ಮ ಮಗ ತಾನೇ? ಯಾಕೆ ಮೇಡಂ ಇಷ್ಟು ಚಿಕ್ಕ ಹುಡುಗನನ್ನು ಅಂಗಡಿಗೆ ಕಳ್ಸಿದ್ರಿ? ಅದೇನೋ ಒಂದು ರೂಪಾಯಿ ತರೋಕೆ ಹೇಳಿದ್ರಂತೆ? ಇವನು ದಾರಿಯಲ್ಲಿ ನೋಡಿದ್ದಾನೆ. ಎಲ್ಲೂ ಒಂದು ರೂಪಾಯಿ ಸಿಗಲಿಲ್ಲ... ಅದಕ್ಕೇ ಪ್ರತೀ ಮನೆಗೂ ಹೋಗಿ ಆಂಟಿ ನಂಗೆ ಒಂದು ರೂಪಾಯಿ ಕೊಡಿ, ತರದಿದ್ರೆ ಅಮ್ಮ ಬೈತಾಳೆ ಅಂತ ಹೇಳಿದ್ದಾನೆ. ಎಲ್ರೂ, ಏನೋ ಪುಟ್ಟ ನೋಡೋಕ್ಕೆ ಇಷ್ಟು ಚೆನ್ನಾಗಿ ಇದ್ಯ. ದುಡ್ಡು ಬೇರೆ ಕೇಳ್ತಾ ಇದ್ಯಾ? ಹಾಗೆಲ್ಲಾ ಕೇಳ್ಬಾರ್ದು ಅಂತ ಹೇಳಿ ಕಳ್ಸಿದಾರೆ; ನಮ್ಮ ಸ್ಟುಡಿಯೋಗೂ ಬಂದು ಹೀಗೇ ಕೇಳಿದ; ನನಗೆ ನಿಮ್ಮ ಜೊತೆ ಮಗುವನ್ನು ನೋಡಿದ ನೆನಪು. ಮಗು ಬೇರೆ ಎಲ್ಲೂ ಹೋಗ್ಬಾರ್ದು ಅಂತ ಈಗ ಕೊಟ್ಟಿರ್ತೀನಪ್ಪ; ಆದ್ರೆ ಈ ಥರ ಮನೆ ಮನೆಗೂ ಹೋಗಿ ದುಡ್ಡು ಕೇಳ್ಬಾರ್ದು ಅಂತ ನಾನೇ ಒಂದು ರೂಪಾಯಿ ಕೊಟ್ಟೆ ಮೇಡಂ. ನೀವ್ಯಾಕೆ ಹೀಗ್ಮಾಡಿದ್ರಿ ಮೇಡಂ? ಅಂತ ಕೇಳಿದರು. 

ಆ ಕ್ಷಣವೇ ಆಕೆಗೆ ನಿಂತ ನೆಲ ಕುಸಿಯಬಾರದೇ ಅನಿಸಿತ್ತು. ಛೇ ನಾನೊಂದು ವಿಧದಲ್ಲಿ ಯೋಚನೆ ಮಾಡಿದರೆ ಅದು ಇನ್ನೊಂದು ರೀತಿಯಾಯಿತಲ್ಲ . ತಾನೊಂದು ಬಗೆದರೆ, ದೈವವೊಂದು ಬಗೆಯಿತಲ್ಲಾ... ಒಂದು ರೂಪಾಯಿಯ ಬೆಲೆಯನ್ನು ಮಗನಿಗೆ ತಿಳಿಸಲು ಹೋಗಿ ಮಗನ ಬೆಲೆಯೇ  ತನಗೆ ತಿಳಿದುಬಿಟ್ಟಿತಲ್ಲಾ.... ಎಂದೆನಿಸಿತು. ಅತಿಯಾದ ಶಿಸ್ತನ್ನು ಹೇರಿದಾಗ ಉಂಟಾಗಬಹುದಾದ ಪರಿಣಾಮಗಳನ್ನು ನೆನೆದು ಮನ ನಡುಗಿತು.  ಆ ಒಂದು ರೂಪಾಯಿಯನ್ನು ಅವರಿಗೆ  ಹಿಂದಿರುಗಿಸಿ, ಅವರಿಗೆ ಧನ್ಯವಾದಗಳನ್ನು ಹೇಳಿ   ಮಗನನ್ನು  ಮನೆಗೆ ಕರೆದುಕೊಂಡು  ಬಂದು ಮೊದಲು ಊಟ ಹಾಕಿದಳು ಸುಮ. ಯಾಕೋ ಅಪ್ಪು ಹೀಗೆ ಮಾಡಿದೆ? ಅಂದ್ರೆ.... ಅಮ್ಮಾ, ನೀನು ಒಂದು ರೂಪಾಯಿ ತರ್ದೇ ಇದ್ರೆ ಊಟ ಹಾಕಲ್ಲ ಅಂದ್ಯಲ್ಲ ಅದಕ್ಕೇ ಹೀಗ್ಮಾಡಿದೆ ಅಮ್ಮಾ. ತಪ್ಪೇನಮ್ಮ? ಅಂತ ತನ್ನ ಬಟ್ಟಲು ಕಂಗಳನ್ನು ಅರಳಿಸಿಕೊಂಡು ಅಮ್ಮನ ಮುಖವನ್ನೇ ನೋಡಿಕೊಂಡು ಕೇಳಿದ ಅಪ್ಪು. 

ಬಿಕ್ಕಟ್ಟಿನ ಸಂದರ್ಭಗಳಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಸಮಸ್ಯೆಗೆ ಪರಿಹಾರವನ್ನು ನಾವು ಕಂಡುಕೊಳ್ಳುತ್ತೇವೆ; ಅದು ಮಗುವಾಗಿರಲಿ; ದೊಡ್ಡವರಾಗಿರಲಿ; ಅಲ್ಲವೇ? ಮಗು ಯಾವ ವಿಜ್ಞಾನವನ್ನು ಓದಿತ್ತು? ಯಾವ ಮನೋವಿಜ್ಞಾನವನ್ನು ಅಭ್ಯಾಸ ಮಾಡಿತ್ತು? ಸಮಸ್ಯೆಯನ್ನು ಬಿಡಿಸುವ ವಿಧಾನದ ಬಗ್ಗೆ ಅದಕ್ಕೇನು ಗೊತ್ತಿತ್ತು?  ಮಗು ಎದುರಿಸಿದ ಸನ್ನಿವೇಶದಲ್ಲಿ ಅದು ಕಂಡುಕೊಂಡ ಪರಿಹಾರ ನಮ್ಮನ್ನು ಬೆರಗುಗೊಳಿಸುತ್ತದೆ ಅಲ್ಲವೇ? ಯಾವಾಗಲೂ ನಾವು ಯೋಚಿಸಿದಂತೆ ಅಥವಾ ಯೋಜಿಸಿದಂತೆ ನಡೆಯುವುದಿಲ್ಲ ಸರಿಯೇ?   ನಾವು ಅಂದುಕೊಂಡಂತೆಯೇ ನಮ್ಮ  ಮಕ್ಕಳು ಯೋಚಿಸಬೇಕೆನ್ನುವುದು ನಮ್ಮ ಮೂರ್ಖತನ. ನಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರುವುದೂ ನಮ್ಮ ದಡ್ಡತನ.... ನಮ್ಮ ಆಸೆ ಆಕಾಂಕ್ಷೆಗಳನ್ನು ನಮ್ಮ ಮಕ್ಕಳ ಮೇಲೆ ಹೊರಿಸುವುದು ನಮ್ಮ ಹುಚ್ಚತನ. ನಮ್ಮ ಮಕ್ಕಳ ಮನಸ್ಸು ಬಲು ಸೂಕ್ಷ್ಮ.   ಅವರ ಮನಸ್ಸು ಯಾವಾಗ ಹೇಗೆ ವರ್ತಿಸುತ್ತಿರುತ್ತದೆಯೋ ಯಾರು ಬಲ್ಲರು? ಹೀಗೇ ಮಾಡಬೇಕು ಹಾಗೇ ಇರಬೇಕು ಎಂದು ಅವರ ಮೇಲೆ ನಿರ್ಬಂಧಗಳನ್ನು ಹಾಕುವುದು ಅವರನ್ನು ಬೇರೆ ರೀತಿ ಯೋಚಿಸುವಂತೆ ಮಾಡುತ್ತದೆಯಲ್ಲವೇ? ನಮ್ಮ ಅನುಭವದಿಂದ ಮಾತ್ರ ನಾವು ಮಕ್ಕಳ ಮನಸ್ಸಿನ ಆಳಕ್ಕೆ ಇಳಿಯಬಲ್ಲೆವು. ನಮ್ಮ ವೃತ್ತಿಯ ನೆರಳುಗಳನ್ನು ಅವರ ಮೇಲೆ ಯಾವಾಗಲೂ ಬೀಳುವಂತೆ ಮಾಡಬಾರದು ಅಲ್ಲವೇ? ನಾವು ನಮ್ಮ ಮಕ್ಕಳಿಗಿಂತ ದೊಡ್ಡವರು; ಮಕ್ಕಳಿಗೇನು ತಿಳಿಯುತ್ತದೆ? ಎಂಬ ಭಾವನೆ ಯಾವಾಗಲೂ ಇರಬಾರದು ಹೌದೇ?  ನಮಗಿಂತ ವಿಭಿನ್ನವಾಗಿ ಯೋಚಿಸುವ ಮಕ್ಕಳು ಖಂಡಿತ ಇರುತ್ತಾರೆ.   ಆದರೆ ಅದನ್ನು ಜೀರ್ಣಗೊಳಿಸಿಕೊಳ್ಳುವ ಶಕ್ತಿ ನಮಗೆ ಇರಬೇಕಷ್ಟೆ.....ಅಲ್ಲದೇ ಆ ಆಲೋಚನೆಗಳು ಸರಿಯೇ, ತಪ್ಪೇ ಎಂದು ನಿರ್ಧರಿಸುವಷ್ಟು ಸಾಮರ್ಥ್ಯವೂ.....  ಮತ್ತು ವಿಭಿನ್ನವಾಗಿ ಯೋಚಿಸುವ ಮಕ್ಕಳ ಆಲೋಚನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಸೌಜನ್ಯವೂ....... ಇದನ್ನು ಪೋಷಕರೂ ಮತ್ತು ವಿಶೇಷವಾಗಿ ಶಿಕ್ಷಕರೂ  ಅರಿತುಕೊಳ್ಳುವ ಅಗತ್ಯವಿದೆಯಲ್ಲವೇ?

ಅಂದ ಹಾಗೇ ಪ್ರಿಯ ಓದುಗರೇ! ಸುಮಳ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ? ಮಗನಿಗೆ ಏನುತ್ತರ ಹೇಳುತ್ತಿದ್ದಿರಿ?



ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...