ಮಂಗಳವಾರ, ಜೂನ್ 8, 2021

ನೀವು ಇರಬೇಕಿತ್ತು

 ಲೀಲಮ್ಮಾ...ಲೀಲಮ್ಮಾ..... ಇದ್ದೀರೆನ್ರೀ? ಅಂತ ಜೋರಾಗಿ ಗೇಟ್‌ ಶಬ್ದ ಆಗುವುದು ಕೇಳಿಸಿತು. ಯಾರಪ್ಪಾ ಅದು ಅಂತ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಲೀಲಮ್ಮ ಕಿಟಕಿಯಲ್ಲಿ ನೋಡ್ತಾ ಕೇಳಿದರು. ಮೇಡಂ ನಿಮಗೆ ಒಂದು ಪಾರ್ಸೆಲ್‌ ಇದೆ. ಬನ್ನಿ, ತೆಗೆದುಕೊಳ್ಳಿ ಅಂತ ಕೊರಿಯರ್‌ ನವನು ಜೋರಾಗಿ ಕೂಗಿದ. ಬಂದೇ ಇರಪ್ಪ ಅಂತ ಹೇಳ್ತಾನೇ, ನನಗ್ಯಾರಪ್ಪ ಕೊರಿಯರ್‌ ನಲ್ಲಿ ಪಾರ್ಸೆಲ್‌ ಕಳುಹಿಸುವವರು ಅಂತ ಯೋಚ್ನೆ ಮಾಡ್ತಾನೇ ಗೇಟಿನ ಬಳಿ ಬಂದರು ಲೀಲಮ್ಮ. ಸೈನ್‌ ಮಾಡಿ ಕೊರಿಯರ್‌ ತಗೊಂಡು, ಮನೆ ಒಳಗೆ ಬಂದು ಆ ಪಾರ್ಸೆಲ್‌ ಅನ್ನು ಆಶ್ಚರ್ಯದಿಂದ ಬಿಡಿಸಲು ಶುರು ಮಾಡುವುದಕ್ಕೂ, ಮೇಲಿನ ಮಹಡಿಯಲ್ಲಿದ್ದ ಮೊಮ್ಮಗ  ಓಡಿ ಬಂದು ಓಹ್‌ ಇಷ್ಟು ಬೇಗ ಬಂತಾ ಅಂತ ಕೇಳುವುದಕ್ಕೂ ಸರಿ ಹೋಯಿತು. ಏಯ್‌ ನಿನಗೆ ಮೊದಲೇ ಈ ಪಾರ್ಸೆಲ್‌ ಬಗ್ಗೆ ಗೊತ್ತಿತ್ತೇನೋ ಅಂತ ಮೊಮ್ಮಗನನ್ನು ಪ್ರೀತಿ ತುಂಬಿದ ಆಶ್ಚರ್ಯದಿಂದ ಕೇಳಿದರು ಲೀಲಮ್ಮ. ಇರ್ಲಿ ಅಜ್ಜಿ, ಮೊದಲು ಪಾರ್ಸೆಲ್‌ ತೆಗೆದು ನೋಡು ಅಂತ ಚಿಗುರುತ್ತಿದ್ದ ಮೀಸೆಯ ಅಡಿಯಲ್ಲಿ ತುಂಟ ನಗುವನ್ನು ಚಿಮ್ಮಿಸುತ್ತಾ ಹೇಳಿದ ಮೊಮ್ಮಗ ದೀಪು. ಅಷ್ಟು ಹೊತ್ತಿಗೇ ಮೇಲಿನ ಮನೆಯಿಂದ ಮಗಳೂ ಬಂದಳು. ಲೀಲಮ್ಮ ನಿಧಾನವಾಗಿ ಪಾರ್ಸೆಲ್‌ ತೆರೆದರು; ನೋಡಿದರೆ, ಹೊಸ ಮೊಬೈಲ್.‌ ಅವರ ಕಣ್ಣುಗಳು ಆಶ್ಚರ್ಯದಿಂದ ಮಿನುಗಿದವು. ಅಮ್ಮ ಹೆಂಗಿದೆ ಸರ್‌ಪ್ರೈಸ್ ಅಂತ ಮಗಳು ಕೇಳಿದಾಗ ಲೀಲಮ್ಮನವರೂ ಅಯ್ಯೋ ನಂಗೆ ಯಾಕೆ ಬೇಕಿತ್ತು ಇಷ್ಟು ದುಡ್ಡಿನ ಮೊಬೈಲ್‌? ಹೆಂಗೋ ಇರೋದ್ರಲ್ಲೇ ಇನ್ನೊಂದು ಸ್ವಲ್ಪ ದಿವಸ ಅಡ್ಜಸ್ಟ್ ಮಾಡ್ಕೋಬಹುದಿತ್ತು ಅಂತ ಮಮತೆಯಿಂದ ಮಗಳನ್ನು ಗದರಿದರೂ ಮನಸ್ಸಿನಲ್ಲಿ ಖುಷಿಯಾಗಿತ್ತು. ಅಲ್ಲ ಅಜ್ಜೀ, ಮೊಬೈಲ್‌ ಚಾರ್ಜ್‌ ಆಗ್ತಿರಲಿಲ್ಲ; ಡಿಸ್ಪ್ಲೇ ಕಾಣಿಸ್ತಾ ಇರ್ಲಿಲ್ಲ, ಫೋನ್‌ ಮಾಡೋಕ್ಕೆ ಎಷ್ಟು ಕಷ್ಟ ಪಡ್ತಿರಲಿಲ್ವ ನೀನು? ಅದಕ್ಕೇ ಅಮ್ಮ 4 ದಿನದ ಹಿಂದೇನೇ ಮೊಬೈಲ್‌ ಬುಕ್‌ ಮಾಡಿದ್ಲು. ನಿಂಗೆ ಹೇಳಿರ್ಲಿಲ್ಲ ಅಷ್ಟೇ. ಈಗ ನಂಗೆ ಮೊಬೈಲ್ ಕೊಡು;‌ ನಾನು ಸಿಮ್‌ ಹಾಕಿ ಎಲ್ಲಾ ಸೆಟ್‌ ಮಾಡಿ ಕೊಡ್ತೀನಿ ಅಂತ ಅಂದ ದೀಪು. ಇಷ್ಟ ಆಯ್ತೇನಮ್ಮಾ? ಅಂತ ಮಗಳು ಕಕ್ಕುಲತೆಯಿಂದ ಕೇಳಿದಳು. ಇಷ್ಟ ಆಯ್ತು; ಆದ್ರೆ ದುಡ್ಡು ಎಷ್ಟಾಯ್ತೋ? ನಾನೇ ಕೊಡ್ತಿದ್ದೆ ಅಂತ ಲೀಲಮ್ಮ ರಾಗ ಎಳೀತಿದ್ದ ಹಾಗೇ, ಸೀಮಾ ಸ್ವಲ್ಪ ಸುಮ್ನಿರ್ತೀಯಾ ಅಮ್ಮಾ ನೀನು, ತೆಗೆಸಿಕೊಟ್ಟಿದ್ದೀನಿ; ಉಪಯೋಗಿಸು ಅಷ್ಟೇ ಅಂತ ಹೇಳ್ತಾ ಕೆಲ್ಸ ಇದೆ ಅಂತ ಮೇಲ್ಗಡೆ ಹೊರಟೇಹೋದಳು. ಅಬ್ಬಬ್ಬಾ ಅಪ್ಪನ ಮಗಳೇ; ತನಗೆ ಏನಾದ್ರೂ ಆಗಬೇಕು ಅಂದ್ರೆ ತಕ್ಷಣ ಮಾಡಿಬಿಡಬೇಕು; ಇದನ್ನೆಲ್ಲಾ ನೋಡೋಕೆ ನೀವು ಇರ್ಬೇಕಿತ್ತು ರೀ ಅಂತ ಲೀಲಮ್ಮನ ಮನಸ್ಸು 45 ವರ್ಷಗಳ ಹಿಂದಕ್ಕೆ ಜಾರಿತು.

ಮನೆಗೆ ಮೊದಲ ಮಗಳಾಗಿ, ಜವಾಬ್ದಾರಿಗಳನ್ನು ತೆಗೆದುಕೊಂಡ ಹಾಗೆಯೇ, ಮನೆಗೆ ದೊಡ್ಡ ಮಗನಾದ ವೆಂಕಟೇಶನನ್ನು ಮದುವೆಯಾಗಿ, ಹೋದ ಮನೆಯಲ್ಲಿ ಹಿರೇಸೊಸೆಯಾಗಿಯೂ ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು ಲೀಲಾ. ಸರ್ಕಾರಿ ಕೆಲಸದಲ್ಲಿದ್ದ ವೆಂಕಟೇಶನಿಗೆ ವಿವಿಧ ಊರುಗಳಿಗೆ ವರ್ಗಾವಣೆಯಾಗುತ್ತಿತ್ತು; ಆ ಊರಿಗೆ ಹೋಗಿ ಸಂಸಾರ ಮಾಡಲೇಬೇಕಿತ್ತು; ಮದುವೆಯಾಗಿ ವರ್ಷದ ಒಳಗೆ ಲೀಲಾ ಹೆಣ್ಣುಮಗುವಿನ ತಾಯಿಯಾದಳು; ಮನೆಯಲ್ಲಿ ಸಂತೋಷಕ್ಕೆ ಪಾರವಿರಲಿಲ್ಲ; ಲಕ್ಷ್ಮೀ ಹುಟ್ಟಿದಂತೆ ಹುಟ್ಟಿದ್ದಾಳೆ ಎಂದು, ರಮಾ ಅಂತ ಹೆಸರಿಟ್ಟು ಸಂಭ್ರಮಿಸಿದ್ದಾಯಿತು; ಅತ್ತೆಯ ಮನೆಯಲ್ಲಿ ಅಯ್ಯೋ ಹೆಣ್ಣಾ! ಎಂಬ ಉದ್ಗಾರ ಬಂದರೂ, ಮೊದಲ ಮಗುವಲ್ವಾ ಅಂತ ಸಮಾಧಾನ ಪಟ್ಟುಕೊಂಡಿದ್ದಾಯಿತು. ಮಗುವಿನ ಆಟಪಾಠಗಳಲ್ಲಿ ದಿನಗಳು ಕಳೆದದ್ದೇ ತಿಳಿಯಲಿಲ್ಲ; ಇನ್ನೆರೆಡು ವರ್ಷಗಳಲ್ಲಿ ಲೀಲಾ ಮತ್ತೊಂದು ಹೆಣ್ಣುಮಗುವಿಗೆ ಜನ್ಮ ನೀಡಿದಳು. ಈಗ ವೆಂಕಟೇಶನಿಗೆ ಕೊಂಚ ಅಸಹನೆ ಉಂಟಾಯಿತು; ಆದರೂ ಸಕ್ಕರೆಯ ಗೊಂಬೆಯಂತಿದ್ದ ಮಗುವನ್ನು ನೋಡಿ, ಅಸಹನೆ ಸ್ವಲ್ಪ ಕಡಿಮೆಯಾಯಿತಾದರೂ, ಮೊದಲ ಮಗುವಿಗೆ ತೋರಿಸಿದ್ದ ವಾತ್ಸಲ್ಯ, ಅಕ್ಕರೆ ಈ ಮಗುವಿಗೆ ಇರಲಿಲ್ಲ; ದೊಡ್ಡ ಮಗಳಿಗೆ ತಾನೇ ಹೆಸರಿಟ್ಟಿದ್ದ ವೆಂಕಟೇಶ, ಎರಡನೇ ಮಗುವಿಗೆ ಆ ಜವಾಬ್ದಾರಿಯನ್ನೇ ತೆಗೆದುಕೊಳ್ಳಲಿಲ್ಲ; ಲೀಲಾ ತಾನೇ ಪ್ರಾಸಬದ್ಧವಾಗಿರಲಿ ಅಂತ ಸೀಮಾ ಅಂತ ಹೆಸರಿಟ್ಟಳು;  ಪರಿಚಯಸ್ಥರು ಇನ್ನೊಂದು ಮಗುವೂ ಹೆಣ್ಣಾಯಿತಾ? ಎಂದು ಕೇಳಿದಾಗ ಲೀಲಾಳಿಗೆ ಸಂಕಟವಾಗುತ್ತಿತ್ತು; ವೆಂಕಟೇಶನಿಗಂತೂ ಯಾರಾದರೂ,  ಸಾರ್‌ ಇಬ್ರೂ ಹೆಣ್ಣುಮಕ್ಕಳಾ? ಅಂತ ಕೇಳಿದಾಗ ವಿಪರೀತ ಸಿಟ್ಟು ಬರುತ್ತಿತ್ತು. ಸಾಲದ್ದಕ್ಕೆ, ತನ್ನ ತಂಗಿಗೆ, ತನ್ನ ತಮ್ಮನಿಗೆ ಗಂಡುಮಕ್ಕಳೇ ಜನಿಸಿದಾಗ, ತನಗೂ ಒಂದು ಗಂಡುಮಗು ಬೇಕು ಎಂಬ ಆಸೆ  ಮತ್ತೆ ಶುರುವಾಯಿತು ವೆಂಕಟೇಶನಿಗೆ.

 ಕಾಲ ಯಾರನ್ನೂ ಕಾಯುವುದಿಲ್ಲ; ವೆಂಕಟೇಶನಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು; 8 ವರ್ಷ ಮತ್ತು 6 ವರ್ಷದ ಹೆಣ್ಣುಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದಾಯಿತು; ಮಕ್ಕಳಿಬ್ಬರೂ ಚುರುಕಾಗಿದ್ದರು; ಲೀಲಾ ಸಹ ಮನೆಯಲ್ಲಿ ತನಗೆ ಗೊತ್ತಿರುವ ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಳು. ಎಷ್ಟೇ ಕೆಲಸಗಳಿರಲಿ, ಮನೆಗೆ ಯಾರೇ ಬರಲಿ, ಮಕ್ಕಳಿಗೆ ಉಕ್ತಲೇಖನ ಬರೆಸುವುದು; ಮಗ್ಗಿ ಹೇಳಿಸುವುದು; ಕಥೆ ಬರೆಯುವಂತೆ ಹೇಳುವುದು; ಪುಸ್ತಕಗಳನ್ನು ಓದಲು ಹೇಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ. ವೆಂಕಟೇಶನಿಗೆ ಇನ್ನೊಂದು ಗಂಡು ಮಗು ಬೇಕು ಎಂಬ ಆಸೆ ಪ್ರಬಲವಾಗತೊಡಗಿತು. 35 ವರ್ಷಗಳ ಹಿಂದೆ ಮೂರು, ನಾಲ್ಕು  ಮಕ್ಕಳು ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿದ್ದ ವಿಚಾರವೇ. ದೊಡ್ಡ ಮಗಳಿಗೆ 8 ತುಂಬಿದಾಗ ಲೀಲಾ ಇನ್ನೊಂದು ಮಗುವನ್ನು ಹಡೆದಳು. ಅದೂ ಸಹ ಹೆಣ್ಣೇ ಆಗಿದ್ದು ಮಾತ್ರ ವಿಧಿಲಿಖಿತ. ಮೂರನೆಯ ಮಗುವೂ ಹೆಣ್ಣೇ ಎಂದು ತಿಳಿದಾಗ ವೆಂಕಟೇಶ ಆ ಮಗುವನ್ನು ನೋಡಲು ಹೋಗಿಯೇ ಇರಲಿಲ್ಲ; ಲೀಲಾಳಿಗೆ ಗಂಡನ ಮುಖವನ್ನು ನೋಡಲೂ ಭಯ. ಆದರೆ ಇದರಲ್ಲಿ ತನ್ನ ತಪ್ಪೇನಿದೆ? ಎಂದು ಲೀಲಾಳಿಗೆ ಇಂದಿಗೂ ಅರ್ಥವಾಗಿಲ್ಲ. ಮೂರನೆಯ ಹೆಣ್ಣು ಮಗುವಿಗೆ ಉಮಾ ಅಂತ ಪ್ರೀತಿಯಿಂದ ತಾನೇ ಕರೆದಳು ಲೀಲಾ. ತಲೆಯ ತುಂಬ ಕೂದಲು; ಕಪ್ಪು ಕಣ್ಣುಗಳು; ಕೆಂಪು ತುಟಿ, ಬಣ್ಣವಂತೂ ಅಚ್ಚ ಬಿಳಿ; ಗೊಂಬೆಯಂತೆ ಸುಂದರವಾಗಿದ್ದ ಆ ಪಾಪುವನ್ನು ನೋಡಿದಾಗ ಯಾರಿಗಾದರೂ ವಾತ್ಸಲ್ಯ ಉಕ್ಕಿ ಬರದೇ ಇರದು. 3 ತಿಂಗಳ ಮಗುವನ್ನು ಕರೆದುಕೊಂಡು ತವರು ಮನೆಯಿಂದ ಬೆಂಗಳೂರಿಗೆ ಬಂದಾಗ 1 ವಾರ ವೆಂಕಟೇಶ ಮಾತೇ ಆಡಿರಲಿಲ್ಲ; ಲೀಲಾಳೂ ಸಹ ಇವರ ಕೋಪ ತಣ್ಣಗಾದ ಮೇಲೇ ಮಾತನಾಡುತ್ತೇನೆ ಅಂತ ಸುಮ್ಮನಿದ್ದಳು. 3 ಮಕ್ಕಳನ್ನು ಅತ್ತೆಯ ಮನೆಗೆ ಕರೆದುಕೊಂಡು ಹೋದಾಗ ಮಾತ್ರ ಲೀಲಾಳಿಗೆ ಪರಿಸ್ಥಿತಿಯನ್ನು ಎದುರಿಸುವುದು ಕಷ್ಟವಾಗುತ್ತಿತ್ತು. ಎರಡು ಹೆಣ್ಣಾದ ಮೇಲೆ ಇನ್ನೊಂದು ಗಂಡಾಗುತ್ತೆ ಅಂತಾರೆ, ಆದ್ರೆ ನಮ್ಮ ವೆಂಕೀಗೆ ಯಾಕೋ ಮೂರನೆಯದೂ ಹೆಣ್ಣೇ ಎಂಬ ಮೂದಲಿಕೆಯ ಮಾತುಗಳನ್ನು ಕೇಳಿದಾಗ ಲೀಲಾಳಿಗೆ ಹೊಟ್ಟೆಯಲ್ಲಿ ಒಂಥರಾ ಸಂಕಟವಾಗುತ್ತಿತ್ತು. ಎಷ್ಟಾದರೂ 9 ತಿಂಗಳು ಹೊಟ್ಟೆಯಲ್ಲಿ ಹೊತ್ತಿದ್ದಳಲ್ಲವೇ? ಆಗ, ಸಹಾಯಕ್ಕೆ ಬರುತ್ತಿದ್ದುದು ಆ ಮನೆಯಲ್ಲಿದ್ದ ಅತ್ತೆಯ ಅಕ್ಕ, ದೊಡ್ಡಮ್ಮ. ಅಯ್ಯೋ ವೆಂಕಿ ಮೂರೂ ಹೆಣ್ಣು ಅಂತ ಯಾಕೆ ಬೇಜಾರು ಮಾಡ್ಕೋತೀಯ? ಮಕ್ಕಳು ನೋಡೋಕೆ ಚೆನ್ನಾಗಿದ್ದಾರೆ; ಸಾಲದ್ದಕ್ಕೆ ಬಿಳೀ ತೊಗಲು; ಚುರುಕಾಗಿದ್ದಾರೆ; ಹೇಗೋ ಆಗುತ್ತೆ ಬಿಡು. ಅಂತ ಸಮಾಧಾನ ಹೇಳ್ತಾ ಇದ್ರು. ಲೀಲಾಳಿಗೆ ಉಮಾ ಗಂಡುಮಗುವಾಗಬಾರದಿತ್ತೇ ಅಂತ ಎಷ್ಟೋ ಸಲ ಅನ್ನಿಸಿದರೂ, ಆ ದುಃಖವನ್ನು ಮಕ್ಕಳ ಮೇಲೆ ಎಂದಿಗೂ ತೋರಿಸಿದವಳಲ್ಲ. ವೆಂಕಟೇಶನಿಗೆ  ಮಾತ್ರ ನಾನೊಬ್ಬ ಮೈನಾರಿಟಿ ಈ ಮನೆಯಲ್ಲಿ; ಎಲ್ಲರೂ ಹೆಣ್ಣು ಮಕ್ಕಳು, ಎಷ್ಟಾದರೂ ಕಂಡವರ ಮನೆಗೆ ಹೋಗುವವರು; ಎಂಬ ಭಾವನೆ ಅಚ್ಚೊತ್ತಿಬಿಟ್ಟಿತ್ತು.

ಹಾಗಾಗಿಯೇ ಮಕ್ಕಳನ್ನು ಅತ್ಯಂತ ಶಿಸ್ತಿನಿಂದ ಬೆಳೆಸಿದ. ಮದುವೆ ಮಾಡಿಕೊಟ್ಟ ಮೇಲೆ ಇನ್ನೊಬ್ಬರ ಮನೆಗೆ ಹೋಗಿ ತನಗೆ ಕೆಟ್ಟ ಹೆಸರು ತರಬಾರದು ಎಂಬ ಭಾವನೆ ಇದ್ದುದರಿಂದ ಮನೆಯಲ್ಲಿ ಕೆಲವೊಮ್ಮೆ ಉಸಿರುಗಟ್ಟಿಸುವ ವಾತಾವರಣವೇ ಇರುತ್ತಿತ್ತು. ರಮಾಳಿಗೆ ಎಲ್ಲ ವಿಷಯಗಳನ್ನೂ ಕಲಿಯುವ ಆಸಕ್ತಿ. ಹಿಂದಿ‌ ಕ್ಲಾಸ್, ಸಂಸ್ಕೃತ ಕ್ಲಾಸ್‌ , ವಾಲಿಬಾಲ್‌ ಪ್ರಾಕ್ಟೀಸ್‌ ಅಂತ ಶಾಲೆ ಮುಗಿದ ಒಂದು ಗಂಟೆಯ ನಂತರ ಮನೆ ಸೇರುತ್ತಿದ್ದಳು. ಅಕಸ್ಮಾತ್‌ ವೆಂಕಟೇಶ ಬೇಗ ಬಂದು ರಮಾ ಇನ್ನೂ ಸ್ಕೂಲಿಂದ ಬಂದಿಲ್ಲ ಎಂದರೆ ಬೈಗುಳ ಶುರುವಾಗುತ್ತಿತ್ತು. ಆಗ ಎಷ್ಟೋ ಬಾರಿ ಲೀಲಾ ಮಗಳ ಪರ ವಹಿಸಿಕೊಂಡದ್ದಿದೆ. ಅವಳೇನೂ ಎಲ್ಲೂ ತಿರುಗಲು ಹೋಗಿಲ್ಲ; ಬರ್ತಾಳೆ, ನಾನೂ ವಿಚಾರಿಸಿಕೊಳ್ತಾ ಇದ್ದೀನಿ ಅಂತ ಹೇಳಿ ರಮಾಳನ್ನು ವೆಂಕಟೇಶನ ಹೊಡೆತದಿಂದ ಪಾರು ಮಾಡುತ್ತಿದ್ದಳು. ಹೆಣ್ಣುಮಕ್ಕಳಿಗೆ ಯಾಕೆ ಇದೆಲ್ಲಾ? ತಾವಾಯಿತು, ತಮ್ಮ ಓದಾಯಿತು ಅಂತ ಇರಬಾರದಾ? ಅಂತ ಗುಡುಗುತ್ತಿದ್ದ ವೆಂಕಟೇಶ. ಹೆಣ್ಣುಮಕ್ಕಳು ಏನಾದರೂ ಕಲಿಯಬೇಕು ಎಂದಾಗ ಅವರ ಆಸೆಗೆ ಲೀಲಾ ನೀರೆರೆಯುತ್ತಿದ್ದಳು. ಸಂಗೀತ, ಹೊಲಿಗೆ, ಕಸೂತಿ ಇನ್ನಿತರ ಕರಕುಶಲ ಕಲೆಗಳನ್ನೂ ಮಕ್ಕಳು ಮೈಗೂಡಿಸಿಕೊಂಡರು.

ಕೆಲವೊಮ್ಮೆ ವೆಂಕಟೇಶ ಲೀಲಾಳ ಬಳಿ, ಮೂರೂ ಮಕ್ಕಳೂ ಹೆಣ್ಣುಮಕ್ಕಳಾದವಲ್ಲ; ಎಲ್ಲರೂ ಮನೆಯಿಂದ ಹೊರಹೋಗುವವರೇ, ನಮ್ಮ ಜೊತೆ ಇರುವವರಾರು? ಅಂತ ಬೇಸರಪಟ್ಟುಕೊಳ್ಳುತ್ತಿದ್ದ. ಮೂವರೂ ದಂಡಪಿಂಡಗಳೇ, ಪಿಂಡಕ್ಕೂ ಇಲ್ಲ; ಬರೀ ದಂಡಕ್ಕೆ ಅಂತ ಸಿಡಿಮಿಡಿಗುಟ್ಟುತ್ತಿದ್ದ. ಅಪುತ್ರಸ್ಯ ಗತಿರ್ನಾಸ್ತಿ ಅಂತ ದೊಡ್ಡವರು ಹೇಳಿದ್ದಾರಲ್ಲ ಲೀಲಾ, ನಾನು ಹೋದ ಮೇಲೆ ನನಗೆ ಉತ್ತರಕ್ರಿಯಾದಿಗಳನ್ನು ಮಾಡುವವರು ಯಾರು? ಅಂತ ಅಲವತ್ತುಗೊಳ್ಳುತ್ತಿದ್ದ. ಆಗೆಲ್ಲ, ಲೀಲಾ, ಮಕ್ಕಳು ಎಷ್ಟಾದರೂ ಮಕ್ಕಳಲ್ಲವೇ? ಹೆಣ್ಣಾದರೇನು? ಗಂಡಾದರೇನು? ಯಾಕೆ ಹಾಗೆ ಕೋಪಿಸಿಕೊಳ್ಳುತ್ತೀರಿ? ಆ ಮಕ್ಕಳಿಗೆ ಯಾಕೆ ಕಣ್ಣಿಗೆ ಕೈ ಹಾಕಿದ ಹಾಗೆ ಬೈಯುತ್ತೀರಿ? ಅವರು ಇನ್ನೆಷ್ಟು ದಿನ ನಮ್ಮ ಜೊತೆ ಇರುತ್ತಾರೆ? ಎಷ್ಟೋ ಜನರಿಗೆ ಗಂಡುಮಕ್ಕಳಿದ್ದರೂ ಅನಿವಾರ್ಯವಾಗಿ ಆ ಮಕ್ಕಳು ತಂದೆ ತಾಯಿಯರನ್ನು ಬಿಟ್ಟು ಬೇರೆ ಕಡೆ ಇರುವುದಿಲ್ಲವಾ? ನಮ್ಮ ಕಣ್ಣೆದುರಿಗೇ ಎಷ್ಟೋ ಜನ ವಯಸ್ಸಾದವರು ಇಬ್ಬರೇ ಇರುವುದನ್ನು ನೀವು ನೋಡುತ್ತಿಲ್ಲವಾ? ಹೆಂಡತಿ ಬಂದ ನಂತರ ಅಪ್ಪ ಅಮ್ಮ ಇಬ್ಬರನ್ನೂ ಸಸಾರ ಮಾಡುವ ಗಂಡುಮಕ್ಕಳಿಲ್ಲವಾ? ಆಸ್ತಿಗೋಸ್ಕರ ನಾಟಕ ಮಾಡುವ ಗಂಡುಮಕ್ಕಳನ್ನು ನಾವು ನೋಡಿಲ್ಲವಾ? ಈ ಕಲಿಯುಗದಲ್ಲಿ ಎಲ್ಲವನ್ನೂ ನಾವು ಇಲ್ಲೇ ಅನುಭವಿಸಬೇಕು, ಹೋದ ಮೇಲೆ ಇರುವ ಲೋಕವನ್ನು ನಾವು ನೋಡಿದ್ದೇವೆಯೇ? ಕೆಲವೊಮ್ಮೆ ಗಂಡುಮಕ್ಕಳು ಹೊರದೇಶದಲ್ಲಿದ್ದಾಗ ತಂದೆ ಹೋದರೂ ನೋಡಲು ಬರಲು ಸಾಧ್ಯವಾಗುವುದಿಲ್ಲ; ವೈದಿಕ ಮಾಡಲು ಅನುಕೂಲವಾಗುವುದಿಲ್ಲ. ನೀವೇಕೆ ನಿಮಗೆ ಗಂಡುಮಕ್ಕಳಿಲ್ಲದಿರುವುದಕ್ಕೆ ಸದ್ಗತಿ ಸಿಗುವುದಿಲ್ಲ ಎಂದು ಭಾವಿಸುತ್ತೀರಿ? ನೀವು ಮಾಡಿರುವ ಒಳ್ಳೆಯ ಕೆಲಸಗಳು ನಿಮ್ಮನ್ನು ಕಾಯುತ್ತವೆ.  ನಾವಿದ್ದಾಗ ಮಕ್ಕಳು ಸುಖವಾಗಿದ್ದರೆ ಅದೇ ನಮಗೆ ಖುಷಿಯಲ್ಲವೇ? ನಮ್ಮ ಹೆಣ್ಣುಮಕ್ಕಳ ಹಣೆಬರಹ ಚೆನ್ನಾಗಿದ್ದರೆ ಅವರು ಚೆನ್ನಾಗಿಯೇ ನಮ್ಮ ಕಣ್ಣೆದುರಿಗೇ ಇರುತ್ತಾರೆ ಬಿಡಿ, ಅಂತ ಸಮಾಧಾನ ಹೇಳುತ್ತಿದ್ದಳು ಲೀಲಾ. 

ಏನೇ ಆಗಲಿ, ಮೂರೂ ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡ ವೆಂಕಟೇಶ. ಮಕ್ಕಳಿಗೆ ಮನೆಯಲ್ಲಿ ಬೈಯುತ್ತಿದ್ದರೂ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಗಾದೆಯನ್ನು ಯಾವಾಗಲೂ ಹೇಳುತ್ತಿದ್ದರೂ,ನೀವು ಹೆಣ್ಣು ಮಕ್ಕಳು ತಗ್ಗಿ ಬಗ್ಗಿ ನಡೆಯಬೇಕು ಎಂದು ಕುಹಕದ ನುಡಿಗಳನ್ನಾಡುತ್ತಿದ್ದರೂ,  ಬ್ಯಾಂಕ್‌, ಪೋಸ್ಟ್‌ ಆಫೀಸ್‌, ದಿನಸಿ, ಸೊಸೈಟಿ, ರೇಷನ್‌,  ಹೀಗೆ ಹೊರಗಿನ  ವ್ಯವಹಾರಗಳನ್ನೂ ಮಕ್ಕಳಿಗೆ ಕಲಿಸಿಕೊಟ್ಟ. ನೋಡನೋಡುತ್ತಾ ಮಕ್ಕಳು ದೊಡ್ಡವರಾದರು. ಓದಿನಲ್ಲಿ, ಇತರೇ ಕೆಲಸ ಕಾರ್ಯಗಳಲ್ಲಿ ಚುರುಕಾಗಿದ್ದರು. ದೊಡ್ಡ ಮಗಳಿಗೆ ಪದವಿ ಮುಗಿಯುತ್ತಲೇ ಸರ್ಕಾರಿ ಕೆಲಸ ಸಿಕ್ಕಿತು; ಮದುವೆಯೂ ಆಯಿತು. ಎರಡನೇ ಮಗಳಿಗೂ ಬ್ಯಾಂಕಿನಲ್ಲಿ ನೌಕರಿ ದೊರೆಯಿತು. ಆಕೆಗೂ ಒಳ್ಳೆಯ ಸಂಬಂಧ ಕೂಡಿಬಂದು ವಿವಾಹವಾಯಿತು. ಅಪ್ಪ, ನಿಮಗೆ ಇನ್ನೂ ಪುತ್ರ ವ್ಯಾಮೋಹ ಕಡಿಮೆಯಾಗಿಲ್ಲವೇ ಎಂದು ಮಕ್ಕಳು ತಮಾಷೆ ಮಾಡುವಷ್ಟು ಬೆಳೆದರು. ಮೂರನೆಯ ಮಗಳು ಲಾ ಮಾಡಬೇಕು ಅಂದಾಗ ಹೆಣ್ಣುಮಕ್ಕಳಿಗ್ಯಾಕೆ ಲಾ? ಅಂತ ಹೇಳುತ್ತಾ, ಬೈಯುತ್ತಲೇ ಕಾಲೇಜಿಗೆ ಕಳುಹಿಸಿದ್ದ. ಆಕೆ ಲಾ ಓದುತ್ತಿದ್ದಾಗಲೇ, ವೆಂಕಟೇಶನ ಆರೋಗ್ಯ ಹದಗೆಟ್ಟಿತು; ಲೀಲಾಳನ್ನು ಕರೆದು, ನಾನು ಇನ್ನು ಹೆಚ್ಚು ದಿನ ಇರಲಾರೆ. ಉಮಾಳಿಗೆ ಓದು ಮುಗಿದ ಕೂಡಲೇ ಮದುವೆ ಮಾಡಿಬಿಡು. ಅದೊಂದು ಜವಾಬ್ದಾರಿಯನ್ನು ನಾನು ನೆರವೇರಿಸಲಾಗಲಿಲ್ಲ. ಆದರೆ, ನೀನು  ಏನೂ ಯೋಚಿಸಬೇಡ. ನಿನಗಾಗಿ ಒಂದು ಸ್ವಂತ ಮನೆ ಇದೆ. ನಾನು ಹೋದರೂ ನನ್ನ ಪೆನ್ಷನ್‌ ಬರುತ್ತದೆ. ಲೀಲಾ ನೀನು ಯಾರ ಬಳಿಯೂ ಕೈ ಚಾಚುವ ಅಗತ್ಯವಿಲ್ಲ. ಧೈರ್ಯವಾಗಿರು, ನಾನು ಹೋಗುತ್ತೇನೆ ಎಂದು ಹೇಳುತ್ತಲೇ ಅಸು ನೀಗಿದನು.  ಹಳೆಯ ನೆನಪುಗಳು ಲೀಲಮ್ಮನ ಕಣ್ಣುಗಳನ್ನು ಒದ್ದೆ ಮಾಡಿದವು. 

ಈಗ ಉಮಾಳಿಗೂ ಮದುವೆಯಾಗಿದೆ. ಸೀಮಾ ಅಮ್ಮನ ಜೊತೆಯಲ್ಲೇ ಇರುತ್ತೇನೆ ಅಂತ ತಮ್ಮ ಮನೆಯ ಮೇಲೆ ಮನೆ ಕಟ್ಟಿಸಿಕೊಂಡು ಅಲ್ಲಿದ್ದಾಳೆ. ರಮಾ, ಉಮಾ ಇಬ್ಬರೂ ಆಗಾಗ ಬಂದು ಹೋಗುತ್ತಾರೆ. ಹೆಣ್ಣು ಮಕ್ಕಳೀಗ ಅಮ್ಮನಿಗೆ ಏನು ಬೇಕೋ ಅದನ್ನು ತೆಗೆದುಕೋ ಅನ್ನುತ್ತಾರೆ. ನಿನ್ನ ಖರ್ಚಿಗಾಗುತ್ತೆ ಇಟ್ಕೊಳಮ್ಮ ಅಂತ ಕೈಯಲ್ಲಿ ದುಡ್ಡು ತುರುಕಿ ಹೋಗುತ್ತಾರೆ. ಸೀರೆ ಅಂಗಡಿಗೆ  ಹೋಗಿದ್ವಿ ಅಮ್ಮ, ನಿನಗೆ ಈ ಕಲರ್‌ ಸೀರೆ ತುಂಬಾ ಚೆನ್ನಾಗಿ ಕಾಣುತ್ತೆ ಅಂತ ತಂದ್ವಿ ಅಂತ ಸೀರೆ ಕೈಯಲ್ಲಿಡುತ್ತಾರೆ. ಹುಷಾರಿಲ್ಲದಾಗ ಬಂದು ಆರೈಕೆ ಮಾಡುತ್ತಾರೆ. ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಮ್ಮ ಅಂತ ಒಂದರೆಡು ಪ್ರವಾಸಗಳಿಗೂ ಕಳಿಸಿದ್ದಾರೆ. ವರ್ಷದಲ್ಲಿ ಒಂದು ಹಬ್ಬಕ್ಕೆ ಎಲ್ಲರೂ ಒಟ್ಟಿಗೇ ಸೇರುತ್ತಾರೆ. ಲೀಲಮ್ಮಳೂ ಸ್ವಾಭಿಮಾನಿ. ಎಂದೂ ಮಕ್ಕಳನ್ನು ತನಗೆ ಇದು ಬೇಕು; ಅದು ಬೇಕು ಎಂದು ಕೇಳಿದವಳಲ್ಲ; ಆದರೆ ಅಮ್ಮನ ಅವಶ್ಯಕತೆಗಳನ್ನು ಗಮನಿಸಿಯೇ ಅಮ್ಮ ಕೇಳುವ ಮೊದಲೇ ಅವುಗಳನ್ನು ಪೂರೈಸಿಬಿಡುತ್ತಾರೆ ಹೆಣ್ಣುಮಕ್ಕಳು. ಒಟ್ಟಿನಲ್ಲಿ ಗಂಡು ಮಕ್ಕಳಿಲ್ಲ ಅಂತ ಲೀಲಮ್ಮಳಿಗೆ ಒಂದು ಬಾರಿಯೂ ಅನ್ನಿಸಿಯೇ ಇಲ್ಲ. 

ಲೀಲಮ್ಮಳ ದೃಷ್ಟಿ ಗೋಡೆಯ ಮೇಲಿದ್ದ ಗಂಡನ ಫೋಟೋ ಕಡೆಗೆ ಹೋಯಿತು. ಅದನ್ನು  ನೋಡುತ್ತಾ ಲೀಲಮ್ಮ ನಿಧಾನವಾಗಿ ಉಸುರಿದರು; ನೀವು ಇರಬೇಕಿತ್ತು ರೀ, ನಮ್ಮ ಹೆಣ್ಣುಮಕ್ಕಳನ್ನು ನೋಡಿ ಎಲ್ಲರೂ ಎಂತಹ ಪುಣ್ಯ ಮಾಡಿದ್ದೀರಾ? ಇಂತಹ ಮಕ್ಕಳನ್ನು ಪಡೆಯಲು ಎಂದು ಹೇಳುವುದನ್ನು ಕೇಳಿಸಿಕೊಳ್ಳಲು, ಅವರವರ ಉದ್ಯೋಗದಲ್ಲಿ ಯಶಸ್ಸನ್ನು ಪಡೆದಿರುವುದನ್ನು ನೋಡಲು, ಮೂರೂ ಜನ ಕಾರಿನಲ್ಲಿ ಓಡಾಡುವುದನ್ನು ನೋಡಿ ಸಂಭ್ರಮಿಸಲು, ನನ್ನನ್ನು ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುವುದನ್ನು ಗಮನಿಸಲು, ಹೋದವರ ಮನೆಯಲ್ಲಿ ಒಳ್ಳೆಯ ಹೆಸರು ತೆಗೆದುಕೊಂಡಿರುವುದನ್ನು ನೋಡಿ ಸಂತೋಷ ಪಡಲು, ಅಷ್ಟೇ ಅಲ್ಲ ನಿಮ್ಮ ಹೆಣ್ಣುಮಕ್ಕಳು, ಯಾರಿಗೂ ಕಡಿಮೆ ಇಲ್ಲದಂತೆ ತಮ್ಮ ಜೀವನ ನಡೆಸುತ್ತಿದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ಒಗ್ಗಟ್ಟಿನಿಂದ ಇದ್ದಾರೆ ಎಂಬುದನ್ನು ನೋಡುತ್ತಾ ಹೆಮ್ಮೆಪಡಲು, ನೀವು ಇರಬೇಕಿತ್ತು ರೀ ಎನ್ನುತ್ತಾ ಉರುಳಿ ಬಂದ ಕಣ್ಣೀರಿನ ಹನಿಗಳನ್ನು ಸೆರಗಿನ ತುದಿಯಲ್ಲಿ ಒರೆಸಿಕೊಂಡರು ಲೀಲಮ್ಮ. ಅಷ್ಟು ಹೊತ್ತಿಗೆ ದೀಪು, ಅಜ್ಜೀ ಇದೇನು? ಕಣ್ಣಿಗೇನಾದ್ರೂ ಬಿತ್ತಾ? ಯಾಕೆ ಅಳ್ತಿದ್ದೀಯಾ? ಅಂತ ಕೇಳ್ತಾನೇ, ತಗೋ ನಿನ್ನ ಮೊಬೈಲ್‌, ಇನ್ನು ನೀನು ಆರಾಮಾಗಿ ನಿನಗೆ ಬೇಕಾದ ಭಕ್ತಿಗೀತೆಗಳನ್ನು ಕೇಳಬಹುದು, ಮೆಸೇಜ್‌ ಕಳಿಸಬಹುದು, ದೇವರ ಸ್ತೋತ್ರಗಳನ್ನು ಓದಬಹುದು ಅಂತ ಹೇಳ್ತಾ ಅಜ್ಜಿಯ ಕಣ್ಣೀರನ್ನು ಒರೆಸಿದ.


39 ಕಾಮೆಂಟ್‌ಗಳು:

  1. Maate barta illa. Hrudayakke tumba hattiravada kathe😊😊 saragavaagi oduskondu hogutte adbutha

    ಪ್ರತ್ಯುತ್ತರಅಳಿಸಿ
  2. ಬಹಳ ಚೆನ್ನಾಗಿ ಮೂಡಿಬಂದಿದೆ ಒಳ್ಳೆಯ ಸಂಸ್ಕಾರದಿಂದ ಬೆಳೆದರೆ ಬಹುಶಃ ಹೆಣ್ಣುಮಕ್ಕಳು ಸಮಾಜಕ್ಕೆ ಮಾದರಿಯಾಗಬಹುದು

    ಪ್ರತ್ಯುತ್ತರಅಳಿಸಿ
  3. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  4. ಬಹಳ ಚೆನ್ನಾಗಿ ಮೂಡಿ ಬಂದಿದೆ. ಕಾಲಕ್ಕೆ ತಕ್ಕಂತೆ ಮನುಷ್ಯ ಬದಲಾಗುತ್ತಾ ಹೋದರೂ, ಭಾವನೆಗಳು ಶಾಶ್ವತ

    ಪ್ರತ್ಯುತ್ತರಅಳಿಸಿ
  5. ಹೆಣ್ಣು ಮಕ್ಕಳ ಕಕ್ಕುಲತೆ ಚೆನ್ನಾಗಿ ಮೂಡಿಬಂದಿದೆ. ಶಾರದರ ಸ್ವಂತ ಕಥೆ ಎನ್ಬುವಂತಿದೆ. ಲೀಲಾ‌ ಅಮ್ಮನಿಗೆ ಇನ್ನೊಂದು ಹೆಮ್ಮೆ, ದೊಡ್ಡ ಮಗಳು ಉತ್ತಮ‌ಲೇಖಕಿಯಾಗುವತ್ತ ಹೆಜ್ಜೆ ಇಡುತ್ತಿದ್ದಾಳೆ. ಅಮ್ಮನ ಖುಷಿಗೆ ಎಣೆಯೇ ಇಲ್ಲ.‌ಚೆನ್ನಾಗಿ ಮೂಡಿ ಬಂದಿದೆ ಶಾರದ ಮೇಡಂ. ಬರೀ ಹೆಣ್ಣು ಮಕ್ಜಳಿರುವ ಎಲ್ಲರ‌ಮನೆಯ ಹೆಮ್ಮೆಯ ಪುತ್ರಿಯರ ಕಥೆ.

    ಪ್ರತ್ಯುತ್ತರಅಳಿಸಿ
  6. ಇರಬೇಕಿತ್ತು ವೆಂಕಟೇಶ, ಹೆಣ್ಣು ಮಕ್ಕಳ ವೈಭವ ನೋಡಲು.. ಸೊಗಸಾಗಿ ಮೂಡಿಬಂದಿದೆ..

    ಪ್ರತ್ಯುತ್ತರಅಳಿಸಿ
  7. ನಿಮ್ಮ ಕಥೆಗಳು‌ನಿಮ್ಮ ಅನುಭವ ಆಗಿರುವುದರಿಂದ ಯಾವುದೇ ಉತ್ಪ್ರೇಕ್ಷೆ ಇಲ್ಲದಿರುವುದರಿಂದ ಚೆನ್ನಾಗಿರುತ್ತದೆ.

    ಪ್ರತ್ಯುತ್ತರಅಳಿಸಿ
  8. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  9. Good story
    ಹೆಚ್ಚು ಹೆಣ್ಣುಮಕ್ಕಳು ಇರುವ ಎಲ್ಲಾ ಮನೆಗಳ ಕಥೆ ಇದೆ. ಒಬ್ಬ ಮಗಳಿಗೆ ಮತ್ತು 2 ಹೆಣ್ಣು ಮಕ್ಕಳ ತಾಯಿ ಯಾಗಿ ನಾನು ಇದನ್ನು ಅನುಭವಿಸಿದ್ದೇನೆ. ಈ ಮೌಢ್ಯವನ್ನು ತೆಗೆಯುವ ಇಂತಹ ಲೇಖನಗಳು ತುಂಬಾ ಉಪಯುಕ್ತ. ಇದು ಹೆಚ್ಚು ಹೆಚ್ಚು ಜನರಿಗೆ ತಲುಪಲಿ ಎಂದು ಆಶಿಸುತ್ತೇನೆ ಹಾಗೂ ಇನ್ನೂ ಇಂತಹ ಲೇಖನಗಳು ನಿಮ್ಮಿಂದ ಹೆಚ್ಚಾಗಿ ಮೂಡಿ ಬರಲಿ

    ಪ್ರತ್ಯುತ್ತರಅಳಿಸಿ
  10. ನಿಮ್ಮೊಳಗೊಬ್ಬಳು ಬರಹಗಾರ್ತಿಯ ಜನನವಾಗಿದೆ. ಜತನದಿಂದ ಕಾಪಿಡಿ.ಬೆಳೆದು ಹೆಮ್ಮರವಾಗುವ ಎಲ್ಲಾ ಲಕ್ಷಣಗಳೂ ಇವೆ. ಆದರೆ ಅಷ್ಟು ನಿರಂತರತೆ ಉಳಿಯಬೇಕಲ್ಲ.ಸಾಧ್ಯವಾಗಿಸಿ.

    ಪ್ರತ್ಯುತ್ತರಅಳಿಸಿ
  11. ಹೆಣ್ಣುಮಕ್ಕಳು ಯಾವತ್ತೂ ಖುಷಿಯನ್ನೇ ಎರಡೂ ಮನೆಗೂ ತರುತ್ತಾರೆ,ಅವರೆಂದೂ ತಂದೆ ತಾಯಿ ಜೊತೆ ಇರುತ್ತಾರೆ ಎಂಬ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ.ಮನಸ್ಸಿಗೆ ಆಪ್ತವಾಗಿದೆ.

    ಪ್ರತ್ಯುತ್ತರಅಳಿಸಿ
  12. ಸಮಾಜದ ಬದಾವಣೆಗೆ ನಿಮ್ಮ ಮನದಲ್ಲಿ ಅಡಗಿವೆ ಲೇಖನಗಳು ಬುದ್ದಿವತಿಕೆಯಿಂದ ಹೊರ ತಂದು ಪ್ರಚುರಪಡಿಸುವ ಕೆಲಸ ಮಾಡಿ ನೋಡಿ. ಲಿಲಲಿಗಿರಲಿ ಅಂತ ಸಾವಿರ ಅಮ್ಮಂದಿರಿಗೆ ಎದೆ ಉಬ್ಬಿಸಿ ನಡೆಯುವ ಧೈರ್ಯ ಬರುತೆ. ಚಿಂತೆಗಳು ನೆಲ ಕಚ್ಚುತ್ಚವೆ

    ಪ್ರತ್ಯುತ್ತರಅಳಿಸಿ
  13. ಜೀವನದ ವಿವಿಧ ಹಂತಗಳಲ್ಲಿ ಪರಿಪೂರ್ಣ ವಾಗಿ ತನ್ನನ್ನು ತೊಡಗಿಸಿಕೊಂಡು ಕರ್ತವ್ಯವನ್ನು ಮಾಡುವವಳು ಹೆಣ್ಣು. ಹೆತ್ತು ಹೊತ್ತು ಸಾಕಿ ಸಲಹುವವಳು ಹೆಣ್ಣು. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳು ಹೆಣ್ಣು.ಲೀಲಮ್ಮ ಬಗ್ಗೆ ಹೆಮ್ಮೆಯೆನಿಸಿತು. ಲಿಂಗ ಸಮಾನತೆಯ ಬಗ್ಗೆ ಉತ್ತಮ ಅಭಿಪ್ರಾಯ ನೀಡಿದ್ದೀರಿ. ಬರಹ ಆಪ್ಯಾಯಮಾನವಾಗಿತ್ತು.

    ಪ್ರತ್ಯುತ್ತರಅಳಿಸಿ
  14. ಇಂದಿಗೂ ಗಂಡುಮಕ್ಕಳಿಗೇ ಪ್ರಾಶಸ್ತ್ಯ ಕೊಡುವವರಿಗೇನು ಕಡಿಮೆ ಇಲ್ಲ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  15. ಒಳ್ಳೆಯ ಬರೆಹಗಾರ್ತಿಯಾಗಿ ರೂಪುಗೊಳ್ಳುತ್ತಿರುವ ತಮಗೆ ಅಭಿನಂದನೆಗಳು. ಎಪ್ಪತ್ತು ಎಂಬತ್ತರ ದಶಕದಲ್ಲಿ ತುಂಬು ಕುಟುಂಬದ ಸ್ವಾರಸ್ಯಕರ ಘಟನೆಗಳಿಂದ ಕೂಡಿದ ಕಾದಂಬರಿಯನ್ನು ಓದಿದ ಅನುಭವ ನೆನಪು ಮಾಡಿದಂತಿತ್ತು ತಮ್ಮ ಈ ಕಥೆ. ಇದು ಕಥೆ ಅನ್ನುವುದಕ್ಕಿಂತ ಭಾವದ ಅನಾವರಣ ಅಂದುಕೊಳ್ಳುತ್ತೇನೆ. ತಮ್ಮದೇ ಕಥೆ ಸ್ವಲ್ಪ ಮಾರ್ಪಾಡಿನೊಂದಿಗೆ ಒಳ್ಳೆಯ ಸಂದೇಶ ಹೊತ್ತು ಮೈದಳೆದಿದೆ ಅಂದುಕೊಳ್ಳುತ್ತೇನೆ. ಮಗುವಿರಲಿ ನಮಗೊಂದು ಹೆಣ್ಣು ಗಂಡೆಂಬ ಭೇದವಿರದೆ. ಸಂತಸಕೆ ಸಾಕೆಮಗೆ ಅದುವೆ ಸಾರ್ಥಕವು ಇದ್ದಾಗ ನಲಿವಾಗಿ ಮನಕೆ ನೆಮ್ಮದಿಯ ನೀಡೆ ಬೆಳಕಾಗಿ ಬದುಕಲದು ಸಾಲದಿನ್ನೇನು....ನನ್ನ ಕವನದ ಸಾಲುಗಳು ತಮ್ಮ ಅಭಿಪ್ರಾಯವನ್ನು ಹೇಳುವುದೇ ಆಗಿತ್ತು. ಗಂಡು ಹೆಣ್ಣು ಎಂಬ ಮಕ್ಕಳ ಮೇಲಿನ ಮೋಹ ತಂದೆ ತಾಯಿ ಎಂಬ ಭೇದವಿಲ್ಲದೆ ಎಲ್ಲರಲ್ಲೂ ಸಹಜ ಆಸೆ ಆದರೆ ವ್ಯಕ್ತಿಗತವಾಗಿ ವಿವೇಚನೆ ಮಾತ್ರ ಈ ಭೇದವನ್ನು ದೂರಮಾಡುವುದು. ಈಗಿನ ಕಾಲಕ್ಕೆ ಈ ವಿಶಾಲ ಮನಸ್ಸು ಬರಲು ಕೂಡು ಕುಟುಂಬ ಇಲ್ಲದಿರುವುದು, ತಾನು ತನ್ನವರು ಎಂಬ ಸಂಕುಚಿತ ಮನೋಭಾವ ಕೂಡ ಕಾರಣ ಎಂದುಕೊಳ್ಳುವೆ.....
    ತಮ್ಮ ಬರೆಹಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  16. ಮಕ್ಕಳು ಬೆಳಕಾಗಿ ಬದುಕಿದರೆ ಅದು ನಮ್ಮ ಸಾರ್ಥಕತೆ. ಹೌದು ಸರ್.‌ ಆದರೆ ಇನ್ನೂ ನಮ್ಮ ಸಮಾಜದಲ್ಲಿ ಗಂಡು ಮಗುವೇ ಬೇಕು ಎಂಬಂತಹ ಜನರನ್ನು ನೋಡುತ್ತಲೇ ಇದ್ದೇವೆ ಸರ್.‌ ಸ್ನೇಹಿತರ ವಲಯದಲ್ಲಿ ಎಷ್ಟೋ ಕಥೆಗಳನ್ನು ಕೇಳಿದ್ದೇನೆ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

    ಪ್ರತ್ಯುತ್ತರಅಳಿಸಿ
  17. ಮನಸಿಗೆ ತುಂಬಾ ಹತ್ತಿರವಾದ ಕಥೆ. ಚಿತ್ರಣ ಕಣ್ಮುಂದೆ ಹಾದು ಹೋಗುತ್ತಿತ್ತು. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ನಿಮ್ಮ ಕಥೆಯಾಗಿದೆ.
    ಉತ್ತಮ

    ಪ್ರತ್ಯುತ್ತರಅಳಿಸಿ
  18. ನಿಮ್ಮ ಕಥೆ, ಹಲವರ ಅನುಭವ, ಧನ್ಯವಾದಗಳು, ಬರೆಯುವುದನ್ನು ಮುಂದುವರಿಸಿ

    ಪ್ರತ್ಯುತ್ತರಅಳಿಸಿ

  19. "ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ"
    ಹೆಣ್ಣು ಮಕ್ಕಳು ದೇವತಗಳೇ

    ಪ್ರತ್ಯುತ್ತರಅಳಿಸಿ
  20. ಶಾರದಾ ನಿಜವಾಗಲೂ non-stop ಆಗಿ ಓದಿಸಿಕೊಂಡು ಹೋಗುವಂತೆ ಬರೆದಿರುವೆ. ಉತ್ತಮ ಬರಹಗಾರ್ತಿಯಾಗಿರುವೆ. All the best ❤️

    ಪ್ರತ್ಯುತ್ತರಅಳಿಸಿ

ಬದಲಾವಣೆ

 ಅಮ್ಮಾ, ಅಮ್ಮಾ.... ಜೋರಾಗಿ ಕೂಗುತ್ತಾ ಒಳಗೆ ಬಂದ ಪ್ರಜ್ವಲ್.‌ ಯಾಕೋ? ಏನಾಯ್ತು? ಇಷ್ಟು ಜೋರಾಗಿ ಯಾಕೆ ಕೂಗ್ತಾ ಇದ್ದೀಯಾ? ಅಂತ ಅಡುಗೆ ಮನೆಯಿಂದ ಸೆರಗಿನಲ್ಲಿ ಕೈ ಒರೆಸಿ...