ಅಮ್ಮಾ.. ತಿಂಡಿ ರೆಡಿ ಇದ್ಯಾ? 9.30 ಗೆ ಮೀಟಿಂಗ್ ಇದೆ, ಆಗ್ಲೇ 9.10 ಆಯ್ತು ಅಂತ ಕೇಳ್ತಾ ಅಡುಗೆ ಮನೆಗೆ ಬಂದ, ಅಭಿ. ಈಗ ತಾನೇ ಕೆಲಸಕ್ಕೆ ಸೇರ್ಕೊಂಡು, ಮನೆಯಿಂದಲೇ ಕೆಲಸ ಮಾಡ್ತಾ ಇದ್ದ ಅಭೀಗೆ ಈಗ ಶುರುವಾಗಲಿದ್ದ ಮೀಟಿಂಗ್ ಟೆನ್ಷನ್. ಆಯ್ತು ಕಂದಾ ಇನ್ನೆರೆಡೇ ನಿಮಿಷ ಚಟ್ನಿಗೆ ಒಂದು ಒಗ್ಗರಣೆ ಕೊಟ್ಟುಬಿಟ್ರೆ ತಿಂಡಿ ರೆಡಿ ಅಂತ ಒಗ್ಗರಣೆಯನ್ನು ಚಟ್ನಿಗೆ ಸುರಿದಳು ರೇಖಾ. ಅಲ್ಲಮ್ಮಾ ಲೇಟ್ ಆಗ್ತಿದೆ ಅಂತ ಹೇಳ್ತಾ ಇದ್ದೀನಿ, ಇನ್ನೂ 2 ನಿಮಿಷ ಅಂತ್ಯಲ್ಲ ಅಂತ ಗೊಣಗುತ್ತಲೇ ತಟ್ಟೆ ತಗೊಂಡು, ತಿಂಡಿ ತಿನ್ತಾನೇ ಲ್ಯಾಪ್ ಟಾಪ್ ತೆರೆಯಲು, ರೂಮಿಗೆ ಓಡಿದ ಅಭಿ. ತನಗಿಂತ ಎತ್ತರವಾಗಿ ಬೆಳೆದುನಿಂತ ಮಗ ಹೋದದ್ದನ್ನೇ ನೋಡುತ್ತಾ ನಿಂತಳು ರೇಖಾ. ತಕ್ಷಣ ಆಕೆಗೆ ಅಮ್ಮಾ ಚಪಾತಿ ಚೂರು ಮಾಡಿ ತಟ್ಟೆಗೆ ಹಾಕಿದ್ದೆಲ್ಲ ತಿಂದಿದ್ದೀನಿ, ನೋಡಮ್ಮಾ ನೀನು ಬಟ್ಟೆ ಒಗೆದುಕೊಂಡು ಬರುವಷ್ಟರಲ್ಲಿ ತಟ್ಟೆ ಖಾಲಿ ಅಂತ ಪುಟ್ಟ ಪುಟ್ಟ ಹಲ್ಲುಗಳನ್ನು ತೋರಿಸುತ್ತಾ ಹೇಳುತ್ತಿದ್ದ ಪುಟ್ಟ ಅಭಿ ನೆನಪಾದ.
ಮಗನ ಬಾಲ್ಯದ ತುಂಟಾಟಗಳು ಎಷ್ಟು ಚೆನ್ನಾಗಿದ್ದವು; ಅದರಲ್ಲೂ 3 ವರ್ಷದೊಳಗಿನ ಆಟಗಳಂತೂ ಮರೆಯಲಸಾಧ್ಯ.7 ತಿಂಗಳ ಮಗುವಾಗಿದ್ದಾಗ ಸಂಜೆ 5.30 ಆಗುವುದು ಅದು ಹೇಗೆ ಗೊತ್ತಾಗುತ್ತಿತ್ತೋ?? ಅಪ್ಪ ಬರುತ್ತಾರೆ ಎನ್ನುವ ಅರಿವು ಅದು ಹೇಗೆ ಇರುತ್ತಿತ್ತೋ? ಆ ಸಮಯಕ್ಕೆ ಸರಿಯಾಗಿ ಹೊಸ್ತಿಲ ಬಳಿಯೇ ಆಟ, ಅಪ್ಪನ ಮುಖ ನೋಡಿದಾಗ ಬೊಚ್ಚು ಬಾಯಿಯ ನಗು, ಇವರಿಗೆ ಕೈಕಾಲು ತೊಳೆಯುವ ಪುರುಸೊತ್ತನ್ನೂ ಕೊಡುತ್ತಿರಲಿಲ್ಲ; ಆದರೂ ಬೇಗನೇ ಕೈಕಾಲು ಮುಖ ತೊಳೆದುಕೊಂಡು ಬಂದು, ಮಗನನ್ನು ಎತ್ತಿಕೊಂಡು ಆಟವಾಡಿಸಿದ ಮೇಲೆಯೇ ಉಳಿದ ಕೆಲಸ. ರೇಖಾ ಎರಡೂ ರೂಮಿನ ಕಡೆ ದೃಷ್ಟಿ ಹಾಯಿಸುತ್ತಾ ಅಂದುಕೊಂಡಳು, ಈಗ ಅಪ್ಪ ಒಂದು ಲ್ಯಾಪ್ ಟಾಪ್, ಮಗ ಒಂದು ಲ್ಯಾಪ್ ಟಾಪ್ ಹಿಡಿದು ಕೂರಲೇಬೇಕು. ಇಬ್ಬರಿಗೂ ಕೆಲಸದ ಒತ್ತಡ; ಇಬ್ಬರ ಕೆಲಸವೂ ಒಟ್ಟಿಗೇ ಮುಗಿಯಿತು ಎನ್ನುವಂತೆ ಇಲ್ಲ; ವರ್ಕ್ ಫ್ರಮ್ ಹೋಮ್ ಆಗಿದ್ದರಿಂದ ಕೆಲಸ ಮುಗಿಸಿ ಆಯ್ತಪ್ಪಾ ಇವತ್ತಿಗೆ ಅನ್ನುವ ಹಾಗಿಲ್ಲ; ಇಬ್ಬರಿಗೂ ಅವರವರದ್ದೇ ಆದ ಟಾರ್ಗೆಟ್...
ರೇಖಾಳಿಗೆ ಪುಟ್ಟ ಅಭಿಯ ಒಂದೊಂದೇ ನೆನಪುಗಳು ಸುರುಳಿ ಸುರುಳಿಯಾಗಿ, ಸಿನಿಮಾದ ರೀಲಿನಂತೆ ಹೊರಹೊಮ್ಮತೊಡಗಿದವು. ರೇಖಾಳ ಸ್ವಗತ ಆರಂಭವಾಯಿತು.
ಇನ್ನೂ ನಡಿಗೆ ಕಲಿತು ಪುಟ್ಟ ಪುಟ್ಟ ಹೆಜ್ಜೆ ಇಡುವ ಒಂದೂವರೆ ಎರಡು ವರ್ಷದ ಮಗುವಾಗಿದ್ದಾಗ ಹೊರಗೆ ಹೋದಾಗಲೆಲ್ಲ ಕರೆದುಕೊಂಡು ಹೋಗಬೇಕು; ಹತ್ತಿರದ ಅಂಗಡಿಗಳಿಗೆ ನಡೆದುಕೊಂಡೇ ಹೋಗುತ್ತಿದ್ದ ಕಾಲವದು; ಮಗನನ್ನು ಎತ್ತಿಕೊಳ್ಳೋಕೆ ದೊಡ್ಡೋನು; ನಡೆಸಲು ಸಣ್ಣೋನು ಎನ್ನುವ ವಯಸ್ಸು. ನಡೆಯುವಾಗಲೆಲ್ಲಾ, ಅದೇನು? ಇದೇನು? ಅಂತ ಸುತ್ತಮುತ್ತಲೂ ನೋಡುತ್ತಾ ಬಾಲಭಾಷೆಯಲ್ಲಿ ಕೇಳುವ ಕುತೂಹಲಕಾರಿ ಪ್ರಶ್ನೆಗಳು. ಅದಕ್ಕೆಲ್ಲ ಸಮಾಧಾನಕರ ಉತ್ತರವನ್ನು ಕೊಡುತ್ತಾ ಅಂಗಡಿಗೆ ಹೋಗಿ ಬೇಕಾದ ತರಕಾರಿ, ಸಾಮಾನುಗಳನ್ನು ಕೊಂಡು ವಾಪಸ್ ಬರುವಾಗ ಅಮ್ಮಾ ಎತ್ತಿಕೋ ಅಂತ ಸಣ್ಣ ಹಠ. ಚೀಲವನ್ನು ಹೊತ್ತುಕೊಂಡು, ಮಗನನ್ನು ಎತ್ತಿಕೊಂಡು ಮನೆಗೆ ಬಂದು ಬೆವರು ಒರೆಸಿಕೊಂಡದ್ದು ಈಗಲೇನೋ ಅನ್ನುವ ಹಾಗಿದೆ. ಆದರೆ ಈಗ ಎಲ್ಲಿಗಾದರೂ ಒಟ್ಟಿಗೆ ಹೋಗುವಾಗ, ಎರಡು ಮೂರು ಬ್ಯಾಗ್ ಗಳನ್ನು ಎತ್ತಿಕೊಂಡು, ಅವನು ಮುಂದೆ ನಡೆಯುತ್ತಾ ಸಾಗಿದರೆ ಅವನ ವೇಗಕ್ಕೆ ಹೆಜ್ಜೆ ಹಾಕಲು ನಾನು ಬೆವರು ಒರೆಸಿಕೊಳ್ಳಬೇಕು.... ಇದನ್ನು ಯೋಚಿಸುತ್ತಿದ್ದ ರೇಖಾಳಿಗೆ ನಿಜವಾಗಲೂ ಬೆವರು ಒರೆಸಿಕೊಳ್ಳುವಂತಾಯಿತು.
ಮಾತು ಕಲಿಯುತ್ತಾ ಎರಡು ಅಕ್ಷರದ ಮಾತುಗಳನ್ನಾಡುತ್ತಾ, ಹೇಳಿಕೊಟ್ಟ ಚಿಕ್ಕ ಚಿಕ್ಕ ಪದ್ಯಗಳನ್ನು ತೊದಲು ಮಾತಿನಲ್ಲಿ ರಾಗವಾಗಿ ಹೇಳುತ್ತಾ, ತನ್ನದೇ ಆದ ಭಾಷೆಯನ್ನು ಸತತವಾಗಿ ಮಾತನಾಡುತ್ತಿದ್ದ ಅಭಿ ನೆನಪಾದ. ಅದು ಕನ್ನಡವೋ, ಇಂಗ್ಲಿಷೋ, ಜಪಾನೀಸೋ, ಚೈನೀಸೋ??? ಅಲ್ಲ ಅಲ್ಲ ಅದು ಅಭಿಯಭಾಷೆ; ಹಾಲಿನವನು ಮಗುವಿನ ಮಾತನ್ನು ಕೇಳಿಸಿಕೊಂಡು, ಮೇಡಂ, ಇದನ್ನು ರೆಕಾರ್ಡ್ ಮಾಡಿಡಿ. ಮತ್ತೆ ನಿಮಗೆ ಸಿಗುವುದಿಲ್ಲ ಎನ್ನುತ್ತಿದ್ದ. ಹರೇ ರಾಮ, ಹರೇ ರಾಮ, ರಾಮ ರಾಮ ಹರೇ, ಹರೇ, ಅಂತ ಹೇಳ್ಕೊಟ್ರೆ, ಹಯೇ ಮಾಮ, ಹಯೇ ಮಾಮ ಅಂತ ಹೇಳ್ತಾ ನನ್ನ ಮಾವಂದಿರ ಹೆಸರನ್ನೆಲ್ಲ ಕರೆದುಬಿಟ್ಟಿದ್ದ... ಕೆಲಸ ಮಾಡಿ ಸಾಕಾಗಿರುತ್ತಿದ್ದ ನನಗೆ ಒಮ್ಮೊಮ್ಮೆ ಈ ಮಾತುಗಳು ತಲೆ ಚಿಟ್ಟು ಹಿಡಿಸುತ್ತಿದ್ದವು. ಅಭೀ ಮಾತು ನಿಲ್ಲಿಸೋ ಅಂದಷ್ಟೂ ಅವನ ಮಾತು ಜಾಸ್ತಿಯಾಗುತ್ತಿತ್ತು... ಈಗ ಮಾತು ಆಡಲೇ ಸಮಯವಿರುವುದಿಲ್ಲ ಅವನಿಗೆ; ಏನೇ ಕೇಳಿದರೂ ಕ್ಲುಪ್ತವಾದ ಮತ್ತು ಚುಟುಕಾದ ಉತ್ತರ; ತಲೆಯಲ್ಲಿ ಅವನದ್ದೇ ಆದ ಯೋಚನೆಗಳಿರುತ್ತವಲ್ಲ....
ಊಟ ಮಾಡಿಸುವಾಗ ಅಭಿಗೆ ಕಥೆಗಳನ್ನು ಹೇಳಬೇಕಿತ್ತು; ನನಗೋ ಕಥೆಗಳನ್ನು ಹೆಣೆದೂ ಹೆಣೆದೂ ಸಾಕಾಗುತ್ತಿತ್ತು.ಒಂದೊಂದು ಸಲವಂತೂ ತುತ್ತು ಬಾಯಿಗಿಟ್ಟಾಗ ಪುರ್..... ಅಂತ ಆಟವಾಡುತ್ತಾ ಮನೆ ತುಂಬಾ ಅನ್ನದ ಅಗುಳುಗಳನ್ನು ಹರಡಿಬಿಡುತ್ತಿದ್ದ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗುತ್ತಿತ್ತು ನನ್ನ ಸ್ಥಿತಿ. ಆದಷ್ಟು ಬೇಗ ಇವನು ಊಟ ಮಾಡುವುದನ್ನು ಕಲಿಯಲಪ್ಪಾ ಅಂತ ಮನಸ್ಸು ಹಂಬಲಿಸುತ್ತಿತ್ತು. ಅಭಿ ಮೊದಲು ಊಟ ಮಾಡಲು ಕಲಿತಾಗ ನನ್ನ ಸಂತೋಷಕ್ಕೆ ಕೊನೆಯೇ ಇರಲಿಲ್ಲ; ಇನ್ನು ಮಗನಿಗೆ ಊಟ ಮಾಡಿಸುವ ಕೆಲಸ ತಪ್ಪಿತು ಅಂತ. ತಟ್ಟೆಯಲ್ಲಿ ಒಂದು ಕಡೆ ಸಾಂಬಾರು ಮತ್ತು ಅನ್ನ ಇನ್ನೊಂದು ಕಡೆ ಮೊಸರನ್ನ ಹಾಕಿ, ಕಲೆಸಿ ಸಣ್ಣ ಸಣ್ಣ ತುತ್ತುಗಳನ್ನು ಮಾಡಿಟ್ಟರೆ ಬೇಗ ಊಟ ಮಾಡಿ ಬಿಡುತ್ತಿದ್ದ; ಎಲ್ಲರೂ ರೇಖಾ, ನಿನ್ನ ಮಗ ಬಿಡು, ಒಂದು ದಿನವೂ ಊಟಕ್ಕೆ ತೊಂದರೆ ಕೊಟ್ಟವನಲ್ಲ ಅಂತ ಹೇಳುವಾಗ ಏನೋ ಹೆಮ್ಮೆ; ಆದರೂ ನನ್ನ ಸ್ನೇಹಿತೆಯೊಬ್ಬರು, ಮಗು ಊಟ ಮಾಡೋದು, ಕಲೀತು ಅಂತ ಊಟ ಮಾಡ್ಸೋದನ್ನು ಬಿಡ್ಬೇಡ ರೇಖಾ, ಯಾಕೇಂದ್ರೆ ಅವರು ದೊಡ್ಡವರಾದ ಮೇಲೆ ಊಟ ಮಾಡ್ಸೋಕಾಗಲ್ಲ ಅಂತ ಹೇಳಿದ್ದು ಈಗ ಅನ್ನುವ ಹಾಗಿದೆ. ಆದರೀಗ ಹಸಿವಾಗಿದೆಯೋ ಇಲ್ಲವೋ ಇರುವ ಟೈಮಿನಲ್ಲಿಊಟ ಮಾಡಿಬಿಡಬೇಕು. ಇಲ್ಲವಾದರೆ ಮತ್ತೆ ಕೆಲಸದ ಒತ್ತಡ. ಅವಸರದಲ್ಲಿ ಅವನು ಊಟ ಮಾಡುವುದನ್ನು ನೋಡುವಾಗ, ಮತ್ತೆ ಅವನಿಗೆ ಕಥೆ ಹೇಳುತ್ತಾ ಊಟ ಮಾಡಿಸಬೇಕು ಅನಿಸುವುದು ಸುಳ್ಳಲ್ಲ.
ಇನ್ನು ಮೊದಲ ಬಾರಿಗೆ ಸ್ಕೂಲಿಗೆ ಹೋದ ಸಂಭ್ರಮವನ್ನು ಮರೆಯಲಾದೀತೇ? ಮನೆಯಿಂದ ಜೈಲಿಗೆ ಕಳಿಸುತ್ತಿರುವೆನೋ ಅನ್ನುವ ಭಾವನೆಯೊಂದಿಗೆ, ಅವನಿಗಿಂತ ಹೆಚ್ಚಾಗಿ ನಾನು ಆತಂಕಕ್ಕೊಳಗಾಗಿ ಅವನನ್ನು ಸ್ಕೂಲಿಗೆ ಕರೆದುಕೊಂಡು ಹೊರಟಿದ್ದೆ. ಅಲ್ಲಿ ಎಲ್ಲಾ ಮಕ್ಕಳೂ ಅಮ್ಮಂದಿರು ಬಿಟ್ಟು ಹೋಗುವುದನ್ನು ನೋಡುತ್ತಾ ಅಳುತ್ತಿರುವಾಗ, ಅಭಿಯೂ ಇನ್ನೇನು ಅಳಬೇಕು ಅನ್ನುವಷ್ಟರಲ್ಲಿ ಪುಟ್ಟಾ ಇದು ಸ್ಕೂಲು, ಅಳಬಾರದು, ಹೊಸ ಹೊಸ ಕಥೆ ಹೇಳುತ್ತಾರೆ, ಪದ್ಯ ಹೇಳಿಕೊಡುತ್ತಾರೆ; ಆಟ ಆಡಿಸುತ್ತಾರೆ ಅಂತ ಮನೆಯಲ್ಲಿ ಹೇಳಿದ್ದನ್ನೇ ಪುನರಾವರ್ತಿಸಿ ಬಹು ಕಷ್ಟದಿಂದ ಮಗನನ್ನು ಬಿಟ್ಟು ಹಿಂತಿರುಗಿ ನೋಡದೇ ಮನೆಗೆ ಬಂದಾಗಿತ್ತು. ಪ್ರತಿದಿನ ಅವನನ್ನು ಸ್ಕೂಲಿಗೆ ಬಿಟ್ಟು, ಆ ಪುಟ್ಟ ಮಕ್ಕಳು ಸಾಲಿನಲ್ಲಿ ನಿಂತು ನಾಡಗೀತೆ, ರಾಷ್ಟ್ರಗೀತೆ ಹಾಡುವುದನ್ನು ನೋಡುತ್ತಾ ನಿಲ್ಲುತ್ತಿದ್ದ ಪರಿಪಾಠ ಮನದಲ್ಲಿ ಅಚ್ಚಹಸಿರಾಗಿದೆ. ಮಕ್ಕಳು ಆದಷ್ಟು ಬೇಗ ದೊಡ್ಡವರಾಗಿ ಅವರಾಗಿ ಸೈಕಲ್ ತೆಗೆದುಕೊಂಡು ಹೋಗುವಂತಾಗಲಪ್ಪ ಸ್ಕೂಲಿಗೆ ಬಿಡುವುದು, ಕರೆದುಕೊಂಡು ಬರುವುದು; ಈ ಕೆಲಸಗಳೆಲ್ಲ ಕಡಿಮೆಯಾಗುತ್ತವೆ ಅಂತ ಎಷ್ಟೋ ಬಾರಿ ಅನಿಸಿತ್ತು. ಈಗ ಅವನನ್ನು ಕರೆದುಕೊಂಡು ಹೋಗಲು ಬರಲು ನಾನು ಬೇಕೇ ಆಗಿಲ್ಲ. ನಾನು ಎಲ್ಲಾದರೂ ಹೋಗಬೇಕೆಂದರೆ, ಅಮ್ಮಾ ಇವತ್ತು ಬಿಡುವಾಗಿದ್ದೇನೆ, ನಾನೇ ಬಿಟ್ಟು ಬರುತ್ತೇನೆ ಅಂತ ಹೊರಡುತ್ತಾನೆ!
ಆಟ, ಆಟ, ಆಟ. ಇಡೀ ದಿನ ಬೇಕಾದರೆ ಆಟವಾಡುತ್ತಲೇ, ಓಡುತ್ತಲೇ ಕಾಲಕಳೆಯುತ್ತಿದ್ದ ಅಭಿ. ಅವನ ಆಟದ ಹುಚ್ಚು ಹೇಗಿತ್ತೆಂದರೆ, ಆಟವಾಡಲು ಯಾರೂ ಸಿಗಲಿಲ್ಲವೆಂದರೆ, ನಾನಾದರೂ ಹೋಗಿ ಅವನ ಜೊತೆ ಆಡಲೇಬೇಕಿತ್ತು. ಇಲ್ಲವಾದಲ್ಲಿ ಅವನಿಗೆ ಅಳುವೇ ಬಂದುಬಿಡುತ್ತಿತ್ತು. ಅವನನ್ನು ಹಿಡಿದು ಕೂರಿಸಿ ಏನಾದರೂ ಬರೆಸಬೇಕು, ಓದಿಸಬೇಕು ಎಂದರೆ ಹರಸಾಹಸ ಮಾಡಬೇಕಾಗುತ್ತಿತ್ತು. ಒಂದು ನಿಮಿಷವೂ ಕೂತಲ್ಲಿ ಕೂರುತ್ತಿರಲಿಲ್ಲ; ಎಲ್ಲರನ್ನೂ ಸುಮ್ಮನೇ ಕೂರಿಸಿ ಇನ್ನೇನು ಪಾಠವನ್ನು ಶುರು ಮಾಡಬೇಕು ಎನ್ನುವಷ್ಟರಲ್ಲಿ ಅಭಿ ಎದ್ದು ಮಕ್ಕಳನ್ನೆಲ್ಲ ನಗಿಸಿಬಿಡುತ್ತಾನೆ; ಮತ್ತೆ ಎಲ್ಲರನ್ನೂ ತಹಬಂದಿಗೆ ತರಬೇಕು ಅಂತ ನಗು ನಗುತ್ತಲೇ, ಅಭಿಯ ಯುಕೆಜಿ ಕ್ಲಾಸ್ ಟೀಚರ್ ಹೇಳಿದ್ದು, ಇನ್ನೂ ಕಿವಿಯಲ್ಲಿ ಕೇಳಿದ ಹಾಗಿದೆ. ಓಡುವಾಗ ಬಿದ್ದು ಹಣೆಯಲ್ಲಿ, ಮಂಡಿಯಲ್ಲಿ, ಮೊಣಕೈಯಲ್ಲಿ ಮಾಡಿಕೊಂಡ ಗಾಯಗಳಿಗೆ ಲೆಕ್ಕವೇ ಇರಲಿಲ್ಲ; ಅಂತೂ ಕಷ್ಟಪಟ್ಟು ಹಿಡಿದು ಕೂರಿಸಿ, ಬರೆಸುವಷ್ಟರಲ್ಲಿ ಸಾಕು ಸಾಕಾಗುತ್ತಿತ್ತು. ಸ್ಕೂಲಿನಿಂದ ಅವನನ್ನು ಕರೆದುಕೊಂಡು ಬರುವಾಗ ನನ್ನ ಸ್ನೇಹಿತೆಯೊಬ್ಬಳು, ರೇಖಾ ಅದೇನು ಎನರ್ಜಿ ನಿಮ್ಮ ಮಗನಿಗೆ... ಆಗಿನಿಂದ ನೋಡ್ತಾ ಇದ್ದೀನಿ ಫೀಲ್ಡ್ ತುಂಬಾ ಓಡ್ತಾನೇ ಇದ್ದಾನೆ ಅಂತ ಹೇಳ್ತಾ ಇದ್ದಿದ್ದು ನೆನಪಾಗುತ್ತೆ. ಓಡುತ್ತಲೇ ಇರುತ್ತಿದ್ದ ಅಭಿ, ಈಗ ಕೆಲಸಕ್ಕಾಗಿ ಒಂದು ಕಡೆ ಕೂರಲೇಬೇಕು. ಹೆಡ್ ಫೋನ್ ಹಾಕಿಕೊಂಡು, ಲ್ಯಾಪ್ ಟಾಪ್ ಸ್ಕ್ರೀನ್ ನೋಡುತ್ತಾ ಕೆಲಸದಲ್ಲಿ ತಲ್ಲೀನನಾಗಿ ಗಂಟೆಗಟ್ಟಲೆ ಒಂದೇ ಕಡೆ ಕೂರುವ ಅಭಿಯನ್ನು ನೋಡಿದಾಗ ಒಂದು ಕ್ಷಣವೂ ಕೂತಲ್ಲಿ ಕೂರದ ಅಭಿ ಇವನೇನಾ? ಅಂತ ಮತ್ತೆ ಮತ್ತೆ ಮನಸ್ಸು ಪ್ರಶ್ನಿಸುತ್ತದೆ.
ನಾನೂ ಕೆಲಸಕ್ಕೆ ಹೋಗುತ್ತಿದ್ದುದ್ದರಿಂದ ಎಷ್ಟೋ ಸಲ ಅವನ ಪಕ್ಕ ಕೂತು ಪಾಠ ಹೇಳಿಕೊಡಲಾಗಲೀ ಅಥವಾ ಹೋಮ್ ವರ್ಕ್ ಮಾಡಿಸುವುದಾಗಲೀ ಸಾಧ್ಯವಾಗುತ್ತಿರಲಿಲ್ಲ. ಅದು ಹೇಗೆ ಒಂದರಿಂದ ನೂರು ಬರೆಯುವುದನ್ನು ಕಲಿತನೋ?? ಹೇಗೆ ಮಗ್ಗಿ ಬಾಯಿಪಾಠವಾಯಿತೋ?? ಅಕ್ಷರಗಳನ್ನು ಹೇಗೆ ಅರಿತನೋ? ದೇವರೇ ಬಲ್ಲ. ತ್ರೀ ಇನ್ ಯುವರ್ ಮೈಂಡ್ ಫೋರ್ ಫಿಂಗರ್ಸ್ ಅಪ್. ಆಫ್ಟರ್ ತ್ರೀ ಕೌಂಟ್ ಫೋರ್, ಫೈವ್, ಸಿಕ್ಸ್, ಸೆವೆನ್ ಅಂತ ರಾಗವಾಗಿ ಹೇಳ್ತಾ ಹೇಳ್ತಾ ಪುಟ್ಟ ಪುಟ್ಟ ಬೆರಳುಗಳನ್ನು ಎಣಿಸುತ್ತಾ ಕೂಡುವ ಲೆಕ್ಕಗಳನ್ನು ಮಾಡ್ತಿದ್ದ. ಅಮ್ಮಾ ಇದನ್ನು ಹೇಗೆ ಬರೀಬೇಕು? ಇದಕ್ಕೆ ಏನು ಉತ್ತರ? ಎಂಬ ಪ್ರಶ್ನೆಗಳನ್ನು ಕೇಳಿದಾಗ ಒಂದು ಸಲ ಹೇಳಿಕೊಟ್ಟರೂ, ಅಷ್ಟೂ ಗೊತ್ತಾಗಲ್ವಾ? ಕ್ಲಾಸಲ್ಲಿ ಕಲೀಲಿಲ್ವಾ? ಅನ್ನೋದು ನನ್ನ ಸಾಮಾನ್ಯ ಉತ್ತರವಾಗಿರುತ್ತಿತ್ತು. ಈಗ ನಾನು, ಕೆಲವೊಮ್ಮೆ ಆನ್ ಲೈನ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದಾಗ ಅಮ್ಮ ಎಷ್ಟು ಈಸಿ ಇದೆ. ಅಷ್ಟೂ ಗೊತ್ತಾಗಲ್ವಾ? ಅನ್ನೋದು ಅವನ ಸಾಮಾನ್ಯ ಉತ್ತರ!
ಕಾರೆಂದರೆ ಬಹಳ ಹುಚ್ಚು ಅವನಿಗೆ. ಒಂದು ಆಟಿಕೆಯ ಕಾರನ್ನು ಇಟ್ಟುಕೊಂಡು ತರಹೇವಾರಿ ಆಟವಾಡುತ್ತಿದ್ದ. ಒಮ್ಮೆ ಅಮ್ಮಾ ನನಗೆ ಮಾಟಿಜ್ ಕಾರು ಬೇಕು ಎಂಬ ಹಠ ಶುರುವಾಯಿತು. ನಾವಿಬ್ಬರೂ ಅವನನ್ನು ಕರೆದುಕೊಂಡು ಅಂಗಡಿಗೆ ಹೋಗಿ ಕಾರು ಕೊಡಿಸಿ ಚೆನ್ನಾಗಿದ್ಯಾ ಪುಟ್ಟಾ? ಅಂತ ಕೇಳಿದರೆ, ಇವನೋ ಇದು ಮಾಟಿಜ್ ಕಾರಲ್ಲ; ಇದು ಸ್ಯಾಂಟ್ರೋ. ನನಗೆ ಮಾಟಿಜ್ ಕಾರೇ ಬೇಕು ಅಂತ ಅಳತೊಡಗಿದ. ಇನ್ನೂ ಸರಿಯಾಗಿ 4 ವರ್ಷ ತುಂಬಿರಲಿಲ್ಲ; ಆಗಲೇ ಅದ್ಹೇಗೆ ಸ್ಯಾಂಟ್ರೋ, ಮಾಟಿಜ್ ನಡುವಿನ ವ್ಯತ್ಯಾಸ ಗೊತ್ತಾಗುತ್ತಿತ್ತೋ? ನಾನು ಈಗಲೂ ಕಾರಿನ ಹೆಸರು ಓದಿ, ಅದು ಯಾವ ಕಾರ್ ಎಂದು ಕಂಡುಹಿಡಿಯುತ್ತೇನೆಯೇ ಹೊರತು, ಕಾರನ್ನು ನೋಡಿ ಅಲ್ಲ; ಅಂತೂ ಅಂಗಡಿಯವನು ಹುಡುಕಿ ಮಾಟಿಜ್ ಕಾರೇ ಕೊಟ್ಟಾಗ ಅವನ ಕಂಗಳು ಅರಳಿ, ಹೊಳೆದದ್ದು ಈಗ ನನ್ನೆದುರಿಗೇ ಅನ್ನುವ ಹಾಗಿದೆ. ಈಗಲೂ ಹಾಗೆಯೇ, ಮಾರ್ಕೆಟ್ ನಲ್ಲಿ ಯಾವ ಕಾರು ಚೆನ್ನಾಗಿದೆ? ಯಾವುದು ಕೊಡುವ ದುಡ್ಡಿಗೆ ತಕ್ಕುದಾಗಿದೆ? ಯಾವುದರಲ್ಲಿ ಡ್ರೈವಿಂಗ್ ಆರಾಮದಾಯಕವಾಗಿದೆ? ಎನ್ನುವುದನ್ನೆಲ್ಲ ರಿಸರ್ಚ್ ಮಾಡಿ, ಅಪ್ಪನಿಗೆ ಸಲಹೆ ನೀಡುವವನು ಅವನೇ! ಈಗ ಕಾರ್ ಡ್ರೈವಿಂಗೇ ಅವನಿಗೆ ಆಟವಾಗಿಬಿಟ್ಟಿದೆ.
ಅಭಿಗೆ ಕಾರಿನ ಆಟದಲ್ಲಿದ್ದ ಏಕಾಗ್ರತೆ ಬಣ್ಣ ಹಾಕುವುದರಲ್ಲಾಗಲೀ, ಚಿತ್ರ ಬಿಡಿಸುವುದರಲ್ಲಾಗಲೀ ಇರಲಿಲ್ಲ. ಶಾಲೆಯಲ್ಲಿ ಎಲ್ಲ ವರ್ಕ್ ಶೀಟ್ ಗಳಲ್ಲಿ ಚೆನ್ನಾಗಿ ಮಾಡಿದರೂ, ಬಣ್ಣ ಹಾಕುವುದರಲ್ಲಿ ಅಭಿ ಸೋಲುತ್ತಿದ್ದ. ಕೊಟ್ಟಿರುವ ಆಕಾರದೊಳಗೆ ಬಣ್ಣ ತುಂಬುವ ಸಹನೆ ಅವನಿಗಿರಲಿಲ್ಲ. ಯುಕೆಜಿ ಮಾರ್ಕ್ಸ್ ಕಾರ್ಡ್ ಕೊಟ್ಟಾಗ ಗ್ರೇಡ್ ಗಳನ್ನು ನೋಡಿ, ಅಮ್ಮಾ ಎಲ್ಲದರಲ್ಲೂ ಎ+, ಆದರೆ ನಮ್ಮ ಮಿಸ್ಸು ಡ್ರಾಯಿಂಗ್ ನಲ್ಲಿ ಎ ಮುಂದೆ + ಹಾಕೋದೇ ಮರ್ತುಬಿಟ್ಟಿದ್ದಾರೆ ಅಮ್ಮಾ ಅಂತ ಹೇಳಿದ್ದು ಮೊನ್ನೆ ಮೊನ್ನೆ ಎನ್ನುವ ಹಾಗಿದೆ. ಈಗ ನಾನೇನಾದರೂ ಗ್ರೇಡ್ ಬಗ್ಗೆ ಕೇಳಿದರೆ, ಆ ಗ್ರೇಡ್ ಯಾವ್ದೂ ಜೀವನಕ್ಕೆ ಬರಲ್ಲ ಸುಮ್ನಿರಮ್ಮ ಅಂತ ಹೇಳಿ, ಶೈಕ್ಷಣಿಕ ವಲಯದಲ್ಲಿರುವಂತಹ ಪರೀಕ್ಷೆಯೇ ಮುಖ್ಯ; ಅಂಕಪಟ್ಟಿಯೇ ಅಮೂಲ್ಯ ಎಂಬ ಬಲವಾದ ನಂಬಿಕೆಗೆ ತಣ್ಣೀರೆರೆಚಿ ಬಿಡುತ್ತಾನೆ.
3ನೇ ಕ್ಲಾಸಿನ ಮೊದಲ ದಿನ ಸ್ಕೂಲಿನಿಂದ ಮನೆಗೆ ಬಂದು, ಅಮ್ಮ ನಮ್ಮ ಮಿಸ್ ಗೆ ಟೂ ಫೇಸಸ್ ಇದೆಯಂತೆ. ನಾವು ಜಾಣ ಮಕ್ಕಳಾದರೆ ಒಂದು ಫೇಸ್ ತೋರಿಸ್ತಾರಂತೆ; ಇಲ್ಲ ಅಂದ್ರೆ ಇನ್ನೊಂದು ಫೇಸ್ ತೋರಿಸ್ತಾರಂತೆ ಅಂತ ತನ್ನ ಮುಖವನ್ನಗಲಿಸಿ, ಬೆರಗುಗಣ್ಣುಗಳಲ್ಲಿ ಹೇಳಿದ್ದ ಮಾತು ಈಗ ಕೇಳಿದಂತಿದೆ. ಈಗ ಅವನೇ, ಒಬ್ಬ ಲೆಕ್ಚರರ್ ಅವರ ಒಂದು ಕ್ಲಾಸ್ ಕೇಳಿದರೆ ಸಾಕು ಅವರ ಮುಂದಿನ ಪಾಠಗಳು ಹೇಗಿರುತ್ತವೆ? ಅಂತ ಊಹೆ ಮಾಡುವಷ್ಟು ಪರಿಣಿತನಾಗಿಬಿಟ್ಟಿದ್ದಾನೆ. ಮನುಷ್ಯರ ಮುಖ ನೋಡಿ ಇವರು ಹೀಗಿರಬಹುದು ಅನ್ನುವ ಊಹೆ ಮಾಡಲು ತೊಡಗಿಬಿಡುತ್ತಾನೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಅಮ್ಮಾ, ನಯವಾಗಿ ಮಾತನಾಡುವವರೆಲ್ಲ ಒಳ್ಳೆಯವರಲ್ಲ ಅಂತ ಸೈಕಾಲಜಿ ಓದಿದ ದೊಡ್ಡ ಸೈಂಟಿಸ್ಟ್ ಥರ ಮಾತಾಡ್ತಾನೆ.
ಮೊದಲೆಲ್ಲ ಯಾವುದಾದರೂ ಹಾಡು ಹೇಳು ಎಂದರೆ ಸಾಕು; ರಾಗ ಶುರು ಮಾಡಿಬಿಡುತ್ತಿದ್ದ. ಆಯಾ ವಯಸ್ಸಿಗೆ ತಕ್ಕಂತೆ ಹಾಡುಗಳು. ಸ್ಟಮಕ್ ಈಸ್ ಏಕಿಂಗ್ ಸ್ಟಮಕ್ ಈಸ್ ಏಕಿಂಗ್ ಜಸ್ಟ್ ನೌ ಅನ್ನುವ ಇಂಗ್ಲಿಷ್ ಅಭಿನಯ ಗೀತೆ, ಮುಂದೆ ಬರತ್ತೆ, ಹಿಂದೆ ಹೋಗುತ್ತೆ, ನಮ್ಮ ಮೋಟಾರ್ ಗಾಡಿ ಎನ್ನುವ ಕನ್ನಡ ಗೀತೆಯಿಂದ ಹಿಡಿದು, ಮುಂದೆ ಪಾರ್ವತಿ ಕಂದನೇ ಓ ಸುಮುಖ ಎಂಬ ಹಾಡಿನವರೆಗೆ, ಹಾಡು ಎಂದ ತಕ್ಷಣ ಹಾಡುತ್ತಿದ್ದ. ಆದರೆ ಕೆಲಸದ ಒತ್ತಡದಲ್ಲಿ ಕೇಳಲು ಕೆಲವೊಮ್ಮೆ ಸಮಯವೇ ಸಿಗುತ್ತಿರಲಿಲ್ಲ. ಆದರೆ ಈಗ, ಅಭಿ ಅಷ್ಟು ಒಳ್ಳೆ ವಾಯ್ಸ್ ಇದೆ ಹಾಡೋ ಅಂದ್ರೆ ಸುಮ್ನಿರಮ್ಮ, ನನಗಿಂತ ಚೆನ್ನಾಗಿ ಹಾಡೋರು ಎಷ್ಟೋ ಜನ ಇದ್ದಾರೆ. ನಿನಗೋ ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ಅಂತ ಹೇಳಿ ತನ್ನ ಹಾಡನ್ನು ಗಂಟಲಿನೊಳಗೇ ಗುನುಗುತ್ತಾ ನನ್ನ ಬಾಯಿಯನ್ನು ಮುಚ್ಚಿಸಿಬಿಡುತ್ತಾನೆ...
ಮಗ, ಮಗುವಾಗಿದ್ದಾಗಿನ ನೆನಪುಗಳು ರೇಖಾಳ ಎದೆಯಲ್ಲಿ ಆರ್ದ್ರಭಾವವನ್ನು ಮೂಡಿಸಿತು. ಎಷ್ಟು ಬೇಗ ಬೆಳೆದುಬಿಟ್ಟನಲ್ಲ ಮಗ ಎಂದು ರೇಖಾಳ ಮನಸ್ಸು ಮುದುಡಿತು. ಕಾಲ ಎಷ್ಟು ಬೇಗ ಓಡಿಬಿಡುತ್ತದೆ? ಅಲ್ಲ ಹಾರಿಬಿಡುತ್ತದೆ? ಮೊನ್ನೆ ಮೊನ್ನೆಯವರೆಗೆ ಎಲ್ಲದಕ್ಕೂ ನಮ್ಮ ಸಹಾಯವನ್ನು ಅಪೇಕ್ಷಿಸುತ್ತಿದ್ದ ಮಕ್ಕಳು, ಎಷ್ಟು ಬೇಗ ನಮಗೆ ಬುದ್ಧಿ ಹೇಳುವಂತಾಗುತ್ತಾರೆ? ಅವರು ಸಣ್ಣವರಿರುವಾಗ ನಮ್ಮ ಕೆಲಸದ ಗಡಿಬಿಡಿಯಲ್ಲಿ ಕೆಲವೊಮ್ಮೆ ಅವರಿಗೆ ಕೊಡಬೇಕಾದಷ್ಟು ಗಮನ ಕೊಡಲು ಸಾಧ್ಯವೇ ಆಗಿರುವುದಿಲ್ಲ; ಗಮನ ಕೊಡಬೇಕು ಅನ್ನುವಷ್ಟರಲ್ಲಿ ಅವರಿಗೆ ನಮ್ಮ ಸಹಾಯದ, ಅವಶ್ಯಕತೆಯೇ ಇರುವುದಿಲ್ಲ. ಮಕ್ಕಳು ಸಣ್ಣವರಿದ್ದಾಗ ಇವರು ಯಾವಾಗ ಬೆಳೆದು ದೊಡ್ಡವರಾಗುತ್ತಾರೋ ಎಂದು ಬಹಳಷ್ಟು ಬಾರಿ ಅನಿಸುತ್ತದೆ. ಅವರ ತುಂಟಾಟಗಳನ್ನು ಸಹಿಸಿಕೊಳ್ಳುವುದು ದುಸ್ತರವಾಗುತ್ತದೆ.ಆದರೆ ಈಗ ರೇಖಾಳ ಮನಸ್ಸು ಮಾತನಾಡತೊಡಗಿತು. ಅಭಿ ನೀನು ಮಗುವಾಗಿದ್ದಾಗಿಲಿನ ಎಷ್ಟೋ ಸಂಭ್ರಮಗಳು ಕಣ್ಣೆದುರಿಗಿದ್ದರೂ, ನಿನ್ನ ತುಂಟಾಟಗಳನ್ನು ಮತ್ತೆ ನೋಡಬೇಕೆನಿಸುತ್ತದೆ. ನನ್ನ ಹಿಂದೆ ಮುಂದೆ ನೀನು ಮತ್ತೆ ಓಡಾಡಬೇಕೆನಿಸುತ್ತದೆ. ನಿನ್ನ ಮುಗ್ಧ ನಗುವನ್ನು ಮತ್ತು ಸ್ನಿಗ್ಧ ಮೊಗವನ್ನು ಕಣ್ತುಂಬಿಕೊಳ್ಳಬೇಕು ಅನಿಸುತ್ತದೆ.
ನಿನಗೆ ಕಥೆ ಹೇಳುತ್ತಾ ಊಟ ಮಾಡಿಸಲು, ನಿನ್ನನ್ನು ಎತ್ತಿಕೊಂಡೇ ಮಾರ್ಕೆಟ್ ಗೆ ಹೋಗಲು, ಇನ್ನಷ್ಟು ಆಟಿಕೆಯ ಕಾರುಗಳನ್ನು ಕೊಡಿಸಲು, ನಿನ್ನ ಬಾಲ ಭಾಷೆಯನ್ನು ಕೇಳಲು, ನಿನಗೆ ಅಕ್ಷರಗಳನ್ನು ಕಲಿಸಲು, ಕೂಡಿ ಕಳೆಯುವ ಲೆಕ್ಕಾಚಾರಗಳನ್ನು ಮಾಡಿಸಲು, ಪದ್ಯಗಳನ್ನು ರಾಗವಾಗಿ ಹೇಳಿಕೊಡಲು, ನಿನ್ನ ವೈವಿಧ್ಯಮಯ ರಾಗದ ಹಾಡುಗಳನ್ನು ಕೇಳಲು, ಪುಸ್ತಕಗಳನ್ನು ತೋರಿಸುತ್ತಾ ಪಾತ್ರಗಳೇ ನೀನಾಗುವಂತೆ ಮಾಡಲು, ನಿನ್ನ ಎರಡು ಪುಟ್ಟ ಕೈಗಳನ್ನು ನನ್ನ ಸೊಂಟದ ಸುತ್ತಲೂ ಹಿಡಿದುಕೊಂಡು ಗಾಡಿಯಲ್ಲಿ ಕೂತರೆ ನಿನ್ನನ್ನು ಮತ್ತೆ ಸ್ಕೂಲಿಗೆ ಬಿಡಲು, ನಿನ್ನ ಜೊತೆ ಆಟವಾಡಿ ಸಂತೋಷಪಡಲು, ಅಭೀ, ಮತ್ತೊಮ್ಮೆ ಮಗುವಾಗಿ ಬಿಡು ಕಂದ!!!